ಅಂದಾಜ್ ಅಪ್ನಾ ಅಪ್ನಾ:ವಾಸುಕಿ ರಾಘವನ್ ಅಂಕಣ


ಸಿನಿಮಾ ವಿಮರ್ಶಕ ರಾಜಾ ಸೇನ್ ಅವರು ಒಂದು ಆರ್ಟಿಕಲ್ ಅಲ್ಲಿ ಹೀಗೆ ಬರೆದಿದ್ದ ನೆನಪು. ಆಮೀರ್ ಖಾನ್ ಅವರ ಈ ಚಿತ್ರ ನೆನಪಿದೆಯಾ ನಿಮಗೆ? ಇದರಲ್ಲಿ ನಾಯಕಿಯನ್ನು ಅತಿಯಾಗಿ ಇಷ್ಟಪಡುವ ನಾಯಕ, ತಲೆಗೆ ಬಲವಾದ ರಾಡ್ ಇಂದ ಪೆಟ್ಟು ತಿಂದು, ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇದರಿಂದಾಗಿ ಮುಂದೆ ಚಿತ್ರವಿಚಿತ್ರವಾದ ಘಟನೆಗಳು ಜರುಗಿ, ಅವನನ್ನು ಫಜೀತಿಗೆ ಒಡ್ಡುತ್ತವೆ. ಗೊತ್ತಾಯ್ತಾ? ನೀವೂ “ಘಜಿನಿ” ಅಂದು ಬಿಟ್ರಾ? ಛೆ! ಇದೇ ನೋಡಿ, ಈಗಿನ ನೂರು ಕೋಟಿ ಗಳಿಕೆಯ ಸಾಧಾರಣ ಚಿತ್ರಗಳ ಪ್ರಭಾವ. ನಾವು ಚಂದನೆಯ ಹಳೆಯ ಸಿನಿಮಾಗಳನ್ನು ಮರೆಯುವಂತೆ ಮಾಡುತ್ತಿದೆ. ನನ್ನ ಮನಸ್ಸಿನಲ್ಲಿದ್ದ, ಇದೇ ಸನ್ನಿವೇಶ ಇರುವ ಚಿತ್ರ “ಅಂದಾಜ್ ಅಪ್ನಾ ಅಪ್ನಾ”! ನನ್ನ ಪ್ರಕಾರ ಇದು ಬಹುಷಃ ಬಾಲಿವುಡ್ ಅಲ್ಲಿ ಬಂದ ಕಡೆಯ ಗ್ರೇಟ್ ಕಾಮಿಡಿ ಚಿತ್ರ.

