2016ರ ಪಾರಿಸಾರಿಕ ಯಶೋಗಾಥೆಗಳು: ಅಖಿಲೇಶ್ ಚಿಪ್ಪಳಿ

ವರುಷಗಳು ಉರುಳಿ ಹೊಸ ವರ್ಷಗಳು ಬರುತ್ತಲೇ ಇರುತ್ತವೆ. ಕಾಲ ಯಾರಿಗೂ ಕಾಯುವುದಿಲ್ಲ ಹಾಗೂ ಉಚಿತವಾಗಿ ದೊರಕುವ ಸಮಯಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಇಪ್ಪತೊಂದನೇ ಶತಮಾನದಲ್ಲಿ 16 ವರುಷಗಳು ಕಳೆದುಹೋದವು. ವಿವಿಧ ಕಾರಣಗಳಿಂದಾಗಿ ಕೆಲವು ದೇಶಗಳ ಜಿಡಿಪಿಯಲ್ಲಿ ಹೆಚ್ಚಳವಾದರೆ, ಹಲವು ದೇಶಗಳ ಜಿಡಿಪಿ ರೇಖೆ ಕೆಳಮುಖವಾಗಿ ಹರಿಯಿತು. ಮಹತ್ವದ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿದವು. ಪರಿಸರವಾದಿಗಳನ್ನು ಅಭಿವೃದ್ಧಿ ವಿರೋಧಿಗಳು ಎಂದು ಬಿಂಬಿಸುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪತ್ತು ಈ ಭೂಮಿಯ ಎಲ್ಲಾ ಚರಾಚರಗಳಿಗೂ ಸಂಬಂಧಿಸಿದ್ದು. ಕುಡಿಯುವ ನೀರು, ಸೇವಿಸುವ ಗಾಳಿ ಇದರಲ್ಲಿ ಬಹು ಮುಖ್ಯವಾದವು. ಶುದ್ಧ ಗಾಳಿ ಹಾಗೂ ನೀರು ಪಡೆಯುವುದು ಎಲ್ಲರ ಹಕ್ಕು. ಆದರೆ ಈ ನೈಸರ್ಗಿಕ ಸಂಪತ್ತುಗಳಿಗೂ ಮಾಲಿನ್ಯ ಕಾಡುತ್ತಿದೆ. ಬಡವರಿಗೆ ಶುದ್ಧ ನೀರು ಮರೀಚಿಕೆಯಾದರೆ, ಶುದ್ಧ ಗಾಳಿಯೂ ಲಭ್ಯವಿಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆ. ಎಲ್ಲಾ ಮಹಾನಗರಗಳಲ್ಲಿ ವಾಯುಮಾಲಿನ್ಯ ಸುರಕ್ಷತೆ ಮಟ್ಟಕ್ಕಿಂತ ಅಧಿಕವಾಗಿ ಜನಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯಾವುದೇ ತರಹದ ಮಾಲಿನ್ಯಕ್ಕೆ ಮೊಟ್ಟಮೊದಲಿಗೆ ಬಲಿಯಾಗುವವರು ಮಕ್ಕಳು ಹಾಗೂ ವೃದ್ಧರು. 70% ಜನ ಕೃಷಿಯನ್ನೇ ಅವಲಂಬಿಸಿರುವ ನಮ್ಮ ದೇಶದಲ್ಲಿ ನಗರಮುಖಿ ವಲಸೆ ಅತಿ ಹೆಚ್ಚು ವೇಗದಿಂದ ನಡೆಯುವ ಪ್ರಕ್ರಿಯೆಯಾಗಿದೆ. ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲವೆಂಬ ಭಾವನೆ ಸಾರ್ವತ್ರಿಕವಾಗುತ್ತಿರುವ ಹೊತ್ತು ಇದು. ನೇಗಿಲ ಯೋಗಿಯ ಬದುಕು ಮೂರಾಬಟ್ಟೆಯಾಗಲು ಹಲವಾರು ಕಾರಣಗಳಿವೆ. ಕೃಷಿಯನ್ನು ಇವತ್ತು ಆಳುತ್ತಿರುವುದು ಆಧುನಿಕ ಕೀಟನಾಶಕಗಳು, ಯಂತ್ರಗಳು, ಕುಲಾಂತರಿ ಬೀಜಗಳು, ಅನುಭವವಿವಲ್ಲದ ಅಧಿಕಾರಿ ವರ್ಗಗಳು. ಇದರ ಜೊತೆಗೆ ಅತಿದೊಡ್ಡ ಅಪಾಯ ಹವಾಗುಣ ಬದಲಾವಣೆಯಿಂದ ಬಂದ್ದದ್ದು. ಅನಿರೀಕ್ಷಿತ ಮಳೆ, ಬರ ಇತ್ಯಾದಿಗಳು ರೈತರ ನಿದ್ದೆ-ನೆಮ್ಮದಿ ಎರಡನ್ನೂ ಕೆಡಿಸಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೂ ಇದೆ. ಆದರೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಗಾದೆ ಸುಳ್ಳಾಗುತ್ತಿದೆ. ಮೇಟಿ ವಿದ್ಯೆಗೆ ಯಾವುದೇ ಗೌರವ-ಘನತೆ ಇಷ್ಟು ವರ್ಷವಾದರೂ ಲಭಿಸಿಲ್ಲ. ಇಷ್ಟು ಅದ್ವಾನಗಳ ಮಧ್ಯೆಯೂ ಜಾಗತಿಕ ಮಟ್ಟದಲ್ಲಿ ಕೆಲವು ಆಶಾದಾಯಕ ಬೆಳವಣಿಗೆಗಳು 2016ರಲ್ಲಿ ಆಗಿವೆ. 

