NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ ೨): ಗುರುಪ್ರಸಾದ ಕುರ್ತಕೋಟಿ

ಇಲ್ಲಿಯವರೆಗೆ

ಪರದೇಶದಲ್ಲಿ ತಳ ಊರಲು ಹೆಣಗಾಡುವ ಮೊದಲ ದಿನಗಳಲ್ಲಿ ತುಂಬಾ ಖುಷಿ ಕೊಡುವ ಕೆಲವೇ ಕೆಲವು ಸ್ಥಳಗಳಲ್ಲಿ ಒಂದು Indian grocery stores! ತರತರಹದ ಮಸಾಲೆ ಪದಾರ್ಥಗಳು, ಕಾಳುಗಳು, ಚುರುಮುರಿ, ಅವಲಕ್ಕಿ, ಇಡ್ಲಿ ಮಿಕ್ಸ್ ಇನ್ನೂ ಏನೇನೋ… ಸಿಗುವ ಏಕೈಕ ಸ್ಥಳ ಜೊತೆಗೆ ಭಾರತೀಯರ ಸಮ್ಮಿಲನದ ಒಂದು ಕೇಂದ್ರವೂ ಹೌದು. ಅಂಥದರಲ್ಲಿ ಅದು ಕನ್ನಡಿಗರದೇ ಇದ್ದರಂತೂ ಮುಗಿದೇ ಹೋಯಿತು. ಕನ್ನಡಿಗರೇ ನಡೆಸುತ್ತಿರುವ ಅಂತಹ ಒಂದು ಅಂಗಡಿ ಒಮಾಹಾದಲ್ಲಿದೆ. ಅದರ ಹೆಸರು ತುಳಸಿ! ಅಲ್ಲಿ ಹೋದಾಗಲೊಮ್ಮೆ, ನಾವು ಸಣ್ಣವರಿದ್ದಾಗ ಶೆಟ್ಟರ ಅಂಗಡಿಗೆ ಹೋಗಿ ಅಲ್ಲಿನ ಎಲ್ಲಾ ಕಾಳು, ಕಡಿ, ಬೆಲ್ಲ, ಸಕ್ಕರೆ, ಚಾಪುಡಿಗಳಾದಿ ಮಿಶ್ರಿತ ಒಂದು ಬಗೆಯ ಸುವಾಸನೆಯನ್ನು ಆಘ್ರಾಣಿಸಿ ಖುಷಿ ಪಡುತ್ತಿದ್ದೆವಲ್ಲ ಅದೇ ತರಹ ಅಲ್ಲಿಯ ತುಳಸಿ ಅಂಗಡಿಯ ಆ ಪರಿಮಳ ರೋಮಾಂಚನ ಮೂಡಿಸಿತ್ತು. ಅದರ ಮಾಲಿಕರು ನಮ್ಮ ಹತ್ತಿರದ ಸಂಬಂಧಿಗಳೇ (ಇನ್ನೂ ಜಗಳವಾಡದ!) ಏನೋ ಅನ್ನಿಸುವಷ್ಟು ನಿಕಟ ಅನಿಸಿದ್ದರು. ಹೊಸದಾಗಿ ವಿದೇಶಕ್ಕೆ ಹೋದಾಗ ನಮ್ಮ ಬಳಿ ಕಾರ್ ಇರುವುದಿಲ್ಲ. ಆ ಸಮಯದಲ್ಲಿ ತುಂಬಾ free rides ಸಿಗುತ್ತೆ.

