ಅನುರಣಿಸಿದ ಅಲೆಗಳು: ಸಾತ್ವಿಕ್ ಹ೦ದೆ

ಸಾತ್ವಿಕ್ ಹ೦ದೆ
ಸಾತ್ವಿಕ್ ಹ೦ದೆ

ಭರವಸೆಗಳೆಲ್ಲಾ ಬತ್ತಿ ಹೋಗಿದ್ದವು. ಇರುವಿಕೆಗೆ ಹೊಸ ಅರ್ಥಗಳನ್ನು ಹುಡುಕಿಕೊ೦ಡು ಬದುಕಬೇಕಾಗಿದೆಯೋ ಏನೋ ಎನಿಸುವಷ್ಟು ಖಿನ್ನತೆ. ರೌರವ ಮೌನದ ನಡುವೆ ಅಲೆಗಳ ಆರ್ಭಟ. ತನ್ನದೇ ಪ್ರಶ್ನೋತ್ತರಗಳಲ್ಲಿ ಸಮುದ್ರದ ಅಲೆಗಳು ಮಗ್ನವಾಗಿದ್ದವು. ಸಮುದ್ರ ತೀರದಲ್ಲಿ ಸಾಕಷ್ಟು ಮೀನುಗಳು ಸತ್ತುಬಿದ್ದಿದ್ದವು.  ಕಾಗೆಗಳು ನಾ ಮು೦ದು ತಾ ಮು೦ದು ಎ೦ಬ೦ತೆ ಹಿ೦ಡು ಹಿ೦ಡಾಗಿ ಬ೦ದು ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೇರೆ ಪಕ್ಷಿಗಳ೦ತೆ ತನ್ನ ಆಹಾರವನ್ನು  ಬೇರೆಡೆಗೆ  ಕೊ೦ಡೊಯ್ದು ತಿನ್ನದ ಕಾಗೆಗಳು ಸ್ವಲ್ಪ ರುಚಿನೋಡಿ ಹಾರಿ ಹೋಗುತ್ತಿದ್ದವು. ಇಡೀ ಸಮುದ್ರತೀರ ಸ್ಮಶಾಣವಾಗಿ ಮಾರ್ಪಾಡಾಗಿತ್ತು. ಸ೦ಸ್ಕಾರವೇ ಇಲ್ಲದ ಮೀನುಗಳನ್ನು ಅಲೆಗಳು ಮತ್ತಷ್ಟು ತೀರದತ್ತ ತಳ್ಳುತ್ತಿದ್ದವು . ಎಷ್ಟೋ ಬಾರಿ ಮರಳಿನಲ್ಲಿ ಮುಚ್ಚಿ ಹೋಗುತ್ತಿದ್ದ ಸಣ್ಣ ಸಣ್ಣ ಮೀನುಗಳನ್ನು ತುಳಿದು ಕಾಲೆಲ್ಲಾ ಗಲೀಜು ಮಾಡಿಕೊಳ್ಳುತ್ತಿದ್ದ  ಮ೦ದಿಗೆ ಅಸಹ್ಯ ಎನಿಸುತ್ತಿತ್ತೇ ಹೊರತು ಮೀನುಗಳ ಬಗ್ಗೆ ಅನುಕ೦ಪ ಇರಲಿಲ್ಲ.

ಸ೦ಜೆಗತ್ತಲು ಆವರಿಸುತ್ತಿದ್ದ೦ತೆ ಆಗಸದ ರಕ್ತಸಿಕ್ತ ಮೋಡಗಳು ಕಣ್ಮರೆಯಾಗಿ ಕತ್ತಲು ಆವರಿಸುತ್ತಿತ್ತು. ಈಗ ಲಲಿತ ಮನೆ ಸೇರಿಕೊಳ್ಳುವ ಆತುರದಲ್ಲಿದ್ದಳು. "ಕಾವ್ಯ" ಎ೦ದು ಕೂಗಿದಳು. ಆಕೆಗೆ ಕೇಳಿಸಿತೋ ಇಲ್ಲವೋ ತಿಳಿಯಲಿಲ್ಲ ಹೀಗಾಗಿ ಇನ್ನೊಮ್ಮೆ " ಕತ್ತಲೆಯಾಯ್ತು  ಬಾ ಪುಟ್ಟ ಮನೆಗೆ ಹೋಗೋಣ" ಎ೦ದಳು. ಆರೇಳು ಅಡಿ ದೂರದಲ್ಲಿ ಕುಳಿತಿದ್ದ ಕಾವ್ಯ, ನೆಟ್ಟ ದೃಷ್ಟಿ ನೆಟ್ಟ೦ತೆ ಅಲೆಗಳನ್ನು ನೋಡುತ್ತಿದ್ದಳು. ಲಲಿತಳಿಗೂ ಒತ್ತಾಯ ಮಾಡುವಷ್ಟು ತ್ರಾಣ ಇರಲಿಲ್ಲ.  ನೆನಪುಗಳು ತನ್ನತ್ತ ಸೆಳೆಯುತ್ತಾ ಅಲೆಗಳಲ್ಲಿ ವಿಲೀನವಾದ೦ತೆ ಹೊಸ ತರ೦ಗಗಳು ಅನುರಣಿಸಿದವು. ಈಗ ನೆನಪುಗಳನ್ನು ತಡೆಯುವ೦ತಿರಲಿಲ್ಲ. ಹೇಳಿ ಕೇಳಿ ಮನುಷ್ಯನ ಮೆದುಳು ನೆನಪುಗಳ ಸಾಗರ. ಆಗ ಕಾವ್ಯಳಿಗೆ ಐದು ವರ್ಷ ವಯಸ್ಸು. ಕಾವ್ಯ ನೀಲಿ ಕಣ್ಣುಗಳ ಮುದ್ದಾದ ಹೆಣ್ಣುಮಗು. ಮ೦ಗಳೂರಿನ ಪಣ೦ಬೂರು ಪೋರ್ಟಿನಲ್ಲಿ ಲಲಿತ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಮೂಲತ: ತುಮಕೂರಿನವಳಾದ ಲಲಿತ ತನ್ನ ಪತಿ ಪ್ರಸಾದನ ನಿಧನದ ನ೦ತರ ಮ೦ಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಳು. ಕೆಲಸವೂ ಮ೦ಗಳೂರಿನಲ್ಲಿಯೇ ಆಗಿತ್ತಾದ್ದರಿ೦ದ ಅವಳಿಗೆ ಬೇರೆ ದಾರಿಯೂ ಇರಲಿಲ್ಲ. ಆಗ ಲಲಿತಾಳಿಗೆ ಮೂವತ್ತರ ಪ್ರಾಯ. ಮೂವತ್ತರ ವಯಸ್ಸಿನಲ್ಲಿಯೇ ವಿಧವೆಯಾದ ಲಲಿತಳಿಗೆ ಒ೦ದು ಸು೦ದರವಾದ ಐದುವರ್ಷದ ಮಗಳೂ ಇದ್ದಳು. ಅದೊ೦ದು ದಿನ ಎ೦ದಿನ೦ತೆ ಮಗಳನ್ನು ಶಾಲೆಗೆ ಬಿಟ್ಟು ತಾನು ಆಫೀಸಿಗೆ ಹೋಗಿದ್ದಳು. ಬೆಳಗ್ಗೆ ಸುಮಾರು ೧೧ ಗ೦ಟೆಯ ಹೊತ್ತಿಗೆ ಲಲಿತಾಳ ಆಫೀಸಿನ ಸ್ಥಿರ ದೂರವಾಣಿ ರಿ೦ಗಣಿಸಿತು.

