ಸಿದ್ಧಾಂತಗಳು ಮರಿಚೀಕೆಯಾದಾಗ…: ಡಾ. ಮಲ್ಲಿನಾಥ ಎಸ್. ತಳವಾರ

‘ಅಕ್ಷರಗಳಿಂದ ಏನೂ ಆಗುವುದಿಲ್ಲ’ ಎಂಬ ಸಿನಿಕತನದ ಜೊತೆಗೆ ‘ಅಕ್ಷರಗಳಿಂದ ಏನೆಲ್ಲಾ ಆಗಬಹುದು’ ಎಂಬ ಸಕರಾತ್ಮಕ ಚಿಂತನೆಯು ವಾಗ್ದೇವಿಯ ಮಡಿಲಲ್ಲಿ ಹಚ್ಚ ಹಸಿರಾಗಿದೆ. ಇದು ನಿತ್ಯ ಹರಿದ್ವರ್ಣವಾಗಬೇಕಾದರೆ ಸಾಹಿತ್ಯವು ಮನುಷ್ಯನ ಅಂತರಂಗಕ್ಕೆ, ಅವನ ಅಂತರ್ಲೋಕಕ್ಕೆ ಸಂಬಂಧಪಟ್ಪಿರಬೇಕಾಗುತ್ತದೆ. ಇದು ಕೇವಲ ಉದರ ನಿಮಿತ್ತವಾಗಿ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಈ ಕಾರಣಕ್ಕಾಗಿಯೇ ‘ಸಾಹಿತ್ಯ ಅನಂತಕಾಲಕ್ಕೆ ಸಂಬಂಧಪಟ್ಟಿದ್ದು, ತತ್ಕಾಲಕಲ್ಲ’ ಎನ್ನಲಾಗುತ್ತದೆ. ಇದಕ್ಕೆ ಬೇಕಾಗಿರುವುದು ಮನುಷ್ಯತ್ವ. ಮನುಷ್ಯತ್ವವೇ ಈ ಜಗತ್ತಿನ ಅತ್ಯುತ್ತಮವಾದ ತಾತ್ವಿಕ ತಿರುಳು. ಇಲ್ಲಿ ತತ್ ಕ್ಷಣ ಫಲದ ಪ್ರಲೋಭನೆ ಸರಿಯಲ್ಲ. ಬರಹ ಮತ್ತು ಸಹೃದಯಿ ಮೀನು ಮತ್ತು ನೀರಿನಂತೆ ಇರಬೇಕು. ಇದು ಸಾಧ್ಯವಾಗಬೇಕಾದರೆ ಪಾಶ್ಚಾತ್ಯ ಕಾವ್ಯ ಮೀಮಾಂಸಕರಾದ ಎಡ್ವರ್ಡ್ ಬುಲ್ಲೊರವರ ‘ಮಾನಸಿಕ ದೂರ’ ಎಂಬ ಸಿದ್ಧಾಂತವನ್ನು ಕವಿ ಮತ್ತು ಸಹೃದಯ ಓದುಗರಿರ್ವರೂ ಅನುಸರಿಸಬೇಕಾಗುತ್ತದೆ.

ನಾವು ಇಂದು ಉಸಿರಾಡುತ್ತಿರುವ ಕಾಲ ಸಂಕ್ರಮಣ ಕಾಲ. ಹಳೆಯ ಕಟ್ಟುಗಳೆಲ್ಲ ಕಳಚಿ ಬೀಳುತ್ತ, ಹೊಸ ವಿಲಕ್ಷಣ ಕಟ್ಟುಗಳು ದಿನಕ್ಕೊಂದರಂತೆ ಉದಯಿಸುತ್ತಿರುವ ಕಾಲ. ದುರಾಸೆ, ಭ್ರಷ್ಟಾಚಾರ, ಅಂತರಂಗ ಮೌಲ್ಯಗಳ ನಿರಸನ.. ಇವುಗಳನ್ನು ನಾವು ಅನುದಿನವೂ ಅನುಭವಿಸುತಿದ್ದೇವೆ! ‘ಕೈ ಕೆಸರಾಗದೆ ಬಾಯಿ ಮೊಸರಾಗಬೇಕು’ ಎನ್ನುವ ತತ್ ಕ್ಷಣ ಫಲಾಪೇಕ್ಷೆಯನ್ನು ರಾಜಕೀಯದಿಂದ ಕಲಿಯುತ್ತ ಬಂದಿದ್ದೇವೆ. ಕಾರಣ, ರಾಜಕೀಯಕ್ಕಿರುವ ಸಾರ್ವಭೌಮತ್ವ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾಹಿತಿಗಳ ಮೇಲೆ ಅನುಪಮವಾದ ಜವಾಬ್ದಾರಿಯಿದೆ. ಸಾಮಾನ್ಯ ಜನರೂ ಸಹ ಸಾಹಿತಿಗಳಿಂದ ಮಾರ್ಗದರ್ಶನ ಬಯಸುತಿರುತ್ತಾರೆ. ಪರಂಪರಾಗತವಾಗಿ ಬಂದಿರುವ ಗುರುಭಾವನೆ ಇನ್ನೂ ಜೀವಂತವಿದೆ. ಈ ಹಿನ್ನೆಲೆಯಲ್ಲಿ ಕು. ಸ. ಮಧುಸೂದನ ರಂಗೇನಹಳ್ಳಿಯವರ “ ಸಿದ್ಧಾಂತಗಳ ಹೇಗೆ ಕೊಲ್ಲುವೆ…?” ಎಂಬ ಕವನ ಸಂಕಲನ ಮುನ್ನೆಲೆಗೆ ಬರುತ್ತದೆ.

