ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ

ರೂಮಿಗೆ ಬಂದ ಹರಿ ಅನೂಷಾಳಿಗೆ ಕಾಲ್ ಮಾಡಿದ.

“ಹೇ ಅನೂಷ ಏನ್ ಮಾಡ್ತಿದ್ದೀಯಾ?”

” ಏನಿಲ್ಲಪ್ಪ. ಈಗ ಜಸ್ಟ್ ಊಟ ಆಯ್ತು, ಸುಮ್ಮನೆ ಕೂತಿದ್ದೀನಿ. ಮನೆಯಲ್ಲಿ ಫುಲ್ ಖುಷ್ ಕಣೋ, ಕೆಲಸ ಸಿಕ್ಕಿದ್ದಕ್ಕೆ”

” ಹೌದಾ… ನಮ್ಮನೇಲೂ ಅಷ್ಟೇ, ತುಂಬಾ ಖುಷಿಯಾಗಿದ್ದಾರೆ. ಆದ್ರೂ ನಮ್ಮಪ್ಪ, ಕೊನೆಗೊಂದು ಬಾಂಬ್ ಹಾಕಿನೆ ಹೋದ್ರು ನೋಡು.”

” ಹ್ಹ….ಹ್ಹ…. ಹಂಗೆ ಆಗ್ಬೇಕು ನಿನಗೆ. ಅಂದ್ಹಾಗೆ, ಏನ್ ಬಾಂಬು ಅದು ಮಿಸ್ಟರ್ ಹರಿ?”. ಎಂದು ರೇಗಿಸಿದಳು ಅನೂಷಾ.

“ಏಯ್… ಸಾಕು ಸುಮ್ನಿರೇ ಕುಳ್ಳಿ. ಏನಿಲ್ಲ ಕೆಲಸ ಸಿಕ್ತು ಅಂತ ಹಾರಾಡಬೇಡ. ಇನ್ನೊಂದು ಸೆಮ್ ಇದೆ, ನೆಟ್ಟಗೆ ಓದ್ಕೋ. ಅಂತ ಬೈದು ಹೋದ್ರು”

” ಓಹೋ ಅವರು ಹೇಳುವುದು ಕರೆಕ್ಟಾಗಿದೆ ಬಿಡು ಇದೊಂದು ಸೆಮ್ ಪಾಸಾಗಬೇಕಲ್ಲಪ್ಪ.” ಎಂದು ಗೊಣಗಿದಳು. ದೀರ್ಘಕಾಲದ ಮಾತುಕತೆಯಾದ ನಂತರ ಸಂಜೆ ಪಾರ್ಕಲ್ಲಿ ಮೀಟಾಗಿ ನಂತರ  ಡೊಮಿನೊಸ್ ಗೆ ಹೋಗೋಣವೆಂದು ನಿರ್ಧರಿಸಿದರು.

ಸ್ವಲ್ಪ ರೆಸ್ಟ್ ಮಾಡಿದ ಹರಿ, ಐದು ಗಂಟೆಗೆ ಎದ್ದು ಫ್ರೆಶ್ ಆಗಿ, ತಯಾರಾಗತೊಡಗಿದ.

” ಅಮ್ಮ ನಾನು ಸ್ವಲ್ಪ ಹೊರಗಡೆ ಹೋಗಿ ಬರ್ತೀನಿ.” ಎಂದು ಹೇಳಿ ಬೈಕ್ ಹತ್ತಿ ಹೊರಟ. ಪಾರ್ಕ್ ಹತ್ತಿರ ಬಂದು ನಿಂತಾಗ ಸಂಜೆ ಆರು ಗಂಟೆಯಾಗಿತ್ತು. ಅದೇ ಸಮಯಕ್ಕೆ ಬಂದ ಹರಿಯನ್ನು ನೋಡಿ ಅಚ್ಚರಿಗೊಂಡಳು ಅನೂಷಾ.

” ಇವತ್ತೇನೋ ಪೆದ್ದ,. ಇಷ್ಟು ಬೇಗ ಬಂದಿದೆಯಾ?”  ಎಂದು ರೇಗಿಸಿದಳು.

” ಸಾಕು ಸುಮ್ನಿರೇ” ಎನ್ನುತ್ತಾ ಅವಳನ್ನು ಬಿಗಿದಪ್ಪಿದ.”ಐ ಲವ್ ಯು ಕುಳ್ಳಿ.” ಎಂದು ಮೆಲು ಧ್ವನಿಯಲ್ಲಿ ಅವಳ ಕಿವಿಗೆ ಬೀಳುವಂತೆ ನುಡಿದ. ಅವಳು ಸಹ, ” ಲವ್ ಯು ಟೂ ಕಣೊ ಪೆದ್ದ” ಎಂದಳು. ಇಬ್ಬರೂ ಕೆಲಕಾಲ ಹಾಗೇ ನಿಂತು, ನಂತರ ಒಂದು ಬೆಂಚಿನ ಮೇಲೆ ಕುಳಿತು ಮಾತನಾಡತೊಡಗಿದರು.

” ಕೆಲಸ ಅಂತೂ ಸಿಕ್ತು. ಬೇಗ, ಇಬ್ಬರೂ ಮನೆಯಲ್ಲಿ ಹೇಳಿ, ಒಪ್ಸಿ ಮದುವೆ ಆಗ್ಬಿಡ್ಬೇಕು” ಎಂದಳು.

