Facebook

ಚೇತನ್ ನಾಗರಾಜರ ಖಾಲಿ ಕೋಣೆಯ ಹಾಡು: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಜಲ್ ಸಂಕಲನ: ಖಾಲಿಕೋಣೆಯ ಹಾಡು
ಲೇಖಕರು: ಚೇತನ್ ನಾಗರಾಳ

ಅವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಆತ್ಮೀಯ, ಪ್ರೀತಿಯ ಗೆಳೆಯ ಚೇತನ್ ನಾಗರಾಳ ಬರೆದ #ಖಾಲಿಕೋಣೆಯ_ಹಾಡು” ಗಜಲ್ ಸಂಕಲನ ಓದಿದಾಗ ನನ್ನ ಓದಿಗೆ ದಕ್ಕಿದ್ದಿಷ್ಟು…

ಶೃಂಗಾರಕಾವ್ಯ, ರಮ್ಯಕಾವ್ಯ, ರಮಣೀಯ ಕಾವ್ಯ, ಮನಮೋಹಕ ಕಾವ್ಯ ಪ್ರಕಾರ ಎಂದು ಕರೆಸಿಕೊಳ್ಳುವ ಗಜಲ್ ಚೇತನ್ ನಾಗರಾಳನ ಭಾವದ ತೆಕ್ಕೆಯಲಿ ಸಿಕ್ಕು ದಿಕ್ಕು ದಿಕ್ಕುಗಳನ್ನೇ ಸಂಚರಿಸಿ ಎಲ್ಲ ಪ್ರಕಾರದ ಭಾವಗಳನ್ನು ವಿಶೇಷವಾಗಿ, ವಿಶಿಷ್ಟವಾಗಿ ಮತ್ತು ವಿಸ್ಮಯವಾಗಿ ಕಟ್ಟಿಕೊಟ್ಟ ಬಗೆ ಇಷ್ಟವಾಗುತ್ತದೆ. ಎಲ್ಲವನ್ನು ಹೇಳುವಾಸೆ ಆಗಿದೆ ನಾಲಿಗೆಗೆ ನೂರೆಂಟು ತೊಂದರೆ ಅನ್ನೊ ಹಾಡಿನ ಸಾಲುಗಳಿಗೆ ಪ್ರತಿಯಾಗಿ ಚೇತನ್ ನ ಗಜಲ್ ಗಳು ಎಲ್ಲವನ್ನೂ ಎಲ್ಲ ರೀತಿಯಲ್ಲು ಸರಳವಾಗಿ ಮತ್ತು ಅಷ್ಟೇ ಸುಲಲಿತವಾಗಿ ಹೇಳಿಬಿಡುತ್ತವೆ.

ಗಜಲ್೧
ಕತ್ತಲಾವರಿಸಿದ ಮನಸ ಕೊಳೆಯ ತಿಳೆಯಲು ಇಂದು
ಬಾಳ ಬಾಂದಳದಿ ಬೇರೆ ಚಂದಿರ ಹುಟ್ಟಿ ಬರುವುದೇ ಬೇಡಾ

ಈ ಸಾಲುಗಳು ಮನುಷ್ಯ ಒಮ್ನೆ ಹತಾಷೆಗೆ ಒಳಗಾದನೆಂದು ತನಗೆ ತಾನು ನಿರ್ಧರಿಸಿಕೊಂಡಾಗ ಯಾವ ಉಪದೇಶವೂ ಅರಿವಾಗದು ಆಗ ಮತ್ತಷ್ಟು ಮತ್ತಷ್ಟು ನೋವನ್ನೇ ಉಣ್ಣುವ ಸಾಹಸಕ್ಕೆ ಕೈಹಾಕುತ್ತಾನೆ. ಮನಸಿನ ಕತ್ತಲೆಗೆ ಇರುವ ಚಂದಿರನಲ್ಲದೇ ಬಾಳಿಗೆ ಮತ್ತೊಬ್ಬ ಚಂದ್ರ ಬರುವುದೇ ಬೇಡಾ ಎಂಬ ನಿರಾಕರಣೆಯ ಭಾವ ಈ ಗಜಲ್ ನ ವಿಶೇಷತೆ.

