Facebook

ಅಗೋಚರ: ಪ್ರಶಸ್ತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

prashasti

ಏಳ್ಬೇಕು ಅಂತಷ್ಟೊತ್ತಿಗೆ ಏಳ್ಬೇಕು, ಮಲಗ್ಬೇಕು ಅಂದಷ್ಟೊತ್ತಿಗೆ ಮಲಗಿ ಬಿಡ್ಬೇಕು. ಈ ಫೇಸ್ಬುಕ್ಕು,ವಾಟ್ಸಾಪು, ಜೀಮೆಲುಗಳನ್ನೆಲ್ಲ ಡಿಲಿಟ್ ಮಾಡಿ ಎಲ್ಲಾದ್ರೂ ದೂರ ಹೋಗಿ ಬಿಡಬೇಕು ಗುರೂ ಅಂತಿದ್ದವ ಅದರಲ್ಲೇ ಮೂರೊತ್ತೂ ಮುಳುಗಿರುತ್ತಿದ್ದ. ರಾಶಿ ರಾಶಿ ಪುಸ್ತಕಗಳ ಗುಡ್ಡೆ ಹಾಕಿಕೊಂಡವ ಕ್ಲಾಶ್ ಆಫ್ ಕ್ಲಾನ್ಸು, ಫ್ಯೂಚರ್ ಫೈಟಗಳಲ್ಲಿ ಕಳೆದುಹೋಗಿರುತ್ತಿದ್ದ. ಆಟಗಳಲ್ಲಿ ಸಿಗುವ ಕಾಲ್ಪನಿಕ ಕಾಸ ಹಿಂದೆ ಆತನ ಇಂದು ಕಾಣದಷ್ಟು ಕುರುಡನಾಗಿದ್ದವ ಒಮ್ಮೆ ಇದನ್ನೆಲ್ಲಾ ಪಟ್ಟನೆ ಬಿಟ್ಟು ಎಲ್ಲೋ ಮರೆಯಾಗಿಬಿಡುವನೆಂದು ಯಾರೂ ಎಣಿಸಿರಲಿಲ್ಲ.

ಬೆಳಗಿಂದ ರಾತ್ರೆಯವರೆಗೂ ಆಫೀಸಲ್ಲೇ ಕೊಳೆಯುತ್ತಾನೆ ಎಂದು ಹೀಗಳೆಯೋ ಹುಡುಗ ಹೊರಬಂದರೆ ಅನುಭವಿಸೋ ಒಂಟಿತನವಾಗಲೀ, ಫೇಸ್ಬುಕ್ಕಿನ ಪ್ರೊಫೈಲುಗಳಲ್ಲೇ ಕಾಣೋ ಸುಂದರ ಪ್ರಪಂಚ, ಮಾತುಕತೆ ಹೊರಗೆ ಕಾಣದ ಕೊರಗಾಗಲೀ ಹೊರಗಿನನವರಿಗೆ ಕಾಣುತ್ತಿರಲಿಲ್ಲ. ಅರ್ಧಘಂಟೆಗಾದರೂ ಒಮ್ಮೆ ಹಸಿರಾಗೋ ಅವನ ಫ್ರೊಫೈಲಿನ ಲೈಟು ಆರು ದಿನವಾದರೂ ಬೆಳಗದ ಬಗ್ಗೆ ಅವನ ಕಾಲ್ಪನಿಕ ಗೆಳೆಯರ್ಯಾರಿಗೂ ಕಂಡಿರಲಿಲ್ಲ.

ಮಾತು ಮಾತಿಗೊಂದು ಲಿಂಕು, ಹಾಸ್ಯ ಅಪಹಾಸ್ಯಗಳ ಹಿಂದೈದರ್ಥ ಮಾಡುವವರಿಗೆ ನಗುತ್ತಿದ್ದವರ ಹಿಂದಿನ ನೋವು ತಿಳಿಯುತ್ತಿರಲಿಲ್ಲ. ಹಾಸ್ಯಕ್ಕೊಳಗಾಗುತ್ತಿರುವವನ ಚಾರಿತ್ರ್ಯವಧೆಯಾಗುತ್ತಿರುವ ಅನುಭವವೂ ಇರಲಿಲ್ಲ. ಮಾತಿನಿಂದಾಗೋ ಅಪಾರ್ಥಗಳ ಬದಲು ಸುಮ್ಮನಿರೋದೇ ಮೇಲೆನ್ನುವವ ತಮ್ಮಿಂದಲೇ ಬೇರಾಗೋ ಸುಳಿವೂ ದಕ್ಕಿರಲಿಲ್ಲ. ಕಣ್ಣೆದುರು ಕಾಣೋದನ್ನೇ ಮತ್ತೊಂದಾಗಿ ಕಾಣುವವರಿಗೆ ಘಟನೆಗಳ ನಡುವಿನ ಅಗೋಚರ ಲಿಂಕುಗಳು ಖಂಡಿತವಾಗೂ ಕಾಣಲು ಸಾಧ್ಯವಿರಲಿಲ್ಲ.

ಗಂಧಿಕೋಟ. ಎಂತಾ ಹೆಸರಪ್ಪಾ ? ನದಿಯ ಕಂದಕಕ್ಕೆ ಗಂಧಿ/ಗಂಡಿಯೆಂಬ ಹೆಸರಂತೆ. ಪೆನ್ನಾರು ನದಿಯ ಕಂದಕಗಳಿಂದ ಸುತ್ತುವರಿದ ಕೋಟೆಯ ಫೋಟೋ ಸ್ಪಾಟಿನಿಂದ ದೂರ ಬಂದಿದ್ದ ಅವ. 

ಕೋಟೆಯಾಚೆ ಬೃಹತ್ ಕಂದಕಗಳು. ಅದಕ್ಕೂ ಇಳಿಯೋ ಜಾಗ ಮಾಡಿ ಅದರಲ್ಲಿ ಗದ್ದೆ ಮಾಡಿದ ಜನರ ಶ್ರಮಕ್ಕೆ ಮೆಚ್ಚುತ್ತಾ , ಕೋಟೆ ಗೋಡೆಗಳ ಮೇಲೆ ನಡೆಯುತ್ತಾ, ಅತ್ತಿಂದೀಚೆ ಬೀಸುತ್ತಿದ್ದ ಗಾಳಿಯನ್ನು ನೊಡುತ್ತಾ ಅವ ಆಲೋಚಿಸುತ್ತಿದ್ದ. ಲೊಕೇಶನ್ ಟ್ಯಾಗ್ ಮಾಡಲು ಮುಂದಾಗಿದ್ದ ಮೊಬೈಲು, ಕೈಗಳ ಮೂರ್ನಾಲ್ಕು ಬಾರಿ ಒಳಗಾಕಿದ್ದ. ನಾನಿಲ್ಲಿ ಬಂದಿದ್ದೇತಕ್ಕೆ ? ಇರುವೆಲ್ಲಾ ತಲೆ ಬಿಸಿ ಬಿಟ್ಟು ಆರಾಮಾಗಿರಲೆಂದು. ಎಚ್ಚರಾದಾಗ ಏಳುವ, ನಿದ್ರೆ ಬಂದಾಗ ಮಲಗುವ, ಯಾವುದೇ ಕೆಲಸವೂ, ಖರೀದಿಯೂ ಇಲ್ಲದ ನೆಮ್ಮದಿಯ ನಾಲ್ಕು ದಿನಕ್ಕೆಂದು. ಆದರೆ ಆಗುತ್ತಿರೋದೇನು ? ನೆಟ್ವರ್ಕಿದೆಯೆಂದು ಶುರುವಾದ ಸರ್ಕಲಿನಲ್ಲಿ ನನ್ನ ಕರೆತಂದವರಿಗೆ ನನಗೆ ಗಮನಹರಿಸುವಷ್ಟು ಟೈಮಿದೆಯೇ ? ಹೋಗಲಿ ಅವರಿಗೆ ಗಮನಹರಿಸುವಷ್ಟು ಸಮಯ ನನಗಿದೆಯೇ ? ಪಕ್ಕದಲ್ಲಿ ಕೂತವರೊಟ್ಟಿಗೆ ನಾಲ್ಕು ಮಾತಾಡೋಕಾಗದ ನಾನು ಯಾವುದೋ ಅಗೋಚರ ಜಗತ್ತಿನವನ ಕ್ರಿಯೆ, ಪ್ರತಿಕ್ರಿಯೆಗಳಲ್ಲಿ ಆಸಕ್ತ ! ನನ್ನೊಳಗಿನ ಚಾರಣಿಗ,ಸಂಗೀತಗಾರ, ಒಳ್ಳೆಯ ಮನುಷ್ಯನಿಗೇ ಸಮಯ ಕೊಡಲಾಗದವ ಯಾವುದೋ ಕಾಲ್ಪನಿಕ ಲೋಕದ ಆಮಿಷಕ್ಕೆ ಬಲಿಯಾಗುವುದರಲ್ಲಿ ಅರ್ಥವಿಲ್ಲ ಅನಿಸಿತ್ತು. ಅಷ್ಟಕ್ಕೂ ಒಂದು ಫೋಟೋ ಹಾಕದಿದ್ದರೆ, ಲಾಗಿನ್ನೇ ಆಗದಿದ್ದರೆ ಏನಾದೀತು ? ಒಂದಿಷ್ಟು  ಲೈಕು ಮಿಸ್ಸಾದೀತು,ಗೆಳೆಯನ ಎಂಗೇಜ್ ಮೆಂಟೋ, ಗೆಳತಿಯ ಮದುವೆಯ ಕರೆಯೋಲೆಯೋ ಕಳೆದುಹೋಗಬಹುದು. ದಿನಗಟ್ಟಲೇ ಗೇಮಾಡದಿದ್ದರೆ ಆ ಆಟದ ತಂಡದಿಂದ ಹೊರಹಾಕಿಯಾರು. ಅಷ್ಟೇ ತಾನೇ ? ಜೀವವೇನೂ ಹೋಗಲ್ಲವಲ್ಲ ಅಂದುಕೊಳ್ಳುತ್ತಿದ್ದ. ಕಾಲ್ಪನಿಕರ ಕಾಟದಲ್ಲಿ ನಿದ್ದೆ, ನೆಮ್ಮದಿ, ನಲಿವು ಕಳೆದುಕೊಳ್ಳಬಾರದೆಂದು ನಿರ್ಧರಿಸುತ್ತಿದ್ದ. ಆಗಸದ ಅಗೋಚರ ತೊಟ್ಟಿಲಲ್ಲಿ ಅತ್ತಿಂದಿತ್ತ ತೂಗೋ ಸೂರ್ಯ ನಗು ತಡೆಯಲಾರದೇ ಮೋಡಗಳ ಹಿಂದೆ ಮರೆಯಾಗುತ್ತಿದ್ದ.


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply