3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆ: ವೀರಣ್ಣ ಮಂಠಾಳಕರ್

ನಟ, ನಿರ್ಮಾಪಕ ನಮ್ ಜಗದೀಶ ಅಭಿನಯದ ಹಣೆ ಬರಹಕ್ಕೆ ಹೊಣೆ ಯಾರು? ಅಡಿ ಬರಹದ 3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆಯಾಗಲಿದೆ.

ಸಿನಿಮಾ ಎಂದರೆ ಇಂದಿನ ಯುವಪೀಳಿಗೆಗೆ ತುಂಬಾ ಅಚ್ಚುಮೆಚ್ಚು. ಅಂಥದರಲ್ಲಿ ಇತ್ತೀಚಿಗೆ ಹಲವು ಪ್ರತಿಭಾವಂತರು ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಲೇ ತಮ್ಮ ಭವಿಷಕ್ಕೆ ತಾವೇ ಮುನ್ನುಡಿಯನ್ನು ಬರೆದುಕೊಳ್ಳುತಿದ್ದಾರೆ. ಆ ಒಂದು ದಾರಿಯಲ್ಲಿ ಸಾಗುತ್ತಿರುವ ನಮ್ ಜಗದೀಶ ಅವರು 3rd ಕ್ಲಾಸ್ (ಹಣೆ ಬರಹಕ್ಕೆ ಹೊಣೆ ಯಾರು?) ಎಂಬ ಅಡಿ ಬರಹದ ಹೊಚ್ಚ ಹೊಸ ಕನ್ನಡ ಸಿನಿಮಾವೊಂದರ ನಿರ್ಮಾಪಕರಾಗಿ, ನಾಯಕ ನಟರಾಗಿ ಕನ್ನಡಿಗರಿಗೆ ಹೊಸ ಪರಿಚಯ ಆಗುತ್ತಿರುವುದು ಅದು ಕನ್ನಡಿಗರ ಸೌಭಾಗ್ಯ ಎನ್ನಬಹುದು. ಹಳೆ ನೀರು ಕೊಚ್ಚಿಕೊಂಡು ಹೊಸ ನೀರು ಹರಿಯಬೇಕು ಎಂಬ ಹಾಗೆ ಹೊಸ ಯೋಜನೆ, ಯೋಚನೆ, ಕಲ್ಪನೆ, ಕನಸುಗಳನ್ನು ಇಟ್ಟುಕೊಂಡು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬ ಇಚ್ಛೆಯಿಂದ ಸಿನಿಮಾ ರಂಗಕ್ಕೆ ಅವರು ಪಾದಾರ್ಪಣೆ ಮಾಡಿದ್ದಾರೆ. ಲಾಭ ಮಾಡುವ ಉದ್ದೇಶ ಇರದೇ ಸಮಾಜದಲ್ಲಿರುವ ಅನಾಥ ಮಕ್ಕಳನ್ನು ಹಾಗೂ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಇರಾದೆ ಕೂಡ 3rd ಕ್ಲಾಸ್ ಚಿತ್ರ ತಂಡಕ್ಕಿದೆ. ಅದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಗ್ರಾಮ ವಾಸ್ತವ್ಯ ಹಾಗೂ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವುದು ಕನ್ನಡಿಗರಿಗೆ ಇದೊಂದು ರೋಮಾಂಚನಕಾರಿಯಾಗಿ ವಿಷಯ ಮತ್ತು ಅಷ್ಟೇ ಕುತೂಹಲವನ್ನು ಮೂಡಿಸಿದಂತೂ ಸತ್ಯ.

3rd ಕ್ಲಾಸ್ ಸಿನಿಮಾದಲ್ಲಿರುವ “ಉಹುಂ.. ಹುಂ….. ಉಹುಂ ಹುಂ… ಹಾಯಾಗಿದೆ ಹಾಯಾಗಿದೆ ಪ್ರೇ….ಮದಾ ಮುದ್ದಾದ ಆಲಾಪ… ನಿಜವಾಗಿದೆ ಮಜವಾಗಿದೆ ಪ್ರೀತಿಯ ಕಣ್ಣೋಟ ಸೆರೆದೀಪ…. ಬೆರೆತಾಕ್ಷಣ ಮಧುರಾ ಮಿಲನ ಸುಖವಾಗಿದೆ.. ನೆನದಾಗ ಆ ನೆನಪ…” ಪ್ರತಿಯೊಬ್ಬರು ಗುನುಗುನಿಸುವಂತೆ ಮಾಡಿರುವುದಂತು ಖರೆ. ಯಾಕೆಂದರೆ ಈಗಾಗಲೇ ಈ ಹಾಡಿನ ಜೊತೆಗೆ ಕೆಲವು ರೋಮಾಂಚನಕಾರಿ ದೃಶ್ಯಗಳನ್ನು ನೋಡಿದಾಗ 3rd ಕ್ಲಾಸ್ ಸಿನಿಮಾ ಯಶಸ್ವಿ ದಾರಿಯತ್ತ ಪಯಣ ಮಾಡಲಿದೆ ಎಂಬುದಕ್ಕೆ ಯಾವ ಅನುಮಾನಗಳು ಇಲ್ಲ. ಅಷ್ಟರ ಮಟ್ಟಿಗೆ ಇಡೀ ಸಿನಿಮಾ ತಂಡ ತುಂಬಾ ಶ್ರಮ ವಹಿಸಿ ಚಿತ್ರ ನಿರ್ಮಾಣ ಮಾಡಿದೆ.

ಇಂತಹ ಒಂದು ಮಧುರವಾದ ಭಾವನೆಗಳೊಂದಿಗೆ ಇಂಪಾದ ಗೀತೆಯೊಂದಿಗೆ ಚಿತ್ರ ರಸಿಕರ ಮನತಣಿಸಲು ನಿರ್ಮಾಣಗೊಂಡಿರುವ 3rd ಕ್ಲಾಸ್ ಅಪ್ಪಟ ಕನ್ನಡ ಸಿನಿಮಾವೊಂದರಲ್ಲಿ ಈ ಮೇಲ್ಕಂಡ ಹಾಡನ್ನು ಈಗಾಗಲೇ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಉತ್ತಮ ಕೌಟುಂಬಿಕ ಕಥಾ ಹಂದರವುಳ್ಳ, ಸಾಹಸಮಯ ಚಿತ್ರ 3rd ಕ್ಲಾಸ್ ಇದೇ 2020ರ ಫೆಬ್ರವರಿ 7ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿರುವುದಕ್ಕೆ ಸಿನಿ ಪ್ರೇಮಿಗಳು ಕಾತುರದಿಂದ ಸಿನಿಮಾ ನೋಡುವುದಕ್ಕೆ ಕ್ಷಣಗಣನೆಯಲ್ಲಿದ್ದಾರೆ.

ತಂದೆ ಮಗಳ ನಡುವಿನ ಸಂಬಂಧ ಹಾಗೂ ಬಾಂಧವ್ಯವನ್ನು ಎತ್ತಿ ಹಿಡಿಯುವ ಸನ್ನಿವೇಶಗಳು, ಪ್ರತಿಯೊಬ್ಬ ತಂದೆ ಮಗಳಿಗೆ ಅಪ್ಯಾಯಮಾನವಾದ ಕಥಾ ಹಂದರ ಹೊಂದಿದೆ. ತಂದೆ ಮಗಳ ಚಿತ್ರಣವನ್ನು ಅನಾವರಣಗೊಳಿಸುವ ಕೌಟುಂಬಿಕ ಹಿನ್ನೆಲೆಯ 3rd ಕ್ಲಾಸ್(ಹಣೆಬರಹಕ್ಕೆ ಹೊಣೆ ಯಾರು) ಅಡಿ ಬರಹ ಹೊಂದಿರುವ ಸಿನಿಮಾದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳಿಸಿದ್ದು, ಈ ಸಿನಿಮಾವನ್ನು ನೋಡಿದವರಿಗೆ ಒಮ್ಮೆ ಕನ್ನಡ ಚಿತ್ರರಂಗವನ್ನು ಹುಟ್ಟು ಹಾಕಿರುವ ಪುಟ್ಟಣ ಕಣಗಾಲ ಅವರು ನೆನಪಾಗುವುದು ಖಚಿತ ಎಂದು ವಿಶ್ವಾಸವನ್ನು ಹೊಂದಿದ್ದಾರೆ ಟನ ನಿರ್ಮಾಪಕ ನಮ್ ಜಗದೀಶ. ಫೆ. 7ಕ್ಕೆ ಬಿಡುಗಡೆಯಾದ ಮೊದಲ ದಿನದ ಮೊದಲ ಶೋದಿಂದ ಬರುವ ಆದಾಯವನ್ನು 150 ಅಂಧ ಮಕ್ಕಳ ಹಾಗೂ ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನೀಡುವುದಾಗಿ ಚಿತ್ರತಂಡ ನಿರ್ಧರಿಸಿದೆ. ಸಿನಿಮಾ ನಾಯಕ ನಟ, ನಿರ್ಮಾಪಕರಾಗಿ ನಮ್ ಜಗದೀಶ ಅವರು ಚಿತ್ರಕ್ಕೆ ಸಂಪೂರ್ಣ ಬಂಡವಾಳವನ್ನು ಹೂಡಿದ್ದಾರೆ.

7ಹಿಲ್ಸ್ ಸ್ಟುಡಿಯೋ ಪ್ರಸ್ತುತಪಡಿಸುತ್ತಿರುವ 3rd ಕ್ಲಾಸ್ ಚಿತ್ರವನ್ನು ವಿನೂತನವಾದ ಕಲ್ಪನೆಯಲ್ಲಿ ತಯ್ಯಾರಾಗಿದೆ. ಇದೊಂದು ಕೌಟುಂಬಿಕ ಹಿನ್ನೆಲೆಯುಳ್ಳ ಚಿತ್ರ. ನಾನೋರ್ವ ನಾಯಕ ನಟನಾಗಿ, ನಿರ್ಮಾಪಕನಾಗಿ ಸಿನಿಮಾದಿಂದ ಹಣ ಸಂಪಾದಿಸಬೇಕೆಂಬ ಹಂಬಲದಿಂದ ಸಿನಿಮಾ ಮಾಡಲಿಲ್ಲ. ಜನರೊಂದಿಗೆ ಹತ್ತಿರದಲ್ಲಿ ಇದ್ದುಕೊಂಡು ಸಾಮಾಜಿಕ ಸೇವೆ ಮಾಡುವ ಉದ್ದೇಶ ನಮ್ಮದಾಗಿದೆ ಎನ್ನುತ್ತಾರೆ ನಟ, ನಿರ್ಮಾಟಪ ನಮ್ ಜಗದೀಶ ಅವರು.