” ನಮ್ಮನೇಲಿ ಏನು ಪ್ರಾಬ್ಲಮ್ ಇಲ್ಲಪ್ಪ. ಇರೋದೆಲ್ಲ ನಿಮ್ಮ ಮನೆಯಲ್ಲೇ ನೋಡು. ನಿಮ್ಮಪ್ಪ ಇದ್ದಾರಲ್ಲ, ಅವರನ್ನು ಒಪ್ಸೋದೆ ಒಂದು ದೊಡ್ಡ ಹರಸಾಹಸ” ಎಂದ ಹರಿ.

” ಹೌದು…. ಏನ್ ಮಾಡೋದು, ನಮ್ಮಪ್ಪ ಇರೋದೇ ಹಂಗೆ.” ಅನೂಷಾಳ ಅಪ್ಪ ಮಿಲಿಟರಿಯಲ್ಲಿದ್ದು ರಿಟೈರ್ಡ್ ಆಗಿದ್ದರಿಂದ ತುಂಬಾ ಸ್ಟ್ರಿಕ್ ಆಗಿದ್ದರು. ಒಂದು ಬಾರಿ, ಹರಿ ಮತ್ತು ಅವಿನಾಶ್ ಅವಳ ಮನೆಗೆ ಹೋದಾಗ, ಇನ್ವೆಸ್ಟಿಗೇಶನ್ ಆಫೀಸರ್ ತರಹ ಅವರನ್ನು ಪ್ರಶ್ನಿಸಿ ಸಂಕೋಚಕ್ಕೆಡೆಮಾಡಿದ್ದರು. ಹೀಗಾಗಿ, ಅವತ್ತಿನಿಂದ ಹರಿ ಅವಳ ಮನೆಯ ಕಡೆಗೆ ಸುಳಿದಿರಲಿಲ್ಲ.

ಅರ್ಧಗಂಟೆ ಪಾರ್ಕಿನಲ್ಲಿ ಕಳೆದು ಇಬ್ಬರು ಡೊಮಿನೊಸ್ ನ  ಕಡೆಗೆ ಹೊರಟರು. ಹತ್ತು ನಿಮಿಷದಲ್ಲಿ ಹತ್ತಿರದ ಸ್ಟೋರ್ ಗೆ ತಲುಪಿ, ಒಳಗೆ ಹೋದರು. ವಿಶಾಲವಾದ ಸ್ಟೋರ್ ಅದು. ಮಿನುಗುವ ಲೈಟುಗಳು, ಅಲ್ಲಲ್ಲಿ ಹಾಕಿರುವ ಟೇಬಲ್ಲುಗಳು, ಕುರ್ಚಿಗಳು ಕಸ್ಟಮರ್ ನ ಖುಷಿ ಗೊಳಿಸಲು ಗೋಡೆಗೆ ತೂಗುಹಾಕಿದ್ದ ಜಗತ್ತನ್ನೇ ತೋರಿಸುವಷ್ಟು ದೊಡ್ಡದಾದ ಟಿವಿ. ಮನಸ್ಸನ್ನು ಉಲ್ಲಾಸಗೊಳಿಸುವಂತಹ ಸಂಗೀತ. ಎಲ್ಲವೂ ಮನಮೋಹಕವಾಗಿದ್ದವು.  ಇದೇನು ಮೊದಲ ಬಾರಿಯಲ್ಲ, ಹರಿ ಮತ್ತು ಅನೂಷಾ ಅಲ್ಲಿಗೆ ಹೋದದ್ದು. ಟೈಮ್ ಸಿಕ್ಕಾಗಲೆಲ್ಲ ಹೋಗುತ್ತಿದ್ದರು.

” ಎಸ್ ಸರ್. ಯುವರ್ ಆರ್ಡರ್ ಪ್ಲೀಸ್.” ಎಂದು  ಕೌಂಟರ್ ನ ಬಳಿ ಹೋಗುತ್ತಲೇ ಕೇಳಿದಳು, ಸ್ಟೋರ್ ನಾಕೆ.

” ಔಟಿe ಠಿeಠಿಠಿಥಿ ಠಿಚಿಟಿeeಡಿ ಚಿಟಿಜ oಟಿe veggie ಠಿಚಿಡಿಚಿಜise.”

” ಥ್ಯಾಂಕ್ಯೂ ಸರ್. ವೇಟ್ ಮಾಡಿ.” ಎಂದಳು.

ಹತ್ತು ನಿಮಿಷದ ನಂತರ ಪಿಜ್ಜಾ ಬಂತು. ಇಬ್ಬರೂ ಮಾತನಾಡುತ್ತಾ ತಿಂದರು. ಅದೆಂತಹದೊ ಬ್ರಹ್ಮಾ ಲೋಕದಲ್ಲಿ ಮುಳುಗಿ ಬಿಟ್ಟಿದ್ದರು. ಪಿಜ್ಜಾ ಖಾಲಿಯಾದದ್ದೆ ಗೊತ್ತಾಗಲಿಲ್ಲ ಅವರಿಗೆ.

” ಇನ್ನೊಂದು ಆರ್ಡರ್ ಮಾಡ್ಲಾ? ತಿಂತೀಯಾ?” ಎಂದು ಕೇಳಿದ ಹರಿ.

” ಉಹುಂ ಬೇಡ ಕಣೋ, ಈಗಲೇ ಸಾಕಾಗಿದೆ.” ಎಂದಳು. ಇಬ್ಬರು ಕೈ ಒರೆಸಿಕೊಂಡು ಹೊರನಡೆದರು.

” ಹಿಂಗೆ ಪದೇಪದೇ ಪಿಜ್ಜಾ ನಿಂತಿದ್ರೆ ಡುಮ್ಮಿ ಆಗೋಗ್ತಿನಿ ನಾನು. ಅಷ್ಟೇ.”

