ಅಂಧಕಾರ ಅಳಿಸುವ ಬೆಳಕಿನ ಅರಿವು ದೀಪಾವಳಿ: ವೈ.ಬಿ.ಕಡಕೋಳ

KADAKOL Y.B.

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ:ಮನೆ ದೂರ; ಕನಿಕರಿಸಿ
ಕೈಹಿಡಿದು ನಡೆಸೆನ್ನನು
ಹೇಳಿ ನನ್ನಡಿಯಿಡಿಸು;ಬಲುದೂರ ನೋಟವನು
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ

 
ಅಜ್ಞಾನದ ಕತ್ತಲೆಯನ್ನು ಕಳೆಯಲು ಜ್ಞಾನದ ದೀಪ ಅಗತ್ಯ. ದೀಪಾವಳಿ ದೀಪಗಳ ಬೆಳಕಿನ ಹಬ್ಬ. ನರಕಚತುರ್ದಶಿಯಿಂದ ಆರಂಭಿಸಿ ಮೂರು ದಿನಗಳವರೆಗೆ ಆಚರಿಸುವುದುಂಟು. ಭಾರತದ ಎಲ್ಲೆಡೆಯಲ್ಲಿಯೂ ದೀಪಾವಳಿಯನ್ನು ಆಚರಿಸುತ್ತಾರೆ.
    
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸ್ತಾಪಗೊಳ್ಳುವ ಎರಡು ಮುಖ್ಯ ಹೆಸರುಗಳು. ನರಕ ಹಾಗೂ ಬಲಿ. ನರಕನು ಭೂದೇವಿಯ ಮಗನಾದರೆ ಬಲಿಯು ಪ್ರಹ್ಲಾದನ ಮೊಮ್ಮಗ. ಇವರಿಬ್ಬರೂ ಮಹತ್ವಾಕಾಂಕ್ಷೆಯ ಸೆಳವಿಗೆ ಸಿಕ್ಕು ಅಸುರರಾದವರು. ಇವರ ಸಂಹಾರವೇ ದೀಪಾವಳಿ ಸಂದರ್ಭದ ಆಚರಣೆಯಲ್ಲಿ ಬರುವ ದೃಷ್ಟಾಂತಗಳು. ವ್ಯಕ್ತಿಗತ ಸ್ವಾರ್ಥವು ಯಾವಾಗ ಮಿತಿ ಮೀರುತ್ತದೆಯೋ ಆಗ ಒಂದಲ್ಲ ಒಂದು ರೂಪದಲ್ಲಿ ನಿಯಂತ್ರಿಸತಕ್ಕದ್ದು ಎನ್ನುವ ಪಾಠವನ್ನು ದೀಪಾವಳಿ ನೆನಪಿಸುವುದು. ಕೆಲವು ಕಡೆ ಮೂರು ದಿನ ಇನ್ನು ಕೆಲವು ಕಡೆ ಐದು ದಿನ ನಡೆಯುವ ಹಬ್ಬವಿದು. ರಾಮಾಯಣ ಮತ್ತು ಮಹಾಭಾರತದಂತಹ ಪುರಾಣ ಕಥನಗಳ ಹಿನ್ನಲೆಯನ್ನು ಹೊಂದಿದ ದೀಪಾವಳಿ ಹಿಂದೂ, ಜೈನ, ಸಿಖ್ ಧರ್ಮಗಳಲ್ಲಿ ವಿವಿಧ ರೂಪದಲ್ಲಿ ತಮ್ಮದೇ ಆದ ರೀತಿಯಲ್ಲಿ ಆಚರಿಸುವರು.

ನರಕ ಚತುರ್ದಶಿ
   
ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನದ ಸವಿನೆನಪು ತರುತ್ತದೆ. ನರಕಾಸುರನ ಹುಟ್ಟು ಕೂಡ ಸಾಮಾನ್ಯವಲ್ಲ. ಶ್ರೀ ಮನ್ನನಾರಾಯಣನು ವರಾಹ ಅವತಾರವನ್ನೆತ್ತಿ ಭೂಮಿಯನ್ನು ಉದ್ದರಿಸಿದ ಬಳಿಕ ಅವನ ಶರೀರದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿಯನ್ನು ಪಡೆಯಿತು. ಅವನೇ ನರಕಾಸುರ. ಈತ ಪ್ರಾಗ್ಜೋತಿಷಪುರವೆಂಬ ಪಟ್ಟಣದ ದೊರೆಯಾಗಿ ದೇವತೆಗಳಿಗೆ ತೊಂದರೆ ನೀಡಲಾರಂಭಿಸಿದ. ಬ್ರಹ್ಮನ ಮಗಳಾದ ಚತುರ್ದಶಿಯನ್ನು ಅಪಹರಿಸಿದ. ವರುಣನ ಛತ್ರವನ್ನು ಅಪಹಾರ ಮಾಡಿದ. ಈತ ಎಲ್ಲ ರಾಜ ಮಹಾರಾಜರನ್ನು ಗೆದ್ದು ಹದಿನಾರು ಸಾವಿರ ಕನ್ಯೆಯರನ್ನು ಸೆರೆಯಲ್ಲಿಟ್ಟ. ಲೋಕಕ್ಷೇಮಕ್ಕಾಗಿ ಶ್ರೀಕೃಷ್ಣ ಇವನನ್ನು ಸಂಹರಿಸುತ್ತಾನೆ. ನರಕಾಸುರನನ್ನು ಕೊಂದದ್ದು ಆಶ್ವೀಜ ಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ. ನರಕಾಸುರನ ತಾಯಿಯ ಅಪ್ಪಣೆಯ ಮೇರೆಗೆ ನರಕಾಸುರರನನ್ನು ಎಲ್ಲರೂ ಪೂಜಿಸುವ ಸವಿನೆನೆಪು ನರಕಚತುರ್ದಶಿ. ಇದಕ್ಕಾಗಿ ಅಭ್ಯಂಜನ, ಯಮತರ್ಪಣ ಮೊದಲಾದವುಗಳನ್ನು ಮಾಡಲು ಪುರಾಣಗಳು ತಿಳಿಸಿವೆ.
    
ಹದಿನಾರು ಸಾವಿರ ಕನ್ಯೆಯರನ್ನು ಮುಕ್ತಗೊಳಿಸಿದ್ದರಿಂದ ತಮ್ಮ ಕನ್ಯಾಸೆರೆ ಬಿಡಿಸಿದ ನಾರಾಯಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ಮನೆಗೆ ಬರಮಾಡಿಕೊಂಡು ಸತ್ಕರಿಸುವುದು ಇಂದಿನ ಸಂಸ್ಕøತಿ. ಮನುಷ್ಯನು ಕೂಡ ತನ್ನಲ್ಲಿನ ತಮೋಗುಣ ಅಳಿದು ಸತ್ವಗುಣ ಬರಲಿ ಎನ್ನುತ್ತ ಅಭ್ಯಂಜನ, ಹೊಸ ವಸ್ತ್ರಧಾರಣೆಗಳಿಂದ ಬಹಿರಂಗ ಶುದ್ದಿ ಪಡೆಯುವಂತೆ ಅಂತರಂಗ ಶುದ್ದಿಗೂ ಪ್ರಾರ್ಥಿಸುವ ದಿನವಿದು.