ಜಗತ್ತಿನಲ್ಲಿ ಪದಗಳಿಗೆ ನಿಲುಕದ, ವರ್ಣನೆಗೆ ಸಿಲುಕದ ಜೀವವೆಂದರೆ ಅದು ಅವ್ವ ಈ ಅವ್ವನ ಬಗ್ಗೆ ಬರೆದ ಗಜಲ್ ತುಂಬಾ ಉತ್ಕೃಷ್ಟ ಮಟ್ಟದಲ್ಲಿ ಮೂಡಿಬಂದಿದ್ದು ತುಂಬಾ ಇಷ್ಟವಾಯಿತು..
ಹೊಲಿದ ಕೌದಿಯಲಿ ಚಂದಿರನನ್ನೇ ಮಲಗಿಸುವ
ಹಸಿವನ್ನೇ ನುಂಗುವ ಕೈತುತ್ತಿಡುವ
ಸೆರಗಿನಂಚಿನಲಿ ದುಗ್ಗಾಣಿಯನು ಬಚ್ಚಿಡುವ
ತಾಕತ್ತು ಅವ್ವ ಅನ್ನೊ ಅವ್ವನಿಗೆ ಮಾತ್ರ ಸಾಧ್ಯ….ಗಜಲ್೨

ಗಜಲ್೯
ಊರ ತುಂಬ ಸೂರುಕಟ್ಟಿ ರಾಜನಂತೆ ಮೆರೆದವರಲ್ಲ
ಉರಿಬಿಸಿಲಿನಲ್ಲಿ ಸೂರ್ಯನಿಗೇ ಶಾಖ ತಟ್ಟುವಂತೆ ದುಡಿದವರು ನನ್ನವರು
ದುಡಿಯುವ ವರ್ಗದವರ ಬದುಕಿನ ಒಳಹೊಕ್ಕು ಹೊರಬಂದ ಅನುಭವವನ್ನು ಕೊಡುವ ಗಜಲ್ ಇದು ಇಲ್ಲಿ ದುಡಿಯುವವರು ದುಡಿಯುತ್ತಲೇ ಇರುವರು ಅವರ ಸ್ವಾಭಿಮಾನದ ಕಿಚ್ಚಿಗೆ ಬಸಿದ ಬೆವರಿನ ಬಿಸಿ ಸೂರ್ಯನಿಗೇ ಶಾಖ ಕೊಡುವ ರೀತಿ ಅದ್ಭುತವಾಗಿದೆ.

ಕೆಲವೊಂದು ಗಜಲ್ ಗಳು ಹೆಣ್ಣಿನ ಮೇಲಾಗುವ ದೌರ್ಜನ್ಯಗಳಿಗೆ ಸಾಂತ್ವನ ಹೇಳಿದರೆ ಇನ್ನು ಕೆಲವು ಗಜಲ್ಗಳು ಹೆಣ್ಣಿನ ಶೋಷಣೆಯ ವಿರುದ್ಧ ಸಿಡಿದುನಿಲ್ಲುತ್ತವೆ.
ಕಾಣದ ಗೆಳತಿಯನು ಕಣ್ಮುಂದೆ ತಂದು ಮಾತನಾಡಿಸುವ, ತನ್ನ ಎದೆಯಾಳದ ನೋವು, ಪ್ರೀತಿ, ಹತಾಷೆ, ಇವೆಲ್ಲವುಗಳನ್ನು ಅವಳ ಮುಂದೆ ಬಿಚ್ಚಿಡುವ ಗಜಲ್ಗಳು ಹಿಡಿಸುತ್ತವೆ.

