ಕಾದಂಬರಿ

ಕೆಂಗುಲಾಬಿ (ಭಾಗ 12): ಹನುಮಂತ ಹಾಲಿಗೇರಿ

 
 
ಮರುದಿನ ನಮ್ಮನ್ನು ಹುಡುಕಿಕೊಂಡು ರತ್ನಮ್ಮನ ಪ್ರಿಯಕರನೆನಿಸಿಕೊಂಡಿದ್ದ, ರತ್ನಮ್ಮ ಇಲ್ಲದಿದ್ದಾಗ ಗಲ್ಲೆ ಮೇಲೆ ಕೂಡ್ರುತ್ತಿದ್ದ ಧರ್ಮಣ್ಣ ಪೊಲೀಸ್ ಸ್ಟೇಷನ್ನಿನೊಳಗೆ ನಾವಿರುವ ಕಡೆ ಬಂದಿದ್ದ. ಆತನನ್ನು ಅದ್ಹೇಗೋ ಪೋಲೀಸರು ಒಳಗೆ ಬಿಟ್ಟಿದ್ದರು. ಇಲ್ಲಿಂದ ಬಿಡಿಸಿಕೊಂಡು ಹೋಗಲು ಸಾವಿರಾರು ರೂಪಾಯಿ ಖರ್ಚಾಗುತ್ತವೆ. ರತ್ನಮ್ಮ ಹತ್ತು ಸಾವಿರ ಹೊಂದಿಸಿ ನಿಮ್ಮನ್ನು ಬಿಡಿಸಿಕೊಳ್ಳಾಕ ತಯಾರದಾಳ. ನೀವು ಮೇಲಿನ ಖರ್ಚುಗಳಿಗಾಗಿ ಪ್ರತಿಯೊಬ್ಬರು ಐದೈದು ನೂರು ಕೊಡಬೇಕು ಎಂದು ಕರಾರು ಮಾಡಿದ. ಆದರೆ ನಮ್ಮಲ್ಲಿ ಯಾರೊಬ್ಬರಲ್ಲಿಯೂ ಹಣವಿರಲಿಲ್ಲ. ಅದು ಅವನಿಗೂ ಗೊತ್ತಿತ್ತು. ‘ಈಗ ನೀವು ಹಣ ಕೊಡ್ರಿ. ನಮ್ಮನ್ನು ಇಲ್ಲಿಂದ ಬಿಡಿಸಿಕೊಂಡ ಹೋದ ಮೇಲೆ ಬೇಕಾದರೆ ದುಡಿದು ನಿಮ್ಮ ಹಣವನ್ನು ಮುಟ್ಟಿಸುತ್ತಿವಿ' ಎಂದು ನಾನು ಪರಿ ಪರಿಯಿಂದ ಬೇಡಿಕೊಂಡೆ. ಆದರೆ ಅದಕ್ಕೆ ಧರ್ಮಣ್ಣ ಮಣಿಯಲಿಲ್ಲ. ಆಗ ರೂಪಕ್ಕ ಧರ್ಮಣ್ಣನಿಂದಲೆ ಮೊಬೈಲ್ ಇಸಿದುಕೊಂಡು ಫೋನ್ ಮಾಡಿದಳು. ಅತ್ತ ಕಡೆಯಿಂದ ಬಾಬು ಮಾತಾಡುತ್ತಿದ್ದ. ರೂಪಕ್ಕ ಅವನಿಗೆ ಐದು ಸಾವಿರ ರೂ. ಹಣ ರೆಡಿ ಮಾಡಲು ಕೇಳಿಕೊಂಡಳು. ಬಾಬು ‘ಕಷ್ಟ ಕಣೆ' ಎನ್ನುವುದು ಕೇಳುತ್ತಿತ್ತು. ಆದರೆ ರೂಪಕ್ಕ ಪಟ್ಟು ಬಿಡದೆ ವಾರದ ಮಟ್ಟಿಗೆ ಹೆಂಗಾದರೂ ಮಾಡಿ ಹಣ ಹೊಂದಿಸಬೇಕೆಂದು ದೈನ್ಯತೆಯಿಂದ ಕೇಳಿಕೊಳ್ಳುತ್ತಿದ್ದಳು. ಸರಿ ಹಂಗಾರ, ನೂರು ರೂಪಾಯಿಗೆ ಹತ್ತು ರೂಪಾಯಿ ಬಡ್ಡಿಯಾಕ್ಕೆತಿ. ವಾರದೊಳಗ ಕೊಡಲಿಲ್ಲ ಅಂದ್ರ ಡಬಲ್ ಬಡ್ಡಿ ಕೊಡಬೇಕು ಎಂದು ಕೆಲವು ಕಂಡಿಷನ್ನುಗಳನ್ನು ಹಾಕಿದ. ಅದಕ್ಕೆಲ್ಲಾ ರೂಪಕ್ಕ ಕಣ್ಣ ಸನ್ನೆಯಿಂದಲೆ ನಮ್ಮೆಲ್ಲರಿಂದ ಸಮ್ಮತಿ ಪಡೆದುಕೊಂಡು ಅವನಿಗೆ ಒಪ್ಪಿಗೆ ಸೂಚಿಸಿದಳು.
 
ಅಂದು ಸಂಜೆಯೆ ಬಾಬು ಹಣ ರೆಡಿ ಮಾಡಿಕೊಂಡು ಬಂದ. ‘ನಾಳೆ ನಿಮ್ಮನ್ನು ನ್ಯಾಯಾಲಯದೊಳಕ್ಕೆ ಕರಕೊಂಡು ಹೊಕ್ಕಾರ. ಅಲ್ಲಿ ನಿಮಗೆ ಸ್ವಲ್ಪ ಬುದ್ಧಿ ಮಾತು ಹೇಳತಾರ. ಅದಕ್ಕೆಲ್ಲ ನೀವು ಎದುರುತ್ತರ ಕೊಡದೆ ಹೂಂಗುಟ್ಟಿದರೆ ಸಾಕು' ಎಂದು ಇನ್ನು ಏನೆನೋ ಹೇಳಿದ. ಅಷ್ಟರಲ್ಲಿ ಪೋಲೀಸನೊಬ್ಬ ಬಾಬುನನ್ನು ಹುಡುಕಿಕೊಂಡು ಹೆಡ್ ಪೇದೆ ಸರೋಜಮ್ಮ ನಿಮ್ಮನ್ನು ಕರಿಯಾಕ ಹತ್ತಾರ ಎಂದು ತಿಳಿಸಿದ್ದರಿಂದ ಬಾಬು ‘ಆತು ಸರ್ ರೊಕ್ಕ ರೆಡಿಯಾಗ್ಯಾವ ಈಗ ಕೊಟ್ಟ ಬಿಡತೆನಿ' ಎನ್ನುತ್ತ ಆ ಪೋಲೀಸ್‍ನನ್ನು ಹಿಂಬಾಲಿಸಿದ.
ಮರುದಿನ ನಮ್ಮನ್ನು ಪೋಲೀಸರು ನ್ಯಾಯಾಲಯಕ್ಕೆ ಕರೆದೊಯ್ದರು. ನ್ಯಾಯಾಲಯದಲ್ಲಿದ್ದ ಎಲ್ಲರೂ ನಮ್ಮನ್ನು ಆಸೆಯಿಂದಲೂ, ಅಸಹ್ಯದಿಂದಲೂ ನೊಡುತ್ತಿದ್ದರು. ಒಬ್ಬೊಬ್ಬರನ್ನೇ ಕಟಕಟೆಗೆ ಕರೆದು ನ್ಯಾಯ ನೀಡುವ ನಾಟಕವನ್ನು ನ್ಯಾಯಾಧೀಶರು ಶುರು ಹಚ್ಚಿಕೊಂಡರು. ಪ್ರತಿಯೊಬ್ಬರನ್ನೂ ಕಟಕಟೆಗೆ ಕರೆಸಿ ಅವರ ಕಡೆ ನೋಡದೆ ಕೆಳಗೆ ತಮ್ಮ ದಪ್ಪ ಪುಸ್ತಕದಲ್ಲಿ ಮುಖ ಹುದುಗಿಸಿಕೊಂಡೆ ‘ಇನ್ನು ಮುಂದೆ ಹಿಂಗೆಲ್ಲಾ ಮಾಡಬ್ಯಾಡ್ರಿ, ನ್ಯಾಯಯುತವಾಗಿ ದುಡಕೊಂಡು ತಿನ್ರಿ, ಇದು ನಮ್ಮ ದೇಶದ ಸಂಸ್ಕಂತಿಗೆ ಹೊಂದುವಂತಹದಲ್ಲ' ಎಂದು ಏನೇನೋ ಬುದ್ಧಿ ಮಾತು ಹೇಳುತ್ತಿದ್ರು. ಕೊನೆಯಲ್ಲಿ 'ಈಗ ಮಾಡಿರುವ ತಪ್ಪಿಗಾಗಿ ಮುನ್ನೂರು ರೂಪಾಯಿ ದಂಡ ಹಾಕ್ತಿವಿ' ಎಂದು ಘೋಷಿಸುತ್ತಿದ್ದರು. ನಾವೆಲ್ಲರೂ ನ್ಯಾಯಾಧೀಶರು ಹೇಳಿದಂತೆ ದಂಡ ಕಟ್ಟಲು ಮೌನವಾಗಿಯೇ ಒಪ್ಪಿಗೆ ಸೂಚಿಸಿದೆವು. ನನ್ನ ಪಾಳೆ ಬಂದಾಗ ನಾನು ಹೋಗಿ ಕಟಕಟೆಯಲ್ಲಿ ನಿಂತುಕೊಂಡೆ. ನ್ಯಾಯಾಧೀಶರು ನನ್ನ ಕಡೆ ನೋಡಿ ಕತ್ತು ಬಗ್ಗಿಸಿಯೇ ಹೇಳುವ ಬುದ್ಧಿಮಾತನ್ನು ಹೇಳಿಯಾದ ಮೇಲೆ ಮುನ್ನೂರು ರೂ. ದಂಡ ವಿಧಿಸಿದರು. ನಾನು ವಿನಯದಿಂದಲೆ ‘ಈಗಾಗಲೆ ಪೋಲೀಸರಿಗೆ ಐದು ನೂರು ರೂಪಾಯಿ ಕೊಟ್ಟಿದ್ದೇವೆ ಸರ್' ಎಂದೆ. ನನ್ನ ಹೇಳಿಕೆಯನ್ನು ಕೇಳಿ ದಂಗಾದ ನ್ಯಾಯಾಧೀಶರು ಮೊದಲನೆಯ ಸಲ ನನ್ನನ್ನು ಮುಖ ಎತ್ತಿ ನೋಡಿದರು. ನ್ಯಾಯಾಲಯದಲ್ಲಿ ಇದ್ದವರೆಲ್ಲ ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು. ಬಹುಶಃ ಲೈಂಗಿಕ ಕಾರ್ಮಿಕಳೊಬ್ಬಳು ನ್ಯಾಯಾಲಯದಲ್ಲಿ ಇದೆ ಮೊದಲ ಸಲ ಹೀಗೆ ಮಾತಾಡಿದ್ದು. ನ್ಯಾಯಾಧೀಶರು ನನ್ನತ್ತ ನೋಡುತ್ತಲೆ ‘ಯಾರಿಗೆ ಹಣ ಕೊಟ್ಟಿ' ಎಂದು ಪ್ರಶ್ನಿಸಿದರು.
 
ನಾನು ‘ನಮ್ಮನ್ನು ಕರೆತಂದಿರುವ ಸರೋಜಮ್ಮ ಮೇಡಂ ಈಗಾಗಲೇ ರೊಕ್ಕ ಇಸಕೊಂಡಾರಿ' ಎಂದೆ. ‘ನಾನೊಬ್ಬಳಿಂದ ಅಷ್ಟೆ ಅಲ್ಲ. ಇಲ್ಲಿ ಬಂದಿರುವ ಎಲ್ಲ ಹುಡುಗಿಯರೂ ತಲಾ ಐದು ನೂರು ರೂಪಾಯಿ ಕೊಟ್ಟೀವಿ' ಎಂದೆ ಧೈರ್ಯದಿಂದ. ಕೂಡಲೇ ಹೆಡ್ ಪೇದೆ ಸರೋಜಮ್ಮಳನ್ನು ಕರೆಸಿದ ನ್ಯಾಯಾಧೀಶರು ‘ದೇಹ ಮಾರಿ ಬದುಕುವ ಅವರನ್ನೂ ಬಿಡೋದಿಲ್ವಲ್ರೀ ನೀವು. ಅವರಿಂದ ತೊಗೊಂಡಿರೊ ಹಣ ವಾಪಸ್ಸು ಕೊಡಿ’ ಅಂತ ಸಿಟ್ಟಿನಿಂದಲೆ ಗದರಿದರು. ಆಕೆ ನಮ್ಮನ್ನೆಲ್ಲ ಕೆಕ್ಕರುಗಣ್ಣು ಬಿಟ್ಟುಕೊಂಡು ನ್ಯಾಯಾಧೀಶರ ಮುಂದೆ ಹಣ ಹಿಂತಿರುಗಿಸಿದಳು. ಅವಳ ನನ್ನನ್ನು ನೋಡುವ ನೋಟದಲ್ಲಿ ‘ಹೊರಗೆ ಸಿಗು, ನೋಡಕೋತಿನಿ' ಎನ್ನುವ ಸಿಟ್ಟಿತ್ತು.
 
 ನ್ಯಾಯಾಲಯದಿಂದ ಆಚೆ ಬರುತ್ತಿದ್ದಂತೆ ನೀನು ಹಾಗೆ ಸರೋಜಮ್ಮಳ ವಿರುದ್ದ ಹೇಳಬಾರದಿತ್ತು ಎಂದು ನನ್ನೊಂದಿಗಿದ್ದವರು ಜಗಳ ತೆಗೆದರು. ಆದರೆ ನಾನು ಅವರ ಜಗಳಕ್ಕೆ ಸೊಪ್ಪು ಹಾಕಲಿಲ್ಲವಾದರೂ ನನ್ನ ಮನಸ್ಸಿನಲ್ಲಿ ಆ ಬಗ್ಗೆ ಬಹಳಷ್ಟು ಅಳುಕಿತ್ತು. ನಮ್ಮ ಗುಂಪನ್ನು ದೂರದಿಂದಲೇ ನೋಡಿದ ಸರೋಜಮ್ಮ ನನ್ನನ್ನು ನೋಡಿ ತಾಳ್ಮೆಯನ್ನು ಕಳೆದುಕೊಂಡು ಒದರಾಡತೊಡಗಿದಳು. ಆದರೆ, ನಾನು ಆಕೆಗೆ ಏನನ್ನು ಉತ್ತರಿಸಲು ಹೋಗದೆ ಸುಮ್ಮನಿದ್ದು ಬಿಟ್ಟೆ. ನಂತರ ಹೊರಗೆ ಬಂದು ಹೀನಾಯವಾಗಿ ಬೈದು ನನ್ನನ್ನು ಮುಂದೆ ನೋಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದಳು.
* * *
 
ನ್ಯಾಯಾಲಯದಿಂದ ಬಂದ ಮೇಲೆ ಅದೇಕೊ ರತ್ನಮ್ಮಳ ಮನೆ ಕಡೆ ಗಿರಾಕಿಗಳೆ ಮುಖ ಮಾಡುತ್ತಿರಲಿಲ್ಲ. ಹೀಗಾಗಿ ದುಡಿಮೆ ಇಲ್ಲದೆ ರತ್ನಮ್ಮ ನಮಗೆ ಹಣ ಕೊಡುವುದರಲ್ಲಿ ಮೋಸ ಮಾಡುವುದನ್ನು ರೂಢಿಸಿಕೊಂಡಳು. ದುಡಿಮೆ ಇಲ್ಲದ್ದರಿಂದ ನಾವು ಹೇಗಾದರೂ ಮಾಡಿ ಅಲ್ಲಿಂದ ಪರಾರಿಯಾಗಬೇಕಿತ್ತು. ಒಮ್ಮೆ ರಮ್ಯಾ ಮತ್ತು ಫಾತಿಮಾ ಒಂದು ಒಳ್ಳೆಯ ಐಡಿಯಾ ಹೇಳಿದರು. ಈ ಮೊದಲು ಅವರು ತಮ್ಮ ಕಥೆಗಳನ್ನು ನನ್ನ ಮುಂದೆ ಹೇಳಿಕೊಂಡಿದ್ದರು. ಅವರು ಹೇಳಿದಂತೆ ಒಂದು ದಿನ ರಾತ್ರಿ ಗಿರಾಕಿ ಬಂದ ಹೋದ ಮೇಲೆ ರತ್ನಮ್ಮ ತನ್ನ ಕೋಣೆಯಲ್ಲಿ ಕುಡಿದು ಮಲಗಿರುತ್ತಾಳೆ ಎಂದು ಗೊತ್ತಿತ್ತು. ಧರ್ಮಣ್ಣ ಕುಳಿತಲ್ಲಿಯೇ ತೂಕಡಿಸುತ್ತಿದ್ದ. ನಾವು ನಾಲ್ಕು ಜನ ಹೊರಗೆ ಬಂದೆವು ಅಲ್ಲಿ ನಮಗಾಗಿ ಪಿಂಪ ಬಾಬು ಮತ್ತು ಮಂಜು ಆಟೋದಲ್ಲಿ ಕಾಯುತ್ತಿದ್ದರು. ಮುದುಕಿಗೆ ಅಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲವಾದ್ದರಿಂದ ಆಕೆಯೂ ನನ್ನನ್ನು ಈ ಜೈಲಿನಿಂದ ಬಿಡಿಸಿಕೊಂಡು ಕರೆದುಕೊಂಡು ಹೋಗು ಎಂದು ದೈನ್ಯತೆಯಿಂದ ದುಂಬಾಲು ಬಿದ್ದಳು. ನನಗೂ ಕೂಡ ಮಗುವನ್ನು ನೋಡಿಕೊಳ್ಳಲು ಯಾರಾದರೊಬ್ಬರು ಬೇಕಾಗಿದ್ದುದರಿಂದ ನಾನು ಮುದುಕಿ ನಮ್ಮೊಂದಿಗೆ ಇರ್ಲಿ ಎಂದು ಉಳಿದವರನ್ನು ಒಪ್ಪಿಸಿದೆ. ನಾವು ಹೊರ ಬಂದು ಎರಡು ಆಟೋ ಹತ್ತಿದೆವು. ಆಟೋ ಹುಬ್ಬಳಿಯ ಮಾರುಕಟ್ಟೆ ಪ್ರದೇಶಗಳನ್ನು ದಾಟಿಕೊಂಡು ಮುನ್ನಡೆಯಿತು. ದೂರದ ಜನತಾನಗರಿಯಲ್ಲಿ ಬಾಬು ನಮಗಾಗಿ ಮನೆ ಹಿಡಿದಿದ್ದ. ಈ ಜನತಾನಗರಿ ಹುಬ್ಬಳಿಯಲ್ಲಿಯೇ ವೇಶ್ಯಾಗೃಹಗಳಿಗೆ ಹೆಸರುವಾಸಿಯಾಗಿತ್ತು. ಸ್ವಲ್ಪ ದುಡ್ಡಿದ್ದ ವೇಶ್ಯೆಯರೆಲ್ಲ ಇಲ್ಲಿ ಸಣ್ಣ ಮನೆ ಬಾಡಿಗೆ ತೆಗೆದುಕೊಂಡು ಸ್ವಂತ ದಂಧೆ ನಡೆಸುತ್ತಿದ್ದರು. ದೂರದ ಹಳ್ಳಿಗಳಿಂದ ಶ್ರೀಮಂತ ರೈತರು ಮತ್ತು ವ್ಯಾಪಾರಿಗಳು ಇಲ್ಲಿಗೆ ಬರುವುದು ಮಾಮೂಲಿಯಾಗಿತ್ತು. 
 
ಒಂದೆರಡು ವಾರದವರೆಗೆ ಗಿರಾಕಿಗಳು ನಮ್ಮನೆಗೆ ಬರುವುದು ಕಡಿಮೆ ಇತ್ತು. ಆದರೆ ನಿಧಾನಕ್ಕೆ ಬಾಬು ಮತ್ತು ಮಂಜು ನಮ್ಮ ಗಂಡಂದಿರ ಪಾತ್ರ ಮಾಡುವುದರೊಂದಿಗೆ ಗಿರಾಕಿಗಳನ್ನು ಕರೆದುಕೊಂಡು ಬರುತ್ತಿದ್ದರು. ನಾವು ನಮಗೆ ದಕ್ಕಿದ ಟಿಪ್ಸ್‍ನಲ್ಲಿ ಅವರಿಗೆ ಅರ್ಧ ಕೊಡುತ್ತಿದ್ದವು. ನಾನು ಅದೇ ಟಿಪ್ಸ್‍ನಲ್ಲಿ ಮುದುಕಿಯ ಖರ್ಚನ್ನು ನೋಡಿಕೊಳ್ಳಬೇಕಾಗಿತ್ತು. ಒಟ್ಟಿನಲ್ಲಿ ಬದುಕು ಸಾಗುತ್ತಿತ್ತು.
 
ಆದರೆ ಒಂದಿನ ರೌಡಿಗಳು ದಾಳಿ ನಡೆಸಿದರು. ಮಂಜುವಿಗೆ ಸಿಟಿಯ ರೌಡಿ ಗೆಳೆಯರೊಂದಿಗೆ ಗೆಳೆತನವಿತ್ತು. ಮೂರ್ನಾಲ್ಕು ರೌಡಿಗಳು ಯಾವಾಗಲೂ ನಮ್ಮ ಮನೆಗೆ ಬರುತ್ತಿದ್ದರು. ಈ ಮಂಜು ಮತ್ತು ರೌಡಿಗಳ ಮಧ್ಯೆ ಅದೇನಾಯಿತು ಗೊತ್ತಿಲ್ಲ. ಒಂದಿನ ನಡುರಾತ್ರಿ ಮಂಜು ಆ ರೌಡಿಗಳನ್ನು ಮುಲಾಜಿಲ್ಲದೆ ಹೊರ ಹಾಕಿದ. ರೌಡಿಗಳು ಹೋದ ಮರುದಿನವೆ ನಮ್ಮಂಥೋರ ಮನೆಗಳ ಮೇಲೆ ದಾಳಿ ನಡೆಯಿತು.
 
ಇಡೀ ಗಲ್ಲಿಯೆ ಬುಗಿಲೆದ್ದು ಹೋಯಿತು. ಪೊಲೀಸರ ಬೂಟುಗಳು ಒಂದೊಂದು ತಡಿಕೆಗಳನ್ನು, ಬಾಗಿಲುಗಳನ್ನು ಒದ್ದು ಎಲ್ಲಾ ಬಟಾಬಯಲು ಮಾಡತೊಡಗಿದವು. ಅಲ್ಲಿದ್ದ ನೂರಾರು ಗುಡಿಸಲುಗಳು, ಮನೆಗಳು, ಮಹಡಿಯ ಪೋಸ್ ಕೊಡುತಿದ್ದ ಅಟ್ಟಣಿಗೆಗಳು ಎಲ್ಲವೂ ಏಕಾಏಕಿಯಾಗಿ ಮಗುಚಿ ಬಿದ್ವು. ಗಿರಾಕಿಗಳೊಂದಿಗೆ ಸಂಧಾನಕ್ಕಿಳಿದಿದ್ದ ಪಿಂಪ್‍ಗಳು ಶಾಕ್ ಆದ್ರು, ಬೆತ್ತಲಾಗಿದ್ದ ದೇಹಗಳು ದಿಕ್ಕಾಪಾಲಾದ್ವು. ಎಲ್ಲಿಂದಲೋ ವ್ಯಾಪಾರ ಕುದುರಿಸಿ ಕರೆತರುತ್ತಿದ್ದ ಪಿಂಪ್‍ಗಳು ಓಟಕಿತ್ತರು. ಹೇಗೋ ಹೋರಾಡಿ ಜಾಗ ಹಿಡ್ದು ಅಲ್ಲಿಂದ, ಇಲ್ಲಿಂದ ಹೊಂಚಿ ಒಂದು ಗೂಡುಕಟ್ಟಿ ಬಾಡಿಗೆಗೋ, ಲೀಸ್ಗೋ ಕೊಟ್ಟಿದ್ದ ಮನೆ ಮಾಲೀಕರುಗಳು ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳತೊಡಗಿದರು. ಗಂಟೆ ಲೆಕ್ಕದಲ್ಲಿ ಬಾಡಿಗೆ ಕೊಡುತಿದ್ದವರು ಕೈ ಕೈ ಹಿಸುಕೊಂಡು ಕದವಿಕ್ಕಿಕೊಂಡರು. ಈ ಘಟನೆ ತಪ್ಪಿಸೋಕೆ ಸ್ಥಳೀಯ ಮರಿ ಮುಖಂಡರೆಲ್ಲ ಲೆಕ್ಕಚಾರ ಹಾಕತೊಡಗಿದರು.
 
ಅಂದು ಜನತಾನಗರದಲ್ಲಿಯ ಎಲ್ಲಾ ದಂಧೆ ಮನೆಗಳೂ ಒಟ್ಟಿಗೆ ರೇಡ್ ಆಗಿದ್ದವು. ಇಡಿ ಓಣಿಯೇ ಭೂಕಂಪವಾದಂತೆ ಎಲ್ಲವೂ ಬುಡಮೇಲಾಗಿ ಹೋಯಿತು. ಹೀಗೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯಲು ದೊಡ್ಡಮಟ್ಟದ್ದೇ ಕಾರಣವಿರುತ್ತದೆ. ರಾಜ್ಯದ ಗಣ್ಯರ ಮನೆಗಳ ಹೆಣ್ಮಕ್ಕಳು ತಪ್ಪಿಸಿಕೊಂಡ ದೂರುಗಳು ಪೋಲಿಸ್ ಠಾಣೆಯಲ್ಲಿ ದಾಖಲಾದರೆ, ಆ ಹುಡುಗಿಯರು ಇಲ್ಲಿನ ದಂಧೆಯ ಮನೆಗಳಿಗೆ ಮಾರಾಟವಾಗಿರಬಹುದೇ ಎಂಬ ಅನುಮಾನ ಪೊಲೀಸರನ್ನು ಕಾಡಿದಾಗ, ಅಥವಾ ಈ ಗಲ್ಲಿಯ ನಿವಾಸಿ, ಅಥವಾ ಸದ್‍ಗೃಹಸ್ತನ ಪತಿವ್ರತಿ ಹೆಂಡತಿಯರು ದೂರು ನೀಡಿದಾಗ, ಮರಿರಾಜಕಾರಣಿಗಳಿಗೆ ಸರಿಯಾದ ವಯ್ಯಾರದ ಗೌರವವನ್ನು ಇಲ್ಲಿನ ಹುಡುಗಿಯರು ತೋರಿಸದೆ ಇದ್ದಾಗ ಇಂಥ ದಾಳಿಗಳು ನಡೆಯುತ್ತಿರುತ್ತವೆ. ಒಮ್ಮೊಮ್ಮೆ ದಾಳಿಗಳು ಯಾವ ಪ್ರಮಾಣದಲ್ಲಿರುತ್ತವೆ ಎಂದರೆ ಐದಾರು ಜೆಸಿಬಿಗಳು ಗಲ್ಲಿಯ ಸುತ್ತಲೂ ರಾಕ್ಷಸರಂತೆ ಮುಂದಕ್ಕೆ ಚಲಿಸುತ್ತಾ ತಮ್ಮ ಬೃಹದಾಕಾರದ ಹಲ್ಲಿಗೆ ಸಿಗುವ ಗುಡಿಸಲು ಮನೆಗಳನ್ನು ಬುಡಮೇಲು ಮಾಡುತ್ತಾ ಸಾಗುತ್ತವೆ. 
 
ಈ ಸಲವೂ ಹಾಗೆ ಆಯಿತು. ರಾತ್ರೋರಾತ್ರಿ ಉಟ್ಟಬಟ್ಟೆಯಲ್ಲಿಯೇ ನಾವು ಜನತಾಮನೆಯನ್ನು ಖಾಲಿ ಮಾಡಿದ್ದೆವು. ಅಂದು ಮಗುವಿಗೆ ಮೈಯಲ್ಲಿ ಹುಶಾರಿರಲಿಲ್ಲ. ಮುದುಕಿ ಮತ್ತು ರೂಪಕ್ಕ ಆ ಕತ್ತಲ ರಾತ್ರಿಯಲ್ಲಿ ಎಲ್ಲಿ ಮಾಯವಾದರೊ ಗೊತ್ತಾಗಲಿಲ್ಲ. ಆದರೆ ಬಾಬು ಮಾತ್ರ ನನ್ನನ್ನು ಹಿಂಬಾಲಿಸಿಕೊಂಡು ಬಂದ. ನಾವು ಅಂದು ರಾತ್ರಿ ಹುಬ್ಬಳಿ ಹಳೇ ಬಸ್ ನಿಲ್ದಾಣದವರೆಗೆ ಓಡೋಡಿ ಬಂದೆವು. ನಿಲ್ದಾಣದ ಕಲ್ಲುಬೆಂಚುಗಳ ಮೇಲೆ ಕುಳಿತು ಹೊತ್ತು ಕಳೆದವು. ಮುಂದೆ ಹೇಗೆ ಎಂದು ದಾರಿಯೇ ತೋಚದಾಗಿತ್ತು. ಆಗ ಬಾಬುವೇ ಒಂದು ದಾರಿಯನ್ನು ತೋರಿಸಿದ. 
ಬಾಬು ತನ್ನೂರು ದಾವಣಗೆರೆಗೆ ಕರೆದುಕೊಂಡು ಹೋಗುವುದಾಗಿ ನನಗೆ ಸಮಾಧಾನ ಹೇಳಿದ. ನನಗೆ ಬೇರೆ ದಾರಿಯೇ ಇಲ್ಲದ್ದರಿಂದ ನಾನು ಒಪ್ಪಿಕೊಳ್ಳಬೇಕಾಯಿತು. ದಾವಣಗೆರೆಗೆ ಹೋಗುವ ದಾರಿಯಲ್ಲಿ ಬಾಬು ಹೊಸ ವರಾತ ತೆಗೆದ. ‘ನನ್ನದು ಮುಸ್ಲಿಂ ಜಾತಿ. ನಮ್ಮ ಕುಟುಂಬ ಬಹಳ ಕಟ್ಟುನಿಟ್ಟಿನದು. ನೀನು ಮುಸ್ಲಿಂಳಾದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ನಮ್ಮ ಮನೆಯವರನ್ನು ಒಪ್ಪಿಸ್ತಿನಿ. ಹಿಂದಿನದೆಲ್ಲ ಮರೆತು ಇಬ್ಬರು ಹೊಸ ಬದುಕು ಸಾಗಿಸೋಣ' ಎಂದು ಬಾಬು ತಿಪ್ಪೆ ಸಾರಿಸತೊಡಗಿದ.
 
‘ನಾನು ಮುಸ್ಲಿಂಳಾಗಬೇಕು', ನನಗೆ ನಗು ಬಂತು. ನನ್ನ ಮೈ-ಮನಸ್ಸನ್ನು ಸಂಪೂರ್ಣವಾಗಿ ಭೇದ ಭಾವ ಮಾಡದೆ ಎಲ್ಲ ಧರ್ಮದವರಿಗೂ ಧರ್ಮತೀತವಾಗಿ, ಜಾತ್ಯತೀತವಾಗಿ ಅರ್ಪಿಸಿಕೊಂಡಿದ್ದಿನಿ. ಯಾವ್ಯಾವ ಧರ್ಮಕ್ಕೆ ಸೇರಿದ ಯಾರ್ಯಾರನ್ನೊ ನನ್ನಲ್ಲಿಗೆ ಕರೆದುಕೊಂಡು ಬರುತ್ತಿದ್ದವನೇ ಈ ಪಿಂಪ್ ಬಾಬು. ಈಗ ಮದುವೆಯಾಗಲು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ಬಯಸುತ್ತಿದ್ದಾನೆ. ನಾನು ಬೇಕೆಂದಾಗ ತಾನು ಯಾವ ಜಾತಿ ಧರ್ಮದ ಪ್ರಶ್ನೆಗಳನ್ನು ಮಾಡದೆ ನನ್ನೊಳಗೆ ಒಂದಾಗಿದ್ದಾನೆ. ಈಗ ಮುಸ್ಲಿಂಳಾದರೆ ಮಾತ್ರ ನಿನ್ನನ್ನು ಮುದುವೆಯಾಗುವುದಾಗಿ ಸ್ವೀಕರಿಸುವುದಾಗಿ ಹೇಳುತ್ತಿದ್ದಾನೆ. ನನಗೆ ರೇಗಿಹೋಯಿತು. ನಾನು ಅದೆಲ್ಲಾ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ. ಆಗ ಆತ ನೀನು ವಿಧಿವತ್ತಾಗಿ ಮುಸ್ಲಿಂ ಧರ್ಮಕ್ಕೆ ಸೇರಿಕೊಳ್ಳದಿದ್ದರೂ ನಿನ್ನ ಹೆಸರನ್ನಾದರೂ ಬದಲಿಸಿಕೊಳ್ಳಬೇಕು ಎಂದು ಹಟ ಹಿಡಿದ. ನನಗೆ ಆಗ ಒಂದು ನೆಲೆ ಕಂಡುಕೊಳ್ಳಕಾದರೆ ಅವ ಹೇಳಿದಂತೆ ಹೆಸರನ್ನು ಬದಲಿಸಿಕೊಂಡು ಅವನನ್ನು ಮದುವೆಯಾಗಲೇಬೇಕಿತ್ತು.
 
ಹೀಗಾಗಿ ನಾನು ಶಾರದಾ ಹೋಗಿ ಶಾಹಿನಾ ಆದೆ. ಸಪ್ತಪದಿ ತುಳಿಯಲಿಲ್ಲ. ಪೀಪಿ ಊದಲಿಲ್ಲ. ಮಂತ್ರ ಒದರಲಿಲ್ಲ. ಹಾರ ಬದಲಾಯಿಸಲಿಲ್ಲ. ಮದುವೆಯ ಯಾವ ಪರಿಧಿಗೆ ಸಿಲುಕದೆ ನಾನು ಬಾಬುನನ್ನು ಮದುವೆಯಾದೆ. ನನಗೆ ನನ್ನದೆಯಾದ ಒಂದು ಮನೆ ಬೇಕಿತ್ತು. ಸಭ್ಯ ಗೃಹಿಣಿಯ ಪಟ್ಟ, ಮಧ್ಯಮವರ್ಗದ ಬದುಕು ಬೇಕೆಂಬ ಹಂಬಲಿಕೆ. ಅವನು ಹುಬ್ಬಳಿಯಿಂದ ದಾವಣಗೆರೆಗೆ ನನ್ನನ್ನು ಕರೆದುಕೊಂಡು ಹೋದ. ಅಲ್ಲಿ ಸಣ್ಣದಾದ ಒಂದು ಬಾಡಿಗೆ ಮನೆಯನ್ನು ಹಿಡಿದು, ಬಾಡಿಗೆ ಗಂಡನೊಂದಿಗೆ ಹೊಸ ಬದುಕು ಶುರುವಿಟ್ಟುಕೊಂಡೆ. ನಮ್ಮಂಥವರಿಗೆ ಗಂಡ ಎಂಬೊಂದು ಪ್ರಾಣಿಯ ಅಗತ್ಯವಿರುತ್ತದೆ. ಬಾಡಿಗೆ ಮನೆ ಹಿಡಿಯುವುದರಿಂದ ಹಿಡಿದು ಬೀದಿ ನಲ್ಲಿಯಲ್ಲಿ ಬಿಂದಿಗೆ ಇಟ್ಟು ಕಾಯುವಾಗ, ಮಗೂನ ಶಾಲೆಗೆ ಸೇರಿಸಬೇಕಾದಾಗ, ಹಿಟ್ಟು ಮಾಡಿಕೊಳ್ಳಲು ಗಿರಣಿಗೆ ಬಂದಾಗ, ಸರಕಾರಿ ದಾಖಲೆಗಳಲ್ಲಿ ಗಂಡ ಎಂಬ ಕಾಲಂ ತುಂಬಬೇಕಾದಾಗ ನಮಗೆ ಬಾಡಿಗೆ ಗಂಡಂದಿರ ಅಗತ್ಯವಿದ್ದೇ ಇರುತ್ತದೆ. ನಮಗೆ ಬಾಡಿಗೆ ಗಂಡಂದಿರಾದ ಪುಣ್ಯಕ್ಕೆ ಆ ಗಂಡಸರು ನಮ್ಮನ್ನು ಉಚಿತವಾಗಿ ಬೇಕೆಂದಾಗ ಮೈ ಹಣ್ಣಾಗುವಂತೆ ಬಳಸಿಯೂ ಕೊಳ್ಳುತ್ತಾರೆ. 
 
 ಬದುಕಿನ ಗಾಲಿಗಳು ಹಳಿಗುಂಟ ನಿರಾಳವಾಗಿ ಸಾಗುತ್ತಿವೆ ಎಂದುಕೊಳ್ಳುತ್ತಿರುವಾಗಲೇ ನನ್ನ ಪಾಲಿಗೆ ಬಾಬು ಶನಿಯಾಗತೊಡಗಿದ. ರಾತ್ರಿಗಳು ಕರಾಳವಾಗತೊಡಗಿದವು. ಮತ್ತೇರಿಸಿಕೊಂಡ ಬಾಬು ಚಿತ್ರ ಹಿಂಸೆ ಕೊಡಲು ಸುರುಮಾಡಿದ. ಹೊಡೆತಗಳು ಮಾಮೂಲಾದವು. ಕ್ರಮೇಣ ಕೆಲಸಕ್ಕೆ ಹೋಗುವುದನ್ನು ಮರೆತುಬಿಟ್ಟು ಹೊರಗಡೆ ಹೋದಾಗೊಮ್ಮೆ ತನ್ನ ಪರಿಚಯದವರೊಬ್ಬರನ್ನು ಕರೆದುಕೊಂಡು ಬರತೊಡಗಿದ. ಅವರ ಮುಂದೆ ನನ್ನನ್ನು ಸೂಳೆ ಎಂದು ಪರಿಚಯಿಸುತ್ತಿದ್ದ.
 
ಹಗಲೆಲ್ಲ ಗಿರಾಕಿಗಳನ್ನು ಸಂಭಾಳಿಸಿ ಹೈರಾಣಾಗುತ್ತಿದ್ದ ನನ್ನನ್ನು ರಾತ್ರಿಯಿಡೀ ಪೀಡಿಸುತ್ತಿದ್ದ. ಬಿಟ್ಟಿಯಾದ ದೇಹ, ಬಿಟ್ಟಿ ಊಟ, ಉಳಿಯುವುದಕ್ಕೆ ಮನೆ, ಕುಡಿಯೋಕೆ ನನ್ನಿಂದ ಹಣ ವಸೂಲಿ, ಬೀಡಿ, ಸೀಗರೇಟು, ಜರ್ದಾ, ಅಡಿಕೆ-ಎಲೆ, ಹೆಂಡ ತಂದುಕೊಡಲು ನನ್ನ ಎಳೆ ಕಂದಮ್ಮ ರಾಜಿ. ನನ್ನ ದಾಂಪತ್ಯದ ಎರಡನೇ ಅಧ್ಯಾಯದ ಕರಾಳ ದಿನಗಳು ಆರಂಭವಾದವು. ಎಲ್ಲರಂತೆ ಮದುವೆಯಾಗಿ ಬದುಕಿನ ಆನಂದವನ್ನು ಅನುಭವಿಸಬೇಕೆಂದು ನನ್ನಂತಹ ಸಾವಿರಾರು ಹೆಣ್ಣು ಮಕ್ಕಳು ಇಂತಹ ಬಾಡಿಗೆ ಗಂಡಂದಿರ ಕೈಯಲ್ಲಿ ಸಿಕ್ಕು ನಲುಗಿ ಹೋಗುತ್ತೇವೆ. ಒಮ್ಮೆ ಬಾಡಿಗೆಗೆ ಗಂಡನಾದವನು ಬೆಂಬಿಡದ ಸೀಳು ನಾಯಿಯಾಗುತ್ತಾನೆ. ಹೋದಲೆಲ್ಲಾ ಕಾಡುತ್ತಾನೆ. ತಲೆ ಹಿಡುಕನಂತೆ ವರ್ತಿಸತೊಡಗುತ್ತಾನೆ. ಹಣ ಕೊಟ್ಟು ದೇಹ ಸುಖ ಪಡೆಯುವರಿಗಿಂತ ಈ ಹಣ ಕಿತ್ತುಕೊಂಡು ದೇಹದಲ್ಲಿ ಪಾಲು ಕೇಳುವ ಇವರುಗಳೇ ಭಯಾನಕವಾಗಿರುತ್ತಾರೆ. ದೇಹವನ್ನು ಬಾಡಿಗೆಗೆ ಕೊಡುತ್ತಾರೆ ಅಷ್ಟೇ ಅಲ್ಲ ಮನಸ್ಸು ಕೂಡ. ಬಾಡಿಗೆ ಮನೆಯಲ್ಲಿ ಬಾಡಿಗೆ ಗಂಡನ ಜೊತೆ ಬದುಕು. ಕನಸುಗಳು ಬಾಡಿಗೆಯವೇ.!
 
ಈ ಹಾಳುಬಾಡಿಗೆ ಗಂಡಂದಿರು ತಮಗೆ ಮದುವೆಯಾಗುವ ಚೈತನ್ಯ ಇರದಿದ್ದರೂ ತಮಗೊಂದು ಸ್ವಂತ ಮಗು ಬೇಕು ಎಂಬ ಅದಮ್ಯ ಆಸೆಯನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಹೆಣ್ಣು ಪ್ರಾಣಿಯೊಂದು ಸಿಕ್ಕರೆ, ಅದು ಬಾಡಿಗೆಯಿರಲಿ, ಸ್ವಂತದ್ದಿರಲಿ, ಮಗು ಬೇಕು ಎಂಬ ಹವಣಿಕೆಗೆ ಈಡಾಗುತ್ತದೆ. ಹೆಣ್ಣುಮಗಳೊಬ್ಬಳಿಗೆ ಮಗು ಎಂದರೆ ಕೇಳಬೇಕೆ. ಆಕೆಯ ಜೀವ ಅರಳುತ್ತದೆ. ತನಗೂ ತನ್ನದೆ ಒಂದು ಮಗು ಬೇಕು ಎನಿಸೋದು ನಿಸರ್ಗ ಸಹಜವೇ. ಹಾಗಂತ ಈ ದಂಧೆ ನಡೆಸೋ ನಮ್ಮಂಥವರು ಒಪ್ಪಿಕೊಂಡು ಬಿಟ್ಟರೆ ಮತ್ತೊಂದು ಖೆಡ್ಡಕ್ಕೆ ಬಿದ್ದಂಗೆ. ಹೊಟ್ಟೆಯೊಳಗಿನ ಮಗು ಬಲಿತು ಭೂಮಿಗೆ ಕಾಲಿಡುವ ಮುನ್ನವೇ ಬಾಡಿಗೆ ಗಂಡ ನಾಪತ್ತೆಯಾಗಿರುತ್ತಾನೆ. ಒಂದು ವೇಳೆ ನಾಪತ್ತೆಯಾಗದೆ ಹೋದರೆ ಅನುಮಾನವೆಂಬ ಪೆಡಂಭೂತ ಅವನೊಳಗಡೆ ಹೊಕ್ಕೊಂಡು ಆಟವಾಡುತ್ತಿರುತ್ತದೆ. ಆತನೇ ಕರೆದುಕೊಂಡು ಬರುವ ಪರ ಪುರುಷರೊಂದಿಗೆ ಮೈ ಹಂಚಿಕೊಳ್ಳುವವಳನ್ನು ಅನುಮಾನಿಸುವುದು ಸಹ ಸಹಜವೇ! ಮಗು ಯಾವನಿಗೆ ಹುಟ್ಟಿರುತ್ತದೆ ಎಂದು ಇಬ್ಬರಿಗೂ ಪ್ರಮಾಣೀಕರಿಸಲಾಗದ ಇಬ್ಬಂದಿತನ.
 
ತಾತ್ಕಾಲಿಕವಾಗಿ ತನ್ನೊಂದಿಗಿದ್ದು ಯಾವುದೇ ಕ್ಷಣದಲ್ಲಾದರೂ ಓಡಿಹೋಗಿ ಬಿಡುವ ಬಾಡಿಗೆ ಗಂಡಂದಿರ ಬಗ್ಗೆ ಅರಿವಿದ್ದರೂ ಕೂಡ ಅವನು ತನ್ನ ಬಾಳಸಂಗಾತಿಯಾಗಬಲ್ಲನೆಂಬ ಭ್ರಮೆಯಲ್ಲಿ ಮತ್ತೆ ಮತ್ತೆ ನನ್ನಂಥೋರು ಹಡೆಯುತ್ತಲೇ ಹೋಗ್ತಿವಿ, ಹಾಗೆ ಹಡೆದ ನಂತರವೇ ಇಬ್ಬರ ಮಧ್ಯೆ ಬಿರುಕು ಬಿಟ್ಟು ಅದು ಅಗಲಗೊಳ್ಳುವುದು. ನಮ್ಮಂಥ ಒಬ್ಬ ಲೈಂಗಿಕ ವೃತ್ತಿ ಮಹಿಳೆಗಿರುವ ನಾಲ್ಕು ಮಕ್ಕಳಿಗೂ ನಾಲ್ಕು ಅಪ್ಪಂದಿರು. ಇದು ನಮ್ಮ ಬದುಕಿಗಿರುವ ದೊಡ್ಡ ಸವಾಲು. ಮಗುವನ್ನು ಹೆತ್ತ ತಪ್ಪಿಗೆ ಹೊತ್ತುಕೊಂಡು ಹಿಡಿ ಅನ್ನಕ್ಕಾಗಿ ಅಲೆದಾಡ ಬೇಕಾಗುತ್ತದೆ. ಉಡಿಯಲ್ಲಿ ಮಗು ಕಣ್ಣು ಪಿಳುಕಿಸುತ್ತಿದ್ದರೆ, ದಂಧೆ ಮಾಡೋಳಿಗೆ ಹೊರಗಡೆ ಪ್ರಪಂಚ ನರಕ ದರ್ಶನ ಮಾಡಿಸುತ್ತದೆ. ಆಗ ಅವಳು ಅಕ್ಷರಶಃ ಬೀದಿ ಭಿಕ್ಷುಕಿ.
ಈಗಾಗಲೆ ನನಗೆ ರಾಜಿ ಇದ್ಲು. ಖರೆ ಹೇಳಬೇಕು ಅಂದ್ರೆ ನಾನು ಅವಳಿಗಾಗಿ ಜೀವ ಹಿಡಿದುಕೊಂಡಿದ್ದೆ. ಪ್ರತಿ ರಾತ್ರಿ ಬಾಬು ತನಗೊಂದು ಮಗು ಬೇಕು ಎಂದು ಪೀಡಿಸತೊಡಗಿದಾಗಲೆಲ್ಲ ನನಗೆ ರಾಜಿ ನೆನಪಾಗುತ್ತಿದ್ದಳು. ರಾಜಿ ನನ್ನ ಉಡಿಯಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ಆ ದಿನಗಳಲ್ಲಿ ನಾನು ಅನುಭವಿಸಿದ್ದ ನೋವು ನನ್ನ ಮೆದುಳಿನ ಪದರಿನಲ್ಲಿ ಇನ್ನೂ ನನಗೆ ಚುಚ್ಚುತ್ತಲೆ ಇದೆ. ನನಗೊಂದು ಶಾಲೆಗೆ ಹೋಗುವ ಮಗು ಇದೆ ಎಂಬುದು ಬಾಬುಗೂ ಗೊತ್ತು. ಆಕೆಯನ್ನು ಒಂದೆರಡು ಸಲ ಘರವಾಲಿ ರತ್ನಮ್ಮನ ಮನೆಯಲ್ಲಿ ನೋಡಿಯೂ ಇದ್ದ. ಆಗ ರಾಜಿಯನ್ನೆನೂ ಅಕ್ಕರೆಯಿಂದ ಎತ್ತುಕೊಂಡಿದ್ದು ನಾನು ಎಂದು ಕಂಡಿರಲಿಲ್ಲ. ಒಮ್ಮೊಮ್ಮೆ ರಾಜಿಯನ್ನು ಆತ ಹತ್ತಿರ ಕರೆದಾಗಲೆಲ್ಲ ಅವನ ಕಣ್ಣುಗಳಲ್ಲಿ ಯಾವುದೊ ಸಣ್ಣತನ ಇರೋದು ನನಗೆ ಗೋಚರವಾಗುತ್ತಿತ್ತು. ಅಥವಾ ಅದು ನನ್ನ ಭ್ರಮೆಯೋ. ಈ ಎಲ್ಲ ಕಾರಣಗಳಿಂದ ಯಾವುದೆ ಕಾರಣಕ್ಕೂ ಇನ್ನೊಂದು ಮಗು ನನ್ನ ಹೊಟ್ಟೆಯಲ್ಲಿ ಮೂರ್ತಗೊಳ್ಳಲು ಅವಕಾಶ ಕೊಡಬಾರದು ಎಂದು ನನ್ನ ಗಟ್ಟಿ ನಿಶ್ಚಯ ಮಾಡಿದ್ದೆ.
 
 ಈ ನಡುವೆ ಮಗುವಿನ ಕಾರಣಕ್ಕಾಗಿ ಮತ್ತು ನನ್ನ ನಡುವೆ ಅದ್ಯಾವವೋ ಕಾರಣದಿಂದ ಜಗಳಗಳು ಹೆಚ್ಚಾಗತೊಡಗಿದವು. ಮತ್ತೆ ಸರಿದಾರಿಗೆ ಬರುವುದಿಲ್ಲವೆಂದು ಗೊತ್ತಾದ ದಿನ ನಾನು ಒಂದು ದಿನ ಹುಬ್ಬಳ್ಳಿಗೆ ಮರಳಿಬಿಟ್ಟೆ. ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಈ ಮುದುಕಿ ಸಿಕ್ಕಳು. ಮುದುಕಿಯೊಂದಿಗೆ ಈ ಸಣ್ಣ ಮನೆ ಮಾಡಿಕೊಂಡು ಹೆಂಗೋ ಜೀವನ ಸಾಗಿಸುತ್ತಿದ್ದೀನಿ ಎಂದು ತನ್ನ ದೀರ್ಘ ಕಥೆ ಹೇಳಿ ಮುಗಿಸಿದ್ದಳು.
ನಾನು ಆಕೆಯ ಮಾತುಗಳನ್ನು ಮನಸ್ಸು ಬಿಗಿ ಹಿಡಿದು ಕೇಳಿಸಿಕೊಳ್ಳುತ್ತಾ ಕುಳಿತೆ ಇದ್ದೆ. ಆ ರಾತ್ರಿಯ ಗಾಢಾಂಧಕಾರ ಸುರಿಯುತ್ತಿದ್ದುದು ಅವಳ ಪುಟ್ಟ ಮನೆಯ ಕಿಡಕಿಯ ಮೂಲಕ ಗೋಚರಿಸುತ್ತಿತ್ತು. ಈ ಅಂಧಕಾರ ತೊರೆದು ಬೆಳಕು ಹರಿಯಬಹುದೇ ಎಂಬ ಹುಸಿ ನಿರೀಕ್ಷೆಯಲ್ಲಿ ಕಾಯುತ್ತಲೇ ಕುಳಿತಿದ್ದೆ. ಆ ಕತ್ತಲಲ್ಲಿಯೂ ಒಂದು ಮಿಂಚಿನ ಚಳಕೊಂದು ಕಂಡಿತು. ಗೆಳೆಯನೊಬ್ಬ ರಾಜಿಯಂತಹ ಮಕ್ಕಳಿಗಾಗಿ ನಡೆಸುತ್ತಿದ್ದ ವಸತಿ ಶಾಲೆ ಪಕ್ಕನೆ ನೆನಪಿಗೆ ಬಂತು. ನಾನು ಆ ಕ್ಷಣವೇ ಶಾರದೆಯ ಮಗಳು ರಾಜಿಯನ್ನು ಸೇರಿಸಬೇಕೆಂದು ನಿರ್ಧರಿಸಿದೆ.
 
'ನಿನ್ನ ಕಷ್ಟ ನಿನ್ನಲ್ಲಿಗೆ ಮುಗಿಯಲಿ. ರಾಜಿಯನ್ನು ನನ್ನೊಂದಿಗೆ ಕಳುಹಿಸಿಕೊಡು. ಅವಳ ಬದುಕಲ್ಲಾದರೂ ಬೆಳಕು ಮೂಡಲಿ' ಎಂದು ಶಾರದೆಗೆ ಹೇಳಿದೆ. 'ಆದರೆ, ನನಗವಳನ್ನು ಬಿಟ್ಟಿರುವ ಶಕ್ತಿಯಿಲ್ಲ' ಎಂದು ಶಾರದೆ ಅಳತೊಡಗಿದಳು. ಹೊರಗಡೆ ನಮ್ಮ ಮಾತಗಳನ್ನೆಲ್ಲ ಕೇಳಿಸಿಕೊಳ್ಳುತ್ತ ಮಲಗಿಕೊಂಡಿದ್ದ ಮುದುಕಿ ದಡಗ್ಗನೆ ಎದ್ದು ಒಳ ಬಂದಳು. 'ಅವಳ ಬುದ್ದಿ ವೊಂಟೊಗೈತಿ, ನಾವು ಪಟ್ಟ ಪಾಡು ನಮ್ಮಲ್ಲಿಗೆ ಸಾಕು. ಏನು ಅರೀದ ಮಗಾ ಯಾಕ ಅನುಬೋಸಬೇಕು ಕರ್ಕಂಡು ಹೋಗಪ್ಪಾ ನಿನಗ ಪುಣ್ಯ ಬರತೈತಿ.' ಎಂದ ಮುದುಕಿಯ ಮಾತಲ್ಲಿ ನಿರ್ಧಾರವಿತ್ತು.
(ಮುಂದುವರೆಯುವುದು..)
* * *
ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *