NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ ೧): ಗುರುಪ್ರಸಾದ ಕುರ್ತಕೋಟಿ


(ಇಲ್ಲಿಯವರೆಗೆ : https://panjumagazine.com/?p=16864)

ಒಂದು ಮಟ್ಟಕ್ಕೆ ಜೀವನದಲ್ಲಿ ಸೆಟ್ಲ್ ಆಗಿದ್ದೆ. ಸ್ವಂತಕ್ಕೆ ಅಂತ ಒಂದು ಮನೆಯಿತ್ತು (ಹೆಸರಿಗೆ ನನ್ನದು, ಆದರೆ ಅಧಿಕೃತವಾಗಿ ಅದರ ಮಾಲಿಕರು ಬ್ಯಾಂಕ್ ನವರೇ ಆಗಿದ್ದರು, ಆ ಮಾತು ಬೇರೆ! ನಾವು ಅವರ ಬಳಿ ತೆಗೆದುಕೊಂಡ ಸಾಲ ತೀರುವವರೆಗೆ ಅವರೇ ಯಜಮಾನರು). ರಿಟೈರ್ ಆದ ಮೇಲೆ ಇರಲಿ ಅಂತ ಊರಲ್ಲಿ ತೆಗೆದುಕೊಂಡ ಒಂದಿಷ್ಟು ಜಾಗವೂ ಇತ್ತು. ನನಗಾಗಲೇ ಆಫೀಸಿನಲ್ಲಿ ಒಂದು ಸ್ಥಾನಮಾನ ಸಿಕ್ಕಿತ್ತು. ಇಷ್ಟೆಲ್ಲಾ ಕಂಫರ್ಟ್ ಝೋನಿನಲ್ಲಿ (ಬೋನಿನಲ್ಲಿ?) ಇದ್ದ ನಾನು ಒಮ್ಮೆಲೇ ಎಲ್ಲವನ್ನೂ ಕಿತ್ತು ಅಮೆರಿಕೆಗೆ ಬಂದಿದ್ದು ನನಗಿಂತ ಬೇರೆಯವರಿಗೇ ಹೆಚ್ಚು ಕಿರಿಕಿರಿ ತಂದಿತ್ತು! ನಮ್ಮ ದೇಶದಲ್ಲಿ ನಾವು ನಮ್ಮ ವಿಷಯಗಳಿಗಿಂತ ಬೇರೆಯವರ ವಿಷಯಗಳಿಗೆ ತಲೆ ಹೆಚ್ಚು ಖರ್ಚು ಮಾಡುತ್ತೇವೆ. ಈ ವಯಸ್ಸಿನಲ್ಲಿ ವಿದೇಶಕ್ಕೆ ಹೋಗುವುದು ಮೂರ್ಖತನ. ನಿನ್ನ ಜೀವನ ಅತಂತ್ರವಾಗುವುದು ಅಂತ.ಗೆಳೆಯನೊಬ್ಬ ಎಚ್ಚರಿಸಿದ್ದ. ನನಗೆ ಗೊತ್ತು ನೀನು ವಾಪಸ್ಸು ಬರೋದಿಲ್ಲ ಅಂತ ಇನ್ನೊಬ್ಬ ಹೇಳಿದ್ದ. ಹೌದೆ? ಅದು ಹೇಗೆ ಅತಂತ್ರವಾದೀತು, ಅದ್ಯಾಕೆ ವಾಪಸ್ಸು ಬರೋಕಾಗೋಲ್ಲ ನೋಡೇ ಬಿಡೋಣ ಅಂದಿತ್ತು ಮನಸ್ಸು. ಇದೆಲ್ಲಕ್ಕೂ ಮಿಗಿಲಾಗಿ ಹಾಗೆ ನಾವು ಹೋಗುವ ನಿರ್ಧಾರ ಮಾಡಿದ ಸಮಯದಲ್ಲಿ ನಮಗೊಂದು ಬದಲಾವಣೆಯ ಅವಶ್ಯಕತೆ ಇತ್ತು. ಯಾವುದೇ ಸಂಬಂಧ, ಅದು ಗೆಳೆತನವೋ, ಗಂಡ-ಹೆಂಡತಿಯೋ, ಬಂಧುತ್ವವೋ ಎಲ್ಲದಕ್ಕೂ ಒಂದು ಆಯುಷ್ಯ ಇರುತ್ತದೆ ಎಂದು ಅರಿವಾಗಿದ್ದ ಸಮಯವದು. ಕೆಲವು ಸಂಬಂಧಗಳು ನಮ್ಮ ಉಸಿರು ಇರುವವರೆಗೂ ಗಟ್ಟಿಯಾಗಿರುತ್ತವೆ, ಮತ್ತೆ ಕೆಲವು ಅರಕ್ಕೇರದೆ ಮೂರಕ್ಕಿಳಿಯದೆ ಇದ್ದೂ ಇರದಂತೆ ಇರುತ್ತವೆ, ಇನ್ನೂ ಕೆಲವು ಅಕಾಲಿಕ ಮರಣಕ್ಕೆ ತುತ್ತಾಗಿ ತುಂಬಾ ಬೇಗನೆ ಕೊನೆಗೊಳ್ಳುತ್ತವೆ. ಅಂತಹ ಸೂತಕದಲ್ಲಿ ಆಗ ನಾವಿದ್ದೆವು. ನನ್ನ ಬಳಿಯೇ ಸಹಾಯ ತೆಗೆದುಕೊಂಡಿದ್ದವನೊಬ್ಬ, ತಾನೇ ನನಗೆ ಬಹಳ ಉಪಕಾರ ಮಾಡಿದ್ದನೆಂಬಂತೆ ಯಾರ ಬಳಿಯೋ ಹೇಳಿಕೊಂಡಿದ್ದ… ಈ ತರಹದ ಎಲ್ಲ ಘಟನೆಗಳು ನಮ್ಮನ್ನು ಘಾಸಿಗೊಳಿಸಿ ನಮಗೆ ಯಾರೂ ಬೇಡ ಎನ್ನುವ ಹಂತಕ್ಕೆ ತಲುಪಿಬಿಟ್ಟಿದ್ದೆವು!

ಅದೇ ಕಾರಣಕ್ಕೆ ಒಮಾಹಾಕ್ಕೆ ಬಂದಾಗ ಯಾರದೇ ಹಂಗು ಇಲ್ಲದೆ ನಾವೇ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳಬೇಕು ಅಂತ ಗಟ್ಟಿ ನಿರ್ಧಾರ ಮಾಡಿದ್ದೆವು. ಅಲ್ಲೊಬ್ಬ ಪರಿಚಯದವರು ಇದ್ದಾರೆ ಅಂತ ಗೆಳೆಯನೊಬ್ಬ ಮೆಸೇಜ್ ಮಾಡಿದ್ದ. ಆದರೂ ನಾವು ಅವರನ್ನು ಕಾಂಟಾಕ್ಟ್ ಮಾಡಿರಲಿಲ್ಲ. ಯಾಕಂದರೆ ‘ನಾವೇ ಇವರಿಗೆ ಸಹಾಯ ಮಾಡಿದ್ದು’ ಅಂತ ಯಾರಾದರೂ ಮುಂದೊಮ್ಮೆ ಹೇಳುವುದು ನಮಗೆ ಇಷ್ಟ ಇರಲಿಲ್ಲ. ಅವರು ಹಾಗೆ ಹೇಳದೆ ಇದ್ದರೂ ಸಹಾಯ ಮಾಡಿದವರನ್ನು ಮುಂದೆ ನಾವೂ ಕೂಡ ಯಾವುದೇ ಕಾರಣಕ್ಕೆ blame ಮಾಡುವುದು ನಮಗೆ ಬೇಕಿರಲಿಲ್ಲ. ಆದರೆ ಆಗ ಹಾಗೆ ನಾವು ಅಂದುಕೊಂಡಿದ್ದರೂ ದಿನಕಳೆದಂತೆ ಅಲ್ಲಿ ಹೊಸ ಹೊಸ ಗೆಳೆಯರನ್ನು ಹಚ್ಚಿಕೊಳ್ಳದೆ ಇದ್ದಿದ್ದರೆ ತುಂಬಾ ದೊಡ್ಡ ನಷ್ಟ ನಮಗೇ ಆಗಿರುತ್ತಿತ್ತು. ಯಾಕಂದರೆ ಅಲ್ಲೊಂದಿಷ್ಟು ಮುತ್ತು-ರತ್ನಗಳಂತಹ ಗೆಳೆಯರೂ ಸಿಕ್ಕರು. ಎಲ್ಲರೂ ಕಳ್ಳರಿರುವುದಿಲ್ಲ ಅಲ್ಲವೇ?!