ಪರಿಚಯದ ಬೆಸುಗೆಯನ್ನು ಅಕ್ಷರ ಲೋಕವು ತನ್ನ ಪದಗಳ ಲಾಲಿತ್ಯದಲ್ಲಿ ತುಂಬಾ ಪ್ರೀತಿಯಿಂದ ಹಿಡಿದಿಟ್ಟುಕೊಂಡು ಬಂದಿದೆ. ಇದಕ್ಕೊಂದು ಉತ್ತಮ ನಿದರ್ಶನವೆಂದರೆ ಸಂಗಾತಿ ವೆಬ್ ಪತ್ರಿಕೆಯ ಸಂಪಾದಕರಾದ ಮಧುಸೂದನ ಅವರ ಈ ಹೊತ್ತಿಗೆ. ಈ ಕಾವ್ಯದೊಡಲು ನನಗೆ ತಲುಪಿದ್ದು ಸ್ನೇಹದ ಅಂಚೆಯಲ್ಲಿ…!! ಈ ಕವನಸಂಕಲನವು ಐವತ್ತು ಬೌದ್ಧಿಕ ಕ್ಷಿತಿಜ ವಿಸ್ತರಿಸುವ ಕವಿತೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಬುದ್ಧಿಯ ಪ್ರಾಧಾನ್ಯತೆ, ವ್ಯಂಗ್ಯ, ತೀಕ್ಷ್ಣ ಸಂವೇದನೆ, ಹುಡುಕಾಟ, ಭ್ರಮನಿರಸನ, ಸಾಮಾಜಿಕ ವ್ಯವಸ್ಥೆ, ರಾಜಕೀಯ ಜಿಜ್ಞಾಸೆ, ಮೌಲ್ಯಗಳ ಕುಸಿತ, ಸಿದ್ಧಾಂತಗಳ ಪಲ್ಲಟ, ಅಶಾಂತಿ, ಅರಾಜಕತೆ, ಸ್ತ್ರೀ ಸಂವೇದನೆ…. ಕವಿಯ ಎಡಬಿಡಂಗಿತನ ಎಲ್ಲವೂ ಅನಾವರಣಗೊಂಡಿವೆ.

ಕಲೆ… ಮೂರ್ತ, ಅಮೂರ್ತದ ತೊಳಲಾಟದಲ್ಲಿ ಬಡವಾಗುತಿದೆ. ಹೊಟ್ಟೆ ತುಂಬಿದವರಿಗೆ ಅದು ‘ಕಲೆಗಾಗಿ ಕಲೆ’ಯಾದರೆ, ಹಸಿದವರಿಗೆ ಅದು ‘ಸಮಾಜದ ಬದಲಾವಣೆಗಾಗಿ ಕಲೆ’. ಬುದ್ಧಿವಂತನಾದ ಮಾನವ ಕಲೆಯನ್ನು ತನಗೆ ಹೇಗೆ ಬೇಕೋ ಹಾಗೆ ಅರ್ಥೈಸಿಕೊಳ್ಳುವ, ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ. ಕವಿಗಳಿಗೆ ಕಾವ್ಯ, ಸಮಾಜ ಮತ್ತು ಓದುಗ ತುಂಬಾ ಕಾಡಿದಂತಿದೆ. ಇದನ್ನು ಹಲವು ಕವಿತೆಗಳಲ್ಲಿ ಚರ್ಚಿಸಿದ್ದಾರೆ.