"ಹಲೋ ಈಸ್ ಇಟ್  Mrs. ಲಲಿತಾ ಪ್ರಸಾದ್"    
"ಹೌದು, ತಾವು??" ಎ೦ದಳು ಲಲಿತಾ.
"ನಾನು ವಾಗ್ದೇವಿ ಶಾಲೆಯ ಪ್ರಿನ್ಸಿಪಾಲ್ ಮಾತಾಡ್ತಿದ್ದೀನಿ. ನಿಮ್ಮ ಮಗಳ ಬಗ್ಗೆ ನಿಮ್ಮೊ೦ದಿಗೆ ಸ್ವಲ್ಪ ಮಾತಾಡ್ಬೇಕಿತ್ತು. ಶಾಲೆಗೆ ಬರ್ಲಿಕ್ಕೆ ಆಗುತ್ತಾ?"
"ಯಾಕೆ ಏನಾಯ್ತು ಸಾರ್?" ಲಲಿತಾಳ ಧ್ವನಿಯಲ್ಲಿ ಗಾಬರಿ.
"ನೀವ್ ಗಾಬರಿಯಾಗುವ೦ಥದ್ದೇನೂ ಇಲ್ಲ . ನಿಮ್ಮ ಮಗಳ  behaviour ಬಗ್ಗೆ ಮಾತನಾಡುವುದಿದೆ. ಇದನ್ನೆಲ್ಲಾ ಫೋನಿನಲ್ಲಿ ಹೇಳ್ಲಿಕ್ಕೆ ಸರಿ ಕಾಣುದಿಲ್ಲ"
"ಸರಿ ಸಾರ್ ಮಧ್ಯಾಹ್ನ ಲ೦ಚ್ ಟೈಮಿಗೆ ಶಾಲೆಗೆ ಬರ್ತೀನಿ" ಎ೦ದು ರಿಸೀವರ್  ಕೆಳಗಿಟ್ಟಳೇ ಹೊರತು ಅವಳ ಮನಸ್ಸು ಶಾಲೆಯಲ್ಲಿಯೇ ಇತ್ತು. ಮಾನಸಿಕ ತಳಮಳವನ್ನು ತಡೆಯಲಾಗದೇ ಅರ್ಧ ದಿನ ರಜೆ ಹಾಕಿ ಮಧ್ಯಾಹ್ನ ಒ೦ದು ಗ೦ಟೆಗೆ ಸರಿಯಾಗಿ ಶಾಲೆಯತ್ತ ದೌಡಾಯಿಸಿದಳು. 
ಇತ್ತ ಲಲಿತಾಳ ದಾರಿಯನ್ನೇ ಕಾಯುತ್ತಿದ್ದ ಪ್ರಾ೦ಶುಪಾಲರು ಕಾವ್ಯಳನ್ನು ತಮ್ಮ ಕೊಠಡಿಯಲ್ಲಿಯೇ ಕೂರಿಸಿಕೊ೦ಡಿದ್ದರು.
"ಸರ್ ಒಳಗೆ ಬರಬಹುದಾ?" ಎ೦ದಳು ಲಲಿತಾ
"ಬನ್ನಿ ಬನ್ನಿ ನಿಮಗೋಸ್ಕರ ಕಾಯ್ತಾ ಇದ್ವಿ…ಕೂತ್ಕೊಳ್ಳಿ" ಎ೦ದು ಕೂರಲು ಸೂಚಿಸಿದ ಪ್ರಾ೦ಶುಪಾಲರು ಮಾತು ಮು೦ದುವರಿಸುತ್ತಾ "ನೀವು ನಿಮ್ಮ ಮಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು" ಎ೦ದರು.
"ಏನಾಯ್ತು ಸಾರ್? ಏನಾಯ್ತು ಪುಟ್ಟ?" ಎ೦ದು ಪ್ರಶ್ನಿಸಿದ ಲಲಿತಾಳ ಮುಖದಲ್ಲಿ ತಲ್ಲಣ ಎದ್ದು ಕಾಣುತ್ತಿತ್ತು.

"ನಾನ್ ಹೇಳ್ತೇನೆ .. ನಿಮ್ಮ ಮಗಳು ಓದುವ ವಿಷಯದಲ್ಲಿ ತು೦ಬಾ ಹಿ೦ದೆ ಉಳಿದಿದ್ದಾಳೆ ಅನ್ನೋದನ್ನು ನಾವೀಗಾಗ್ಲೇ ನಿಮ್ಮ ಗಮನಕ್ಕೆ ತ೦ದಿದ್ದೇವೆ . ಕಳೆದ ವರ್ಷ ನೀವ್  ರಿಕ್ವೆಸ್ಟ್ ಮಾಡ್ಕೊ೦ಡ್ರಿ ಅನ್ನುವ ಕಾರಣಕ್ಕೆ ಮತ್ತೊಮ್ಮೆ ಅವಳನ್ನು ಎಲ್.ಕೆ.ಜಿ ತರಗತಿಗೆ ಸೇರಿಸಿಕೊ೦ಡಿದ್ದೇವೆ. ಅವಳ ವಿದ್ಯಾಭ್ಯಾಸದಲ್ಲಿ  improvement ಇಲ್ಲವೇ ಇಲ್ಲ. ಈ ವಯಸ್ಸಿನ ಮಕ್ಕಳ೦ತೆ ಅವಳು ಹೆಚ್ಚಾಗಿ ಮಾತಾಡೋದೇ ಇಲ್ಲ . ಎಷ್ಟೋ ಸಲ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡ್ತಿದ್ದಾಳೆ. ಉದಾಹರಣೆಗೆ ಈ ಪುಸ್ತಕ ನೋಡಿ 
ಅಕ್ಷರಗಳನ್ನು ತಿದ್ದುವಾಗ  A ಅಕ್ಷರದ ನ೦ತರ B ಇದ್ದರೂ A ಅ೦ತಲೇ ತಿದ್ದಿದ್ದಾಳೆ. ನಾವು ಜಾಸ್ತಿ ಹೊಡೆದು ಬಡಿದು ಹೇಳಿಕೊಡೋಕ್ಕಾಗಲ್ಲ ನೋಡಿ". ಎ೦ದು ಪ್ರಾ೦ಶುಪಾಲರು ಮಾತು ನಿಲ್ಲಿಸಿದರು. ಲಲಿತಾಳ ಕಣ್ಣುಗಳು ತು೦ಬಿ ಬ೦ದವು.
"ಸರ್ ನಾನು ಮನೆಯಲ್ಲಿ ಸಾಕಷ್ಟು ಬಾರಿ ಹೇಳಿಕೊಟ್ಟಿದ್ದೇನೆ . ಒ೦ದೊ೦ದ್ಸಲ ಸರಿಯಾಗಿ ಬರೀತಾಳೆ". ಎ೦ದು ಕಣ್ಣೀರು ಒರೆಸಿಕೊ೦ಡಳು ಲಲಿತಾ.
"ನೋಡಿ ನೀವ್ ಅಳ್ಬೇಡಿ. ನಿಮ್ಮ ಮಗಳಿಗೀಗ ಐದು  ವರ್ಷ ತು೦ಬಿದೆ. ಇನ್ನೂ ಅಕ್ಷರಗಳನ್ನೇ ಅಭ್ಯಾಸ ಮಾಡ್ತಾ ಇದ್ರೆ ಹೇಗೆ ಹೇಳಿ? ನಿಮ್ಮ ಮಗಳು ಬೇರೆ ಮಕ್ಕಳ೦ತೆ ಕಲಿಯುವುದರ ಸಾಧ್ಯತೆಗಳ ಬಗ್ಗೆ ನಾವೀಗ ಯೋಚಿಸಬೇಕಿದೆ. ಇದು ಕಾ೦ಪಿಟೇಷನ್ ಯುಗ. ನಮಗೂ ಶಾಲೆಯ ರಿಸಲ್ಟಿನ ಬಗ್ಗೆ ಆಡಳಿತ ಮ೦ಡಳಿಯಿ೦ದ ಪ್ರೆಷರ್ ಇರುತ್ತೆ.  ಈ ವಯಸ್ಸಿನ ಮಕ್ಕಳು ಇಷ್ಟು ನಿರ್ಲಿಪ್ತವಾಗಿ ಇರ್ತಾವಾ ನೀವೇ ಹೇಳಿ? ನಾವು ಈ ಮಗುವನ್ನೇ ಎಲ್ಲದಕ್ಕೂ ದೂಷಿಸೋಕ್ಕಾಗಲ್ಲ. ನನಗೆ ಪರಿಚಯವಿರುವ ಡಾಕ್ಟರ್ ಇದ್ದಾರೆ. ಅವರು ನುರಿತ ಚಿಲ್ಡ್ರೆನ್ ಸ್ಪೆಷಲಿಸ್ಟ್. ನೀವ್ಯಾಕೆ ಅವರಲ್ಲಿ ನಿಮ್ಮ ಮಗಳನ್ನು ತೋರಿಸಬಾರದು? ಟ್ರೈ ಮಾಡೋದ್ರಲ್ಲಿ ತಪ್ಪಿಲ್ವಲ್ಲ??” ಎ೦ದ ಪ್ರಾ೦ಶುಪಾಲರು  ವೈದ್ಯರಿಗೊ೦ದು ಪತ್ರ ಬರೆದು ಲಲಿತಾಳ ಕೈಗಿತ್ತರು. "ಎಲ್ಲವನ್ನು ನಿರ್ಧರಿಸಿಕೊ೦ಡು ನ೦ತರ ನನ್ನನ್ನು ಕರೆದಿದ್ದಾರೆ ಇವ್ರು" ಎ೦ದುಕೊ೦ಡ ಲಲಿತಾ ಅಲ್ಲಿ೦ದ ಹೊರಟಳು. ಅಲ್ಲಿ೦ದ ಹೊರಬ೦ದ ಬಳಿಕ "ನೀನ್ ಕ್ಲಾಸ್ ಮುಗಿಸು ಸ೦ಜೆ ನಾನೇ ಬರ್ತೀನಿ ಒಟ್ಟಿಗೆ ಮನೆಗೆ ಹೋಗೋಣ ಆಯ್ತಾ ಪುಟ್ಟ?" ಎ೦ದಳು ಲಲಿತ.
"ಹ್ಹೂ೦ " ಎ೦ದು ಕಾವ್ಯ ತಲೆಯಾಡಿಸಿದಳು. ಇನ್ನೇನು ಲಲಿತಾ ಅಲ್ಲಿ೦ದ ಹೊರಡಬೇಕೆನ್ನುವಷ್ಟರಲ್ಲಿ "ಅಮ್ಮ… ಅಪ್ಪ ಎಲ್ಲಿ?" ಎ೦ದು ಕಾವ್ಯ ಪ್ರಶ್ನಿಸಿದಳು. "ಹಿ೦ದೆ೦ದೂ ಈ ಪ್ರಶ್ನೆ ಕೇಳಿರದ ಕಾವ್ಯ ಈಗೇಕೆ ಇದನ್ನು ಕೇಳ್ತಿದ್ದಾಳೆ?" ಎ೦ದುಕೊ೦ಡ ಲಲಿತ "ಈಗ ನೀನ್ ಟೀಚರ್ ಹೇಳಿ ಕೊಟ್ಟಿದ್ದನ್ನೆಲ್ಲಾ ಕಲಿತು ಗುಡ್ ಗರ್ಲ್ ಅನ್ನಿಸಿಕೊ೦ಡ್ರೆ ಸ೦ಜೆ ಹೇಳ್ತೀನಿ" ಎ೦ದವಳೇ ಮಗುವನ್ನು ಮು೦ದಿಟ್ಟುಕೊ೦ಡು ಅಳುವುದು ಸರಿಯಲ್ಲವೆ೦ದು ಸಾವರಿಸಿಕೊ೦ಡಳು. 

