e – ಸಂಭಾಷಣೆ !: ಸಂತೋಷ್ ಮೂಲಿಮನಿ

ಇಬ್ಬರೂ ತಮ್ಮ ತಮ್ಮ ಲ್ಯಾಪ್ಟಾಪ್ ಮುಂದೆ ಕುಳಿತಿದ್ದಾರೆ, ಇಬ್ಬರ ತೆರೆಯ ಮೇಲೂ ಫೇಸ್ಬುಕ್ ನ ಪರದೆ ಇಣುಕಿ ಇವರ ಮುಖವನ್ನ ಆವರಿಸಿಕೊಂಡಿದೆ. ಇವನು ತನ್ನ ಫೇಸ್ಬುಕ್ ಪ್ರೋಪೈಲಿನಲ್ಲಿ ಈಗ ತಾನೆ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ ಲೇಖನದ ಕೊಂಡಿಯನ್ನು ಎಲ್ಲರೊಂದಿಗೆ ಹಂಚುತ್ತಲಿದ್ದ. ಅಪ್ದೇಟ್ ಬಟನ್ ಒತ್ತಿದ ತಕ್ಷಣ, ‘ ಸುಮಿ, ಆಯ್ತು ನೋಡು ‘ ಎಂದು ಸ್ವಲ್ಪ ದೂರದಲ್ಲೆ ಕೂತಿದ್ದ ಹೆಂಡತಿಗೆ ಉಸಿರಿದ್ದ. ಅವಳು ಆಗಲೆ ಮೆಚ್ಚಿದ್ದ ಗಂಡನ ಪೊಸ್ಟ್ ನ್ನ ಲೈಕ್ ಮಾಡಿದಳು. ಹೀಗೆ ಅವನ ಪ್ರತಿಯೊಂದು ಅಂತರ್ಜಾಲದ ಪ್ರಕಟಣೆಗಳಿಗೆ ‘ ಪ್ರಥಮ ‘ ಪ್ರತಿಕ್ರಿಯೆ ತನ್ನದೆ ಆಗಿರಬೇಕು ಎನ್ನುವ ಉತ್ಕಟ ಹುಚ್ಚು ಅವಳದಾಗಿತ್ತು. ಅವಳ ಈ ಬಗೆಯ ‘ ಹುಚ್ಚಾಟ’ಗಳನ್ನೆ ನೆಚ್ಚಿ ಇದೀಗ ತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಲೇಖಕ ಗಿರಿಧರ್ ಅತಿಯಾಗಿ ಹಚ್ಚಿಕೊಂಡು ಅವಳನ್ನೆ ವರೆಸಿದ್ದ.

****

ಗಿರಿಧರ್ ಹುರುಳಿ ಎಂಬುದು ಗಿರಿಧರ್ ನ ಪೂರ್ಣ ಹೆಸರು. ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಗಿರಿ, ಕಂಪ್ಯೂಟರ್ ಅಪ್ಲಿಕೇಶನಲ್ಲಿ ಬಿ.ಎಸ್ಸಿ ಮಾಡಿ ಕೆಲಸದ ನಿಮಿತ್ತ ಮೈಸೂರು ಸೇರಿದ್ದ. ಅಲ್ಲಿ ಸಣ್ಣ ಪುಟ್ಟ ಕಂಪನಿಗಳಲ್ಲಿ ಎರಡು ಮೂರು ವರ್ಷ ಕೆಲಸ ಮಾಡಿ ಸಾಪ್ಟ್ವೇರ್ ಸಾಮ್ರಾಜ್ಯದ ನಾಡಿ ಮಿಡಿತದ ಲಯ ಬಲ್ಲವನಾಗಿದ್ದ. ತನ್ನ ನಾಲ್ಕನೆ ವರ್ಷಕ್ಕೆ ಇನ್ಪೋಸಿಸ್ ನ ಒಳ ಹೊಕ್ಕು ಕಾರ್ಯಪ್ರವೃತ್ತನಾಗಿದ್ದ. ಹೀಗೆ ಗಿರಿ ಬುದ್ದಿಗೆ ಆಧುನಿಕತೆಯ ಒಲವಿನ ಕೆಲಸದ ಆಸರೆಯೊದಗಿಸಿದರೆ, ಭಾವಜೀವಿಯಾದ ತನ್ನ ಹೃದಯಕ್ಕೆ ಮೈಸೂರು ವಿಶ್ವವಿದ್ಯಾಲದಲ್ಲಿಯ ‘ ಮನಸ ಗಂಗೊತ್ರಿ ‘ ಗ್ರಂಥಾಲಯದೊಂದಿಗೆ ಸಾಹಿತ್ಯದ ಗೀಳು ಹತ್ತಿಸಿದ್ದ. ಪ್ರತಿ ವಾರಾಂತ್ಯದ ಒಂದು ದಿನ ಅದಕ್ಕಾಗಿ ಮೀಸಲಿರಿಸಿದ್ದ.

ಇನ್ಪೋಸಿಸ್ ಸೇರಿದ ಹೊಸತರಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತಿದ್ದ ಗಿರಿ ಯಾರೊಡನೆಯೂ ಅನಾವಶ್ಯಕವಾಗಿ ಹೆಚ್ಚು ಮಾತನಾಡದೆ, ಕೊಟ್ಟ ಕೆಲಸಕ್ಕೆ ನ್ಯಾಯ ಒದಗಿಸಿ ಆಫೀಸಿನಿಂದ ಹೊರಬೀಳುತ್ತಿದ್ದ. ಹೀಗೆಯೇ ದಿನಗಳುರುಳುತ್ತಿರಲು, ಒಂದಿನ ಇವನ ಮ್ಯಾನೇಜರ್ ಅರವಿಂದ್ ಬಂದು ‘ ಗಿರಿ, ಇವಳು ಮಿಸ್ ಸುಮಾ, ಇದೀಗತಾನೆ ಇನ್-ಹೌಸ್ ಯುಟಿಲಿಟಿಸ್ ಟೀಮ್ ಸೇರಿದ್ದಾಳೆ. ನೀನು ಅವಳಿಗೆ ನಮ್ಮ ಪ್ರೊಜೆಕ್ಟ್ ಗೆ ಬೇಕಿರುವ ಒಂದು ಟೂಲ್ ಬಿಲ್ಡ್ ಮಾಡಲು ಸಹಾಯ ಮಾಡು’ ಎಂದು ಹೇಳಿ ಸುಮಾಳನ್ನು ಗಿರಿಗೆ ಒಪ್ಪಿಸಿದವನೆ ಅದಾಗಲೆ ನಿರ್ಧಾರವಾಗಿದ್ದ ತನ್ನ ಕ್ಲೈಂಟ್ ಮೀಟಿಂಗೆಂದು ಕಾಲ್ಕಿತ್ತಿದ್ದ.