“ಕವಿತೆಯೊಂದು ಕಟ್ಟುವ ನೆಪದಲಿ
ಶಬ್ಧಗಳ ಮಾರಣಹೋಮ
ಕವಿಯ ಸಮಾಧಿಯ ಮೇಲೆ
ಅಪರಿಚಿತ ಓದುಗನ ಹೂಗುಚ್ಛ”

ಈ ಮೇಲಿನ ಸಾಲುಗಳು ಕವಿ, ಓದುಗರ ಕುರಿತು ಚಿಂತನೆಗೆ ಹಚ್ಚುತ್ತವೆ. ಪ್ರತಿ ಶಬ್ಧಕ್ಕೂ ತನ್ನದೇ ಆದ ವಿಶಿಷ್ಟ ಅರ್ಥವಿರುತ್ತದೆ. ಆದರೆ ಅದನ್ನು ಅರಿಯಲೂ ಪ್ರಯತ್ನಿಸದೆ ಕವಿಯಾಗಬೇಕೆಂಬ ಮಹದಾಸೆಯಲ್ಲಿ ಶಬ್ಧಗಳ ಸಮಾಧಿ ಮೇಲೆ ಹೂವನ್ನು ನೆಡಲು ಮುಂದಾಗುತ್ತಿರುವುದನ್ನು ಇಲ್ಲಿ ಗುರುತಿಸಲಾಗಿದೆ. ಕವಿಗೆ ಸಾಮಾಜಿಕ ಕಳಕಳಿ, ಬದ್ಧತೆ, ಸೂಕ್ಷ್ಮ ಸಂವೇದನೆ, ಅಧ್ಯಯನ… ಎಲ್ಲವೂ ಇರಬೇಕು ಎಂಬುದೇ ಈ ಸಾಲುಗಳ ಧ್ವನಿಯಾಗಿದೆ.

ಸಮಾಜದ ಕೂಸಾದ ಕವಿಗೆ ಸಮಾಜ ಇನ್ನಿಲ್ಲದಂತೆ ಕಾಡಿದೆ. ಇಲ್ಲಿಯ ಹೆಚ್ಚಿನ ಕವನಗಳು ಸಮಾಜದ ಓರೆ ಕೊರೆಗಳನ್ನು ಬಯಲಿಗೆಳೆಯುತ್ತವೆ. ಇವು ಕವಿ ಮಧುಸೂದನ ರವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿಯಾಗಿವೆ. ಮೌಲ್ಯಗಳು ಬಿಕರಿಯಾಗುತ್ತ ಇಂದು ಮೂಲೆಗುಂಪಾಗುತ್ತ ಸಾಗಿವೆ. ಇದರತ್ತ ಕವಿ ಸಾತ್ವಿಕವಾದ ಕೋಪವನ್ನು ವ್ಯಕ್ತಪಡಿಸಿದ್ದಾರೆ.

“ದ್ರೋಹ ಊರುಗೋಲಾಗಿ
ವಂಚನೆ ದಾರಿದೀಪವಾಗಿ
ಕಳ್ಳಕಾಕರೆಲ್ಲ ಕೋಟೆಗಳ ಕಟ್ಟಿ ಮೆರೆಯಲು
ಸತ್ಯವಂತರು ಸಾಯದೆಲೆ ಸ್ಮಶಾನ ಸೇರಿರಲು….”

ಈ ಚರಣಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಮುಖವಾಡವನ್ನೇ ಕಳಚಿಟ್ಟಿವೆ. ಸಂಸ್ಕಾರದ ಕೊರತೆ, ಅಂಕಗಳಿಗಾಗಿ ಓದುವ ಗೀಳು, ಸ್ವಾರ್ಥದ ಪರಮಾವಧಿ, ಸಮಯಸಾಧಕತೆಯಲ್ಲಿ ಅರಳುವ ಸಂಬಂಧಗಳು…. ಇವೆಲ್ಲವು ಮೌಲ್ಯಗಳ ಸ್ಥಾನಪಲ್ಲಟಕ್ಕಾಗಿ ತುದಿಗಾಲಲ್ಲಿ ನಿಂತಿವೆ. “ ಒಳ್ಳೆಯವರಿಗೆ ಇದು ಕಾಲವಲ್ಲ” ಎನ್ನುವ ಸೂಕ್ತಿಯು ಇಡೀ ಮನುಕುಲದ ಅಸಹಾಯಕತೆಯನ್ನೇ ಅಣಕಿಸುವಂತಿದೆ! ‘ಕಷ್ಟಕಾಲದಲ್ಲೊಂದು ಗಪದ್ಯ’ ಕವನವು ಮೌಲ್ಯಗಳ ಕಣ್ಣಾಮುಚ್ಚಾಲೆಗೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ಪುರಾಣದ ಆದರ್ಶ ವ್ಯಕ್ತಿಗಳು ನಡೆದು ಬಂದ ದಾರಿಯು ಇಂದು ಕಳೆಗುಂದುತಿದೆ. ಸತ್ಯ ಹರಿಶ್ಚಂದ್ರನ ನಾಡಿನಲ್ಲಿಂದು ಹರಿಶ್ಚಂದ್ರನ ಸವತಿಯ ಮಕ್ಕಳದೆ ಕಾರುಬಾರು ನಡೆದಿದೆ!

