ಮುಂಜಾನೆ ನಸಿಕಲೇ 5 ಗಂಟೆ ಆಗಿತ್ತು. ಅದ ಇನ್ನು ಜಂಪ ಹತ್ತಲಿಕತ್ತಿತ್ತು. ಅತ್ತಿಯವರ ನರಳಾಟ ಕೇಳಿ ಸುಧಾಗ ಎಚ್ಚರಾತು. ರಾತ್ರಿಯೆಲ್ಲಾ ಮಲಗಿದ್ದೆಯಿಲ್ಲ. ಅದೇನ ಸಂಕಟಾ ಆಗಲಿಕತ್ತಿತ್ತೊ ಅವರಿಗೆ ಗೊತ್ತು. ಸಾಯೋ ಮುಂದಿನ ಸಂಕಟಾ ಭಾಳ ಕೆಟ್ಟ ಇರತದಂತಾರ ಇದ ಏನೊ ಅನಿಸ್ತು. ಆದ್ರ ಸುಧಾಗ ಅದ ಕ್ಷಣಾ ಅಂಥಾ ಪರಿಸ್ಥಿತಿಯೊಳಗ ನಗುನು ಬಂತು. ಅಲ್ಲಾ ತಮ್ಮಷ್ಟಕ್ಕ ತಾವು ಅತೀ ಶಾಣ್ಯಾರ ಅನಕೊಂಡ ದೀಡ ಪಂಡಿತರು “ ಸಾಯೊ ಸಂಕಟಾ ಭಾಳ ಕೆಟ್ಟ ಇರತದ “ ಅಂತ ಹೇಳತಿರತಾರ,” ಅಲ್ಲಾ ಸಾಯೊ ಸಂಕಟಾ ಅನುಭವಿಸಿ, ಅದನ್ನ ಹೇಳ್ಕೊಂಡವರು ಯಾರಿದ್ದಾರ ಜಗತ್ತಿನೊಳಗ.
ಸಾಯೊ ಸಂಕಟಾ ಅಂದ್ರ ಜೀವಾ ಹೊದ್ರನ ಅದಕ್ಕ ಮುಕ್ತಿ. ಅದರಿಂದ ಪಾರಾಗಿ ಬಂದ್ರ ಅದು ಸಾಯೊ ಸಂಕಟಾ ಹೇಂಗಾಗಲಿಕ್ಕೆ ಸಾಧ್ಯ ಅದ. ಆತ್ಮಕ್ಕ ಸಾವಿಲ್ಲಾ ಅಂತಾರ ಆದ್ರ ಆತ್ಮಗಳ ಜನ್ಮಾಂತರದ ಪಯಣದೊಳಗ ಹಿಂದಿನ ಸ್ಮರಣೆ ಅನ್ನೊದ ಯಾಕ ಇರಂಗಿಲ್ಲಾ. ಒಂದೊಂದ ಸಲಾ ಅನಿಸ್ತದ ಇಂಥಾದ್ದೊಂದ ಪೂರ್ವ ಸ್ಮರಣೆಯ ಅವಕಾಶ ಅದ ಅನ್ನೊದೊಂದ ಇದ್ದರ ನಮ್ಮ ಸಾವಿನ ಸಮಯದ ತಳಮಳ, ಸಂಕಟಾ ಹೇಂಗಿರತದ ಅನ್ನೊದನ್ನ ಅರಿಯಬಹುದಿತ್ತು. ಆದ್ರ ಸೃಷ್ಠಿಯ ಈ ನಿಗೂಢ ರಹಸ್ಯನ ಬಿಡಿಸಲಿಕ್ಕೆ ಸಾಧ್ಯನ ಇಲ್ಲಾ ಅಲ್ಲಾ?
ಹಿಂಗ ಏನೇನೊ ವಿಚಾರಗಳ ಬಲಿಯೊಳಗ ಸಿಕ್ಕೊಂಡ ಹೋದ ಸುಧಾಗ ಅತ್ತಿಯವರು ಕರೆದದ್ದ ಕೇಳಿ ಮತ್ತ ಲಕ್ಷ ಎಲ್ಲಾ ಅವರ ಕಡೆ ಹೋತು. ಹತ್ತರ ಹೋಗಿ ಏನು ಅಂತ ಕೇಳಿದ್ಲು. ಹೊಟ್ಟಿ ಹಿಡಕೊಂಡು ಸಂಕಟಾಗಲಿಕತ್ತದ ಅಂತ ಹೇಳಿದ್ರು. ಸ್ವಲ್ಪ ಗ್ಲೂಕೋಸ್ ಪಾವ್ಡರ್ ಹಾಕಿದ್ದ ನೀರು ಕುಡಿಸಿದ್ಲು. ಅವರಿಗೆ ಸಮಾಧಾನಾ ಆತೊ ಬಿಡ್ತೊ ಗೊತ್ತಿಲ್ಲಾ ಕಣ್ಣು ಮುಚ್ಚಿ ಮಲಗಿದ್ರು. ಅವರ ಆ ಪರಿಸ್ಥಿತಿ ನೊಡಿ ಸುಧಾಗ ಹೊಟ್ಟ್ಯಾಗ ಖಾರಾ ಕಲಿಸಿಧಂಗಾತು. ತಾವು ಐದು ದಿನದ ಕೂಸಿದ್ದಾಗನ ತಾಯಿನ್ನ ಕಳಕೊಂಡು ಸ್ವಾದರಮಾವನ ಹತ್ರ ಬೆಳೆದು ದೊಡ್ಡವರಾದ್ರು. ಯಾರರ ಬಾಣಂತ್ಯಾರು ಕೂಸು ಹುಟ್ಟಿದ ಕೂಡಲೆ ಸತ್ತು ಹೋದ್ರ, ಕೂಸಿನ ಸಲವಾಗಿ ಮರಗವರನ್ನ ನೋಡಿ “ ತಾಯಿ ಇಲ್ಲದ ಮಕ್ಕಳೆನ ಬೆಳದ ದೊಡ್ಡವರಾಗಂಗಿಲ್ಲೇನ, ಆಯುಷ್ಯ ಒಂದ ಘಟ್ಟಿದ್ರ ಸಾಕು ಹೇಂಗರ ಬೆಳದ ದೊಡ್ಡುವ ಆಗತಾವ, ಯಾಕ ನಾನ ಇಲ್ಲೇನು ಕಲ್ಲಗುಂಡಿನಂಘ. ನಂಗೇನ ಧಾಡಿ ಆಗೇದ ಆರಾಮ ಇದ್ದೇನಿ ಅಂತಿದ್ರು.