ಪ್ರೊಜೆಕ್ಟ್ ಮೂಲಕ ಪರಿಚಯವಾದ ಗಿರಿ ಮತ್ತು ಸುಮಾ ಆಫೀಸಿನಲ್ಲಿ ಅಷ್ಟೇನೂ ಮಾತನಡುತ್ತಿರಲಿಲ್ಲ. ತಂತಮ್ಮ ಕೆಲಸ ಮುಗಿಸಿ ಮಿಕ್ಕ ಸಮಯದಲ್ಲಿ ಯಾವಾಗಲೋ ಒಮ್ಮೆ ಕಾಫಿಗೆಂದು ಹೊರಹೋಗುತ್ತಿದ್ದರೂ ಗಿರಿಯನ್ನ ಮಾತಿಗೆಳೆಯಲು ಸುಮಾ ಗಿರಿಶಿಖರವನ್ನ ಎತ್ತಿಡಲು ಪಡುವ ಕಷ್ಟವನ್ನೆ ಪಡಬೇಕಾಗುತ್ತಿತ್ತು. ಬಾಹ್ಯ ಪ್ರಪಂಚಕ್ಕೆ ಗುರುತಿಸಲೂ ಆಗದ ಇವರ ಗೆಳೆತನ ಅದಾಗಲೇ ವಿನಿಮಯವಾಗಿದ್ದ ಫೋನ್ ನಂಬರ್ ಮೂಲಕ ಚಾಟಿಸಬಹುದಾಗಿದ್ದ ‘ ವಾಟ್ಸ್ಯಾಪ್ ‘ ಮುಖೇನ ಆಳವಾಗಿ ಬೇರೂರಿತ್ತು. ನಿಜದಲ್ಲಿ ಯಾರೊಂದುಗೂ ಅಷ್ಟಾಗಿ ತೆರೆದುಕೊಳ್ಳದ ಗಿರಿ ವಾಟ್ಸ್ಯಾಪ್ ಮೂಲಕ ಅದಾಗಲೆ ಸುಮಾಳಿಗೆ ತನ್ನ ಚರಿತ್ರೆಯನ್ನೆಲ್ಲಾ ದಾಟಿಸಿದ್ದ.

***

ಗೆಳೆತನ ವಾಟ್ಸ್ಯಾಪೀಕರಣಗೊಂಡ ಸುಮಾರು ದಿನಗಳ ನಂತರ ಒಂದು ವಾರಾಂತ್ಯದ ದಿನ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೇಜಾರಾಗಿ ಸುಮಾ ಗಿರಿಗೆ ‘ಪಿಂಗಿಸಿ’ ತಾನೂ ಅಂದು ಅವನೊಡನೆ ಮಾನಸ ಗಂಗೋತ್ರಿಗೆ ಬರುವುದಾಗಿ ತಿಳಿಸಿದ್ದಳು. ಹೇಳಿದ ಸಮಯಕ್ಕೆ ಸರಿಯಾಗಿ ತಯಾರಾಗಿ ಕಾಯ್ದಿದ್ದ ಸುಮಾಳನ್ನ ನೋಡಿದ ಗಿರಿ ತುಸು ಮುಗುಳ್ನಕ್ಕಿದ್ದ. ತನ್ನ ಬೈಕಿನೆಡೆಗೆ ಬಂದ ಸುಮಾ ‘ ಯಾಕೆ ಈ ಮಂದಹಾಸ ‘ ಎಂದು ಕೇಳಿದಳು. ‘ ಅದೇನಿಲ್ಲ, ಹಾಗೆ ಸುಮ್ನೆ, ಹೆಣ್ಮಕ್ಳು ಈ ಪರಿ ಸರಿಯಾದ ಟೈಮ್ಗೇ ರೇಡಿಯಾಗೊ ಕಾಲದಲ್ಲಿ ನಾನು ಜೀವಿಸ್ತಿದಿನಲ್ಲಾ ಅಂತಾ ತುಂಬಾ ಖುಸಿಯಾತ್ತು ಅಷ್ಟೆ ‘ ಎಂದು ಕಿಚಾಯಿಸಿದ್ದ. ಹೆಚ್ಚು ಮಾತನಾಡದ ಗಿರಿಯ ಈ ತರಹದ ಸಾಂದರ್ಭಿಕ ನುಡಿ ಮುತ್ತುಗಳೆ ಸುಮಾಳನ್ನ ಮೆಚ್ಚಿಸುತ್ತಿದ್ದವು.