“ಸತ್ಯ ಹೇಳಿದವರು ಅಮರರಾಗುತ್ತಾರೆಂಬ
ಅಮರಕಥಾಕೋಶದ ಕಥೆಗಳಿಗೀಗ ಅಂತ ಮಾನ್ಯತೆಯೇನಿಲ್ಲ
ಸುಳ್ಳು ಹೇಳುವವರ ರಾಜ್ಯದೊಳಗೆ
ಬಟ್ಟೆ ಹಾಕಿಕೊಂಡು ಬಡಿಸಿಕೊಳ್ಳುವುದು ಅಚ್ಚರಿಯ ವಿಷಯವೇನಲ್ಲ….”

ಎನ್ನುವ ಪಂಕ್ತಿಗಳು ನಮ್ಮ ಇತಿಹಾಸ ಮತ್ತು ವಾಸ್ತವ ಲೋಕವನ್ನು ಮುಖಾಮುಖಿಯಾಗಿಸುತ್ತವೆ. ದುರ್ಬಲರಿಗೆ ಶಕ್ತಿ ತುಂಬುವ ಸೋಗಲಾಡಿತನದಲ್ಲಿ ತಾವೇ ಬಲಿಷ್ಠರಾಗಿ ಅನ್ಯಾಯ ಮಾಡುತ್ತಿರುವ ಸಮಾಜ ಸುಧಾರಕರ ದಂಡು ತೀವ್ರವಾಗಿ ಬೆಳೆಯುತ್ತಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದರೂ ತಪ್ಪು ಅಂತ ಹೇಳಿ ನಿಷ್ಠೂರವಾಗಲು ಬಯಸುತ್ತಿಲ್ಲ. ರಕ್ಷಣಾತ್ಮಕ ಆಟಕ್ಕೆ ಮನಸೋತು ಸ್ವಾರ್ಥದ ಬಿಲದಲ್ಲಿ ಸಂಸಾರ ನಡೆಸುವವರ ಸಂಖ್ಯೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗುತ್ತಿರುವುದು ಆತಂಕಕಾರಿ ಹಾಗೂ ಕಳವಳಕಾರಿ. ಮನಃಸಾಕ್ಷಿ ಎಂಬುದು ಇಂದು ಕೇವಲ ಒಂದು ಶಬ್ದವಾಗಿ, ಶಬ್ದಕೋಶದಲ್ಲಿ ಆಶ್ರಯ ಪಡೆದುಕೊಂಡಿದೆ!!

ಬಂಡವಾಳ ಶಾಹಿ ವ್ಯವಸ್ಥೆ ಹಾಗೂ ರಾಜಕೀಯ ಪ್ರಭುತ್ವ ಮನುಷ್ಯನ ಮಾತುಗಳನ್ನು ಅಡಗಿಸಬಹುದು. ಆದರೆ ಅವನು ಮೌನವನ್ನಲ್ಲ…! ವ್ಯಕ್ತಿಯನ್ನು ಕೊಲ್ಲಬಹುದೆ ಹೊರತು ಆ ವ್ಯಕ್ತಿಯ ವ್ಯಕ್ತಿತ್ವವನ್ನಲ್ಲ. ಈ ಹಿನ್ನೆಲೆಯಲ್ಲಿ “ ಸಿದ್ಧಾಂತಗಳ ಹೇಗೆ ಕೊಲ್ಲುವೆ” ಶೀರ್ಷಿಕೆಯ ಕವನ ಓದುಗರನ್ನು ಬಡಿದೆಬ್ಬಿಸುತ್ತದೆ.