” ಹ್ಹ….ಹ್ಹ….ಆಗೋದ್ ಏನು ಬಂತು, ಡುಮ್ಮಿನೆ ಇದ್ದೀಯಲ್ಲ..ಹ್ಹ….ಹ್ಹ..” ಎಂದು ಜೋರಾಗಿ, ಅನೂಷಾಳನ್ನು ಛೇಡಿಸುತ್ತಾ ನಕ್ಕ.

” ಸಾಕು ಸುಮ್ನಿರೋ. ನೀನೇನು ಸ್ಲಿಮ್ ಅಂಡ್ ಟ್ರಿಂ ಆಗಿದೀಯ ನೋಡು. ನೀನು ಅಷ್ಟೇ ಡುಮ್ಮ.” ಎಂದು ರೇಗಿದಳು.

” ಓಹೋ ಸಿಟ್ಟುಬಂತು ಮೇಡಂಗೆ. ಸುಮ್ನೆ ಕಿಂಡಲ್ ಮಾಡಿದೆ.” ಎಂದು ಅವಳ ಭುಜವನ್ನು ಸವರಿದ. ಇಬ್ಬರು ಮೈ ಹೊಸೆಯುತ್ತ ಬೈಕಿನೆಡೆಗೆ ಹೊರಟರು. ” ಕೆಲಸ ಸಿಕ್ಕಿದ್ದು ಮೆಲಿಟಾಗೊಂದು ಹೇಳಬೇಕು, ಇಲ್ಲದಿದ್ದರೆ ನನ್ನ ಕೊಲೇನೆ ಮಾಡ್ತಾಳೆ. ನಾನು ಹೇಳ್ದಿದ್ರೆ ಹೇಗಾದರೂ ಗೊತ್ತಾಗಿಬಿಡುತ್ತೆ ಅವಳಿಗೆ. ಅದಕ್ಕೂ ಮುಂಚೆ ಹೇಳ್ಬೇಕು.”

” ಹುಂ…ಹುಂ… ಹೇಳಪ್ಪ ನಿನ್ನ ಬೆಸ್ಟೀಗೆ. ಇಲ್ಲದಿದ್ದರೆ ಆಂಗ್ರಿ ಬರ್ಡ್ ಆಗಿಬಿಡುತ್ತಾಳೆ….ಹ್ಹ….ಹ್ಹ…”. ಮೆಲಿಟಾ ಮತ್ತು ಹರಿ ಚೈಲ್ಡ್ ಹುಡ್ ಫ್ರೆಂಡ್ಸ್ ಆಗಿದ್ದರು. ಇಬ್ಬರು ಪಿಯುಸಿವರೆಗೂ ಜೊತೆಗೆ ಹೊಂದಿದವರಾಗಿದ್ದರಿಂದ ತುಂಬಾ ಕ್ಲೋಸ್ ಇದ್ದರು. ಇವರಿಬ್ಬರ ಸ್ನೇಹ ಅನೂಷಾಗೆ ಅಷ್ಟೇನು ಹಿಡಿಸುತ್ತಿರಲಿಲ್ಲ. ಆದರೂ ಅದನ್ನ  ವ್ಯಕ್ತಪಡಿಸುತ್ತಿರಲಿಲ್ಲ.

” ಹತ್ತು…. ಎಂಟೂವರೆ ಆಗಿದೆ ಟೈಮ್. ಮನೆ ಹತ್ತಿರಾನೆ ಬಿಡ್ತೀನಿ.” ಎಂದ ಹರಿ.

” ಬೇಡ ಕಣೋ. ಅಪ್ಪ ನೋಡಿದ್ರೆ ಬೈತಾರೆ. ಸುಮ್ನೆ ಯಾಕೆ”

” ಇರ್ಲಿ ಬಾ…. ಅವರಿಗೆ ಕಾಣಿಸದೆ ಇರೋ ಹಾಗೆ ಬಿಟ್ಟು. ಬೇಗ ವಾಪಸ್ ಬರ್ತೀನಿ”

” ಹುಂ ಸರಿ” ಎಂದು ಬೈಕ್ ಹತ್ತಿದ್ದಳು ಅನೂಷಾ. ಅಲ್ಲಿಂದ ಸುಮಾರು ಇಪ್ಪತ್ತೈದು ನಿಮಿಷದ ಹಾದಿ. ಪ್ರತಿ ಬಾರಿ ಬಂದಾಗ ತನ್ನ ಸ್ಕೂಟಿ ತರುತ್ತಿದ್ದಳು. ಆದರೆ, ಈ ಬಾರಿ, ಸ್ಕೂಟಿ ಅವಳ ತಂದೆ ತೆಗೆದುಕೊಂಡು ಹೋಗಿದ್ದರಿಂದ ಬಸ್ಸಿಗೆ ಬಂದಿದ್ದಳು. ಹೀಗಾಗಿ ಬಿಡ್ತೀನಿ ಅಂತ ಒತ್ತಾಯ ಮಾಡಿದ ಹರಿ.  ಇಪ್ಪತ್ತೈದು ನಿಮಿಷಗಳ ಪ್ರಯಾಣದ ನಂತರ ಮನೆಯ ಹತ್ತಿರ ತಲುಪಿದರು. ಅವಳನ್ನು ಬಿಟ್ಟವನೇ “ಬಾಯ್” ಎಂದು ಗಾಡಿ ಬಿಟ್ಟುಬಿಟ್ಟ. ಅವಳನ್ನು ಬಿಟ್ಟು ಮನೆಗೆ ತಲುಪುವುದರಲ್ಲಿ ಒಂಭತ್ತುವರೆಯಾಗಿತ್ತು. ಅಮ್ಮನ ಒತ್ತಾಯಕ್ಕೆ ಸ್ವಲ್ಪವೇ ಊಟ ಮಾಡಿ ರೂಮಿನೊಳಗೆ ಬಂದುಬಿಟ್ಟ. ಅಂದಿನ ದಿನ ಎಲ್ಲವೂ ಸಂತೋಷವನ್ನು ಕೊಡುವಂತಹ ಸಂಗತಿಗಳಾಗಿದ್ದವು. ಕೆಲಸ ಸಿಕ್ಕ ಸುದ್ದಿ ಹಾಗೂ ಪ್ರೇಯಸಿಯ ಜೊತೆಗೆ ಹಾಯಾಗಿ ಸುತ್ತಾಡಿದ್ದು ಎಲ್ಲವೂ ಮನಸ್ಸನ್ನು ಖುಷಿಗೊಳಿಸಿದ್ದವು. ಒಬ್ಬ ಯುವಕನ ಬಾಳಿನಲ್ಲಿ ಸಂತೋಷವನ್ನು ವೃದ್ಧಿಸುವ ಘಟ್ಟವೆಂದರೆ ಇದೇ ನೋಡಿ. ಉದ್ಯೋಗವೆನ್ನುವುದು ಆ ಯುವಕನ ಬಾಳಿನಲ್ಲಿ ಎಂತಹ ಪ್ರಮುಖ ಪಾತ್ರವನ್ನು ವಹಿಸುತ್ತದೆಂದರೆ, ಅದರಲ್ಲಿ ಬಿದ್ದು ಹೊರಳಾಡುತ್ತಿರುವವರಿಗೆ ಗೊತ್ತಾಗುತ್ತದೆ. ಆ ದಿನ ಹರಿಯನ್ನೂ ಸಮೀಪಿಸುತ್ತಿತ್ತು. ಹೀಗಾಗಿ ಸಹಜವಾಗಿಯೇ ಖುಷಿಯಾಗಿದ್ದ. ತಡರಾತ್ರಿಯವರೆಗೂ ಅನೂಷಾಳ ಜೊತೆ ಚಾಟ್ ಮಾಡುತ್ತಾ ಮಲಗಿದ್ದ. ನಂತರ  ನಿದ್ರೆ ಬಂತೆಂದು ಇಬ್ಬರು ಮಲಗಿದರು. ಹರಿಗೆ ನಿದ್ರೆಯೆ ಬರಲಿಲ್ಲ. ಖುಷಿಯಾದಾಗ ನಿದ್ರೆ ಬರುವುದಿಲ್ಲವಂತೆ. ಹೊರಳಾಡಿದ, ಹೊರಳಾಡುತ್ತಲೆ ಇದ್ದ. ಅದ್ಯಾವಾಗ ನಿದ್ರೆ ಹತ್ತಿತೊ ಗೊತ್ತಿಲ್ಲ. ಬೆಳಗ್ಗೆ, ಅಮ್ಮ ಬಂದು “ಎದ್ದೇಳು ಹರಿ, ಲೇಟಾಯ್ತು.” ಎಂದಾಗಲೆ ಎಚ್ಚರವಾಗಿದ್ದು ಅವನಿಗೆ. ಎದ್ದವನೇ ದಡಬಡ ಮಾಡುತ್ತಾ ಸ್ನಾನ ಮಾಡಿ, ಹೋದಷ್ಟು ತಿಂಡಿಯನ್ನು ತಿಂದವನೇ ಕಾಲೇಜಿನೆಡೆಗೆ ಹೊರಟ. ಲೇಟ್ ಆಗಿದ್ದರಿಂದ ಮೊದಲನೆಯ ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನಿನಲ್ಲಿ ಕುಳಿತ.

ಎಕ್ಸಾಮ್ ಹತ್ತಿರವಾದಂತೆ ಇಬ್ಬರು ತಮ್ಮ ತಮ್ಮ ಪುಸ್ತಕಗಳಲ್ಲಿ ಮುಳುಗಿದ್ದರು. ಎಕ್ಸಾಮ್ ಒಂದು ವಾರ ಇರುವಂತೆಯೇ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಸೆಲೆಕ್ಟ್ ಆದವರಿಗೆ ಒಂದು ಮೇಲ್ ಬಂದಿತ್ತು. ಹರಿಗೆ ದುರದೃಷ್ಟವಶಾತ್ ಹೈದರಾಬಾದಿಗೆ ಪೋಸ್ಟಿಂಗ್ ಆಗಿತ್ತು. ಅನೂಷಾಳಿಗೆ ಬೆಂಗಳೂರಿನಲ್ಲಿಯೆ ಪೋಸ್ಟಿಂಗ್ ಆಗಿತ್ತು. ಒಂದು ಕ್ಷಣ ಕುಗ್ಗಿ ಹೋದ ಹರಿ. ಪ್ರೀತಿಸಿದ ಗೆಳತಿ ಅಕ್ಕರೆಯ ತಂದೆ- ತಾಯಿ ಎಲ್ಲರನ್ನು ಹೇಗೆ ಬಿಟ್ಟುಹೋಗುವುದು. ಬಂದ ಆಫರನ್ನು ಬಿಟ್ಟುಬಿಡಬೇಕೆನಿಸಿಬಿಟ್ಟಿತು.  ಆದರೆ ಅಂತಹ ಒಳ್ಳೆ ಸಂಬಳ ಹಾಗೂ ಕಂಪನಿಯನ್ನು ಬಿಡಲು ತಯಾರೂ ಇರಲಿಲ್ಲ. ಏನು ಮಾಡಬೇಕೆಂಬುದೆ ತಿಳಿಯಲಿಲ್ಲ. ಎರಡು ದಿನದಿಂದ ಸಪ್ಪಗಿರುವ ಮಗನನ್ನು ನೋಡಿ, ಚಡಪಡಿಸುತ್ತಾ ಸೀತಮ್ಮನವರು ಕೇಳಿದರು,

” ಯಾಕೋ ಹರಿ ಹೆಂಗಿದ್ದೀಯಾ? ಏನಾದರೂ ಪ್ರಾಬ್ಲಮ್ ಆಗಿದೆನಾ?”