ನಾವು ಅಲ್ಲಿಗೆ ಹೋದಾಗ ನಮ್ಮ ಕಂಪನಿಯವರು ಉಳಿಸಿದ್ದು Extended Stay America ಎಂಬ ಹೋಟೆಲಿನಲ್ಲಿ. ಅದು ತಾತ್ಕಾಲಿಕ ನಿಲ್ದಾಣ ಅಷ್ಟೇ. ಮುಂದೆ ನಮ್ಮ ವಾಸದ ವ್ಯವಸ್ಥೆ ನಾವು ಮಾಡಿಕೊಳ್ಳಬೇಕಿತ್ತು. ಅಲ್ಲಿಂದಲೇ ದಿನವೂ ಒಂದಿಷ್ಟು ಕಡೆ ಅಡ್ಡಾಡಿ ಅಪಾರ್ಟ್ ಮೆಂಟ್ ನೋಡಿ ಬರುತ್ತಿದ್ದೆವು. ಕಟ್ಟಿಗೆಯನ್ನೇ ಪ್ರಧಾನವಾಗಿ ಬಳಸುವ ಅಲ್ಲಿನ ಕಟ್ಟಡಗಳ ವಿನ್ಯಾಸಗಳು ಸ್ವಲ್ಪ ಬೇರೆಯವೇ ತರಹ ಇದ್ದವು. ಅಲ್ಲಿನ ತಂಪಿನ ಹಾಗೂ ಅತಿ ತಂಪಿನ ವಾತಾವರಣಕ್ಕೆ ತಕ್ಕಂತೆ ಕಟ್ಟಲ್ಪಟ್ಟಿದ್ದವು. ಅದೇ ಕಾರಣದಿಂದ ಬೇಸಿಗೆಯ ಸಮಯದಲ್ಲಿ ಸಣ್ಣ ಪುಟ್ಟ ಬೆಂಕಿ ಅವಘಡ ಸಂಭವಿಸಿದರೂ ಇಡಿ ಮನೆ ಕೆಲವೇ ನಿಮಿಷಗಳಲ್ಲಿ ಬೆಂಕಿಗೆ ಬಲಿಯಾಗುವಷ್ಟು ಬೇಗನೆ ಉರಿಯಬಹುದಾಗಿತ್ತು. ಮುಂದೊಮ್ಮೆ ನಮ್ಮ ಪರಿಚಯದ ಭಾರತೀಯನೊಬ್ಬನ ಮನೆಯಲ್ಲಿ ಹಾಗೆ ಆಗಿತ್ತು. ಅದು ಏನೋ ಆಗಿ ಬೆಂಕಿ ಹತ್ತಿ ಐದೇ ನಿಮಿಷದಲ್ಲಿ ಇಡಿ ಮನೆ ಅಗ್ನಿಗೆ ಸಮರ್ಪಣೆಯಾಗಿತ್ತು. ಆದರೆ ಬೆಂಕಿ ಹತ್ತುವುದು ಮೊದಲೇ ಗೊತ್ತಿತ್ತೇನೋ ಎಂಬಂತೆ ಕೆಲವೇ ಕ್ಷಣಗಳಲ್ಲಿ ಅಗ್ನಿ ಶಾಮಕ ವಾಹನಗಳು ಬಂದು ನಿತಿದ್ದು ನಮಗೆ ತುಂಬಾ ಆಶ್ಚರ್ಯ ತಂದಿತ್ತು. ಅದು ಅಲ್ಲಿ ತುಂಬಾ ಅನಿವಾರ್ಯವೂ ಹೌದು. ಆ ಸಮಯದಲ್ಲಿ ಅವನು ಮನೆಯಲ್ಲಿ ಮಲಗಿದ್ದನಂತೆ. ಇನ್ನೂ ಸ್ವಲ್ಪ ನಿದ್ದೆ ಮಾಡಿದ್ದರೆ ಶಾಶ್ವತ ನಿದ್ದೆಗೆ ಹೋಗಿರುತ್ತಿದ್ದೆ ಅಂತ ಅವನು ಹೇಳುವಾಗ, ನಾನು ನಡುಗಿದ್ದೆ.

