ಅನಿ ಹನಿ

ಅಡುಗೆ ಮನೆ ಪುರಾಣ: ಅನಿತಾ ನರೇಶ್ ಮಂಚಿ

ಅಡುಗೆ ಮನೆ ಆದ್ರೇನು ಹೂವಿನ ಕುಂಡ ಇಟ್ರೆ ಬೇಡ ಅನ್ನುತ್ತದೆಯೇ? ಒಂದು ಕಿಟಕಿ ಹೂವಿನ ಕುಂಡದಿಂದ ಅಲಂಕೃತಗೊಂಡಿದ್ದರೆ ಇನ್ನೊಂದು ಬದಿಯ ಕಿಟಕಿ ಕರೆಂಟ್ ಹೋದರೆ ಕೈಗೆ ಪಕ್ಕನೆ ಸಿಗಬೇಕಾಗಿರುವ ಎಣ್ಣೆಯ ಕಾಲು ದೀಪದಿಂದ ಕಂಗೊಳಿಸುತ್ತಿತ್ತು. ಸ್ಟವ್ವಿನ  ಒಂದು ಪಕ್ಕದ ಶೆಲ್ಫಿನಲ್ಲಿ ಅಡುಗೆಗೆ ಅಗತ್ಯವಾದ ಸಾಂಬಾರ ಪದಾರ್ಥಗಳು,ಇನ್ನೊಂದು ಕಡೆ ಸೌಟಿನಿಂದ ಹಿಡಿದು ಚಮಚದವರೆಗೆ ಚಾಕುವಿನಿಂದ ಹಿಡಿದು ಕತ್ತಿಯವರೆಗೆ ಸಿಗುವಂತಿತ್ತು. ಕೆಳಭಾಗದ ನಾಲ್ಕು ಕಪಾಟುಗಳಲ್ಲಿ ಈಳಿಗೆ ಮಣೆ ಮೆಟ್ಟುಗತ್ತಿ, ಪಾತ್ರೆಗಳು, ಬೇಗ ಹಾಳಾಗದಿರುವ ತರಕಾರಿಗಳಾದ ಆಲೂಗಡ್ಡೆ ಈರುಳ್ಳಿಗಳು ಆಟವಾಡುತ್ತಿದ್ದವು. ವರ್ಷಪೂರ್ತಿಯ ಖರ್ಚಿಗೆ ಬೇಕಾಗುವ ಹುಣಸೆ ಹಣ್ಣಿನ ಉಂಡೆಗಳು  ಕತ್ತಲಿನ ಮೂಲೆಯಲ್ಲಿ ದೊಡ್ಡ ಮಣ್ಣಿನ ಹಂಡೆಯಲ್ಲಿ ತುಂಬಿ ಅದರ ಮಂಡೆಗೆ ಪ್ಲಾಸ್ಟಿಕ್ಕಿನ ಶಿರಾಲಂಕಾರದೊಂದಿಗೆ ಕೂರಿಸಲ್ಪಟ್ಟಿತ್ತು.ನಿತ್ಯದ ಅಡುಗೆಗೆ ಬೇಕಾಗುವಷ್ಟನ್ನು ಸಣ್ಣ ಡಬ್ಬದಲ್ಲಿಡುವುದರಿಂದ ಹಂಡೆಯನ್ನು ಪ್ರತಿದಿನ ಮುಟ್ಟಬೇಕಾಗಿರಲಿಲ್ಲ. ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಇವೆ ಎಂದು ಕತ್ತಲಿನಲ್ಲಿಯೂ ಕೈ ಹಾಕಿ ತೆಗೆದುಕೊಳ್ಳುವಷ್ಟು ವ್ಯವಸ್ಥಿತ ಅಡುಗೆ ಮನೆ ನಮ್ಮದು ಎಂಬ ಹೆಮ್ಮೆ ನನ್ನದು. ಇದಿಷ್ಟು ನನ್ನ ಅಡುಗೆ ಮನೆಯ ಸೂಕ್ಷ್ಮ ಪರಿಚಯ.
ನಮ್ಗ್ಯಾಕೆ ನಿಮ್ಮ ಅಡುಗೆ ಮನೆ? ಏನಾದ್ರು ರುಚಿ ಶುಚಿಯಾಗಿ ಮಾಡಿ ಹಾಕಿದ್ರೆ ತಿಂತೀವಿ ಅಂತೀರಾ.. ಮುಂದೆ ಓದಿ ನನ್ನ ಕಷ್ಟ.. 