” ಏನಿಲ್ಲ ಬಿಡು ಅಮ್ಮ. ಇನ್ನೊಂದೆರಡು ದಿನ, ತಾನಾಗೆ ಸರಿ ಹೋಗುತ್ತೆ.”

” ಹೇಳೊ ಏನಾಯ್ತು? ಸಾಲ್ವ್ ಮಾಡೋಕ್ ಆದ್ರೆ ನಾನು ನಿಮ್ಮಪ್ಪ ಹೆಲ್ಪ್ ಮಾಡ್ತೀವಿ.”

” ಏನಿಲ್ಲ ಅಮ್ಮ. ನಂಗೆ ಹೈದರಾಬಾದಿಗೆ ಪೋಸ್ಟಿಂಗ್ ಆಗಿದೆ. ನಂಗೆ ಅಲ್ಲಿಗೆ ಹೋಗೋಕೆ ಇಷ್ಟ ಇಲ್ಲ.”

” ಅಯ್ಯೋ ಹುಚ್ಚ ಇಷ್ಟೇನಾ. ನಾನೇನೊ ಬೇರೆ ಅಂದುಕೊಂಡು ಹೆದರಿಬಿಟ್ಟಿದ್ದೆ.” ಎಂದರು ಅಮ್ಮ. ಇಬ್ಬರ ನಡುವೆ ಕ್ಷಣಕಾಲ ಮೌನ ಆವರಿಸಿತು.

” ಇರ್ಲಿ ಬಿಡು ಅಮ್ಮ. ಏನ್ ಮಾಡೋದು, ನನ್ನ ಹಣೆಬರಹ. ಅಲ್ಲಿಗೆ ಹೋಗ್ತಿನಿ.”  ಎಂದು ಮಾತು ಮುಗಿಸಲು ಹೊರಟ ಹರಿ.

” ಅಲ್ವೋ ಹರಿ, ಇಷ್ಟು ಸಣ್ಣ ವಿಷಯಕ್ಕೆ ಹಿಂಗೆ ಬೇಜಾರಾಗಿ ಕೂತ್ಕೊಂಡುಬಿಟ್ಟರೆ ಮುಂದೆ ಹೆಂಗೋ?. ಸ್ಟ್ರಾಂಗ್ ಆಗಿರಬೇಕು ನೀನು. ಹೈದ್ರಾಬಾದ್ ಏನು ಸಾವಿರ ಕಿಲೋಮೀಟರ್ ದೂರದಲ್ಲಿಲ್ಲ. ಒಂದು ರಾತ್ರಿಯ ಪ್ರಯಾಣ. ಫ್ಲೈಟ್ ಗೆ ಬಂದರಂತೂ ಕಣ್ಣು ಮುಚ್ಚಿ ಕಣ್ಣು ತೆಗೆಯುವುದರಲ್ಲಿ ಬೆಂಗಳೂರಿನಲ್ಲಿ ಇರ್ತಿಯ. ಎದ್ದೇಳು ಫ್ರೆಶ್ ಆಗಿ ತಿಂಡಿ ತಿನ್ನು. ಇದನ್ನೆಲ್ಲಾ ತಲೆಯಿಂದ ತೆಗೆದು ಹಾಕು.” ಎಂದು ಹರಿಯನ್ನು ಸಮಾಧಾನ ಪಡಿಸಿದರು. ನಂತರದ ದಿನಗಳಲ್ಲಿ ಹರಿ ಕೊಂಚ ಗೆಲುವಿನಿಂದಿದ್ದ. ಕ್ರಮೇಣ ಖುಷಿಖುಷಿಯಾಗಿ ಎಲ್ಲರ ಜೊತೆ ಓಡಾಡತೊಡಗಿದ. ಗಂಡು ಮಕ್ಕಳಿಗೆ ಹಾಗೇ ನೋಡಿ, ಅಮ್ಮನ ಪ್ರೀತಿಯ ಮಾತುಗಳು ಹಾಗು ಹಿತನುಡಿಗಳು ಬೇಗನೆ ತಲೆಯೊಳಗೆ ಹೋಗಿಬಿಡುತ್ತವೆ. ಅಮ್ಮನೆಂದರೆ ಅದೇನೋ ಸ್ಟ್ರೆಂತ್ ಇದ್ದಂತೆ. ಅವಳೊಬ್ಬಳೇ ಎಂತಹ ಕಠಿಣ ಪರಿಸ್ಥಿತಿಯಲ್ಲಿದ್ದರೂ ಅದರಿಂದ ಪಾರು ಮಾಡಬಲ್ಲಳು. ಕೇವಲ ಅವಳ ಅಕ್ಕರೆಯ ನುಡಿಗಳಿಂದ.

