ಅಪ್ಪ ಅಂದ್ರೆ ಆಕಾಶ…: ನಾ’ನಲ್ಲ’

mahantesh-karikatte
ಏಷ್ಟೋ ದಿನಗಳ ಹಿಂದೆ ಓದಬೇಕು ಅಂತ ತಂದಿದ್ದ ಪುಸ್ತಕವನ್ನು ಓದೋಕೆ ಇವತ್ತು ಸಮಯ ಕೂಡಿ ಬಂದಿತ್ತು. ಓದುತ್ತ ಹೋದಂತೆ ಒಂದಕ್ಕಿಂತ ಒಂದು ಲೇಖನಗಳು ಮನಸ್ಸಿನ ಆಳಕ್ಕೆ ಇಳಿಯತೊಡಗಿದವು. ಒಂದು ಲೇಖನದಲ್ಲಿ ಲೇಖಕರು ಹೇಳಿದಂತೆ "ಅಪ್ಪ ಅಂದ್ರೆ ಆಕಾಶ" ಎನ್ನುವುದು ಮನದಟ್ಟಾಗಲು ಬಹಳ ಸಮಯ ಬೇಕಾಗಲಿಲ್ಲ.

ಹೌದು, ನಿಜವಾಗಲೂ ಅಪ್ಪ ಅಂದ್ರೆ ಆಕಾಶ. ನಾವು ಚಿಕ್ಕವರಿದ್ದಾಗ ಒಗಟುಗಳಿಗೆ ಉತ್ತರಿಸುವ ಪಂದ್ಯವಾಡುವಾಗ ಅನೇಕ ಬಾರಿ ಕೇಳಲ್ಪಟ್ಟ ಒಗಟೆಂದರೆ "ಅವ್ವನ ಸೀರೆ ಮಡಿಚೋಕಾಗಲ್ಲ, ಅಪ್ಪನ ರೊಕ್ಕ ಎನಿಸೊಕಾಗಲ್ಲ" ಅನ್ನೋದು. ಅದಕ್ಕೆ ಉತ್ತರ "ಅಕಾಶ ಮತ್ತು ತಾರೆಗಳು". ಅನೇಕ ಸಲ ಆಕಾಶ ಮತ್ತು ತಾರೆಗಳನ್ನ ಅವ್ವ ಅಪ್ಪರಿಗೇ ಏಕೆ ಹೋಲಿಸುತ್ತಾರೆ ಅಂತ ಯೋಚಿಸಿದ್ದುಂಟು. ಬಹುಶ ಅಸಂಖ್ಯಾತ ತಾರೆಗಳನ್ನು, ಅಪರಿಮಿತ ಆಕಾಶವನ್ನು ನಮ್ಮ ಜೀವನದಲ್ಲಿ ತಂದೆತಾಯಿಯರಿಗೆ ಇರುವ ಪ್ರಾಮುಖ್ಯತೆಗೆ ಹೋಲಿಸಿರಬಹುದು. ಮಹಾಭಾರತದಲ್ಲಿ ಧರ್ಮರಾಯನು "ಆಕಾಶಕ್ಕಿಂತಲೂ ದೊಡ್ಡದು ಏನು?" ಎಂಬ ಯಕ್ಷಪ್ರಶ್ನೆಗೆ "ಅಪ್ಪ" ಎಂದು ಉತ್ತರಿಸಿದ್ದುದು ಸರ್ವಕಾಲಿಕ ಸತ್ಯ. ಅಪ್ಪ ಎಂದರೆ ಎಲ್ಲರ ಜೀವನದಲ್ಲೂ ಮೊದಲ ಹೀರೋ. ಮನುಷ್ಯ ಅನುವಂಶಿಕವಾಗಿ ಹೇಗೆ ಪಾಲಕರ ಗುಣಗಳನ್ನು ಹೊಂದಿರುತ್ತಾನೋ ಹಾಗೆಯೇ ಪಾಲಕರು ಕಲಿಸಿಕೊಟ್ಟ ಮೌಲ್ಯಗಳನ್ನು ಸಹ ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾನೆ. ಬಡವ-ಬಲ್ಲಿದರೆನ್ನದೆ, ಜಾತಿ-ಮತಗಳ ಭೇದವಿಲ್ಲದೆ, ಮೇಲು-ಕೀಳುಗಳರಿವಿಲ್ಲದೆ, ಆಳು-ಅರಸರೆಲ್ಲರ ಜೀವನದಲ್ಲಿಯೂ ಅಪ್ಪನ ಪಾತ್ರ ಬಹು ಮುಖ್ಯವಿರುತ್ತದೆ. ಪ್ರತಿಯೊಬ್ಬರು ಪ್ರೀತಿ, ವಾತ್ಸಲ್ಯ, ಮಮತೆ ಇತ್ಯಾದಿಗಳನ್ನು ತಾಯಿಯಿಂದ ಕಲಿತರೆ, ಧೈರ್ಯ, ಹುಮ್ಮಸ್ಸು ಇತ್ಯಾದಿಗಳನ್ನು ತಂದೆಯಿಂದ ಕಲಿತಿರುತ್ತಾರೆ.

ನಾನು ಪ್ರತಿಸಲ ಏನಾದರೂ ಸಾಧಿಸಿದಾಗ ಅನೇಕರು ನಿನ್ನ ಸಾಧನೆಗೆ ನಿನ್ನ ತಂದೆಯ ಪುಣ್ಯದ ಕೆಲಸಗಳೇ ಕಾರಣ ಎನ್ನುತ್ತಿದ್ದರು. ಅನೇಕ ಸಲ ಯೋಚಿಸಿದರೂ ಅವರು ಹೇಳಿದ್ದು ನಿಜ ಎಂದು ಅನಿಸುತಿತ್ತು. ಅಪ್ಪನ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ತುಂಬಾ ಸೌಮ್ಯ ಸ್ವಭಾವದವರು, ಯಾವತ್ತು ಯಾವುದೇ ಕಾರಣಕ್ಕೂ ಸಿಟ್ಟಾದವರಲ್ಲ, ಯಾರಿಂದಲೂ ಏನೂ ಅಪೆಕ್ಷೆಪಟ್ಟವರಲ್ಲ, ಹಣ ಸಂಪಾದನೆಗೆಂದು ಅನ್ನ್ಯಮಾರ್ಗ ತುಳಿದವರಲ್ಲ, ಮಕ್ಕಳೇ ನಮ್ಮ ಆಸ್ತಿಯೆಂದು ತಿಳಿದು ಹಳ್ಳಿಯಲ್ಲಿದ್ದರೂ ಅತ್ತ್ಯುನ್ನತ ಶಿಕ್ಷಣ ಕೊಡಿಸಿದವರು. ಚಿಕ್ಕಂದಿನಿಂದಲು ವಸತಿಸಹಿತ ಶಾಲೆಯಲ್ಲಿ ಕಲಿತಿದ್ದರಿಂದ ಅಪ್ಪನ ಬಗ್ಗೆ ಸಂಪೂರ್ಣವಾಗಿ ತಿಳಿಯಲು, ಅಪ್ಪ ಅಂದ್ರೆ ಇದ್ದ ಭಯ ಹೋಗಲು ಬಹಳ ಸಮಯ ಬೇಕಾಯಿತು.

ಅಪ್ಪ ಅಂದ ತಕ್ಷಣ ನೆನಪಾಗೋದು ಅವರ ಎರಡು ಮಾತುಗಳು. ಮೊದಲನೆಯದು, "ಪರಿಶ್ರಮದಿಂದ ನಮ್ಮ ಕೈಲಾದಷ್ಟು ಪ್ರಯತ್ನ ಮಾಡುವುದು, ಪ್ರತಿಫಲ ದೇವರಿಗೆ ಬಿಟ್ಟಿದ್ದು". ಬಹುಶ, ನನ್ನ ಶಿಕ್ಷಣ, ಕೆಲಸ, ಹುದ್ದೆ, ಗೌರವ ಇವೆಲ್ಲವಕ್ಕೂ ಅಪ್ಪನ ಈ ಮಾತೇ ಕಾರಣವಿರಬಹುದು. ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದಾಗಲೂ ಅಪ್ಪ ಸ್ವಲ್ಪವೂ ಕೋಪಗೊಳ್ಳದೆ "ನೀ ಏಕೆ ಕಡಿಮೆ ಅಂಕ ತಗೊಂಡೆ ಅಂತ ನಾ ಕೇಳಲ್ಲ, ಆದರೆ ನಿನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ನೀ ಮಾಡಿಲ್ಲ, ಮುಂದೆ ಈ ತಪ್ಪು ಮಾಡಬೇಡ" ಎಂದು ಮಾತು ಮುಗಿಸಿದ್ದು ಮುಂದೆ ಯಾವತ್ತೂ ಆ ತಪ್ಪು ಮಾರುಕಳಿಸದಂತೆ ಮಾಡಿತ್ತು. ಅನೇಕ ಸಲ ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಹಿಂಜರಿಯದೆ ಪ್ರಯತ್ನ ಪಡುವ ಹಟಮಾರಿತನಕ್ಕೂ ಅವರ ಮಾತೇ ಪ್ರೇರಣೆಯೇನೋ ಎನಿಸುತ್ತದೆ.

ಎರಡನೆಯದು, "ದುಡ್ಡು ಗಳಿಸುವುದೇ ಜೀವನದ ಉದ್ದೇಶ ಅಲ್ಲ". ಅಪ್ಪ ಯಾವಾಗಲೂ ಹಾಗೇನೆ, ಹಣದ ವ್ಯಾಮೋಹಕ್ಕೆ ಒಳಗಾದವರಲ್ಲ, ನಮ್ಮನ್ನೂ ಹಣದ ವ್ಯಾಮೋಹಕ್ಕೆ ಒಳಗಾಗಲು ಬಿಟ್ಟವರಲ್ಲ. ಅದೇ ಕಾರಣದಿಂದಲೋ ಏನೋ ಒಳ್ಳೆಯ ಸಂಬಳದ ಕೆಲಸ ಅರಸಿ ವಿದೇಶಕ್ಕೆ ಹೋಗೊ ಆಸೆ ಬಿಟ್ಟು ಇಲ್ಲೇ ಕೆಲಸ ಹುಡುಕಿದ್ದು.

ಅಪ್ಪ, ನನ್ನಲ್ಲಿರುವ ಧೈರ್ಯ, ಹುಮ್ಮಸ್ಸು, ಕೆಲಸದಲ್ಲಿನ ನಿಷ್ಠೆ, ಏನಾದರು ಒಳ್ಳೆಯದನ್ನು ಮಾಡಬೇಕು ಅನ್ನೋ ತುಡಿತ, ಕೆಟ್ಟಕೆಲಸಗಳಿಗೆ ತಲೆಬಾಗದ ನಿಷ್ಠುರತೆ ಇವೆಲ್ಲವುದಕ್ಕು ನೀವೆ ಪ್ರೇರಣೆ.
ಹೌದು, ನಿಜವಾಗಲೂ ಅಪ್ಪ ಅಂದ್ರೇ ಆಕಾಶ. ಅಲ್ಲ ಅಲ್ಲ, ಅದಕ್ಕಿಂತಲೂ ಜಾಸ್ತಿ…
-ನಾ'ನಲ್ಲ'


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x