ಬಲಿಪಾಡ್ಯಮಿ
  
ಬಲಿಯು ಪ್ರಹ್ಲಾದನ ಮೊಮ್ಮಗ. ಅಶ್ವಮೇಧಯಾಗ ಮಾಡಿ ಖ್ಯಾತಿ ಪಡೆದ ಇವನು ದಾನದಲ್ಲಿ ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂಬಂತೆ ಸ್ವಾಭಿಮಾನಿ. ದೇವನು ವಾಮನ ಅವತಾರವನ್ನೆತ್ತಿ ಮೂರು ಹೆಜ್ಜೆ ದಾನ ಬೇಡುವ ಮೂಲಕ ಆಕಾಶವೇ ಒಂದು ಹೆಜ್ಜೆ. ಇಡೀ ಭೂಮಿಯೇ ಎರಡನೇ ಹೆಜ್ಜೆ ಇನ್ನೊಂದು ಹೆಜ್ಜೆಗೆ ಸ್ಥಳವಿಲ್ಲದಾದಾಗ ಬಲಿ ತನ್ನ ತಲೆಯನ್ನೊಡ್ಡಿದ ಒಡನೆಯೇ ವಿಷ್ಣು ಅವನನ್ನು ಮೆಟ್ಟಿ ಪಾತಾಳಕ್ಕೆ ತುಳಿದನು. ಅವನ ದಾನ ಪರಂಪರೆಗೆ ಮೆಚ್ಚಿದ ವಿಷ್ಣು ಅವನಿಗೆ ಪಾತಾಳದ ಅಧಿಪತ್ಯವನ್ನು ಕರುಣಿಸಿ ಇಂದ್ರಪದವಿಯನ್ನಿತ್ತನು. ಜೊತೆಗೆ ವರವನ್ನು ಬೇಡು ಎಂದಾಗ ಬಲೀಂದ್ರನು " ನನ್ನ ರಾಜ್ಯದಲ್ಲಿ ಯಾರು ಮೂರು ದಿನ ದೀಪದಾನ ಮಾಡುತ್ತಾರೆಯೋ ಅವರ ಮನೆಯಲ್ಲಿ ನಿನ್ನ ಸಹಧರ್ಮಿಣಿ  ಲಕ್ಷ್ಮೀ ಸ್ಥಿರವಾಗಲಿ"ಎಂದನು. ಆಗ ವಿಷ್ಣು "ತಥಾಸ್ತು"ಎಂದು ಅನುಗ್ರಹಿಸಿದನು. ಮತ್ತು ಅವನ ಮನೆ ಬಾಗಿಲು ಕಾಯುವ ಪ್ರತೀಹಾರಿಯಾದನು ಭಕ್ತವತ್ಸಲ.
    
ಬಲಿಪಾಡ್ಯಮಿಯಂದು ಬಲೀಂದ್ರನನ್ನು ಅಕ್ಕಿ ಹಿಟ್ಟು ಅಥವ ಸಗಣಿಯಲ್ಲಿ ಪೂಜಿಸುವುದು ಸಂಪ್ರದಾಯ. ಹಟ್ಟಿ ಹಾಕುವುದು ಎನ್ನುವ ರೈತರು ಬಲೀಂದ್ರನ ಪೂಜೆಗೈಯುವ ಹಟ್ಟಿ ಹಬ್ಬ ಎನ್ನುತ್ತ ಕೂಡ ಆಚರಿಸುವರು. ಅಷ್ಟೇ ಅಲ್ಲ ಈ ದಿನವೇ ಶ್ರೀ ರಾಮನ ಪಟ್ಟಾಭಿಷೇಕವಾದ ದಿನ. ಹಾಗೂ ವಿಕ್ರಮ ರಾಜನ ಪಟ್ಟಾಭಿಷೇಕವಾದ ದಿನ. ಪಾಂಡವರ ವನವಾಸ ಕೊನೆಗೊಂಡು ತಮ್ಮ ಗೋವುಗಳೊಂದಿಗೆ ಮರಳಿದ ದಿನ.
     
ಇಂದು ಗ್ರಾಮೀಣ ಜನರು ಸಗಣಿಯಿಂದ ಪಾಂಡವರನ್ನು ಮಾಡಿ ಸುಣ್ಣಬೊಟ್ಟುಗಳ ಮೂಲಕ ಹೆಜ್ಜೆಗಳನ್ನಿಡುತ್ತಾರೆ. ಉತ್ತರಾಣಿ ಕಡ್ಡಿ, ಹೊನ್ನಾರಿ ಹೂವು ಅವುಗಳಿಗೆ ಏರಿಸಿ. ಜೋಳದ ಅಥವ ಕಬ್ಬಿನ ದಂಟುಗಳನ್ನಿಟ್ಟು ಪೂಜಿಸುತ್ತಾರೆ. ಇದನ್ನು "ಹಟ್ಟಿ ಹಬ್ಬ"ಎನ್ನುವರು. ಈ ದಿನ ಶ್ಯಾವಿಗೆ ಹಾಗೂ ಅನ್ನವನ್ನುಮಾಡಿ ನೈವೇದ್ಯ ಮಾಡುವರು. . ಇದನ್ನು ಮೂರು ದಿನ. ಐದು ದಿನಗಳವರೆಗೆ ಪ್ರತಿ ದಿನ ಮಾಡಿ ಕೊನೆಯ ದಿನ ಸಂಜೆಯಾದೊಡನೆ ಅವುಗಳನ್ನು ತಮ್ಮ ತಮ್ಮ ಮನೆಯ ಮಾಳಿಗೆ ಮೇಲೆ ಸಾಲಾಗಿ ಇಡುವರು.
             