ಅಲ್ಲಿಯವರಿಗೂ ನಾವು ಭಾರತದಿಂದ ಬಂದವರು ಅನ್ನುವ ಭಾವನೆಯೇ ಆ ಆತ್ಮೀಯತೆ ಬೆಳೆಯಲು ಸಹಾಯ ಮಾಡುತ್ತೆ. ಅಮೆರಿಕೆಯ ಎಲ್ಲ ಊರಲ್ಲೂ ಹೀಗೆಯೇ ಅಂತ ನಾ ಹೇಳಲಾರೆ. ತುಂಬಾ ಕನ್ನಡಿಗರು ಇರುವ ಬೇರೆ ಕಡೆಗಳಲ್ಲಿ ಗುಂಪುಗಳು ಘರ್ಷಣೆಗಳು ಇದ್ದೆ ಇರುತ್ತವೆ ಅಂತ ಕೇಳಿ ತಿಳಿದಿದ್ದೆ. ಆದರೂ ಒಮಾಹಾದ ಕನ್ನಡಿಗರು ಅಪರೂಪದವರು ಅಂತ ಅನಿಸಿತು. ಹೀಗೆ ಅಲ್ಲಿ ಪರಿಚಯವಾಗಿದ್ದ ಗೆಳೆಯರೊಬ್ಬರು ನಮ್ಮನ್ನು ತುಳಸಿ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ಎಲ್ಲರಿಗೂ ಪರಿಚಯ ಮಾಡಿಸುವಾಗ ಅಲ್ಲಿನವರು ಕೇಳುತ್ತಿದ್ದ ನೀವು ಎಲ್ಲಿಯವರು, ಏನು ಮಾಡುತ್ತಿದ್ದೀರಿ ಎಂಬಾ ಪ್ರಶ್ನೆಗಳು ಪುಳಕ ಮೂಡಿಸುತ್ತಿದ್ದವು. ಎಲ್ಲವೂ ಹೊಸ ಮುಖಗಳೇ. ಅದೊಂಥರ ಹನಿಮೂನ್ ಪಿರಿಯಡ್ ನಮ್ಮದಾಗ, ನನಗಂತೂ ಎಲ್ಲವೂ ನವನವೀನ… ಹೆಂಡತಿಯೊಬ್ಬಳನ್ನು ಬಿಟ್ಟು!

ತುಳಸಿ ಅಂಗಡಿಗೆ ಹೋದಾಗ ಮೊತ್ತ ಮೊದಲು ನನಗೆ ಆಕರ್ಶಿಸಿದ ವಸ್ತು ಎಂದರೆ ಪಾರ್ಲೆ G ಬಿಸ್ಕತ್ತು! ಅದರ ಪ್ಯಾಕೆಟ್ ಎಷ್ಟೊಂದು comfort ಕೊಟ್ಟಿತ್ತು ಅಂದ್ರೆ ಅದನ್ನು ವರ್ಣಿಸುವುದು ಬಹು ಕಷ್ಟ. ಮುಂದೆ ಕೂಡ ಅಲ್ಲಿಗೆ ಆಗಾಗ ಹೋಗುತ್ತಿದ್ದೆವು. ಅದರ ಮುಂದೆಯೇ ಇಡಿ ನಗರಕ್ಕೆ ಏಕೈಕವಾದ ದೇವಸ್ಥಾನವೂ ಇತ್ತು. ಹೀಗಾಗಿ ಅಲ್ಲಿಗೆ ಹೋದರೆ ಎರಡೆರಡು ಲಾಭ. ದೇವಸ್ಥಾನದಲ್ಲಿ ಇದ್ದ ಮೂರು ಭಟ್ಟರೂ ಕನ್ನಡದವರೇ ಆಗಿದ್ದರು. ಹಾಗೂ ತಮಿಳು, ತೆಲುಗಾದಿಯಾಗಿ ಇನ್ನೂ ಅನೇಕ ಭಾರತೀಯ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದರು. ಎಷ್ಟೆಂದರೂ ಅವರು ಕನ್ನಡಿಗರಲ್ಲವೇ! ಬಹುಶಃ ಮುಂದೆ ಭಾರತಕ್ಕೆ ಬಂದ ಮೇಲೆ ಕೆಲಸ ಬಿಟ್ಟು ನನಗಾಗಿ, ನನ್ನ ಕನಸುಗಳಿಗಾಗಿ ದುಡಿಯಬೇಕು ಅಂತ ನಾನು ನಿರ್ಧಾರ ಮಾಡಲು ‘ತುಳಸಿ’ ತುಂಬಾ ಪ್ರಭಾವಿಸಿತು ಅಂತಲೇ ಹೇಳಬೇಕು. ಯಾಕಂದರೆ ಭಾರತದಿಂದ ಬಂದು ಅಲ್ಲಿ ಬಿಸಿನೆಸ್ ಮಾಡುತ್ತಿರುವ ನಮ್ಮವರನ್ನು ನೋಡಿದಾಗ ಭಾರತದಲ್ಲಿ ಕೂಡ ಹೀಗೆ ಮಾಡಬಹುದಲ್ವೆ ಎಂಬ ಚಿಂತನಗೆ ನನ್ನನು ಹಚ್ಚಿದ ತುಳಸಿಗೆ ಹಾಗೂ ಆ ಮಾಲಿಕರಿಗೆ ನಾನು ಯಾವಾಗಲೂ ಋಣಿ! ಅಂತೂ ಇಂತೂ ಹೀಗೆ ನಮಗೊಂದು ಅಡ್ಡಾ ಸಿಕ್ಕಿತ್ತು.