ಗಜಲ್೨೭
ಒಂದೊಮ್ಮೆ ಮದುವೆಗೋ ಇನ್ನೊಮ್ಮೆ ಮಸಣಕೋ ಹೊಮ್ಮಿಸಿದ ಸ್ವರಗಳವು ಸಾವಿರದವು/
ಸಾವೋ ನೋವೋ ನಲಿವೋ ಗೆಲುವೋ ಹೆಸರಂತೂ ಒಂದಿಹುದು ಖಸಲಿಕೋಣೆಯ ಹಾಡು

ಖಾಲಿ ಎನ್ನುವ ಪದದಲ್ಲೇ ಏನೆಲ್ಲ ಕಂಡುಕೊಂಡಿರುವ ಚೇತನ್ ಏನೇನೂ ಇಲ್ಲದ ಕೋಣೆಯಲಿ ಏನೆನೆಲ್ಲ ಇದೆ ಎಂದು ಹೇಳುವ ಪರಿ ವಿಸ್ಮಯವಾಗಿಸುತ್ತದೆ. ಹುಟ್ಟು ಸಾವುಗಳು ಮತ್ತು ಅದರ ನಡುವಿನ ಬದುಕು ಎಲ್ಲವೂ ಖಾಲಿನೇ ಆದರೂ ಅಲ್ಲಿರುವ ಎಲ್ಲದಕ್ಕೂ ತನ್ನದೇ ಆದ ಮಿತಿಯಿದೆ ಅದನ್ನರಿಯುವವರು ಅರಿಯುತ್ತಾರೆ ಅರಿಯದವರಿಗದು ಖಾಲಿಕೋಣೆಯ ಹಾಡಾಗಿ ಅಂತು ಸದಾ ಕಿವಿಗಿಳಿಯುತ್ತಿರುತ್ತದೆ. ಇಲ್ಲದೇ ಇರುವ ಸ್ಥಳದಲ್ಲಿ ಎಲ್ಲವನ್ನು ಇರಿಸುವ ಈ ಗಜಲ್ ಸಂಕಲನದ ಮುಖ್ಯ ಭೂಮಿಕೆಯಲ್ಲಿ ನಿಲ್ಲುತ್ತದೆ.

ಪ್ರೀತಿಗಾಗಿ ಹಪಹಪಿಸುವ ಚೇತನನ ಹೃದಯ ಗಜಲ್ ನಲ್ಲೊಂದು ಗಜಲ್ಹೇಳುತಿದೆ

ಗಜಲ್೩೭
ನನ್ನನ್ನು ಈ ನರಕದಲಿ ಬಿದ್ದು ಒದ್ದಾಡಲು ಬಿಡಬೇಡಾ ಸಾಕಿ
ತುಂಬಿದ ಮಧುಬಟ್ಟಲನು ಒಂದೇ ಬಾರಿ ಗಂಟಲಿಗಿಳಿಸಿ ಕೊಂದುಬಿಡು
ಪ್ರೀತಿ ಯಾವತ್ತಿಗೂ ಹೊಸ ಜನ್ಮವನ್ನೆ ಕೊಡುವದು ಅದರಡಿಯಲ್ಲಿ ಸತ್ತರೂ ಅದೊಂದು ಸ್ವರ್ಗಕ್ಕೆ ಸಮ ಎನ್ನುವ ಈ ಪ್ರೇಮಕಾವ್ಯ ಹೃದಯಕ್ಕೆ ತಟ್ಟುತ್ತದೆ, ಮುಟ್ಟುತ್ತದೆ. ಅಲ್ಲಲ್ಲಿ ಕೆಲವು ಗಜಲ್ಗಳಲಿ ಅನಾವಶ್ಯಕವಾದ ಪದಗಳು ಬಂದು ಸೇರಿದ್ದರೂ ಗಜಲ್ ಓದುವಾಗ ಅವು ನೇಪತ್ಯಕ್ಕೆ ಸರಿಯುತ್ತವೆ. ಕೆಲವು ಸುಮ್ಮನೇ ಓದಿಸಿಕೊಂಡು ಹೋದರು ಅವುಗಳ ಭಾವ ಹಿತವೆನಿಸುತ್ತದೆ. ಮತ್ತೆ ಕೆಲವು ಬರಹದ ಒತ್ತಾಯಕ್ಕೊಳಗಾಗಿ ಬರೆಯಲ್ಪಟ್ಟಿವೆಯೇನೊ ಅನ್ನುವಂತಿದ್ದರೂ ಬರಹದ ದಿಕ್ಕನ್ನು ಬದಲಿಸದೇ ನಿಲ್ಲುತ್ತವೆ.

ಹೀಗೆ ಗೆಳೆಯ ಚೇತನ್ ನಾಗರಾಳ ಮೊದಲ ಗಜಲ್ ಸಂಕಲನದಿಂದಲೇ ಒಂದು ಭವ್ಯವಾದ ಭವಿಷತ್ತಿನ ಗಜಲ್ ಕಾರರ ಹೆಸರಿನಲಿ ಮೇಲ್ಪಂಕ್ತಿಯಲಿ ನಿಲ್ಲವ ಭರವಸೆಯನ್ನು ಮೂಡಿಸುತ್ತಾನೆ.. ಮತ್ತಷ್ಟು ಮತ್ತಷ್ಟು ಗಜಲ್ ಸಂಕಲನಗಳು ಗೆಳೆಯನ ಹೃದಯದ ಕೋಣೆಯಿಂದ ಜಗದ ಖಾಲಿ ಹೃದಯಗಳನ್ನು ತುಂಬಿಸಲಿ. ಜಗದದ ಪ್ರೀತಿಯನು ಹೆಚ್ಚಿಸಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ….

ಸ್ನೇಹಿತರೇ ಮತ್ತು ಸಾಹಿತ್ಯಾಸಕ್ತರೇ….
ನನಗೆ ದಕ್ಕಿದಷ್ಟನ್ನು ನಾನು ನಿಮ್ಮೆದುರಿಗಿಟ್ಟಿರುವೆ ನೀವು ಈ ಗಜಲ್ ಸಂಕಲನವನ್ನು ಓದಿ ನಿಮಗನಿಸಿದ್ದನ್ನು ಮತ್ತು ನಿಮ್ಮ ಮುಕ್ತ ಅಭಿಪ್ರಾಯ, ಸಲಹೆಗಳನ್ನು ಗೆಳೆಯನಿಗೆ ನೀಡಿ ಎಂದು ಕೇಳಿಕೊಳ್ಳುವೆ.

ಪುಸ್ತಕ ಪ್ರತಿಗಳಿಗಾಗಿ ಸಂಪರ್ಕಿಸಿರಿ
ಪೂರ್ಣಿಮಾ ಪ್ರಕಾಶನ, ಬಸವ ಸರ್ಕಲ್ ಹತ್ತಿರ ಬೀಳಗಿ
ದೂರವಾಣಿ-೮೮೬೧೮೮೮೧೩೦.

ಪ್ರೀತಿಯಿಂದ,
ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
ಎಲ್ಲಾರ್ ಸೂರ್ಯ


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಚೇತನ್ ನಾಗರಾಜರ ಖಾಲಿ ಕೋಣೆಯ ಹಾಡು: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.”

  1. ವರದೇಂದ್ರ ಕೆ says:

    ನೀವು ತುಂಬಾ ಚೆನ್ನಾಗಿ ಅಭಿಪ್ರಾಯ ಮಂಡಿಸಿದ್ದೀರಿ. ಗಜಲ್ಗಳು ಚೆನ್ನಾಗಿವೆ ಪುಸ್ತಕ ತೊರಿಸಿಕೊಳ್ಳುವೆ.

Leave a Reply