ಕೊನೆಗಾಲದ ಕಥೆ ಹೇಳುವ ಚರ್ಚು:ಎಚ್.ಕೆ.ಶರತ್


ಒಂದೂರಿನ ಇತಿಹಾಸದ ಅಸ್ಥಿಪಂಜರದಂತಿರುವ ಚರ್ಚು, ಬರಗಾಲದ ಬವಣೆಯ ಬಿಡಿ ಚಿತ್ರಗಳನ್ನು ಕಟ್ಟಿಕೊಡುವ ಅಣೆಕಟ್ಟೆಯ ಹಿನ್ನೀರು, ವ್ಯವಧಾನ ಮತ್ತು ಧಾವಂತಕ್ಕೆ ರೂಪಕವಾಗಿ ನಿಂತಿರುವ ಸೇತುವೆ ಮತ್ತದರ ಮೇಲೆ ಚಲಿಸುವ ವಾಹನಗಳು, ಇಡೀ ಪರಿಸರಕ್ಕೆ ಸೊಗಸಾದ ಉಡುಗೆ ತೊಡಿಸುತ್ತಿರುವ ಸೂರ್ಯ, ಇರುವ ಅತ್ಯಲ್ಪ ನೀರಲ್ಲೇ ಬದುಕು ಕಟ್ಟಿಕೊಳ್ಳಲು ಬೆವರು ಹರಿಸುತ್ತಿರುವ ಶ್ರಮ ಜೀವಿಗಳು…

ಹಾಸನದಿಂದ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ಸೇತುವೆ, ಚರ್ಚಿನ ಅಳಿದುಳಿದ ಭಾಗಗಳು ಮತ್ತು ಹೇಮಾವತಿ ಜಲಾಶಯದ ಹಿನ್ನೀರು ಸೇರಿ ನಿರ್ಮಿಸಿರುವ ಸುಂದರ ಪರಿಸರ ಕಣ್ಣೆದುರು ತೆರೆದಿಡುವ ದೃಶ್ಯಗಳಿವು.

ಕೆಲ ವರ್ಷಗಳಿಂದೀಚೆಗೆ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದ ಈ ಸ್ಥಳ ಇದೀಗ ಮನುಷ್ಯನ ಸಕಲೆಂಟು ವಿಕೃತಿಗಳನ್ನು ತನ್ನೊಳಗೆ ಹುದುಗಿಸಿಕೊಳ್ಳುತ್ತ ಮೌನವಾಗಿದೆ. ಚರ್ಚಿನ ಅಳಿದುಳಿದ ಭಾಗಗಳು ಧರೆಗುರುಳುತ್ತಲೆ ಇವೆ. ಸಿನಿಮಾದಲ್ಲೋ ಮಾಧ್ಯಮಗಳಲ್ಲೋ ಶೆಟ್ಟಿಹಳ್ಳಿ ಚರ್ಚಿನ ಸೌಂದರ್ಯದ ವರ್ಣನೆ ಕಂಡು ಇತ್ತ ಕಡೆ ಸುಳಿಯುವವರು, ’ಇಲ್ಲೇನಿದೆ ಮಣ್ಣು’ ಅಂತ ಗೊಣಗಿಕೊಂಡು ಹೋಗುವುದು ಮಾಮೂಲಾಗಿದೆ.

’ಪಟ್ರೆ ಲವ್ಸ್ ಪದ್ಮ’ ಚಿತ್ರದ ’ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ…’ ಹಾಡಿನಲ್ಲಿ ಶೆಟ್ಟಿಹಳ್ಳಿ ಚರ್ಚು ಮತ್ತು ಹೇಮಾವತಿ ಹಿನ್ನೀರಿನ ಸೌಂದರ್ಯ ಅದ್ಭುತವಾಗಿ ಅನಾವರಣಗೊಂಡಿತ್ತು. ಆಗಿನ ಸ್ಥಿತಿಗೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ತಾಣಕ್ಕೆ ಹೆಚ್ಚೆಚ್ಚು ಪ್ರಚಾರ ಸಿಕ್ಕಿದಂತೆಲ್ಲ, ಇಲ್ಲಿನ ಪರಿಸರದ ಅವನತಿಯೂ ವೇಗ ಪಡೆದುಕೊಳ್ಳುತ್ತಿದೆ.

ಹೇಮಾವತಿ ಜಲಾಶಯ ತುಂಬಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಜಲಾವೃತವಾಗುತ್ತಿದ್ದ ಚರ್ಚು, ಬೇಸಿಗೆಯಲ್ಲಿ ಮಾತ್ರ ದರ್ಶನ ಭಾಗ್ಯ ಕರುಣಿಸುತ್ತಿತ್ತು. ಆದರೆ ಕೆಲ ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಚರ್ಚು ಮದ್ಯ ಮತ್ತು ಪ್ರಣಯ ವ್ಯಸನಿಗಳ ಪಾಲಿಗೆ ಹಾಟ್‌ಸ್ಪಾಟ್ ಆಗಿದೆ. ಬರದ ಛಾಯೆ ಇಲ್ಲಿನ ಪರಿಸರವನ್ನೂ ಆವರಿಸಿದೆ. ಇರುವ ನೀರನ್ನು ಬಳಸಿಕೊಂಡು ಕೆಲವರು ನದಿ ದಂಡೆಯಲ್ಲೇ ಉತ್ತು ಬಿತ್ತಿ ಬೆಳೆ ತೆಗೆಯುತ್ತಿದ್ದಾರೆ. ಮೀನುಗಾರರು ಅಳಿದುಳಿದ ನೀರಲ್ಲೇ ಬಲೆ ಬಿಟ್ಟು ಬದುಕು ದೂಡುತ್ತಿದ್ದಾರೆ.

     

ಒಂದಾನೊಂದು ಕಾಲದಲ್ಲಿ ಧರ್ಮ ಪ್ರಚಾರದ ತಾಣವಾಗಿದ್ದ ಚರ್ಚು, ಇಂದು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಎಡತಾಕಿದಲ್ಲೆಲ್ಲ ಒಡೆದ ಮದ್ಯದ ಬಾಟಲಿಗಳ ಗಾಜಿನ ಚೂರುಗಳು ಸಿಗುತ್ತವೆ. ಚರ್ಚಿನ ಮುರುಕು ಗೋಡೆಗಳನ್ನು ಪ್ರೇಮ ಮತ್ತು ಪ್ರಣಯದ ಚಿತ್ರಗಳು ಶೃಂಗರಿಸಿವೆ. ಹೇಮಾವತಿ ನದಿಯಲ್ಲಿ ನೀರು ಹರಿದಂತೆಲ್ಲ ಚರ್ಚು ತನ್ನ ಅಸ್ಥಿಪಂಜರದ ಅಳಿದುಳಿದ ಎಲುಬುಗಳನ್ನು ಕಳೆದುಕೊಳ್ಳುತ್ತದೆ. ಇಲ್ಲಿ ಬಿದ್ದಿರುವ ಗೋಡೆಯ ಚೂರುಗಳು ನೆಲ ಕಚ್ಚುತ್ತಿರುವ ಮೌಲ್ಯಗಳಿಗೆ ಸಾಂತ್ವನ ಹೇಳುತ್ತಿವೆ. ಧರ್ಮಗೀತೆಗಳು ಮೊಳಗುತ್ತಿದ್ದ ಸ್ಥಳದಲ್ಲಿ, ಪ್ರಣಯಗಾಥೆಗಳೂ ಅಮಲಲ್ಲಿ ತೆರೆದುಕೊಳ್ಳುವ ಕತೆಗಳೂ ರೂಪ ತಾಳುತ್ತಿವೆ.

  

ಸಂಜೆ ಹೊತ್ತು ಹಿನ್ನೀರಿಗೆ ಮುತ್ತನಿಡಲು ಬರುವ ಸೂರ್ಯ, ಚರ್ಚಿನ ಬಿಡಿ ಭಾಗಗಳಿಗೆ ತರಹೇವಾರಿ ಉಡುಗೆ ತೊಡಿಸುತ್ತಾನೆ. ಸೂರ್ಯನೊಂದಿಗೆ ಸರಸವಾಡುವ ಚರ್ಚಿನ ಗೋಡೆಗಳು ಕಣ್ಣಿಗೆ ಕಟ್ಟಿಕೊಡುವ ದೃಶ್ಯ ಕಾವ್ಯಗಳು ಗ್ರಹಿಕೆಗೆ ನಿಲುಕದ ಯಾವುದೋ ಸತ್ಯ ನುಡಿಯುತ್ತಿರುವ ಅನುಮಾನ ಎದುರಾಗುತ್ತದೆ. ಹಿನ್ನೀರಿನ ಮೇಲೆ ಇಳಿಯುವ ಸೂರ್ಯ, ಸೇತುವೆಗೆ ಹೊಸ ಬಣ್ಣ ಬಳಿಯುತ್ತಾನೆ. ವಿಕೃತಿಯ ಮೆರವಣಿಗೆ ಏರ್ಪಡುತ್ತಿರುವ ಸ್ಥಳದಲ್ಲಿ ಪ್ರಕೃತಿ ಸುಂದರ ಕಲಾಕೃತಿಗಳನ್ನು ರಚಿಸುತ್ತಿದೆ.

ಅವನತಿಯ ಕಡೆಯ ಅಂಚಿನಲ್ಲಿರುವ ಗೋಡೆಗಳ ಸಮೂಹವೊಂದು ತನ್ನ ಕೊನೆಗಾಲದ ಕಥೆ ಹೇಳುತ್ತಿದೆ. ಆಲಿಸುವ ವ್ಯವಧಾನ ನಮಗಿದೆಯೇ?


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Utham Danihalli
10 years ago

Nimma lekana chenagidhe adhesto sundara thannagallu hige hallaguthive sarkara jananayakaru media gallu purthi avanathi ada mele baruthare edhe duradrusta

1
0
Would love your thoughts, please comment.x
()
x