ಅಮರ್ ಮತ್ತು ಪ್ರೇಮ್ ಯಾವುದೇ ಕೆಲಸಕ್ಕೆ ಬಾರದ ಬೇಜವಾಬ್ದಾರಿ ಯುವಕರು. ಯಾರಾದರೂ ಶ್ರೀಮಂತರ ಹುಡುಗಿಯನ್ನು ಮದುವೆಯಾಗಿ ಐಶಾರಾಮದ ಜೀವನ ನಡೆಸುವ ಆಸೆಯುಳ್ಳವರು. ಶ್ರೀಮಂತ ಉದ್ಯಮಿ ರಾಮ್ ಗೋಪಾಲ್ ಬಜಾಜ್ ಅವರ ಒಬ್ಬಳೇ ಮಗಳು ರವೀನಾ ಬಜಾಜ್ ಮದುವೆಯಾಗುವ ಸಲುವಾಗಿ ಹೊರದೇಶದಿಂದ ಭಾರತಕ್ಕೆ ಬಂದಿರುವಳೆಂದು ತಿಳಿದು, ತಮ್ಮ ಅದೃಷ್ಟ ಪರೀಕ್ಷೆಗೆ ಇಬ್ಬರೂ ಹೊರಡುತ್ತಾರೆ. ರವೀನಾಳ ಮೆಚ್ಚುಗೆ ಪಡೆಯಲು ಇಬ್ಬರೂ ಪೈಪೋಟಿ ನಡೆಸುತ್ತಾರೆ, ಒಬ್ಬರ ಪ್ರಯತ್ನಕ್ಕೆ ಇನ್ನೊಬ್ಬರು ಹೇಗಾದರೂ ತೊಡರುಂಟು ಮಾಡುತ್ತಾರೆ. ರವೀನಾಳ ಸೆಕ್ರೆಟರಿ ಕರಿಷ್ಮಾಗೆ ಪ್ರೇಮ್ ಮೇಲೆ ಪ್ರೇಮವುಂಟಾಗುತ್ತದೆ, ಆದರೆ ಅವನಿಗೆ ರವೀನಾಳನ್ನು ಪಡೆಯಬೇಕೆಂಬ ಹಂಬಲ. ಅದೇ ಸಮಯದಲ್ಲಿ ರಾಮ್ ಗೋಪಾಲನ ಅವಳಿ ಸಹೋದರ ಅವನ ಆಸ್ತಿಯನ್ನೆಲ್ಲಾ ಹೇಗಾದರೂ ಕಬಳಿಸಬೇಕೆಂಬ ಸಂಚು ಹೂಡುತ್ತಾನೆ. ಬಹಳಷ್ಟು ತಿರುವುಗಳ ನಂತರ ಕಡೆಗೆ ಅಮರ್ ಮತ್ತು ಪ್ರೇಮ್ ಹೇಗೆ ತಮ್ಮ ಪ್ರೀತಿಯನ್ನು ಪಡೆಯುತ್ತಾರೆ, ಹೇಗೆ ರಾಮ್ ಗೋಪಾಲನ ಮೆಚ್ಚುಗೆ ಗಳಿಸುತ್ತಾರೆ, ಕೇಡಿಗಳನ್ನು ಹೇಗೆ ಸೆದೆಬಡಿಯುತ್ತಾರೆ ಅನ್ನುವುದೇ ಚಿತ್ರದ ಕಥೆ.

ಈ ಚಿತ್ರ ಬಿಡುಗಡೆಯಾದಾಗ ಫ್ಲಾಪ್ ಆಗಿತ್ತಂತೆ. ಆದರೆ ಬರಬರುತ್ತಾ ತುಂಬಾ ಜನ ನೋಡುಗರ ಪ್ರಶಂಸೆಗೆ ಒಳಗಾಗಿದೆ. ನಾನು ಬಿಡುಗಡೆಯಾದ ಸಮಯದಲ್ಲಿ ಇದನ್ನು ನೋಡಿರಲಿಲ್ಲ, ಆದರೆ ನೋಡಿದ ಸಲದಿಂದಲೇ ಈ ಚಿತ್ರವನ್ನು ತುಂಬಾ ಎಂಜಾಯ್ ಮಾಡಿದ್ದೀನಿ.