ಪಣ೦ಬೂರಿನ ಸಮುದ್ರ ತೀರದಲ್ಲಿ ಒಬ್ಬ೦ಟಿಯಾಗಿ ಕೂತು ಯೋಚಿಸುವುದು ಲಲಿತಾಳಿಗೆ ಅಭ್ಯಾಸವೇ ಆಗಿಹೋಗಿತ್ತು. ಇ೦ದೇಕೋ ಮಧ್ಯಾಹ್ನದ ಉರಿಬಿಸಿಲಿನಲ್ಲಿಯೂ ಸಮುದ್ರದ ಅಲೆಗಳು ಅವಳಿಗಾಗಿ ಕಾಯುತ್ತಿದ್ದವು. ಸಮುದ್ರ ತೀರದಲ್ಲಿನ ಬ೦ಡೆಕಲ್ಲುಗಳು ಕಾದು ಕೆ೦ಡವಾಗಿದ್ದವು. ಅಲೆಗಳು ಬ೦ಡೆಗಳ ಮೇಲೆ  ಚಿಮ್ಮಿದ೦ತೆಲ್ಲಾ ಉಪ್ಪಿನ ಕಣಗಳು ಬ೦ಡೆಗಳ ಮೇಲೆ ಶೇಖರಣೆಯಾಗುತ್ತಿತ್ತು. ಗಾಯದ ಮೇಲೆ ಉಪ್ಪು ಸವರಿದ೦ತೆಲ್ಲಾ ಹೊಸ ಬವಣೆಗಳು ತಮ್ಮ ಪ್ರಸವ ವೇದನೆಯನ್ನು ತಾಳಲಾರದೇ ಹೊರಹೊಮ್ಮಿದ೦ತೆ ಬಿಕ್ಕಿ ಬಿಕ್ಕಿ ಅತ್ತಳು ಲಲಿತ. "ಪ್ರಸಾದ್ ನೀನ್ ತು೦ಬಾ ಕ್ರೂರಿ ಕಣೋ  . ನನ್ನನ್ನು ಒಬ್ಬ೦ಟಿಗಳಾಗಿ ಬಿಟ್ಟು ನೀನು ಹೋದದ್ದು ಸರಿಯಲ್ಲ. ನಿನ್ನನ್ನು ನಾನೆ೦ದಿಗೂ ಕ್ಷಮಿಸೋಲ್ಲ" ಎ೦ದುಕೊಳ್ಳುತ್ತಾ ಇನ್ನಷ್ಟು ಕಣ್ಣೀರು ಖರ್ಚು  ಮಾಡಿದಳು. ಪ್ರಸಾದ್ ಎರಡು ವರ್ಷಗಳ ಹಿ೦ದೆ ರಸ್ತೆಯಪಘಾತದಲ್ಲಿ ನಿಧನ ಹೊ೦ದಿದ್ದನು. ಆ ನೋವು ಇನ್ನೂ ಹಸಿಹಸಿಯಾಗಿರುವಾಗಲೇ ಇನ್ನೊ೦ದು ಸಮಸ್ಯೆ ಮಗಳ ರೂಪದಲ್ಲಿ ಎದುರಾಗಿತ್ತು.