ಗ್ರಂಥಾಲಯದ ಒಳಹೊಕ್ಕೊಡನೆ ಎಂದಿನಂತೆ ತನ್ನ ಖಾಯಂ ಎನ್ನುವಂತಿದ್ದ ಕುರ್ಚಿಯಲ್ಲಿ ಕುಳಿತು ಕೆಲವೊತ್ತು ಅಲ್ಲೆ ಇದ್ದ ಕೆಲ ಮಾಸಿಕಗಳನ್ನ ಕೈಗೆತ್ತಿಕೊಂಡು, ಸುಮಾಳಿಗೆ ‘ ತಗೋ ನೀನು ಯಾವುದಾದರೊಂದು ‘ ಎಂದವನೆ ತೆಗೆದುಕೊಡಲು ಮೇಲೇಳುತ್ತಿದ್ದ, ಆಗ ಅವಳೆ ‘ ಇರ್ಲಿ ಬಿಡೊ, ಸ್ವಲ್ಪ ಹೊತ್ತು ಈ ಲೈಬ್ರರಿ ತಿರ್ಗಾಕ್ಕೊಂಡು ಬರ್ತಿನಿ ಆಮೇಲೆ ಎನಾದರೊಂದು ಓದಿದರಾಯ್ತು ‘ ಎನ್ನುತ್ತ ಗಿರಿಯನ್ನ ತನ್ನಷ್ಟಕ್ಕೆ ಬಿಟ್ಟು ಮೇಲೆದ್ದಳು. ಗಿರಿ ರೂಢಿಯಂತೆ ಮಾಸಿಕಗಳ ನಂತರ ಯಾವುದಾದರೊಂದು ಕಾದಂಬರಿ ಹಿಡಿದು ಕೂತಿದ್ದ. ತುಂಬಾ ದೊಡ್ಡದಾಗಿದ್ದ ಗ್ರಂಥಾಲಯವನ್ನ ಸುತ್ತಲು ಸುಮಾ ಸುಮಾರು ಮುಕ್ಕಾಲು ಗಂಟೆ ತೆಗೆದುಕೊಂಡಳು. ಗಿರಿಯ ಓದು ಅಷ್ಟು ಸಮಯ ಅಬಾಧಿತವಾಗಿ ಸಾಗಿತ್ತು. ಸುಮಾ ಬಂದವಳೆ ‘ ಅಲ್ಲಾ ಗಿರಿ, ಲೈಬ್ರರಿಲಿ ಇಷ್ಟೊಂದು ಬುಕ್ ಗಳಿವೆಯಲ್ಲ, ಅವನ್ನ ಬರೆಯೋರಿಗೆ ಎಷ್ಟೊಂದು ತಾಳ್ಮೆ ಇರಬೇಕು? ನಮಗೆ ಸರಿಯಾಗಿ ಒಂದು ಲೆಟರ್ ಬರೆಯೋಕೆ ಆಗಲ್ಲ, ಬರೆದ ಮೇಲೂ ಅದನ್ನ ಹಾಗೆ ಬರೆದರೆ ಚೆನ್ನಾಗಿತ್ತು, ಹೀಗೆ ಬರೆದಿದ್ರೆ ಸರೆಯಾಗಿತ್ತು ಅನ್ಸುತ್ತೆ. ಇನ್ನ ಅವರ ಪರಿಸ್ಥಿತಿ ಏನಾಗಬೇಡ ‘ ಎನ್ನುತ್ತ ಗಿರಿಯನ್ನ ಮಾತಿಗೆಳೆದಳು. ಅವನು ಸ್ವಲ್ಪ ಹೊತ್ತು ಏನೂ ಉತ್ತರಿಸದೆ ಓದಿನಲ್ಲಿ ಮಗ್ನನಾಗಿದ್ದ. ತದನಂತರ ಅವನೆ ಓದಿನಿಂದ ಹೊರಬಂದು ದೀರ್ಘವಾದ ಉಸಿರೆಳೆದು ‘ ನಂಗನ್ಸುತ್ತೆ, ಆ ಗೊಂದಲ ಎಲ್ಲರಲ್ಲೂ ಇರುತ್ತೆ. ಒಂದು ಹಂತದ ವರೆಗೆ ನಾವು ಅವನ್ನ ಸರಿಪಡಿಸಲು ಹೆಣಗಬಹುದು, ಆದರೆ ದಿನವೂ ನಾವು ಮನುಷ್ಯರು ಬೆಳೆದಂತೆಲ್ಲಾ ಹಿಂದಿನದೆಲ್ಲವನ್ನ ನೋಡುವ ದೃಷ್ಟಿಕೋನ ಬದಲಾಗುತ್ತೆ. ಇದರಿಂದಲೆ ಈ ರೀತಿಯ ಗೊಂದಲ ಆಗ್ತದೆ. ಆದ್ರ ಇದು ನಿರಂತರ ನೆಡೆಯುವ ಪ್ರಕ್ರಿಯೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ‘ ಎನ್ನುತ್ತ ಸುಮಾಳತ್ತ ನೋಡತೋಡಗಿದ, ಅವಳು ‘ ನಿನಗೂ ಹಿಂಗಾಗುತ್ತಾ? ‘ ಎಂದು ಕೇಳಿದಳು. ‘ ಇಷ್ಟೋತ್ತು ಹೇಳಿದ್ದು ನನ್ನ ಅನುಭವದ ವೃತ್ತಾಂತವನ್ನೆ ‘ ಎನ್ನುತ್ತ ಕಣ್ಣು ಮಿಟುಕಿಸಿದ್ದ ಗಿರಿ.

ಅದಾಗಲೆ ಗಿರಿ ಸುಮಾಳಿಗೆ ತಾನು ಆಗಾಗ ಹವ್ಯಾಸಕ್ಕಾಗಿ ಕವನಗಳನ್ನ ಬರೆಯುತ್ತೇನೆಂದು, ಅಲ್ಲದೆ ತನ್ನ ಪ್ರೇಮ ಪ್ರಕರಣಗಳ ಸವಿಸ್ತಾರವಾದ ವರದಿಯನ್ನ ವಾಟ್ಸ್ಯಾಪ್ ಮೂಲಕ ಹಂಚಿಕೊಂಡಿದ್ದ. ಆದುದರಿಂದಲೆ ಸುಮಾ ‘ ನಿನಗೂ ಹಿಂಗಾಗುತ್ತಾ? ‘ ಎಂದು ಕೇಳಿದ್ದಳು. ಸುಮಾರು ಮೂರು ಗಂಟೆಗಳ ಕಾಲ ಗ್ರಂಥಾಲಯದಲ್ಲಿದ್ದ ಇಬ್ಬರೂ ತುಸು ಹೊತ್ತು ಅದರ ಮುಂಭಾಗದಲ್ಲಿದ್ದ ಹುಲ್ಲುಹಾಸಿನ ಮೇಲೆ ಕಾಲ ಕಳೆದು ಮನೆ ಸೇರಿದ್ದರು.

***

ಅಂದು ಆಫೀಸ್ನಲ್ಲಿ ಸುಮಾ ಎಂದಿಗಿಂತ ತುಸು ಹೆಚ್ಚೇ ಖುಷಿಯಲ್ಲಿದ್ದಳು. ಗಿರಿಯ ಟೀಂನ ಅವಶ್ಯಕತೆಗನುಗುಣವಾಗಿ ಸುಮಾ ಅಂದು ತಾನು ತಯಾರಿಸಿದ ಟೂಲ್ ನ್ನು ಹಸ್ತಾಂತರಿಸಿದ್ದಳು. ಇದಕ್ಕೆ ಪ್ರತಿಯಾಗಿ ಗಿರಿಯ ಮ್ಯಾನೇಜರ್ ಅರವಿಂದ್, ಸುಮಾಳ ಕೆಲಸವನ್ನು ಹೊಗಳಿ ಅವಳು ಕಳಿಸಿದ್ದ ಈ-ಮೇಲ್ ಗೆ ಪ್ರತಿಕ್ರಿಯಿಸಿದ್ದ. ಇದು ಅವಳ ಇಂದಿನ ಹೆಚ್ಚುವರಿ ಸಂತಸಕ್ಕೆ ಕಾರಣವಾಗಿತ್ತು. ತಡಮಾಡದೆ ಸುಮಾ’ ಇದೆಲ್ಲಾ ಸಾದ್ಯವಾಗಿದ್ದು ಗಿರಿಯ ಸಹಾಯದಿಂದ.ಇದರ ನಿರ್ಮಾಣದ ಹಿಂದೆ ಗಿರಿಯ ಪರಿಶ್ರಮವೂ ಇದೆ, ಯಶಸ್ಸಿನ ಅರ್ಧ ಶ್ರಯ ಅವನಿಗೂ ಸಲ್ಲಬೇಕು ‘ ಎಂದು ಕೀಲಿಸಿ ಗಿರಿಧರ ತನಗೆ ತಿಳಿಸಿ ಹೇಳಲು ಪಟ್ಟ ಶ್ರಮದ ಬೆವರನ್ನು ಅರಿತು ಪ್ರತಿಕ್ರಿಯಿಸಿದ್ದಳು.

ಇದುವರೆಗೂ ಅದು ನಾನೇ ಮಾಡಿದ್ದು, ಇದನ್ನು ನಾನೆ ಮಾಡಿದ್ದು ಎನ್ನುವ ಸಹೋದ್ಯೊಗಿಗಳನ್ನೆ ಕಂಡಿದ್ದ ಗಿರಿ ಇವತ್ತು ಸುಮಾಳ ರೀಪ್ಲೈ ಕೊಂಡಿಯನ್ನು ನೋಡಿ ಈ ಆಫೀಸ್ ನಲ್ಲಿ ಇನ್ನೂ ಸಮದೃಷ್ಟಿಯುಳ್ಳ ಸಮಾನ ಮನಸ್ಕರಿದ್ದರೆಂದು ಯೋಚಿಸುತ್ತ ಪಕ್ಕದಲ್ಲಿದ್ದ ಮೊಬೈಲ್ ಕೈಗೆತ್ತಿಕೊಂಡು ‘ ಕಾಫಿ ‘ ಎಂದು ಸುಮಾಳಿಗೆ ವಾಟ್ಸ್ಯಾಪಿನಲ್ಲಿ ಪಿಂಗಿಸಿದ್ದ.

ಸಾಯಂಕಾಲದ ಕಾಫಿಯ ನಂತರ ಇಬ್ಬರೂ ಮನೆ ಸೇರಿದರು. ಸ್ವಲ್ಪ ಸಮಯ ಮನೆಯವರೊಂದಿಗೆ ಟಿ.ವಿ ನೋಡುತ್ತ ಕಳೆದ ಸುಮಾ ಇದ್ದಕ್ಕಿದ್ದಂತೆ ತನಗಿಷ್ಟವಾದ ಖುರುಕಲು ಅವಲಕ್ಕಿ ಮಾಡಲು ಅಡುಗೆ ಮನೆಯಲ್ಲಿ ತಯಾರಿ ನಡೆಸಿದ್ದಳು. ಇವಳಿಗೇನೊ ಅಡುಗೆ ಮಾಡಲು ಇಷ್ಟ ಆದರೆ ಕೆಲಸದಿಂದ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಅಮ್ಮನ ಅಡುಗೆಯ ತಯಾರಿ ಮುಗಿದಿರುತ್ತಿತ್ತು. ಇನ್ನು ವಾರಾಂತ್ಯದಲ್ಲಿ ಕೆಲವು ಸಲ ಅಮ್ಮನಿಗೆ ಅಡುಗೆಯಲ್ಲಿ ನೆರವಾಗುತ್ತಿದ್ದಳು, ಹಲವು ಬಾರಿ ಗೆಳತಿಯರೊಂದಿಗೆ ಹೊರಹೋಗಿ ಸುತ್ತಾಡುತ್ತಿದ್ದಳು. ಹೀಗಾಗಿ ತನಗಿಷ್ಟವಾದ ಅಡುಗೆ ಕೆಲಸ ದೂರದಲ್ಲೆ ಉಳಿದಿತ್ತು. ಹಾಲ್ ನಿಂದ ಬಂದ ತಾಯಿ ರೇವತಿ ‘ ಏನಮ್ಮಾ ಇವತ್ತು ಅವಲಕ್ಕಿ ನೆನಪಾಯ್ತಾ ‘ ಎಂದು ಕೇಳಿದ್ದಳು. ‘ ಏನೊ ತಿನ್ಬೇಕು ಅನುಸ್ತು ಅದಕ್ಕೆ ಮಾಡ್ಕೊಂಡೆ ‘ ಎನ್ನುತ್ತ ಸುಮಾ ತನ್ನ ರೂಮಿನೊಳಗೆ ಜಾರಿದ್ದಳು.

ರೂಮಿನಲ್ಲಿ ಅವಲಕ್ಕಿ ಮೆಲ್ಲುತ್ತಾ ಮೊಬೈಲ್ ಎತ್ತಿಕೊಂಡ ಸುಮಾ ಗಿರಿಗೆ ನೇರವಾಗಿ ‘ how could you be so happy even after your breakups, haven’t you felt the pain ? ‘ ಎಂದು ಟೈಪಿಸಿದ್ದಳು.

ಮೈಸೂರಿನಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಗಿರಿ ತನ್ನ ಲ್ಯಾಪ್ ಟಾಪ್ ನಲ್ಲಿ ಯಾವುದೊ ಇಂಗ್ಲಿಷ್ ಸೀರಿಯಲ್ ನೋಡುತ್ತಿದ್ದ.ಪಕ್ಕದ ಟೇಬಲ್ ಮೇಲಿದ್ದ ಪೋನ್ ಪರದೆಯ ಮೇಲೆ ವಾಟ್ಸ್ಯಾಪ್ ಸಂದೇಶ ಬಂದ ಸೂಚನೆಯಿಂದಾಗಿ ಮೊಬೈಲ್ ಕೈಗೆತ್ತಿಕೊಂಡು ನೋಡತೊಡಗಿದ. ನಂತರ ಪ್ರತಿಕ್ರಿಯಿಸುತ್ತಾ.

‘ ಹ್ಹಹ್ಹಹಾ :), ಅದೆಲ್ಲಾ ಈಗ ಬೇಕಾ? ‘ ಎಂದು ರವಾನಿಸಿದ್ದ.

ಕ್ಷಣ ಮಾತ್ರದಲ್ಲಿ ಸುಮಾ ‘ I am just plain curious ‘ ಎಂದು ಕೀಲಿಸಿದ್ದಳು. ಹೀಗೆ ಶುರುವಾದ ಅವರ ಸಂದೇಶ ವಿನಿಮಯ ದೀರ್ಘಕಾಲದ ವರೆಗೆ ಸಾಗಿತ್ತು.

ಗಿರಿ: ‘ ಓಕೆ, you really wanna know ? ‘
ಸುಮಾ : ‘ ಹ್ಹಾಂ ‘
ಗಿರಿ : ‘ ಮೊದಲ ಬಾರಿ ಆದಾಗ ತುಂಬಾ ಅತ್ತಿದ್ದೆ, ಅಲ್ಲದೆ ಸ್ವಲ್ಪ ಖಿನ್ನನಾಗಿದ್ದೆ ಕೂಡ. ಆದರೆ ಎರಡನೆ ಸಲ ಹಾಗಾಗಲಿಲ್ಲ. I just let that phase pass by ‘
ಸುಮಾ : ‘ ತುಂಬಾ ಕಷ್ಟ ಆಗಿರಬೇಕಲ್ಲ ? ‘
ಗಿರಿ: ‘ ಹ್ಹಾಂ, ಮೊದಲ ಸಲ ಆಗಿತ್ತು. ಆದರೆ ಯಾವಾಗ ನಾನು ಖಿನ್ನನಾಗಿ ದಾರಿ ತೋಚದೆ ಕಾಲ ದೂಡಲು ಮಾನಸ ಗಂಗೋತ್ರಿ ಹೊಕ್ಕೇನೊ ಅಲ್ಲಿಂದ ನನಗೆ I am in control of my life ಅನ್ನಿಸ ತೊಡಗಿದೆ.
ಸುಮಾ : ‘ ರಿಯಲೀ? ಸಾಹಿತ್ಯಕ್ಕೆ ಅಷ್ಟೊಂದು ಶಕ್ತಿಯಿದೆಯಾ ?
ಗಿರಿ : ‘ ಪುಸ್ತಕ ಓದೊದಿಂದ್ರ ಏನೂ ಆಗೋಲ್ಲ. ಪುಸ್ತಕದೊಳಗಿನ ಸಂದೇಶ ಮಸ್ತಕದೊಳಗೆ ಬೇರೂರಿ ಮೊಳಕೆಯೊಡೆದಾಗ ಮಾತ್ರ ಈ ತರಹ ಅನ್ಸುತ್ತೆ. Good literature creates a sense of hope in humanity ‘
ಸುಮಾ : ‘ Hmmm Ok ‘
ಗಿರಿ : ‘ ಜೀವನದ ಕಡು ಕಷ್ಟಗಳನ್ನ ಸರಾಗವಾಗಿ ಸಾಗುಹಾಕಬಲ್ಲ ಹಾಯಿದೋಣಿ ‘ಸಾಹಿತ್ಯ ‘ ‘
ಸುಮಾ : ‘ವ್ಹಾವ್, thats wonderful ‘

ಇದಾದ ನಂತರ ಸ್ವಲ್ಪ ತಟಸ್ಥವಾಗಿದ್ದ ಚಾಟೀಕರಣ ಮತ್ತೆ ಪುನರಾರಂಭವಾಯಿತು.

ಸುಮಾ: ‘ ಹುಡ್ಗೀರು ನಿನ್ನ ನಿರಾಕರಿಸಿದರೆ ನಿಂಗೆನೊ ಅನ್ನಿಸಲ್ವ?
ಗಿರಿ: ‘ ನಂಗ್ಯಾಕೆ ಏನು ಅನ್ನಿಸ್ಬೇಕು ! ಅವರವರ ಜೊತೆಗಾರರನ್ನ ನಿರ್ಧರಿಸೊ ಅಧಿಕಾರ ಗಂಡಸರಿಗೆ ಎಷ್ಟಿದೆಯೋ ಅಷ್ಟೇ ಅಧಿಕಾರ ಅವರಿಗೂ ಇದೆ ಅನ್ಸುತ್ತೆ ‘
ಸುಮಾ: ‘ ನಿರಾಕರಿಸಿದರೆ ಕೆಲವರು ಖಿನ್ನರಗ್ತಾರಲ್ಲ, ತಮ್ಮಲ್ಲೇನೊ ಕೊರತೆಯಿದೆ ಅನ್ಕೊಂತಾರಲ್ಲ ?’
ಗಿರಿ : ‘ ಖಂಡಿತ ಅವರಲ್ಲಿ ಕೊರತೆ ಇರುತ್ತೆ. ಅದು ಆತ್ಮ ವಿಶ್ವಾಸದ ಕೊರತೆಯೇ ಹೊರತು ಬೇರಾವುದಲ್ಲ. ಈ ರೀತಿಯ ಕ್ಷುಲ್ಲಕ ಕಾರಣಗಳು ಜೀವನದ ಕೊನೆಯಾಗಬಾರದು. Life is much much bigger than what we all think off ‘
ಸುಮಾ : ‘ ಸೂಪರ್, ನಿಮ್ಮನ್ ನೋಡಿದ್ಮೇಲೆ ನನಗೆ ಸಾಹಿತ್ಯಕ್ಕಿರುವ ಶಕ್ತಿಯ ಅರಿವಾಗ್ತಾಯಿದೆ. ‘
ಗಿರಿ : ‘ ಗುಡ್ ಜೋಕ್, ನಾನೇನೊ ಅಲ್ಲ. ಸಾಹಿತ್ಯದಿಂದ ಬರೀ ಧೈರ್ಯವಾಗಿ ಬದುಕೊದನ್ನ ಮಾತ್ರ ಕಲ್ತಿದೀನಿ ನಾನು. ಅದರ ಶಕ್ತಿ ಇನ್ನೂ ಅಗಾಧ ‘
ಸುಮಾ : ‘ ನಿನ್ನ ಹಿನ್ನೆಲೆ ಹಾಗೆ ಈಗ ನೀನಿರುವ ನೆಲೆಯನ್ನ ಗಮನಿಸಿದ್ರೆ, I am sure that literature empowers people ‘
ಗಿರಿ : 🙂 🙂

ಸುಮಾಳ ಆ ಪ್ರತಿಕ್ರಿಯೆಗೆ ಪ್ರತಿಯಾಗಿ ಗಿರಿಧರ ಬರೀ ಎರಡು ಸ್ಮೈಲಿಗಳನ್ನಷ್ಟೆ ಕಳಿಸಲು ಶಕ್ತನಾಗಿದ್ದ. ಗಂಟೆ ಆಗಲೆ ಸುಮಾರು ಒಂಬತ್ತರ ಸನಿಹದಲ್ಲಿತ್ತು. ತಾಯಿ ರೇವತಿ ಸುಮಾಳನ್ನ ಕುರಿತು ‘ ಊಟಕ್ಕೆ ಬರಲ್ವೇನೆ ‘ ಎಂದು ಎಚ್ಚರಿಸಿದ್ದರು. ಇನ್ನು ಸ್ವಲ್ಪ ಹೊತ್ತು ಆಫೀಸಿನ ತಂತಮ್ಮ ಸಹೋದ್ಯೊಗಿಗಳ ಬಗ್ಗೆ ವಾಟ್ಸ್ಯಾಪ್ ನಲ್ಲಿ ಚಾಟಿ ಬೀಸಿದ ಇಬ್ಬರೂ ಊಟಕ್ಕೆ ಸಮಯವಾದ್ದರಿಂದ ಗುಡ್ ಬೈ ಹೇಳಿ ಮೊಬೈಲ್ ಗೆ ವಿಶ್ರಾಂತಿಯನ್ನಿತ್ತರು.

