ತುಂಬಿದ ಮಡಿಲು: ಭಾರ್ಗವಿ ಜೋಶಿ…..

ಅಂದು ನಸುಕಿನಲ್ಲಿ ನಾಲ್ಕನೇ ದಿನದ ನೀರು ಹಾಕಿಕೊಂಡು ಅಡುಗೆ ಮನೆ ಹತ್ತಿರ ಬರುತ್ತಿದ್ದ ಪದ್ಮಾವತಿಗೆ ಒಳಗಡೆ ಅತ್ತೆ ರಮಾಬಾಯಿ ಒಲೆ ಮುಂದೆ ಕುಳಿತು ಕಾಫಿ ಮಾಡುತ್ತ ಹೇಳುತ್ತಿದ್ದರು ಮಾತು ಜೋರು ಜೋರಾಗಿ ಕೇಳಿಸುತ್ತಿತ್ತು. ತಾಯಿ ಮಾತಿಗೆ ಎದುರು ಕುಳಿತ ಶ್ರೀನಿವಾಸ ಹೂಂ ಗುಟ್ಟುತ್ತಿದ್ದ.

“ಅಲ್ಲೋ ಶ್ರೀನಿ, ನಿನ್ ಮದುವೆ ಆಗಿ ಐದು ವರ್ಷ ಆತು, ಇನ್ನು ಮಕ್ಕಳು, ಮರಿ, ಸುದ್ದಿನೇ ಇಲ್ಲೆಲ್ಲೋ? ನೋಡು ಇನ್ನು ತಡ ಮಾಡಬೇಡ. ನನ್ ಮಾತು ಕೇಳು. ಇನ್ನೊಂದು ಮದುವೆ ಮಾಡಿಕೊಂಡು ಬಿಡು ” ಎಂದು…

ಅಡುಗೆ ಮನೆಯಲ್ಲಿ ಇನ್ನೊಂದು ಮೂಲೆಯಲ್ಲಿ ಕುಳಿತ ಆ ಕುಬ್ಜ ಮುದುಕಿ ಶ್ರೀನಿವಾಸ ನಾ ಅಜ್ಜಿ, ನಡು ಬಾಗಿ, ಕಣ್ಣು ಮಂಜಾಗಿದ್ದರು, ಕಿವಿ ಮಾತ್ರ ಚುರುಕಾಗಿ ಕೇಳಿಸುತ್ತಿತ್ತು. ತನ್ನ ಸೊಸೆ, ಮೊಮ್ಮಗನಿಗೆ ಹೇಳುತ್ತಿದ್ದರು ಮಾತು ಕೇಳಿಸಿಕೊಂಡು ತುಸು ಕೋಪ ದಿಂದ

“ರಮಾ, ನೀನು ಮದುವಿ ಆಗಿ 7ವರ್ಷದ ಮ್ಯಾಲೆ ಶ್ರೀನಿವಾಸ ನಾ ಹೆತ್ತಿ, ಆಗ ನಾ ನನ್ನ ಮಗ ಅನಂತ ಗ ಇನ್ನೊಂದು ಮದುವೆ ಮಾಡ್ಕೋ ಅಂತ ಯಾವತ್ತು ಹೇಳಿರಲಿಲ್ಲ, ಸ್ವಲ್ಪ ನೆನಪು ಮಾಡಿಕೋ” ಎಂದು ಗದರಿದಳು.