ಈ ಖರ್ಚುಗಳು ಅನ್ನೋದು ನಮ್ಮಲ್ಲಿನ ಸಾಮಗ್ರಿಯ ಪೂರೈಕೆಯ ಮೇಲೆ ಹೋಗುತ್ತೆ ಅನ್ನೋದು ನನ್ನ ಸಿದ್ಧಾಂತ. ಉದಾಹರಣೆಗೆ ಮನೆಗೆ ಬೇಳೆಕಾಳುಗಳು ತಂದ ಮರುದಿನ ಸಾರು ಕೂಡ ತೊವ್ವೆಯಂತೆ ದಪ್ಪಗಾಗಿದ್ದರೆ, ಮುಗೀತಾ ಬರುವಾಗ ತೊವ್ವೆ ಸಾರಿಗಿಂತಲೂ ನೀರು. ಈರುಳ್ಳಿ ತಂದ ದಿನ ಪಕೋಡಗಳು, ಬಜ್ಜಿಗಳು ಡೈನಿಂಗ್ ಟೇಬಲನ್ನು ಅಲಂಕರಿಸಿದರೆ ಖಾಲಿ ಆಗುತ್ತಾ ಬರುವಾಗ ಉಪ್ಪಿಟ್ಟಿನಲ್ಲಿ ಸೂಕ್ಷ್ಮದರ್ಶಕ ಹಾಕಿ ಹುಡುಕಿದರೂ ಒಂದು ತುಂಡು ಈರುಳ್ಳಿ ಸಿಗಲಾರದು. ಸಿಗಲಿಕ್ಕೆ  ಹಾಕಿದರೆ ತಾನೇ.. ಒಂದ್ನಾಲಕ್ಕು ಈರುಳ್ಳಿಗಳು ಉಳಿದಿದ್ದರೂ ಅದು ಅವಸರಕ್ಕೆ ಬೇಕಾಗುತ್ತೆ ಅಂತ ಮನೆಯವರಿಗೆ ಸಪ್ಪೆ ಸಪ್ಪೆಯಾಗೇ ಬಡಿಸುವುದು ಮಾಮೂಲು. ಒಂದು ತಿಂಗಳ ಮನೆ ಸಾಮಾನು ಒಂದೇ ಸಲ ಬರುವುದರಿಂದ ನಡು ನಡುವಲ್ಲಿ ಸಾಮಾನು ಪಟ್ಟಿ ನೀಡಬಾರದೆನ್ನುವುದು ನಮ್ಮ ಮನೆಯ ಅಲಿಖಿತ ಒಪ್ಪಂದ. ತಳ ಕಾಣುತ್ತಿದ್ದ ಸಾಮಗ್ರಿಗಳಿಂದಾಗಿ ನನ್ನ  ಸದ್ಯದ ಪರಿಸ್ಥಿತಿ ಹಾಗೇ ಇದ್ದ ಕಾರಣ ಕೇವಲ ಎರಡು ಈರುಳ್ಳಿಗಳು ನನ್ನ ಕಣ್ಣಗೊಂಬೆಗಳಿಗಿಂತಲೂ ಅತಿಪ್ರಿಯವಾಗಿ ನನಗೆ ಕಾಣಿಸುತ್ತಾ ನನ್ನ ಮನಸ್ಸನ್ನು ಮುದಗೊಳಿಸುತ್ತಿದ್ದವು. 

ಅದ್ಯಾಕೋ ಇಂತಹ ಕಾಲದಲ್ಲೇ ಭಗವಂತನು ಭಕ್ತರ ಪರೀಕ್ಷೆ ಮಾಡೋದೇನೋ.. ಬರಗಾಲದಲ್ಲಿ ಅಧಿಕಮಾಸ ಅಂತಾರಲ್ಲ ಹಾಗೇ.. 

