ಭಾರತೀಯ ಸಮಾಜದ ರೂಢ ಮೂಲ ನಂಬಿಕೆಗಳ ಮೂಲ ಸ್ವರೂಪವನ್ನು ಪ್ರಶ್ನಿಸಿದ, ಅಲುಗಾಡಿಸಿದ ತೀಕ್ಷ್ಣ ವಿಚಾರವಾದಿ, 20ನೇ ಶತಮಾನದ ಭಾರತೀಯ ಮಹಾನ್ ಚಿಂತಕ ದ್ರಾವಿಡ ನಾಡಿನ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್ 1879 ಸೆಪ್ಟೆಂಬರ್ 17ರಂದು ಮದ್ರಾಸ್ ರಾಜ್ಯದ ಕೊಯಿಮತ್ತೂರ್ ಜಿಲ್ಲೆಯ ಈರೋಡು ಎಂಬಲ್ಲಿ ಹುಟ್ಟಿದರು, ತಮ್ಮ ವಿಚಾರಗಳಿಗೆ ಚಳುವಳಿಯ ಸ್ಪರ್ಶ ನೀಡಿದ ಅವರ ಬದುಕು ಮತ್ತು ಚಿಂತನೆಗಳು ದ್ರಾವಿಡ ಅಸ್ಮಿತೆಯೊಂದನ್ನು ಹುಟ್ಟು ಹಾಕಿ, ತಮಿಳು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಪಸರಿಸುವಂತೆ ಮಾಡಿದ್ದು ಇತಿಹಾಸ.
ಪೆರಿಯಾರ್ ರಾಮಸ್ವಾಮಿಯವರ ತಂದೆ ವೆಂಕಟಪ್ಪ ನಾಯ್ಡು, ತಾಯಿಯ ಹೆಸರು ಚಿನ್ನ ತಾಯಮ್ಮ. ಕೇವಲ ಐದು ವರ್ಷಗಳವರೆಗೆ ವಿದ್ಯಾಭ್ಯಾಸ ಮಾಡಿದ ರಾಮಸ್ವಾಮಿ, ತನ್ನ ಹನ್ನೆರಡನೇ ವಯಸ್ಸಿನಲ್ಲೇ ತಂದೆಗೆ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ತಮ್ಮ 19ನೇ ವಯಸ್ಸಿನಲ್ಲಿ ನಾಗಮ್ಮಾಯಿಯ ಕೈ ಹಿಡಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯವರು ಮನೆಯಲ್ಲಿ ಏರ್ಪಡಿಸುತ್ತಿದ್ದ ಪ್ರವಚನಗಳನ್ನು ಕೇಳಿ, ಪಂಡಿತ ಮಹಾಶಯರ ಮಾತುಗಳನ್ನು ಗ್ರಹಿಸಿ ಅನೇಕ ವಿರೋಧಾಭಾಸ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಕೌಟುಂಬಿಕ ವಿಷಯದಲ್ಲಿ ತಂದೆಯವರೊಡನೆ ಜಟಾಪಟಿಯಾಗಿ ಮನೆ ಬಿಟ್ಟು ವಾರಣಾಸಿ ತಲುಪಿದರು. ಕಾಶೀ ವಿಶ್ವನಾಥನ ಸನ್ನಿಧಿಯಲ್ಲೇ ಅನೇಕ ಮೂಢನಂಬಿಕೆಯಂತಹ ಚಟುವಟಿಕೆಗಳು ಅವರಿಗೆ ಬೇಸರ ತರಿಸುತ್ತಿದ್ದವು. ಪವಿತ್ರ ಗಂಗಾ ನದಿಯಲ್ಲಿ ತೇಲುತ್ತಿದ್ದ ಕೊಳೆತ ಹೆಣಗಳು, ವಿಪರೀತ ಭಿಕ್ಷುಕರ ಕಾಟ ಇತ್ಯಾದಿಗಳನ್ನು ಕಂಡು ಬೇಸರಿಸುತ್ತಿದ್ದರು. 