ಅತ್ತೆ ಮಾತು ಕೇಳಿ ಕೋಪಗೊಂಡ ರಮಾಬಾಯಿ-

” ಈ ಮುದುಕಿ ಒಂದು ಎಲ್ಲದಕ್ಕೂ ನಡುವ ಬರ್ತದ, ಅತ್ತಿ ನೀವ್ ಸ್ವಲ್ಪ ಸುಮ್ಮನಿರಿ, ನೋಡು ಶ್ರೀನಿ, ನೀ ಒಂದು ಮಾತು ಹೂ ಅನ್ನು, ನಮ್ ತವರು ಮನೆ ಕಡೆ ಹೆಣ್ಣು ಅವ, ನಾ ಮಾತಾಡ್ತೇನಿ, ಅದು ಏನು ಅಂತ ಇಕಿನ್ನ ಮೆಚ್ಚಿಕೊಂಡು ಮದ್ವೆ ಆದೆಯೋ ಗೊತ್ತಿಲ್ಲ ಮಾರಾಯ, ” ಅಂತ ವಟಗುಟ್ಟುತ್ತ ಕಪ್ ಅಲ್ಲಿ ಕಾಫಿ ಸೊಸಿ, ಕಪ್ ಗೆ ಹಾಕಿ ಮಗ ಶ್ರೀನಿವಾಸನಿಗೆ ಮತ್ತು ಅತ್ತೆ ಗೆ ಕೊಟ್ಟು, ತನು ಬಿಸಿ ಕಪ್ ಅನ್ನು ಸೆರಗಿನ ತುದಿಇಂದ ಹಿಡಿದು ಕುಡಿಯ ಹತ್ತಿದಳು.

ಅಷ್ಟೊತ್ತು ಅಮ್ಮನ ಮಾತು ತಾಳ್ಮೆ ಇಂದ ಕೇಳಿಸಿಕೊಂಡ ಶ್ರೀನಿವಾಸ, ಕಾಫಿ ಕುಡಿದು ಎದ್ದು ಹೋಗೋವಾಗ ತಾಯಿಯನ್ನು ಒಮ್ಮೆ ತೀಕ್ಷ್ಣವಾಗಿ ನೋಡಿ “ಅವ್ವಾ ನಿಂಗ್ ಮೊಮ್ಮಗು ಬೇಕು ಹೌದಿಲ್ಲೋ? ನಾ ಎಲ್ಲ ಅದರ ಬಗ್ಗೆ ಯೋಚನೆ ಮಾಡ್ತೇನೀ, ಹೆಣ್ಣು ಹುಡುಕೋ ತ್ರಾಸ್ ನು ನಿನಗೆ ಕೊಡೋದಿಲ್ಲ, ನೀ ಇಪ್ಪತ್ತನಾಲ್ಕು ತಾಸು ಇದೆ ವಿಷಯ ಮಾತಾಡೋದನ್ನ ಬಿಡು ” ಅಂತ ಹೇಳಿ ಹೊರಗಡೆ ಹೊರಟು ಹೋದ..

ಬಾಗಿಲ ಮರೆಯಲ್ಲಿ ನಿಂತು ಇದನ್ನೆಲ್ಲಾ ಕೇಳಿಸಿಕೊಂಡ ಪದ್ಮ ಗಂಡ ದಾಟಿ ಆಚೆ ಹೋಗುವವರೆಗೂ ಮರೆಯಲ್ಲಿ ಅಡಗಿ ನಿಂತಳು…

ಉಕ್ಕಿ ಬರುತ್ತಿದ್ದ ದುಃಖವನ್ನು ಗಂಟಲಲ್ಲಿ ತಡೆದು ನೇರವಾಗಿ ತನ್ನ ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದು ಅಳಲು ಶುರು ಮಾಡಿದಳು.

ಅತ್ತೆಯ ಈ ವರ್ತನೆ ಅವಳಿಗೆ ಹೊಸತೇನು ಆಗಿರಲಿಲ್ಲ. ಪ್ರತಿಸಾರಿ ಗಂಡ ತನ್ನ ಪರವಹಿಸಿ ಅತ್ತೆಗೆ ಬುದ್ಧಿ ಹೇಳುತ್ತಿದ್ದ. ಆದರೆ ಈ ಸಾರಿ ಅವರು ತಲೆಯಾಡಿಸಿ ಇದರ ಬಗ್ಗೆ ಯೋಚಿಸುತ್ತೇನೆ ಅಂತ ಹೇಳಿ ಹೊರಟದ್ದು ಅವಳ ದುಃಖ ಇಮ್ಮಡಿಯಾಗಲು ಕಾರಣವಾಗಿತ್ತು.

ದಿನಗಳು ಕಳೆದವು, ಗಂಡನ ವರ್ತನೆಯಲ್ಲಿ ಅಸಹಜ ಬದಲಾವಣೆ ಕಾಣಿಸತೊಡಗಿತು, ಆದರೆ ಪದ್ಮ ಗೆ ದ್ ವಿಷಯದ ಬಗ್ಗೆ ಕೇಳುವ ಧೈರ್ಯವಾಗಲಿ, ಪ್ರಶ್ನಿಸುವ ಮನಸ್ಥಿತಿಯಾಗಲಿ ಉಳಿದಿರಲಿಲ್ಲ… ಪ್ರೀತಿಸಿ ಮದುವೆಯಾಗಿ, ಇಷ್ಟು ವರ್ಷ ಒಂದು ದಿನವೂ ಬೇಜಾರು ಮಾಡದೇ ಅಷ್ಟು ಪ್ರೀತಿಸಿದ ಗಂಡ ಇಂದು ಹೀಗೆ ಬದಲಾಗಿರುವುದು ಅವಳಿಗೆ ನುಂಗಲಾರದ ತುತ್ತು ಆಗಿತ್ತು.

ಕೆಲವು ತಿಂಗಳುಗಳ ನಂತರ….

ಅಂದು ಬೆಳಿಗ್ಗೆ ಶ್ರೀನಿವಾಸ ಏನೋ ಮುಖ್ಯವಾದ ಕೆಲಸ ಇದೆ, ಎಲ್ಲೋ ಹೋಗಬೇಕು ಎಂದು ಗಡಿಬಿಡಿ ಇಂದ ಎದ್ದು ತಯಾರಾಗಿ ಹೊರಟು ಹೋದ. ಇತ್ತೀಚಿಗೆ ಬದಲಾದ ಶ್ರೀನಿವಾಸ ಕದ್ದು ಮುಚ್ಚಿ ಏನೋ ವ್ಯವಹಾರ ನಡೆಸುತ್ತಿದ್ದಾನೆ ಎನಿಸುತ್ತಿತ್ತು, ಪದ್ಮ ಜೊತೆ ಮೊದಲಿನಂತೆ ಇಲ್ಲ ಎಂದು ಅವಳಿಗೆ ಅನಿಸುತ್ತಿತ್ತು. ಇಂದು ಏನು ಹೇಳದೆ ಕೇಳದೆ ಹೋಗಿದ್ದರಿಂದ ಅವಳಿಗೆ ಸಹಜವಾಗಿಯೇ ಆತಂಕವಾಗಿತ್ತು. ಊಟ ತಿಂಡಿ ಯಾವುದು ಬೇಡವೆನಿಸಿ ಕೋಣೆ ಬಿಟ್ಟು ಆಚೆ ಬಂದಿರಲೇ ಇಲ್ಲ. ಮದ್ಯಾನ್ಹ ಸ್ವಲ್ಪ ಬಿಸಿಲು ಕಡಿಮೆಯಾಗುವ ಹೊತ್ತು. ಮುಸ್ಸಂಜೆ ಇನ್ನು ಬಾನಿನಲ್ಲಿ ಹಾಸಿರಲಿಲ್ಲ, ಆ ಮಧ್ಯದ ಸಮಯ. ಮನೆ ಬಾಗಿಲಲ್ಲಿ ಯಾವುದೊ ಗಾಡಿ ಬಂದು ನಿಂತ ಸದ್ದು ಕೇಳಿಸಿತು, ಸಹಜ ಕುತೂಹಲ, ಆತಂಕದಿಂದ ಮನೆಯವರೆಲ್ಲ ಹೊರಗಡೆ ಬಂದು ನೋಡಿದರು.

ಒಂದು ಟ್ಯಾಕ್ಸಿ ಬಂದು ಬಾಗಿಲಲ್ಲಿ ನಿಂತಿತ್ತು. ಮುಂದೆ ಬಾಗಿಲು ತೆರೆದು ಶ್ರೀನಿವಾಸ ಇಳಿದು ಹಿಂದಿನ ಬಾಗಿಲು ತೆರೆದ. ಆಗ ಒಬ್ಬ ಮಧ್ಯ ವಯಸ್ಸು, ಸುಮಾರು 30-32 ವರ್ಷ ವಯಸ್ಸಿನ ಆಸುಪಾಸಿನ ಮಹಿಳೆಯೊಬ್ಬಳು ಟ್ಯಾಕ್ಸಿ ಇಂದ ಇಳಿದಳು. ಅವಳ ಕೈಲಿ ಒಂದು ಮಗು. ಹುಟ್ಟಿ ಎಂಟು -ಹತ್ತು ದಿನ ಆಗಿರಬಹುದಷ್ಟೆ ಅಷ್ಟು ಪುಟ್ಟ ಮಗು.

ಇದನ್ನೆಲ್ಲಾ ನೋಡುತ್ತಿದ್ದ ಪದ್ಮ ನಿಂತಲ್ಲೇ ಕುಸಿದು ಅರೆಜೀವ ಆಗಿದ್ದಳು. ಶ್ರೀನಿವಾಸನ ತಂದೆ, ತಾಯಿ, ಅಜ್ಜಿ ಏನು ಅರ್ಥವಾಗದೇ ನೋಡುತ್ತಾ ನಿಂತಿದ್ದರು. ಶ್ರೀನಿವಾಸ ತಾಯಿಯನ್ನು ಕುರಿತು ” ಅವ್ವಾ ಏನ್ ನೋಡ್ತಾ ನಿಂತಿ? ಹೋಗಿ ಆರತಿ ತಗೊಂಡು ಬಾ. ಕೂಸಿಗೆ ದೃಷ್ಟಿ ತೆಗೆದು ಒಳಗೆ ಕರ್ಕೊಂಡು ಹೋಗೋಣ, ಹಕ್ಕಿ ಹಾರೋ ಹೊತ್ತು, ಜಾಸ್ತಿ ಹೊರಗಡೆ ನಿಲ್ಲೋದು ಬೇಡ ” ಅಂದ…

ಮಗನ ಮಾತು ಕೇಳಿ ರಮಾಬಾಯಿ ಗಾಬರಿಯಾದಳು. ಆದರೆ ಬೀದಿಯಲ್ಲಿ ಅದೆಲ್ಲ ಬೇಡ ಅಂತ ಮಗ ಹೇಳಿದಂತೆ ಮಗುವಿಗೆ ದೃಷ್ಟಿತೆಗೆದು ಒಳಗಡೆ ಕರೆದುಕೊಂಡು ಬಂದಳು.. ಎಲ್ಲರು ಮನೆಯೊಳಗೇ ಬಂದರು.

ಶ್ರೀನಿವಾಸ ಟ್ಯಾಕ್ಸಿ ಯವರಿಗೆ ದುಡ್ಡು ಕೊಟ್ಟು ಏನೋ ಹೇಳಿಬಂದ. ಎಲ್ಲರ ಮುಖದಲ್ಲೂ ಪ್ರಶ್ನೆ ಇತ್ತು. ಪದ್ಮ ಮುಖ ಮಾತ್ರ ಎಲ್ಲವನ್ನು ಕಳೆದುಕೊಂಡಂತೆ ನಿಷ್ಟೆಜವಾಗಿತ್ತು.

