ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳವು. ಎರಡು ದಿನ ನೆಂಟರ ಮನೆಯಲ್ಲಿದ್ದರೂ ಮೂರನೇ ದಿನದೊತ್ತಿಗೆ ಪೀಜಿಯೋ ರೂಮೋ ಹುಡುಕಲೇ ಬೇಕೆನ್ನೋ ಹಠ. ಹಠವೆನ್ನಬೇಕೋ, ಸ್ವಾಭಿಮಾನವೆನ್ನಬೇಕೋ ಗೊತ್ತಿಲ್ಲ. ಹಿಂದೊಮ್ಮೆ ಬಂದಾಗಿನ ಊಟವಿಲ್ಲದ ಉರಿಬಿಸಿಲ ದಿನಗಳಿಲ್ಲದಿದ್ದರೂ ಆದಷ್ಟು ಬೇಗ ಸ್ವಂತದ್ದೊಂದು ನೆಲ ಹುಡುಕೋ ಹವಣಿಕೆ. ಸಂಬಳ ಕೊಡೋ ಕಂಪೆನಿ ಕೆಲಸ ಕೊಡಲು ಶುರುಮಾಡದಿದ್ದರೂ ಗೊತ್ತಿಲ್ಲದ ಊರಲ್ಲಿ ಪರಕೀಯನಾಗದಿರಲು ಒದ್ದಾಟ. ನೆಂಟರ ಮನೆಯಲ್ಲಿದ್ದಷ್ಟು ದಿನವೂ ತಾನು ಈ ಊರಿಗೆ ನೆಂಟನೇ ತಾನೇ ? ಈ ಊರಲ್ಲೊಬ್ಬನಾಗಬೇಕೆಂದರೆ ಇಲ್ಲಿಯ ಸಾಮಾನ್ಯರಲ್ಲೊಬ್ಬನಾಗಬೇಕೆಂಬ ಕನವರಿಕೆ. ಅಂತದ್ದೇ ಕನಸಿನ ಹಲವರಿಗೆ ಸಾಥಿಯಾಗಿತ್ತೊಂದು ವಿಲ್ಲಾ.
ವಿಲ್ಲಾವೆಂದರೆ ಭವ್ಯ ಭವನವೇನಲ್ಲವದು. ಹೊರಗಷ್ಟೇ ಹೊಳಪು, ಒಳಗೆಲ್ಲಾ ಹುಳುಕು. ವೈಫೈ ಬೇಕಂದ್ರೆ ಹೆಚ್ಚು ದುಡ್ಕೊಡಿ ಅನ್ನೋ ಓನರ್ರು, ಮಹಡಿ ಮೇಲೆ ಒಣಗಿಸಿದ ಬಟ್ಟೆ ಕದಿಯೋ ಕಳ್ರು, ರಾತ್ರೆ ಬರೋದು ಲೇಟಾದ್ರೆ ಊಟವಿಲ್ಲ ಅಂತ್ಲೂ , ಬೆಳಗ್ಗೆ ಏಳೋದು ಲೇಟಾದ್ರೆ ತಿಂಡಿಯಿಲ್ಲ ಅಂತ್ಲೂ ಅನ್ನೋ ಕುಕ್ಕು, ಅವ್ನ ಜೊತೆಗೇ ಡೀಲ್ ಮಾಡ್ಕೊಂಡು ಮಧ್ಯಾಹ್ನದ ಊಟ ಗಿಟ್ಟಿಸ್ಕೊಳ್ಳೋ ನೈಟ್ ಶಿಫ್ಟಿನ ಹುಡುಗ್ರು, ಹೊಸಬ್ರನ ತರೋದ್ರಲ್ಲಿ ತೋರೋ ಉತ್ಸಾಹವನ್ನ ಟೀವಿ ಬಿಲ್ ಕಟ್ಟೋದ್ರಲ್ಲಿ ತೋರ್ಸದ ಕೇರ್ ಟೇಕರ್ರು. ಉಫ್. ಇಲ್ಲಿ ವಿಶಾಲವಾದದ್ದು ಮತ್ತು ಧಾರಾಳವಾದದ್ದು ಇಲ್ಲಿದ್ದ ಜಾಗ ಮತ್ತು ಇಲ್ಲಿದ್ದ ಗೆಳೆಯರ ಹೃದಯಗಳಷ್ಟೆ. ಇಲ್ಲಿ ಊಟ ಧಕ್ಕದ ದಿನಗಳಲ್ಲಿ, ಆಫೀಸಿರದ ಮಧ್ಯಾಹ್ನಗಳಲ್ಲಿ ನಮ್ಮ ಅನ್ನದಾತನಾಗ್ತಿದ್ದು ಪಕ್ಕದಲ್ಲಿದ್ದ ಕ್ಯಾಂಟೀನು. ಸಂಜೆಗೊಂದು ಟೀ, ಪಫ್ ಬೇಕನ್ನುವವರಿಗೆ, ಖುಷಿಯ ಜ್ಯೂಸಿಗೆ, ಹೊಟ್ಟೆ ತುಂಬಾ ಊಟಕ್ಕೆ ಕ್ಯಾಂಟೀನೇ ಗತಿಯಾಗಿತ್ತು. ಇಂದು ಆ ಕ್ಯಾಂಟೀನಿನಲ್ಲಿ ಉಂಡವರು ಪ್ರಪಂಚದ ನಾನಾ ಮೂಲೆಗೆ ದಿಕ್ಕಾಪಾಲಾಗಿ ಹಂಚಿಹೋಗಿದ್ದರೂ ಆ ಕ್ಯಾಂಟೀನಿನತ್ರ ಹೋದಾಗ ವರ್ಷಗಳ ಹಿಂದಿನ ನೆನಪು ಮರುಕಳಿಸುತ್ತೆ.