ನಮ್ ಜಗದೀಶ ಅವರೇ ಸಿನಿಮಾದ ಕಥೆ ಬರೆದು ನಾಯಕ ನಟರಾಗಿ, ನಿರ್ಮಾಪಕರಾಗಿ ಪ್ರಸ್ತುತ 3rd ಕ್ಲಾಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರಮುಖ ನಾಯಕಿಯಾಗಿ ರೂಪಿಕಾ ಅವರು ತಮ್ಮ ಅದ್ಭುತವಾದ ನಟನೆಯೊಂದಿಗೆ ಜನಮನದಲ್ಲಿ ಉಳಿಯುವಂಥ ಉತ್ತಮವಾಗಿ ಅಭಿನಯಿಸಿದ್ದಾರೆ. ನಟಿ ರೂಪಿಕಾ ಅವರು ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು. ಈಗಾಗಲೇ ಇವರು ಮೂರು ಸಾವಿರತನಕ ಡ್ಯಾನ್ಸ್ ಕಾಂಪಿಟೇಷನ್‍ನಲ್ಲಿ ಬಹುಮಾನಗಳನ್ನು ಪಡೆದ ಪ್ರತಿಭಾವಂತ ನಟಿ. ಹತ್ತು ಸಾವಿರದವರೆಗೆ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ರೂಪಿಕಾ ಕನ್ನಡದ ಖ್ಯಾತ ನಿರ್ದೇಶಕ ಎಸ್. ನಾರಾಯಣ ಅವರ ಮಗನ ಜೊತೆಯಲ್ಲಿ ‘ಚೆಲುವಿನ ಚಿಲಿಪಿಲಿ’ ಎಂಬ ಮೊದಲ ಸಿನಿಮಾದಲ್ಲಿ ನಟಿಸಿದ ಅನುಭವವನ್ನು ಕೂಡ ಹೊಂದಿದ್ದಾರೆ. ಸಧ್ಯದಲ್ಲೇ ತೆಲುಗಿನ ಎರಡು ಸಿನಿಮಾಗಳಲ್ಲಿ ಕೂಡ ರೂಪಿಕಾ ನಿರತರಾಗಿದ್ದಾರೆ.

3rd ಕ್ಲಾಸ್ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಾಯಕಿಯಾಗಿ ರೂಪಿಕಾ ನಟಿಸಿದ್ದು, ಚಿತ್ರದಲ್ಲಿ ಇವರ ತಂದೆಯಾಗಿ ಖ್ಯಾತ ಕನ್ನಡದ ಪೋಷಕ ನಟ ಅವಿನಾಶ ಅವರು ನಟಿಸಿದ್ದಾರೆ. ಕನ್ನಡ ರಂಗಭೂಮಿ ಕಲಾವಿದ ಖ್ಯಾತ ನಾಟಕಕಾರ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸಂಗೀತ ಎನ್ನುವರು ನಾಯಕಿ ರೂಪಿಕಾಳ ತಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಯಿಗೋಲ್ಡ್ ಶ್ರವಣ, ಖ್ಯಾತ ಕನ್ನಡದ ಇನ್ನೋರ್ವ ಪೋಷಕ ನಟ ರಮೇಶ ಭಟ್ ಟವರು ಮ್ಯೂಸಿಕ್ ಮಾಸ್ತರಾಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಿನಿಮಾಕ್ಕೆ ಜೀವ ತುಂಬಿದ್ದಾರೆ ಎಂದು ನಮ್ ಜಗದೀಶ ಅವರು ಮನಬಿಚ್ಚಿ ಮಾತನಾಡುತ್ತಾರೆ.

ಅದೇ ರೀತಿ 3rd ಕ್ಲಾಸ್ ಚಿತ್ರದಲ್ಲಿ ಇನ್ನೂ ಹಲವು ದಿಗ್ಗಜರು ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದು, ಉದಯ ಟೀವಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಉದಯ ಹರೀಶ, ಮಜಾ ಟಾಕೀಸ್ ಪವನ್ ಸೇರಿದಂತೆ ಉತ್ತರ ಕರ್ನಾಟಕದ ಹಾಸ್ಯ ನಟರು ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟರುಗಳು ಹಾಸ್ಯ ಕಲಾವಿದರಾಗಿ ಚಿತ್ರದಲ್ಲಿ ಅಭಿನಯಿಸಿ ನಮ್ಮ ಚಿತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ ಎಂದು ಹೇಳುತ್ತಾರೆ.