ಶ್ರೀನಿವಾಸನ ಜೊತೆ ಬಂದಿದ್ದ ಮಹಿಳೆ ಮಗುವನ್ನು ಎತ್ತಿಕೊಂಡು ನಿಂತಿದ್ದಳು.
ಶ್ರೀನಿವಾಸ್ ಒಳಗಡೆ ಬಂದು ಎಲ್ಲರನ್ನು ಕುರಿತು ಹೇಳಿದನು.. “ನೋಡಿ ಇಂದಿಗೆ ನಮ್ಮೆಲ್ಲರ ನೋವು ದೂರವಾಯಿತು, ನಮ್ಮ ಕೊರಗೆಲ್ಲಾ ದೂರ ಆಯ್ತು, ಇದು ಈ ಮನೆ ಮಗು, ನಿಮ್ಮ ಮೊಮ್ಮಗು ” ಎನ್ನುತ್ತಿದ್ದಂತೆ ಪದ್ಮ ಕಣ್ಣು ಮಂಜು ಕವೆದು, ಜೀವವೇ ಬಾಯಿಗೆ ಬಂದಹಾಗೆ ಆಗಿತ್ತು.

ಶ್ರೀನಿವಾಸ ಪದ್ಮ ನಾ ಕೂಗಿದ..
“ಪದ್ದು ಅಲ್ಲೇ ಯಾಕೆ ನಿಂತಿ? ಬಾ ಇಲ್ಲಿ, ನಮ್ಮ ಮಗು ಮುಖ ನೋಡೊದಿಲ್ಲೇನು? ಬಾ ಬಾ.. ಮುಂದೆ ಬಾ.. ಮಗುನ ಎತ್ತಿಕೋ ಅಂದ…

ಮಗುವನ್ನು ಆ ಮಹಿಳೆ ಕೈ ಇಂದ ಇಸ್ಕೊಂಡು ಪದ್ಮ ಕೈಲಿ ಕೊಟ್ಟ. ಆಗ ಆ ಮಹಿಳೆ – “ಶ್ರೀನಿವಾಸ ಅವರೇ ಟೈಮ್ ಆಗತ್ತೆ ನಾ ಇನ್ನು ಹೋರಡುತ್ತೇನೆ ” ಅಂದ್ರು..
ಅದನ್ನ ಕೇಳಿ ಪದ್ಮ ಕಿವಿ ನಿಮಿರಾಗಿ ಕಣ್ಣು ಅರಳಿದವು.

ಶ್ರೀನಿವಾಸ್ ” ಸುಧಾ ಮೇಡಂ ಸಾರೀ, ಮಗು ಬಂದ ಖುಷಿ ಲಿ ನಿಮ್ಮ ಪರಿಚಯ ಮಾಡಿಸೋದನ್ನೆ ಮರೆತು ಬಿಟ್ಟಿದ್ದೆ”.

ಅವ್ವಾ, ಅಪ್ಪ, ಪದ್ಮ, ನೋಡ್ರಿ ಇವರು ಸುಧಾ ಮೇಡಂ ಅಂತ ಒಂದು NGO ನಡೆಸ್ತಾ ಇದ್ದಾರೆ. ಅನಾಥ ಮಕ್ಕಳ ರಕ್ಷಣೆ, ಯಾರಿಗಾದರೂ ಬೇಕಾದರೆ ದತ್ತು ಕೊಡಿಸ್ತಾರೆ.
ಮತ್ತೆ ಈ ಮಗು ಬಗ್ಗೆ ನನಗೆ ಹೇಳಿ, ಇದು ನಮ್ಮ ಮಡಿಲು ಸೇರೋ ಹಾಗೆ ಮಾಡಿದ್ದು ಅವರೇ. ಅವರ ಉಪಕಾರ ನಾವು ಎಂದು ತೀರಿಸೋಕೆ ಆಗಲ್ಲ , ಅಂದ.