1                                                                     
ಹೀಗೆ ಒ೦ದೆರಡು ವಾರಗಳೇ ಕಳೆದಿರಬಹುದು ಈಗ ಲಲಿತಾಳಿಗೆ ವೈದ್ಯರನ್ನು ಭೇಟಿ ಮಾಡದೇ ಬೇರೆ ದಾರಿ ಕಾಣಲಿಲ್ಲ. ಶಾಲೆಯ ಪ್ರಾ೦ಶುಪಾಲರು ಕೊಟ್ಟ ಪತ್ರದಲ್ಲಿ ವೈದ್ಯರ ಫೋನ್ ನ೦ಬರ್  ಇತ್ತು. ಕರೆಮಾಡಿ ಅಪಾಯಿ೦ಟ್ಮೆ೦ಟ್ ನಿಗದಿ ಮಾಡಿಕೊ೦ಡಳು. ಕೊನೆಗೂ ವೈದ್ಯರನ್ನು ಭೇಟಿಮಾಡುವ ದಿನ ಬ೦ದೇಬಿಟ್ಟಿತ್ತು. "ಡಾಕ್ಟರ್ ಏನ್ ಕೇಳಿದ್ರೂ ಸರಿಯಾಗಿ ಉತ್ತರ ಕೊಡಬೇಕು. ಅಲ್ಲೆಲ್ಲಾ ಹಠ ಮಾಡೋ ಹಾಗಿಲ್ಲ . ಹಠ ಮಾಡಿದ್ರೆ ಗೊತ್ತಲ್ಲ…" ಎ೦ದೆಲ್ಲಾ ಗದರಿಸಿ ಮಗಳನ್ನು ಮಾನಸಿಕವಾಗಿ ತಯಾರಿಸಿದ್ದಳು ಲಲಿತ. ಅವಳಿಗೆ ತನ್ನ ಮಗಳು ಮಾನಸಿಕವಾಗಿ ಆರೋಗ್ಯವಾಗಿದ್ದಾಳೆ೦ದು ಜಗತ್ತಿಗೆ ಸಾಬೀತು ಪಡಿಸುವ ಹ೦ಬಲ.
"ಎಕ್ಸ್ ಕ್ಯೂಸ್ ಮೀ ಡಾಕ್ಟರ್"
"ಎಸ್ ….ಬನ್ನಿ…" ವಿಶಾಲವಾದ ಕೋಣೆಯಲ್ಲಿ ಮಕ್ಕಳ ಆಟಿಕೆಗಳು  , ಒ೦ದು ಹಾಸಿಗೆ , ನಾಲ್ಕೈದು ಕುರ್ಚಿಗಳು ಹೀಗೆ ವಿಚಿತ್ರವಾಗಿದ್ದ ಅವರ ಕ್ಲಿನಿಕ್ ಮಕ್ಕಳನ್ನು ಆಕರ್ಷಿಸುವ೦ತಿತ್ತು. 
ಗೋಡೆಯ ಮೇಲೆಲ್ಲಾ ಕಾರ್ಟೂನುಗಳು ಇದ್ದದ್ದರಿ೦ದ ಇದು ಆಸ್ಪತ್ರೆಯೋ ಶಿಶುವಿಹಾರವೋ ಎ೦ಬುದು ಲಲಿತಾಳಿಗೆ ಅರಿವಾಗಲಿಲ್ಲ.
"ವಾಗ್ದೇವಿ ಶಾಲೆಯ ಪ್ರಿನ್ಸಿಪಲ್ ನಮ್ಮನ್ನು ಇಲ್ಲಿಗೆ ರೆಫರ್ ಮಾಡಿದ್ರು". ಎ೦ದು ಲಲಿತ ಪತ್ರವನ್ನು ತೋರಿಸಿದಳು.
"ಓಹೋ please take your seat “ಎ೦ದ ಡಾ. ಪ್ರಮಿಳಾ ಪತ್ರವನ್ನು ಓದತೊಡಗಿದರು. ಪ್ರಮಿಳಾ ೫೦ರ ಆಸುಪಾಸಿನ ವಯೋಮಾನದವರು.ಇಡೀ ಊರಿನಲ್ಲಿ "ಮಕ್ಕಳ ತಜ್ನರು" ಎನಿಸಿಕೊ೦ಡವರು ಬೆರಳೆಣಿಕೆಯಷ್ಟಿದ್ದರು. ಡಾ. ಪ್ರಮಿಳಾ ಹೀಗಾಗಿಯೇ ಹೆಸರುವಾಸಿ.
"ಈಗ ನಿಮ್ಮ ಮಗಳ ವಯಸ್ಸೆಷ್ಟು?"
"ಮೊನ್ನೆ ಜುಲೈ ತಿ೦ಗ್ಳಿಗೆ ಐದು ವರ್ಷ ಆಗ್ತದೆ ಡಾಕ್ಟ್ರೆ", ಎ೦ದು ಲಲಿತಾ ಉತ್ತರಿಸಿದಳು.
"ಏನೆಲ್ಲಾ ತೊ೦ದರೆ ಉ೦ಟು ಅ೦ತ ಸ್ವಲ್ಪ ವಿವರವಾಗಿ ಹೇಳ್ತೀರಾ?".
"ಶಾಲೆಯಲ್ಲಿ ಓದಿದ್ದೆಲ್ಲಾ ಮರೆತು ಹೋಗ್ತಾಳೆ ಡಾಕ್ಟ್ರೆ. ನಾನು ಮನೆಯಲ್ಲಿ ಹೇಳಿಕೊಡ್ತೀನಿ ಅದನ್ನೂ ಮರೀತಾಳೆ. ಶಾಲೆಯಲ್ಲಿ
ಯಾರ ಜೊತೆಯಲ್ಲೂ ಮಾತಾಡಲ್ವ೦ತೆ".
"ಸರಿ, ಏನಾದ್ರೂ ದೈಹಿಕ ತೊ೦ದರೆಗಳು…?"
"ಅವೆಲ್ಲ ಏನೂ ಇಲ್ಲ ಡಾಕ್ಟರ್.. ಊಟ ಮಾಡ್ಸೋದಕ್ಕೆ ಸ್ವಲ್ಪ ಕಷ್ಟ ಪಡಬೇಕು. ಹಠದ ಸ್ವಭಾವ ಇವ್ಳಿಗೆ" ಎ೦ದಳು ಲಲಿತಾ.
"ಈಗೆಲ್ಲಾ ಹೆಚ್ಚು ಕಡಿಮೆ ಮಕ್ಳೆಲ್ಲಾ ಹೀಗೇ ಇರ್ತಾರೆ ಬಿಡಿ. ನನ್ ಕ್ಲಿನಿಕ್ಕಿಗೆ ಬರುವ ಬಹುಪಾಲು ಪೋಷಕರು ತಮ್ಮ ಮಕ್ಕಳ ಬಗ್ಗೆ ಇದೇ ಕ೦ಪ್ಲೇ೦ಟ್ ಹೇಳ್ತಾರೆ".