3rd ಕ್ಲಾಸ್ ಚಿತ್ರದ ನಿರ್ದೇಶಕರಾಗಿ ಅಶೋಕ ದೇವ ಅವರು ಕಾರ್ಯ ನಿರ್ವಹಿಸಿದರೆ, ಚಿತ್ರ ಅನುಭವಿ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರ ಸಂಗೀತವಿದೆ. ಈಗಾಗಲೆ ಇವರು (ಅಭಿಮಾನಿಗಳ ನೆನಪಿನಲ್ಲಿ ಉಳಿಯುವಂಥ ಕನ್ನಡದ ಸಂಜು ವೆಡ್ಸ್ ಗೀತಾ, ಮೈನಾ, ಶೈಲು) ಚಿತ್ರಗಳಿಗೂ ಹಾಗೂ ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಅನುಭ ಹೊಂದಿರುವರು. ಕೆಜಿಎಫ್ ಸಿನಿಮಾದ ಖ್ಯಾತ ಸಂಕಲನಕಾರ ಶ್ರೀಕಾಂತ ಅವರು ಸಂಕಲನ ಮಾಡಿದ್ದಾರೆ. (ರಥಾವರ, ಉಗ್ರಂ ಕನ್ನಡ ಸಿನಿಮಾ ಸಂಕಲನಕಾರ) ಕೂಡ. ಚನೈ ಮೂಲದ ಚಾಮರಾಜ ಅವರ ಛಾಯಾಗ್ರಹಣ. ಖ್ಯಾತ ಕನ್ನಡ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ, ಹಾಗೂ ಕವಿರಾಜ ಅವರು ಸಿನಿಮಾಕ್ಕೆ ಹಾಡುಗಳನ್ನು ಬರೆದಿದ್ದಾರೆ. ಚಿತ್ರದ ಹಾಡು ಅನುರಾಧ ಭಟ್, ಚಿತ್ರಮ್ಮಾ, ಕಾರ್ತಿಕ, ಶಶಾಂಕ ಶೇಷಗಿರಿ ಖ್ಯಾತ ಗಾಯಕರು ಹಾಡಿದ್ದಾರೆ. ಕವಿರಾಜ ಅವರು ಎರಡು ಹಾಡು ಬರೆದಿದ್ದರೆ, ವಿ. ನಾಗೇಂದ್ರ ಪ್ರಸಾದ ಅವರು ಎರಡು, ಹಾಗೂ ಬರ್ಕರಿ ಚೇತನ ಅವರ ಒಂದು ಹಾಡು ಒಟ್ಟು ಸಿನಿಮಾದಲ್ಲಿ ಐದು ಹಾಡುಗಳು ಉತ್ತಮ ಸಂಗೀತದೊಂದಿಗೆ ಮೂಡಿ ಬಂದಿವೆ. ವಿ. ನಾಗೇಂದ್ರ ಪ್ರಸಾದ ಅವರು ಬರೆದ “ಹಾಯಾಗಿದೆ….. ಹಾಯಾಗಿದೆ…” ಹಾಡಂತೂ ಇಡೀ ಸಿನಿಮಾದ ಮೆರುಗನ್ನು ಹೆಚ್ಚಿಸಿದೆ. ಇಂಪಾದ ರೀತಿಯಲ್ಲಿ ಕಲಾಭಿಮಾನಿಗಳ ನೆನಪಿನಲ್ಲಿ ಉಳಿಯುವಂತೆ ಪ್ರತಿಯೊಂದು ಹಾಡುಗಳು ಮೂಡಿ ಬಂದಿವೆ ಎಂಬುದು ನಟ, ನಿರ್ಮಾಪಕ ನಮ್ ಜಗದೀಶ ಅವರು ವಿವರಿಸುತ್ತಾರೆ. ಚಿತ್ರ ನಿರ್ಮಾಣದಲ್ಲಿ ಭಾಗಿಯಾದರವನ್ನೆಲ್ಲ ಮರೆಯದೇ ನೆನಪಿಸುವ ಅವರು ಬೇಸರವಿಲ್ಲದಂತೆ ಸುಧೀರ್ಘವಾಗಿ ಇಡೀ ಚಿತ್ರ ತಂಡದವರ ಸಹಕಾರವನ್ನು ಸ್ಮರಿಸುತ್ತಾರೆ. “ಶ್ರೀಮಂತನ ದೃಷ್ಟಿಯಲ್ಲಿ ಬಡವನೇ 3rd ಕ್ಲಾಸ್, ಬಡವನ ದೃಷ್ಟಿಯಲ್ಲಿ ಶ್ರೀಮಂತನೇ 3rd ಕ್ಲಾಸ್” ಎಂಬ ವಾಕ್ಯವು ಸಾಮಾಜಿಕವಾಗಿ ಉತ್ತಮವಾದ ಸಂದೇಶವನ್ನು ಸಾರುವ ಚಿತ್ರದ ಕಥಾ ಹಂದರ ಪ್ರತಿಯೊಬ್ಬರು ಕುಳಿತುಕೊಂಡು ನೋಡುವಂಥ ಚಿತ್ರ ಇದಾಗಿದೆ. ಮನೆಮಂದಿಗೆಲ್ಲ ಇದು ತುಂಬಾ ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಿಂದ ಸಿನಿಮಾ ಮಾಡಿದ್ದಾರೆ. ಹಲವು ಆಯಾಮಗಳಲ್ಲಿ ಒಂದೊಳ್ಳೆ ಕನ್ನಡ ಚಿತ್ರವಾಗಿ 3rd ಕ್ಲಾಸ್ ಚಿತ್ರ ಮೂಡಿ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಎಲ್ಲಾ ಕನ್ನಡದ ಮನಸ್ಸುಗಳು ತಮ್ಮ ಕುಟುಂಬ ಸಮೇತ ಕುಳಿತುಕೊಂಡು ನೋಡಬೇಕಾದ 3rd ಕ್ಲಾಸ್ ಸಿನಿಮಾ ಇದೇ ಫೆ. 7ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ತಂಡದವರಿಗೆ ಹರಸಿ, ಹಾರೈಸಿ ಕನ್ನಡದಲ್ಲಿ ಬರುತ್ತಿರುವ ಹೊಸ ಪ್ರತಿಭಾವಂತ ನಾಯಕ ನಟರಿಗೆ,ನಿರ್ಮಾಪಕರಿಗೆ, ನಿರ್ದೇಶಕರಿಗೆ ಪ್ರತಿಯೊಬ್ಬರು ಪ್ರೋತ್ಸಾಹಿಸುವುದರಿಂದ ಒಂದೊಳ್ಳೆ ಯೋಜನೆ ಕಾರ್ಯರೂಪಕ್ಕೆ ಬರಲು ಸಾಧ್ಯವಾಗುತ್ತದೆ ಎನ್ನಬಹುದು.

ನಟ ನಿರ್ಮಾಪಕ ನಮ್ ಜಗದೀಶ ಅವರು ಇನ್ನೂ ಹಲವಾರು ಸಾಮಾಜಿಕವಾದ ಸೇವೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ಎಂಬಿಎ ಪದವಿಧರರಾಗಿರುವ ನಮ್ ಜಗದೀಶ ಅವರು ಸಿನಿಮಾದಿಂದ ಲಾಭ ಪಡೆಯುವ ಉದ್ದೇಶವಿಲ್ಲ. ಸಾಮಾಜಿಕವಾಗಿ ಒಂದು ಉತ್ತಮ ಸಂದೇಶ ನೀಡುವ ಕಲ್ಪನೆ ನಮ್ಮದಾಗಿದೆ. ಸಿನಿಮಾದಿಂದ ಬರುವ ಯಾವುದೇ ಲಾಭ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಬಳಸಿಕೊಳ್ಳುವ ಯೋಚನೆ ಮತ್ತು ಕನಸಾಗಿದೆ ಎನ್ನುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹತ್ತು ಹಲವಾರು ಯೋಜನೆಗಳು ಇಟ್ಟುಕೊಂಡಿದ್ದಾರೆ. ಈಗಾಗಲೆ ಇವರು 200 ಅಂಧ ಹಾಗೂ ಅನಾಥ ಮಕ್ಕಳಿಗೆ 2 ಲಕ್ಷ ಮೊತ್ತದ ಆರೋಗ್ಯ ಮತ್ತು ಜೀವ ವಿಮೆ ಮಾಡಿಸಿದ್ದಾರೆ. 150 ಕ್ಕೂ ಅಧಿಕ ಅಂಧ ಮತ್ತು ಅನಾಥ ಮಕ್ಕಳ ಶಾಲೆಗಳನ್ನು ದತ್ತು ಪಡೆದು ರಾಜ್ಯಾದ್ಯಂತ ಚಿತ್ರದ ಮೊದಲ ಶೋದ ಸಂಪೂರ್ಣ ಹಣವನ್ನು ನೀಡುವುದಕ್ಕೆ ಮುಂದಾಗಿದೆ 3rd ಕ್ಲಾಸ್ ಚಿತ್ರ ತಂಡ. 50 ಸಾವಿರಕ್ಕೂ ಅಧಿಕ ಆಟೋ ಮತ್ತು ಕ್ಯಾಬ್ ಚಾಲಕರಿಗೆ 1 ಲಕ್ಷ ಮೊತ್ತದ ಜೀವ ವಿಮೆ ಕೂಡ ಈಗಾಗಲೇ ಮಾಡಿಸಿದೆ. ಇಂತಹ ಅನೇಕ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರತಂಡ ಇತ್ತೀಚಿಗಷ್ಟೇ ಪ್ರವಾಹಕ್ಕೆ ತುತ್ತಾಗಿರುವ ಕರ್ಲಕೊಪ್ಪ ಗ್ರಾಮ ಆಯ್ಕೆ ಮಾಡಿಕೊಂಡು ದತ್ತು ಪಡೆಯುವ ಮೂಲಕ ರಆಜ್ಯದ ಜನತೆಯ ಗಮನ ಸೆಳೆದಿದೆ. ಇಂತಹ ನೂರಾರು ಯೋಜನೆಗಳನ್ನು ಸಾಮಾಜಿಕ ಜವಾಬ್ದಾರಿಯಿಂದ ಸಮಾಜ ಸೇವೆಗೆ ಕಂಕಣ ಬದ್ಧರಾಗಿ ನಿಂತಿರುವ ನಮ್ ಜಗದೀಶ ಅವರಿಗೆ ಪ್ರತಿಯೊಬ್ಬರು ಪ್ರೋತ್ಸಾಹಿಸೋಣ, ಬೆಂಬಲಿಸೋಣ. 3rd ಕ್ಲಾಸ್ ಚಿತ್ರ ತಂಡವು ಸಾಮಾಜಿಕ ಕಳಕಳಿಯೊಂದಿಗೆ ಪ್ರವಾಹ ಪೀಡಿತ ಗ್ರಾಮ ದತ್ತು ಪಡೆಯುವುದರಿಂದ ಚಿತ್ರತಂಡದ ಮೂಲಕ ಬಾಗಲಕೋಟ ಜಿಲ್ಲೆಯ ಕರ್ಲಕೊಪ್ಪ ಗ್ರಾಮದ ಜನತೆ ಸಂತಸಗೊಂಡಿದ್ದಾರೆ. ಇಂತಹ ಉತ್ತಮ ಆಲೋಚನೆ ಹೊಂದಿರುವ ಚಿತ್ರತಂಡದವರ ಕನಸು ನನಸಾಗಲಿ ಎಂದು ಹಾರೈಸೋಣ. ಅವರ ಜೊತೆಗೆ ಸಮಾನ ಮನಸ್ಕರಾಗಿ ಕನ್ನಡದ ಮನಸುಗಳೆಲ್ಲ ಅವರ ಎಲ್ಲಾ ಮುಂಬರುವ ಚಿತ್ರಗಳು ಯಶಸ್ವಿಯಾಗಲಿ ಎಂದು ಶೂಭ ಕೋರುವೆ.

-ವೀರಣ್ಣ ಮಂಠಾಳಕರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x