ಅವತ್ತಿನ ಅಡುಗೆಯನ್ನು ಕೆದಕಿ ಬೆದಕಿ ಬೇಯಿಸಿ ಇಟ್ಟಿದ್ದೆ ಅನ್ನುವಾಗ ಮಗರಾಯ ತನ್ನಿಬ್ಬರ ಗೆಳೆಯರ ಜೊತೆ ಮನೆಗೆ ಬಂದ. ಅಮ್ಮಾ.. ಈರುಳ್ಳಿ ಹಾಕಿ ಫಸ್ಟ್ ಕ್ಲಾಸ್ ಒಂದು ಉಪ್ಪಿಟ್ಟು ಮಾಡಿ ಕೊಡು. ನಿನ್ನ ಕೈಯ ಉಪ್ಪಿಟ್ಟು ಇವರಿಗೆ ತಿನ್ನಿಸೋಣ ಅಂತ ಕರ್ಕೊಂಡು ಬಂದೆ. ಆದ ತಕ್ಷಣ ಕರಿ ಬರ್ತೀವಿ ಎಂದು ತನ್ನ ರೂಮಿಗೆ ಅವರಿಬ್ಬರ ಜೊತೆ ಹೋಗಿ ಪಟ್ಟಾಂಗ ನಿರತನಾದ. ಇದ್ದಿದ್ದೇ ಎರಡು ಈರುಳ್ಳಿ.. ಸಾಕು .. ಹೇಗೂ ನಾಳೆ ಮನೆ ಸಾಮಾನು ಬರುತ್ತೆ.. ಮುಗಿಸಿದರೇನೂ ತೊಂದರೆ ಇಲ್ಲ ಎಂದುಕೊಂಡು ರವೆ ಹುರಿದಿಟ್ಟು ಚಾಕು ಮಣೆ ಇಟ್ಟುಕೊಂಡು ಈರುಳ್ಳಿಗಾಗಿ ಅತ್ತ ಕಡೆ ನೋಡಿದೆ. ನನ್ನೆದೆ ದಸಕ್ಕೆಂದಿತು. ನಿನ್ನೆ ನೋಡಿದ ಈರುಳ್ಳಿಗಳು ಎಲ್ಲಿ ಹೋದವು.. ಇಟ್ಟ ಜಾಗದಿಂದ ಮಾಯವಾಗಬೇಕಾದರೆ ಕಾರಣವೇನು? ಅತ್ತಿತ್ತ ನೋಡಿದೆ. ಪಾತ್ರೆಗಳನ್ನು ಸರಿಸಿದೆ..ಉಹೂಂ.. ಎಲ್ಲೂ ಇಲ್ಲ.. 

ಇನ್ನೇನು ಮಾಡುವುದು ಅಂತ ಹುರಿದಿಟ್ಟ ರವೆಗೆ ಸಕ್ಕರೆ ತುಪ್ಪ ಸೇರಿಸಿ ಮಗನ ಫೇವರಿಟ್ ಕೇಸರಿಬಾತ್ ಮಾಡಿ ಅವರಿಗೆ ಕೊಟ್ಟೆ..ಕುತೂಹಲದಿಂದ ಯಾವುದೋ ಕಾರ್ ರೇಸಿನ ವಿಡಿಯೋ ನೋಡುತ್ತಿದ್ದ ಅವರಿಗೆ ನಾನು ಕೊಟ್ಟದ್ದು ಉಪ್ಪಿಟ್ಟೋ ಕೇಸರಿಬಾತೋ ಎನ್ನುವುದು ಕೂಡಾ ಗೊತ್ತಾಗಲಿಲ್ಲ.

ಅಡುಗೆ ಮನೆಗೆ ಬಂದು ಮತ್ತೆ ಚಿನ್ನಕ್ಕಿಂತಲೂ ಅಮೂಲ್ಯವಾದ ಎರಡು ಈರುಳ್ಳಿಯ ಶೋಧನಾ ಕಾರ್ಯದಲ್ಲಿ ಮುಳುಗಿದೆ. ಅಡುಗೆ ಮನೆಯ ಮೂಲೆ ಮೂಲೆಗೂ ಬೆಳಕು ಚೆಲ್ಲಿ ಹುಡುಕತೊಡಗಿದೆ. ಆಹಾ.. ನನ್ನ ಭಾಗ್ಯವೇ.. ಎರಡು ಈರುಳ್ಳಿಗಳು ಇನ್ನೂ ನಾಲ್ಕು ಈರುಳ್ಳಿಗಳ ಜೊತೆ ಹುಳಿ ತುಂಬಿದ ಹಂಡೆಯ ಹಿಂದೆ ಹೋಗಿ ಕುಳಿತುಕೊಂಡಿದ್ದವು. ಎಳೆದು ತಂದು ಎದುರಿಟ್ಟೆ. ಪತ್ರಿಕೆಯ ದಿನಭವಿಷ್ಯದಲ್ಲಿ ಅನಿರೀಕ್ಷಿತ ಲಾಭ ಎಂದೇನೂ ಓದದೇ ಇದ್ದುದರಿಂದ  ಈ ಸ್ಥಾನಪಲ್ಲಟದ ಹಿಂದೇನೋ ದೊಡ್ಡ ಹುನ್ನಾರವೇ ಇದೆಯೆಂದು ಅರ್ಥವಾದರೂ ಏನೂ ಕಾಣಿಸಲಿಲ್ಲ.  ಮರುದಿನ ಬೆಳಗ್ಗೆ ನೋಡಿದರೆ ಮತ್ತೆ  ಐದೇ ಈರುಳ್ಳಿ.. ಒಂದು ಈರುಳ್ಳಿ ಮಾಯ. ಈ ಸಲ ಫ್ರಿಡ್ಜಿನ ಹಿಂದೆ ಈರುಳ್ಳಿಯ ಜೊತೆಗೆ ಮೊದಲೇ ಅಲ್ಲಿದ್ದ ಎರಡು ಸಿಪ್ಪೆ ಸುಲಿದ ಮೆಣಸು, ಮತ್ತು ಅರ್ಧ ಕೆರೆದ ಆಲೂಗಡ್ಡೆ ಸಿಕ್ಕಿತು. ಇದು ಗಣಪತಿವಾಹನನ ಉಪದ್ರವೇ ಎಂದು ಮನದಟ್ಟಾಗಲು ಬೇರೆ ಪುರಾವೆಗಳು ಬೇಕಾಗಲಿಲ್ಲ. 

ಅಡುಗೆ ಕೋಣೆಯ ಎರಡೂ ಕಿಟಕಿಗಳು ಸಣ್ಣ ವೈರ್ ಮೆಶ್ ನಿಂದ ಆವೃತವಾಗಿದ್ದ ಕಾರಣ ಹೊರಗಿನಿಂದ ಒಳಗೆ ನಿತ್ಯ ಓಡಾಟ ಅಸಾಧ್ಯ. ಯಾವತ್ತೋ ಸಂಜೆ ಅಡುಗೆ ಮನೆ ಬಾಗಿಲು ತೆರೆದಿಟ್ಟ ಸಮಯದಲ್ಲಿ ಒಳ ನುಗ್ಗಿದ ಈ ಅನಪೇಕ್ಷಿತ ಅತಿಥಿ ಈಗ ತನ್ನ ಕೈ ಚಳಕ ತೋರಿಸುತ್ತಿದ್ದಾನೆ ಅಂದುಕೊಂಡೆ. ಆ ದಿನ ಹೊರಗಡೆ ಹೋಗಬೇಕಾಗಿದ್ದುದರಿಂದ ಹುಡುಕುವ ಆಲೋಚನೆ ಬಿಟ್ಟೆ. ನಂತರದ ದಿನ ಪಾತ್ರೆ ತೊಳೆಯುವ ಸ್ಕ್ರಬ್ಬರ್ ಮಾಯ ಮಾತ್ರವಲ್ಲ ಅಲ್ಲೇ ಇಟ್ಟಿದ್ದ ಪುಟ್ಟ ಬ್ರಶ್ ತನ್ನೆಲ್ಲಾ ಕೂದಲುಗಳನ್ನು ಕಳೆದುಕೊಂಡು ಬೋಳಾಗಿತ್ತು. 

ಇನ್ನು ಅದನ್ನು ಹುಡುಕದಿದ್ದರೆ ಉಳಿಗಾಲವಿಲ್ಲ ಎಂದುಕೊಂಡು ಒಂದು ಕೈಯಲ್ಲಿ ಗಟ್ಟಿ ಪೊರಕೆ, ಇನ್ನೊಂದು ಕೈಯಲ್ಲಿ ಟಾರ್ಚೆಂಬ ಆಯುಧಗಳನ್ನು ಧರಿಸಿಕೊಂಡು ಮನಸ್ಸಿನಲ್ಲಿ ಅಂಬಾಭವಾನಿ ಶಕ್ತಿ ನೀಡು ಎಂದು ಸ್ಮರಿಸುತ್ತಾ ಮೂಲೆ ಮೂಲೆಗಳಿಗೆ ಬೆಳಕು ಚೆಲ್ಲುತ್ತಾ ಬಂದೆ. ಒಂದು ಮೂಲೆಗೆ ಪೊರಕೆ ಆಡಿಸುವಾಗ ಪಕ್ಕನೆ ಅಲ್ಲಿಂದ ಚಿಮ್ಮಿತೊಂದು ಸಣ್ಣ ಆಕಾರ. ನೋಡಿದರೆ ಮುಷ್ಟಿಯೊಳಗೆ ಹಿಡಿಯುವಷ್ಟೇ ದೊಡ್ಡದು…ಛೇ.. ಶತ್ರುವಾದರೂ ಸಮಾನತೆ ಬೇಡವೇ.. ಸಮಾನರಲ್ಲದವರಲ್ಲಿ ಸಾಮಾನು ಹಾಳು ಮಾಡಿದರೂ ಯುದ್ಧ ತರವೇ.. ಎಂದೆನ್ನ ಮನ ನ್ಯಾಯಾನ್ಯಾಯದ ವಿಮರ್ಶೆಯಲ್ಲಿ ತೊಡಗಿರುವಾಗ ಅದು ಮಿಂಚಿ ಮಾಯವಾಯಿತು. ಮತ್ತೆಷ್ಟು ಹುಡುಕಿದರೂ ಸಿಗಲಿಲ್ಲ.. ಹಾಗಿದ್ದರೆ ಬಾಗಿಲಿನ ಮೂಲಕ ಹೊರಗೆ ಹೋಗಿರಬಹುದು ಎಂದುಕೊಂಡು ನನ್ನ ಆಯುಧಗಳನ್ನಿಳುಹಿ ಫ್ರಿಡ್ಜಿನ ಥಂಡಾ ಪಾನಿ ಕುಡಿದು ಸುದಾರಿಸಿಕೊಂಡೆ.

ಇನ್ನೇನು ಭಯವಿಲ್ಲ ಎಂದು ರಾತ್ರೆ ನಿರಾತಂಕವಾಗಿ ನಿದ್ರಿಸುತ್ತಿದ್ದಾಗ ಅಡುಗೆ ಮನೆಯಲ್ಲಿ ಬಾಂಬ್ ಸ್ಪೋಟವಾದಂತಹ ಶಬ್ಧ.. ಹೆದರುತ್ತಲೇ ಕಾಲಿಟ್ಟ ನಮಗೆ ಕಂಡದ್ದು ಪುಟ್ಟ ಹೂವಿನ ಕುಂಡದ ಅವಶೇಷಗಳು. ಹಾಗಿದ್ದರೆ ಅದು ಹೋಗಿಲ್ಲ ಇಲ್ಲೇ ಇದೆ.. ಬಡಿಯೋಣ ಎಂದು ಇವರನ್ನೆಲ್ಲಾ ಹುರಿದುಂಬಿಸಿದೆ. ಮಗ ಕ್ರಿಕೆಟ್ ಬ್ಯಾಟ್ ಹಿಡಿದು ಬಂದರೆ ಇವರು ಬಾಗಿಲಿಗೆ ಅಡ್ಡವಾಗಿ ನಿಂತು ಕ್ಷೇತ್ರ ರಕ್ಷಣೆಯ ಕೆಲಸ ಮಾಡಲು ಸಜ್ಜಾದರು. ನಾನು ಒಂದು ಮೂಲೆಯಿಂದ ಅದನ್ನು ಹುಡುಕುತ್ತಾ ಬಂದೆ. ಒಂದು ಕಡೆ ಹಳೇ ಪೇಪರಿನ ಚೂರುಗಳ ನಡುವೆ ಕಣ್ಣುಗಳೆರಡು ಹೊಳೆಯ ತೊಡಗಿತು. ’ಸಿಕ್ಕಿದ ನಿನ್ನನು ಕೊಲ್ಲದೇ ಬಿಡುವೆನೇ..’ ಎಂದು ಯಕ್ಷಗಾನದ ಏರುಪದ್ಯದ ಧಾಟಿಯಲ್ಲಿ ಹಾಡುತ್ತ ಪೊರಕೆಯಲ್ಲಿ ಒಂದು ಪೆಟ್ಟು ಕೊಟ್ಟೆ.. ಹೊರಗೆ ಬಂತು. ಹೊಡೀ ಹೊಡೀ ಎಂದೆ ಮಗನಿಗೆ.  ಮಗ ಬ್ಯಾಟ್ ಬೀಸಿದ.. ಇವರು ಸಿಕ್ಸರ್ ಎಂಬಂತೆ ಕೈ ಎತ್ತಿದರು.  ನೆಲಕ್ಕೊರಗಿತು ಎರಡು ಗಾಜಿನ ಲೋಟಗಳು..ಮತ್ತೊಂದು ಉಪ್ಪಿನಕಾಯಿಯ ಜಾಡಿ.. 

 ಇಲಿ ಮಾಯ..
ಈಗ ಆಗುವ ಕೆಲಸ ಅಲ್ಲ ಇದು ಎಂದು ಎಲ್ಲರೂ ಕೈ ಚೆಲ್ಲಿ ರೂಮಿಗೆ ಮರಳಿದರೆ ನಾನು ಅಡುಗೆ ಮನೆ ಕ್ಲೀನ್ ಮಾಡಿ ಬರುವಾಗ ಮಧ್ಯರಾತ್ರಿಯ ಗಂಟೆ ಬಾರಿಸಿತು.

ಮರುದಿನ ಏಳುವಾಗಲೇ ಕರೆಂಟಿಲ್ಲ.. ಅಡುಗೆ ಮನೆಗೆ ಹೋಗಿ ದೀಪ ತೆಗೆದುಕೊಂಡು ಹಚ್ಚಲೆಂದು ನೋಡುತ್ತೇನೆ ಬತ್ತಿಯೇ ಮಾಯ. ಉಕ್ಕೇರಿದ ಕ್ರೋದಾಗ್ನಿಯಲ್ಲೇ ಮತ್ತೆ ಬತ್ತಿ ತಂದು ಹಾಕಿ ದೀಪ ಹಚ್ಚಿ ಕೆಲಸ ಪ್ರಾರಂಭಿಸಿ ಸ್ವಲ್ಪ ಹೊತ್ತಿನಲ್ಲೇ ಕರೆಂಟು ಬಂತು. ಚಟ್ನಿ ಕಡೆಯೋಣವೆಂದು ಮಿಕ್ಸಿಗೆ ಕಾಯಿ ಹಾಕಿ ಸ್ವಿಚ್ ಹಾಕಿದರೆ ಮಿಕ್ಸಿ ಅಲುಗಾಡುತ್ತಿಲ್ಲ. ನೋಡಿದರೆ ವೈರ್ ನಡುವಿನಿಂದ ತುಂಡಾಗಿತ್ತು. ಪುಣ್ಯಕ್ಕೆ ಶಾಕ್ ಹೊಡೆಸಿಕೊಂಡು ಸಾಯಲಿಲ್ಲ ನಾನು ಎಂದುಕೊಂಡು ಚಟ್ನಿ ಇಲ್ಲದ ದೊಸೆಯನ್ನೇ ಉಣಬಡಿಸಿದೆ.

ಇಂದಂತೂ ಇದಕ್ಕೊಂದು ಗತಿ ಕಾಣಿಸಿಯೇ ಸಿದ್ಧ ಎಂದು ನಿಶ್ಚಯಿಸಿ, ವೀರಗಚ್ಚೆಯನ್ನು ಬಿಗಿದು, ಸರ್ವ ಆಯುಧಗಳೊಂದಿಗೆ ಸನ್ನದ್ಧಳಾಗಿ  ಎಲ್ಲಾ ಮೂಲೆ ಹುಡುಕಿದರೂ ಇಲಿ ಇಲ್ಲ.. ನನ್ನ ಹಠವನ್ನು ಬಿಡದೇ  ಸ್ಟವ್ವಿನ ಪಕ್ಕದ ಸಾಮಗ್ರಿಗಳು ಇಟ್ಟ ಕಡೇ ಇಣುಕಿದೆ. ಉಪ್ಪಿನ ಪಿಂಗಾಣಿ ಜಾಡಿಯ ಮೂಲೆಯಲ್ಲಿ ಇದೆ  ಆ ಶತ್ರು. ದುಷ್ಟ ಸಂಹಾರಕ್ಕೆ ತಡ ಮಾಡುವುದು ಸರಿಯಲ್ಲ ಎಂದು ಕೈಯಲ್ಲಿರುವ ಆಯುಧಗಳನ್ನು ಬಿಸುಟು, ಉಪ್ಪಿನ ಜಾಡಿಯನ್ನೇ ಅದರ ತಲೆಗೆ ಕುಕ್ಕಿದೆ. ಒಂದೇಟಿಗೆ ಗತಪ್ರಾಣವಾಯಿತು. ಒಂದು ಕೇಜಿ ಉಪ್ಪು ಸಮೇತ ಒಡೆದ ಪಿಂಗಾಣಿ ಜಾಡಿಯ ತುಣುಕುಗಳೊಂದಿಗೆ ಇಲಿಯನ್ನು ದಫನ ಮಾಡಿ ಬಂದೆ. 

ಇದನ್ನು ಓದಿದವರೂ, ಕೇಳಿದವರೂ, ಪಾಡಿ ಕೊಂಡಾಡಿದವರೂ ಇಲಿ ಹೊಡೆಯುವ ಅದ್ಭುತ ಶಕ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎನ್ನುವಲ್ಲಿಗೆ ಅಡುಗೆ ಮನೆ ಪುರಾಣದ ಒಂದಧ್ಯಾಯವು ಮುಗಿದುದು..

ಮಂಗಳಂ..  
ಅನಿತಾ ನರೇಶ್ ಮಂಚಿ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಅಡುಗೆ ಮನೆ ಪುರಾಣ: ಅನಿತಾ ನರೇಶ್ ಮಂಚಿ

  1. ಸೊಗಸಾಗಿ ಬರೆದಿದ್ದೀರಿ. ಛಲ ಬಿಡದೆ ಇಲಿ ಹಿಡಿದಿದ್ದಕ್ಕೆ ಧನ್ಯವಾದಗಳು

  2. ಇಲಿಯನ್ನು ಕೊಂದು ಹಾಕುವಷ್ಟು ಧೈರ್ಯ ನೀಡಿದ್ದಕ್ಕೆ ಮತ್ತು ನನ್ನ ಹೆಂಡತಿ ದರ್ಶನ ಭಾಗ್ಯ ನೀಡುತ್ತೇನೆಂದರೂ ನೆಪವೊಡ್ಡಿ ಹಿಂದೆ ಸರಿಯುತ್ತಿದ್ದ ನನಗೆ ಅಡುಗೆ ಮನೆಯ ಕಡೆಗೆ ಆಗಾಗ ಭೇಟಿ ನೀಡಲು, ಮಿನಿ ಯುದ್ಧಕ್ಕೆ ಸನ್ನದ್ಧರಾಗಿ ನಿಲ್ಲುವ ಹೆಂಡತಿಗೆ ಅಟ್ಲೀಸ್ಟ್ ಹುರಿದುಂಬಿಸಲಾದರೂ ಅಡುಗೆ ಮನೆಗೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುವಷ್ಟು ಚೆಂದ ಬರೆದ ಬರಹ ಓದಿಸಿದ್ದಕ್ಕೆ ಧನ್ಯವಾದಗಳು….

  3. ತು೦ಬಾ ಚೆನ್ನಾಗಿದೆ…. ಈ ಲೇಖನ ಓದಿದಾಗ ನನ್ನ ಸೊದರತ್ತೆಯ ನೆನಪಾಯಿತು. ಅವರದ್ದು ಇದೇ ಕಥೆ. ಇಲಿ ಹೊಡೆಯುವುದರಲ್ಲಿ ಅವರು ಬಹಳ ನಿಪುಣರು..

Leave a Reply

Your email address will not be published. Required fields are marked *