ಅಣ್ವಾಸುರನ ಬೂದಿ ಮತ್ತು ವಿಶ್ವ ಅಣು ಪರೀಕ್ಷೆ ವಿರೋಧಿ ದಿನಾಚರಣೆ: ಅಖಿಲೇಶ್ ಚಿಪ್ಪಳಿ


ಆಧುನಿಕ ಮಾನವನ ಯೋಚನೆಗಳು, ವರ್ತನೆಗಳು ಎಲ್ಲವೂ ಸ್ವಾರ್ಥದಿಂದ ಕೂಡಿದೆ. ತಕ್ಷಣದ ಲಾಭಕ್ಕಾಗಿ ಏನು ಮಾಡುವುದಕ್ಕೂ ತಯಾರು. ಒಟ್ಟಾರೆ ಬಹುಸಂಖ್ಯಾತರ ಆಲೋಚನೆಗಳು ಸದ್ಭುದ್ದಿಯಿಂದ ಕೂಡಿದೆ ಎನಿಸುವುದಿಲ್ಲ. ಮೊನ್ನೆ ಸ್ನೇಹಿತರೊಬ್ಬರು ಕಾಫಿ ಕುಡಿಯೋಣ ಬನ್ನಿ ಎಂದು ಕರೆದರು. ಅರ್ಧರ್ಧ ಕಾಫಿ ಕುಡಿದು ಮುಗಿಯುವಷ್ಟರಲ್ಲಿ ಮಳೆ ಬಂತು. ಅದೂ ಮಳೆಗಾಲ ಶುರುವಾದ ಮೇಲೆ ತುಂಬಾ ಅಪರೂಪಕ್ಕೆ ಬಂದ ಮಳೆ. ಕಾಫಿಗೆ ಕರೆದೊಯ್ದ ಸ್ನೇಹಿತರಿಗೆ ಅಸಹನೆ ಶುರುವಾಯಿತು. ಥೂ! ಎಂತಾ ಮಳೆ ಮಾರಾಯ್ರೆ?. ಇವರಿಗೆ ಕಾಫಿ ಕುಡಿದ ತಕ್ಷಣ ತಮ್ಮ ಕೆಲಸಕ್ಕೆ ಹೋಗಬೇಕಿತ್ತು. ಮಳೆರಾಯ ಅಡ್ಡ ಹಾಕಿದ್ದ. ಇವರ ಜೊತೆ ಬಂದು ಯಾಕಾದರೂ ಕಾಫಿ ಕುಡಿದೆನೋ ಎನಿಸಿತು. ಇವರ ಪ್ರಕಾರ ಮಳೆ ಒಂದೈದು ನಿಮಿಷ ಬಿಟ್ಟು ಬರಬೇಕಿತ್ತಂತೆ. ದೊಣೆ ನಾಯಕನ ಅಪ್ಪಣೆ. ಅದಕ್ಕೆ ಹೇಳಿದ್ದು, ತಕ್ಷಣದ ಲಾಭಕ್ಕಾಗಿ ಇವರು ಏನಾದರೂ ಹೇಳುತ್ತಾರೆ ಅಥವಾ ಏನಾದರೂ ಮಾಡುತ್ತಾರೆ. ಹಾಗಂತ ಮಳೆಯೇನು ಇವರ ಅಪ್ಪಣೆ ಪಡೆದು ಬರಬೇಕಿಲ್ಲ. ಇಂತಹ ಬಹಳ ಜನರನ್ನು ನೀವು ನೋಡಬಹುದು. ೫ ನಿಮಿಷ ಮಳೆ ಬಿಟ್ಟಿದ್ದರೆ, ಮನೆಗೆ ಹೋಗುತ್ತಿದ್ದೆ ಎಂದೋ, ಪಿಗ್ಮಿ ಸಂಪಾದನೆಗೆ ಅನುಕೂಲವಾಗುತ್ತಿತ್ತೋ ಎಂದೋ ಭಾವಿಸುವವರ ಸಂಖ್ಯೆಯೇ ಅಧಿಕವಾಗಿದೆ. ಹಾಗೆಯೇ ಮಳೆ ಬರದಿದ್ದರೂ ಇವರು ಗೊಣಗುತ್ತಾರೆ. ಏನು ಮಾರಾಯ್ರೆ ಮಳೆನೇ ಇಲ್ಲ. ಎಂತ ಕತೆ? ಹೀಗೆ ಆದ್ರೆ ಕಷ್ಟ ಇತ್ಯಾದಿಗಳು. ಈ ಮಾತು ಯಾವಾಗ ಬರುತ್ತದೆಯೆಂದರೆ, ಇವರು ಅರಾಂ ಆಗಿ ಫ್ಯಾನ್ ಕೆಳಗೆ ಕುಳಿತಿದ್ದಾಗ! ಮಾಡಲು ಕೆಲಸವಿಲ್ಲದಿದ್ದರೆ, ಹರಟೆ ಹೊಡೆಯುವಾಗ ಇಂತಹ ಮಾತುಗಳು ಕೆಲಸಕ್ಕೆ ಬರುತ್ತದೆ ಎಂದು ಭಾವಿಸಿಕೊಂಡಿದ್ದಾರೆ. ಅನ್ನದ ಪಾತ್ರೆಯ ಒಂದಗಳನ್ನು ಮಾತ್ರ ಹಿಚುಕಿ ನೋಡಿ ಅನ್ನ ಬೆಂದಿದೆಯೋ ಇಲ್ಲವೋ ಹೇಳಬಹುದು. ಹಾಗೆಯೇ ಒಂದು ದೇಶದ ಮನ:ಸ್ಥಿತಿ ಯಾವ ರೀತಿ ಇದೆ ಎಂದು ಇಂತಹ ಮಾತುಗಳು ಪ್ರಚುರ ಪಡಿಸುತ್ತವೆ. ನೈತಿಕ ಹೊಣೆಗಾರಿಕೆ, ಉತ್ತರದಾಯಿತ್ವ ಎಂಬ ಶಬ್ಧಗಳಿಗೆ ಬೆಲೆಯೇ ಇಲ್ಲವಾಗಿದೆ. 

ಜುಲೈ ೧೬ ೧೯೪೫ರಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಅಣುಬಾಂಬ್‌ನ್ನು ಸಿಡಿಸಲಾಯಿತು. ಸಿಡಿಸಿದ್ದು ಅಮೆರಿಕ ಎಂಬ ದೇಶ. ಅಣುಬಾಂಬಿನ ಮೊಟ್ಟಮೊದಲ ಸಂತ್ರಸ್ಥ ದೇಶ ಜಪಾನ್. ಇದುವರೆಗೂ ಹೀಗೆ ಪರಿಕ್ಷಾರ್ಥವಾಗಿ ಈ ಭೂಮಿಯ ಮೇಲೆ ೨೦೦೦ ಅಣುಬಾಂಬ್‌ಗಳನ್ನು ಸಿಡಿಸಲಾಗಿದೆ. ಆಗಿನ ತಂತ್ರಜ್ಞಾನ ಹಾಗೂ ವಿಜ್ಞಾನಿಗಳ ಮನ:ಸ್ಥಿತಿಯಂತೆ ಅಣುಬಾಂಬಿನ ಆವಿಷ್ಕಾರವಾಯಿತು. ಅಣುಶಕ್ತಿಯನ್ನು ದ್ವಂಸ ಮಾಡಲು ಬಳಸಬಾರದು, ಬದಲಿಗೆ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು ಎಂಬ ಅಲಿಖಿತ ಅಂತಾರಾಷ್ಟ್ರೀಯ ಒಪ್ಪಂದ ಕಂಡು ಬಂದು, ಯುದ್ಧಕ್ಕಾಗಿ ಅಣು ಬಳಕೆ ಸಲ್ಲ ಎಂಬ ಮನೋಭಾವ ಉಂಟಾದರೂ, ಎಲ್ಲಾ ದೇಶಗಳು ಅಣುಶಕ್ತಿಯನ್ನು ಹೊಂದಲು ಕಾತರವಾಗಿವೆ. ಅಣುಶಕ್ತಿಯ ವಿಕಿರಣ ಹಲವಾರು ಸಾವಿರ ವರ್ಷಗಳವರೆಗೂ ಇರುತ್ತದೆ ಮತ್ತು ಇದು ಅಪಾಯಕಾರಿ ಎಂದು ಎಲ್ಲರಿಗೂ ಗೊತ್ತಾಗಿರುವ ವಿಚಾರ. ಆದರೂ ಅದೇಕೊ ಎಲ್ಲರಿಗೂ ಅಣುಶಕ್ತಿ ಬೇಕು. ಅಣುಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಿ ಅತಿ ಬೇಗ ಅಭಿವೃದ್ಧಿ ಹೊಂದುವ ತರಾತುರಿಯಿಂದಾಗಿ ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳು ಅಣು ರಿಯಾಕ್ಟರ್‌ಗಳನ್ನು ನಿರ್ಮಿಸಿದರು. ಹೆಚ್ಚು ಹೆಚ್ಚು ವಿದ್ಯುತ್ ಎಂದರೆ ಹೆಚ್ಚು ಹೆಚ್ಚು ಅಭಿವೃದ್ಧಿ ಎಂಬುದು ಅವರ ಧೋರಣೆಯಾಗಿತ್ತು. ಅಮೆರಿಕಾ, ಜರ್ಮನಿ, ಜಪಾನ್, ಫ್ರಾನ್ಸ್, ಇಂಗ್ಲೆಂಡ್ ಇತ್ಯಾದಿ ದೇಶಗಳಲ್ಲಿ ಅಣು ರಿಯಾಕ್ಟರ್‌ಗಳು ಸ್ಥಾಪನೆಗೊಂಡು ವಿದ್ಯುತ್ ಉತ್ಪಾದಿಸಿದವು. ಆದರೆ, ವಿದ್ಯುತ್ ಉತ್ಪಾದನೆಯಾದ ನಂತರವೂ ಉಳಿಯುವ ಅಣುಬೂದಿ ಇತ್ಯಾದಿಗಳನ್ನು ವಿಲೇವಾರಿ ಮಾಡುವ ತಂತ್ರಜ್ಞಾನ ಇನ್ನೂ ಲಭಿಸಿಲ್ಲ. ಅಮೆರಿಕ, ರಷ್ಯಾ, ಜಪಾನ್ ಮತ್ತು ಇನ್ನಿತರ ರಾಷ್ಟ್ರಗಳಲ್ಲಿ ೪೦ ವರ್ಷಗಳ ಹಿಂದೆ ಪ್ರಾರಂಭಿಸಲಾದ ಡಜನ್ ಅಣು ರಿಯಾಕ್ಟರ್‌ಗಳನ್ನು ಇದೀಗ ಮುಚ್ಚಬೇಕಿದೆ. ಆದರೆ ಮುಚ್ಚುವುದು ಹೇಗೆ? ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ, ಸಂಶೋಧನೆ ಮಾಡುವವರಿಗೆ ಇರುವ ಒಂದು ಆಶಾವಾದವೆಂದರೆ, ವಿಜ್ಞಾನವೇ ಇದಕ್ಕೊಂದು ಸಮರ್ಥವಾದ ಪರಿಹಾರವನ್ನು ಕಂಡುಕೊಳ್ಳುತ್ತದೆ. ಆದರೆ, ಅಣು ತ್ಯಾಜ್ಯದ ವಿಷಯದಲ್ಲಿ ವಿಜ್ಞಾನ ಸೋತಿದೆ. ಒಂದು ಅಣು ಸ್ಥಾವರವನ್ನು ಮುಚ್ಚಬೇಕೆಂದರೆ ಅದೊಂದು ನಿರಂತರ ಪ್ರಯೋಗ, ಅಲ್ಲಿರುವ ಯಾವುದೇ ವಸ್ತುವೂ ಯಾರಿಗೂ ಸಿಗುವ ಹಾಗಿಲ್ಲ. ಅಲ್ಲಿನ ಪ್ರತಿ ವಸ್ತುವೂ ವಿಕಿರಣವನ್ನು ಹೊತ್ತುಕೊಂಡ ಒಂದೊಂದು ಬಾಂಬಿಗೆ ಸಮನಾಗಿರುತ್ತದೆ. ತಕ್ಷಣದಲ್ಲಿ ಸಿಡಿದು ಅಪಾಯವಾಗದಿದ್ದರೂ, ಮುಂದಿನ ಪೀಳಿಗೆಯನ್ನು ಭೀಕರ ಅಪಾಯಕ್ಕೆ ತಳ್ಳುವ ಸಂಗತಿಗಳಾಗಿವೆ.

ಅಪಾಯದ ಒಂದು ಮುಖ ಹೀಗಿದ್ದರೆ, ಇನ್ನೊಂದು ಮುಖ ಹೀಗಿದೆ. ಅಣುಸ್ಥಾವರ ಕಳಚುವ ಪ್ರಕ್ರಿಯೆ ಒಂದು ದೇಶಕ್ಕೆ ಆರ್ಥಿಕವಾಗಿ ಅತಿ ದೊಡ್ಡ ಹೊರೆಯಾಗುತ್ತದೆ. ಅಣುಸ್ಥಾವರವನ್ನು ಕಳಚುವುದೆಂದರೆ, ರಾಕ್ಷಸಗಾತ್ರದ ಯಂತ್ರಗಳನ್ನು ಬಳಸಿ ಗಣಿಗಾರಿಕೆ ಮಾಡಿದಂತಲ್ಲ. ತುಂಬಾ ನಾಜೂಕಾಗಿ ವಿಕಿರಣ ಎಲ್ಲೂ ಸೋರದಂತೆ ಕಳಚಬೇಕು. ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ವಿಕಿರಣ ಸೋಕದಂತಹ ಸೀಸದಿಂದ ತಯಾರು ಮಾಡಲಾದ ಲೋಹದ ಕವಚವಿರುವ ಉಡುಪುಗಳು ಬೇಕು. ಆದಾಗ್ಯೂ ಕಾಲ ಕಾಲಕ್ಕೆ ಪ್ರತಿ ವ್ಯಕ್ತಿಯ ದೇಹದ ವಿಕಿರಣ ಪ್ರಮಾಣವನ್ನು ಅಳೆಯುತ್ತಿರಬೇಕು. ಒಂದೊಮ್ಮೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವಿಕಿರಣ ಕೆಲಸ ಮಾಡುವ ವ್ಯಕ್ತಿಯ ದೇಹದಲ್ಲಿ ಕಂಡು ಬಂದರೆ ಅವನನ್ನು ರಜೆ ಮೇಲೆ ಕಳುಹಿಸಬೇಕು. ಅಣು ವಿದ್ಯುತ್ ಸ್ಥಾವರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ದೈಹಿಕವಾಗಿ ಬಲಿಷ್ಟವಾಗಿರಬೇಕು. ಸೀಸದಿಂದ ಮಾಡಿದ ಉಡುಪಿನ ತೂಕ ಮಾಮೂಲಿ ಉಡುಪಿನ ತೂಕಕ್ಕಿಂತ ಹೆಚ್ಚಾಗಿರುತ್ತದೆ. ಒಂದೊಮ್ಮೆ ಎಲ್ಲಾ ಕೆಲಸಗಳಿಗೂ ಯಂತ್ರಗಳನ್ನೇ ಅವಲಂಬಿಸಿ ಮಾಡುವುದಾದರೂ, ಯಂತ್ರಗಳನ್ನು ನಡೆಯಿಸುವ ಚಾಲಕರಂತೂ ಬೇಕೆ ಬೇಕು. ಆದರೂ, ಅಣುಸ್ಥಾವರಗಳನ್ನು ಕಳಚುವ ಗುತ್ತಿಗೆಯನ್ನು ಪಡೆಯಲಿರುವ ಖಾಸಗಿ ಕಂಪನಿಗಳು ಇದರಿಂದಲೂ ಲಾಭ ಮಾಡಿಕೊಳ್ಳುತ್ತವೆ. ಅಣು ವಿದ್ಯುತ್ ವಿತರಣೆ ಮಾಡುವ ಸಮಯದಲ್ಲೇ ಅಣುತ್ಯಾಜ್ಯ ವಿಲೇವಾರಿ ಮಾಡುವ ಬಾಬ್ತಿಗಾಗಿ ಇಂತಿಷ್ಟು ಹಣ ಎಂದು ತೆಗೆದಿರಿಸಿರುತ್ತಾರೆ. ಆದರೆ ಈ ತೆಗೆದಿರಿಸಿದ ಹಣ ಈಗಿನ ಹಣದುಬ್ಬರದಲ್ಲಿ ಯಾವ ಮೂಲೆಗೂ ಸಾಕಾಗುವುದಿಲ್ಲ. ಮತ್ತೆ ಜನರಿಂದ ತೆರಿಗೆಯೆತ್ತಿ ಬಂದ ಹಣವನ್ನೇ ಅಣು ತ್ಯಾಜ್ಯ ವಿಲೇವಾರಿಗೆ ಬಳಸಬೇಕು. 

ಉದಾಹರಣೆಯಾಗಿ ಹಾಲಿ ಜಗತ್ತಿನ ದೊಡ್ಡಣ್ಣನ ಅಣು ತಾಪತ್ರಯವೊನ್ನೊಮ್ಮೆ ನೋಡೋಣ. ಅಮೆರಿಕದಲ್ಲಿ ಕಳೆದ ೨ ವರ್ಷಗಳಲ್ಲಿ ೫ ಅಣುಸ್ಥಾವರಗಳನ್ನು ಮುಚ್ಚಿದ್ದಾರೆ. ಇದರಲ್ಲಿ ಮೂರು ಸ್ಥಾವರಗಳನ್ನು ನವೀಕರಣಗೊಳಿಸಿ ವಿದ್ಯುತ್ ಉತ್ಪಾದಿಸಿ ಲಾಭಗಳಿಸಲು ಸಾಧ್ಯವಿಲ್ಲವೆಂಬ ಪರಿಸ್ಥಿತಿ ಇತ್ತು. ಇನ್ನುಳಿದ ೨ ಸ್ಥಾವರಗಳ ವಿದ್ಯುಚ್ಚಕ್ತಿಯ ಉತ್ಪಾದನಾ ವೆಚ್ಚ ತೀರಾ ಹೆಚ್ಚಾಗಿತ್ತು. ದೇಶದ ಸಂಸತ್ತು, ಸರ್ಕಾರಿ ಆಡಳಿತ ಎಲ್ಲರೂ ಸೇರಿ  ತೀರ್ಮಾನಿಸಿ ೫ ಸ್ಥಾವರಗಳನ್ನು ಮುಚ್ಚಿದ್ದಾರೆ. ಈ ಸ್ಥಾವರಗಳನ್ನು ಕಳಚಿ ಸುರಕ್ಷಿತ ಸ್ಥಾನಕ್ಕೆ ಸೇರಿಸಲು ಅಪಾರ ಪ್ರಮಾಣದ ಹಣ ಬೇಕು. ದೊಡ್ಡಣ್ಣನಂತಹ ದೇಶವೇ ಅಣುತ್ಯಾಜ್ಯದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ. ಹಾಗಾದರೆ, ಅಣು ತ್ಯಾಜ್ಯವನ್ನು ಏನು ಮಾಡಬೇಕು? ಅಥವಾ ಏನು ಮಾಡಬಹುದು ಎಂಬ ಬಗ್ಗೆ ಈಗಿನ ತಂತ್ರಜ್ಞಾನದಲ್ಲಿ ತಕ್ಕ ಉತ್ತರವಿಲ್ಲದಿದ್ದರೂ, ಅಣು ತ್ಯಾಜ್ಯವನ್ನು ಜನವಸತಿಯಿಲ್ಲದ ಜಾಗದಲ್ಲಿ ಹೂತು ಹಾಕಿದರೆ ಹೇಗೆ ಎಂಬ ಕಾರ್ಯತಂತ್ರವೂ ಅಷ್ಟು ಸುಲಭವಲ್ಲ. ಅಣುತ್ಯಾಜ್ಯವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಮೆರಿಕ ೧೯೮೭ರಲ್ಲೇ ಒಂದು ಯೋಜನೆ ಸಿದ್ದಪಡಿಸಿಕೊಂಡಿದೆ. ನೆವೆಡಾ ರಾಜ್ಯದ ಯುಕ್ಕಾ ಪರ್ವತದಲ್ಲಿ ಅಣುತ್ಯಾಜ್ಯವನ್ನು ಹೂಳುವ ಯೋಜನೆಯಿದು. ಆದರೆ ಇದಕ್ಕೆ ಕಾನೂನಾತ್ಮಕ ತೊಡಕುಗಳಿವೆ, ಆರ್ಥಿಕವಾಗಿ ಈ ಕಾರ್ಯಕ್ಕೆ ಬೇಕಾಗುವ ಮೊತ್ತ ೨೦೫ ಮಿಲಿಯನ್ ಡಾಲರ್‌ಗಳು. ಕಾನೂನು ಭಾಗದಿಂದ ಎಲ್ಲಾ ತರಹದ ಅಡಚಣೆಗಳು ಮುಗಿದು, ಬೇಕಾದ ಸಂಪನ್ಮೂಲವನ್ನು ಕ್ರೂಡಿಕರಿಸಿಕೊಂಡರೂ, ಅಣು ತ್ಯಾಜ್ಯವನ್ನು ಯುಕ್ಕಾ ಪರ್ವತದಲ್ಲಿ ಹೂಳುವ ಕೆಲಸ ೨೦೪೮ರಲ್ಲಿ ಪೂರ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲೂ ನೈತಿಕ ಪ್ರಶ್ನೆ ಉದ್ಬವಿಸುತ್ತದೆ. ಭೂಮಿಯ ಮೇಲೆ ಎಲ್ಲೇ ಅಣುತ್ಯಾಜ್ಯವನ್ನು ಹಾಕಿದರೂ ಸಾವಿರಾರು ವರ್ಷಗಳವರೆಗೆ ಅದು ವಿಕಿರಣವನ್ನು ಸೂಸುತ್ತಿರುತ್ತದೆ. ಅಣು ತ್ಯಾಜ್ಯವನ್ನು ಹೂಳಿದ ಜಾಗದಲ್ಲೇನಾದರೂ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ, ಮುಂದೇನು, ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇದಲ್ಲದೇ ಮತ್ತೊಂದು ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ. ಒಂದು ವಾದದ ಪ್ರಕಾರ ವಿಕಿರಣದ ಸಾಂದ್ರತೆಯನ್ನು ಕಡಿಮೆ ಮಾಡುವುದರ ಮೂಲಕ ಅಣುತ್ಯಾಜ್ಯ ವಿಲೇವಾರಿಗೆ ಹೊಸ ಭಾಷ್ಯ ಬರೆಯುವ ಪ್ರಯತ್ನ. ಇದರಲ್ಲಿ ಅಮೆರಿಕಾದ ಗ್ರೇಟ್‌ಲೇಕ್ ಪ್ರದೇಶದ ಸುತ್ತ ಇರುವ ಸುಣ್ಣದ ಕಲ್ಲಿನ ಸ್ಥಳದ ಆಳದಲ್ಲಿ ಅಣುಬೂದಿಯನ್ನು ಹೂಳುವುದು. ಗ್ರೇಟ್‌ಲೇಕ್. ಡಾರ್ಲಿಂಗ್‌ಟನ್ ಮತ್ತು ಬ್ರೂಸ್ ಅಣುಸ್ಥಾವರಗಳ ಬೂದಿಯನ್ನು ಹೂಳಲು ಲೇಕ್ ಹೌರಾನ್ ಪಕ್ಕದ ಕಿಂಕಾರ್‌ಡೈನ್ ಎಂಬ ಪ್ರದೇಶದಲ್ಲಿ ೧ ಸಾವಿರ ಕ್ಯೂಬಿಕ್ ಮೀಟರ್ ಜಾಗವನ್ನು ಗುರುತಿಸಿಕೊಳ್ಳಲಾಗಿದೆ. ಸರ್ಕಾರದ ಪ್ರಕಾರ ಹೌರಾನ್ ಲೇಕ್‌ನ ನೀರಿನ ಸಂಗ್ರಹಣಾ ಸಾಮರ್ಥ್ಯಕ್ಕೆ ಹೋಲಿಸಿದಲ್ಲಿ ಅಲ್ಪ-ಸ್ವಲ್ಪ ಅಣುತ್ಯಾಜ್ಯಗಳು ನೀರಿಗೆ ಸೇರಿದರೂ ಅದು ನಗಣ್ಯವಾಗುತ್ತದೆ. ವಿಕಿರಣ ತನ್ನ ಪೂರ್ಣಪ್ರಮಾಣದ ವಿಕಿರಣ ಶಕ್ತಿಯನ್ನು ಕಳೆದುಕೊಳ್ಳಲು ೧ ಲಕ್ಷ ವರ್ಷಗಳು ಬೇಕು. ವಿಜ್ಞಾನಿಗಳ ಅಂದಾಜಿನಂತೆ ಹೌರಾನ್ ಲೇಕ್ ಸೃಷ್ಟಿಯಾಗಿ ಬರೀ ೧೨ ಸಾವಿರ ವರ್ಷಗಳಾಗಿವೆ. ಅಲ್ಲದೆ ಗ್ರೇಟ್‌ಲೇಕ್ ಸುತ್ತ-ಮುತ್ತ ಸುಮಾರು ೪೦ ಮಿಲಿಯನ್ ನಾಗರೀಕರು ವಾಸಿಸುತ್ತಿದ್ದಾರೆ. ಟೋರೋಂಟೊ, ಹ್ಯಾಮಿಲಟನ್, ನಯಾಗರ, ಕಿಂಗ್‌ಸ್ಟನ್, ಥಂಡರ್ ಬೇ, ವಿಂಡ್ಸರ್ ಹಾಗೂ ಇನ್ನಿತರ ಸ್ಥಳೀಯ ಆಡಳಿತದವರು ಸೇರಿ ಒಂದು ಸಾಮೂಹಿಕ ಠರಾವು ಹೊರಡಿಸಿ,  ಸರ್ಕಾರದ ಈ ಪ್ರಸ್ತಾವನೆಗೆ ತಮ್ಮ ವಿರೋಧ ವ್ಯಕ್ತಪಡಿಸಿ, ಅಧ್ಯಕ್ಷ ಬರಾಕ್ ಒಬಾಮ ಇವರಿಗೆ ಮನವಿ ಸಲ್ಲಿಸಿದ್ದಾರೆ. 

೨೦೧೧ರಲ್ಲಿ ಜಪಾನಿನ ಫುಕೋಶಿಮಾ ದುರಂತದ ನಂತರದಲ್ಲಿ ಎಚ್ಚೆತ್ತುಕೊಂಡು ಜರ್ಮನಿ ತನ್ನ ಎಲ್ಲಾ ಅಣುಸ್ಥಾವರಗಳನ್ನು ಮುಚ್ಚಿ ಹಾಕಿ, ಬದಲಿ ಇಂಧನ ವ್ಯವಸ್ಥೆ ರೂಪಿಸಿಕೊಂಡಿದೆ. ಅತ್ಯಂತ ಚಳಿ ಪ್ರದೇಶವಾದ ಜರ್ಮನಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲಿಟ್ಟಿದೆ. ಆದರೂ ಮುಚ್ಚಲ್ಪಟ್ಟ ಅಣುಸ್ಥಾವರಗಳ ತ್ಯಾಜ್ಯದ ಸಮಸ್ಯೆಯಿಂದ ಬಳಲುತ್ತಿದೆ. ಇಂಗ್ಲಂಡ್ ದೇಶದ ೧೨ ಅಣುಸ್ಥಾವರಗಳು ಮುಚ್ಚಲ್ಪಟ್ಟಿವೆಯಾದರೂ, ಇವೆಲ್ಲರ ಉಸ್ತುವಾರಿ ನೋಡಿಕೊಳ್ಳುವ ಫ್ರೆಂಚ್ ದೇಶದ ಇ.ಡಿ.ಎಫ್. ಕಂಪನಿ ಅವುಗಳನ್ನು ಆಯಾ ಸ್ಥಳಗಳಲ್ಲೆ ಮುಚ್ಚಿ ಇಡಲು ಯೋಚಿಸಿದೆ. ಆದರೂ ಇಂಗ್ಲಂಡ್ ದೇಶವು ಈ ಕೆಲಸಕ್ಕಾಗಿ ೭೬ ಬಿಲಿಯನ್ ಪೌಂಡ್ ಹಣವನ್ನು ತೆಗೆದಿರಿಸಬೇಕಾಗುತ್ತದೆ. 

ಪ್ರಪಂಚದಲ್ಲಿ ಅಣುಸ್ಥಾವರಗಳ ಹಾಗೂ ಅಣುಶಕ್ತಿಯ ಬಳಕೆಯ ವಿರುದ್ಧ ಇಷ್ಟೆಲ್ಲಾ ಜಾಗೃತಿಯಾಗುತ್ತಿದ್ದರೂ, ಅಣು ಬಳಕೆಯಿಂದಾಗುವ ಅಪಾಯವನ್ನು ಖುದ್ದು ಅನುಭವಿಸುತ್ತಿದ್ದರೂ, ಜಪಾನ್ ಎಂಬ ದೇಶ ಇನ್ನೂ ಬುದ್ಧಿ ಕಲಿತಿಲ್ಲ. ೨೦೧೧ರಲ್ಲಾದ ಫುಕೋಶಿಮಾ ಅಣುದುರಂತದ ಸೂತಕದ ಛಾಯೆ ಇನ್ನೂ ಅಲ್ಲಿ ಹೊಗೆಯಾಡುತ್ತಿದೆ. ಲಕ್ಷಾಂತರ ಲೀಟರ್ ವಿಕಿರಣಯುಕ್ತ ನೀರು ಸಮುದ್ರದ ಪಾಲಾಗುತ್ತಿದೆ. ಆದಾಗ್ಯೂ ತಕ್ಷಣದ ಸುಖಕ್ಕಾಗಿ ಇಡೀ ಭೂಮಂಡಲದ ಆರೋಗ್ಯವನ್ನು ಪಣಕ್ಕಿಟ್ಟು ಮೆರೆಯುವ ಮನೋಭಾವವನ್ನು ಜಪಾನ್ ತೋರುತ್ತಿದೆ. ಜಪಾನಿನ ನ್ಯೂಕ್ಲಿಯರ್ ರೆಗ್ಯುಲೇಟರಿ ಅಥಾರಿಟಿಯು ಸೆಂಡಾಯ್ ಎಂಬ ಪ್ರದೇಶದಲ್ಲಿರುವ ೩೦ ವರ್ಷಗಳಷ್ಟು ಹಳೆಯದಾದ ೨ ಅಣುಸ್ಥಾವರಗಳನ್ನು ಪುನರಾರಂಭಿಸಲು ಸಲಹೆ ನೀಡಿದೆ. ಅವರ ಪ್ರಕಾರ ಫುಕೋಶಿಮಾದಲ್ಲಿ ಆದಂತಹ ದುರಂತ ಇಲ್ಲಿ ಸಂಭವಿಸಲು ಸಾಧ್ಯವಿಲ್ಲ. ಸೆಂಡಾಯ್ ಅಣುಸ್ಥಾವರದಿಂದ ಬರೀ ೩೦ ಕಿ.ಮಿ ದೂರದಲ್ಲಿ ಜನವಸತಿ ಪ್ರದೇಶವಿದೆ. ಸುನಾಮಿಯನ್ನು ತಡೆಗಟ್ಟುವ ಗೋಡೆಗಳು ಕೂಡಾ ಸೆಂಡಾಯ್ ಸ್ಥಾವರದ ರಕ್ಷಣೆಗೆ ಇಲ್ಲ. ಇನ್ನೂ ಹೆಚ್ಚಿನದಾಗಿ ಈ ಪ್ರದೇಶದಿಂದ ೭೦ ಕಿ.ಮಿ. ದೂರದಲ್ಲಿ ವಿಶ್ವ ಪ್ರಸಿದ್ಧ ಸಕುರ್‍ಜಿಮಾ ಜೀವಂತ ಜ್ವಾಲಾಮುಖಿಯಿದೆ. ಪ್ರತಿ ನಾಲ್ಕು ತಾಸಿಗೊಮ್ಮೆ ಘರ್ಜಿಸಿ ಬೂದಿ-ಬೆಂಕೆಯನ್ನು ಉಗುಳುತ್ತದೆ. ದಿನದಲ್ಲೊಂದು ಬಾರಿ ಪ್ರಮಾಣದಲ್ಲಿ ದೂಳನ್ನು ಕಕ್ಕುತ್ತದೆ. ಜೀವಂತ ಜ್ವಾಲಾಮುಖಿಯಿಂದ ಹೊರಟ ದೂಳಿನ ಕಣಗಳು ಯಾವಾಗ ಬೇಕಾದರೂ ಸೆಂಡಾಯ್ ಅಣುಸ್ಥಾವರವನ್ನು ಆವರಿಸಬಹುದು. ಈ ದೂಳಿನ ಕಣಗಳೇ ಅಣುಸ್ಥಾವರವನ್ನು ತಂಪು ಮಾಡುವ ಯಂತ್ರಗಳ ವೈಫಲ್ಯಕ್ಕೆ ಕಾರಣವಾಗಬಹುದು ಎಂಬುದು ಅಣುಶಕ್ತಿ ಬೇಡ ಎನ್ನುವವರ ವಾದ. ಈ ವಾದವನ್ನು ತಳ್ಳಿ ಹಾಕುವಂತಿಲ್ಲ. ೨೦೧೧ರ ಫುಕೋಶಿಮಾ ದುರಂತದ ನಂತರದಲ್ಲಿ ಜಪಾನಿನ ಎಲ್ಲಾ ೫೦ ಅಣುಸ್ಥಾವರಗಳನ್ನು