Facebook

ಚಿಕ್ಕ ಪುಟ್ಟ ಪದ್ಯಗಳು: ಅಶೋಕ ಶೆಟ್ಟರ್

ಕನ್ನಡದ ಬರಹಗಳನ್ನು ಹಂಚಿ ಹರಡಿ

 

೧. ಚರಿತ್ರೆಯ ತತ್ವವ ತಿಳಿಯ ಹೊರಟು

ಜಗದ ಜಟಿಲ ದ್ವಂದ್ವಗಳ ಗೋಜಲಿನಲ್ಲಿ ಸಿಗೆಬಿದ್ದ ತತ್ವಜ್ಞಾನಿ

ಹಾಲುಗಲ್ಲದ ಮೊಮ್ಮಗಳ ನಗೆಯ ಮಡುವಿನಲ್ಲಿ ಸುಳಿತಿರುಗಿ

ಮುಗುಳ್ನಕ್ಕ

 

೨. ಇಂದಿನ ನಡುಹಗಲ ಕಾಡಿನ ಮೌನ

ಮನುಕುಲದ ಶೈಶವದ ಸಕಲ ತೊಳಲಾಟ

ಕಳವಳ ದಿಗ್ಭ್ರಮೆ ನಲಿವು

ಹಸಿ ಹಸಿ ಕಾಮ

ಎಲ್ಲ ಮೇಳೈಸಿದ ಆದಿಮ ಸಂಗೀತ

 

೩. ಶಬ್ದಗಳ ಭಾಷೆ,

ಹೆಜ್ಜೆ – ಗೆಜ್ಜೆಗಳ ಭಾಷೆ

ಲಯಗಳ, ರೇಖೆ ಬಣ್ಣಗಳ ಭಾಷೆ

ಎಲ್ಲದರ ಹಂಗ ಹರಕೊಂಡು

ಎರಡು ಜೋಡಿ ಕಣ್ಣುಗಳು ತಮ್ಮ ತಮ್ಮೊಳಗೆ

ಮಾತಾಡಿಕೊಂಡು ನಕ್ಕವು

 

೪. ತುಡುಗೀಲೇ ಬರುವ ಪ್ರೇಮಿಯ ಹಾಗೆ

ಇಷ್ಟಿಷ್ಟೇ ಹೊರಬಂದ ಚಂದ್ರ

ಮೋಡಗಳ ಮರೆಯಿಂದ

ತನ್ನ ಪ್ರೇಯಸಿಗೆ ಹುಡುಕಿದರೆ

ಬಾರೋ ಸುಕುಮಾರ ಎಂದು

ಚಾಚಿದ ಸಾವಿರಾರು ಕೈಗಳು

ಭೂಮಂಡಲದಿಂದ

 

೫. ಗೌರವಿಸಬಹುದಾದವರು ಯಾರೆಂದು ಸುತ್ತ ನೋಡಿದರೆ

ಅವರು ಅಳಿವಿನಂಚಿನಲ್ಲಿರುವ ಸಂತತಿ

ಯಂತೆ ತೋರತೊಡಗಿದ್ದ ನೋಡಿ

ಆ ದು:ಖ ಹಂಚಿಕೊಳ್ಳಬೇಕೆಂದರೆ

ಅದ ಕೇಳುವವರೂ ವಿರಳವಾಗಿದ್ದ ನೋಡಿ

ನಿಶಬ್ದವಾಗಿ ಅತ್ತರೆ ಆ ಅಳುವೂ

ಆಳದ್ದಲ್ಲ ಎನ್ನಿಸತೊಡಗಿದಾಗ

ಉಂಟಾಗುವದು ಗಾಬರಿಯೋ ನಾಚಿಕೆಯೋ ಗೊತ್ತಾಗದೇ… …

ಪ್ರ್ರಾಜ್ಞರೇ ನೀವು ಹೇಳಿ

 

೬. ಕುಳಿತು ಹಟಕ್ಕೆ ಬಿದ್ದಂತೆ ಎಂದೂ ಕೆತ್ತಲಿಲ್ಲ

ಹಂಗಂತ ನೀ ನನ್ನ ಕೈ ಬಿಟ್ಟಿರಲಿಲ್ಲ.

ಬುಗ್ಗೆ ಒಸರಿದಂತೆ ಎಲ್ಲೋ ಒಂದು ಜಿನುಗು, ಒಂದು ಕವಿತೆ

ಸಭೆಯೊಂದರಲ್ಲಿ ಆಮೂರ್ ಹೇಳಿದ್ದರು

"ಕವಿಗಳು ಕಾರಿನಲ್ಲಿ ತಿರುಗತೊಡಗಿದ ಮೇಲೆ ಕವಿತೆ ಎಲ್ಲಿಂದ ಹುಟ್ಟೀತು?"