***

ಕಾಲ ಸರಿದಂತೆ ಹೇಗೆ ನಮ್ಮ ಫೋನ್ ಕಾಲ್ ಗಳ ಸಂಖ್ಯೆ ಕಡಿಮೆಯಾಗಿ ವಾಟ್ಸ್ಯಾಪ್ ಆವರಿಸಿಕೊಂಡಿತೊ ಹಾಗೆಯೆ ದಿನ ಕಳೆದಂತೆ ಸುಮಾ ಗಿರಿಧರನ ಮೋಡಿಗೆ ಒಳಗಾಗ ತೊಡಗಿದ್ದಳು. ಆದರೆ ಗಿರಿಧರ ಆಗಲೇ ಎರಡು ಸಲ ಪೆಟ್ಟು ತಿಂದವನು ಹೆಣ್ಮಕ್ಕಳ ವಿಷಯದಲ್ಲಿ ತುಸು ನಿಧಾನವಾಗಿ ಮುಂದುವರೆಯಲು ಅದಾಗಲೆ ನಿರ್ಧರಿಸಿಯಾಗಿತ್ತು. ಆದ್ದರಿಂದಲೆ ಅವನು ಸುಮಾಳೊಂದಿಗೆ ಸಲುಗೆಯಿಂದಿದ್ದರು ಸಂಯಮದಿಂದಿದ್ದ.

ದಿನಂಪ್ರತಿ ಇಬ್ಬರೂ ವಾಟ್ಸ್ಯಾಪಿನಲ್ಲಿ ಚಾಟಿಸುತ್ತಿದ್ದರು. ಸುಮಾ ಇಲ್ಲ ಸಲ್ಲದ ವಿಷಯಗಳ ಬಗ್ಗೆ ಗಿರಿಧರನ ಅಭಿಪ್ರಾಯ ಕೇಳುತ್ತಿದ್ದಳು. ಅದಕ್ಕೇನೂ ಅಂದು ಕೊಳ್ಳದ ಗಿರಿ ಮಾಮೂಲಿನಂತೆ ಪ್ರತಿಕ್ರಿಯಿಸುತ್ತಿದ್ದ. ಹೀಗೆ ಒಂದು ಸಾರಿ ಆಕೆ, ‘ ಗಿರಿ, ನಿನಗಿಷ್ಟವಾದ ಹುಡುಗಿ ಸಿಗದೆ ಇದ್ದಾಗ ಏನ್ ಮಾಡ್ತಿಯಾ? ಮನೆಯವರ ಒತ್ತಾಯದಂತೆ ಮದುವೆಯಾಗ್ತಿಯಾ? ‘ ಅಂತ ಭೀಡೆಯಿರದೆ ಕೇಳಿದ್ದಳು. ‘ ನಿನಗ್ಯಾಕೆ ಮಾರಯ್ತಿ ನನ್ನ ಮದುವೆ ವಿಚಾರ ‘ ಎಂಬ ಹಾರಿಕೆಯ ಉತ್ತರ ಕೊಟ್ಟಿದ್ದ. ಆದರೂ ಹಠಬಿಡದೆ ಅವಳು ಒತ್ತಾಯಿಸಿದಾಗ ‘ ನಮ್ಮ ಸಮಾಜ ಆ ರೀತಿ ಕಾಯೋರಿಗೆ ಯಾರೂ ಸಿಗದೆ ಇರೊ ಹಾಗೆ ದುಸ್ಥರ ಪರಿಸ್ಥಿತಿ ನಿರ್ಮಿಸಿ ಬಿಟ್ಟಿದೆ. western country ಲಿದ್ರೆ ಕಾಯ್ತಿದ್ನೇನೊ, ಆದರೆ ಇಲ್ಲಿಯ ವ್ಯವಸ್ಥೆ ಅದಕ್ಕೆ ಆಸ್ಪದ ಕೊಡಲ್ಲ. ಹಾಗೊಂದು ವೇಳೆ ಕಾಯ್ತೆವೆ ಅಂತಿಟ್ಕೊ, ಇಲ್ಲಿಯ ಜನ ಅದಕ್ಕೂ ಸುಮ್ಮನಿರಲ್ಲ. ಅವನಿಗೇನೊ ದೋಷ ಇರಬೇಕು ಅದಕ್ಕೆ ಇನ್ನೂ ಮದುವೆಯಾಗಿಲ್ಲ ಅಂತ ಗೂಬೆ ಕೂರ್ಸ್ತಾರೆ. ಒಟ್ನಲ್ಲಿ ನಮ್ಮನ್ನ ನಾವಾಗಿ ಇರೊಕೆ ಬಿಡಲ್ಲ. ಅಲ್ಲದೆ ಕಾಯ್ತಾ ಕುತರೆ ನಮ್ಮ ದೇಹದ ಸಹಜ ಬೇಡಿಕೆಗಳಿಗೆ ನಾವೇ ಕಡಿವಾಣ ಹಾಕ್ದಂಗ ಆಗ್ತದ. ಎಲ್ಲ ಸಂಬಂಧಗಳಲ್ಲೂ ಅಲ್ಪ ಸ್ವಲ್ಪ ವ್ಯತ್ಯಯವಿದ್ದದ್ದೆ. ಯಾವುದೆ ಮದುವೆಯಾದ್ರು, ಯಾರನ್ನೆ ಮದುವೆಯಾದ್ರು ಸರಿಯೆ, ಅದರಲ್ಲಿ ಎಡವಿ ಬಿದ್ದಾಗ ಸಾವರಿಸಿಕೊಂಡು ಮುನ್ನುಗ್ಗುವ ಛಾತಿ ಇರಬೇಕಷ್ಟೆ’ ಎಂದು ಮಾರುತ್ತರಿಸಿದ್ದ.ಗಿರಿಯ ಈ ರೀತಿಯ ಪ್ಲೇಕ್ಷಿಬಲ್ ಎನ್ನಬಹುದಾದ ಕೆಲವು ಗುಣಗಳು ಸುಮಾಗೆ ಅಪ್ಯಾಯಮಾನವೆನಿಸಿದ್ದವು. ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಗಿರಿಯನ್ನ ನೆನೆದರೆ ಅವಳಿಗೆ ಒಂಥರಾ ಹುರುಪು ಬರುತ್ತಿತ್ತು.