ದಿನ ಕಳೆದಂತೆ ತುಂಬಾ ಜನ ಪರಿಚಯವಾಗುತ್ತ ಹೋದರು. ಕೆಲವು ಒಳ್ಳೆ ಗೆಳೆಯರೂ ಸಿಕ್ಕರೂ. ಹಾಗೆ ಅಲ್ಲಿ ಸಿಕ್ಕ ಮೊಟ್ಟ ಮೊದಲ ಚಡ್ಡಿ ದೋಸ್ತನೇ ‘ಬೆಂಕಿ’. ಅವನ ಹೆಸರು ಅದಲ್ಲ, ಆದರೆ ಹೆಸರಲ್ಲೇನಿದೆ ಅಲ್ಲವೇ? ನನಗವನು ‘ಕೆಂಡ’ ಅಂತ ಅಡ್ಡ ಹೆಸರಿಟ್ಟಿದ್ದ ನಾನವನಿಗೆ ‘ಬೆಂಕಿ’ ಅಂತ ಕರಿತಿದ್ದೆ. ನನಗೆ ಕೆಂಡ ಎಂಬ ಅಡ್ಡಹೆಸರು ಬರಲು ಸಿನಿಮಾ ನಿರ್ದೇಶಕ ಸೂರಿ ಕಾರಣ! ಅದು ಹೇಗೆ ಅಂತೀರಾ? ಅದೊಂದು ದೊಡ್ಡ ಕತೆ. ಅದನ್ನು ಆಮೇಲೆ ಹೇಳುವೆ. ನಮ್ಮ ದೋಸ್ತ ಬೆಂಕಿ ಅಲ್ಲಿಯೇ ತುಂಬಾ ವರ್ಷಗಳಿಂದ ವಾಸವಾಗಿರುವ ಅಮೆರಿಕೆಯ citizen ಆಗಿದ್ದ. ‘ಏನ್ಲಾ ಕೆಂಡಾss’ ಅಂತಲೇ ಆತ್ಮೀಯತೆಯಿಂದ ನನ್ನನ್ನು ಸಂಬೋಧಿಸುತ್ತಿದ್ದ. ದೇಶವನ್ನು ಬಿಟ್ಟು ಬಂದಾಗ ಕೆಲವು ಗಾಢ ಗೆಳೆತನಗಳು ನಮಗೆ ಅರಿವಿಲ್ಲದಂತೆ ಆಗಿಬಿಡುತ್ತವೆ! ಅವನ ಒಂದು ವಿಶೇಷವೆಂದರೆ ಯಾವಾಗಲೂ ಸಂಜೆ ೭ ಗಂಟೆಯ ಸುಮಾರಿಗೇ ನನಗೆ ಫೋನ್ ಮಾಡೋನು. ಅದ್ಯಾಕೆ ಅದೇ ಟೈಮ್ ಗೆ ಮಾಡ್ತಾನೆ ಅಂತ ನನಗೆ ಅಂದಾಜು ಸಿಕ್ಕಿರಲಿಲ್ಲ. ಆದರೆ ನನಗೆ ತುಂಬಾ ಕುತೂಹಲ ಇದ್ದೆ ಇತ್ತು. ಒಂದು ವೇಳೆ ಅವನು ಫೋನ್ ಮಾಡಿದಾಗ ನಾವು ಅದನ್ನು ಪಿಕ್ ಮಾಡದೆ ವಾಪಸ್ಸು ಕರೆ ಮಾಡಿದರೆ ಅದು ಯಾವಾಗಲೂ engage ಬರೋದು. ನಾನೂ ಅದಕ್ಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವನ ಜೊತೆ ಮಾತಾಡೋಕೆ ನನಗೆ ಯಾವಾಗಲೂ ಖುಷಿಯೇ. ಹಾಗೆ ಮಾತಾಡುವಾಗ ಠಣ್ ಠಣ್… ಕಿಣಿ ಕಿಣಿ… ಅಂತ ಸಣ್ಣಗೆ ಶಬ್ದ ಬರೋದು .. ಅದೂ ಯಾಕೆ ಅಂತ ನನಗೆ ಗೊತ್ತಾಗಿದ್ದು ಕೆಲವು ದಿನಗಳ ಬಳಿಕ…