ಇದು ನಿಜವಿರಬಹುದೆ? ಎಂದು ನಾನು ಭಯಗೊಳ್ಳುವ ಮೊದಲು

ಇದ ಸುಳ್ಳಾಗಿಸಬಾರೇ ನನ್ನ ಮಾಯಾವಿನಿ..!

 

೭. ರಾತ್ರಿ ಇಡೀ

ಸುಷುಪ್ತಿಯ

ಗುಪ್ತ ಪದರುಗಳಲ್ಲಿ

ನಾಚಿ,ಹೆದರಿ,ಸೋತು ಕುಳಿತ ಹಳವಂಡಗಳೆಲ್ಲ ಹೆಮ್ಮಾರಿಗಳಾಗಿದ್ದವು

ಬೆಳ್ಳಂಬೆಳಗ್ಗೆ

ನನ್ನ ಮಲಗುವ ಕೋಣೆಯ ಕಿಟಕಿಯಿಂದ ಹೊರಗೆ

ಥರಾವರಿ ಚಿಲಿಪಿಲಿಯಿಂದಲೇ ಅವುಗಳ

ಹೆಕ್ಕಿ ಹಾರಿದ ಹಕ್ಕಿ ಪಕ್ಷಿಗಳನ್ನು

ದೇವರೇ ಸುಖದಿಂದಿಟ್ಟಿರು

 

೮. ಸನ್ಯಾಸದ ಕುರಿತ

ಸಂಸಾರಸ್ಥರ ನಿರಾಸಕ್ತಿ..,

ಸೋಜಿಗ ಪಟ್ಟು

ಇನ್ನೂ ಕೆದರಿ ನೋಡಿದರೆ

ಸಂಸಾರಸ್ಥರ ಕುರಿತ ಸನ್ಯಾಸಿಗಳ ಮರುಕ..,

ಮಧ್ಯೆ ಎಲ್ಲೋ

ರಂಭೆ ಊರ್ವಶಿ ಮೇನಕೆಯರ ನರ್ತನಕ್ಕೆ

ಸುಖವಾಗಿ ಭಂಗವಾಗಬಯಸುವ ತಪಸ್ಸು 

ಮುಂದೆ ಮತ್ತೆ ಕೆದರ ಬೇಕೆನ್ನಿಸದು.

 

೯. ಆಗಸ ಇಳೆಯೊಂದಿಗೆ

ಅನುನಯದಿಂದ ಮಾತಿಗಿಳಿದಾಗೆಲ್ಲ

ಸುರಿವ ಈ ಮಳೆಗೆ 

ನನ್ನಲ್ಲೊಬ್ಬ ಪ್ರೇಮಿ ಹುಟ್ಟುತ್ತಾನೆ

ಒಬ್ಬ ಬಾಲಕ ನಿಡಿದಾಗಿ ಕೈ ಚಾಚಿ

ತನ್ನ ಮೈ ಸುತ್ತ ಸುತ್ತುತ್ತಾನೆ

 

೧೦. ಅಳುವಿನ ಕುರಿತು

ನೂರು ವ್ಯಾಖ್ಯಾನ ಕೇಳಿ

ಅಳುವೆಂದರೆ ದು:ಖ

ಅಳಲು ಸಂಕಟ ನೋವು ಎಂದು ನಂಬಿಕೊಂಡವ 

ತನ್ನ ಪಾಡಿಗೆ ತಾನು,

ಅರೆಬೆಳಕಿನ ಸಂಜೆ

ನದಿ ಭೋರ್ಗರೆದಂಥ ಅಳು

ಅತ್ತು ಹಗುರಾಗುವ ಸ್ಥಿತಿ 

ಅಳುವ ಸುಖವ ನೀವೇನ ಬಲ್ಲಿರಿ

ಎಂದನೆ? 

ಹುಚ್ಚ ಎನ್ನದಿರಿ

ಜಾಣರೇ

 

****** 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

3 Responses to “ಚಿಕ್ಕ ಪುಟ್ಟ ಪದ್ಯಗಳು: ಅಶೋಕ ಶೆಟ್ಟರ್”

  1. ಚೆನ್ನಾಗಿದೆ ಅಶೋಕ್ ಸರ್ ..

  2. Manju says:

    ಸುಪೆರ್ ಸರ್…

  3. ಹೃದಯಶಿವ says:

    ಇಷ್ಟವಾದವು.

Leave a Reply