ಇನ್ನೇನು ಒಂದೇ ತಿಂಗಳು ಉಳಿದಿತ್ತು ಕೆಲಸಕ್ಕೆ ಜಾಯಿನ್ ಆಗಲು. ಕೊನೆಯ ಸೆಮಿಸ್ಟರ್ ಕೂಡ ಮುಗಿದಿತ್ತು. ಒಳ್ಳೆಯ ಅಂಕ ಕೂಡ ಬಂದಿತ್ತು. ಹರಿ ರಜೆಯಲ್ಲಿ ಫ್ರೆಂಡ್ಸ್ ಜೊತೆ ಊರೂರು ಅಲೆಯುತ್ತಿದ್ದ. ಸಂಬಂಧಿಕರ ಮನೆಗೆ ಹೋಗಿ ಬಾರೋ ಎಂದು ಹೇಳಿ ಹೇಳಿ ಅಮ್ಮನಿಗೆ ಸಾಕಾಗಿತ್ತು. ಕೊನೆಗೂ ಒಂದು ದಿನ ” ನಡಿ ಅಮ್ಮ ಅದೆಷ್ಟು ದಿನ ಇರೋಣ ಅಂತಿಯೋ ಇದ್ದು ಬರೋಣ.” ಎಂದು ಸಿಡಿಮಿಡಿಗೊಂಡು ಹೊರಟ. ಸೋದರತ್ತೆಯ ಮನೆ, ದೊಡ್ಡಪ್ಪ, ಚಿಕ್ಕಪ್ಪ ಹೀಗೆ ಒಂದು ವಾರ ಎಲ್ಲರ ಮನೆಗೂ ತಿರುಗಾಡಿದರು. ಅಲ್ಲಿ ಯಾರು ಇವನು ವಯಸ್ಸಿನವರು ಇಲ್ಲದಿದ್ದರಿಂದ ತುಂಬಾ ಬೋರ್ ಆಗುತ್ತಿತ್ತು. ಒಂದೇ ಕಡೆ ಕೂರುವ ವ್ಯಕ್ತಿ ಹರಿಯಾಗಿರಲಿಲ್ಲ. ಹೇಗೋ ಅಮ್ಮನ ಒತ್ತಾಯಕ್ಕೆ ಸುಮ್ಮನಿರುತ್ತಿದ್ದ.

ಹೀಗೆ ಒಂದು ತಿಂಗಳು ಮುಗಿಯುತ್ತಾ ಬಂತು. ಹರಿಗೆ ಮತ್ತೆ ಸಂಕಟ ಪ್ರಾರಂಭವಾಯಿತು.

” ನಿಮ್ಮನ್ನೆಲ್ಲ ಹೇಗೆ ಬಿಟ್ಟಿರುವುದು ಅನೂಷಾ. ನನಗೆ ಈಗಲೇ ಬೇಜಾರಾಗ್ತಿದೆ.” ಎಂದು ಗೋಳಾಡಿದ.

” ಏ ಪೆದ್ದ, ಅದೇನು ಹೆಣ್ಣುಮಕ್ಕಳ ಹಂಗೆ ಗೊಳೋ ಅಂತ ಹೇಳ್ತಿಯಾ. ಸುಮ್ಮನೆ ಇದ್ದರೆ ಸರಿ, ಇಲ್ಲದಿದ್ದರೆ ಅಲ್ಲಿಗೆ ಬಂದು ಸಾಯಿಸಿ ಬಿಡ್ತೀನಿ.” ಎಂದು ಜೋರಾಗಿ ನಕ್ಕಳು.

“ನಿನಗೇನು ಗೊತ್ತು ನನ್ನ ಕಷ್ಟ. ಬಿಡು ಹೋಗ್ತೀನಿ, ಒಬ್ಬಳೇ ಆರಾಮಾಗಿರು.”

” ಹುಚ್ಚ ಹಂಗಲ್ಲ ಹೇಳಿದ್ದು. ಸಾರಿ ಕಣಪ್ಪ. ನಂಐಗು ಅರ್ಥ ಆಗುತ್ತೆ. ಆದರೆ ಏನ್ ಮಾಡೋದು ಕೆಲಸ ಮಾಡಬೇಕಲ್ಲ. ಒಂದು ವರ್ಷ ಅಲ್ಲಿ ವರ್ಕ್ ಮಾಡು, ಆಮೇಲೆ ಇಲ್ಲಿಗೆ ಟ್ರಾನ್ಸ್ಫರ್ ತೆಗೆದುಕೊಂಡರಾಯ್ತು.”

” ಹಾ ಅಷ್ಟೇ ಮಾಡ್ತೀನಿ ಬಿಡು. ಸರಿ ನಾನು ಸ್ವಲ್ಪ ಹೊರಗಡೆ ಹೋಗಬೇಕು ನಾಳೆ ನೈಟ್ ನೆ ಹೊರಡಬೇಕು.”

” ಹೂಂ ಸರಿ, ಹೊರಡು. ಬಾಯ್. ಟೇಕ್ ಕೇರ್.” ಫೋನು ಇಟ್ಟ ನಂತರ ಅಮ್ಮ ಮಗ ಇಬ್ಬರೂ ಮಾರ್ಕೆಟ್ಗೆ ಹೊರಟರು.

” ಏನೇನ್ ಬೇಕು ಎಲ್ಲ ತಗೊಂಡು ಬಿಡು ಆಮೇಲೆ ಅದು ಮತ್ತೆ ಇದು ಮತ್ತೆ ಅಂತ ಕೂತ್ಕೋ ಬೇಡ.”

” ಹು ಅಮ್ಮ. ಸರಿ ನಡಿ ಈಗ.” ಎಂದು ಹೊರಟರು.

ಮಾರ್ಕೆಟ್ಟಿನಿಂದ ಬಂದನಂತರ ಹರಿ ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡ. ಅಮ್ಮನು ಸಹ ಸಹಾಯ ಮಾಡಿದರು. ಒಂದು ದೊಡ್ಡ ಟ್ರಾಲಿ ಜೊತೆಗೆ ಒಂದ ಬ್ಯಾಗ್ ಪ್ಯಾಕ್ ನಷ್ಟು ಬಟ್ಟೆಗಳು ಹಾಗೂ ಇತರೆ ಸಾಮಾನುಗಳನ್ನು ತೆಗೆದುಕೊಂಡ. ಹನ್ನೊಂದುವರೆಗೆ ಬಸ್ ಇದ್ದುದರಿಂದ, ಅಷ್ಟೇನೂ ಗಡಿಬಿಡಿಯಿರಲಿಲ್ಲ. ಪ್ಯಾಕಿಂಗ್ ಮುಗಿಸಿ ಊಟ ಮಾಡಲು ಹೊರಟ ಹರಿ.

” ಎಲ್ಲಾ ಪ್ಯಾಕ್ ಮಾಡಿಕೊಂಡ್ಯಾ ಹರಿ?” ಎಂದು ಅಪ್ಪ ಕೇಳಿದರು.

” ಹುಂ ಅಪ್ಪ. ಎಲ್ಲ ಇಟ್ಕೊಂಡಿದೀನಿ.”

” ಬೇಜಾರಾಗಬೇಡ ಕಣೋ. ನಾವು ಬಂದು ಹೋಗ್ತಾ ಇರ್ತೀವಿ. ಒಂದೆರಡು ತಿಂಗಳಷ್ಟೇ, ಆಮೇಲೆ ತಾನೆ ಸರಿಹೋಗುತ್ತೆ. ಕೆಲಸದ ಕಡೆ ಗಮನ ಹರಿಸು. ನಾವು ಆರಾಮಾಗಿರ್ತೀವಿ ಇಲ್ಲಿ..”

” ಹುಂ ಅಪ್ಪ. ನೀವು ಆರೋಗ್ಯದ ಕಡೆ ಗಮನ ಕೊಡಿ ತಿಂಗಳಿಗೊಮ್ಮೆಯಾದರೂ ಬಂದು ಹೋಗ್ತೀನಿ.”

” ಹುಂ ಆಯ್ತು.”

ಊಟ ಮುಗಿಸಿದ ನಂತರ ರೆಡಿಯಾಗಲು ಹೊರಟ ಹರಿ. ಹತ್ತುವರೆಯಾಗಿತ್ತು.  ಮನೆಯಿಂದ ಬಸ್ಟ್ಯಾಂಡಿಗೆ ಹೋಗಲು ಕನಿಷ್ಠಪಕ್ಷ ಮೂವತ್ತು ನಿಮಿಷಗಳಾದರೂ ಬೇಕಿತ್ತು. ಹೀಗಾಗಿ ಹೊತ್ತುವರೆಗೆ ಮನೆಗೆ ಬಿಡಲು ಸಿದ್ಧನಾದ, ಅರ್ಧ ಗಂಟೆ ಮುಂಚೆ ಹೋಗುವುದು ಒಳಿತೆಂದು. ಕ್ಯಾಬ್ ಗಾಗಿ ಕಾಯುತ್ತಾ ಕುಳಿತಿದ್ದ ಹರಿ, ಬಂದಕೂಡಲೇ ಹೊರಟ. ಬಸ್ಟ್ಯಾಂಡಿನವರೆಗೆ ನಾವು ಬರುತ್ತೇವೆ ಎಂದರೂ ಬೇಡವೆಂದು ಮನೆಯಲ್ಲೇ ಇರಲು ಹೇಳಿದ ಅಪ್ಪ-ಅಮ್ಮನಿಗೆ. ಅಷ್ಟು ರಾತ್ರಿಯಲ್ಲಿ ವಾಪಸ್ಸು ಬರುವುದು ಕಷ್ಟವೆಂದು, ಅವರು ಕೂಡ ಸುಮ್ಮನಾದರು. ಮಗನನ್ನು ತಬ್ಬಿಕೊಂಡು ” ಹೋಗಿ ಬಾ ಹುಷಾರು.” ಎಂದು ಕಣ್ಣೀರು ಹಾಕಿದರು ಅಮ್ಮ. ಮಗನ ಸಪ್ಪೆ ಮುಖ ನೋಡಿ ಅಪ್ಪನಿಗೂ ಬೇಜಾರಾಯಿತು. ಅನ್ನಕ್ಕಾಗಿ ಇದೆಲ್ಲ ಮಾಡಲೇಬೇಕೆಂದು ಅವರಿಗೂ ತಿಳಿದಿತ್ತು. ಹೀಗಾಗಿ ಸಮಾಧಾನ ಮಾಡಿಕೊಂಡರು. ” ಹೋಗಿಬರುತ್ತೇನೆ ಅಪ್ಪ, ಅಮ್ಮ.” ಎಂದು ಹೇಳಿ, ಅವರ ಕಾಲಿಗೆ ನಮಸ್ಕರಿಸಿ, ಮನೆಯಿಂದ ಹೊರಟ. ಮನೆಯ ಬಾಗಿಲಿನಿಂದಲೇ ಮಗನನ್ನು ಕಳುಹಿಸಿಕೊಟ್ಟರು.

” ಬಾಯ್.” ಅಂದು ಕೈಬೀಸಿ ಹೊರಟ.

” ಬಸ್ ಹೊರಟಿದೆ ಹೋಗ್ ಬರ್ತೀನಿ. ಬಾಯ್ .ಮಿಸ್ ಯು.” ಎಂಬ ಮೆಸೇಜ್ ಸ್ಕ್ರೀನಿನ ಮೇಲೆ ಬರುತ್ತಲೇ ಮೊಬೈಲನ್ನು ಕೈಗೆತ್ತಿಕೊಂಡಳು ಅನೂಷಾ.

” ಹೂ ಕಣೋ. ಸರಿ ಹೋಗ್ಬಾ, ಹುಷಾರು, ಟೇಕ್ ಕೇರ್. ಮಿಸ್ ಯು ಕಣೋ, ಬೆಳಗ್ಗೆ ರೀಚ್ ಆದ್ಮೇಲೆ ಮೆಸೇಜ್ ಮಾಡು. ಬಾಯ್.”

” ಹುಂ ಆಯ್ತು ಬಾಯ್ ಗುಡ್ ನೈಟ್.”

” ಗುಡ್ ನೈಟ್.”

 

ಕಣ್ಣುಬಿಟ್ಟಾಗ ಹೈದರಾಬಾದಿನಲ್ಲಿದ್ದ ಹರಿ. ಮೊದಲಬಾರಿಗೆ ಕಾಲಿಡುತ್ತಿದೆ. ಹೇಗಿರುತ್ತದೋ ಏನೋ ಎನ್ನುವ ದುಗುಡ ಅವನಲ್ಲಿತ್ತು. ಬಸ್ ಇಳಿಯುತ್ತಲೇ, ಕ್ಯಾಬ್ ಮಾಡಿಕೊಂಡು ಕಂಪನಿಯವರು ಬುಕ್ ಮಾಡಿದ್ದ ಹೋಟೆಲಿಗೆ ಹೋದ.

ಒಟ್ಟು ನಲವತ್ತು ಜನರನ್ನು ಅಪಾಯಿಂಟ್ ಮಾಡಿಕೊಂಡಿದ್ದ ಕಂಪನಿಯವರು, ಎಲ್ಲರಿಗೂ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಒಂದು ವಾರ ರೂಮಿನಲ್ಲಿದ್ದು, ಅನಂತರ ಬೇರೆಕಡೆಗೆ ರೂಮ್ ನೋಡಿಕೊಳ್ಳಬಹುದಿತ್ತು. ಅಥವಾ, ಅದೇ ರೂಮಿಗೆ ಹಣವನ್ನು ಕೊಟ್ಟು ಮುಂದುವರಿಸಲೂ ಬಹುದಿತ್ತು. ಅಲ್ಲಿಯ ಹವಾಮಾನ ಹಾಗು ಊಟ ತಿಂಡಿಗಳ ಪದ್ಧತಿಗೆ ಹೊಂದಿಕೊಳ್ಳಲು ಹರಿಗೆ ಒಂದು ತಿಂಗಳು ಬೇಕಾಯಿತು. ಅಷ್ಟರಲ್ಲಾಗಲೇ ಹರಿಗೂ ಒಂದು ಐದಾರು ಜನ ಸ್ನೇಹಿತರಾಗಿದ್ದರು. ಅದರಲ್ಲಿ ಇಬ್ಬರು ಕರ್ನಾಟಕದವರೇ ಆಗಿದ್ದರು. ಹೀಗಾಗಿ ಅದೇನು ದೊಡ್ಡ ತೊಂದರೆಯಾಗಲಿಲ್ಲ ಹದಿನೈದು ದಿನಗಳ ನಂತರ ಮೂರು ಜನ ಸೇರಿ, ಒಂದು ಮನೆಯನ್ನು ಬಾಡಿಗೆಗೆ ಹಿಡಿದರು. ಊಟಕ್ಕೆ ಹತ್ತಿರದಲ್ಲೆ ಇದ್ದ ಮೆಸ್ಸಿಗೆ ಹೋಗುತ್ತಿದ್ದರು. ಹೀಗೆ ಹೈದರಾಬಾದಿನ ಜೀವನ ಸುಖಮಯವಾಗಿಲ್ಲದಿದ್ದರೂ, ಕಷ್ಟಕರವಾದದ್ದುಂತು ಆಗಿರಲಿಲ್ಲ. ನಡುವೆ ಒಂದು ಬಾರಿ ಮನೆಗೆ ಕೂಡ ಹೋಗಿ ಬಂದಿದ್ದ. ಅನೂಷಾಳಿಗೆ ಹಾಗೂ ಮನೆಗೆ ತಪ್ಪದೇ ಕಾಲ್ ಮಾಡುತ್ತಿದ್ದ. ಎಲ್ಲವೂ ಒಂದು ತೂಕದ ಮೇಲೆ ನಡೆದಿತ್ತು.

ಟ್ರೈನಿಂಗ್ ಪೇರಿಯಡ್ ಎರಡು ತಿಂಗಳಿತ್ತು. ಅದಾದ ನಂತರ ಅವರಿಗೆ ಒಂದು ಪೋಸ್ಟ್ ಸಿಗಲಿತ್ತು. ಎರಡು ತಿಂಗಳು ಕಳೆದ ನಂತರ ಅದು ಕೂಡ ಆಯಿತು. ಹಾಗೆ ಮನೆಯ ಅಟ್ಯಾಚ್ಮೆಂಟ್ ಕಡಿಮೆಯಾಗಿತ್ತು. ಹೀಗೆ ಸುಗಮವಾಗಿ ಕೆಲಸ ಸಾಗಿತ್ತು.


(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x