“ಕುಡಿಯುವ ನೀರು ತುಟ್ಟಿಯಾಗಿದೆ
ತೀರಾ ಬಾಯಾರಿಕೆಯಾದರೆ ಬೇಸರವೇಕೆ
ಬಡವರ ರಕ್ತವಿದೆ”
ಎನ್ನುವ ಸಾಲುಗಳು ರಾಜಪ್ರಭುತ್ವದ ಸುಂದರ ವಿಡಂಬನೆಗೆ ಮೂಕ ಸಾಕ್ಷಿಯಾಗಿವೆ. ಅಂತೆಯೇ ಇಲ್ಲಿ ಕವಿ

“ಮನುಷ್ಯರ ಇಲ್ಲವಾಗಿಸಲು
ಬಂದೂಕು ಸಾಕು
ಸಿದ್ಧಾಂತಗಳ ಹೇಗೆ ಕೊಲ್ಲುವೆ.?”

ಎಂದು ಪ್ರಶ್ನಿಸಿದ್ದಾರೆ. ಇಂತಹ ಹಲವಾರು ಘಟನೆಗಳನ್ನು ನಮ್ಮ ಪರಂಪರೆಯು ಸಾವಧಾನವಾಗಿ ಮುನ್ನಡೆಸಿಕೊಂಡು ಬರುತ್ತಿದೆ..!! ಇದಕ್ಕೊಂದು ಉತ್ತಮ ಉದಾಹರಣೆ “ ಸಾಕಾಗುವುದಿಲ್ಲ ಮೂರು ಗುಂಡುಗಳು” ಎನ್ನುವ ಕವನ. ಇದು ಗೌರಿ ಲಂಕೇಶ್ ಅವರ ಕೊಲೆಯನ್ನು ಪ್ರಶ್ನಿಸುವಂತೆ ಮೂಡಿಬಂದಿದೆ. ಅಂತೆಯೇ ಕಾವ್ಯವು ಈ ರೀತಿಯಲ್ಲಿ ಕೊನೆಗೊಂಡಿದೆ.

“ಲಕ್ಷೋಪಲಕ್ಷ ಕೊರಳುಗಳು
ದನಿಯೆತ್ತಿ ಹಾಡಿದವು
ನಾನು ಗೌರಿ
ನಾನೂ ಗೌರಿ”

ಈ ಉಸಿರುಗಟ್ಟಿಸುವ ಜಾಲಕ್ಕೆ ಜಾಗತೀಕರಣ, ಹಣದ ಅಮಲು ಸಾಥ್ ನೀಡುತ್ತಿರುವುದು ದುರಂತವಾದರೂ ಸತ್ಯ. ಜೀವಸಂಕುಲದಲ್ಲಿ ಮನುಷ್ಯ ಶ್ರೇಷ್ಠ ಪ್ರಾಣಿಯಾದರೂ ಅವನ ಉಸಿರಿಗೆ ಬೆಲೆಯೇ ಇಲ್ಲದಂತಾಗಿದೆ. ಹೆಣಗಳ ರಾಶಿ ನಮ್ಮ ಫಲವತ್ತಾದ ಭೂಮಿಯಲ್ಲಿ ಅನುದಿನವೂ ನಡೆಯುತ್ತಲೆ ಇದೆ.

“ಸತ್ತು
ಹೋದವರ
ಊರ ತುಂಬಾ
ಹೆಣ ಹೊರುವವರದೇ ಕಾರುಬಾರು…”

ರಾಜಕೀಯ ಎಂದ ಕೂಡಲೇ ವಂಚನೆ, ಅನ್ಯಾಯ, ಅಸತ್ಯ, ಅಪಪ್ರಚಾರ, ಸ್ವಜನ-ಸ್ವಜಾತಿ ಪಕ್ಷಪಾತ ಇವುಗಳ ಬೀಭತ್ಸ ಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಡಾ. ಜಾನ್ಸನ್ ರವರ ಸೂಕ್ತಿ “ರಾಜಕೀಯ ಎಂದರೆ ಫಟಿಂಗನ ಕೊನೆಯ ಆಸರೆ” ಎಂಬುದು ನಮ್ಮಲ್ಲಿ ಬಹುತೇಕರಿಗೆ ಅಕ್ಷರಶಃ ನಿಜ ಅನಿಸುವುದುಂಟು. ಪ್ರಜಾಪ್ರಭುತ್ವದ ಮೂಲ ಬಲ ಜನರ ಮತ. ಪರಮಾಧಿಕಾರ ಜನರಿಗೆ ಸೇರಿದ್ದು. ನಾವು ರಾಜಕೀಯದಲ್ಲಿ ನಿರಾಸಕ್ತರಾದರೆ ನಮ್ಮ ಕರ್ತವ್ಯಕ್ಕೆ ನಾವು ವಿಮುಖರಾದಂತೆಯೆ ಸರಿ. ಈ ಹಿನ್ನೆಲೆಯಲ್ಲಿ ರಾಜಕೀಯ ಸ್ಥಿತಿಗತಿಗಳ ಕುರಿತು ಪ್ರತಿಯೊಬ್ಬ ನಾಗರಿಕನೂ ಚಿಂತನ-ಮಂಥನ ಮಾಡುವುದು ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಈ ನೆಲೆಯಲ್ಲಿ ಹಲವು ಕವನಗಳು ಓದುಗರನ್ನು ಜಿಜ್ಞಾಸೆಗೆ ನೂಕುತ್ತವೆ.

ಓಲೈಕೆ…. ಇಂದು ಎಲ್ಲ ರಂಗಗಳಲ್ಲಿ ವಿಪರೀತ ಎನಿಸುವಷ್ಟು ಆಕ್ರಮಿಸಿಕೊಂಡಿದೆ. ಅದರಲ್ಲೂ ರಾಜಕೀಯದಲ್ಲಂತೂ ತುಸು ಹೆಚ್ಚೇ ಅನಬಹುದು. ಇದನ್ನು ಕವಿ ಹೃದಯ ಈ ರೀತಿಯಲ್ಲಿ ದಾಖಲಿಸಿದೆ.
‘ದೇವಪ್ರಸಾದವೇ ಸೈ ಇವರುಗಳಿಗೆ ರಾಜಕುವರನ ಹೇಲು!’
ಈ ನಡವಳಿಕೆ ಎಷ್ಟರಮಟ್ಟಿಗೆ ಮನುಷ್ಯನ ವ್ಯಕ್ತಿತ್ವವನ್ನು ಆಪೋಶನ ತೆಗೆದುಕೊಂಡಿದೆ ಎಂದರೆ ಮಾನಸಿಕ ಗುಲಾಮಗಿರಿ ಸಾಮಾನ್ಯವಾಗಿ ಹೋಗುವಷ್ಟರ ಮಟ್ಟಿಗೆ!

“ದಣಿಗೆ
ಸತ್ಯ
ಪಥ್ಯವಾಗುವುದಿಲ್ಲ
ಪ್ರಜೆಗಳಿಗೆ
ಸುಳ್ಳು ಅರ್ಥವಾಗುವುದಿಲ್ಲ”

ಇಲ್ಲಿ ಕವಿಗಳು ತುಂಬಾ ಸರಳವಾಗಿ ಓದುಗರ ಮನವನ್ನು ತಟ್ಟಿದ್ದಾರೆ. ಆಳರಸರ ಆಸೆಗೆ ಮಿತಿಯೇ ಇಲ್ಲ. ಅವರಿಗೆ ಎಲ್ಲವೂ ಬೇಕು. ಆದರೆ ಅವರಿಗೆ ಹಕ್ಕಿಯ ಹಾಡು, ನದಿಯ ಜಾಡು ಮಾತ್ರ ಸಿಕ್ಕದಿರಲಿ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರಜಾಪ್ರಭುತ್ವವು ಸಕಾರಾತ್ಮಕತೆಗಿಂತಲೂ ನಕಾರಾತ್ಮಕವಾಗಿಯೆ ಚರ್ಚೆಯಲ್ಲಿದೆ. ಇದನ್ನು “ ಬಹುಮತದ ಅಂಧತ್ವ” ಕವನದಲ್ಲಿ ಕಾಣಬಹುದು.

“ಬಹುಮತವುಳ್ಳವರು
ಹೇಳಿದ್ದನ್ನೆಲ್ಲ ಸರಿಯೆಂದು ಒಪ್ಪಿಕೊಂಡು
ಕಾಲ ನೂಕುವ
ಇವತ್ತಿನ ಸಮಾಜದಲ್ಲಿ
ಇಲ್ಲ
ಅದು ತಪ್ಪು…”

ಇದರಿಂದಾಗಿಯೇ ‘ಸಂಖ್ಯಾಬಲ ಉಳ್ಳವರು ಹೇಳಿದ್ದೇ ಸರಿ’ ಎಂಬ ಅಲಿಖಿತ ನಿಯಮ ಇಂದು ನಮ್ಮ ಮಧ್ಯೆ ಜಾರಿಯಲ್ಲಿದೆ. “ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠ ಮಾದರಿಯ ವ್ಯವಸ್ಥೆ ಎಂದೇನಿಲ್ಲ. ಅಲ್ಲಿಯೂ ಇತಿಮಿತಿಗಳಿವೆ. ಆದರೆ ಇನ್ನುಳಿದವು ಅದಕ್ಕಿಂತಲೂ ಕೆಟ್ಟ ಮಾದರಿಯವು!’’ ಎಂಬ ಚರ್ಚಿಲ್‍ರವರ ಮಾತಿನ ಮರ್ಮವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ.

ದೇಶಭಕ್ತಿ…. ಪ್ರತಿಯೊಬ್ಬ ಭಾರತೀಯನ ಆಂತರ್ಯದಲ್ಲಿ ಇರಬೇಕಾದದ್ದು. ಆದರೆ ದುರಂತವೆಂದರೆ ಇಂದು ಇದು ರಾಜಕೀಯ ಪಕ್ಷಗಳ ದಾಳವಾಗುತ್ತಿರುವುದು! ಇದರ ಕುರಿತೂ ಶ್ರೀಯುತರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೊಂದು ನಿದರ್ಶನವೆಂದರೆ “ ದ್ರೋಹ ಮತ್ತು ಭಕ್ತಿ” ಎಂಬ ಕವನ.

“ದೇಶವೆನ್ನುವುದು ರಕ್ತಮಾಂಸಗಳಿಂದ ಮಾಡಿದ
ಮನುಷ್ಯರಿಂದಾಗಿದ್ದೆಂದು ಭಾವಿಸಿ
ಮತ್ತವರ ಸುಖದುಃಖ ನೋವು ನಲಿವುಗಳು
ಎಲ್ಲರದೂ….”
ಅಂತೆಯೇ ದೇಶಭಕ್ತಿ ಎನ್ನುವುದು ಹೇಳಿ-ಕೇಳಿ ಬರುವಂತದ್ದಲ್ಲ, ಅದು ಸಂಸ್ಕಾರದಿಂದ ಮಾತ್ರ ಬರಲು ಸಾಧ್ಯ.

ಮನುಷ್ಯನ ಅಲ್ಪತನದಿಂದಲೆ ಮನುಕುಲವು ಇಂದು ವಿನಾಶದತ್ತ ಸಾಗುತ್ತಿದೆ. ಬೌದ್ಧಿಕತೆಯೇ ಇಲ್ಲಿ ಗರಗಸವಾಗುತಿದೆ. ಅಂತೆಯೇ ಕವಿಗಳು ಇಲ್ಲಿ

“ನಮ್ಮ ಚಿತೆಗೆ ನಾವೇ ಸಿದ್ಧತೆ ಮಾಡಿಕೊಳ್ಳುವ ಪರಿಪಾಠವಿರುವುದು
ಮನುಷ್ಯರಲ್ಲಿ ಮಾತ್ರವೆನಿಸುತ್ತದೆ!”
ಎಂದಿದ್ದಾರೆ. ಮನುಷ್ಯ ವೈಜ್ಞಾನಿಕವಾಗಿ ತೆರೆದುಕೊಳ್ಳುತ್ತ ಹೋದಂತೆ ಆತ್ಮಾವಲೋಕನ ಮಾಡಿಕೊಳ್ಳುವುದನ್ನೇ ಮರೆತಿದ್ದಾನೆ.

“ಹಸಿವಿನ ಬಗ್ಗೆ ಮಾತಾಡುತ್ತಲೇ
ಭರ್ಜರಿಯಾಗಿ ಉಣ್ಣುತ್ತಿರುತ್ತಾರೆ
ಸಮಾನತೆಯ ಬಗ್ಗೆ ಮಾತಾಡುತ್ತಲೇ
ದುರ್ಬಲರ ತುಳಿಯುತ್ತಿರುತ್ತಾರೆ..”
ಬದ್ಧತೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಮನುಷ್ಯ ಬಹು ಬೇಗನೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಾನೆ. ಇದನ್ನು “ ವಿಪರ್ಯಾಸ” ಕವಿತೆಯಲ್ಲಿ ಗುರುತಿಸಬಹುದು.

“ನ್ಯಾಯ ಕೇಳುವ ರಭಸದಲ್ಲಿ
ಅನ್ಯಾಯದ ದಾಳವಾಗಿ ಬಿಡುತ್ತೇವೆ”

ಇಂಥಹ ಹತ್ತು ಹಲವಾರು ಕವನಗಳೊಂದಿಗೆ ಸ್ತ್ರೀ ಸಂವೇದನೆ, ಅಲೌಕಿಕ ಜೀವನ, ಧಾರ್ಮಿಕ ಬೀಭತ್ಸ, ಕೋವಿಡ್ ೧೯,.. ಕುರಿತಂತೆಯೂ ಕವಿತೆಗಳಿದ್ದು, ಓದುಗರ ವೈಚಾರಿಕ ಮಟ್ಟವನ್ನು ಎತ್ತರಿಸುವಂತಿವೆ.

“ ಸಿದ್ಧಾಂತಗಳ ಹೇಗೆ ಕೊಲ್ಲುವೆ..?” ಕವನಸಂಕಲನವನ್ನು ಅಮೂಲಾಗ್ರವಾಗಿ ಗಮನಿಸಿದಾಗ ಇಲ್ಲಿಯ ಕವನಗಳ ಮೇಲೆ ‘ನವ್ಯ’ ಕಾವ್ಯದ ದಟ್ಟ ಪ್ರಭಾವ ಇರುವುದು ಕಂಡು ಬರುತ್ತದೆ. ಮುಕ್ತ ಛಂದೋಬದ್ಧದಲ್ಲಿ ಇಲ್ಲಿಯ ಕವನಗಳಿದ್ದು, ಪದ್ಯದ ದಾಟಿಗಿಂತಲೂ ಗದ್ಯದ ಛಾಯೆಯನ್ನೇ ಹೆಚ್ಚು ಹೊಂದಿವೆ. ಹಲವು ಕವನಗಳು ಕಥನ ಕಾವ್ಯದಂತೆ ದೀರ್ಘವಾಗಿವೆ. ಕವಿಗೆ, ಕಾವ್ಯಕ್ಕೆ ಮೂಲ ಸಾಧನವೇ ಭಾಷೆ. ಇಲ್ಲಿ ಕವಿ ಮಧುಸೂದನ ರವರು ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡಿದ್ದಾರೆ. ‘ಮುದಿ ಬಿಸಿಲು’, ‘ಸೊರಗಿದ ಹಗಲು’,… ದಂತಹ ಪದಗಳು ವಿಶೇಷವೆನಿಸುತ್ತವೆ. ಇದರೊಂದಿಗೆ ಇಲ್ಲಿಯ ಹಲವು ಚರಣಗಳು ‘ಹೇಳಿಕೆ’ ಗಳಂತೆ ಕಂಡು ಬರುತ್ತವೆ.

‘ಸತ್ಯ ಬರೆದ ಕವಿಯ ಕೊಲ್ಲುವ ಇರಾದೆಯಲಿ’
‘ಸತ್ತವರೆಲ್ಲ ಸತ್ಯ ಹೇಳಿದವರೆ ಎನ್ನುವುದಕ್ಕೂ ಪುರಾವೆಯಿಲ್ಲ’
‘ನನ್ನದೇ ಜನ ಬೆನ್ನಿಗೆ ಚೂರಿ ಇರಿದೂ ನಗುತ್ತಾರೆ’
‘ನೂರಾಎಂಟರ ಗಾಡಿಗೊ ಇನ್ನಿರದ ಬೇಡಿಕೆ’

ಮನಸ್ಸಿಗೆ ಬಾಳಿನ ಅನುಭವಗಳನ್ನು ಆಯ್ದು ಇಟ್ಟುಕೊಳ್ಳುವ ಶಕ್ತಿ, ಸಾಮರ್ಥ್ಯವಿದೆ. ತನಗೆ ಬೇಕಾದುದನ್ನು-ಅದು ಅಹಿತವಾಗಿರಲಿ- ಅಥವಾ ಅದು ಹಿತವಾಗಿರಲಿ ಉಳಿಸಿಕೊಂಡು ಉಳಿದುದನ್ನು ಮರೆತುಬಿಡುತ್ತದೆ. ಜೀವನದ ಮೇಲೆ ಮೇಲೆಯೆ ತೇಲಿ ಹೋಗುವ ಹಲವರಿಗೆ ಗಹನ ವಿಷಯಗಳು ಹಿಡಿಸುವುದಿಲ್ಲ. ಅಂತವರನ್ನೂ ಸಹ ಅಂತರ್ಮುಖಿಗಳನ್ನಾಗಿ ಮಾಡಿ, ಬಾಳಿನ ತಿರುಳನ್ನು ಅವರು ಸವಿಯುವಂತೆ ಈ ಕವನ ಸಂಕಲನ ಮಾಡಲಿಯೆಂದು ಆಶಿಸುತ್ತ, ನನ್ನ ಚಿಂತನ ಲಹರಿಗೆ ವಿರಾಮ ನೀಡುವೆನು.

“Poets are the unacknowledged legislators of the world”-Shelly

-ಡಾ. ಮಲ್ಲಿನಾಥ ಎಸ್. ತಳವಾರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x