ಅವರ ಮಾತು ಕೇಳಿ ಖರೆ ಅನಿಸ್ತಿತ್ತು. ಹನ್ನೆರಡ ವರ್ಷಕ್ಕ ಸ್ವಾದರಮಾವನ ವರಾ ನೋಡಿ ಮದವಿ ಮಾಡಿಕೊಟ್ಟಿದ್ದಾ. ದೊಡ್ಡ ಮನಿತನ. ಮನಿತುಂಬ ಮಂದಿ. ಸುಧಾನ ಅತ್ತಿಯವರನ ಮನಿಗೆ ಹಿರೇಸೊಸಿ. ಅತ್ತಿ, ನಾದನಿಯಂದ್ರು ಭಾಳ ಖಡಕ ಇದ್ರಂತ. ಭಾಳ ತ್ರಾಸ ಕೊಡತಿದ್ರಂತ. ಆದ್ರ ತಾಯಿ ಇಲ್ಲದ ಇವರಿಗೆ ಇನ್ನೊಬ್ಬರನ ಮರ್ಜಿ ಕಾಯ್ಕೊಂಡ ಇರೊದು ರೂಢಿನ ಇತ್ತು. ಎಲ್ಲಾರಿಗು ತಗ್ಗಿ ಬಗ್ಗಿ ನಡಕೊತಿದ್ರಂತ. ಅತ್ತಿ ಮನ್ಯಾಗ ತ್ರಾಸ ಅನುಭೋಗಿಸಿ ಮಕ್ಕಳಿಂದ ಸುಖಾ ಕಂಡ ಜೀವಾ. ಶಾಂತ ಸ್ವಭಾವದ ಅವರು ಯಾರಿಗೂ ಒಂದ ದಿನಾ ತಪ್ಪಿನು ಬಿರಸು ಮಾತಾಡಿದ್ದಿಲ್ಲಾ. ತಾವು ಅನುಭೋಗಿಸಿದ ತ್ರಾಸನ್ನ ತಮ್ಮ ಸೊಸೆಯಂದ್ರು ಅನುಭೋಗಸೊದ ಬ್ಯಾಡಂತ, ತಮ್ಮ ಸೊಸೆಯಂದ್ರನ್ನ ತವರು ಮನಿ ಮರಸೊ ಹಂಗ ಛೊಲೊತ್ನ್ಯಾಗಿ ನೋಡಿಕೊಂಡಿದ್ರು. ಆದರುನು ಸುಧಾನ ವಿಷಯಕ್ಕ ಬಂದ್ರ ಯಾಕೊ ಅವರು ಒಂದೊಂದ ಸಲಾ ನಿಷ್ಠೂರ ಆಗತಿದ್ರು.
ಐದು ಮಂದಿ ಸೊಸೆಯಂದ್ರೊಳಗ ಸುಧಾನ ಹೀರೆ ಸೊಸಿ. ಬ್ಯಾರೆ ಯಾರು ಹೇಂಗಿದ್ರು, ಬೇಕಂತ ಮಾಡಿದ್ದ ತಪ್ಪನ್ನ ಸುಧ್ಧಾ ಅಲಕ್ಷ ಮಾಡತಿದ್ರು. ಅದು ಅವರವರ ಸ್ವಭಾವ ಎನ ಮಾಡಲಿಕ್ಕಾಗತದ ಅಂತಿದ್ರು. ಆದರ ಸುಧಾ ಯಾವತ್ತಾದ್ರು ಮರೆತು ಮಾಡಿದ್ದ ತಪ್ಪಿಗೆ ಆಕಿಮ್ಯಾಲೆ ಸಿಟ್ಟಿಗೆದ್ದು ಅಳಿಸಿ ಕೈಬಿಡತಿದ್ರು. ಆದ್ರ ಆಕಿಯಿಂದ ಎನರೆ ಹೆಚ್ಚು-ಕಮ್ಮಿಯಾದರ ಅದು ಆಕಿ ಬೇಕಂತ ಮಾಡಿದ್ದು ಅನ್ನೊಹಂಗ ನಡ್ಕೊತಿದ್ರು. ಹಂಗಂತ ಅವರು ಆಕಿನ್ನ ಯಾವತ್ತು ಅಂದು-ಆಡಿ ಮನಸಿಗೆ ನೋವು ಮಾಡತಿದ್ದಿಲ್ಲಾ. ಅಥವಾ ಮಂದಿ ಮುಂದ ಆಕಿನ್ನ ಬೈತಿದ್ದಿಲ್ಲಾ. ಆದರ ಸತ್ತು ಹೋಗಬೇಕನ್ನೊ ಅಷ್ಟು ಹೀನಾಯವಾದಂಥಾ ನಿರ್ಲಕ್ಷ ಮಾಡತಿದ್ದರು. ಸುಧಾನ ಯಾವ ಮಾತಿಗು ಪ್ರತಿಕ್ರೀಯಾ ತೊರಸಲಾರದ, ಉಳಿದವರ ಜೋಡಿ ಮಾತ್ರ ನಕ್ಕೊತ ಇರತಿದ್ರು. ಅಂಥಾ ಹೊತ್ತಿನ್ಯಾಗ ಸುಧಾ ಭಾಳ ನೋವು ಸಂಕಟಗಳಿಂದ ತಳಮಳಿಸ್ತಿದ್ಲು..
ತುಂಬಿದ ಮನಿಯೊಳಗ ಒಂದೊಂದ ಸಲಾ ಆಕಿ ಒಬ್ಬಂಟಿಗಳಾಗಿ ಬಿಡತಿದ್ಲು. ಸುಧಾ ತನ್ನ ಅಮ್ಮನ್ನ ಅವರಲ್ಲೆ ಕಾಣೊ ಪ್ರಯತ್ನ ಮಾಡತಿದ್ಲು. ಆದರ ಎಲ್ಲೊ ಒಂದ ಕಡೆ ಆಕಿಯ ಆ ಪ್ರಯತ್ನ ಅಪೂರ್ಣನ ಉಳಿದು ಬಿಡತಿತ್ತು. ಕಡಿಕು ಅವರನ್ನ ಅರ್ಥ ಮಾಡಕೊಳ್ಳೊದ ಆಕಿಯಿಂದ ಕಡೆಯಿಂದ ಸಾಧ್ಯನ ಆಗಲಿಲ್ಲಾ. ಅವರದು ಒಂಥರಾ ವಿಚಿತ್ರ ಸ್ವಭಾವ. ಹೊರಗಿನ ಮಂದಿ ಮುಂದ " ನನ್ನ ಕಡಿಗಾಲಕ್ಕ ಆಗಾಕಿ ಅಂದ್ರ ನನ್ನ ಹಿರೆ ಸೊಸಿನ, ನಾಳೆ ನಾ ಸತ್ತಿಂದ ನನ್ನ ಹೆಣ್ಣಮಕ್ಕಳು ತವರುಮನಿ ಅಂತ ಸುಖಾ ಕಾಣೊದು ಆಕಿಯಿಂದನ,ಅಷ್ಟು ನಮ್ಮವರು ಅನ್ನೊ ಪ್ರೀತಿ ಅಂತಃಕರಣ ಅದ ಆಕಿಯಲ್ಲೆ , ಸುಧಾನಂಥಾ ಸೊಸಿ ಸಿಗಲಿಕ್ಕೆ ಪುಣ್ಯ ಮಾಡಿರಬೇಕು" ಅಂತ ಹೊಗಳತಿದ್ರಂತ ನಾನು ಎಷ್ಟೊ ಮಂದಿ ಬಾಯಿಲೆ ಕೇಳೆನಿ . ಒಂದೊಂದ ಸಲಾ ಅನಿಸ್ತಿರತದ ಯಾರನ್ನು ಭಾಳ ಹಚ್ಕೊಬಾರದು, ಯಾರನ್ನು ಪ್ರೀತಿ ಮಾಡಬಾರದು ಅಂತ ಆದರ ಸುಧಾನಂಥಾ ಭಾವನಾ ಜೀವಿಗೊಳಿಗೆ ಹಿಂಗ ನಿರ್ಲಿಪ್ತ ಇರಲಿಕ್ಕೊಂದು ಸಾಧ್ಯನ ಆಗಂಗಿಲ್ಲಾ.
ಇಂಥವರಿಗೆ ಪ್ರೀತಿ ಹೆಸರಿನೊಳಗ ನಿರಂತರ ನೋವು ಸಿಗತಿರತದ. ಒಂದೊಂದ ಸಲಾ ತಡಕೊಂಡು ತಡಕೊಂಡು ತಾಳ್ಮೇಯ ಕಟ್ಟಿ ಒಡದಹೋಗಿ ತನ್ನ ಬ್ಯಾಸರಾ,ನೋವನ್ನ ಹೊರಗ ಹಾಕಿದಾಗ, ಆಕಿಗೆ ಸಿಗೊ ಉತ್ತರ ಕೇಳಿ ನಗು ಬರತಿತ್ತು. ಒಂದ ಸಲಾ ಹಿಂಗಾದಾಗ ಸುಧಾನ ನಾದಿನಿ " ವೈನಿ ಅಮ್ಮಗ ಎಲ್ಲರಕಿಂತಾ ಹೆಚ್ಚು ನಿಮ್ಮ ಮ್ಯಾಲೆ ಭಾಳ ಪ್ರೀತಿ ಅದ. ನೀವಿಲ್ಲಾಂದ್ರ ಆಕಿಗೆ ಸಮಾಧಾನ ಇರುದಿಲ್ಲಾ. ನಿಮ್ಮ ಮ್ಯಾಲೆ ಪ್ರೀತಿ ಅದ ಅನ್ನೊ ಸತ್ತಾದಿಂದನ ನಿಮ್ಮ ಮ್ಯಾಲೆ ಸಿಟ್ಟು ಮಾಡಕೊತಾಳ. ನಿಮಗ ಮಾಡಿಧಂಗ ಯಾರಿಗು ಮಾಡುದಿಲ್ಲಾ ಆಕಿ. ಸಮಾಧಾನ ಮಾಡಕೊರಿ ಅಂತ" ಆಕಿನ್ನ ಸತೈಸೊ ಪ್ರಯತ್ನ ಮಾಡಲಿಕತ್ತಿದ್ಲು. ಆದ್ರ ಒಂದ ಮಾತು ಅರ್ಥ ಆಗುದಿಲ್ಲಾ ನಂಗ " ಪ್ರೀತಿ ಅದ ಅಂತನ ಸಿಟ್ಟ ಮಾಡಕೊತಾರ, ಹಕ್ಕುನಿಂದ ಮಾತಾಡತಾರ, ಸತ್ತಾದಿಂದ ಬೈತಾರ ಅನ್ನೊದು ಎಷ್ಟು ವಿಚಿತ್ರ ಅನಿಸ್ತದ.
ಅಲ್ಲಾ ನಾವು ಯಾರನ್ನ ಪ್ರೀತಿ ಮಾಡತೇವಿ ಅವರಿಗೆ ನೋವಾಗಲಾರಧಂಗ, ಯಾವಾಗಲು ಸಂತೋಷದಿಂದ ಇರೊಹಂಗ ನೋಡ್ಕೊಬೇಕು. ಒಂದ ವ್ಯಾಳೆ ಖರೆ ಖರೆನು ತಪ್ಪು ಮಾಡಿದ್ರುನು ಪ್ರೀತಿಯೊಳಗ ಸಂಭಾಳಿಸ್ಕೊಂಡು ಕ್ಷಮಿಸೊದಿರತದ. ನಾವು ಪ್ರೀತಿಸೊರನ್ನ ಅರ್ಥ ಮಾಡ್ಕೊಳ್ಳೊದಿರತದ. ತಪ್ಪು ತಿಳಕೊಂಡು ನೋವು ಕೊಡೊದಲ್ಲಾ. ಪ್ರೀತಿಸಿದವರಿಗೆ ನೋವು ಕೊಡೊದಕ್ಕ ಪ್ರೀತಿ ಅಂತನರ ಹೆಂಗ ಅನ್ಬೇಕು? ಈ ಪ್ರೀತಿಯೊಳಗ ಸತ್ತಾ ಅದ, ಹಕ್ಕ ಅದ ಅಂತ ಕುತ್ತಿಗಿ ಕೊಯ್ಯಿಸಿಗೊಳ್ಳೊದ ಭಾಳ ಇರತದ. ಒಂಥರಾ ಅಮೄತದೊಳಗ ವಿಷಾ ಬೆರಿಸಿ ಕುಡಿಸಿಧಂಗ.
ಇತ್ತಿತ್ಲಾಗ ಸುಧಾನು ಪರಿಸ್ಥಿತಿನ ಒಪ್ಕೊಂಡು ಸ್ವಿಕಾರ ಮಾಡಿಕೊಂಡ ಬಿಟ್ಟಿದ್ಲು. ಯಾಕಂದ್ರ ಜೀವನದಾಗ ನಾವು ಕೆಲ್ವೊಂದಿಷ್ಟನ್ನ ಯಚ್ಛಾವತ್ತ ಸ್ವಿಕಾರ ಮಾಡಿದ್ರನ ಖುಷಿಯಿಂದ ಇರಲಿಕ್ಕೆ ಸಾಧ್ಯ ಅದ. ಅದು ಬಿಟ್ಟು ಇದ್ದಿದ್ದರ ಜೊಡಿ ರಾಜಿ ಅಥವಾ ಒಪ್ಪಂದ ಮಾಡ್ಕೊತೆನಿ ಅಂದ್ರ ಜೀವನ ದುಸ್ತಾರ ಆಗತದ. ಆದರ ಸುಧಾನ ಮನಸ್ಸು ಒಂಥರಾ ನಿರ್ಲಿಪ್ತ ಆಗಿತ್ತು. ಇಗಿಗ ಆಕಿಗೆ ಯಾವ ಪ್ರೀತಿನು ಆಡಿ ಅಂದು ತೊರಿಸ್ಲಿಕ್ಕೆ ಹೆದರಿಕಿ ಆಗತಿತ್ತು. ಯಾಕಂದ್ರ ಅದು ಕೊಡೊ ನೋವನ್ನ ಸಹಿಸೊ ಶಕ್ತಿ ಸುಧಾನಲ್ಲೆ ಇರಲಿಲ್ಲಾ.
ಈಗ ಮೂರ ತಿಂಗಳಿಂದ ಸುಧಾನ ಅತ್ತಿ ಹಾಸಿಗಿ ಹಿಡದಿದ್ರು. ಸುಡಗಾಡು ಕೆಮ್ಮು ಇವರ ಜೀವಾ ತಿನಲಿಕತ್ತಿತ್ತು. ಎಲ್ಲ ಮಕ್ಕಳು ಸೊಸೆಯಂದ್ರು " ಅಮ್ಮಗ ನಮ್ಮ ಕಡೆ ದೊಡ್ಡೂರಾಗ ಬಗಿಹರಿಯುದಿಲ್ಲಾ ಅಂತ ತಮ್ಮ ತಮ್ಮ ಜವಾಬ್ದಾರಿನ ಹಾರಿಸಿಕೊಂಡಿದ್ರು. ಆದ್ರ ಸುಧಾ ಅತ್ತಿನ್ನ ಕೈಬಿಟ್ಟಿದ್ದಿಲ್ಲಾ. ಅವರು ಅನ್ನೊಹಂಗ ಕಡಿಗಾಲಕ್ಕ ಸುಧಾನ ಅವರ ಅವಿರತ ಸೇವಾಕ್ಕ ನಿಂತಿದ್ಲು. ಬರಬರತ ಅವರ ಆರೊಗ್ಯ ಭಾಳ ಕ್ಷೀಣಿಸಲಿಕತ್ತಿತ್ತು. ಈಗ ಮೂರದಿನದಿಂದ ಟೊಂಕದಿಂದ ಪಾದದ ತನಕಾ ದೇಹ ನಿಷ್ಕ್ರೀಯ ಆಗಿತ್ತು. ಎಲ್ಲಾ ಮಕ್ಕಳು ಮೊಮ್ಮಕ್ಕಳು ಬಂದಿದ್ರು. ಬಾಜು ಮನಿ ವಾಸಣ್ಣಕಾಕಾ " ಯಾವ ಹೊತ್ತಿನ್ಯಾಗ ಕಡಿ ಘಳಿಗ್ಯಾಗತದ ಹೇಳಿಕ್ಕಾಗುದಿಲ್ಲಾ, ಮನಿ ಮಂದಿಯೆಲ್ಲಾ ವೈನಿ ಬಾಯಾಗ ಗಂಗಾ ಹಾಕಿಬಿಡ್ರಿ. " ಅಂತ ಹೇಳಿದ್ದಕ್ಕ ಆವತ್ತ ಪೂಜಿ ಆದಿಂದ ಗಂಗಾದ್ದ ಗಿಂಡಿ ತಗದು ಮಕ್ಕಳು, ಮೊಮ್ಮಕ್ಕಳು, ಅಳಿಯಂದ್ರು ,ಸೊಸೆಯಂದ್ರು ಒಬ್ಬೊಬ್ಬರ ಬಾಯಾಗ ನೀರ ಹಾಕಿದ್ರು.
ಆದ್ರ ಸುಧಾ ಮಾತ್ರ ಹಾಕಲಿಲ್ಲಾ. ಆಕಿಗೆ ಅತ್ತಿಯವರು ತನಗ ಮಾಡಿದ್ದ ಪಕ್ಷಪಾತ ನೆನಪಿಗೆ ಬಂದು ಯಾವುದೊ ಒಂದು ಅವ್ಯಕ್ತ ಹಟಾ ಮನಸ್ಸಿನೊಳಗ ಹುಟ್ಟಿಕೊಂಡು ಆಕಿನ್ನ ತಡಿಲಿಕತ್ತಿತ್ತು. ಯಾವಾಗಲು ತನ್ನ ತಪ್ಪಿರಲಿ ಬಿಡಲಿ, ಎಷ್ಟಂದ್ರು ಹಿರಿಯರು ಅಂತ ಸುಧಾನ ಸೊತು ಅವರನ್ನ ಒಲಿಸಿ ಮಾತಡಸ್ತಿದ್ಲು. ಆದ್ರ ಇಂಥಾ ಒಂದ ಸಮಯದಾಗ ಆಕಿಗೆ ಯಾವುದೊ ಒಂದು ಹ್ಯಾಂವ ಹುಟ್ಟಗೊಳ್ಳಿಕತ್ತಿತ್ತು. ಸುಧಾನ ಮನಸು " ತಮಗ ಬೇಕಾದವರೆಲ್ಲಾ ನೀರಹಾಕ್ಯಾರ, ನಂದೇನದ ನಾ ಯಾಕ ಬೇಕ ಇವರಿಗೆ " ಅಂತ ಮಂಡತನದಿಂದ ಯೋಚಿಸಿಲಿಕತ್ತಿತ್ತು.
ಎಲ್ಲಾರು ಲಗೂನ ಒಂದ ಅಂತ್ಯ ಸಿಕ್ರ ಸಾಕು ಬಂದ ಕೆಲಸಾ ಮುಗಿಸಿ ತಮ್ಮ ತಮ್ಮ ಹಾದಿ ಹಿಡಿಲಿಕ್ಕೆ ತುದಿಗಾಲಿನ್ಯಾಗ ನಿಂತಿದ್ರು ಇಂಥಾದ್ರೊಳಗ ಸುಧಾ ಅತ್ತಿಗೆ ನೀರ ಹಾಕಿದ್ದು ಬಿಟ್ಟಿದ್ದು ಯಾರಿಗೆ ಲಕ್ಷ ಇರಬೇಕು. ಈ ಮಾತಿಗೆ ಒಂದು ವಾರ ಆಗಿತ್ತು. ಕುಟು ಕುಟು ಜೀವ ಇನ್ನು ಉಸಿರ್ಯಾಡಲಿಕತ್ತಿತ್ತು. ನೋಡಿ ಮಾತಾಡಿಸಿ ಹೋಗಲಿಕ್ಕೆ ಬಂದವರೆಲ್ಲಾ ಹಿಂದಕಿನ ಮಂದಿ ಭಾಳ ಘಟ್ಟಿ ಜೀವಾ ಭೂಮಿ ೠಣಾ ತೀರಬೇಕಲ್ಲಾ ಅಂತ ಅಂದು ಹೋಗತಿದ್ರು. ಇಷ್ಟ ಜಿರಿಜಿರಿ ಆದ್ರು ಯಾಕ ಇನ್ನು ಜೀವ ಹಿಡಕೊಂಡದ ಅಂತ ಮನ್ಯಾಗ ಎಲ್ಲಾರಗೂ ಚಿಂತಿ ಹತ್ತಿತ್ತು. ಎಲ್ಲೆ ಯಾವದರ ಆಶಾ ಇಟಗೊಂಡಾಳೇನೊ ಅಂತ ಮಾತಾಡ್ಕೊಂಡು ಹೋಗಿ " ನಿನ್ನುವು ಏನ ಇಚ್ಛಾ ಇದ್ರು ಪೂರ್ಣ ಮಾಡ್ತೇವಿ ನೀ ಚಿಂತಿ ಮಾಡಬ್ಯಾಡಾ, ಏನರೆ ಇದ್ರ ಹೇಳು " ಅಂದ್ರು. ನಿಶ್ಚಲವಾದ ಶರೀರದಾಳೊಗಿಂದ ಉಸಿರಾಡೊ ಸಪ್ಪಳೊಂದ ಕೇಳಿಸ್ಲಿಕತ್ತಿತ್ತು. ಅಶಕ್ತ ಕಣ್ಣುಗೊಳ ತನ್ನ ಸುತ್ತಲ ನಿಂತವರನ್ನ ದಿಟ್ಟಿಸಿನೋಡಲಿಕತ್ತಿತ್ತು.
ರಾತ್ರಿ ಊಟಾ ಆಗಿ ಎಲ್ಲಾರು ಮಲಗಿಂದ ಸುಧಾನು ಎಲ್ಲಾ ಕೆಲಸಾ ಮುಗಿಸಿ ಅತ್ತಿಯವರ ಖೊಲಿಗೆ ಬಂದ್ಲು. ಅವರು ಕಣ್ಣು ಮುಚ್ಚಿ ಮಲಗಿದ್ರು. ಅಲ್ಲೆ ಕೆಳಗ ಚಾಪಿ ಹಾಸಿಕೊಂಡು ಮಲಗಿದ್ಲು. ಮನಸ್ಸಿಗೆ ನಿದ್ದಿ ಬ್ಯಾಡಾಗಿದ್ರು ದಣಿದ ದೇಹ ಲಗೂನ ನಿದ್ದಿಗೆ ಜಾರಿತ್ತು. ಸರ್ರಾತ್ರಿಯಾಗಿರಬೇಕು ಏನೊ ಗೊರ್ ಗೊರ್ ಸಪ್ಪಳ ಕೇಳಿ ಎಚ್ಚರಾಗಿ ಸುಧಾ ಎದ್ದು ಕೂತು ಅತ್ತಿಯವರ ಕಡೆ ನೋಡಿದ್ಲು. ಅವರು ಇಕಿ ಕಡೆನ ನೋಡ್ಲಿಕತ್ತಿದ್ರು. ಒಂದ ಕ್ಷಣಾ ಸುಧಾಗ ಹೆದ್ರಿಕಿ ಆತು ಆದ್ರುನು ಸಂಭಾಳಿಸಿಕೊಂಡು ಹತ್ತರ ಹೋಗಿ ಏನರೆ ಬೇಕಾಗಿತ್ತೇನು ಅಂತ ಕೇಳಿದ್ಲು. ಅವರ ಆ ನೋಟದೊಳಗ ಏನೊ ಒಂದು ಬೇಡಿಕೆ ಇತ್ತು. ಸುಧಾನ್ನ ಹತ್ತರ ಬಾ ಅಂತ ಸನ್ನಿ ಮಾಡಿ ಕರದ್ರು. ಭಾಳ ತ್ರಾಸ ಪಟ್ಟು ತಮ್ಮ ಕೈ ಎತ್ತಿ ಬಾಯಿ ತನಕಾ ತಂದು ನೀ ಯಾಕ ನಂಗ ನೀರ ಹಾಕಿಲ್ಲಾ ಅಂತ ಸನ್ನಿ ಮಾಡಿ ಕೇಳಿದ್ರು.
ಸುಧಾಗ ಆ ಒಂದ ಘಳಿಗಿ ಆಶ್ಚರ್ಯ ಆತು. ಇತ್ಲಾಕಡೆದ್ದ ಅರುವನ ಇಲ್ಲಾ ಅವರಿಗೆ ಅಂತ ತಿಳಕೊಂಡಿದ್ಲು. ಅಂಥಾ ಸಾವಿನ ಸಂಕಟದ ಹೊತ್ತಿನ್ಯಾಗು ತಾನು ನೀರು ಹಾಕಲಾರದ್ದು ಅವರ ಗಮನಕ್ಕ ಅದ ಅಂತ ಗೊತ್ತಾಗಿ ಸುಧಾಗ ದಂಗ ಬಡಧಂಗ ಆಗಿತ್ತು . ಹಂಗ ಕಣ್ಣು ಬಿಟ್ಟಗೊಂಡ ಅವರು ಇನ್ನು ಏನ ಹೇಳತಾರೊ ಕೇಳಬೇಕಂತ ಮುಂದ ಹೋಗಿ ಹತ್ರ ಕೂತ್ಲು. ಅವರು ಇಕಿ ಕೈ ಹಿಡಕೊಂಡು " ಇನ್ನೆಷ್ಟ ದಿನಾ ನನ್ನ ಹಿಂಗ ಇಟಗೊತಿ. ಈ ಸಲಾ ನೀನ ಗೆದ್ದಿ ನಾ ಸೋತೆ, ಇನ್ನ ಬಾಯಾಗ ನೀರ ಹಾಕಿ ನನ್ನ ಕಳಿಸಿಕೊಡು,ನಿನ್ನ ಕೈಯ್ಯಾಗಿನ ನೀರು ಕುಡಿದ ಹೊರತು ನಂಗ ಈ ದೇಹದಿಂದ ಮುಕ್ತಿಯಿಲ್ಲಾ, ನಾ ಹೋಗತೇನಿ ಇನ್ನ" ಅಂತ ದೈನಾಸಬಟಗೊಂಡ ಕೇಳಿದ್ರು.
ಅದನ್ನ ಕೇಳಿ ಸುಧಾಗ ಎಲ್ಲಾನು ವಿಷಯನು ನಿಚ್ಚಳ ಆಧಂಗಾತು, ಇಷ್ಟ ದಿನಾ ಆ ಕುಟು ಕುಟು ಜೀವಾ ಯಾವದರ ನಿರೀಕ್ಷೆಯೊಳಗ ಇತ್ತಂತ. ಆ ತಾಯಿಯ ಆ ಮಾತಿನಿಂದ ಸುಧಾಗ ಇಷ್ಟ ದಿನದಿಂದ ಎಲ್ಲಿತ್ತೊ ಏನೊ ಆ ದುಖಃ ,ಅತ್ತಿಯವರ ಕೈ ಹಿಡಕೊಂಡ ದುಖಿಃಸಿ ದುಖಿಃಸಿ ಅಳಲಿಕತ್ಲು. ಅತ್ತೆಯ ಪ್ರೀತಿಯ ಅರಿವಾಗಿತ್ತು ಆಕಿಗೆ. ಅವರ ಕೈ ಆಕಿಯ ತಲಿ ನೆವರಸಲಿಕತ್ತಿತ್ತು. ಅಲ್ಲೆ ಮಾಡದಾಗ ಇದ್ದ ಗಂಗಾನ ಗಿಂಡಿ ತಗದು ಎರಡು ಗುಟುಗು ನೀರು ಹಾಕಿದ್ಲು. ಅತ್ತಿಯವರ ಮುಖದೊಳಗ ಕಂಡು ಕಾಣದ ಮಂದಾಹಾಸ ಕಾಣಿಸ್ತು. ಅವರು ಹಂಗ ಕಣ್ಣು ಮುಚ್ಚಿದ್ರು. ಮೂರನೆ ಗುಟುಕು ನೀರು ಒಳಗ ಹೋಗಲೇಯಿಲ್ಲಾ. ತಮ್ಮ ಇಹ ಜೀವನದ ಪರ್ಲನ್ನ ಹರಕೊಂಡು ಅವರು ದೂರ ಹೋಗಿಬಿಟ್ಟಿದ್ರು.
ದಿನಾ ಯಾರಿಗಾಗಿ ನಿಲ್ಲತಾವ, ಒಂದೊಂದ ದಿನ ಕರ್ಮಗೋಳು ಸಾಗಲಿಕತ್ತಿದ್ವು. ಇದ್ದಾಗ ಹತ್ತರ ಇಟಗೊಂಡ ಒಂದ ತುತ್ತು ಅನ್ನಾ ಹಾಕಲಾರದ ದೊಡ್ಡ ಸಿಟಿಯೊಳಗಿನ ಮಕ್ಕಳು ಇವತ್ತ ಊರ ಮಂದಿ ಮುಂದ ತಮ್ಮ ದೊಡ್ಡಸ್ತನಾ ತೊರಿಸಲಿಕ್ಕೆ ನೀರಿನಂಘ ರೊಕ್ಕಾ ಖರ್ಚ ಮಾಡಿ ಹೌದ ಹೌದ ಅನಿಸ್ಕೊಳ್ಳಿಕತ್ತಿದ್ರು. ಎಲ್ಲಾರಿಗೂ ನಿರಾಳ ಆಧಂಗ ಆಗಿತ್ತು ಯಾವಾಗ ಎಲ್ಲ ಮುಗಿಸಿ ತಮ್ಮ ತಮ್ಮ ಜಾಗಾಕ್ಕ ಹೋಗಿ ಸೇರಕೊಂಡೆವೊ ಅಂತ ಚಡಪಡಸಲಿಕತ್ತಿದ್ರು. ಸತ್ತ ಹದಿಮೂರನೆ ದಿನದ್ದ ತನಕಾ ಸತ್ತವರ ಆತ್ಮ ಮನಿ ಮಾಳಗಿ ಮ್ಯಾಲೆ ಕುತಿರತದ. ಹದಿಮೂರನೆ ದಿನದ್ದ ಕರ್ಮ ಮುಗಿಸಿದ ಮ್ಯಾಲೆ ಊಟಾ ಮಾಡಕೊಂಡ ತನ್ನ ಕರ್ಮದ ಹಾದಿ ಹಿಡಿತದ ಅಂತ ಯಾರೊ ಹೇಳಿದ್ದು ನೆನಪಾಗಿ ಸುಧಾ ಮನಿ ಮಾಳಗಿ ಮ್ಯಾಲೆ ಹೊದ್ಲು.
ಸಂಜಿಯ ಮಂದ ಗಾಳಿ ಬಿಸಲಿಕತ್ತಿತ್ತು. ಇಲ್ಲೆ ಎಲ್ಲೊ ಅತ್ತಿಯವರ ಆತ್ಮ ಇರಬಹುದು, ನನ್ನ ನೋಡ್ತಿರಬಹುದಲ್ಲಾ ಅನಕೊಂಡು ಸುಧಾ,ಒಂದ ಘಳಿಗಿ ಕಣ್ಣು ಮುಚ್ಚಿ ಅತ್ತಿಯವರನ್ನ ನೆನಿಸ್ಕೊಂಡು, ಅಮ್ಮ ನಾ ಯಾವುದೇ ತಪ್ಪು ಮಾಡಿದ್ರು ಕ್ಷಮಿಸ್ರಿ, ನೀವು ಹಾಕಿ ಕೊಟ್ಟ ಹಾದಿಯೊಳಗನ ಇನ್ನ ಈ ಮನಿಯ ಜವಾಬ್ದಾರಿಯನ್ನ ನಿಭಾಯಿಸ್ತೇನಿ.ನಿಶ್ಚಿಂತಿಯಿಂದ ಹೋಗ್ರಿ, ನಿಮ್ಮ ಪ್ರೀತಿಯನ್ನ ಅರಿಲಾರದ ಹೋದೆ ನಾನು." ಅಂತ ಆ ತಾಯಿಗೆ ಅಂತಿಮ ನಮನಗಳನ್ನ ಮಾಡತಿದ್ಧಂಗ ಆಕಿಗೆ ಅರಿವಿಲ್ಲಧಂಗ ಕಣ್ಣಾಗ ನೀರು ಒಂದಸಮನಾ ಧಾರಿ ಹಂಗ ಹರಿಲಿಕತ್ವು. ಅದೆ ಕ್ಷಣಕ್ಕ ತಂಗಾಳಿಯ ಅಲೆಯೊಂದು ಮುಖದ ಮ್ಯಾಲೆ ತೀಡಿ ಹೋಯ್ತು. ಸುಧಾಗ ತನ್ನ ಅತ್ತಿಯವರನ ಹತ್ತಿರ ಬಂದು ಕಣ್ಣಿರೊರಸಿ ಸಮಾಧಾನ ಮಾಡಿಧಂಗನಿಸಿತು. ಅವರು ಇಲ್ಲೆ ಎಲ್ಲೊ ತನ್ನ ಸುತ್ತಲಿದ್ದಾರ ಅನಿಸಿ, ತಂಗಾಳಿಯಾಗಿ ತನ್ನ ಮೈದಡವಿ ಸಂತೈಸಿಲಿಕತ್ತಾರ ಅನ್ನಿಸಿ ತಾಯಿ ಮಡಿಲಿನ ಸುಖಾ ಅನುಭವಿಸ್ತಾ ಸಂಜೆಯ ತಂಗಾಳಿಗೆ ಮೈಯೊಡ್ಡಿ ಹಂಗ ಮಾಳಿಗೆಯ ಕುಂಬಿಯ ಮ್ಯಾಲೆ ತಲಿ ಇಟ್ಟು ಕಣ್ಣು ಮುಚ್ಚಿದ್ಲು.
ಕತೆ ಟಿಪಿಕಲಿ ಛಂದ ಅದ..ಭಾಷಾಪ್ರಯೋಗ ಗಮನಸೆಳೀತ್ರೀ ದೇಸಾಯರ..
ನಿಮ್ಮಿಂದ ಇನ್ನೂ ಹೆಚಿಗಿ ಅಪೇಕ್ಷಾ ಮಾಡತೇವಿ..
Thank u so much ri……
Thank u ri…..
Nice story…. i like it
ಅದ್ಭುತವಾಗಿದೆ ರೀ…… ತುಂಬಾ ಇಷ್ಟ ಆಯ್ತು.
ಧನ್ಯವಾದಗಳು…….