akhilesh

 

ಜಾಗತಿಕವಾಗಿ ಕೆಲವು ವರ್ಷಗಳಿಂದ ಸಾಗರ-ಮಹಾಸಾಗರಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. 2014ರಲ್ಲಿ “ನಮ್ಮ ಮಹಾಸಾಗರ” ಸಮ್ಮೇಳನದ ನಂತರ ಕೆಲವು ಮುಖ್ಯ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ಸಿಕ್ಕಿತು. 2015ರಲ್ಲಿ ಚಿಲಿ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ದೇಶಗಳು ತಮ್ಮ ಭಾಗದ ಸಮುದ್ರವನ್ನು ಸಂರಕ್ಷಿಸುವ ಪಣ ತೊಟ್ಟು ಕಾನೂನಿನಲ್ಲಿ ಸೂಕ್ತ ಮಾರ್ಪಾಡುಗಳನ್ನು ತಂದರು. ಇದರಿಂದಾಗಿ ಭಾರತ ದೇಶದ ವಿಸ್ತೀರ್ಣಕ್ಕಿಂತ ಮಿಗಿಲಾದ ಮಹಾಸಾಗರದ ಪ್ರದೇಶವು ಸಂರಕ್ಷಿಲ್ಪಟ್ಟಿತು. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ 2016ರಲ್ಲಿ ಅತಿಮಹತ್ವದ ಸಾಗರ ಸಂರಕ್ಷಣಾ ಕಾರ್ಯಗಳು ನಡೆದವು. ಕಡಲಿನ ಸಂರಕ್ಷಿತ ಪ್ರದೇಶ (ಮರಿನ್ ಪ್ರೊಟೆಕ್ಟೆಡ್ ಏರಿಯಾ ಅಥವಾ ಎಂಪಿಎ)ದ ಅಡಿಯಲ್ಲಿ ಅಂಟಾರ್ಟಿಕದ ರಾಸ್ ಸೀ ಹಾಗೂ ಹವಾಯಿಯ ಪಾಪಹನೌಮೊಕ್ವಾಕಿ ರಾಷ್ಟ್ರೀಯ ಸ್ಮಾರಕದಡಿಯಲ್ಲಿ 5 ಲಕ್ಷ ಚದರ ಕಿಲೋಮೀಟರ್ ಕಡಲಿನ ಸಂರಕ್ಷಣೆ ಮಾಡಲಾಯಿತು. ಇದರಿಂದಾಗಿ ಸಾವಿರಗಟ್ಟಲೇ ಜಲಚರ ಪ್ರಬೇಧಗಳ ರಕ್ಷಣೆಯಾಯಿತು. ಕಡಲಿನ ರಕ್ಷಣೆ ಕಾರ್ಯವನ್ನು ಪ್ರಬಲಗೊಳಿಸಲು ಜನವರಿ 2016ರಲ್ಲಿ ಅಮೆರಿಕದಲ್ಲಿ ಸಮುದ್ರ ಸೇರುವ ಅನೇಕ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿತು. ಮತ್ತೆ ಇದೇ ವರ್ಷದ ಜೂನ್ ತಿಂಗಳಲ್ಲಿ ಅಕ್ರಮ ಮೀನುಗಾರಿಕೆ ಉದ್ಯಮಕ್ಕೆ ಕಡಿವಾಣ ಹಾಕಿತು. ಆಗಸ್ಟ್ ತಿಂಗಳಲ್ಲಿ ಕಡಲ ಸಸ್ತನಿಗಳ ರಕ್ಷಣೆಗಾಗಿ ಇರುವ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಿತು. ಹಾಗೆಯೇ ಡಿಸೆಂಬರ್ ತಿಂಗಳಲ್ಲಿ ಒಬಾಮ ಸರ್ಕಾರವು ಅಟ್ಲಾಂಟಿಕ್ ಹಾಗೂ ಆರ್ಕ್‍ಟಿಕ್ ತೀರ ಪ್ರದೇಶದಲ್ಲಿ ತೈಲ ಹಾಗೂ ನೈಸರ್ಗಿಕ ಇಂಧನ ಗಣಿಗಾರಿಕೆಯನ್ನು ನಿಷೇಧಿಸಿತು. 

ಇನ್ನೊಂದು ಮಹತ್ವದ ಮೈಲುಗಲ್ಲೆಂದರೆ, 2015ರ ಪ್ಯಾರೀಸ್ ಹವಾಗುಣ ಬದಲಾವಣೆ ಶೃಂಗದ ಕರಡನ್ನು ಅನುಮೋದನೆ ಮಾಡಿದ್ದು. 2016ರ ನವಂಬರ್ ತಿಂಗಳಲ್ಲಿ ಅಮೆರಿಕಾ ಸೇರಿದಂತೆ ಚೀನಾ ಹಾಗೂ ಇನ್ನಿತರ 53 ದೇಶಗಳು ಹವಾಗುಣ ಬದಲಾವಣೆಯ ಕರಡನ್ನು ಅನುಮೋದಿಸಲು ಒಪ್ಪಿಕೊಂಡರು. ಹವಾಗುಣ ಬದಲಾವಣೆಯ ಕಾರಣಕ್ಕಾಗಿ ಏರುತ್ತಿರುವ ಭೂಬಿಸಿಯನ್ನು 2 ಡಿಗ್ರಿಗಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಜಗತ್ತಿನ 80% ದೇಶಗಳು ಒಪ್ಪಿಗೆ ಸೂಚಿಸಿದವು. ಇದರ ಜೊತೆಗೆ ಮತ್ತೊಂದು ಹಸಿರುಮನೆ ಇಂಧನವಾದ ಹೆಚ್‍ಎಫ್‍ಸಿ (ಹೈಡ್ರೋಪ್ಲೋರೋಕಾರ್ಬನ್) ಯ ಬಳಕೆಯನ್ನು ನಿಷೇಧಿಸಲು 197 ರಾಷ್ಟ್ರಗಳು ಸಹಿ ಹಾಕಿದವು. ಇದೊಂದು ಕ್ರಿಯೆಯಿಂದ 0.5 ಡಿಗ್ರಿ ಭೂಬಿಸಿಯನ್ನು ತಗ್ಗಿಸಬಹುದೆಂದು ಅಂದಾಜಿಸಲಾಗಿದೆ. ಈ ರಾಸಾಯನಿಕವನ್ನು ವಾತಾನುಕೂಲ ಹಾಗೂ ತಂಗಳುಪೆಟ್ಟಿಗೆಯ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಜಾಗತಿಕವಾದ ಎಲ್ಲಾ ವಿಮಾನ ಕಂಪನಿಗಳು 2020ರ ವೇಳೆಗೆ ತಮ್ಮ ಇಂಗಾಲಾಮ್ಲ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸುವ ಭರವಸೆ ನೀಡಿದವು. ಅಲ್ಲದೆ, ಈ ವರ್ಷದಲ್ಲಿ ಮರುಬಳಕೆ ಇಂಧನಗಳಿಗೆ ಹೆಚ್ಚು ಉತ್ತೇಜನ ದೊರಕಿತು ಹಾಗೂ ಅವುಗಳ ಬೆಲೆಗಳೂ ಗಣನೀಯವಾಗಿ ತಗ್ಗಿದವು. ಕೆನಡಾ, ಫ್ರಾನ್ಸ್ ಜರ್ಮನಿ, ನೆದರ್‍ಲ್ಯಾಂಡ್, ಆಸ್ಟ್ರೀಯಾ ಹಾಗೂ ಫಿನ್‍ಲ್ಯಾಂಡ್ ದೇಶಗಳು ವಿದ್ಯುತ್ ಉತ್ಪಾದನೆಗಾಗಿ ಬಳಸುವ ಪಳೆಯುಳಕೆ ಇಂಧನಗಳ ಬಳಕೆಯನ್ನು ಸಂಪೂರ್ಣ ತ್ಯಜಿಸುವ ಇಂಗಿತ ವ್ಯಕ್ತಪಡಿಸಿದವು.
1970 ರಿಂದ 2012ರ ಅವಧಿಯಲ್ಲಿ 58% ಪ್ರಬೇಧಗಳು ನಾಶವಾಗಿವೆ ಎಂಬ ವಲ್ರ್ಡ್ ವೈಲ್ಡ್ ಫಂಡ್ ಸಂಸ್ಥೆಯ ಆತಂಕದ ವರದಿಯ ಹೊರತಾಗಿಯೂ, ಕೆಲವು ಪ್ರಾಣಿ ಪ್ರಬೇಧಗಳ ಸಂಖ್ಯೆ ಹೆಚ್ಚುತ್ತಿದೆ. 2010ರಲ್ಲಿ 3200ರಷ್ಟೇ ಇದ್ದ ಹುಲಿಗಳ ಸಂಖ್ಯೆ 2016ರಲ್ಲಿ 3890ಕ್ಕೆ ಮುಟ್ಟಿದೆ. ಜೈಂಟ್ ಪಾಂಡಗಳ ಸಂಖ್ಯೆ ಜಾಗತಿಕವಾಗಿ 17% ಹೆಚ್ಚಾಗಿದ್ದು, ಅವುಗಳನ್ನು “ಅಳಿವಿನಂಚಿನಲ್ಲಿರುವ” ಎನ್ನುವುದರಿಂದ ಬೇರ್ಪಡಿಸಿ, “ಅಪರೂಪ”ದ ಪ್ರಬೇಧ ಎಂಬ ವರ್ಗಕ್ಕೆ ಸೇರಿಸಲಾಗಿದೆ. ಕಡಲು ಪ್ರದೇಶವನ್ನು ರಕ್ಷಣೆ ಮಾಡಿದ್ದರಿಂದಾಗಿ ಕಡಲಾಮೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 

ವನ್ಯಜೀವಿ ಹಂತಕರ ವಿರುದ್ಧದ ಯುದ್ಧ ತನ್ನ ಬಲವನ್ನು ತೀಕ್ಷ್ಣವಾಗಿ ಹೆಚ್ಚಿಸಿಕೊಂಡಿದ್ದು 2016ರಲ್ಲೇ ಆಗಿದೆ. ಲೆಕ್ಕವಿಲ್ಲದಷ್ಟು ಆನೆಗಳು, ಘೆಂಡಾ, ಹುಲಿ, ಸಿಂಹ, ಚಿರತೆ, ಪ್ಯಾಂಗೋಲಿನ್, ನೀರಾನೆ ಇತ್ಯಾದಿಗಳ ವಸ್ತುಗಳಿಗೆ ಜಾಗತಿಕ ಬೇಡಿಕೆಯಿದ್ದು, ಈ ವಹಿವಾಟು ಜಗತ್ತಿನ ನಾಲ್ಕನೇ ಅತಿದೊಡ್ಡ ನಿಷೇಧಿತ ವಹಿವಾಟು ಎಂಬ ಕುಖ್ಯಾತಿಗೆ ಒಳಗಾಗಿದೆ. ಆನೆದಂತಗಳಿಗೆ ಅತಿದೊಡ್ಡ ಮಾರುಕಟ್ಟೆ ಎಂದರೆ ಅದು ಅಮೆರಿಕಾ, ಚೀನಾ, ಹಾಂಗ್‍ಕಾಂಗ್ ಇತ್ಯಾದಿಗಳು. 2016 ಜುಲೈನಲ್ಲಿ ಅಮೆರಿಕ ಆನೆದಂತದ ಕಾನೂನುಬದ್ಧ ವ್ಯಾಪಾರಕ್ಕೆ ನಿಷೇಧ ಹೇರಿದೆ. ಅಂತೆಯೇ ಚೀನಾ ಕೂಡ 2017 ಅಂತ್ಯದಲ್ಲಿ ತನ್ನ ಮುಕ್ತವಾದ ಆನೆದಂತ ವ್ಯಾಪಾರಕ್ಕೆ ನಿಷೇಧ ಹೇರಲಿದೆ. ಹಾಂಗ್‍ಕಾಂಗ್ ಕೂಡ ಕಾನೂನುಬದ್ಧ ಆನೆದಂತ ವ್ಯಾಪಾರಕ್ಕೆ ನಿಷೇಧ ಹೇರುವ ಕಾನೂನು ರೂಪಿಸುತ್ತಿದೆ. ಜೊತೆಗೆ ಅತ್ಯಾಧುನಿಕ ಥರ್ಮಲ್ ಇಮೇಜಿಂಗ್ ಕ್ಯಾಮೆರ ಮತ್ತು ಹ್ಯೂಮನ್ ಇಮೇಜಿಂಗ್ ಸಾಫ್ಟ್‍ವೇರ್‍ಗಳನ್ನು ಬಳಸಿಕೊಂಡು ಆಫ್ರಿಕಾದಲ್ಲಿ ಅನೇಕ ವನ್ಯಹಂತಕರನ್ನು ಸೆರೆ ಹಿಡಿಯಲಾಗಿದೆ. ಅಕ್ರಮ ವನ್ಯಜೀವಿ ವ್ಯಾಪಾರವು ಮನುಷ್ಯರಿಗೆ ಕೆಡುಕನ್ನು ಉಂಟು ಮಾಡುವುದಲ್ಲದೇ, ಪರಿಸರದ ಅಧ:ಪತನಕ್ಕೆ ಕಾರಣವಾಗುತ್ತದೆ. ಇದರಿಂದ ಸಂಗ್ರಹವಾಗುವ ಹಣದಿಂದ ಭಯೋತ್ಪಾದನೆ, ಡ್ರಗ್ ಮಾಫಿಯಾದಲ್ಲಿ ಬಳಕೆಯಾಗುತ್ತದೆ.
2016ನೇ ವರ್ಷ ಅತ್ಯಂತ ಬಿಸಿಯಾದ ವರ್ಷವೆಂದು ದಾಖಲಾಗಿದ್ದರೂ, ಹಿಮಕವಚಗಳು ಕಳಚಿದ್ದರೂ, ಹವಾಗುಣ ಬದಲಾವಣೆ ಉತ್ತುಂಗಕ್ಕೇರಿದ್ದರೂ, ಸಮುದ್ರದ ಹವಳದಂಡೆಗಳು ಕರಗಿದ್ದರೂ, ಜಲಮಾಲಿನ್ಯ ಹೆಚ್ಚಾಗಿದ್ದರೂ, ಜೀವಿವೈವಿಧ್ಯದ ನಾಶ ಮುಂದುವರೆದಿದ್ದರೂ, ಆನೆ, ಘೆಂಡಾ, ಗೋರಿಲ್ಲಾ, ಜೀಬ್ರಾ ಹಾಗೂ ಒರಂಗುಟಾನ್‍ಗಳ ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ, ಒಂದಿಷ್ಟು ಆಶಾದಾಯಕ ಬೆಳವಣಿಗೆಗಳು ಆಗಿವೆ. ಜಗತ್ತಿನ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಸರಕ್ಕಾಗಿ ಸಂರಕ್ಷಣೆಗಾಗಿ ಹೋರಾಡುವ, ಜಾಗೃತಿ ಮೂಡಿಸುವ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡುಬಂದಿದೆ. ಪ್ರಾಣಿಹಕ್ಕುಗಳಿಗೆ ಮಾನ್ಯತೆ ದೊರಕಿದೆ. ರೀಗ್ಲಿಂಗ್ ಬ್ರದರ್ಸ್ ಎಂಬ ಅತಿದೊಡ್ಡ ಸರ್ಕಸ್ ಕಂಪನಿ ಜನಾಭಿಪ್ರಾಯಕ್ಕೆ ಮಣಿದು ತನ್ನ ಕಂಪನಿಯಲ್ಲಿ ಇನ್ನು ಪ್ರಾಣಿಗಳನ್ನು ಬಳಸದಿರಲು ನಿರ್ಧರಿಸಿದೆ. ಪರಿಸರ ಸಂರಕ್ಷಣೆ ಜಾಗೃತಿಗಾಗಿ ಜಗತ್ತಿನ ವಿವಿಧೆಡೆ ಅನೇಕ ಸೃಜನಶೀಲ ವ್ಯಕ್ತಿಗಳು ಅನೇಕ ಡಾಕ್ಯುಮೆಂಟರಿಗಳನ್ನು ತಯಾರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಮತದಾರರು ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸುವವರಿಗೆ ತಮ್ಮ ಮತ ನೀಡಲು ತೀರ್ಮಾನಿಸಿದ್ದಾರೆ. ಹೀಗೆ ಅನೇಕ ಆಶಾದಾಯಕ ಬೆಳವಣಿಗೆಗಳು 2016 ಸಂಭವಿಸಿವೆ. 