ಸಹೋದರ ಸಹೋದರಿಯರ ಭಾತೃತ್ವ
     

ಬಲಿಪಾಡ್ಯಮಿಯ ಮರುದಿನ ಯಮದ್ವಿತೀಯ ಇದನ್ನು ಭ್ರಾತ್ವ ದ್ವಿತೀಯವೆಂತಲೂ ಕರೆಯುವರು. ಈ ದಿನವನ್ನು ಭ್ರಾತ್ವ ಪ್ರೀತಿಯ ಸಂಕೇತವಾಗಿ ಸೋದರ ಬಿದಿಗೆ ಎಂದು ಆಚರಿಸುವರು. ಸಹೋದರರು ತಮ್ಮ ಸಹೋದರಿಯರನ್ನು ಕರೆದು ತಾವು ಅಭ್ಯಂಜನ ಸ್ನಾನ ಮಾಡಿ ಸಹೋದರಿಯರಿಂದ ಆರತಿ ಬೆಳಗಿಸಿಕೊಳ್ಳುವ ಮೂಲಕ ಸಹೋದರ ಕಾಣಿಕೆ ನೀಡಿ ಸಹೋದರಿಯರ ಆಶೀರ್ವಾದ ಪಡೆಯುವುದು ವಾಡಿಕೆ. ಎಣ್ಣೆ ನೀರಿನ ಸ್ನಾನ ಈ ದಿನದ ವಿಶೇಷತೆ. ನೀರಿನಲ್ಲಿ ಗಂಗೆಯೂ ಎಣ್ಣೆಯಲ್ಲಿ ಧನಲಕ್ಷ್ಮೀಯು ಇರುತ್ತಾಳೆ ಎಂಬುದು ನಂಬಿಕೆ. ಹೀಗೆ ಸ್ನಾನ ಮಾಡುವುದರಿಂದ ಆಯುರಾರೋಗ್ಯ ಆಯುಸ್ಸು ವೃದ್ದಿಸುವುದು ಎಂಬ ನಂಬಿಕೆ.
ಲಕ್ಷ್ಮೀ ಪೂಜೆ
   
ದೀಪಾವಳಿ ಅಮವಾಸೆಯಂದು ಲಕ್ಷ್ಮೀ ಪೂಜೆ ನಡೆಸುತ್ತಾರೆ. ಮಹಾಲಕ್ಮಿಯು ಜ್ಯೋತಿ ಸ್ವರೂಪಿನಿ, ಸೂರ್ಯ ಚಂದ್ರ ಅಗ್ನಿ ವಿದ್ಯುತ್ ನಕ್ಷತ್ರಗಳು ಮೊದಲಾಗಿ ಎಲ್ಲ ಜ್ಯೋತಿರ್ವಸ್ತುಗಳಲ್ಲಿಯೂ ವಿರಾಜಮಾನಳಾಗಿದ್ದಾಳೆ. ಮಹಾಲಕ್ಷ್ಮೀ ಅನುಗ್ರಹ ಎಲ್ಲರಿಗೂ ಬೇಕು. ವಿಶೇಷವಾಗಿ ದೀಪಾವಳಿ ಅಮವಾಸೆಯ ದಿನ ಲಕ್ಷ್ಮೀ ಮನೆಯಲ್ಲಿ ವಾಸ ಮಾಡುವಳು. ಆದ್ದರಿಂದ ಸ್ಥಿರವಾಗಿ ಅವಳು ವಾಸ ಮಾಡಲಿ ಎಂದು ಲಕ್ಷ್ಮೀ ಪೂಜೆ ಮಾಡುವರು. ಕತ್ತಲೆಯಿಂದ ಬೆಳಕಿನೆಡೆಗೆ ಸೌಭಾಗ್ಯಶ್ರೀಯನ್ನು ಪಡೆಯಲು ದೀಪಾವಳಿಯಂದು ಲಕ್ಷ್ಮೀ ಪೂಜೆ ನಡೆಸುವುದು ವಾಡಿಕೆ. ಈ ದಿನ ವಿಶೇಷವಾಗಿ ರೈತರು. ವ್ಯಾಪಾರಸ್ಥರು ತಾಮ್ರದ ಕೊಡದ ಮೇಲೆ ತೆಂಗಿನಕಾಯಿ ಇರಿಸಿ ಆ ಕೊಡಕ್ಕೆ ಸೀರೆ ಉಡಿಸಿ. ಬಂಗಾರದ ಆಭರಣ ಹಾಕಿ ತಾಟಿನಲ್ಲಿ ನಾಣ್ಯಗಳನ್ನು ಇರಿಸಿ ಪೂಜಿಸುವರಲ್ಲದೇ ಅಂಗಡಿಗಳಲ್ಲಿ ಜನರನ್ನು ಆಮಂತ್ರಿಸಿ ಪ್ರಸಾದ ಹಂಚುವರು.
             
ದೀಪದ ಮಹತ್ವ
  
ದೀಪವನ್ನು ಬೆಳಗಿಸುವುದರಲ್ಲಿ ಕೂಡ ನಾನಾ ವಿಧಗಳು. ಮಣ್ಣಿನ ದೀಪ ಸದಾ ಮನೆಯಲ್ಲಿ ಉರಿಯುತ್ತಿರಬೇಕು. ಆ ನಂದಾದೀಪದಲ್ಲಿ ಸಕಲ ಸಂಪತ್ತು ವೃದ್ದಿಸುತ್ತದೆ ಎನ್ನುವರು. ಅದರಂತೆ ತುಪ್ಫದ ದೀಪ ಹಚ್ಚಿದರೆ ಆರೋಗ್ಯ. ಐಶ್ವರ್ಯ ಸಮೃದ್ದಿ ನೀಡುತ್ತದೆಯೆಂದೂ, ಎಳ್ಳೆಣ್ಣೆ ದೀಪ ಅನಿಷ್ಟವನ್ನು ತೊಲಗಿಸುತ್ತದೆಯೆಂದೂ, ಹರಳೆಣ್ಣೆ ಮನೆಯಲ್ಲಿ ಒಗ್ಗಟ್ಟಿನ ಸಂಕೇತವೆಂದೂ. ಒಂದು ಮುಖದ ದೀಪ ಬೆಳಗಿಸುವುದು ಸಾಧಾರಣ ಹಾಗೂ ಮಧ್ಯಮ ಫಲ. ಎರಡು ಮುಖ ದೀಪ ಕುಟುಂಬದಲ್ಲಿ ಹೊಂದಾಣಿಕೆ ಮತ್ತು ಒಗ್ಗಟ್ಟು, ಮೂರು ಮುಖದ ದೀಪ ಸಂತಾನ ಪ್ರಾಪ್ತಿ, ನಾಲ್ಕು ಮುಖದ ದೀಪದಿಂದ ಸಕಲ ಸಂಪತ್ತು ಹಾಗೂ ಜೀವಜಲಚರ ವೃದ್ದಿ, ಐದು ಮುಖದ ದೀಪ ಸರ್ವ ಕಾರ್ಯಕ್ಕೂ ಮಂಗಳಕರ ಹೀಗೆ ದೀಪ ಬೆಳಗಿಸುವುದರಲ್ಲಿಯೂ ಕೂಡ ತನ್ನದೇ ಆದ ಮಹತ್ವವನ್ನು ಹೊಂದಿದ್ದು.
     