1904ರಲ್ಲಿ ಒಂದು ದಿನ ಕಾಶಿಯಲ್ಲಿರುವಾಗ ತೀವ್ರ ಹಸಿವಿನಿಂದ ಕಂಗೆಟ್ಟು ಬ್ರಾಹ್ಮಣರಿಗೆ ಮೀಸಲಿರುವ ಛತ್ರದಲ್ಲಿ ಹೇಗಾದರೂ ಮಾಡಿ ಊಟ ಮಾಡಲೇಬೇಕೆಂದು ಜನಿವಾರ ಧರಿಸಿ ಹೋದರೂ ಕಾವಲುಗಾರರು ಇವರು ಬಿಟ್ಟ ಮೀಸೆಯಿಂದ ಅನುಮಾನಿಸಿ ಹೊರತಳ್ಳಿದರು. ದಕ್ಷಿಣ ಭಾರತದ ಶ್ರೀಮಂತ ವರ್ತಕ ದ್ರಾವಿಡ ಜನಾಂಗದವರೇ ಈ ಕಟ್ಟಡವನ್ನು ಕಟ್ಟಿಸಿದ್ದರೂ ತಮಗೇಕೆ ಊಟ ನೀಡಲಿಲ್ಲವೆಂದು ಬಹುವಾಗಿ ಚಿಂತಿಸಿದರು. ವೈದಿಕರ ಇಂತಹ ದುರ್ನಡತೆಯ ಬಗ್ಗೆ ವ್ಯಾಕುಲಗೊಂಡು ಹಿಂದೂ ಧರ್ಮದ ಬಗ್ಗೆ ಅದೂವರೆಗಿನ ಒಳ್ಳೆಯ ಭಾವನೆಗಳನ್ನು ಅವರಲ್ಲಿ ನಾಶಗೊಳಿಸಿತ್ತು. ಇದುವೇ ಮುಂದೆ ನಾಸ್ತಿಕತೆಗೆ ನಾಂದಿ ಹಾಡಿತು. ತದನಂತರ ಮನೆಗೆ ತೆರಳಿ ತಂದೆಯವರ ವ್ಯಾಪಾರ ವಹಿವಾಟನ್ನು ಹೆಗಲಿಗೇರಿಸಿಕೊಂಡು ಅಂಗಡಿಯ ಹೆಸರನ್ನು “ಈ.ವ್ಹಿ.ರಾಮಸ್ವಾಮಿ ನಾಯ್ಕರ ಮಂಡಿ” ಯೆಂದು ಬದಲಿಸಿ ಈರೋಡಿನಲ್ಲಿ ಪ್ರಸಿದ್ಧ ವಾಣಿಜ್ಯೋದ್ಯಮಿಯಾಗಿ ಬದಲಾದರು. ಸಮಯ ಸಿಕ್ಕಾಗಲೆಲ್ಲ ಸಾರ್ವಜನಿಕ ಜೀವನವನ್ನು ಪ್ರವೇಶಿಸಿ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳಾದರು. ಉಚ್ಛ ಮನೆತನದವರಾದರೂ ಆಚಾರ ವಿಚಾರಗಳನ್ನು ಧಿಕ್ಕರಿಸಿ ಪ್ಲೇಗ ರೋಗದಿಂದ ಸತ್ತವರ ಶವ ಸಂಸ್ಕಾರವನ್ನು ಮಾಡಿದರು. 1918ರಲ್ಲಿ ಈರೋಡು ಮುನ್ಸಿಪಾಲಿಟಿಯ ಅಧ್ಯಕ್ಷರಾಗಿ ಅನೇಕ ಜನ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡು, ಸುತ್ತ ಮುತ್ತಲಿನ ಸಮಾಜಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದು ಇವರ ಹೆಗ್ಗಳಿಕೆ.
1919ರಲ್ಲಿ ಆಗಿನ ಕಾಂಗ್ರೆಸ್ ಮುಖಂಡ ಸಿ.ರಾಜಗೋಪಾಲಾಚಾರಿಯವರೊಂದಿಗೆ ಸಖ್ಯ ಬೆಳಸಿ, ಮಹಾತ್ಮಾ ಗಾಂಧೀಜಿಯವರು ನಡೆಸುತ್ತಿದ್ದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, ಕಾಂಗ್ರೆಸ್ ಪಕ್ಷವನ್ನು ಕೂಡ ಸೇರಿದರು. ಗಾಂಧೀಜಿಯವರ ಮಾತನ್ನು ತುಂಬಾ ಗೌರವಿಸುತ್ತಿದ್ದ ರಾಮಸ್ವಾಮಿ, ಅವರಿಚ್ಛೆಯಂತೆ ಎಲ್ಲ ಸಂಘ ಸಂಸ್ಥೆಗಳಿಂದ ಹೊರಬಂದು, ಉತ್ತಮ ವರಮಾನವನ್ನೂ ತರುತ್ತಿದ್ದ ವಹಿವಾಟನ್ನು ಸ್ಥಗಿತಗೊಳಿಸಿ, ಖಾದಿ ಧಾರಿಯಾಗಿ ಜನಹಿತ ಕಾರ್ಯಕ್ಕೆ ಕಟಿಬದ್ಧರಾದರು.