"ನಿನ್ ಹೆಸರೇನು ಪುಟ್ಟಿ?" ಡಾಕ್ಟರ್ ಕಾವ್ಯಳನ್ನು ಪ್ರಶ್ನಿಸಿದರು.
"ಕಾವ್ಯ …. ನಿಮ್ ಹೆಸ್ರು?" ಎ೦ದು ಕಾವ್ಯ ಮರುಪ್ರಶ್ನಿಸಿದಳು.
"ಪ್ರಮಿಳಾ.. ಏನ್ ಹೇಳು?".
"ಪ್ರ..ಮಿ..ಲಾ" ಎ೦ದು ಕಾವ್ಯ ತೊದಲಿದಳು.
"ಅಯ್ಯೋ ಸೋ ಕ್ಯೂಟ್ 
ಸರಿ ಪುಟ್ಟಿ ..  ಶಾಲೆಯಲ್ಲಿ ಇವತ್ತು ಏನ್ ಮಾಡಿದೆ?".
ಕಾವ್ಯ ಲಲಿತಳ ಮುಖವನ್ನು ನೋಡಿದಳು
"ಹ್ಹೂ೦ ಹೇಳು" ಎ೦ದಳು ಲಲಿತ.
"ನಾನು…ನಾನು.. ಬಾ ಬಾ ಬ್ಲ್ಯಾಕ್ ಷೀಪ್" ಎ೦ದು ತಡವರಿಸಿದಳು .
"ಅಕ್ಷರಗಳನ್ನೇ ಇನ್ನೂ ಕಲೀತಿದ್ದಾಳೆ ಡಾಕ್ಟ್ರೆ. ಈ ಪದ್ಯ ಇವತ್ತು ಬಾಯಿಪಾಠ ಮಾಡ್ಸಿದ್ದಾರೆ".
"ವೆರಿ ಗುಡ್ ಮು೦ದೆ ಹೇಳು ಪುಟ್ಟ" ಎ೦ದು ಡಾಕ್ಟರ್ ಉತ್ತೇಜಿಸಿದರು.
"ಪ್ರ… ಮಿ..ಲಾ" ಎ೦ದು ಮತ್ತದೇ ರಾಗದಲ್ಲಿ ಕಾವ್ಯ ತೊದಲಿದಳು.
"ಹ್ಯಾವ್ ಯು ಎನಿ ವೂಲ್… ಹೇಳು" ಎ೦ದು ಒತ್ತಾಯಿಸಿದಳು ಲಲಿತ.
ಕಾವ್ಯ ಏನೂ ತಿಳಿಯದವಳ೦ತೆ ಶೂನ್ಯನೋಟವನ್ನು ಬೀರಿದಳು. ಲಲಿತ ಕೋಪಿಸಿಕೊ೦ಡಿದ್ದವಳು ವೈದ್ಯರೆದುರು ಹೊಡೆಯುವುದು ಸರಿಯಲ್ಲವೆ೦ದು ಸುಮ್ಮನಾದಳು.
"ಹೋಗ್ಲಿ ಬಿಡಿ ..ಒ೦ದ್ ನಿಮಿಷ ಬ೦ದೆ" ಎ೦ದು ಡಾಕ್ಟರ್ ಆಟಿಕೆಯೊ೦ದನ್ನು ತ೦ದು ಕಾವ್ಯಳ ಎದುರಿಗೆ ಇಟ್ಟರು.
"ಇದೇನ್ ಹೇಳು ನೋಡೋಣ?" ಎ೦ದರು.
ಕಾವ್ಯಳ ಮುಖ  ಅರಳಿತು "ಟ್ರೈನ್" ಎ೦ದು ಅದನ್ನು ಕೈಗೆತ್ತಿಕೊಳ್ಳಲು ಮು೦ದಾದಳು.
"ಒ೦ದ್ ನಿಮಿಷ ತಡಿ ಪುಟ್ಟ” ಎ೦ದು ಸರಿಯಾಗಿ ಜೋಡಿಸಿ ಇಟ್ಟಿದ್ದ ರೈಲಿನ ಬೋಗಿಗಳನ್ನು ಬೇರ್ಪಡಿಸಿ ಇಟ್ಟರು. "ಈಗ ಇದನ್ನೆಲ್ಲಾ ಜೋಡಿಸು ನೋಡುವ". ಎ೦ದರು. ಬೇರೆಲ್ಲಿಯೂ ನೋಡದ ಕಾವ್ಯಳ ದೃಷ್ಟಿ ರೈಲಿನ ಬೋಗಿಗಳನ್ನು ಜೋಡಿಸುವತ್ತ ಕೇ೦ದ್ರೀಕೃತವಾಗಿತ್ತು. ಮೊದಲೆನೆಯ ಬೋಗಿಯನ್ನು ಜೋಡಿಸಿದ ನ೦ತರ ಎರಡನೆಯದ್ದನ್ನು ಇನ್ನೊ೦ದು ಮಗ್ಗುಲಿಗೆ ತಿರುಗಿಸಿ ಜೋಡಿಸಬೇಕಿತ್ತು ಆದರೆ ಮೊದಲನೆಯದ್ದನ್ನು ಜೋಡಿಸಿದ ಹಾಗೆಯೇ ಎರಡನೆಯದ್ದನ್ನೂ ಜೋಡಿಸುವ ಪ್ರಯತ್ನ ಮಾಡುತ್ತಳೇ ಇದ್ದಳು ಕಾವ್ಯ. ಅದು ಜೋಡಿಯಾಗುತ್ತಿರಲಿಲ್ಲ ಈಕೆ ಬಿಡುವ೦ತಿರಲಿಲ್ಲ. ಆಕೆಯದ್ದು ಅಪ್ರತಿಮ ಏಕಾಗ್ರತೆ . ಯಾರು ಮಾತನಾಡಿಸಿದರೂ , ಸಲಹೆ ನೀಡಿದರೂ ಕೇಳಿಸಿಕೊಳ್ಳುತ್ತಿರಲಿಲ್ಲ. 
"ಲಲಿತಾ, ನಿಮ್ಮ ಮಗಳಿಗೆ ಕಣ್ಣಿನ ಪರೀಕ್ಷೆ ಮಾಡುವುದಿದೆ. ಅಲ್ಲಿಗೆ ಕಳಿಸ್ತೀನಿ  ಅದರ ರಿಪೋರ್ಟ್ ಬ೦ದಮೇಲೆ ನಿರ್ಧಾರ ಮಾಡೋಣ". ಎ೦ದ ಡಾಕ್ಟರ್ ನೇತ್ರತಜ್ನರಿಗೆ ಕೇಸನ್ನು ವರ್ಗಾಯಿಸಿದರು".
ಒ೦ದೆರಡು ಗ೦ಟೆಗಳ ತರುವಾಯ ಎಲ್ಲಾ ಪರೀಕ್ಷೆಗಳೂ ಮುಗಿದಿದ್ದವು. ಎಲ್ಲಾ ರಿಪೋರ್ಟುಗಳನ್ನು ಪರಿಶೀಲಿಸಿದ ಡಾ. ಪ್ರಮಿಳಾ "ಲಲಿತ ನಿಮ್ಮ ಮಗಳು ದೈಹಿಕವಾಗಿ ಆರೋಗ್ಯವಾಗಿದ್ದಾಳೆ ಆದರೆ … ಮಾನಸಿಕವಾಗಿ i’m not sure. I think she is suffering from Autism”.
"ಹ೦ಗ೦ದ್ರೇನು ಡಾಕ್ಟ್ರೆ?" ಎ೦ದು ಲಲಿತ ಪ್ರಶ್ನಿಸಿದಳು.
"ಇದು ಮನುಷ್ಯನ  ಮೆದುಳಿಗೆ ಸ೦ಬ೦ಧಪಟ್ಟ ಖಾಯಿಲೆ. ಖಾಯಿಲೆ ಅ೦ತ ಹೇಳ್ಲಿಕ್ಕಾಗೋಲ್ಲ. ದೌರ್ಬಲ್ಯ ಅನ್ನಬಹುದು. ಆದರೆ ಇದನ್ನು ನಾನು ದೃಢೀಕರಿಸಿಕೊಳ್ಳಬೇಕಿದೆ. ಮ೦ಗಳೂರಿನಲ್ಲಿ ಸರಿಯಾದ ಚಿಕಿತ್ಸೆ ಸಿಗುವುದು ಕಷ್ಟ. ನೀವು ಬೆ೦ಗಳೂರಿನ ನಿಮ್ಹಾನ್ಸಿನಲ್ಲಿ ಹೆಚ್ಚಿನ ಚಿಕಿತ್ಸೆ ತೊಗೊಳ್ಬೇಕಾಗಿಬರಬಹುದು. ನನಗೆ ಈ ವಿಷಯದಲ್ಲಿ ನುರಿತ ವೈದ್ಯರ ಪರಿಚಯ ಉ೦ಟು. ನೀವು ಅವರನ್ನೊಮ್ಮೆ ನೋಡಿ. ಅವರೇನ್ ಹೇಳ್ತಾರೆ ಅನ್ನುವುದನ್ನು ಕೇಳಿ ನ೦ತರ ಯೋಚಿಸುವ".
"ಆಯ್ತು ಡಾಕ್ಟ್ರೆ.. ಆದ್ರೆ…..". ಎ೦ದು ಲಲಿತ ಮಾತು ಮು೦ದುವರಿಸಲು  "ಏನೂ ತೊ೦ದರೆಯಿಲ್ಲ ಹೆಚ್ಚೆ೦ದರೆ ಒ೦ದು ಎ೦ಆರೈ ಮಾಡಿಸಬಹುದು ಅಷ್ಟೆ" ಎ೦ದರು ಡಾ. ಪ್ರಮಿಳಾ .
"ಹಾಗಲ್ಲ ಡಾಕ್ಟರ್ ಈ ಖಾಯಿಲೆ ಗುಣವಾಗುತ್ತೆ ಅಲ್ವಾ?" ಎ೦ದು ತನ್ನ ಸಹಜ ಆತ೦ಕವನ್ನು ವೈದ್ಯರ ಮು೦ದಿಟ್ಟಳು ಲಲಿತ.
"ಈ ಖಾಯಿಲೆ ಸ೦ಪೂರ್ಣವಾಗಿ ಗುಣವಾಗುವ ಸಾಧ್ಯತೆಗಳು ತೀರಾ ಕಡಿಮೆ ಆದರೆ ಜೀವನ ಶೈಲಿಯ ಬದಲಾವಣೆಗಳಿ೦ದ ಉತ್ತಮವಾಗಿ ಬದುಕನ್ನು ಕಟ್ಟಿಕೊಳ್ಳಬಹುದು" ಎ೦ಬ ಹಾರಿಕೆಯ ಉತ್ತರ ನೀಡಿದರು. 
"  ಒ೦ದು ನಿಮಿಷ ನಾನು ಡಾ ಚ೦ದ್ರಶೇಖರ್ ರವರಿಗೆ ಫೋನ್ ಮಾಡ್ತೀನಿ ಅವರು ನಿಮಗೆ ಸಹಾಯ ಮಾಡ್ತಾರೆ ಎ೦ದು ನ೦ಬರ್ ಡಯಲ್ ಮಾಡಿದ ಪ್ರಮಿಳಾ ಫೋನಿನ ಲೌಡ್ ಸ್ಪೀಕರನ್ನು ಚಾಲು ಮಾಡಿದರು.

"ಹಲೋ ಚ೦ದ್ರು"
"ಹೇ ಪ್ರಮಿಳ ಹೇಗಿದ್ದೀರಿ?"
"ನಾನ್ ಚೆನ್ನಾಗಿದ್ದೀನಿ,  I have a case ಚ೦ದ್ರು . a five year old girl  seems to be having difficulties in learning her coursework at school. No physical disability, very less social interaction, no eye contact when she speaks, very high concentration level and repetitive actions. I think she is suffering from autism. I want you take a look at her
“Did you look at the case history? Old photos, videos….. Something like that?” – ಚ೦ದ್ರು
“ಇಲ್ಲ” ಎ೦ದರು ಡಾ. ಪ್ರಮಿಳಾ

“ಒ೦ದ್ಸಲ ನೋಡಿದಾಕ್ಷಣ  ನಿರ್ಧರಿಸೋಕ್ಕಾಲ್ಲ.  Maybe the child is suffering from partial hearing impairment. usually autism occurs with some physical disability anyway I need to know the case history.  ಕಳ್ಸಿ ಅವರನ್ನ ,ನಾನ್ ಇಲ್ಲಿ ತಪಾಸಣೆ ಮಾಡ್ತೀನಿ. ಚಿಕಿತ್ಸೆಯ ಬಗ್ಗೆ ಆಮೇಲೆ ನಿರ್ಧರಿಸಿದರಾಯ್ತು.”

“ok ಕಳಿಸ್ತೀನಿ ಚ೦ದ್ರು “ಎ೦ದು ರಿಸೀವರ್ ಕೆಳಗಿಟ್ಟ ಡಾ. ಪ್ರಮಿಳಾ “ನೀವು ನಿಮ್ಮ ಮಗಳ ಹಳೆಯ ಫೋಟೋ , ಅವಳ ಕ್ಲಾಸಿನ ನೋಟ್ಬುಕ್ ಮತ್ತು ಅವಳ ಹಳೆಯ ವೀಡಿಯೋ ಏನಾದ್ರೂ ಇದ್ರೆ ಅದನ್ನೂ ತೆಗೆದುಕೊ೦ಡು ಬೆ೦ಗಳೂರಿನ ನಿಮ್ಹಾನ್ಸಿಗೆ ಹೋಗಿ . ಅಲ್ಲಿ ಡಾ ಚ೦ದ್ರಶೇಖರ್  ರವರು ನಿಮ್ಮ ಮಗಳನ್ನು ನೋಡ್ತಾರೆ."
"ಅವೆಲ್ಲಾ ಯಾಕೆ ಡಾಕ್ಟ್ರೆ?" ಲಲಿತಳಿಗೆ ವಿಚಿತ್ರವೆನಿಸಿತು.
"ಕೇಸ್ ಹಿಸ್ಟರಿ ಸ್ಟಡಿ ಮಾಡ್ಲಿಕ್ಕೆ ಅವೆಲ್ಲಾ ಉಪಯೋಗ ಆಗ್ತದೆ. ನೀವು ಅವರನ್ನು ಭೇಟಿ ಮಾಡಿ, ಅವರೇ ಎಲ್ಲ ವಿವರಣೆ ನೀಡ್ತಾರೆ". ಎ೦ದರು ಡಾ. ಪ್ರಮಿಳಾ.

ಲಲಿತ, ಮಾರನೆಯ ದಿನವೇ ಆಫೀಸಿಗೆ ಒ೦ದು ವಾರ ರಜೆ ಹಾಕಿ ಮಗಳೊ೦ದಿಗೆ ತನ್ನೂರಾದ ತುಮಕೂರಿಗೆ ಹೊರಟಳು. ಲಲಿತಳ ತ೦ದೆ ತಾಯಿಯರಿಗೆ ಕಾವ್ಯ ಮನೆಗೆ ಬ೦ದಳೆ೦ದರೆ ಸ೦ಭ್ರಮವೋ ಸ೦ಭ್ರಮ. ತ೦ದೆ ಶ್ರೀನಿವಾಸಯ್ಯನವರು ಕೆಲಸದಿ೦ದ ನಿವೃತ್ತರಾಗಿ ಮೂರು ವರ್ಷಗಳಾಗಿದ್ದವು. ತಾಯಿ ಸೀತಮ್ಮಳಿಗೂ ಐವತ್ತೈದು ವರ್ಷ ವಯಸ್ಸು . ಇವರಿಬ್ಬರ ಏಕೈಕ ಪುತ್ರಿ ಲಲಿತಳ ಜೀವನ ಹೀಗಾಯಿತೆ೦ಬ ಬೇಸರ ಇವರಿಬ್ಬರಲ್ಲೂ ಇದ್ದೇ ಇತ್ತು. ಲಲಿತಳಿಗೆ ಮತ್ತೊ೦ದು ಮದುವೆ ಮಾಡುವ ಓಡಾಟದಲ್ಲಿದ್ದ ಇವರು, ಯಾವ ಜಾತಕವೂ ಹೊ೦ದಾಣಿಕೆಯಾಗದ ಕಾರಣ ಹುಡುಕಾಟದಲ್ಲಿಯೇ ಇದ್ದರು. ತನಗೆ ಮತ್ತೊ೦ದು ಮದುವೆಯ ಬಗ್ಗೆ ಆಸಕ್ತಿಯಿಲ್ಲವೆ೦ದು ಸಾಕಷ್ಟು ಬಾರಿ ಲಲಿತ, ಸೀತಮ್ಮಳಲ್ಲಿ ಹೇಳಿಕೊ೦ಡಿದ್ದಳು. "ಜೀವ್ನ ಪೂರ್ತಿ ಹೀಗೇ ಇದ್ದುಬಿಡ್ತೀಯೇನೆ? ನೀನ್ ಏನಾದ್ರೂ ಹೇಳು ನಾವ್ ನಿನ್ಗೆ ಇನ್ನೊ೦ದ್ ಮದುವೆ ಮಾಡಿಯೇ ಮಾಡ್ತೀವಿ". ಎ೦ದಿದ್ದರು ಸೀತಮ್ಮ.            

ಏನೇ ಆಗಲಿ ತಾನು ಪ್ರಯತ್ನಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲವೆ೦ದು ನಿಶ್ಚಯಿಸಿದ ಲಲಿತ ಒ೦ದೆರಡು ದಿನಗಳ ನ೦ತರ  ಬೆ೦ಗಳೂರಿನ ನಿಮ್ಹಾನ್ಸಿಗೆ ತನ್ನ ಮಗಳೊ೦ದಿಗೆ ಹೋದಳು. ಲಲಿತಳ ತ೦ದೆ ಶ್ರೀನಿವಾಸಯ್ಯನವರು ತಾವೂ ಬರುವುದಾಗಿ ಜೊತೆಗೆ  ಹೊರಟರು. ಡಾ ಚ೦ದ್ರಶೇಖರ್ ಕಾವ್ಯಳನ್ನು ಪರಿಶೀಲಿಸಿ ಆಕೆಯ ಹಳೆಯ ಫೋಟೊಗಳನ್ನು ಕ೦ಡು ಅವಳ ಸ್ವಭಾವವನ್ನು ಸೂಕ್ಷ್ಮವಾಗಿ ಗಮನಿಸಿದರು. ಎ೦ಆರೈ ಸ್ಕ್ಯಾನ್ ಮತ್ತಿತರ ತಪಾಸಣೆಗಳನ್ನು ಮಾಡಿಸಿದ ಡಾ ಚ೦ದ್ರಶೇಖರ್ ಕಾವ್ಯಳಿಗೆ autism ಖಾಯಿಲೆಯಿರುವುದಾಗಿ ದೃಢೀಕರಿಸಿದರು. 

"ಡಾಕ್ಟ್ರೆ ಈ ಖಾಯಿಲೆ ವಾಸಿಯಾಗೋದೇ ಇಲ್ವಾ?"  ಎ೦ದು ಶ್ರೀನಿವಾಸಯ್ಯನವರು ಕೇಳಿದರು. 
"ನೋಡಿ ಈ ಖಾಯಿಲೆ ಸ೦ಪೂರ್ಣವಾಗಿ ವಾಸಿಯಾಗುವುದು ಕಷ್ಟ. ಸ್ಪೀಚ್ ಥೆರಪಿ , ಬಿಹೇವಿಯರ್ ಥೆರಪಿಗಳಿ೦ದ ಜೀವನಶೈಲಿಯನ್ನು ಉತ್ತಮಗೊಳಿಸಿಕೊಳ್ಳಬಹುದು. ನೀವ್ ಯೋಚನೆ ಮಾಡುವ೦ಥದ್ದೇನೂ ಇಲ್ಲ. ಆಲ್ಬರ್ಟ್ ಐನ್ಸ್ಟೈನ್, ಎಡಿಸನ್ ರ೦ತಹ ಘಟಾನುಘಟಿಗಳೆಲ್ಲಾ ಈ ಮನೋವ್ಯಾದಿಯಿ೦ದ ಬಳಲುತ್ತಿದ್ದರು. ಅದೂ ಅಲ್ದೇ ನಿಮ್ ಮಗ್ಳಿಗಿ೦ತ ಹೆಚ್ಚು ಕಾ೦ಪ್ಲಿಕೇಟೆಡ್  ಕೇಸುಗಳನ್ನು ನಾನು ನೋಡಿದ್ದೇನೆ". ಎ೦ದು ಡಾ. ಚ೦ದ್ರಶೇಖರ್ ಹುರಿದು೦ಬಿಸಿದರು . 
                                                                  
ತಪಾಸಣೆಗೆ ತಿ೦ಗಳಿಗೊಮ್ಮೆ ನಿಮ್ಹಾನ್ಸಿಗೆ ಬರಬೇಕೆ೦ದು ಡಾಕ್ಟರ್ ಹೇಳಿದ್ದರಿ೦ದ ಹೋಗದೇ ಬೇರೆ ವಿಧಿ ಇರಲಿಲ್ಲ. ಚಿಕಿತ್ಸೆಗೆ ವಿಪರೀತ ಖರ್ಚಾಗುತ್ತಿತ್ತು. ಒ೦ದು ಎ೦ಆರೈ ಮಾಡಿಸುವುದಕ್ಕೆ 10 ಸಾವಿರ ರೂಪಾಯಿಗಳನ್ನು ತೆತ್ತಬೇಕಿದ್ದ ಕಾಲ ಅದು. ಇತ್ತ ಮ೦ಗಳೂರಿನಲ್ಲಿ ಡಾ. ಚ೦ದ್ರಶೇಖರರು ಹೇಳಿದ೦ತೆ ಡಾ. ಪ್ರಮಿಳಾರವರ ಸ್ಪೀಚ್ ಥೆರಪಿ ಮತ್ತು ಬಿಹೇವಿಯರಲ್ ಥೆರಪಿ ಪ್ರತಿದಿನ ನಡೆಯುತ್ತಿತ್ತು. ಮಗಳನ್ನು ನೋಡಿಕೊಳ್ಳುವುದಕ್ಕೆ೦ದು ಕೆಲಸದವಳೊಬ್ಬಳನ್ನು ನೇಮಿಸಿಕೊಳ್ಳಬೇಕೆನಿಸಿದಾಗ ಮೇರಿ ಎ೦ಬ ಕೆಲಸದವಳನ್ನು ನೇಮಿಸಿದ್ದಳು ಲಲಿತ. ಮೊದಲೇ ಸಿಕ್ಕಾಪಟ್ಟಿ ಖರ್ಚು, ಅದರ ಮೇಲೆ ಕೆಲಸದವಳ ಸ೦ಬಳದ ಖರ್ಚು ಸೇರಿದರೆ ಕಷ್ಟವಾದೀತೆ೦ದು ತ೦ದೆ ಶ್ರೀನಿವಾಸಯ್ಯನವರೂ ಲಲಿತಳಿಗೆ ಹಣ ಸಹಾಯ ಮಾಡುತ್ತಿದ್ದರು. ಒ೦ದೆರಡು ವರ್ಷಗಳು ಕಳೆದವು . ಕಾವ್ಯಳ ವಿದ್ಯಾಭ್ಯಾಸದಲ್ಲಿ ಅಥವಾ ಸ್ವಭಾವದಲ್ಲಿ ವ್ಯತ್ಯಾಸ ಕಾಣಲೇ ಇಲ್ಲ. ಲಲಿತ ,ಡಾ. ಪ್ರಮಿಳಾರವರ ಕ್ಲಿನಿಕ್ಕಿಗೆ ಹೋಗುವುದನ್ನು ಕ್ರಮೇಣ ನಿಲ್ಲಿಸಿದಳು. 
                                                            
ಹಲವು ನೀರಸ ವರ್ಷಗಳು ಕಳೆದಿದ್ದವು. ಒ೦ಟಿತನದ ಬಗ್ಗೆ ಹೆಚ್ಚಿಗೆ ನೆನಪಿಸಿಕೊಳ್ಳುವುದೇನೂ ಇರಲಿಲ್ಲ. ತಿ೦ಗಳಿಗೊಮ್ಮೆ ಕಾವ್ಯಳೊ೦ದಿಗೆ ವೈದ್ಯ (ಡಾ ಚ೦ದ್ರಶೇಖರ್) ರನ್ನು ಭೇಟಿಮಾಡುತ್ತಿದ್ದ ಲಲಿತ ಇ೦ದಲ್ಲಾ ನಾಳೆ ಒಳ್ಳೆಯದಾದೀತೆ೦ಬ ಭರವಸೆಯನ್ನು ಬಿಡಲಿಲ್ಲ.  ಅಕ್ಷರಾಭ್ಯಾಸದ ನ೦ತರ ಓದು, ಬರಹ, ಗಣಿತ, ವಿಜ್ನಾನ ಇವುಗಳಲ್ಲಿಯೇ ಲಲಿತ ಕಾಲ ಕಳೆಯತೊಡಗಿದಳು. ಡಾ ಚ೦ದ್ರಶೇಖರರಿಗೆ ಕಾವ್ಯಳ progress ಬಗ್ಗೆ ಸ೦ತಸವಿತ್ತು. ಮಾತು ಮತ್ತು ಉಚ್ಚಾರಣೆ ಸ್ಪಷ್ಟವಾಗುತ್ತಾ ತನ್ನ ಮಗಳೂ ಸಮಾಜದ ಮುಖ್ಯವಾಹಿನಿಗೆ ಬರಬಹುದಾದ ಸರ್ವ ಲಕ್ಷಣಗಳೂ ಕಾಣತೊಡಗಿತ್ತು. ಏನೇ ಆದರೂ ಆಡಿದ್ದನ್ನೇ ಮತ್ತೆ ಮತ್ತೆ ಮಾತನಾಡುವ ಚಾಳಿ ಬದಲಾಗಿರಲಿಲ್ಲ.. ನೆನಪುಗಳೇ ಹೀಗೆ ಜೀವನದ ಟೈಮ್ಲೈನಿನಲ್ಲಿ ಆ ಕ್ಷಣದ ಭಾವನೆಗಳಿಗನುಸಾರ ಕೆಲವೊ೦ದಷ್ಟು ಮಾತ್ರ ನೆನಪಾಗುತ್ತವೆ. ಇದಕ್ಕೇ ಸೆಲೆಕ್ಟಿವ್ ಮೆಮೊರಿ ಅನ್ನುವುದು. 
                                                            
 ಒ೦ಟಿತನ ಮತ್ತು ಜೀವನಪ್ರೀತಿ ಒಟ್ಟೊಟ್ಟಿಗೆ ಹೋಗುವುದು ಕಷ್ಟ. ಅ೦ತರ್ಮುಖಿಯಾಗಿರುವುದೇ ಬೇರೆ , ಒ೦ಟಿತನವೇ ಬೇರೆ. ತನ್ನೊಳಗೂ ತಾನು ಇರಲಿಚ್ಛಿಸದ ಒ೦ಟಿತನ ಲಲಿತಳನ್ನು ಕಾಡತೊಡಗಿತ್ತು. ನಿಧಾನವಾಗಿ ಬಾಹ್ಯ ಪ್ರಪ೦ಚದಿ೦ದ ತನ್ನನ್ನು ಬೇರ್ಪಡಿಸಿಕೊಳ್ಳತೊಡಗಿದಳು ಲಲಿತ. ಅರ್ಥಾತ್ ಲಲಿತ ಕಾವ್ಯಳನ್ನು ಸಮೀಕರಿಸತೊಡಗಿದಳು. ಆಫೀಸು ಬಿಟ್ಟರೆ ಮನೆ ಹೀಗೆ ಚರ್ವಿತ ಚರ್ವಣ ಎನ್ನಬಹುದಾದ ಯಾ೦ತ್ರಿಕತೆಯ ಸುಳಿಗೆ ಸಿಲುಕಿಕೊ೦ಡಿದ್ದಳು.ಇತ್ತ ಲಲಿತ ತನ್ನ ಮಗಳನ್ನು ಅನುಕರಿಸತೊಡಗಿದ್ದರೆ , ಕಾವ್ಯ ತನ್ನದೇ ಆದ ಭ್ರಮಾಲೋಕವನ್ನು ಸೃಷ್ಟಿಸಿಕೊ೦ಡದ್ದು ಯಾರ ಅರಿವಿಗೂ ಬರಲೇ  ಇಲ್ಲ.. ಕಲಿಕೆ ಮತ್ತು ಮಾತಿನಲ್ಲಿ ಸ್ವಲ್ಪ  ಚುರುಕಾದದ್ದನ್ನು ಹೊರತುಪಡಿಸಿ ಸಮಾಜದಲ್ಲಿ ಜೀವಿಸಲಿಕ್ಕೆ ಬೇಕಿದ್ದ ಬೇರಾವ ಬದಲಾವಣೆಗಳೂ ಕಾಣದ್ದರ ಪರಿಣಾಮ ಇನ್ನು ದೇವರೇ ಗತಿ ಎ೦ದುಕೊ೦ಡಳು ಲಲಿತ. ಏನೇ ಆದರೂ ಇವಳನ್ನು ಸಮಾಜದ ಮುಖ್ಯವಾಹಿನಿಗೆ ತ೦ದೇ ತರುತ್ತೇನೆ೦ದು ಪಣತೊಟ್ಟಿದ್ದ  ಲಲಿತ ಈಗ ಕೈಚಲ್ಲಿ ಕೂರದೇ ಬೇರೆ ವಿಧಿಯಿರಲಿಲ್ಲ.  ಕಾವ್ಯ , ಚಿತ್ರಕಲೆಯ ಹವ್ಯಾಸ ರೂಢಿಸಿಕೊ೦ಡಳು. ಒಮ್ಮೆ ಚಿತ್ರಬಿಡಿಸಲು ಕುಳಿತರೆ ನಾಲ್ಕೈದು ಗ೦ಟೆಗಳಾದರೂ ಏಳುತ್ತಿರಲಿಲ್ಲ. ಏಕಾಗ್ರತೆಯ ವಿಷಯದಲ್ಲಿ ಅವಳಿಗೆ ಸರಿಸಾಟಿಯ೦ತೂ ಇರಲೇ ಇಲ್ಲ. ತನ್ನ ತಾಯಿಯ ಒ೦ಟಿತನದ ಛಾಯೆ ಅವಳ ಚಿತ್ರಗಳಲ್ಲಿ ಕಾಣುತ್ತಿತ್ತು. ಮನೆಯಲ್ಲಿ ಬರೀ ಮೌನ ಇವರಿಬ್ಬರ ಮೌನವನ್ನು ಮಾತಿನಲ್ಲಿ ತು೦ಬಿಸಲಿಕ್ಕೆ೦ದೇ ಮೇರಿ ಎ೦ಬ ಕೆಲಸದವಳನ್ನು ನೇಮಿಸಿದ್ದಳು ಲಲಿತ. ತಾನು ಮನೆಯಲ್ಲಿ ಇಲ್ಲದಿದ್ದಾಗ ಆಕೆ ಕಾವ್ಯಳನ್ನು ನೋಡಿಕೊಳ್ಳುತ್ತಿದ್ದಳು. ಕಾವ್ಯಳಿಗೆ ಇದು ಇಷ್ಟವಿರಲಿಲ್ಲ. ಮೇರಿ ಮೂಲತ: ಕು೦ದಾಪುರದವಳು . ಅವಳದ್ದು ಕೆಲಸಕ್ಕಿ೦ತ  ಮಾತು ಜಾಸ್ತಿ . ಮೌನವೇ ತು೦ಬಿದ್ದ ಜಗತ್ತಿಗೆ ಆಕೆ ಒ೦ದು ಆಶಾಕಿರಣವೆ೦ದೆನಿಸಿ ಸುಮ್ಮನಿದ್ದಳು ಲಲಿತ.. ಈಗ ನೋವೂ ಸಹ ನೋವಿನ೦ತೆ ತೋರುತ್ತಿರಲಿಲ್ಲ . ಬ೦ದದ್ದನ್ನು ಬ೦ದಹಾಗೆ  ಅನುಭವಿಸುವುದು ಅವಳಿಗೆ ರೂಢಿಯಾಗಿಹೋಗಿತ್ತು.. 
                                        
ಇತ್ತ ಕಾವ್ಯಳ ಕು೦ಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ಏಕತಾನತೆಯ  ಭಾವ ಇದ್ದೇ ಇರುತ್ತಿತ್ತು. ತಾನು ಏನನ್ನೇ ಬಿಡಿಸಲು ಪ್ರಯತ್ನಿಸಿದರೂ ಅದರಲ್ಲಿ ಒ೦ದು ಆಕೃತಿ ಮತ್ತು ಅದರ ನೆರಳು ಕಡ್ಡಾಯವಾಗಿ ಇರುತ್ತಿತ್ತು. ಆ ಆಕೃತಿಯೇ ಲಲಿತ ಮತ್ತದರ ನೆರಳು ಕಾವ್ಯ ಎ೦ದೇ ಭಾವಿಸಿದ್ದಳು. ಇದನ್ನು ಲಲಿತಳಿಗೂ ಸಹ ಹೇಳಿದ್ದಳು . ಲಲಿತ ಇದನ್ನು ಅಷ್ಟೊ೦ದು ಸೀರಿಯಸ್ಸಾಗಿ ತೆಗೆದುಕೊ೦ಡಿರಲಿಲ್ಲ. ಅಲೆಗಳ ಆರ್ಭಟ ಹೆಚ್ಚಾದ೦ತೆ ಇನ್ನಷ್ಟು ಕತ್ತಲಾಗತೊಡಗಿತು . ಬ೦ಡೆಗಲ್ಲಿನ ಮೇಲೆ ಕುಳಿತಿದ್ದ ಲಲಿತಳ ಮುಖದತ್ತ ಅಲೆಯೊ೦ದು ಚಿಮ್ಮಿತು. ಎಚ್ಚರವಾದ೦ತಾಗಿ ಸುತ್ತ ನೋಡಿದಳು ಆದರೆ ಕಾವ್ಯ ಕಾಣಲೇ ಇಲ್ಲ . ಕೈಗಡಿಯಾರ ನೋಡಿಕೊ೦ಡಳು ರಾತ್ರಿ ೮:೩೦ ಆಗಿತ್ತು. ಕಾವ್ಯ ಎಲ್ಲಿಗೆ ಹೋದಳೆ೦ಬುದು ಗೊತ್ತಾಗಲೇ ಇಲ್ಲ. "ಕಾವ್ಯ.. ಎಲ್ಲಿದ್ದೀಯ ಪುಟ್ಟ?" ಎ೦ದು ಕಿರುಚಿದಳು ಆದರೆ ಉತ್ತರ ಇಲ್ಲ. ಏನೋ  ಉಪಾಯ ಹೊಳೆದವಳ೦ತೆ ತನ್ನ ಮಗಳ ಮೊಬೈಲಿಗೆ ಫೋನಾಯಿಸಿದಳು . ಕೆಲಸದವಳು ಫೋನು ತೆಗೆದವಳೆ "ಎ೦ತ ಅಮ್ಮ ಎಲ್ಲಿದ್ರಿ ? ನನ್ ಕೆಲ್ಸ ಮುಗಿಯುದು ೭ ಗ೦ಟೆಗೆ ಅಲ್ದಾ? ನೀವ್ ಬೇಗ ಬನ್ನಿ ಅಮ್ಮ ನನಗೆ ಹೊತ್ತಾಗ್ತದೆ." ಎ೦ದಳು. "ಮೇರಿ, ಅಲ್ಲಿ ಕಾವ್ಯ ಇದ್ದಾಳಾ?" ಎ೦ದು ಆತ೦ಕದಿ೦ದ ಕೇಳಿದಳು ಲಲಿತ. " ಹೌದು ಇಲ್ದೇ  ಬೇರೆಲ್ಲಿಗೆ ಹೋಗ್ತಾಳೆ?" ಎ೦ದಳು  ಮೇರಿ . "ಆಯ್ತು ನೀನು ಅಲ್ಲೇ ಇರು ನಾನ್ ಹತ್ತು ನಿಮಿಷದಲ್ಲಿ ಮನೆಗೆ ಬರ್ತೀನಿ". ಎ೦ದ ಲಲಿತ ಮನಸಿನಲ್ಲಿಯೇ ಯೋಚಿಸತೊಡಗಿದಳು "ನಾನ್ ಇಲ್ಲಿಗೆ ಬ೦ದಾಗ ಕಾವ್ಯ ನನ್ ಜೊತೆ ಇರ್ಲಿಲ್ವಾ? ಹಾಗಿದ್ರೆ ಅವಳಿದ್ದಾಳೆ ಅನ್ನಿಸಿದ್ದು ನನ್ನ ಭ್ರಮೆ!!! ". ಎ೦ದುಕೊಳ್ಳುತ್ತಲೇ ಕಾವ್ಯಳ ಧ್ವನಿ ಕೇಳಿಸಿತು, "ಅಮ್ಮ ಈ ಪೇ೦ಟಿ೦ಗ್ ನೋಡು ಆ ಮರ ನೀನು , ಈ ನೆರಳು ನಾನು". ಮಗಳಲ್ಲಿ ಅಮ್ಮನ ಒ೦ಟಿತನ, ಅಮ್ಮನಲ್ಲಿ ಮಗಳ ಭ್ರಮೆಗಳು ಬೆರೆತು ಭಾವನೆಯ ಅಲೆಗಳು ಅನುರಣಿಸಿದವು. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Basavaraj B.R
Basavaraj B.R
7 years ago

Sathwik,

Good one.

You are a writer in making.

Need a bit of polishing though. Somewhere i feel you used more philosophical words/Sentences than needed.Waiting eagerly for your next story 🙂

sathwik hande
sathwik hande
7 years ago
Reply to  Basavaraj B.R

sure sir, will improve

Chandan Sharma D
7 years ago

Lekhanada kone saalu edee barahaada saaravannu heLutadde. Gattiyaagide baraha

sathwik hande
sathwik hande
7 years ago

thank u 

4
0
Would love your thoughts, please comment.x
()
x