ಅದೆನಪಾ ಅಂದ್ರೆ ಮಿಸ್ಟರ್. ಬೆಂಕಿ ಮನೆಯಲ್ಲಿ ಸಂಜೆ ಸಿಂಕಿನಲ್ಲಿ ಪಾತ್ರೆ ತಿಕ್ಕುತ್ತಿದ್ದ! ಹಾಗೆ ಪಾತ್ರೆ ತೊಳೆಯುವಾಗ ಟೈಮ್ ಪಾಸು ಅಂತ ಒಬ್ಬೊಬ್ಬರಿಗೆ ಕರೆ ಮಾಡುತ್ತಿದ್ದ. ಅದರಲ್ಲೂ ಹೊಸದಾಗಿ ಭಾರತದಿಂದ ಬಂದ ಗೆಳೆಯರಿಗೆ ಫೋನ್ ಮಾಡೋದು ಜಾಸ್ತಿ. ಯಾಕಂದರೆ ಹಳಬರಿಗೆ ಅವನು ಪಾತ್ರೆ ತೊಳೆಯುವಾಗ ಫೋನ್ ಮಾಡಿ ತಲೆ ತಿನ್ನುವ ವಿಚಾರ ಗೊತ್ತಿದ್ದು ಅವರು ಅವನ ಫೋನ್ ಎತ್ತದೆ ಇರುವ ಸಾಧ್ಯತೆಗಳು ಜಾಸ್ತಿ ಇರುತ್ತಿದ್ದವು! ಒಬ್ಬರು ಫೋನ್ ಎತ್ತಿಲ್ಲ ಅಂದರೆ ಪ್ಲಾನ್ B ಅಂತ ಇನ್ನೊಬ್ಬರಿಗೆ ಕೂಡಲೇ ಫೋನಿಸುತ್ತಿದ್ದ. ಚಾನ್ಸ್ ಮಿಸ್ ಆದರೆ ನಿಮ್ಮ ಅದೃಷ್ಟ! ಏನೇ ಹೇಳಿ ನಮ್ಮ ‘ಬೆಂಕಿ’ಯ ಸಹವಾಸ ಮಾಡಿ ಆತ್ಮೀಯ ಗೆಳೆತನದ ಅನುಭವ ಆಗಿದ್ದು ಹೌದು. I really miss him!

ಅಲ್ಲೊಂದು ತುಂಬಾ ಸಕ್ರೀಯವಾಗಿರುವ ‘ಸಿರಿಗಂಧ ಕನ್ನಡ ಸಂಘವೆಂಬ’ ಆತ್ಮೀಯ ಬಳಗ ಇದೆ. ಅದರಲ್ಲಿ ಸುಮಾರು ಅರ್ಧದಷ್ಟು ಅಲ್ಲಿಯೇ ತುಂಬಾ ವರ್ಷಗಳಿಂದ ನೆಲೆಸಿರುವ ಕನ್ನಡಿಗರು ಇದ್ದಾರೆ. ಇನ್ನೂ ಎಷ್ಟೋ ಜನ ಹರಿದಾಡುವ ಅಲೆಮಾರಿಗಳು. ಅಂದರೆ ಅವರವರ ಕೆಲಸದ ಆಧಾರದ ಮೇಲೆ ಅಮೇರಿಕಾದ ಬೇರೆ ಬೇರೆ ರಾಜ್ಯಗಳಿಗೆ ಅಡ್ಡಾಡುವವರು, ಇನ್ನು ಬೆರಳೆಣಿಕೆಯಷ್ಟು ಜನ ಕೆಲವು ತಿಂಗಳು ಇದ್ದು ಭಾರತಕ್ಕೆ ವಾಪಸ್ಸು ಮರಳುವವರು. ನಾನೂ ಕೂಡ ಅಲ್ಲಿ ಇರಲಾರೆ ಅಂತಲೇ ಹೋದವನು. ಅಲ್ಲಿ ಒಬ್ಬೊಬ್ಬರೇ NRI ಗಳು ಪರಿಚಯ ಆದಂತೆ ಅವರ ಬಗ್ಗೆ ಕೂಲಂಕುಶವಾಗಿ ಯೋಚಿಸುತ್ತಿದ್ದೆ. ಅಲ್ಲಿ ಇದ್ದವರೆಲ್ಲ ಯಾಕೆ ಅಲ್ಲಿಯೇ ಇದಾರೆ? ಎಷ್ಟೋ ಜನ ಭಾರತಕ್ಕೆ ಹೋಗದೆ ಇರಲು ಕಾರಣಗಳು ಏನು? ಎಂಬೆಲ್ಲ ವಿಚಾರಗಳು ನನ್ನ ತಲೆಯನ್ನು ಕೆಡಿಸಿಬಿಡುತ್ತಿದ್ದವು. ನಾನೂ ಇವರಂತೆ ಇಲ್ಲಿಯೇ ಇದ್ದುಬಿಟ್ಟರೆ ಎಂಬ ಭಯ ಜಾಸ್ತಿ ಕಾಡುತ್ತಿತ್ತು. ಹೀಗಾಗಿ ನಾನು ಅವರನ್ನು ಅಲ್ಲಿ ಹಿಡಿದಿಟ್ಟಿರುವ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಸ್ವಲ್ಪ ಮುಖ ಪರಿಚಯವಾಗಿ ಭೇಟಿಯ ಅವಕಾಶ ಸಿಗುತ್ತಲೇ ಅವರಿಗೆ ‘ಯಾಕೆ ನೀವು ವಾಪಸ್ಸು ಹೋಗಿಲ್ಲ’ ಅಂತ ಕೇಳಿಬಿಡುತ್ತಿದ್ದೆ! ಕೆಲವರು ನನ್ನನ್ನು ಹುಚ್ಚನಂತೆ ನೋಡುತ್ತಿದ್ದರು. ತುಂಬಾ ಜನರು ಉತ್ತರಿಸುತ್ತಿದ್ದರು. ಆ ಉತ್ತರಗಳು ತುಂಬಾ ವಿಭಿನ್ನ ಹಾಗೂ ಒಮ್ಮೊಮ್ಮೆ ವಿಚಿತ್ರ ಕೂಡ ಇರುತ್ತಿದ್ದವು.

ಒಬ್ಬ NRI ಹೇಳಿದ್ದ. ಅಯ್ಯೋ ಬೆಂಗಳೂರಿನ ಟ್ರಾಫಿಕ್ ಗೆ ಹೆದರಿ ನಾನು ಅಲ್ಲಿಗೆ ಹೋಗೋಲ್ಲ ಅಂತ! ಅರೆ ಅವರಿಗೆ ವಾಪಸ್ಸು ಹೋದರೆ ಬೆಂಗಳೂರಿಗೇ ಹೋಗು ಅಂತ ಯಾರು ಹೇಳಿದ್ದು? ತುಂಬಾ ಕಡಿಮೆ ಟ್ರಾಫಿಕ್ ಇರುವ ತನ್ನ ಸ್ವಂತ ಊರಿಗೆ ಹೋಗೋಕೆ ಅಗೋಲ್ಲವೆ? ಅಯ್ಯೋ ಅಲ್ಲಿ ಹೋಗಿ ಏನು ಮಾಡೋದು? ಅಂತ ನನಗೆ ಮರು ಪ್ರಶ್ನೆ ಮಾಡೋರು. ಇನ್ನೊಬ್ಬ ನನ್ನ ಹೆಂಡತಿ ಮಕ್ಕಳಿಗೋಸ್ಕರ ಇಲ್ಲಿರುವೆ ಅಂತ ಹೇಳಿದ. ಹೌದೆ? ರಿಯಲಿ? ಅಂತ ಕೇಳಿದಾಗ… ವಾಪಸ್ಸು ಭಾರತಕ್ಕೆ ಹೋದರೆ ಅವರು ಅಡ್ಜಸ್ಟ್ ಆಗ್ತಾರೋ ಇಲ್ವೋ ಅನ್ನುವ ಸಂಶಯ ಅವನದು. ಅಲ್ಲಯ್ಯಾ ಅವರು ಖಂಡಿತಾ ಅಡ್ಜಸ್ಟ್ ಆಗ್ತಾರೆ ನೀನು ಅಗ್ತಿಯಾ? ಅಂತ ಅವನನ್ನು ಕೇಳಿದ್ದೆ. ಅವನು ನಿರುತ್ತರನಾಗಿದ್ದ… ಅಥವಾ ನೀನ್ಯಾರು ಅದನ್ನು ಕೇಳೋನು ಎಂಬಂತೆ ನೋಡಿದ್ದ…

ಗುರುಪ್ರಸಾದ ಕುರ್ತಕೋಟಿ


(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ ಮಿಸ್ಟರ್. ಬೆಂಕಿಯ ಜೊತೆ ಜೊತೆಗೆ ನನಗೆ ಇನ್ನೊಬ್ಬ ಗೆಳೆಯನ ಪರಿಚಯವಾಗಿದ್ದು ಅಲ್ಲಿನ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ. ಅವನ ಹೆಸರು ಕೋಮಾ (ದಯವಿಟ್ಟು ಗಮನಿಸಿ: ಇಲ್ಲಿನ ಪಾತ್ರಗಳೆಲ್ಲವೂ ನೈಜ, ಆದರೆ ಹೆಸರುಗಳು ಅಡ್ಡ ಅಥವಾ ಕಾಲ್ಪನಿಕ!). ಅವನಿಗೆ ಕೊಮಾ ಎಂಬಾ ಹೆಸರು ಯಾಕೆ ಅಂದರೆ ಅವನು ತುಂಬಾ ವಿಷಯಗಳಲ್ಲಿ ಬಹು ಬೇಗನೆ ಬೇಜಾರಾಗುತ್ತಿದ್ದ. ಆ ಹೆಸರನ್ನು ಅವನಿಗೆ ಕೊಟ್ಟವನು ಅಪ್ಪು ಗೌಡಾ (ಇದು ಕೂಡ ನೈಜ ಹೆಸರಲ್ಲ. ಈ ಸಂಗತಿಯನ್ನು ನಿಮಗೆ ಪದೆ ಪದೆ ಹೇಳಿದ್ದಕ್ಕೆ ನೀವು ಬೇಜಾರಾಗಿ ದಯವಿಟ್ಟು ಕೋಮಾಕ್ಕೆ ಹೋಗದಿರಿ!). […]

1
0
Would love your thoughts, please comment.x
()
x