1920ರಲ್ಲಿ ಬ್ರಿಟೀಷ್ ಸರಕಾರದ ವಿರುದ್ಧ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಾಗೆಯೇ ಹೆಂಡ ಮಾರಾಟವನ್ನೂ ವಿರೋಧಿಸಿ ಜನಾನುರಾಗಿಯಾಗಿದ್ದರು. 1925ರಲ್ಲಿ ಕಂಚಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅಸ್ಪøಶ್ಯರಿಗೂ ದೇಗುಲ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಹಕ್ಕು ಮಂಡಿಸಿದಾಗ ಅನೇಕ ಬ್ರಾಹ್ಮಣ ಸದಸ್ಯರಿಂದ ತಿರಸ್ಕಾರಗೊಂಡ ನಂತರ ಅದೇ ಸಿಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನೇ ತ್ಯಜಿಸಿದರು.
ಸಾಮಾಜಿಕ ಸೇವೆ / ಸಾಮಾಜಿಕ ಪ್ರತಿಭಟನೆ
ದ್ರಾವಿಡ ಜನರ ಉದ್ಧಾರಕ್ಕಾಗಿಯೇ “ಆತ್ಮ ಗೌರವ ಚಳುವಳಿ ಹುಟ್ಟು” ಹಾಕಿದರು. ಗೊಡ್ಡು ಸಂಪ್ರದಾಯಗಳನ್ನು ಬೇರು ಸಮೇತ ಕಿತ್ತೊಗೆಯಲು ಕರೆ ನೀಡಿದರು. 1928ರಲ್ಲಿ “ರಿವಾಲ್ಟ್” ಎಂಬ ಆಂಗ್ಲ ಮ್ಯಾಗಜೀನನ್ನು ಪ್ರಕಟಿಸಿದರು. 1929ರಲ್ಲಿ ಸರಳ ವಿವಾಹ ಪದ್ಧತಿಗೆ ಒತ್ತುಕೊಡಬೇಕೆಂದು ಸಾರಿದರು. ಸಾಮಾಜಿಕ ಸೇವೆಯನ್ನೇ ಗುರಿಯಾಗಿಸಿ ಮಲೇಶಿಯಾ, ಈಜಿಪ್ಟ್, ಟರ್ಕಿ, ಗ್ರೀಸ್, ರಷ್ಯಾ, ಜರ್ಮನಿ, ಇಂಗ್ಲೆಂಡ್, ಸ್ಪೇನ್, ಫ್ರಾನ್ಸ್, ಪೊರ್ಚುಗಲ್, ಮತ್ತು ಶ್ರೀಲಂಕಾ ದೇಶಕ್ಕೂ ಭೇಟಿ ನೀಡಿ ಅಲ್ಲಿನ ಸಾಮಾಜಿಕ ಪದ್ಧತಿಯನ್ನು ಅಭ್ಯಸಿಸಿದರು. ಸಾಮಾಜಿಕ ಹಾಗೂ ಆರ್ಥಿಕ ಪದ್ಧತಿಗಳಲ್ಲಿ ಬಹುವಾಗಿ ಮಾಕ್ರ್ಸ ವಾದವನ್ನು ಒಪ್ಪುತ್ತಿದ್ದರು. ಅಂದಿನ ಮುಖ್ಯ ಮಂತ್ರಿಯಾದ ಸಿ. ರಾಜಗೋಪಾಲಾಚಾರಿಯವರು ಶಾಲೆಗಳಲ್ಲಿ ಕಡ್ಡಾಯಗೊಳಿಸಿದ ಹಿಂದಿ ಕಲಿಕಾ ಪದ್ಧತಿಯು ತಮಿಳು ಭಾಷೆ ಹಾಗೂ ಸಂಸ್ಕೃತಿಯ ಮೇಲೆ ದಾಳಿ ನಡೆಸುವುದನ್ನು ಮನಗಂಡು ತೀವ್ರ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಕ್ರಾಂತಿ
ಜಾತಿ ವಾದಿಗಳನ್ನು ಮುಖ್ಯವಾಗಿ ಬ್ರಾಹ್ಮಣ ಪಂಗಡವನ್ನು ದ್ವೇಷಿಸುತ್ತಿದ್ದ ರಾಮಸ್ವಾಮಿ ಸಮಾನತೆ, ಸಾಮಾಜಿಕ ನ್ಯಾಯಗಳಿಗೆ ಹೋರಾಡಿ, ಮಹಿಳಾ ಹಕ್ಕು ಕಾಯ್ದೆಗೆ 30ರ ದಶಕದಲ್ಲಿಯೇ ದೊಡ್ಡ ದನಿಯನ್ನೂ ಎತ್ತಿದ್ದರು. ಶಿಕ್ಷಣ-ಮನುಷ್ಯ ಸಹಜ ಸಂಬಂಧಗಳನ್ನು ದೂರವಿಟ್ಟ ಮನುವಾದಿಗಳನ್ನು ವಿರೂಪಗೊಳಿಸಿದರು.
ವೈಚಾರಿಕ ಮನೋಭಾವ
ಜಾತಿ ಪದ್ಧತಿಯನ್ನು ಆಮೂಲಾಗ್ರವಾಗಿ ವಿರೋಧಿಸುತ್ತಾ, ಆಧ್ಯಾತ್ಮ ಹಾಗೂ ಭಾವನಾತ್ಮಕತೆ ಮೂಲಕ ದೇವರನ್ನು ಸಾಕ್ಷಾತ್ಕಾರಗೊಳಿಸುವುದು ಸರಿಯಲ್ಲ ಅದರ ಬದಲಾಗಿ ಮಾನವ ತನ್ನ ಇತಿಹಾಸದ ಉದ್ದಕ್ಕೂ ವಿಮರ್ಶಾತ್ಮಕ ಬುದ್ಧಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದಾದರೆ ಸಮಾಜದ ಪ್ರಗತಿ ಇನ್ನಷ್ಟು ವೇಗವಾಗಿ ಉನ್ನತ ಮಟ್ಟಕ್ಕೆ ಏರುತ್ತಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು.
1956ರಲ್ಲಿ ಮದ್ರಾಸಿನ ಮರೀನಾ ಬೀಚ್‍ನಲ್ಲಿಯ ಶ್ರೀರಾಮ ಚಿತ್ರಗಳನ್ನು ಸುಟ್ಟ ಕಾರಣಕ್ಕಾಗಿ ಇವರನ್ನು ಜೈಲಿಗಟ್ಟಿದರೂ ಅಲ್ಲಿಯೇ ಇದ್ದುಕೊಂಡು ಮನುಷ್ಯರೆಲ್ಲರೂ ಸಮಾನರೇ, ಮುಗ್ಧ ಜನರನ್ನು ಶೋಷಣೆ ಮಾಡುವ ಸಲುವಾಗಿಯೇ ಜಾತಿ ವರ್ಗಗಳನ್ನು ಸೃಷ್ಠಿಸಲಾಗಿದೆ ಎಂದು ಸದಾ ಗುಡುಗಿತ್ತಿದ್ದರು. ಜಾತಿಯೆಂಬ ವಿಷ ವೃಕ್ಷವನ್ನು ಕಿತ್ತೊಗೆಯಲು ಕರೆ ನೀಡಿ, ಮೂಢ ನಂಬಿಕೆ, ಕಂದಾಚಾರ ಹಾಗೂ ಅಸ್ಪೃಶ್ಯತೆಯ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿದರು.
ಮಾರ್ಕ್ಸ್ ಮತ್ತು ಲೆನಿನ್ ಸಾಹಿತ್ಯ ಪ್ರಭಾವ
ಮಾರ್ಕ್ಸ್ ಮತ್ತು ಲೆನಿನ್ ಸಾಹಿತ್ಯದ ಅನುಯಾಯಿಯಾದ ರಾಮಸ್ವಾಮಿಯವರಿಗೆ 1970ರಲ್ಲಿ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ, ತಮ್ಮ ಜೀವನದ ತೊಂಭತ್ನಾಕು ವರ್ಷ ಹೋರಾಟಕ್ಕೇ ಮುಡಿಪಾಗಿಟ್ಟ ಪೆರಿಯಾರರವರನ್ನು ಗೌರವಿಸಿತ್ತು. ಯುನೆಸ್ಕೋ ನೀಡಿರುವ ಪತ್ರದಲ್ಲಿ “ಇವರು ನವಯುಗದ ಪ್ರವಾದಿ, ದಕ್ಷಿಣ ಪೂರ್ವ ಏಷ್ಯಾದಲ್ಲಿನ ಸಾಕ್ರೆಟಿಸ್, ಕ್ರಾಂತಿಕಾರಕ ಬದಲಾವಣೆಗಳ ಪಿತಾಮಹನಾದ ಈತ ಎಲ್ಲ ರೀತಿಯ ಅಜ್ಞಾನ, ಮೂಢ ನಂಬಿಕೆ, ಕಟ್ಟು ಪಾಡು, ಮನುಷ್ಯ-ಮನುಷ್ಯ ನಡುವಿನ ಭೇದಗಳ ಕಡುವಿರೋಧಿಯಾಗಿದ್ದಾರೆಂದು ಉಲ್ಲೇಖಿಸಿದ್ದು ಕಂಡುಬರುತ್ತದೆ.
ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಾಗಿ ತಮ್ಮ ಸ್ವಾರ್ಥ ತ್ಯಜಿಸಿ, ತಾವು ನಂಬಿದ ಧ್ಯೇಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ 24ನೇ ಡಿಸೆಂಬರ್ 1973ರಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರೂ ಪ್ರಾತಃ ಸ್ಮರಣೀಯ ಸಂತರೆನಿಸಿಕೊಂಡಿದ್ದಾರೆ.
-ಶ್ರೀವಲ್ಲಭ ರಾ. ಕುಲಕರ್ಣಿ