ಸ್ಥಗಿತಗೊಳಿಸಲಾಗಿದೆ. ಬದಲಿ ಇಂಧನವನ್ನು ಬಳಸಿಕೊಂಡು ನಾವು ಬದುಕಿದ್ದೇವೆ. ವಿದ್ಯುತ್ ಕಾರಣಕ್ಕಾಗಿ ಅಭಿವೃದ್ದಿಯಲ್ಲಿ ಕೊಂಚ ಹಿನ್ನೆಡೆಯಾದರೂ ಅಡ್ಡಿಯಿಲ್ಲ, ನಮಗೆ ಒಟ್ಟಾರೆ ಅಣುಸ್ಥಾವರಗಳು ಬೇಡವೇ ಬೇಡ ಎಂಬುದು ಬಹುತೇಕ ಜಪಾನಿಯರ ಅಭಿಮತವಾಗಿದೆ. 

ಮುಂದಿನ ತಿಂಗಳು ಅಂದರೆ ಆಗಸ್ಟ್ ೨೯ರಂದು ವಿಶ್ವ ಅಣು ಶಕ್ತಿ ಪರೀಕ್ಷೆ ವಿರೋಧಿ ದಿನಾಚರಣೆ. ಈ ಮೊದಲೇ ಹೇಳಿದಂತೆ ೧೯೪೫ರಿಂದ ಈಚೆಗೆ ಈ ಭೂಮಿಯ ಮೇಲೆ ೨೦೦೦ ಅಣು ಶಕ್ತಿ ಪರೀಕ್ಷೆ ನಡೆದಿದೆ. ನಮ್ಮಲ್ಲೂ ಬುಧ್ದ ನಕ್ಕ ಎಂದು ಫೋಖ್ರಾನ್‌ನಲ್ಲಿ ಆಗಿನ ಸರ್ಕಾರ ಅಣುಶಕ್ತಿ ಪರೀಕ್ಷೆಯನ್ನು ನಡೆಸಿತ್ತು. ನಮ್ಮಲ್ಲೂ ಅಣು ಬಾಂಬ್ ಲಭ್ಯವಿದೆ ಎಂದು ಪ್ರಪಂಚಕ್ಕೆ ತಿಳಿಸುವ ಏಕೈಕ ಉದ್ಧೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ದೇಶ-ದೇಶಗಳಿಗೆ ಗಡಿ ಹಾಕಿ ಅವಾಂತರಗಳನ್ನು ಸೃಷ್ಟಿಸುವವರು ನಾವು ಅಂದರೆ ಭಸ್ಮಾಸುರರು. ಈ ಭಸ್ಮಾಸುರರಿಂದಾಗಿ ಸಂತ್ರಸ್ಥಗೊಳ್ಳುವವರು ಇವರ ಮುಂದಿನ ಪೀಳಿಗೆ ಹಾಗೂ ಇಡೀ ಪ್ರಪಂಚದ ಜೀವಲೋಕ. ಮುಂದಿನ ಪೀಳಿಗೆಗಾಗಿ ನಾಕವನ್ನು ಸೃಷ್ಟಿಸಲು ಸಾಧ್ಯವಿಲ್ಲವಾದರೂ, ನರಕವನ್ನಾಗಿ ಪರಿವರ್ತಿಸದಿರುವ ನೈತಿಕ ಜವಾಬ್ದಾರಿ ನಮ್ಮ ಮೇಲಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಬರುವ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಆಹ್ವಾನದ ಮೇಲೆ ಅಲ್ಲಿಗೆ ತೆರೆಳುತ್ತಿದ್ದಾರೆ. ಅಮೆರಿಕಾವು ತನಗೆ ಬೇಡದ ಅಣುಸ್ಥಾವರದ ಕಚ್ಚಾ ಸಾಮಾಗ್ರಿಗಳನ್ನು ಒಳ್ಳೆಯ ರೇಟಿಗೆ ಮಾರಾಟ ಮಾಡಲು ಕಾಯುತ್ತಿದೆ. ನಮ್ಮ ಪ್ರಧಾನಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುವ. ಅಣು ಸ್ಥಾವರಗಳ ಆಮದಿಗೆ ಒಪ್ಪಿಗೆ ಕೊಟ್ಟರೆ ವಿರೋಧಿಸುವ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x