ನಾವೇನು ಮಾಡಬೇಕು ಅಥವಾ ಮಾಡಬಹುದು? ಇಂತದೊಂದು ಪ್ರಶ್ನೆಯನ್ನಿಟ್ಟುಕೊಂಡು 2017ರ ಪಥದಲ್ಲಿ ಚಲಿಸುವ ಪ್ರಯತ್ನ ಮಾಡೋಣ. ಮೊಟ್ಟ ಮೊದಲಿಗೆ ನಮ್ಮ ನಿತ್ಯದ ಸಮಯದಲ್ಲಿ ಹತ್ತು ನಿಮಿಷವನ್ನಾದರೂ ಪರಿಸರ ಸಂರಕ್ಷಣೆಗಾಗಿ ಮೀಸಲಿಡಲು ನಿರ್ಧರಿಸಬೇಕು. ಈಗ ಎಲ್ಲರಿಗೂ ಅಭಿವೃದ್ಧಿ ಬೇಕು, ಇದನ್ನೇ ಸ್ವಲ್ಪ ಮಾರ್ಪಾಟು ಮಾಡಿ ನಮಗೆ ಸುಸ್ಥಿರ ಅಭಿವೃದ್ಧಿ ಬೇಕು ಎಂದು ಒತ್ತಾಯ ಮಾಡೋಣ. ಎಲ್ಲೇ ಇರಿ, ನಿಮಗೆ ಪರಿಚಿತ ವ್ಯಕ್ತಿಯೊಬ್ಬ ಸ್ಥಳೀಯ ಸಂಸ್ಥೆಯ ಆಡಳಿತದಲ್ಲಿರುತ್ತಾರೆ ಹಾಗೂ ಆತ ನೀವು ಆರಿಸಿ ಕಳುಹಿಸಿದ ವ್ಯಕ್ತಿಯೇ ಆಗಿರುತ್ತಾನೆ. ನಿಮ್ಮ ಸುತ್ತ-ಮುತ್ತಲಿನ ಪರಿಸ್ಥಿತಿಯನ್ನು ವಿವರಿಸಿ ಅವರೊಡನೆ ನೇರ ಮಾತನಾಡಬಹುದು ಅಥವಾ ಪತ್ರಮುಖೇನ ತಿಳಿಸಬಹುದು. ಮುಂದುವರೆದು ಈಗ ಇರುವ ಸಮಸ್ಯೆಯನ್ನು ಯಾವ ರೀತಿಯಲ್ಲಿ ಪರಿಹರಿಸಿ, ಸ್ಥಿತಿಯನ್ನು ಉತ್ತಮಗೊಳಿಸಬಹುದು ಎಂದು ಚರ್ಚಿಸಬಹುದು. ನಮಗಂತೂ ಭೀಕರ ಬರಗಾಲ ತಟ್ಟಲಿದೆ. ಅದಕ್ಕೇನು ಪೂರ್ವತಯಾರಿ ಮಾಡಿಕೊಂಡಿದ್ದೇವೆ ಎಂದು ಕೇಳಿಕೊಂಡರೆ, ಏನೂ ಇಲ್ಲ ಎಂದೇ ಉತ್ತರ ಬರುತ್ತದೆ. ರಾಜ್ಯ ಸರ್ಕಾರ ಅಥವಾ ಕೇಂದ್ರ ಬರ ಪರಿಹಾರದ ರೂಪವಾಗಿ ಹಣವನ್ನೇನೋ ನೀಡಬಹುದು. ನೀರಿಗಾಗಿ ಏನು ಮಾಡೋಣ? ಹೀಗೆ ಎಲ್ಲರ ಬದುಕಿಗಾಗಿ, ಒಳಿತಿಗಾಗಿ, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಕೊಂಚವಾದರೂ ಚಿಂತಿಸುವ, ಚರ್ಚಿಸುವ, ತ್ಯಾಗ ಮಾಡುವ ಮನೋಭಾವ ಎಲ್ಲರಲ್ಲೂ ಬರಲಿ.
ಓರಿಯನ್ ಮೆಕ್ಗಾರ್ತಿಯವರ ಲೇಖನವನ್ನು ಭಾವಾನುವಾದ ಮಾಡಲಾಗಿದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x