ವಾಟ್ಸ್ಯಾಪಿನಾಚೆಯು ಸುಮಾ ಗಿರಿಯನ್ನ ಆಫೀಸಿನಲ್ಲಿ ಸುಖಾಸುಮ್ಮನೆ ಬಂದು ಭೇಟಿಯಾಗ ತೊಡಗಿದಳು. ಕಾಫೀಗೆಂದು ಆಗಾಗ ಒತ್ತಾಯಿಸುತ್ತಿದ್ದಳು. ಎಂದೂ ತಾನೆಗೇ ಹೋಗಿ ಯಾರನ್ನೂ ಕೆಣಕದ ಗಿರಿ ಬೇರೊಬ್ಬರ ಒತ್ತಾಯಕ್ಕೆ ಮಣಿಯದಿರುತ್ತಿರಲಿಲ್ಲ. ಸುಮಾಳೊಂದಿಗಿನ ಕಾಫೀ ಭೇಟಿ ಇತ್ತೀಚೆಗೆ ಅತಿಯೆನಿಸಿದರೂ ಅವಳೊಡನೆ ಅದನ್ನ ಚರ್ಚಿಸುತ್ತಿರಲಿಲ್ಲ. ಸುಮಾಳೇ ಈಗೀಗ ಗಿರಿಯೊಂದಿಗಿನ ವಾಟ್ಸ್ಯಾಪ್ ಮಾತುಕತೆಗೆ ಕಡಿವಾಣ ಹಾಕಿ ಆಫೀಸಿನ ಕಾಫೀ ಭೇಟಿಗೆ ಒತ್ತು ಕೊಟ್ಟಿದ್ದಳು. ಅವಳಾಗಲೆ ನಿರ್ಧರಿಸಿಯಾಗಿತ್ತು ಗಿರಿ ಎಂದಿದ್ದರೂ ತನ್ನವನೆಂದು. ಅದರಿಂದಲೆ ಅವನನ್ನ ವಾಟ್ಸ್ಯಾಪ್ ವಶೀಕರಣದಿಂದ ವಿಮುಕ್ತಿಗೊಳಿಸಿ ಹೊರ ಜಗತ್ತಿನೊಂದಿಗಿನ ಒಡನಾಟಕ್ಕೆ ನಾಂದಿಹಾಡಿದ್ದಳು.

***

ಒಂದು ವಾರಾಂತ್ಯ ಹೇಳದೆ ಕೇಳದೆ ಗಿರಿಯ ಮನೆಗೆ ಬಂದ ಸುಮಾ ಅವನಿಗೆ ಅಚ್ಚರಿ ಮೂಡಿಸಿದ್ದಳು. ‘ ಇದೇನಿದು ಹೇಳ್ದೆ ಕೇಳ್ದೆ, ಹೀಗೆ ? ‘ ಎಂದಿದ್ದವನಿಗೆ ‘ನಿನ್ನ ಭೇಟಿಯಾಗಲು ಇನ್ನೇನ್ ಅಪಾಂಟ್ಮೆಂಟ್ ತಗೊಂಡು ಬರ್ಬೇಕಿತ್ತಾ? ‘ ಎಂಬ ಮರುಪ್ರಶ್ನೆಯೆತ್ತಿದ್ದಳು. ‘ ಹಾಗೆನಿಲ್ಲ, ಆದರೂ… ‘ ಎನ್ನುತ್ತಾ ಮಾತು ತುಂಡರಿಸಿದ್ದ ಗಿರಿಧರ. ಅಲ್ಲಿಯೆ ಟೇಬಲ್ ಮೇಲೆ ಹರಡಿದ್ದ ತಾನು ಬರೆದ ಕೆಲವು ಪದ್ಯಗಳ ಹಾಳೆಗಳನ್ನ ಸುಮಾ ಬಂದೊಡನೆ ಎತ್ತಿಡಲು ಶುರುಮಾಡಿದ್ದ. ಇದನ್ನೆ ಗಮನಿಸುತ್ತಿದ್ದ ಆಕೆ, ‘ ಯಾಕೊ ಗಿರಿ, ನೀ ಬರೆದ ಪದ್ಯಗಳನ್ನ ನಂಗೆ ತೋರಿಸ್ಬಾರ್ದು ಅಂತ ಇದೆಯಾ? ‘ ಎಂದು ಕೇಳಿದ್ದಳು. ‘ ಹಾಗೇನೂ ಇಲ್ಲ ‘ ಎನ್ನುತ್ತಲೆ ಗಿರಿ ಅದಾಗಲೆ ಕೆಲವನ್ನ ಪಕ್ಕದಲ್ಲೆ ಇದ್ದ ಕಪಾಟಿಗೆ ಹಾಕಿದ್ದ. ಬಡಾಯಿ ಕೊಚ್ಚಿಕೊಳ್ಳದ ಗಿರಿಯ ಸ್ವಭಾವವನ್ನ ಅರಿತಿದ್ದ ಸುಮಾ ತಾನೆ ಮುಂದಾಗಿ ಅವೆಲ್ಲವನ್ನ ಕಿತ್ತುಕೊಂಡು ಒಂದೊಂದಾಗಿ ಓದ ತೊಡಗಿದಳು.

ಒಂದು ವಾರಾಂತ್ಯ ಹೇಳದೆ ಕೇಳದೆ ಗಿರಿಯ ಮನೆಗೆ ಬಂದ ಸುಮಾ ಅವನಿಗೆ ಅಚ್ಚರಿ ಮೂಡಿಸಿದ್ದಳು. ‘ ಇದೇನಿದು ಹೇಳ್ದೆ ಕೇಳ್ದೆ, ಹೀಗೆ ? ‘ ಎಂದಿದ್ದವನಿಗೆ ‘ನಿನ್ನ ಭೇಟಿಯಾಗಲು ಇನ್ನೇನ್ ಅಪಾಂಟ್ಮೆಂಟ್ ತಗೊಂಡು ಬರ್ಬೇಕಿತ್ತಾ? ‘ ಎಂಬ ಮರುಪ್ರಶ್ನೆಯೆತ್ತಿದ್ದಳು. ‘ ಹಾಗೆನಿಲ್ಲ, ಆದರೂ… ‘ ಎನ್ನುತ್ತಾ ಮಾತು ತುಂಡರಿಸಿದ್ದ ಗಿರಿಧರ. ಅಲ್ಲಿಯೆ ಟೇಬಲ್ ಮೇಲೆ ಹರಡಿದ್ದ ತಾನು ಬರೆದ ಕೆಲವು ಪದ್ಯಗಳ ಹಾಳೆಗಳನ್ನ ಸುಮಾ ಬಂದೊಡನೆ ಎತ್ತಿಡಲು ಶುರುಮಾಡಿದ್ದ. ಇದನ್ನೆ ಗಮನಿಸುತ್ತಿದ್ದ ಆಕೆ, ‘ ಯಾಕೊ ಗಿರಿ, ನೀ ಬರೆದ ಪದ್ಯಗಳನ್ನ ನಂಗೆ ತೋರಿಸ್ಬಾರ್ದು ಅಂತ ಇದೆಯಾ? ‘ ಎಂದು ಕೇಳಿದ್ದಳು. ‘ ಹಾಗೇನೂ ಇಲ್ಲ ‘ ಎನ್ನುತ್ತಲೆ ಗಿರಿ ಅದಾಗಲೆ ಕೆಲವನ್ನ ಪಕ್ಕದಲ್ಲೆ ಇದ್ದ ಕಪಾಟಿಗೆ ಹಾಕಿದ್ದ. ಬಡಾಯಿ ಕೊಚ್ಚಿಕೊಳ್ಳದ ಗಿರಿಯ ಸ್ವಭಾವವನ್ನ ಅರಿತಿದ್ದ ಸುಮಾ ತಾನೆ ಮುಂದಾಗಿ ಅವೆಲ್ಲವನ್ನ ಕಿತ್ತುಕೊಂಡು ಒಂದೊಂದಾಗಿ ಓದ ತೊಡಗಿದಳು.

ಸಿಕ್ಕಷ್ಟು ಓದಿ ಮುಗಿಸಿದ ಸುಮಾ, ‘ ಅಲ್ಲೊ ಗಿರಿ ಇಷ್ಟು ಚೆನ್ನಾಗಿ ಬರೀತಿಯಾ ನೀನ್ಯಾಕೆ ಒಂದು ಕವನ ಸಂಕಲನ ಹೊರತರಬಾರ್ದು ‘ ಎಂದಳು. ‘ ಕವನಸಂಕಲನ ಹೊರತರುವಷ್ಟು ಒಳ್ಳೆಯ ಕವಿತೆಗಳೇನೂ ನನ್ನವೆನಲ್ಲ’ ಮತ್ತದೆ ತನ್ನ ಹಳೆಯ ರಾಗಕ್ಕೆ ಜೋತು ಬಿದ್ದಿದ್ದ ಗಿರಿಧರ. ‘ ಬರೆಯೋದು ನೀನಾದರೂ, ಅವು ಒಳ್ಳೇಯವೊ ಕೆಟ್ಟವೊ ಎಂದು ಓದುಗರು ನಿರ್ಧರಿಸ್ತಾರೆ. ಅವರಿಗೆ ಒಂದಾದರು ಅವಕಾಶ ಕೊಟ್ಟು ನೋಡು. ಪುಸ್ತಕ ರೂಪದಲ್ಲಾಗದಿದ್ದರೂ ಈಗೀನ ಬ್ಲಾಗ್ ಗಳ ಮೂಲಕವಾದರು ಹಂಚಿಕೊಳ್ಳಬಹುದಲ್ಲ ‘ ಸಲಹೆಯನ್ನಿತ್ತಿದ್ದಳು ಸುಮಾ. ‘ ಆಯ್ತು, ನೋಡ್ತಿನಿ ‘ ಎಂದಿದ್ದ ಗಿರಿಗೆ ಅವಳು ಹೇಳಿದ್ದು ಒಂದರ್ಥದಲ್ಲಿ ಸರಿಯೆನ್ನಿಸತೊಡಗಿತು. ‘ ನೋಡೊದೇನೂ ಇಲ್ಲ, ನೀನೊಂದು ಬ್ಲಾಗ್ ಶುರುಮಾಡ್ತಿಯಾ, ಹಾಗೆ ನೀನು ಬ್ಲಾಗಿಸೊ ಪ್ರತಿಯೊಂದು ಲೇಖನಗಳಿಗೆ ಅಲ್ಲದೆ ಅಂತರ್ಜಾಲದಲ್ಲಿ ಹಂಚುವ ಯಾವುದೆ ಪೋಸ್ಟ್ ಗಳಿಗೆ ‘ಪ್ರಥಮ’ ಪ್ರತಿಸ್ಪಂದನೆಯ ಅವಕಾಶವನ್ನ ನನಗೇ ಕೊಡ್ತಿಯಾ ‘ ಎನ್ನುತ್ತಾ ಸುಮಾ ಗಿರಿಧರನ ಪಕ್ಕದಲ್ಲಿ ಕುಳಿತಳು. ಅವಳ ಈ ನಡೆಯಿಂದ ಸ್ವಲ್ಪ ವಿಚಲಿತನಾದ ಅವನು ಅವಳ ಮುಖವನ್ನೇ ದಿಟ್ಟಿಸುತ್ತಾ ‘ ಅದು ಹೇಗೆ ? ‘ ಎಂದು ತನಗರಿವಿಲ್ಲದೆಯೆ ಕೇಳಿದ್ದ. ಅದಕ್ಕವಳು, ಮೆಲ್ಲನೆ ಅವನ ಬದಿಗೊರಗಿ ‘ ಕಿವಿಯ ನೇರಕ್ಕೆ ಬಾಗಿ ಉದ್ರೇಕಗೊಳಿಸುವ ಹಾಗೆ ಮುತ್ತಿಕ್ಕಿ… I am in love with you ‘ ಎಂದು ಹೇಳಿದ್ದಳು.

***

ಸಂತೋಷ್ ಮೂಲಿಮನಿ


ಲೇಖಕರ ಪರಿಚಯ:
ಸಂತೋಷ್ ಮೂಲಿಮನಿ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹೊಳೆಆನ್ವೇರಿಯವರು. ೩ ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ ಈಗ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಹಾಯಕ ಪ್ರಭಂದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x