ಹಾಗೆ ನೋಡಿದರೆ ಈ ಚಿತ್ರ ಬಹಳ ಸಿಲ್ಲಿ ಮತ್ತು ಹಾಸ್ಯ ಸ್ಲ್ಯಾಪ್ ಸ್ಟಿಕ್ ಮಾದರಿಯದ್ದಾಗಿದೆ. ಆದರೂ ಅದು ಮೂಡಿಬಂದಿರುವ ರೀತಿಯಲ್ಲಿ ಮುಗ್ಧತೆ, ಪ್ರಾಮಾಣಿಕತೆ ಇದೆ. ಇಷ್ಟೊಂದು ಇಷ್ಟವಾಗಲು ಅದೇ ಕಾರಣ ಅನಿಸುತ್ತದೆ. ಬಾಲಿವುಡ್ ಈಗಿನ ದೈತ್ಯ ಆರ್ಥಿಕ ಶಕ್ತಿಯನ್ನು ಹೊಂದಿಲ್ಲದ ಕಾಲ ಅದು. ರಾಜಕುಮಾರ್ ಸಂತೋಷಿ ಘಾಯಲ್ ಮತ್ತು ದಾಮಿನಿ ಅಂತಹ ‘ಸೀರಿಯಸ್’ ಚಿತ್ರಗಳ ನಂತರ ಮೊದಲನೇ ಬಾರಿಗೆ ಒಂದು ಕಾಮಿಡಿ ಚಿತ್ರಕ್ಕೆ ಕೈ ಹಾಕಿದ್ದರು. ಆಮೀರ್ ಖಾನ್ ಆಗಿನ್ನೂ “ಬುದ್ಧಿವಂತ” ನಟ ಅಂತಾಗಲೀ, ಮಾರ್ಕೆಟಿಂಗ್ ಚಾಣಾಕ್ಷ ಅಂತಾಗಲೀ ಹೆಸರು ಮಾಡಿರಲಿಲ್ಲ. ಸಲ್ಮಾನ್ ಖಾನ್ ಸಾರ್ವಕಾಲಿಕ ದಾಖಲೆ ಮುರಿಯುವ ಚಿತ್ರಗಳನ್ನು ಕೊಡುವ ತಾಕತ್ತಿನ ಸ್ಟಾರ್ ಡಮ್ ಹೊಂದಿರಲಿಲ್ಲ. ಕರಿಷ್ಮಾ ಕಪೂರ್ ನಟನೆ ಕೆಟ್ಟದಾಗಿದೆಯೋ, ಅವಳ ಕಿರುಬೆರಳ ಗಾತ್ರದ ಹುಬ್ಬುಗಳು ಕೆಟ್ಟದಾಗಿದೆಯೋ ಅಂತ ನಾವು ಯೋಚಿಸುತ್ತಿದ್ದ ಸಮಯ. ಆವಾಗ ರವೀನಾ ಟಂಡನ್ ಈಗಿನ ಸಹನರ್ತಕಿಯರೂ ಹಾಕದಂತಹ ಉಡುಪುಗಳನ್ನು ತೊಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಹೀಗೆ ಯಾರೂ “ಸೆಲ್ಫ್ ಕಾನ್ಷಿಯಸ್” ಆಗಿಲ್ಲದಿರುವುದರಿಂದ ಈ ಚಿತ್ರಕ್ಕೆ ಒಂದು “ಚಾರ್ಮ್” ಬಂದಿದೆ.

ಇಡೀ ಚಿತ್ರದ ಹಾಸ್ಯ ನಿಂತಿರುವುದು ನಮ್ಮ ಸಿನಿಮಾಗಳು ಮತ್ತು ನಾವವನ್ನು ನೋಡುವ ರೀತಿಯ ಮೇಲೆ. “ಓಂ ಶಾಂತಿ ಓಂ” ಚಿತ್ರವೂ ಇದೇ ವಿಷಯವನ್ನು ಎತ್ತಿಕೊಂಡಿದ್ದರೂ ಹಾಸ್ಯ ಎರಡರಲ್ಲೂ ಭಿನ್ನವಾಗಿದೆ. “ಓಂ ಶಾಂತಿ ಓಂ” ಚಿತ್ರದ ಹಾಸ್ಯದಲ್ಲಿ ಮೂದಲಿಸುವ ಗುಣ ಹೆಚ್ಚಿಗೆ ಇದೆ. ದಕ್ಷಿಣ ಭಾರತದ ಚಿತ್ರಗಳು, ಹಳೆಯ ಹಿಂದಿ ಚಿತ್ರ ನಟರು ಮುಂತಾದವುಗಳು ಹಾಸ್ಯಕ್ಕೆ ವಸ್ತುವಾಗಿವೆ ಇಲ್ಲಿ. ಇದರಲ್ಲಿ ತಪ್ಪೇನೂ ಇಲ್ಲ, ಕೆಲವು ನಗು ತರಿಸುತ್ತವೆ ಕೂಡ. ಆದರೂ ಹಾಸ್ಯ ಮಾಡುತ್ತಿರುವವನು ತಾನು ಹಾಸ್ಯ ಮಾಡುತ್ತಿರುವ ವಸ್ತುವಿಗಿಂತ ಉತ್ಕೃಷ್ಟ ಅನ್ನುವ ನಿಲುವು ಕಾಣುತ್ತದೆ. “ಅಂದಾಜ್ ಅಪ್ನಾ ಅಪ್ನಾ” ಚಿತ್ರದ ಹಾಸ್ಯ ಹಾಗಲ್ಲ. ಇಲ್ಲಿ ಯಾವುದೇ ಚಿತ್ರ ಅಥವಾ ನಟರನ್ನು ಟಾರ್ಗೆಟ್ ಮಾಡದೇ, ಚಿತ್ರಗಳ ಕ್ಲೀಷೆಗಳನ್ನ ತಮಾಷೆ ಮಾಡಲಾಗಿದೆ. ಉಪಯೋಗವಿಲ್ಲದ ಖಳನಟರ ಬಂಟರು, ಇವರನ್ನು ಅವರು ಅವರನ್ನು ಇವರು ಅಂತ ಅಂದುಕೊಳ್ಳುವ ಕನ್ಫ್ಯೂಷನ್, ನಿರುಪಯುಕ್ತನಾದರೂ ಕಡೆಯಲ್ಲಿ ಗೆಲುವು ಸಾಧಿಸುವ ಹೀರೋ – ಹೀಗೆ ನಮ್ಮ ಫಿಲಮ್ಮುಗಳ ಸಾಮಾನ್ಯ ಅಂಶಗಳು ಕಾಣಸಿಗುತ್ತವೆ. “ನಾವಿರೋದೆ ಹಿಂಗೆ ನೋಡಿ” ಅಂತ ನಮ್ಮ ಬಗ್ಗೆ ನಾವೇ ಮಾಡಿಕೊಳ್ಳುವ ಹಾಸ್ಯ ಇರುವುದರಿಂದ ಈ ಚಿತ್ರ ಹೆಚ್ಚು ಆಪ್ಯಾಯಮಾನವಾಗಿದೆ ಅಂತ ನನ್ನ ಅನಿಸಿಕೆ. ಚಿತ್ರದ ಹಾಡುಗಳೂ ಅಷ್ಟೇ, ಓ.ಪಿ.ನಯ್ಯರ್, ರಫಿ, ಗೀತಾ ದತ್ ಶೈಲಿಯವು. ಇದರಲ್ಲಿ ಹಾಸ್ಯ ಎಷ್ಟಿದೆಯೋ, ನಾಸ್ಟಾಲ್ಜಿಯಾ ಕೂಡ ಅಷ್ಟೇ ಇದೆ!

ನೀವು ಈ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದೀರ ಅಂದರೆ ಒಮ್ಮೆಯಾದರೂ “ನೀನು ಪುರುಷ ಅಲ್ಲ ಕಣೋ…(ಆಂ ಏನು? ಅನ್ನುವ ಪ್ರತಿಕ್ರಿಯೆ ಬಂದಮೇಲೆ) ಮಹಾಪುರುಷ ಮಹಾಪುರುಷ” ಅನ್ನುವ ಡೈಲಾಗ್ ಅನ್ನು ನಿಜಜೀವನದಲ್ಲಿ ಉಪಯೋಗಿಸೇ ಉಪಯೋಗಿಸಿರುತ್ತೀರ. ಇದೇನು ಅಂತ ನಿಮಗೆ ಅರ್ಥ ಆಗಲಿಲ್ಲ ಅಂದ್ರೆ, ನನ್ನ ಸಲಹೆ ಇಷ್ಟೇ. ಒಂದು ಸಲ ಈ ಫಿಲಂ ಅನ್ನು ನೋಡಿಬಿಡಿ!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Pramod
11 years ago

ಫಸ್ಟ್ ಕ್ಲಾಸ್ ಕಾಮಿಡಿ. ಕ್ರೈ೦ ಮಾಸ್ಟರ್ ಗೋಗೊ ನ೦ತಹ ಕ್ಯಾರೆಕ್ಟರ್ ಹೊಟ್ಟೆ ಹುಣ್ಣಾಗುಸಿವಷ್ಟು ನಗಿಸುತ್ತದೆ. ಸ೦ತೋಷಿ ಯ೦ತಹ ಒಳ್ಳೆಯ ನಿರ್ದೇಶಕ ಬರ ಬರುತ್ತಾ ಅವರೇಜ್ ಆಗ್ತಾ ಇದ್ದಾನೆ. 