ಸುಧಾ – ಅಷ್ಟೆಲ್ಲ ದೊಡ್ಡ ಮಾತು ಬೇಡ ಶ್ರೀನಿವಾಸ, ಇದು ನನ್ನ ಕರ್ತವ್ಯ. ನಿಮ್ಮಂತ ಒಳ್ಳೆ ಪೋಷಕರನ್ನು ಪಡೆದ ಮಗು nಇಜಕ್ಕೂ ಅದೃಷ್ಟವಂತ. ನೀವೆಲ್ಲ ಖುಷಿಯಾಗಿ ಇದ್ರೆ ಅಷ್ಟೇ ಸಾಕು. ನಾ ಇನ್ನು ಹೋರಡುತ್ತೇನೆ. ಟ್ಯಾಕ್ಸಿಯವನು ಕಾಯ್ತಾ ಇದ್ದಾನೆ.. ಮತ್ತೆ ಇನ್ನೆರೆಡು ದಿನದಲ್ಲಿ ಪದ್ಮರನ್ನು ಕರ್ಕೊಂಡು ಬಂದು ಪೇಪರ್ ಗಳಿಗೆ ಸಹಿ ಮಾಡಿಸಿ ದತ್ತು ಫಾರ್ಮಾಲಿಟಿಸ್ ಮುಗಿಸಿಕೊಂಡು ಬಿಡಿ…..
ಅಂತ ಹೇಳಿ ಸುಧಾ ಹೊರಟು ಹೋದರು…

ಎಲ್ಲರಿಗೂ ಏನು ಹೇಳಬೇಕು ತಿಳಿಯುತ್ತಿಲ್ಲ..
ಪದ್ಮಗಂತೂ ಇದು ಕನಸೋ ನನಸೋ ತಿಳಿಯುತ್ತಿಲ್ಲ..

ಅಷ್ಟರಲ್ಲೇ ರಮಾಬಾಯಿ – ” ಏನೋ ಶ್ರೀನಿ ಇದು, ಯಾವುದೊ ಅನಾಥ ಮಗು ನಾ ಧಿಡೀರ್ ಅಂತ ಕರ್ಕೊಂಡು ಬಂದು ಮೊಮ್ಮಗು ಅಂದ್ರೆ ನಾವ್ ಹೆಂಗ್ ಒಪ್ಪಿಕೊಳ್ಳಬೇಕು? ಅದೆಲ್ಲ ಆಗೋದಿಲ್ಲ. ನೀ ಇನ್ನೊಂದು ಮದ್ವಿ ಆಗಿ, ಅಕಿ ಹೊಟ್ಟಿಯೊಳಗೆ ನಿನ್ ಮಗು ಹುಟ್ಟಿದಾಗ ಅದು ನಮ್ಮ ಮೊಮ್ಮಗು ಆಗ್ತದ.. ಇದೆಲ್ಲ ನಾ ಒಪ್ಪೋದಿಲ್ಲಾ ಸರಿ…

ಶ್ರೀನಿವಾಸ – ಅವ್ವಾ ಎರೆಡನೆ ಹೆಂಡತಿಗೂ ಮಕ್ಕಳು ಆಗಿಲ್ಲ ಅಂದ್ರೆ? ಹಿಂಗ್ ಎಷ್ಟು ಮದ್ವಿ ಮಾಡ್ತಿ? ಒಂದುವೇಳೆ ಸಮಸ್ಯೆ ನನ್ನಲ್ಲಿ ಇದ್ರೆ ಏನ್ ಮಾಡ್ತಿ? ಪದ್ದುಗೆ ಇನ್ನೊಂದು ಮದ್ವಿ ಮಾಡ್ತಿ?
ಅಲ್ಲಾ ಇಷ್ಟಕ್ಕೂ ಯಾವುದೊ ಒಂದು ಹುಡುಗಿನ ಕರ್ಕೊಂಡು ಬಂದು ಮದುವೆ ಆಗು ಅಂದ್ರೆ ಹೆಂಗ್ ಒಪ್ಪಿಕೊಳ್ಳಬೇಕು? ತಾಳಿ ಕಟ್ಟಿ ಬಿಟ್ರೆ ಅಕಿ ಹೆಂಡತಿ ಆಗೋದಿಲ್ಲ. ಏನೇ ಆಗ್ಲಿ ಈ ಜನುಮಕ್ಕೆ ಪದ್ದು ಬಿಟ್ರೆ ಯಾರು ಬರೋದಿಲ್ಲ ನನ್ನ ಬಾಳಲ್ಲಿ. ಮತ್ತೆ ಈ ಮಗು ನಮ್ಮ ಬಾಳಿನ ಬೆಳಕಾಗಿ ಬಂದದ. ಇದೆ ನಮ್ಮ ಸಂಸಾರ. ಅರ್ಥ ಮಾಡ್ಕೋರಿ ಅಂತ…
ಮಗನ ಮಾತು ಕೇಳುತ್ತ ರಮಾಬಾಯಿ ಕಣ್ಣಲ್ಲಿ ನೀರು ಹರೆಯತೊಡಗಿತು… ಸೆರಗಿನ ತುದಿ ಇಂದ ಕಣ್ಣು ಒರೆಸಿಕೊಳ್ಳುತ್ತ, ಸೊಸೆಯನ್ನು ಕುರಿತು, ” ಪದ್ದು ಏನ್ ಕೈಯೊಳಗ್ ಕೂಸಿನ ಹಿಡ್ಕೊಂಡು ಹಂಗ್ ಎಷ್ಟೊತ್ತು ನಿಲ್ತಿ? ತಾಯಿಯಾಗಿ, ಇನ್ನಾದ್ರೂ ಸ್ವಲ್ಪ ಜವಾಬ್ದಾರಿ ಕಲಿ. ನಡಿ ಮೊದ್ಲು ಕೂಸಿಗೆ ಎಣ್ಣಿ ನೀರು ಹಾಕೋಣ, ಆಮೇಲೆ ಆಕಳು ಹಾಲು ತಂದು ಕೊಡ್ತೇನಿ. ಕುಡಿಸುವಂತ್ಯ..
ಅಲ್ಲೋ ಶೀನು ಏನ್ ನೋಡ್ಕೋತ ನಿಂತಿ, ಲೋಭನ, ಬಾದಾಮ್, ಒಂದಿಷ್ಟು ಸಮನ್ ಹೇಳ್ತೇನಿ, ತಗೊಂಡು ಬಾ.. ಕೂಸಿಗೆ ಲೋಭನ ಹಾಕಿ ದೃಷ್ಟಿ ತೆಗೆದು, ಗುಟ್ಟಿ ತೈದು ಹಾಕೋಣ… ನಡೀರಿ ಎಲ್ಲರು ಏನ್ ನೋಡ್ಕೋತ ನಿಂತ್ರಿ… ” ಅಂತ ತನ್ನದೇ ಶೈಲಿಯಲ್ಲಿ ಎಲ್ಲರಿಗೂ ಗದರಿದಳು…

ಬರಿದಾದ ಮಡಿಲು ತುಂಬಿತ್ತು….
ಮಗುವಿಗೊಂದು ಆಸರೆ ದೊರಕಿತ್ತು….
ಮನೆ ತುಂಬಾ ಸಂತಸ ತುಂಬಿತ್ತು……

ಭಾರ್ಗವಿ ಜೋಶಿ…..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಹೆಚ್ಚೆನ್ ಮಂಜುರಾಜ್
ಹೆಚ್ಚೆನ್ ಮಂಜುರಾಜ್
3 years ago

ಕತೆಯ ಥೀಮು ಚೆನಾಗಿದೆ…..ಸಂಭಾಷಣೆಗಳು ಹಿತವಾಗಿದ್ದು, ಕತೆಯ ಆಶಯವನ್ನು ಮುಟ್ಟಿಸುವಲ್ಲಿ ಸಮರ್ಥವಾಗಿವೆ.