ಹೀಗಾಗಿ ಅಲ್ಲಿ ಸಿಗರೇಟು ಸೇದುವವರು ತುಂಬಾ ಡೇಂಜರ್ ಅನಿಸುತ್ತಿದ್ದರು. ಇಲ್ಲಿ ಹೊಗೆ ಬಿಟ್ಟು ಬೇರೆಯವರನ್ನು ಕೊಲ್ಲುತ್ತಾರೆ ಆದರೆ ಅಲ್ಲಿ ಬೆಂಕಿ ಹಚ್ಚಿ ಪೂರ್ತಿ ಮನೆಯೇ ಸುಡುತ್ತಾರೆ! ಅಲ್ಲಿ ಹೆಚ್ಚುಕಡಿಮೆ ಎಲ್ಲಾ ಅಪಾರ್ಟ್ ಮೆಂಟ್ ಗಳಲ್ಲಿ ಪಾತ್ರೆ ತೊಳೆಯುವ ಹಾಗೂ ಬಟ್ಟೆ ಒಗೆಯುವ ಮಷಿನ್ ಗಳು ಇದ್ದೆ ಇರುತ್ತವೆ. ಅದು ಅಲ್ಲಿ ಬೇಕೇ ಬೇಕು. ಮುಸುರೆಗೆ, ಬಟ್ಟೆ ಒಗೆಯೋ ಕೆಲಸಕ್ಕೆ ಅಂತ ಅಲ್ಲಿ ಯಾರೂ ಬರೋದಿಲ್ಲ. ಈಗ ಇಲ್ಲಾದರೂ ಎಲ್ಲಿ ಬರುತ್ತಾರೆ? ಅದಕ್ಕೆ ನಾವು ಅವೆಲ್ಲ ವ್ಯವಸ್ಥೆ ಇರುವ ಮನೆಯನ್ನೇ ಬಾಡಿಗೆಗೆ ಹಿಡಿದಿದ್ದೆವು. ಅದಾಗಲೇ ಭಾರತದಿಂದ ಬಂದು ಇಪ್ಪತ್ತು ದಿನಗಳಾಗಿದ್ದವು. ಅಲ್ಲಿ ನಮ್ಮ ಅಪಾರ್ಟ್ ಮೆಂಟ್ ಬಳಿಯೇ ಇದ್ದ ಭಾರತೀಯ ಕುಟುಂಬ ಮೊಟ್ಟ ಮೊದಲು ಪರಿಚಯವಾಯಿತು. ಅವರ ಹೆಸರು ನವೀನ ಹಾಗೂ ರಮ್ಯ.

ಆಗ ಸಣ್ಣಗೆ ಚಳಿಗಾಲದ ಅನುಭವ ಆಗುತ್ತಿದ್ದ ಸಮಯ. ನನ್ನ ಓದಿನ, ಬರವಣಿಗೆಯ ಆಸಕ್ತಿಯನ್ನು ಅರಿತು, ನಿಮ್ಮ ತರಹದ ಚಟ ಇರುವ ಒಬ್ಬರನ್ನು ಪರಿಚಯ ಮಾಡಿಸುವೆ ಬನ್ನಿ ಅಂತ ಅವತ್ತು ಸಂಜೆ ಅವರ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಸಿಕ್ಕವರೇ ಶ್ರೀಯುತ. ಶಂಕರ ಅಜ್ಜಂಪುರ! ಅದು ಏನು ಋಣಾನುಬಂಧವೋ ಗೊತ್ತಿಲ್ಲ. ಶಿವಮೊಗ್ಗೆಯಲ್ಲಿ ವಾಸವಾಗಿರುವ ಅವರು ತಮ್ಮ ಮಗಳು ಅಳಿಯನನ್ನು ನೋಡಲು ಆಗಾಗ ಅಮೆರಿಕೆಗೆ ಬರುತ್ತಿರುತ್ತಾರೆ. ನಮಗೆ ಅಲ್ಲಿ ಹೀಗೆ ಸಿಕ್ಕರು. ಮುಂದೆ ನಾನು ‘ಎಲ್ಲರಂಥವನಲ್ಲ ನನ್ನಪ್ಪ’ ಪುಸ್ತಕ ಮಾಡಿದಾಗ ನನ್ನ ಬೆನ್ನೆಲುಬಾದರು! ಅದರ ಬಗ್ಗೆ ಮುಂದೆ ಮತ್ತಷ್ಟು ಬರೆಯುವೆ. ಅವತ್ತು ಅವರ ಮನೆಯಲ್ಲಿ ಸವಿದ ಬಿಸಿ ಬಿಸಿ ಅನ್ನ ಹಾಗೂ ಟೊಮೇಟೊ ಸಾರಿನ ರುಚಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ! ಭಾರತವನ್ನು ಬಿಟ್ಟು ಬಂದ ಎಷ್ಟೋ ದಿನಗಳ ನಂತರ ಸಿಕ್ಕ ಅನ್ನ ಸಾರಿನಲ್ಲಿ ಉಪ್ಪು ಹುಳಿ ಇವೆಲ್ಲಕಿಂತ ಮಿಗಿಲಾದ ಪ್ರೀತಿಯಿತ್ತು, ಮತ್ತೊಂದು ಹೊಸ ಸಂಬಂಧ ಗಟ್ಟಿಗೊಳಿಸುವಲ್ಲಿ ಅದೊಂದು ತುಂಬಾ ಪ್ರಮುಖ ಪಾತ್ರ ವಹಿಸಿತ್ತು… ಅವತ್ತು ನಮ್ಮದೇ ಸ್ವಂತ ಬಾಡಿಗೆ ಮನೆಯಲ್ಲಿ(!) ನಮ್ಮ ಮೊದಲ ಐತಿಹಾಸಿಕ ನಿದ್ದೆ ಹೆಚ್ಚು ಕಡಿಮೆ ಎಚ್ಚರದಲ್ಲೇ ಕಳೆದಿತ್ತು!

ಗುರುಪ್ರಸಾದ ಕುರ್ತಕೋಟಿ


(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Gerald Carlo
Gerald Carlo
4 years ago

ನಿಮ್ಮ ಬರೆಹದೊಳಗೆ ಅಂತರ್ಗತವಾಗಿರುವ Tongue in cheek humor ಓದುವುದೇ ಒಂದು ಖುಷಿ.

Guruprasad Kurtkoti
4 years ago

ಬರಹವನ್ನು ಹಾಗೂ ಅದರೊಳಗಿರುವ humour ಗುರುತಿಸಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಕಾರ್ಲೊ ಸರ್! ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ನಾನು ಋಣಿ. 🙂

Sadanand
Sadanand
4 years ago

ತುಂಬಾ ಚೆನ್ನಾಗಿದೆ. Will wait for part 2.

4
0
Would love your thoughts, please comment.x
()
x