Facebook

ಹೀಗೆ ಒದಗಿದೊಂದು ಓದು: ಅನುರಾಧ ಪಿ. ಸಾಮಗ

ಕನ್ನಡದ ಬರಹಗಳನ್ನು ಹಂಚಿ ಹರಡಿ

anuradha p samaga
ಉತ್ತರಕಾಂಡ ಓದಿ ಮುಗಿಸಿದ್ದಾಗಿತ್ತು.  ಕತೆಯೊಂದಕ್ಕೆ ಎದುರಾದಾಗಲೆಲ್ಲ ಪಾತ್ರಗಳಿಂದ, ಅವುಗಳ ಪಾಡುಗಳಿಂದ ಅಂತರ ಕಾಯ್ದುಕೊಂಡು ಸಾಗುವುದು ಇಲ್ಲಿಯವರೆಗೂ ಸಾಧ್ಯವಾಗಿಲ್ಲದೆ, ಒಮ್ಮೊಮ್ಮೆ ಆ  ಮನಸುಗಳ ಒಳಹೊಕ್ಕು, ಇನ್ನೊಮ್ಮೆ ಅವುಗಳನ್ನು ಒಳಗಿಳಿಸಿಕೊಂಡು ಅಂತೂ ಕೊನೆಯ ಪುಟಗಳ ಕಡೆಗೆ ಬರುತ್ತಾ ಪಾತ್ರಗಳು ನಡಕೊಂಡ ರೀತಿಯನ್ನು ಸಾಮಾನ್ಯ ಮನುಷ್ಯರ ಬಾಳ್ವೆಯಂತೆಯೇ ಬಿಂಬಿಸಿದ್ದರ ಪರಿಣಾಮವಾಗಿ ಉಮ್ಮಳಿಸಿ ಬಂದು ಢಾಳಾಗಿ ಉಳಕೊಂಡದ್ದೆಂದರೆ  ಎಲ್ಲೆಡೆ ಮುಖ ಮಾಡಿದ  ಜೀವಪ್ರೀತಿ! ಬಹುಶಃ ಕತೆಗಾರನೊಬ್ಬನಿಗೆ ತನ್ನ ಬರವಣಿಗೆಯ ಮೂಲಕ ಕತೆಗೆದುರಾದ ಮನಸಿನಲ್ಲಿ ಜೀವನಪ್ರೀತಿ, ಜೀವಪ್ರೀತಿಗಳನ್ನು ಫಳ್ಳಂತ ಮಿನುಗಿಸುವುದು ಸಾಧ್ಯವಾದರೆ ಅದು ಬರವಣಿಗೆಯ ಸಾರ್ಥಕತೆಯೇ ಅಲ್ಲವೇ?  

ತನ್ನ ಜೀವನಕಥಾನಕವೇ ಪ್ರಮುಖ ಭಾಗವಾಗಿರುವ ರಾಮಾಯಣವನ್ನು ಸೀತೆ ಹೀಗೆಲ್ಲ ಪರಿಭಾವಿಸಿರಬಹುದಾ ಅನ್ನುವ ಸಾಧ್ಯತೆಯೊಂದನ್ನ ಬರಹವಾಗಿಸಿರುವ ಲೇಖಕರು ಬಹುಶಃ ಹೆಚ್ಚಿನವರಿಗೆ “ಹೌದು. ಸೀತೆಗೆ  ಹೀಗಲ್ಲದೆ ಇನ್ನೇನು ಅನಿಸಿದ್ದೀತು?” ಅಂತ ಖಚಿತವಾಗಿ ಭಾಸವಾಗುವಷ್ಟು ಸಹಜತೆಯನ್ನ ಕತೆಯುದ್ದಕ್ಕು ಹರಿಯುವ ಅವಳ ದೃಷ್ಟಿಕೋನದಲ್ಲಿ ಮತ್ತು ಅದರ ಅಭಿವ್ಯಕ್ತಿಯಲ್ಲಿ ತೋರಿಸಿದ್ದಾರೆ. 