ಹೀಗೆ ಆರೋಗ್ಯದಾಯಕ ಮನಸ್ಥಿತಿಯ ಬರೆಹಗಳನ್ನು ಬರೆದಾಗಲೂ ಮತ್ತು ಓದಿದಾಗಲೂ ನಮಗೆ ಸಂತೋಷ ಒದಗುತ್ತದೆ.

ಧನ್ಯವಾದಗಳು ಮತ್ತು ಅಭಿನಂದನೆಗಳು ಮೇಡಂ

ಹೆಚ್ಚೆನ್ ಮಂಜುರಾಜ್

ಹೆಚ್ಚೆನ್‌ ಮಂಜುರಾಜ್
ಹೆಚ್ಚೆನ್‌ ಮಂಜುರಾಜ್
3 years ago

ತುಂಬಿದ ಮಡಿಲು ಕತೆ ಚೆನಾಗಿದೆ, ಓದಿಸಿಕೊಂಡು ಹೋಯಿತು. ಕತೆಯ ಥೀಮು ಮತ್ತು ಸಂಭಾಷಣೆಗಳು ಹಿತವಾಗಿವೆ. ಕತೆಯ ಆಶಯವನ್ನು ಮುಟ್ಟಿಸುವಲ್ಲಿ ಸಮರ್ಥವಾಗಿವೆ.

ನಿಸರ್ಗದ ವಿದ್ಯಮಾನಗಳನ್ನೂ ಕತೆಗಾರ್ತಿ ಬಳಸಿಕೊಂಡಿರುವುದು ಅವರ ಪಳಗಿದ ಕಥನಗಾರಿಕೆಗೆ ನಿದರ್ಶನ.

ಹೀಗೆ ಆರೋಗ್ಯದಾಯಕವಾಗಿರುವುದನ್ನು ಬರೆದರೆ ಮತ್ತು ಓದಿದರೆ ಸಂತೋಷ ಸಾಧ್ಯ.

ಶ್ರೀನಿವಾಸನ ಪಾತ್ರವನ್ನು ಹೇಗೆ ಬೇಕಾದರೂ ಬೆಳೆಸಬಹುದಿತ್ತು; ಇನ್ನೊಂದು ಮದುವೆಯಾಗಿಸಿ, ಆ ಪಾತ್ರವನ್ನು ಗೌಣವಾಗಿಸಿ, ಅವನ ಮೊದಲ ಹೆಂಡತಿಯ ರೋದನವನ್ನು ಕೇಂದ್ರೀಕರಿಸಿ………….ಹೀಗೆ.

ಹಾಗೆ ಮಾಡದೆ, ಬದುಕಿನ ಸಮಸ್ಯೆಗಳಿಗೆ ಜಾಣತನದ ಮತ್ತು ಎಲ್ಲರಿಗೂ ಒಪ್ಪಿತವಾಗುವ ಜೊತೆಗೆ ಮಾನವೀಯವಾಗುವ ಪರಿಹಾರಗಳನ್ನು ಚಿತ್ರಿಸಿ, ಆಪ್ತವಾಗುವಂತೆ ಮಾಡಿದ್ದಾರೆ.

ಬರೆದ ಲೇಖಕಿಗೆ ಮತ್ತು ಪ್ರಕಟಿಸಿದ ಪಂಜುವಿಗೆ ಅಭಿನಂದನೆ ಮತ್ತು ಧನ್ಯವಾದ.

– ಹೆಚ್ಚೆನ್‌ ಮಂಜುರಾಜ್‌, ಮೈಸೂರು, 9900119518

2
0
Would love your thoughts, please comment.x
()
x