ದಿನಗಳುರುಳಿದಂತೆ ಕೇರ್ ಟೇಕರಿನ ಧನದಾಹ ಜಾಸ್ತಿಯಾಗಿತ್ತು. ವಿಪರೀತ ಏರಿಸ್ತಿದ್ದ ಅವನಿಗೆ ದುಡ್ಡು ಕೊಡೋ ಬದ್ಲು ಬೇರೆ ಕಡೆ ಹೋದರೇ ಲೇಸಂತ ಹುಡುಕಿದ ಪೀಜಿಗಳು ಹಲವು. ಒಂದೆಡೆ ಸಕತ್ ಧೂಳಾದ್ರೆ ಇನ್ನೊಂದ್ಕಡೆ ಸರಿಯಾದ ವ್ಯವಸ್ಥೆಗಳಿರಲಿಲ್ಲ. ಒಂದೆಡೆ ರೇಟ್ ಜಾಸ್ತಿಯಾಗಿದ್ರೆ ಇನ್ನೊಂದಕ್ಕೆ ಹೋಗೋದು ಕಷ್ಟವಿತ್ತು. ಕೊನೆಗೊಂದು ಸ್ವಚ್ಛವಿದ್ದ, ಹೊಸದಾದ ಪೀಜಿ ಸಿಗೋದ್ರೊಂದಿಗೆ ಹುಡುಕಾಟ ಕೊನೆಯಾಗಿತ್ತು. ಖಾಲಿಯಿದ್ದ ರೂಮುಗಳಿಗೆಲ್ಲಾ ಜನ ಭರ್ತಿಯಾಗುತ್ತಿದ್ದಂತೆ ಓನರಿನ ನಿಜರೂಪ ಬಯಲಾಗಿತ್ತು. ಒಂಭತ್ತೂವರೆ ಮೇಲೆ ಊಟವಿಲ್ಲ, ಬೆಳಗ್ಗಿನ ತಿಂಡಿ ಒಮ್ಮೆ ಖಾಲಿಯಾದ್ರೆ ಮತ್ತೆ ಮಾಡೋಲ್ಲ, ಎರಡೇ ಚಪಾತಿ ಕೊಡ್ತೀನಿ ಅನ್ನೋ ರೂಲ್ಸುಗಳು ಶುರುವಾದ್ವು. ಮಧ್ಯಾಹ್ನ ಆಫೀಸಿಗೆ ಹೋಗೋ ಹುಡುಗರಿಗೆ, ಸೂರ್ಯ ನೆತ್ತಿ ಮೇಲೆ ಬಂದಾಗ ಎಚ್ಚರಾಗೋ ಸೂರ್ಯವಂಶಸ್ಥರಿಗೆ ಉಪವಾಸವೇ ಗತಿಯಾಗುವಂತಾಗಿ ಹೊಸ ಕ್ಯಾಂಟೀನಿನ ಹುಡುಕಾಟ ಶುರುವಾಯ್ತು.