ವೆಂಕಟೇಶ ಮಡಿವಾಳ(ಸಪ್ತಗಿರಿವಾಸಿ ) ಬೆಂಗಳೂರು
ವೆಂಕಟೇಶ ಮಡಿವಾಳ(ಸಪ್ತಗಿರಿವಾಸಿ ) ಬೆಂಗಳೂರು
11 years ago

ಹಾಗೊಮ್ಮೆ ನೆಟ್ನಲ್ಲಿ ಉತ್ತಮ ಹಾಸ್ಯ ಚಿತ್ರಗಳಿಗಾಗಿ ಹುಡುಕಾಡುವಾಗ  ಈ ಚಿತ್ರದ  ಹೆಸರು  ನೋಡಿದೆ .  ನಿರ್ದೇಶಕ  ರಾಜ್ಕುಮಾರ್ ಸಂತೋಷಿ  ಅವರು ಅಂತ ತಿಳಿದು ಅಚ್ಚರಿ ಆಯ್ತು …  
ಕಾರಣ  ಅದುವರೆಗೂ ಅವರು ತೆಗೆದ  ಚಿತ್ರಗಳು ಬೇರೆಯದೇ ರೀತಿಯವು.. 
 
ಆಮೇಲೆ  ಅಮೀರ್  ಮತ್ತು ಸಲ್ಮಾನ್ ನಟರು ಎಂದಮೇಲೆ ಅದು ನೋಡದೆ ಇರಲು ಆದೀತೆ ..!!
ಅದ್ಕೆ ಮೊದಲೇ ನಾನು ಅಮೀರ್ ಮತ್ತು ಅಜಯ್ ದೇವಗನ್ ಅವರ   ಇಶ್ಕ್  ನೋಡಿದ್ದೆ  … 
 
ಈ ಚಿತ್ರ ಶುರು ನಲ್ಲಿ ಹಿಟ್  ಆಗದೆ ನಂತರದ  ಮರು ಬಿಡುಗಡೆ ದಿನಗಳಲ್ಲಿ- ಟೀ  ವಿ ಯಲ್ಲಿ ಬಂದ  ಮೇಲೆ ಎಗ್ಗ ಮಗ್ಗ ಹಿಟ್ ಆಯ್ತು – ಒಂತಹರ್ ಕಲ್ಟ್  ಕ್ಲಾಸಿಕ್ ಆಯ್ತು ಅಂತ ತಿಳೀತು .. 
ಚಿತ್ರ ಸೂಪರ್ .. 
 ಒಬ್ಬರನೊಬ್ರು  ಯಾಮಾರಿಸೋ ರೀತಿ ಸೂಪರ್ .. 
ನಕ್ಕು ನಕ್ಕು ಸುಸ್ತಗಿಸುತ್ತೆ .. ಅದರಲ್ಲೂ  'ಅಯ್ಲ ' ಎನ್ನುವ ಸಲ್ಮಾನ್ ನಟನೆ ..!!
 
ಉತ್ತಮ ವಿಮರ್ಶೆ .. 
 
ಈ ಚಿತ್ರ ರಾಜ್ಕುಮಾರ್ ಸಂತೋಷಿ ಅವರ  ಕಾಮಿಡಿ ಚಿತ್ರ ಮಾಡುವದಕ್ಕು ಸೈ  ಅಂತ ತೋರಿಸಿಕೊಟ್ಟಿತು .. 
 
ಆಮೇಲೆ ಅವರು  ಅಜಬ್ ಪ್ರೇಂ ಕಿ ಗಜಬ್ ಕಹಾನಿ , ಮತ್ತು ಈಗಿನ  ಪ ಟಾ  ಪೋಸ್ಟರ್ ನಿಕ್ಲ  ಹೀರೋ ಮಾಡಿದರೂ ಆ ಚಿತ್ರದ  ರೀತಿ ಇಲ್ಲ .. 
 
 
ಪೂರ್ಥ್ ಇಚಿತ್ರ ಯೂಟೂಬ್ನಲ್ಲಿ  ಲಭ್ಯ ನೋಡಿ ..
http://bit.ly/16XqCVX
ಹಾಗೆ ಇದನ್ನ
http://imdb.to/8gqUR
 
 
ಶುಭವಾಗಲಿ 
 
\॥/

amardeep.p.s.
amardeep.p.s.
11 years ago

really, i think this film was released in the year 1993 or 1994… I saw this film in my college days…. good one.

3
0
Would love your thoughts, please comment.x
()
x