 
ಓದು ಅಥವಾ ಯಾವುದೇ ಅಭಿವ್ಯಕ್ತಿಯೊಂದು ಅದಕ್ಕೆ ಸಾಕ್ಷಿಯಾಗುವ ಒಬ್ಬೊಬ್ಬರಿಗೂ ದಕ್ಕುವ ರೀತಿ ಒಂದೊಂದು ತೆರನಾದದ್ದು.  ಕಾಲದೇಶಗಳೇ ಅಲ್ಲದೆ ಇನ್ನೂ ಅನೇಕ ಸಂದರ್ಭಗಳಿಗೆ ತಕ್ಕಂತೆ ಹುಟ್ಟಿಕೊಳ್ಳುವ, ಬೆಳೆಯುವ, ಹಾಗೇ ಉಳಕೊಳ್ಳುವ ಅಥವಾ ಬದಲಾಗುವ, ಒಮ್ಮೊಮ್ಮೆ ಅಳಿದೇ ಹೋಗುವ ಈ ಮನುಷ್ಯಸಂಬಂಧವೆನ್ನುವದ್ದು ಇಂಥ ಅಭಿವ್ಯಕ್ತಿಗಳಲ್ಲೆಲ್ಲ ಒಂದು ಸೋಜಿಗವಾಗಿ ಕಾಣಿಸುವುದು ಮತ್ತೆ ಆ ಸೋಜಿಗದೊಳಗೆಯೇ ಮನುಷ್ಯ ಮಾನಸಿಕವಾಗಿ  ಹೊಕ್ಕುತ್ತಾ ಹೋಗುವುದು ಕೂಡಾ  ಆ ಕಲೆಯನ್ನ ಅವನು ಒಳಗೊಳ್ಳುವಿಕೆಯ ಒಂದು ರೀತಿ. ಈ ತರಹದ ನೋಟದಲ್ಲಿ ಆ ಅಭಿವ್ಯಕ್ತಿಯ ಉದ್ದೇಶ, ಸಮಾಜದ ಮೇಲೆ ಅದರಿಂದಾಗಬಹುದಾದ ಪರಿಣಾಮ, ಕಲೆಗೆ, ಅದರ ಸಾಂಪ್ರದಾಯಿಕತೆಗೆ ಸಂಬಂಧ ಪಟ್ಟ ಹಾಗೆ ಮತ್ತು ಸಾಮಾಜಿಕವಾಗಿ ಆ ಅಭಿವ್ಯಕ್ತಿಯ ಬದ್ಧತೆ- ಈ ಎಲ್ಲ ವಿಷಯಗಳು ಬಹುಶಃ ಅಷ್ಟಾಗಿ ಕಾಡವು. ಸಾಹಿತ್ಯದ ಉದ್ದೇಶದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಇತ್ತೀಚೆಗೆ ವೇದಿಕೆಯೊಂದರಲ್ಲಿ ಎಸ್ ಎಲ್ ಭೈರಪ್ಪನವರು ಹೇಳಿದ ಹಾಗೆ ಕಲಾಪ್ರಕಾರವೊಂದಕ್ಕೆ ರಸೋತ್ಕರ್ಷವೇ ಮುಖ್ಯ ಗುರಿ ಅನ್ನುವ ಸಿದ್ಧಾಂತವನ್ನು ಮೈಗೂಡಿಸಿಕೊಂಡ  ಕಲೆಯ ಕಾಣ್ಕೆಯೆಂದರೆ ಇದೇ ಇದ್ದೀತು.
