NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ 3): ಗುರುಪ್ರಸಾದ ಕುರ್ತಕೋಟಿ


ಇಲ್ಲಿಯವರೆಗೆ
ಮಿಸ್ಟರ್. ಬೆಂಕಿಯ ಜೊತೆ ಜೊತೆಗೆ ನನಗೆ ಇನ್ನೊಬ್ಬ ಗೆಳೆಯನ ಪರಿಚಯವಾಗಿದ್ದು ಅಲ್ಲಿನ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ. ಅವನ ಹೆಸರು ಕೋಮಾ (ದಯವಿಟ್ಟು ಗಮನಿಸಿ: ಇಲ್ಲಿನ ಪಾತ್ರಗಳೆಲ್ಲವೂ ನೈಜ, ಆದರೆ ಹೆಸರುಗಳು ಅಡ್ಡ ಅಥವಾ ಕಾಲ್ಪನಿಕ!). ಅವನಿಗೆ ಕೊಮಾ ಎಂಬಾ ಹೆಸರು ಯಾಕೆ ಅಂದರೆ ಅವನು ತುಂಬಾ ವಿಷಯಗಳಲ್ಲಿ ಬಹು ಬೇಗನೆ ಬೇಜಾರಾಗುತ್ತಿದ್ದ. ಆ ಹೆಸರನ್ನು ಅವನಿಗೆ ಕೊಟ್ಟವನು ಅಪ್ಪು ಗೌಡಾ (ಇದು ಕೂಡ ನೈಜ ಹೆಸರಲ್ಲ. ಈ ಸಂಗತಿಯನ್ನು ನಿಮಗೆ ಪದೆ ಪದೆ ಹೇಳಿದ್ದಕ್ಕೆ ನೀವು ಬೇಜಾರಾಗಿ ದಯವಿಟ್ಟು ಕೋಮಾಕ್ಕೆ ಹೋಗದಿರಿ!).

ಅದೇನಾಗಿತ್ತು ಅಂದ್ರೆ ಕೊಮಾಗೆ ಅವತ್ತಿನ ಪಾರ್ಟಿಯಲ್ಲಿ ಬಿಯರ್ ಕುಡಿಯಲು ಯಾರೂ ಕಂಪನಿ ಇರಲಿಲ್ಲ. ಜನ ಇದ್ದರೂ ಕೂಡ ಅವನಿಗೆ ಯಾರೂ ಅಷ್ಟೊಂದು ಪರಿಚಯ ಇರಲಿಲ್ಲ. ಅವನೂ ನನ್ನ ಹಾಗೆಯೇ ಅಲ್ಲಿಗೆ ಹೊಸದಾಗಿ ಬಂದಿದ್ದ. ಇದ್ದುದರಲ್ಲೇ ನಾನೇ ಸ್ವಲ್ಪ ಜಾಸ್ತಿ ಪರಿಚಯ ಅವಂಗೆ! ಹೀಗಾಗಿ ಬಿಯರ್ ಕುಡಿಯಲು ನಾನು ನಿನ್ನ ಜೊತೆ ಇದ್ದೇನೆ ಬಿಡು ಅಂತ ಕೆಲ ದಿನಗಳ ಹಿಂದೆ ತುಂಬಾ ಬಿಲ್ಡ್ ಅಪ್ ಕೊಟ್ಟಿದ್ದೆ. ನಾನು ತುಂಬಾ ಕರುಣಾಮಯಿ! ಆದರೆ ಯಡವಟ್ಟಾಗಿದ್ದೆಲ್ಲಿ ಅಂದ್ರೆ ಹಾಗೆ ಬಿಲ್ಡ್ ಅಪ್ ಕೊಡುವಾಗ ನನ್ನ ಹೆಂಡತಿ ನನ್ನ ಪಕ್ಕಕ್ಕಿರಲಿಲ್ಲ ನೋಡಿ. ತನಗೊಬ್ಬ ಗ್ಲಾಸ್-ಮೇಟ್ ಸಿಕ್ಕಿದ್ದಕ್ಕೆ ಅವನು ಖುಷಿಯಾಗಿದ್ದ. ಈ ವಿಷಯ ನನ್ನ ಹೆಂಡತಿಗೆ ಗೊತ್ತಾದ ಮೇಲೆ ನನ್ನ ನಿರ್ಧಾರ ಬದಲಾಗಲೇಬೇಕಿತ್ತು. ಅದು ಹೊಸದಾದ ಜಾಗ, ಯಾರು ಏನು ಹೇಗೆ ಅಂತ ಇನ್ನೂ ಗೊತ್ತಿರದ ಕಾರಣ ಹೇಳಿ ಯಾರ ಜೊತೆಗೆ ಸೇರಿ ಕುಡಿಯುವುದಕ್ಕೆ ನನ್ನ ಹೆಂಡತಿ permission ಕೊಡಲಿಲ್ಲ. ಅದೂ ಅಲ್ಲದೆ ನಾನು ಆಗ ಅವಳಿಗೆ ತುಂಬಾ ಹೆದರುತ್ತಿದ್ದೆ, ಈಗಲೂ ಹೆದರುತ್ತೇನೆ, ನನಗೆ ನಾನು ಹೆದರುವುದಕ್ಕಿಂತ ಹೆಚ್ಚಾಗಿ! ಹೀಗಾಗಿ ಕೊನೆಯ ಗಳಿಗೆಯಲ್ಲಿ, ನಾನು ಪಾರ್ಟಿಗಳಲ್ಲಿ ಕುಡಿಯೋದಿಲ್ಲ ಸಾರೀ ಅಂತ ಹೇಳಿ ಪಾಪ ಅವನಿಗೆ ಬೇಜಾರು ಮಾಡಿದ್ದೆ. ಕೊಮಾಕ್ಕೆ ಹೋದ ಆತ ಇನ್ನೂ ಒಂದು ಪಿಂಟ್ ಜಾಸ್ತಿ ಕುಡಿದದ್ದ ಅವತ್ತು! ನೀನು ಅವತ್ತು ಕೈ ಕೊಟ್ಟೆ ಗುರಣ್ಣ (ಇದು ನಿಜವಾದ ಹೆಸರು ಮಾರಾಯ್ರೆ!) ಅಂತ ಮುಂದೆ ಕೂಡ ಯಾವಾಗಲೂ ನೆನಪು ಮಾಡಿಕೊಂಡು ಕೋಮಾಕ್ಕೆ ಜಾರುತ್ತಿದ. ಆದರೆ ಅದೊಂದು ಘಟನೆ ನಮ್ಮಿಬ್ಬರನ್ನೂ ಹತ್ತಿರದ ಗೆಳೆಯರನ್ನಾಗಿಸಿತ್ತು ಕೂಡ. ಹೀಗೆ ಪರಿಚಯವಾದ ಕೊಮಾ, ನಾನು ಹಾಗೂ ಬೆಂಕಿ ಸೇರಿ ಕೆಲವೇ ದಿನಗಳಲ್ಲಿ ಸಹ ಕುಟುಂಬ ಪರಿವಾರ ಸಮೇತ ಫ್ಲೋರಿಡಾದ ಡಿಸ್ನಿ ವರ್ಲ್ಡ್ ಟ್ರಿಪ್ ಗೆ ಹೋಗಿ ಬಂದಿದ್ದೆವು. ಅದೊಂದು ಅಭೂತಪೂರ್ವ ಅನುಭವ. ಹೆಚ್ಚು ಕಡಿಮೆ ಭಾರತಕ್ಕೆ ಹೋಗಿ ಬರುವಷ್ಟು ಖರ್ಚು ಅದೊಂದೇ ಪ್ರವಾಸದಲ್ಲಿ ಮಾಡಿದ್ದು ನೋಡಿ ಅಲ್ಲಿನ ಕೆಲವರು ಆಶ್ಚರ್ಯ ಪಟ್ಟಿದ್ದರು. ನಾವು ಅಲ್ಲಿಗೆ ಹೋಗಿದ್ದೆ ಚೈನಿ ಹೊಡೆಯಲು!

ಅಲ್ಲಿನ ಕನ್ನಡಿಗರು ಪರಿಚಯ ಆದಂತೆ ನಮ್ಮನ್ನು ಮನೆಗೆ ಊಟಕ್ಕೆ ಕರೆಯುತ್ತಿದ್ದರು. ನಾವೂ ಸ್ವಲ್ಪ ಒಡನಾಟ ಹೆಚ್ಚಿದಂತೆ ಕೆಲವರನ್ನು ಊಟಕ್ಕೆ ಅಹ್ವಾನಿಸುತ್ತಿದ್ದೆವು. ಅದೇ ನೆಪದಲ್ಲಿ ನನಗೂ ಮನೆಯಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಅವಕಾಶ ಸಿಗುತ್ತಿತ್ತು. ನನ್ನ ಹೆಂಡತಿ ಆಶಾಳ ಅಡಿಗೆ ರುಚಿ ಅಂಥದ್ದು. ನಿತ್ಯವೂ ಕೂಡ ಒಳ್ಳೆ ಅಡಿಗೆ ಮಾಡುವವಳೇ, ಆದರೆ ದಿನವೂ ಎರ್ರಾ ಬಿರ್ರಿ ತಿನ್ನುವ ಅವಕಾಶ ಇರುತ್ತಿಲಿಲ್ಲವಲ್ಲ. ಆರೋಗ್ಯದ ಬಗ್ಗೆ ತುಂಬಾ ನಿಗಾ ವಹಿಸುವವಳು ಅವಳು. ಬಂದವರ ಜೊತೆಗೆ ರುಚಿಯಾದ ಊಟವನ್ನು ಮನ್ಹಪೂರ್ತಿ ಸವಿದು ಎಷ್ಟೋ ವರ್ಷಗಳ ಹಳೆಯ ಗೆಳೆಯರಂತೆ ಆದು ಇದು ಅಂತ ಮಾತಾಡುತ್ತಿದ್ದರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಎರಡು ಕುಟುಂಬಗಳ ಮಧ್ಯೆ ಒಂದೊಳ್ಳೆ ಗೆಳೆತನ ಹುಟ್ಟಲು ರುಚಿಕರವಾದ ಭೋಜನ ಹಾಗೂ ಹರಟೆ ಕಾರಣವಾಗುತ್ತವೆ.

ಹೀಗೆ ಭೇಟಿಯಾದವನು ಗಜನಿ. ಅವನಿಗೆ ಅ ಹೆಸರು ಬರಲು ಕಾರಣ ಅವನ ಅಗಾಧ ಜ್ಞಾಪಕಶಕ್ತಿ! ಗಜನಿ ಸಿನೆಮಾದಲ್ಲಿ ಹೀರೋ ಮರೆಯಬಾರದೆಂದು ತನ್ನ ಮೈ ಮೇಲೆ ಏನೇನೋ ಗೀಚಿಕೊಂಡ ಹಾಗೆ ನಮ್ಮ ಗಜನಿ ತನ್ನ ಫ್ಲಾಟ್ ನ ಡೋರ್ ಹಿಂದೆ, ತನಗೆ ಮನೆ ಬಿಟ್ಟು ಆಫೀಸ್ ಗೆ ಹೋಗುವಾಗ ನೆನಪಿಸುವ ಕೆಲವು ವಿಷಯಗಳನ್ನು ಒಂದು ಉದ್ದ ಹಾಳೆಯಲ್ಲಿ ಬರೆದು ಅಂಟಿಸಿಕೊಂಡಿದ್ದ. ಅಲ್ಲಿದ್ದ ಲಿಸ್ಟ್ ನಲ್ಲಿ ಕೆಲವು ಇಂತಿವೆ “ಐಡಿ ಕಾರ್ಡ್, ಟ್ರಾಶ್, ಮೊಬೈಲ್, ಕಾರ್ ಕೀ…” ಹೀಗೆ… ಅದನ್ನು ಮೊದಲ ಸಲ ನೋಡಿ ಬಿದ್ದು ಬಿದ್ದು ನಕ್ಕಿದ್ದೆವು. ಆಗಲೇ ಅಪ್ಪು ಗೌಡ ಅವನಿಗೆ ಕೊಟ್ಟ ಹೆಸರು ‘ಗಜನಿ’. ಅವನೂ ಕೂಡ ಈ ಹೆಸರಿಗೆ ಚ್ಯುತಿ ಬರದಂತೆ ತನ್ನ ಅಭೂತಪೂರ್ವ ಮರೆವನ್ನು ಕಾಲ ಕಾಲಕ್ಕೆ ಪ್ರದರ್ಶಿಸಿ ನಮ್ಮನ್ನು ರಂಜಿಸುತ್ತಿದ್ದ.

ಹೀಗೆ ಒಬ್ಬೊಬ್ಬರೇ ನನ್ನ ಗೆಳೆಯರ ಪಟ್ಟಿಗೆ ಸೇರುತ್ತ ಹೋದರು. ಅಲ್ಲಿ ಆಗ ಹೊಸದಾಗಿ ಪರಿಚಯವಾದವರಲ್ಲಿ ಬೆಂಕಿ ಮಾತ್ರ ನನ್ನ ವಾರಿಗೆಯವನು. ಕೊಮಾ , ಗಜನಿ, ಅಪ್ಪು ಗೌಡ (ಇವನ ಬಗ್ಗೆ ಬರೆಯಲು ಪದಗಳು ಸಾಲವು!) ಎಲ್ಲರೂ ನನಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವರು. ನಾನೇನು ಕಡಿಮೆಯೇ? ನಾನೂ ಚಿಕ್ಕವನೇ! ಬೆಂಕಿ ಹಾಗೂ ನಾನು ಆಗಾಗ ಹೊಸದಾಗಿ ಸಿಕ್ಕ ಸಣ್ಣ ವಯಸ್ಸಿನ ಗೆಳೆಯರ ಮುಂದೆ ತಮಾಷೆಗೆ ಹೇಳುತ್ತಿದ್ದೆವು, “ನಮಗ ಈಗ ಇಪ್ಪತ್ತು ತುಂಬಿ ಇಪ್ಪತ್ತೊಂದು ಆಗ್ಯಾವು, ಅಲೆನ್ ಲಾ?” ಅಂತ.
ಹೀಗೆ ದಿನಕಳೆದಂತೆ ನಿಕಟ ಆದವರು ತುಂಬಾ ಜನ. ಆದರೆ ಯಾರನ್ನು ಭೇಟಿಯಾಗುವ ಅವಕಾಶ ಸಿಕ್ಕರೂ ನಾನು ಅದೇ ಹಳೆ ಚಾಳಿ ಮುಂದುವರಿಸಿದ್ದೆ. ಅವರಿಗೆ ಕೇಳುತ್ತಿದ್ದೆ. ಯಾಕೆ ಇಲ್ಲೇ ಇದ್ದೀರಿ!? ಭಾರತಕ್ಕೆ ಮರಳುವ ವಿಚಾರ ಇಲ್ಲವೇ ಅಂತ…

ಬರಬರುತ್ತ ಅಲ್ಲಿನ ಎಷ್ಟೋ ಜನರನ್ನು ನೋಡಿದಾಗ ಅವರೆಲ್ಲ ಅಲ್ಲೊಂದು ಜಗತ್ತನ್ನು ಸೃಷ್ಟಿಸಿಕೊಂಡಿದ್ದು ಸ್ಪಷ್ಟವಾಗಿ ತೋರುತ್ತಿತ್ತು. ಅಲ್ಲೊಂದು ರೂಟೀನ್ ಇತ್ತು. ಕ್ರಿಕೆಟ್ ಇಷ್ಟ ಇದ್ದವನು ಕ್ರಿಕೆಟ್ ತಂಡ ಕಟ್ಟಿಕೊಂಡು ಆಡಲು ಹೋಗುತ್ತಿದ್ದ. ಕೆಲವರು ಟೆನಿಸ್, ಸಾಕರ್, ಸ್ನೂಕರ್ ಅದು ಇದು ತಮಗೆ ಬೇಕಾಗಿದ್ದನ್ನು ಮಾಡಿಕೊಂಡು ಖುಷಿಯಾಗಿದ್ದರು. ನಾನು ಕಂಡುಕೊಂಡ ಇನ್ನೊಂದು ಸತ್ಯ ಅಂದರೆ ಎಷ್ಟೋ ಜನರು ಅಲ್ಲಿ ಡಾಲರ್ ಗಳಿಸಿ ಭಾರತದಲ್ಲಿ ತಾವು ಅದಾಗಲೇ ಮಾಡಿಕೊಂಡಿದ್ದ ಸಾಲವನ್ನು ತೀರಿಸಲು ಅಂತ ಬಂದವರಾಗಿರುತ್ತಿದ್ದರು. ಕ್ರಮೇಣ ಇಲ್ಲಿನ ಸಾಲವೇನೋ ತೀರುತ್ತಿತ್ತು. ಅದು ತೀರೋದರೊಳಗೆ ಮನೆ, ಕಾರು ಅಂತ ಅಲ್ಲಿ ಹೊಸ ಸಾಲಗಳು ಸೃಷ್ಟಿಯಾಗಿರುತ್ತಿದ್ದವು. ಅವು ತೀರುವವರೆಗೆ ವಾಪಸ್ಸು ಹೋಗೋದು ಹೇಗೆ ಸಾಧ್ಯ ಅಲ್ಲವೇ?! ನನಗೂ ಒಬ್ಬ ಗೆಳೆಯ ಅಲ್ಲೊಂದು ಮನೆ ತೆಗೆದುಕೋ ಮುಂದೆ ಭಾರತಕ್ಕೆ ಹೋದರು ಡಾಲರಿನಲ್ಲಿ ಬಾಡಿಗೆ ಬರುತ್ತಿರುತ್ತದೆ ಎಂಬ ಅದ್ಭುತ ಸಲಹೆ ಕೊಟ್ಟಿದ್ದ. ಸಧ್ಯ ಸಲಹೆಯನ್ನು ಪರಿಗಣಿಸದೆ ಬಚಾವಾದೆ!

ಎಲ್ಲಕ್ಕಿಂತ ಮಿಗಿಲಾಗಿ NRI ಗಳ ಮಕ್ಕಳು ಅಲ್ಲಿನ ವಾತವಾರಣಕ್ಕೆ ತಕ್ಕಂತೆ ಬೆಳೆಯುತ್ತಿದ್ದರು. ಮೊದಮೊದಲು ಅಲ್ಲಿನ ಮಕ್ಕಳು ಅಮೆರಿಕನ್ accent ಮಾತಾಡುತ್ತಿದ್ದುದು ಕೇಳಿ ವಿಚಿತ್ರ ಅನಿಸುತ್ತಿತ್ತು. ಆದರೆ ಬರುಬರುತ್ತಾ ಅದು ರೂಡಿಯಾಗಿತ್ತು. ಯಾಕಂದರೆ ಇವೆಲ್ಲ ವಾಸ್ತವಗಳು ಎಂಬ ಅರಿವಾಗಿತ್ತು. ಆದರೂ ನನ್ನ ಮಗಳು ಇವರಂತೆ ಮಾತಾಡುವುದ ಕಲಿಯುವುದರೊಳಗೆ ವಾಪಸ್ಸು ಹೋಗಿಬಿಡಬೇಕು ಅಂತ ಅಂದುಕೊಳ್ಳುತ್ತಿದ್ದೆ. ಅದು ನನ್ನಿಷ್ಟ. ಹಾಗೆಯೇ, ಕಷ್ಟವೋ ಸುಖವೋ ಅಂತ ಅಲ್ಲಿ ಇರಲು ಬಯಸಿದವರದೂ ಅವರಿಷ್ಟ! ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ಅದೂ ಅಲ್ಲದೆ ಅವರ್ಯಾಕೆ ವಾಪಸು ಬರಬೇಕು? ನಾನು ಬೆಂಗಳೂರನ್ನು ಬಿಟ್ಟು ನನ್ನ ಹುಟ್ಟಿದ ಊರಿಗೆ ಹೋಗುತ್ತಿದ್ದೆನೆಯೇ? ಅಂದ ಮೇಲೆ ಅವರ್ಯಾಕೆ ಅಲ್ಲೇ ಇದ್ದಾರೆ ಅಂತ ಯೋಚನೆ ಮಾಡುವ ಹಕ್ಕು ನನಗಿದೆಯೇ? ನಿನಗೆ ಬೇಡವಾದರೆ ನೀನು ಹೋಗು, ಅವರಿಗೇಕೆ ಹಾಗೆ ಕೇಳಿ ಮುಜುಗರ ಮಾಡುತ್ತೀಯ ಅಂತ ನನಗೆ ನಾನೇ ಕೇಳಿಕೊಂಡು ಸುಮ್ಮನಾದೆ.

…ಯಾಕೂ ಏನೋ ನನಗಂತೂ ಅಲ್ಲಿ ಪ್ರತಿ ಕ್ಷಣವೂ ತುದಿಗಾಲ ಮೇಲೆ ನಿಂತ ಹಾಗೆ ಅನಿಸುತ್ತಿತ್ತು. ಅಲ್ಲಿ ಎಲ್ಲವೂ ಇದೆ; ಪಾರ್ಲೆ ಜಿ, ರಸಪುರಿ ಮಾವಿನಹಣ್ಣು, ಚುರುಮುರಿ, ಸಮೋಸ, ಡಾಲರು, ಕಾರು, ಬಂಗಲೆ, ಐಶಾರಾಮು, ಗೆಳೆಯರು, ಮೋಜು … ಆದರೂ ಏನೋ ಇಲ್ಲ ಅಂತ ಪದೆ ಪದೇ ಅನುಭವ ಆಗುತ್ತಿತ್ತು. ಆಶಾ ಹೇಳೋಳು, ಅಲ್ಲಿ ಅಪ್ಪ ಅಮ್ಮ ಒಂದ್ ಬಿಟ್ಟು ಎಲ್ಲಾ ಸಿಗುತ್ತೆ ಅಂತ! ಒಂದು ಬಗೆಯ ಶೂನ್ಯತೆ, ಯಾವುದೋ ಒಂದು ಕೊರತೆ, ಯಾರೂ ಇಲ್ಲವೇನೋ ಎಂಬಂತಹ ವ್ಯಾಕುಲತೆ, ಭಾರತದಲ್ಲಿದ್ದ ಅಪ್ಪ ನಾನು ಬಂದಿಲ್ಲ ಎಂಬ ಕೊರಗಿನಲ್ಲೇ ಸತ್ತುಬಿಟ್ಟರೆ ಎಂಬ ಹೆದರಿಕೆ, ಪಾಪಪ್ರಜ್ಞೆ ಇದೆಲ್ಲವೂ ನನ್ನನ್ನು ಅಲ್ಲಿರುವವರೆಗೂ ಕಾಡಿತ್ತು. ಇದೆಲ್ಲದರಿಂದ ಆದಷ್ಟು ಹೊರಗೆ ಬರಲು ಯಾವುದಾದರೂ ಒಂದು ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲೇಬೇಕಿತ್ತು. ಆಗ ನನಗಿದ್ದ ಒಂದು ಸುವರ್ಣ ಅವಕಾಶ ಅಲ್ಲಿದ್ದ ‘ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ’!

-ಗುರುಪ್ರಸಾದ ಕುರ್ತಕೋಟಿ



(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x