ನಮ್ಮ ಸಂಸ್ಕøತಿಯಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದ್ದು ಇದನ್ನು ದೇಶದೆಲ್ಲೆಡೆ ಅಷ್ಟೇ ಅಲ್ಲ  ಪ್ರಪಂಚದ 25 ದೇಶಗಳಲ್ಲಿ ದೀಪಾವಳಿ ಆಚರಿಸಲ್ಪಡುತ್ತಿದೆ. ಬೀದರನಲ್ಲಿ ಸುಲ್ತಾನರ ಕಾಲದಿಂದಲೂ ಹಿಂದೂ-ಮುಸ್ಲಿಂರೆಲ್ಲ ಒಟ್ಟಾಗಿಯೇ ಆಕಾಶ ದೀಪಗಳನ್ನು ಹಾರಿಸುತ್ತ ಆಚರಿತ್ತ ಬಂದಿದ್ದು. ಜೈನ್ ಧರ್ಮದವರು ಮಹಾವೀರ ನಿರ್ವಾಣ ಹೊಂದಿದ ಈ ದಿನವನ್ನು , ಸಿಖ್ ಸಂಪ್ರದಾಯದವರು ಗುರು ಗೋವಿಂದಜೀ ಮತ್ತು ಇತರ ಹಿಂದೂ ಮಹಾರಾಜರು ಮೊಘಲ್‍ರಿಂದ ಬಂಧಮುಕ್ತಿ ಹೊಂದಿದ ದಿನದ ಸ್ಮರಣೆಯಲ್ಲಿಯೂ ಆಚರಿಸುವರು. 1972 ರಿಂದ ಬ್ರಿಟನ್ನದಲ್ಲಿ ಆರಂಭವಾದ ದೀಪಾವಳಿ ಹೌಸ್ ಆಪ್ ಕಾಮನ್ಸದಲ್ಲೇ ಹಾಗೂ ಲೈಸೆಸ್ಟರ್ ದಲ್ಲಿ ವಿನೂತನವಾಗಿ ಆಚರಿಸುವರು. ಮಾರಿಷಸ್ ನಲ್ಲಿ ಆಪ್ರಿಕಾದ ನಟಾಲ್ ಮತ್ತು ಟ್ರಾನ್ಸವಾಲ್, ನೇಪಾಳ. ದಕ್ಷಿಣ ಅಮೇರಿಕಾ ತೀರದಲ್ಲಿರುವ ಗಯಾನ, ಥೈಲ್ಯಾಂಡ್ ಶ್ರೀಲಂಕಾ, ಸಿಂಗಾಪೂರ ದೇಶಗಳಲ್ಲಿ ದೀಪಾವಳಿಯನ್ನು ಸಡಗರದಿಂದ ಆಚರಿಸುವರು. ಏನೇ ಆಗಲಿ ಮಾನವನ ಬಹಿರ್ ಚಕ್ಷುಗಳಿಗೆ ಬೆಳಕನ್ನೂ, ಆತನ ಅಂತರ್ ಚಕ್ಷುಗಳಿಗೆ ಬೆಳಗನ್ನು ದೀಪಾವಳಿ ಉಂಟುಮಾಡಲಿ, ಸ್ವಾರ್ಥವೇ ಸರ್ವಂತ್ರ ಮಂತ್ರವಾಗಿರುವ ಈ ಕಾಲದಲ್ಲಿ ದೀಪಾವಳಿಯ ತಂಬೆಳಕು ವ್ಯಕ್ತಿಗತ ಸ್ವಾರ್ಥ ಕಡಿತವಾಗಿ ಪರರ ಹಿತ ಬಯಸುವ ಸದ್ಗುಣಗಳು ಆದರ್ಶಗಳು ಎಲ್ಲರೊಳಗೆ ಉದ್ದೀಪಿಸಲಿ ಅಂಥ ವಿವೇಕ ಶಕ್ತಿಯನ್ನು ಉಂಟು ಮಾಡಲಿ ಎಂದು ಪ್ರಾರ್ಥನೆ.           


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x