ಎದುರಿಗೊಂದು ರೊಟ್ಟಿ ಕ್ಯಾಂಟೀನ್. ನಾಲ್ಕು ದಿನ ರೊಟ್ಟಿ, ಪರೋಟ ಕೊಟ್ಟವ ಇದ್ದಕ್ಕಿಂದಂತೆ ಪರಾರಿಯಾಗಿದ್ದ. ಮತ್ತೊಬ್ಬ ಬಂದವ ಮತ್ತೆ ನಾಲ್ಕು ದಿನ ಅನ್ನ-ಸಾಂಬಾರ್ ಕೊಟ್ಟ. ತದನಂತರ ಅವನದ್ದೂ ಸುದ್ದಿಯಿಲ್ಲ. ಹೊಸದಾಗಿ ಬಂದವರೆಲ್ಲಾ ಇದ್ದ ಬಾಗಿಲು ಮುರಿಸೋದು, ಒಂದಿಷ್ಟು ಸಿಮೆಂಟ್ ಹಾಕಿಸೋದು, ಹೊಸ ಬೋರ್ಡ್ ಬರೆಸೋದು ಮಾಡಿ ದುಡ್ಡು ವೇಸ್ಟ್ ಮಾಡೋ ಬದಲು ಜನಕ್ಕೆ ಅದೇ ದುಡ್ಡಲ್ಲಿ ಒಳ್ಳೆ ಊಟ ಕೊಡಬಹುದಿತ್ತಾ ಅಂತ ಮಾತಾಡುವಷ್ಟರಲ್ಲಿ ಮತ್ತೊಬ್ಬ ಹೊಸಬ ಬಂದು ಮಲಯಾಳಿ, ನಾರ್ತ್, ಸೌಥ್ ಅಂತ ಬೋರ್ಡ್ ಬರೆಸಿದ್ದಾಯ್ತು. ಅವನ್ಯಾವತ್ತು ಬಾಗಿಲು ಹಾಕ್ತಾನೋ ಎಂಬ ಗೊಂದಲದಲ್ಲಿ ಹುಡುಗರು ಬೇರೆ ಅನ್ನದಾತನ ನಿರೀಕ್ಷೆಯಲ್ಲಿದ್ರು. ಪಕ್ಕದಲ್ಲೊಂದು ಕೇರಳದ ಮೆಸ್ಸು, ಬೆಂಗಾಳಿ ಹೋಟೆಲ್ ತಲೆಯೆತ್ತಿದ್ರೂ ಅವು ತಮ್ಮ ಪ್ರದೇಶದವರ ಬಗ್ಗೆ ಮಾತ್ರ ಗಮನಹರಿಸುತ್ತಾ ಉಳಿದವರಿಗೆ ಇದ್ದೂ ಇಲ್ಲಂದತಾಗಿದ್ದ ಸಂದರ್ಭದಲ್ಲಿ ಹೊಸ ಅನ್ನದಾತನ ಹುಡುಕಾಟ ಮುಂದುವರೆದಿತ್ತು.
ಆಗ ಕಣ್ಣಿಗೆ ಬಿದ್ದೋನೆ ಫುಡ್ ಕೂಪನ್ ಕ್ಯಾಂಟೀನ್. ಆಪೀಸಲ್ಲಿ ಕೊಡ್ತಿದ್ದ ಟ್ಯಾಕ್ಸ್ ಫ್ರೀ ಫುಡ್ ಕೂಪನ್ನುಗಳನ್ನ ಆಫೀಸ್ ಕ್ಯಾಂಟೀನ್ ಬಿಟ್ಟು ಹೊರಗೆಲ್ಲಾದ್ರೂ ಬಳಸಬೇಕಂದ್ರೆ ಅದನ್ನ ತಗಳೋ ಜಾಗ ಬೇಕಲ್ಲಾ ? ಇಲ್ಲಿನ ಊಟಕ್ಕಿಂತ ಇಲ್ಲಿ ಫುಡ್ ಕೂಪನ್ ಇಸ್ಕೋತಾರೆ ಅನ್ನೋ ಕಾರಣಕ್ಕೇ ಹುಡುಗರಲ್ಲಿ ಫೇಮಸ್ಸಾಗಿದ್ದು ಈ ಕ್ಯಾಂಟೀನ್. ಸಂಜೆಯ ಮಸಾಲೆಪುರಿ, ದಹೀಪುರಿ, ಮಧ್ಯಾಹ್ನದ ಫ್ರೈಡ್ ರೈಸ್, ಪ್ಲೇಟ್ ಮೀಲುಗಳು ಸುತ್ತಲಿದ್ದ ಹುಡುಗರ ಹೊಟ್ಟೆಯನ್ನು ವರ್ಷಗಳ ಕಾಲ ತಂಪಾಗಿಟ್ಟಿದ್ವು. ಆದ್ರೆ ಅದ್ರ ಮೇಲೂ ಕಣ್ಣು ಬಿದ್ದಂಗಿದೆ. ಕ್ಯಾಂಟೀನಿದ್ದ ಜಾಗದ ಗಲಾಟೆಯಲ್ಲಿ ಆ ಜಾಗದ ಓನರು ಬಂದು ಕ್ಯಾಂಟೀನು, ಅದಕ್ಕಂಟಿಕೊಂಡಿದ್ದ ಜ್ಯೂಸಂಗಡಿ, ಮೊಬೈಲಂಗಡಿಗಳನ್ನು ಇದ್ದಕ್ಕಿದ್ದ ಹಾಗೆ ಕೆಡಗಿದ್ದಾರೆ. ಕ್ಯಾಂಟೀನಲ್ಲಿದ್ದ ನೀರ ಕ್ಯಾನುಗಳು ಅನಾಥರಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಗಾಬರಿಯಾದ ಹುಡುಗರು ಹೊಸ ಅನ್ನದಾತನ ಹುಡುಕಾಟದಲ್ಲಿದ್ದಾರೆ.