 
ನಾನು ಉತ್ತರಕಾಂಡ ಓದಿ ಮುಗಿಸಿದಾಗ ಸೀತೆಯನ್ನು ಹುಡುಕುತ್ತಾ ರಾಮ ಸಾಗುವ ಹಾದಿಯಲ್ಲಿ ಇದುವರೆಗೆ ತಾನು ಕಂಡರಿಯದ ರಾಮನನ್ನು ತನ್ನಷ್ಟಕ್ಕೆ ಆರಾಧಿಸುತ್ತಾ, ಅವನಿಗೊದಗಿದ ಕುತ್ತನ್ನ ನಿವಾರಿಸಲು ತನ್ನ ಶಕ್ತಿಗೆ ಮೀರಿದ ಪ್ರಯತ್ನಕ್ಕೊಡ್ಡಿಕೊಂಡು ಪ್ರಾಣವನ್ನೇ ತ್ಯಜಿಸಿದ ಪ್ರೇಮಮಯಿ ಜಟಾಯು ಮತ್ತು ಕಪಿಸೈನ್ಯದ ರಾಮನಾಮವೆನ್ನುವ ಮನೋಬಲದಿಂದಲೇ ಕಲ್ಲುಗಳು ನೀರ ಮೇಲೆ ತೇಲಿ ಕಟ್ಟಲ್ಪಟ್ಟಿತು ಅನ್ನಲಾಗುವ ರಾಮಸೇತು- ಇವುಗಳನ್ನೂ ಪ್ರಸ್ತಾಪಿಸಿದ್ದರೆ ಚೆನ್ನಾಗಿತ್ತು ಅನಿಸಿದ್ದು ಹಾಗೂ ಸುಗ್ರೀವ ತಾರೆಯರ ವ್ಯಕ್ತಿತ್ವ ಚಿತ್ರಣ ತೀರಾ ನಾವು ಕೇಳಿದ್ದಕ್ಕೆ ನೂರೆಂಬತ್ತು ಡಿಗ್ರಿ ವ್ಯತಿರಿಕ್ತವಾಗಿರುವುದು ಸ್ವಲ್ಪ ಅಸಹಜವೆನಿಸಿದ್ದು ಬಿಟ್ಟರೆ ಉದ್ದಕ್ಕೂ ಘಟನಾವಳಿಗಳು, ಭಾವಸರಣಿಗಳು ಅತ್ಯಂತ ಸಹಜವಾಗಿ ಅನಾವರಣವಾಗುತ್ತಾ ಕತೆಯನ್ನು ಸಂಭ್ರಮಿಸುವ ಓಘಕ್ಕೆ ಎಲ್ಲೂ ತಡೆಯಾಗಲಿಲ್ಲ. 

ಕಾದಂಬರಿಯ ಬಗೆಗೆ ಕೆಲವು ಬರಹಗಳನ್ನು ಓದಿದೆ. ಬಹಳ ಕಡೆ ಕಂಡುಬಂದ ಅಭಿಪ್ರಾಯವೆಂದರೆ ಕಾದಂಬರಿಯ ಎಲ್ಲ ಧನಾತ್ಮಕ ಅಂಶಗಳ ಹೊರತಾಗಿಯೂ ಜೀವನಧರ್ಮಕ್ಕೆ ಆಧಾರ, ಆದರ್ಶವೆನಿಸುವ ಪುರಾಣವೊಂದನ್ನು ಸಾಮಾನ್ಯೀಕರಿಸುವುದು ಅಥವಾ ಪುರಾಣಭಂಜನೆ ಎಷ್ಟರ ಮಟ್ಟಿಗೆ ಉಚಿತ ಅನ್ನುವ ಪ್ರಶ್ನೆ. ಓದಿ ಮುಗಿಸುವಾಗ ಪ್ರಶ್ನೆ ಹುಟ್ಟುವುದು, ಪ್ರಶ್ನಾತೀತವಾಗಿ ಒಪ್ಪಿಗೆಯಾಗುವುದು ಎಲ್ಲವೂ ಅವರವರ ಭಾವಕ್ಕೇ ಎಂಬುದು ಹೌದಾದರೂ ನಮಗೆ ಮುದವಿತ್ತ ವಿಷಯವೊಂದರ ಉಚಿತಾನುಚಿತತೆಯ ಮಾತು ಬಂದಾಗ ನಮಗೇ ಗೊತ್ತಿಲ್ಲದೆ ಅಲ್ಲಿ ಹೆಚ್ಚು ಭಾಗವಹಿಸುತ್ತೇವೋ ಏನೋ! ಹಾಗೆ  ಪುರಾಣಭಂಜನೆ ಅಂದರೇನೆಂದು ತಿಳಿದುಕೊಳ್ಳಲು ಯತ್ನಿಸಿದೆನಾದರೂ ಅಷ್ಟಾಗಿ ಅರ್ಥವಾಗಲಿಲ್ಲ. ಬಹುಶಃ ಮೂಲರಾಮಾಯಣವೆನ್ನುವದ್ದು ರಾಮ-ಸೀತೆ, ಕೈಕೇಯಿ-ಮಂಥರೆ, ರಾವಣ-ಹನುಮಾನರಿಂದ ಹಿಡಿದು ಕಪಿಸೈನ್ಯದ ಒಂದೊಂದು ಕಪಿ ಹಾಗೂ ರಾಮನ ಪ್ರೀತಿಯ ಸವರುವಿಕೆಯಿಂದ ಬೆನ್ನಲ್ಲಿ ಮೂರು ನಾಮ ಬರೆಯಿಸಿಕೊಂಡಿತೆನಲಾಗುವ ಅಳಿಲಿನವರೆಗೂ ಪಾತ್ರಗಳು ಹೆಣೆಯುವ ಘಟನಾವಳಿಯ  ಹೊರನಿಂತು ನೋಡಲು ಅನುವು ಮಾಡಿಕೊಡುವಂಥ ಸಮಗ್ರ ಓದನ್ನು ಒದಗಿಸುವ ಮಹಾಕಾವ್ಯವಾದರೆ, ಉತ್ತರಕಾಂಡವು ಅದರೊಳಗಿನ ಸೀತೆ ಅನ್ನುವ ಒಂದೇ ಒಂದು ಪಾತ್ರ ಅವಷ್ಟೂ ಆಗುಹೋಗುಗಳನ್ನು ಕಂಡ ಪರಿಯನ್ನು ಬಣ್ಣಿಸುವ ಪಾರ್ಶ್ವಿಕ ನೋಟವನ್ನು ಒದಗಿಸುವ ಓದಿಗೆ ಅಂತಲೇ  ಬರೆಯಲ್ಪಟ್ಟ ಕಾದಂಬರಿಯಾಗಿದೆ. ಹಾಗಾಗಿ ಇಲ್ಲಿ ಸಾಮಾನ್ಯೀಕರಣವೋ, ಪುರಾಣ ಭಂಜನೆಯೋ ಕಾಣಿಸುತ್ತಿದೆಯೆಂದಾದರೆ, ಅದು ಲೇಖಕರು ತೆಗೆದು ಸ್ವಾತಂತ್ರ್ಯ ಅನ್ನುವುದಕ್ಕಿಂತಲೂ ಆ ಒಂದು ಪಾತ್ರ ಆ ಕಾದಂಬರಿ ಮೂಡುವ ಹೊತ್ತು ಲೇಖಕರ ಮನಸಿನಲ್ಲಿ ಗಳಿಸಿಕೊಂಡ ಸಹಾನುಭೂತಿಯ ಪರಿಣಾಮವೆನ್ನಬಹುದು. 

ಕೆಲದಿನಗಳ ಹಿಂದೆ ಢಕ್ಕೆಬಲಿ ಅನ್ನುವ ನಾಗಾರಾಧನೆಯ ಆಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶವಾಗಿತ್ತು. ನಮಗೆ ಬಾಲ್ಯದಲ್ಲಿ ತುಂಬ ತಲ್ಲೀನತೆ, ರೋಚಕತೆ ತಂದುಕೊಡುತ್ತಿದ್ದ ಆಚರಣೆಯಿದು. ಹೂವು, ಹಣ್ಣು, ಎಲೆ ಮುಂತಾದುವುಗಳಿಂದ ಢಾಳಾಗಿ ಅಲಂಕರಿಸಲ್ಪಟ್ಟ ವರ್ಣಮಯ ಮಂಟಪದೊಳಗೆ ನಡೆಯುವ ಹಾಡು, ವಾದ್ಯಸಂಗೀತ, ಜಾನಪದ ಶೈಲಿಯ ನೃತ್ಯ ಎಲ್ಲವನ್ನೂ ಒಳಗೊಂಡ ಒಂದು ರೀತಿಯ ವಿಜೃಂಭಣೆ! ದೊಡ್ಡವರ ಉತ್ಸುಕತೆ ನೋಡಿಯೇ ಪುಟಾಣಿಗಳು ಯಾವಾಗ ಶುರುವಾದೀತೋ ಅಂತ ಕಾತುರರಾಗಿದ್ದರು. ಶುರುವಾಗಿ ಮುಗಿದೂ ಆಯಿತು. “ತುಂಬಾ ಇಷ್ಟ ಆಯಿತು. ಆದರೇ…” ಅಂತ ಶುರುವಿಟ್ಟುಕೊಂಡ ಮಕ್ಕಳ ಬಾಯಲ್ಲಿ ನಾವು ಮಕ್ಕಳಾಗಿದ್ದಾಗ ಇಂಥ ಆಚರಣೆಗಳಲ್ಲಿ ಪಾಲ್ಗೊಂಡಾಗ ನಮ್ಮ ಮನಸಲ್ಲಿ ತಪ್ಪಿಯೂ ಇಣುಕದಿದ್ದ ಅದೆಷ್ಟು ಪ್ರಶ್ನೆಗಳು! ಹಿರಿಯರೊಬ್ಬರು ಯಾವಾಗಲೂ ಹೇಳುತ್ತಿದ್ದರು- “ಈಗಿನ ತಲೆಮಾರು ಹುಟ್ಟಿನಾರಭ್ಯ ಸೇವಿಸುತ್ತಾ ಬರುತ್ತಿರುವ ಗಾಳಿ-ನೀರುಗಳೇ ಹೇಗಾಗಿ ಹೋಗಿದ್ದಾವೆಂದರೆ, ಕಣ್ಣೆದುರಿನ ಯಾವುದೇ ನೋಟವನ್ನಾದರೂ, ಬಗೆದು, ಪ್ರಶ್ನೆಗಳ ಮೂಲಕ ಒಳಗೆ ಸಾಗಿ, ಅಲ್ಲಿ ತಾನು ಏನನ್ನು ನೋಡುವುದು ಸಾಧ್ಯವಾಯಿತೋ ಅದನ್ನಲ್ಲದೆ ಇನ್ಯಾವುದನ್ನೂ ಅವರು ಬಡಪೆಟ್ಟಿಗೆ ಒಪ್ಪಲಾರರು” ಅಂತ.  ನಿಜವೇ!  “ಇದೆ ಎಂದು ಮೊದಲು ತಿಳಿ. ಇರುವುದನ್ನು ಆಮೇಲೆ ಇಳಿದುಕೊಳ್ಳಬಹುದು” ಅನ್ನುವದ್ದು ಒಂದು ಉಪನಿಷದ್ವಾಕ್ಯವಂತೆ. ಇದು ಇಂದಿಗೆ ಒಂದು ಶಕ್ಯ ಸಂಗತಿಯಾಗಿ ಉಳಿದಿಲ್ಲ. ನಾಗದರ್ಶನದ ಕೊನೆಯಲ್ಲಿ ತಮ್ಮತಮ್ಮ ದುಗುಡದುಮ್ಮಾನಗಳನ್ನ ನಾಗಪಾತ್ರಿಯ ಮುಂದೆ ತೋಡಿಕೊಳ್ಳುತಿದ್ದವರನ್ನು ನೋಡುತ್ತಾ “ನಮ್ಮ ಕಷ್ಟಗಳನ್ನು ನಾವು ಎದುರಿಸಬೇಕು, ಇನ್ಯಾರ ಮೇಲೂ ಅವಲಂಬಿತರಾಗಬಾರದು, ಪ್ರಯತ್ನಕ್ಕೆ ತಕ್ಕ ಫಲವಿರುತ್ತದೆ, ಅದೂ ಕಣ್ಣಿಗೆ ಕಾಣದ ವಿಧಿ, ದೈವ, ಅದೃಷ್ಟಗಳನ್ನು ನಂಬಿ ಕೂರಬಾರದು, ಪವಾಡಗಳನ್ನ ನಮಗಾಗಿ ನಡೆಸಲು ಯಾರೂ ಬರುವುದಿಲ್ಲ, ಅದು ಸಾಧ್ಯವಿದ್ದರೆ ನಮ್ಮ ಪ್ರಯತ್ನದಿಂದ ಮಾತ್ರ.” ಅಂತೆಲ್ಲ ಎಲ್ಲೆಡೆ ತಾವು ಕೇಳಿಸಿಕೊಳ್ಳುವ ಈ ಮಾತುಗಳನ್ನೇ ಮತ್ತೆ ಮತ್ತೆ ಮಕ್ಕಳು ಹೇಳತೊಡಗಿದಾಗ ನಾನಂದೆ- “ ಶಾಲೆಯಲ್ಲಿ ಬಿದ್ದು ಗಾಯವಾದಾಗ ಯಾರೋ ಮದ್ದು ಹಚ್ಚಿ, ಉರಿ ಕಮ್ಮಿಯಾಗಿರುತ್ತದೆ, ಸಂಜೆ ಮನೆಗೆ ಬರುವಷ್ಟಟರಲ್ಲಿ ಗಾಯ ಮರೆತೂ ಹೋಗಿರುತ್ತದೆ. ಆದರೆ ಅಮ್ಮನನ್ನ ನೋಡಿದ ಕೂಡಲೆ ಗಾಯದ ಉರಿ, ನೋವು ಮರುಕಳಿಸಿದಂತಾಗಿ ಕಣ್ಣಲ್ಲಷ್ಟು ನೀರಿನ ಜೊತೆ ಅದರ ಕತೆಯೆಲ್ಲ ಹೇಳುತ್ತೀರಿ. ಅಮ್ಮ ಕೈಯ್ಯಲ್ಲಿ ಸವರಿ ಮುತ್ತಿಟ್ಟು, “ಹೋ…ಯಿತು” ಅಂದಾಗಲೇ ಮನಸಿಗೆ ಸಮಾಧಾನ ನಿಮಗೆ. ಹೌದು ತಾನೇ? ಹಾಗೇ, ಇಲ್ಲಿಯೂ ಸಂಕಷ್ಟ ಪರಿಹಾರಾರ್ಥವಾಗಿ ಮುನ್ನಡೆಯುವವರು ನಾವೇ. ಆದರೆ ನಡುವೊಮ್ಮೊಮ್ಮೆ ಇಂಥ ಆಚರಣೆಗಳಲ್ಲಿ “ಎಲ್ಲ ಸರಿಹೋಗುತ್ತದೆ” ಎಂಬ ಒತ್ತಾಸೆಯೊಂದು ಸಿಕ್ಕಲಿ ಅಂತ ಮನಸುಗಳು ಬಯಸುತ್ತವೆ. ಅದನ್ನು ತಾವು ನಂಬುವ ದೈವದಿಂದ ಇವರೆಲ್ಲ ಪಡೆಯುತ್ತಿದ್ದಾರೆ ಅಷ್ಟೇ. ಇಲ್ಲಿ ಅವರವರ ಭಾವಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಪಡೆದುಕೊಂಡೇ ಹೋಗುತ್ತಾರೆಯೇ ವಿನಃ ಕಳಕೊಳ್ಳುವುದು ಏನೂ ಇಲ್ಲ. ನಂಬಿದವರಿಗೆ ಒತ್ತಾಸೆ ಸಿಕ್ಕಿದರೆ, ನಂಬದವರಿಗೆ ಮನೋರಂಜನೆಯಂತೂ ಸಿಕ್ಕೇ ಸಿಕ್ಕುತ್ತದೆ, ಹೌದಲ್ಲವೇ?” ಇಷ್ಟು ಹೇಳಿದಾಗ ತುಸುಮಟ್ಟಿಗೆ ಆ ಆಚರಣೆಯ ಉದ್ದೇಶ-ಪ್ರಯೋಜನಗಳನ್ನು ಅವರು ಒಪ್ಪಿದಂತನಿಸಿತು. ಇಲ್ಲಿ ಕೇಳಿದ್ದನ್ನೆಲ್ಲ ಕೊಡುವ ಅತಿಶ್ರೇಷ್ಠ ಶಕ್ತಿಯೆಂದು ಪುರಾತನ ಕಾಲದಿಂದ ನಂಬಲ್ಪಡುವ ನಾಗನನ್ನು ಕೇವಲ ಒತ್ತಾಸೆಯೆಂದೋ, ನಾಗನೇ ಮೈದುಂಬಿ ಬರುತ್ತಾನೆ ಅನ್ನಲಾಗುವ ಆ ನೃತ್ಯವನ್ನು ಮನೋರಂಜನೆಯ ಸರಕಾಗಿಸಿಯೋ ನಾನು ಮಕ್ಕಳೆದುರು ಸಾಮಾನ್ಯೀಕರಿಸಿದ್ದಲ್ಲ; ಬದಲಿಗೆ  ಮಕ್ಕಳ ಮನಸಿಗೂ, ಸಂಸ್ಕೃತಿಯ ಚಂದದೊಂದು ಅಂಗವಾದ ಈ ಆಚರಣೆಗೂ ನಡುವೆ ಪ್ರಶ್ನೆಗಳು ತಂದಿಡಬಹುದಾಗಿದ್ದ ಅಂತರವನ್ನ ತುಸು ಕಮ್ಮಿ ಮಾಡಿದ್ದು ಅಷ್ಟೇ.  

ಓಶೋ ಹೇಳುತ್ತಾರೆ “ನಂಬಿಕೆಯ ಜೊತೆಗೆ ಪ್ರಶ್ನೆಗಳಿರುತ್ತವೆ. ನಂಬಿಕೆಯ ಮುಂದಿನ ಹಂತವಾದ ಭರವಸೆ ಒಪ್ಪಿಗೆಗೆ, ಸಮ್ಮತಿಗೆ, ಸಂಪೂರ್ಣ ಶರಣಾಗತಿಗೆ ಕೊಂಡೊಯ್ಯುತ್ತದೆ ಮತ್ತು ಶರಣಾಗತಿಯೇ ತುಂಬುಜೀವನಪ್ರೀತಿ ಹೊಂದುವ ಸ್ಥಿತಿ. ಭರವಸೆ ಸ್ವಯಂಭುವಾಗಿಯೂ ಸಿಕ್ಕಬಹುದು ಅಥವಾ ಪ್ರಶ್ನೆಗಳ ಹಾದಿಯ ಕೊನೆಯಲ್ಲೂ ಸಿಕ್ಕಬಹುದು. ಭರವಸೆಯೆಡೆ ಸಾಗುವುದು ಅಷ್ಟು ಸುಲಭವಲ್ಲ.”  ಅಪ್ಪ-ಅಮ್ಮನಿಗಿಂತ, ಹಿರಿಯರೆನಿಸಿಕೊಂಡವರಿಗಿಂತ ವೇಗವಾಗಿ, ಇನ್ನಷ್ಟು ನಿಖರವಾಗಿ ಪ್ರಪಂಚದ ದಿನೇದಿನೇ ಬೆಳವಣಿಗೆಗಳನ್ನ ಬೆರಳತುದಿಯಲ್ಲೇ ತಂದಿಡುವ ಆವಿಷ್ಕಾರಗಳ ಸಹಚರ್ಯದಲ್ಲಿ ಬೆಳೆಯುತ್ತಿರುವ ಇಂದಿನ ಮನಸುಗಳಲ್ಲಿ ಚಿಕ್ಕಂದಿನಲ್ಲಿ ನಮಗೆ ಅಪ್ಪ-ಅಮ್ಮನ ಮೇಲೆ ಅದರಷ್ಟಕ್ಕೆ ಇರುತ್ತಿದ್ದ ಭರವಸೆ ಹಾಗೇ ಹುಟ್ಟಲಾರದು. ಆದರೆ, ಭರವಸೆ ಅನ್ನುವದ್ದೂ ಬದುಕಿಗೆ ವಿಕಾಸ-ಅಭಿವೃದ್ಧಿಗಳಷ್ಟೇ ಮುಖ್ಯ!  ಪ್ರಶ್ನೋತ್ತರದ ಹಾದಿಯಲ್ಲಿ ಅಭಿವೃದ್ಧಿಯ ಕಡೆಗೆ ಸಾಗುವಾಗ ನಂಬುವ ಅಥವಾ ನಂಬಲಾರದ ಘಟ್ಟಗಳಿಂದಾಚೆಗೆ ತಲುಪುವುದು ಸಾಧ್ಯವೇ ಆಗದಿರುವ ಈ ತಲೆಮಾರಿನ ಮನಸುಗಳಿಗೆ  ಭಾರತೀಯ ಜೀವನಾಧಾರವಾದ ಸಂಸ್ಕೃತಿಯ ಪರಿಚಯ ಮಾಡಿಸುವಾಗ, ಮೊದಲ ಹಜ್ಜೆಯಲ್ಲೇ ಕಣ್ಮುಚ್ಚಿ ಭರವಸೆ ಹೊಂದುವ ಜರೂರನ್ನು ಬೇಡುವ ಹಾದಿ ಸರಿಹೋಗಲಿಕ್ಕಿಲ್ಲ. ಬದಲಿಗೆ ನಂಬಿಕೆಯೊಂದರ ಹಿನ್ನೆಲೆಯಲ್ಲಿರಬಹುದಾದ ಸಹಜತೆಯನ್ನ ವಿವರಿಸುತ್ತಾ ಹೋಗಿ ಅದನ್ನು ಭರವಸೆಗೆ ಪಾತ್ರವಾಗಿಸುವುದು ಉಚಿತವೆನಿಸೀತೇನೋ!

ರಾಮನನ್ನೋ, ಸೀತೆ-ಲಕ್ಷ್ಮಣರನ್ನೋ ದೇವರೆಂದುಬಿಟ್ಟಾಗ ಅವರ ನಡೆಗಳಲ್ಲಿ ಕಾಣಬಹುದಾದ ಸಣ್ಣಪುಟ್ಟ ಒಪ್ಪಲಾಗದ ವಿಷಯಗಳೂ ಬಹುದೊಡ್ಡವೆನಿಸುತ್ತವೆ. ದೇವರಾಗಿ ಅವರು ಹಾಗೆ ಮಾಡಬಾರದಿತ್ತು ಅನಿಸುತ್ತದೆ. ಹಾಗಾದಾಗ ಆ ವ್ಯಕ್ತಿತ್ವಗಳೂ, ಅವರಲ್ಲಿನ ಉಳಿದ ಎಷ್ಟೆಷ್ಟೋ ದೊಡ್ಡ ಆದರ್ಶಗಳೂ ಮನಸಲ್ಲಿ ಮಂಕಾಗುತ್ತ, ದೂರಾಗುತ್ತಲೇ ಸಾಗುತ್ತವೆ. ಪುರಾಣಗಳು, ಪುರಾಣಪುರುಷರು ಅನುಕರಣೀಯರು ಅನಿಸುವ ಬದಲು ಎಟುಕಲಾರದವರು, ಅವರದು ಎಟುಕಲಾರದ ಆದರ್ಶಗಳು ಅನಿಸೀತು.  ಕೇಳಿ ಆನಂದಿಸಿ, ಪೀಠದಲ್ಲಿಟ್ಟು ಪೂಜಿಸುವುದಕ್ಕಷ್ಟೇ ಅಂತಾಗಿ ಉಳಿದಾವು. ಬದಲಿಗೆ ಇಲ್ಲಿ ಕಾಣಿಸುವಂತೆ ಎಲ್ಲರೂ ನಮ್ಮ ಹಾಗೆ ಬಲ ಹಾಗೂ ಬಲಹೀನತೆಗಳುಳ್ಳ ಮನುಷ್ಯರೇ. ಆದರೆ ಸ್ವಲ್ಪ ನಮಗಿಂತ ಭಿನ್ನವಾದ ಕೆಲ ವಿಶೇಷತೆಗಳಿರುವವರು ಅಂತನಿಸಿದಾಗ, ರಾಮನ ಹತ್ತುಹಲವು ಆದರ್ಶಗಳು, ಲಕ್ಷ್ಮಣನ ಭ್ರಾತೃಪ್ರೇಮ, ರಾಮನೆಂಬ ಹನುಮನ ಭರವಸೆ, ಸೀತೆಯ ರಾಮಪ್ರೀತಿ, ಕಪಿಸೈನ್ಯದ ಅಸಾಧಾರಣ ಮನೋಶಕ್ತಿ, ಇನ್ನೂ ಹಲವು ಇಂಥ ವ್ಯಕ್ತಿತ್ವವಿಶೇಷಗಳು ಅತಿಮಾನುಷವೆನಿಸದೆ, ನಮ್ಮಿಂದಲೂ ಸಾಧ್ಯವಾದಾವು ಅಂತನ್ನಿಸೀತು. ಹಾಗಾಗಿ ರಾಮರಾಜ್ಯವೆಂಬುದೊಂದು ಕಲ್ಪನೆಯಷ್ಟೇ ಆಗಿ ಉಳಿಯದೆ ಆ ಕಡೆಗೆ ಕೆಲ ಹೆಜ್ಜೆ ಹುಟ್ಟಿಯಾವು. ಈ ನಿಟ್ಟಿನಲ್ಲಿ ಉತ್ತರಕಾಂಡವೆನ್ನುವ ಕಾದಂಬರಿ ರಾಮಾಯಣವನ್ನು, ಅದರ ಪಾತ್ರಗಳ ನಿಲುವು ಧೋರಣೆಗಳನ್ನು ಇನ್ನೂ ಹೆಚ್ಚು ಬದುಕಿಗೆ ಹತ್ತಿರಾಗಿಸೀತು, ಪೂರಕವಾಗಿಸೀತು ಅಂತನಿಸುತ್ತದೆ.  
 


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply