ಹಿಂದಿನ ವರ್ಷ ಇದೇ ಸಮಯ. ಬೆಂಗಳೂರಿಗೆ ಕಾಲಿಟ್ಟ ಹೊಸತು. ಗೆಳೆಯರ ಬಾಯಲ್ಲಿ 10k 10k 10k.. ಎಂಬ ಝೇಂಕಾರ.. ಯಾರಾದ್ರೂ ಓಡ್ರಪ್ಪ, ಇದು ನನ್ನಿಂದೆಂತೂ ಆಗದ ಕೆಲಸ ಅಂತ ನನ್ನ ಭಾವನೆ. ಹಾಗಾಗಿ ಯಾರೇ ಈ ಬಗ್ಗೆ ಮಾತಾಡಕ್ಕೆ ಬಂದ್ರೂ ನಾನು ಇದ್ದ ಬುದ್ದಿಯನ್ನೆಲ್ಲಾ ಉಪಯೋಗಿಸಬೇಕಾಗಿ ಬಂದ್ರೂ ಉಪಯೋಗಿಸಿ ಅಲ್ಲಿಂದ ಎಸ್ಕೇಪ್ 🙂 ದಿನಾ ಬೆಳಬೆಳಗ್ಗೆ ಎದ್ದು ಓಡೋದಂದ್ರೆ ಏನು ಹುಡುಗಾಟನ ? ಬೆಂಗ್ಳೂರಿಗೆ ಬಂದ ಮೇಲೆ ಆಲಸ್ಯವೇ ನಾನು ಅಂತಾಗಿದ್ದೋನು ಮತ್ತೆ ಎದ್ದು ಓಡೋ ಹಾಗೆ ಮಾಡಿದ್ದೇ ಈ 10k.. ಮುಂಬಯಲ್ಲಿ ೨೦೦೪ರಲ್ಲಿ ಮತ್ತು ಬೆಂಗ್ಳೂರಲ್ಲಿ ೨೦೦೮ರಲ್ಲಿ ಶುರುವಾದ ಈ ಮ್ಯಾರಾಥಾನ್ಗಳಲ್ಲಿ ಹದಿನೈದರಿಂದ ಎಪ್ಪತ್ತರ ಮೇಲಿನ ಮುದುಕರೂ ಓಡುವುದನ್ನು ನೋಡುವುದೇ ಒಂದು ಚೆಂದ. ಸಂಡೆ ಅಂತ ಹೊದ್ದು ಮಲಗೋ ಸೋಂಬೇರಿ ಸಿದ್ದರಲ್ಲೊಬ್ಬನಾಗಿದ್ದ ನಾನು ಈ ಸಲದ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಸವಿನೆನಪುಗಳು ಈ ಲೇಖನಕ್ಕೆ ಸ್ಪೂರ್ತಿ.
ಸ್ಕೂಲು, ಕಾಲೇಜಲ್ಲಿದ್ದಾಗ ಆಟ, ಸೈಕಲ್ಲು ಅಂತ ಯಾವುದೇ ಕಾಯಿಲೆಗಳಿಲ್ದೇ ಆರಾಮಾಗಿದ್ದ ನಮಗೆ ಕಾಲೇಜು ಮುಗಿತಿದ್ದಾಗೆ ಏನಾಗ್ ಬಿಡತ್ತೋ ಗೊತ್ತಿಲ್ಲ. ಹೊಟ್ಟೆಪಾಡಿಗೆ ಅಂತ ಬೇರೆ ಊರು ಸೇರೋ ನಾವು ಆಲಸಿಗಳಾಗಿ ಊದ್ತಾ ಹೋಗ್ತೀವಿ.. ಹಳ್ಳಿಗಳ ಕಡೆ ಓಟ ಅಂದ್ರೆ ಕಾಂಪಿಟೇಷನ್ಗಗಳಲ್ಲಿ ಮಾತ್ರ. ದಿನಾ ಬೆಳಿಗ್ಗೆ ಓಡೋದು ಅಂದ್ರೆ ನೆನಪಾಗೋದು ಪೇಟೆಯವರ ವಿಚಿತ್ರ ವೇಷಭೂಷಣಗಳ "ಜಾಗಿಂಗ್" ಮಾತ್ರ. ಮೈಮುರಿಯೋವಷ್ಟು ಕೆಲ್ಸದಲ್ಲೇ ಹೈರಾಣಾಗಿ ಹೋಗೋ ಅವ್ರಿಗೆ ಬೇರೆ ವ್ಯಾಯಾಮದ ಜರೂರತ್ತೂ ಇಲ್ಲ ಬಿಡಿ 🙂 ಸದಾ ಕಂಪ್ಯೂಟರ್ , ಟೀವಿಗಳಲ್ಲೇ ಮುಳುಗಿ ಹೋಗೋ ಪೇಟೆ ಬಾಲರಿಗಿಂತ ಹಳ್ಳಿ ಹುಡುಗ್ರು ಹೆವಿ ಆಕ್ಟೀವ್. ಆದ್ರೆ ಪೇಟೆಯ ಕಡೆ ವಾಲಿದಂತೆಲ್ಲಾ ಅವ್ರಿಗೂ ಆಲಸ್ಯದ ಆಲಿಂಗನ ಶುರು ಆಗೋಗತ್ತೆ 🙁 ಹೈಸ್ಕೂಲಲ್ಲಿ ಹೆವಿ ಆಕ್ಟೀವ್ ಆಗಿದ್ದ ಹುಡುಗರು ಎಸ್ಸೆಸ್ಸೆಲ್ಸಿ , ಪಿಯುಸಿಗೆ ಬರೋ ಹೊತ್ತಿಗೆ ಆಟಪಾಟಗಳೆಲ್ಲಾ ವೇಸ್ಟೆನ್ನೋ ಭಾವ ಮೂಡಿದ್ರೆ ಆಶ್ಚರ್ಯವಿಲ್ಲ 🙁 ! ಹೀಗೇ ಬಂದ ನಾನೂ ಬೆಂದಕಾಳೂರಿನ ನನಗೇ ಅರಿವಿಲ್ಲದಂತೆ ಇಲ್ಲಿನ ಆಲಸಿಗಳ ಕ್ಲಬ್ಬಿನ ಅಘೋಷಿತ ಸದಸ್ಯನಾಗೋಗಿದ್ದೆ 🙂 ಹೀಗೇ ಇದ್ದುಬಿಡ್ತಿದ್ದ ನಾನು ಮತ್ತೆ ಹಳೆ ಲವಲವಿಕೆಗೆ ಮರಳೋ ತರ ಆಗಿದ್ದು ಸ್ವಲ್ಪ ಮಜವಾಗಿದೆ 🙂
ದಿನಾ ಏಳದೇ ಇದ್ರೂ ಕೆಲೋ ವಾರ ಬೆಳಿಗ್ಗೆ ಐದಕ್ಕೆ ಏಳೋ ಅಭ್ಯಾಸ. ಹಿಂಗೇ ಎದ್ದೊಂದು ದಿನದ ಐದೂ ಮುಕ್ಕಾಲರ ಸಮಯ. ಹಂಗೇ ರಸ್ತೆಯಲ್ಲಿ ಕಣ್ಣು ಹಾಯ್ಸಿದ್ರೆ ಪುಟು ಪುಟು ಅಂತ ಪುಟ್ಟ ಹೆಜ್ಜೆ ಹಾಕಿ ಓಡೋ ಸುಮಾರು ಐದಾರು ಕ್ಲಾಸಿನ ಹುಡುಗ ಕಾಣ್ತಾನೆ.. ಅವನ ಹಿಂದೇನೆ ಒಂದಿಬ್ರು ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿ ಲಯಬದ್ದವಾಗಿ ಓಡ್ತಿರೋ ಇಬ್ಬರು ಯುವಕರು. ಇನ್ನೂ ಕ್ಯಾಬು ಯಾಕ್ಬಂದಿಲ್ಲಪ್ಪ ಅಂದ್ಕೊಳ್ಳುವಾಗ್ಲೇ ಮತ್ತೊಂದಿಬ್ರು ಓಡುಗರು ! ಸುಮಾರು ಐವತ್ತು ವರ್ಷ ವಯಸ್ಸಿನ ಅಂಕಲ್ ಮತ್ತವರ ಹಿಂದೆ ಬರ್ತಿರೋ ಒಬ್ಬ ಯುವತಿ.. ನೈಕಿ ಶೂ, ಕ್ಯಾಪ್, ಕೈಗೆ ತೊಟ್ಟ ಬ್ಯಾಂಡು, ಜೊತೆಗೊಂದು ನೀರಿನ ಬಾಟ್ಲಿಯಿಂದ ಓಟ ಇವರ ನಿತ್ಯದ ವ್ಯಾಯಾಮ ಅಂತ ನೋಡೋ ಯಾರಿಗಾದ್ರೂ ಗೊತ್ತಾಗ್ತಿತ್ತು. ಸಂಜೆ ಏಳರ ಸಮಯದಲ್ಲಿ ಎಲ್ಲಾದ್ರೂ ವಾಕಿಂಗ್ ಹೋದ್ರೆ ಇದೇ ತರ ಓಡೋ ವಯಸ್ಕರು ಸಿಗ್ತಿರ್ತಾರೆ.. ಇವ್ರೆಲ್ಲಾ ಓಡೋದನ್ನ ನೋಡಿ ನನಗೇನಾಗಿದೆ ದಾಡಿ ಅನ್ನುಸ್ತಾ ಇತ್ತು ! 🙂 ಹೀಗಿದ್ದಾಗ್ಲೇ ಬಂದಿದ್ದು ಕಂಪನಿಯ ಪ್ರೆಷರ್ಸ್ಗಳ ಐದು ಕಿಲೋಮೀಟರ್ ಓಟ. ಒತ್ತಾಯಕ್ಕೆ ಅಂತ ನೋಂದಣಿ ಮಾಡ್ಸಾಯ್ತು. ನೋಂದಣಿ ಮಾಡ್ಸಿದ ಮರ್ಯಾದೆ ಹೋಗತ್ತೆ ಅಂತ ಒಂದು ವಾರ ಪ್ರಾಕ್ಟೀಸ್ಗೆ ಅಂತ ಓಡಿದ್ದೂ ಆಯ್ತು 🙂 ಆಮೇಲೆ ಓಟದ ದಿನ ೨೨ ನಿಮಿಷಗಳಲ್ಲಿ ಓಟ ಮುಗಿಸಿದಾಗ ನನ್ನ ಮೇಲೇ ಒಂಥರಾ ಹೆಮ್ಮೆ.. ೧೬-೧೭ ನಿಮಿಷಗಳಲ್ಲಿ ಓಟ ಮುಗಿಸಿದವರಿದ್ದರೂ ನಾನು ಹದಿನಾರನೆಯನಾಗಿದ್ದು ಅಂದಿನ ಖುಷಿ. ಅದಾದ ಮೇಲೆ ಮತ್ತೆ ಜನವರಿ ೨೬ ಕ್ಕೆ ಮತ್ತೆ ೫ ಕಿಲೋಮೀಟರ್ ಓಟ. ಅದರಲ್ಲಿ ಸೀನಿಯರ್ಗಳ ನಡುವೆ ಮತ್ತೆ ೧೪ನೇ ಪ್ಲೇಸು.. ಓಟ ಅಂದ್ರೆ ಗೆಲ್ಲೋಕೆ ಅಂತ ಭಾವನೆಯಲ್ಲಿದ್ದ ನಾನು, ಹೇ ಪರ್ವಾಗಿಲ್ಲ ಕಣೋ.. ಈ ಓಟದಿಂದ ಆರೋಗ್ಯಕ್ಕೆ ಎಷ್ಟಲ್ಲಾ ಲಾಭವಿದೆ. ಈ ಬೆಂದಕಾಳೂರಲ್ಲಿ ಕೆಲಸದ ಒತ್ತಡಗಳಲ್ಲಿ ಬೆಂದುಹೋಗೋ ಬದ್ಲು ಆರೋಗ್ಯದ ದೃಷ್ಟಿಯಿಂದ್ಲಾದ್ರೂ ಯಾಕೆ ಓಡೋದನ್ನ ಅಭ್ಯಾಸ ಮಾಡ್ಕೋಬಾರ್ದು ಅಂತ ಯೋಚಿಸೋಕೆ ಶುರು ಮಾಡ್ದೆ. ಹಿಂಗೇ ಯೋಚಿಸ್ತಾನೆ ಇರ್ಬೇಕಾದ್ರೆ ಈ ವರ್ಷದ 10k ಮತ್ತೆ ! 🙂 ಚಾರಣಗಳಲ್ಲಿ ಕಿಲೋಮೀಟರ್ಗಟ್ಟಲೇ ನಡೆದೂ ಒಮ್ಮೆಗೇ ಹತ್ತು ಕಿಲೋಮೀಟರ್ ಓಡೋ ಶಕ್ತಿ ಇದೆಯಾ ಅನ್ನೋ ಡೌಟು. ಏನಾದ್ರಾಗಲಿ ಅಂತ ರಿಜಿಸ್ಟರ್ ಮಾಡ್ಸಾಯ್ತು.. ಓಡ್ಬೇಕು ಅಂತ ಪ್ಲಾನ್ ಮಾಡಿದ್ರೂ ಮತ್ತದೇ ಆಲಸ್ಯದ ಚಾಳಿ 🙁 ಪೀಜಿ ಟಾರಸಿ ಮೇಲೆ ರೌಂಡ್ ಹಾಕೋದು, ಅಪ್ರೂಪಕ್ಕೆ ಹೊರ್ಗಡೆ ಓಡಿದ್ರೂ ೨-೩ ಕಿ.ಮೀ ಗಿಂತ ಜಾಸ್ತಿ ಓಡ್ತಿರಲಿಲ್ಲ 🙂 ಹುಟ್ಟುಗುಣ… ಅಲ್ಲವೇ 🙂 ಇದೇ ಹಳೆ ಕತೆ ಪುರಾಣ ಹೇಳೋ ಬದ್ಲು ಸೀದಾ ಇವತ್ತಿನ 10k ಗೆ ಹೋಗೋಣ.. ಸೀದಾ ಚಿನ್ನಸ್ವಾಮಿ ಸ್ಟೇಡಿಯಂಗೆ 🙂
ಬೆಳಿಗ್ಗೆ ಮೊದಲಿದ್ದದ್ದು 10k ಚಾಲೆಂಜ್. ಅಂದ್ರೆ ಅಂತರರಾಷ್ಟ್ರೀಯ ಓಡುಗರ ಸ್ಪರ್ಧೆ. ಉಗಾಂಡ, ಕೀನ್ಯಾ, ಆಸ್ಟ್ರೇಲಿಯ ಹೀಗೆ ವಿದೇಶಿ ಓಡುಗರ ನಡುವೆ ಭಾರತೀಯ ಓಡುಗರೂ ಸುಮಾರು ಅರ್ಧ ಘಂಟೆ ಅವಧಿಯಲ್ಲಿ ಓಟ ಮುಗಿಸುತ್ತಿದ್ದರೆ ಅವರ ಓಟದ ಪರಿ ಟೀವಿಯಲ್ಲಿ ನೋಡೋದೇ ಒಂತರಾ ಥ್ರಿಲ್..ಟೀವಿಯಲ್ಲಿ ನೋಡೋಕೂ ಸ್ಟೇಡಿಯಂನಲ್ಲೇ ನೋಡೋಕೂ ಇರೋ ವ್ಯತ್ಯಾಸ ಅಲ್ಲೇ ತಿಳಿಯಬೇಕು. ಅದಾದ ಮೇಲೆ ಮಹಿಳಾ ಓಟ. ಅದಾದ ಮೇಲೆ ೭:೨೨ ಕ್ಕೆ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯರಿಂದ ನಮ್ಮ ಓಪನ್ 10k ಗೆ ಚಾಲನೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಕಂಠೀರವ ಕ್ರೀಡಾಂಗಣ ತುಂಬಿದ್ದ ಓಡುಗರ ನಡುವೆ ಓಟದ ಟ್ರಾಕ್ ಶುರುವಿನ ಗೆರೆ ಮುಟ್ಟೋದ್ರೊಳಗೇ ೧೦ ನಿಮಿಷ ಆಗೋಗಿತ್ತು 🙂 ನಿಧಾನ ಓಡುಗರ ನಡುವೆ ಜಾಗ ಮಾಡಿಕೊಂಡು ಮುಂದೆ ಹೋಗೋ ಕೆಲಸ ಇದ್ಯಲ್ಲ.. ಪದೇ ಪದೇ ಗತಿ ಬದಲಾಯಿಸುತ್ತಾ ಎದುರಿಗೆ ಸಿಗೋ ನಿಧಾನ ಓಡುಗರ ಮಧ್ಯೆ ಜಾಗ ಮಾಡಿಕೊಳ್ಳುತ್ತಾ, ಯಾರಿಗಾದರೂ ಕೈ ತಾಗಿದ್ರೆ ಸಾರಿ ಕೇಳುತ್ತ ಮುಂದೆ ಓಡೋದ್ರಲ್ಲಿ ಓಟದ ದೂರ ಜಾಸ್ತಿಯಾಗ್ತಾ ಹೋದಂಗೆ ಅನ್ನಿಸುತ್ತೆ 🙂 ಓಡು ಓಡು ಓಡು.. ಹಿಂಗೇ ಓಡುತ್ತಾ ಕಂಠೀರವ ಸ್ಟೇಡಿಯಂನಿಂದ ಹೊರಬಂದು ಅಕ್ಕಪಕ್ಕದ ಮಿಲಿಟರಿ ಕ್ಯಾಂಪುಗಳಿರೋ ರಸ್ತೆಯಲ್ಲಿ ಮುಂದುವರೆದೆವು… ಓಡಿದ್ದು ಎಷ್ಟಾಯ್ತಪ್ಪ ಅಂತ ನೋಡಿದ್ರೆ ಒಂದು ಕಿಲೋಮೀಟರ್ ಎಂಬ ಬೋರ್‍ದು ಕಣ್ಣೆದ್ರುಗೆ 🙂 ಅಷ್ಟೇನಾ ಅನ್ಸಿದ್ರೂ ಸರಿ ಇನ್ನೊಂದು ಕಿಲೋಮೀಟರ್ ಹೀಗೇ ಓಡೋಣ ಅಂದ್ಕೊಂಡು ಮುಂದುವರೆಸಿದೆ.
ಹೀಗೇ ಓಡ್ತಿರೋವಾಗ ಮತ್ತೊಂದು ಬೋರ್‍ಡು ಕಾಣುಸ್ತು. ೨ ಕಿ.ಮೀ ಆಗಿರಬೇಕು ಅನ್ನೋ ಖುಷೀಲಿ ನೋಡಿದ್ರೆ ಅದ್ರಲ್ಲೂ ೧ ಕಿ.ಮೀ !! 🙂 ಎಲ್ಲಾ ಕಿ.ಲೋ ಮೀಟರ್ಗಳ ಬೋರ್ಡುಗಳನ್ನೂ ಪ್ರತೀ ಅರ್ಧ ಕಿಲೋಮೀಟರ್ಗೆ ಹೀಗೆ ನಿಲ್ಸಿದಾರೆ ಅಂತ ಆಮೇಲೆ ಗೊತ್ತಾಯ್ತು 🙂 ಹೀಗೇ ಎರಡು ಕಿ.ಮೀ ಆಗೋವಷ್ಟರ ಹೊತ್ತಿಗೆ ಮೈಯೆಲ್ಲಾ ಬೆವರುಮಯ 🙂 ಬೆಳಿಗ್ಗೆ ತಿಂಡಿ ಇಲ್ಲದೇ ಬರೀ ನೀರಿನ ಬಲದಲ್ಲಿದ್ದ ನಮಗೆ ಮತ್ತೊಂದು ಸಣ್ಣ ಬಾಟಲಿ ನೀರಿಂದ ಮತ್ತೆ ಶಕ್ತಿ.. ಮತ್ತೆ ಓಡು ಮಗ ಓಡು ಮಗ.. ಮೂರು ಕಿ.ಲೋ ಓಡೋ ಹೊತ್ತಿಗೆ ಮತ್ತೆ ಸುಸ್ತು…ದಿನಾ ಓಡದಿದ್ದರ ಫಲ 🙁 ಓಟ ನಿಧಾನವಾಗಿ ಸ್ವಲ್ಪ ನಡೆದು ಮತ್ತೆ ಓಡೋಣ ಅಂತ ತೀರ್ಮಾನಿಸಿದೆ.. ಹೀಗೇ ನಾಲ್ಕೈದು ಹೆಜ್ಜೆ ನಡೆಯುವಷ್ಟರಲ್ಲಿ ಹಿಂದಿನಿಂದ ಯಾರೋ ಬೆನ್ನು ತಟ್ಟಿದಂಗಾಯ್ತು.. "Good run man.. come on.. don't stop.." ಅಂತ ಬೆನ್ನು ತಟ್ಟಿ ನನ್ನ ಜೊತೆ ಜೊತೆಗೇ ಹೆಜ್ಜೆ ಹಾಕಿದ ಯುವಕನ ಮಾತುಗಳು ಮತ್ತೆ ಓಡಲು ಸ್ಪೂರ್ತಿ.. ಹಿಂಗೇ ಮೂರು ಕಿ.ಮೀಯ ಮತ್ತೊಂದು ಬೋರ್ಡು ಬಂತು 🙂 ನಿಧಾನವಾಗಿ ನಿಧಾನ ಓಡುಗರನ್ನು ಹಿಂದೆ ಹಾಕುತ್ತಾ, ನಮಗಿಂತ ವೇಗವಾಗಿ ಓಡ್ತಿದ್ದವರಿಗೆ ಜಾಗ ಬಿಡುತ್ತಾ ಸಾಗ್ತಿದ್ದೆವು. ಹಲಸೂರು ಸ್ಟೇಷನ್, ಹಲಸೂರು ಕೆರೆ, ವಿಧಾನಸೌಧ, ಹೈಕೋರ್ಟ್ , ಕಬ್ಬನ್ ಪಾರ್ಕ್ಗಳೆಲ್ಲಾ ಸಿಗತ್ತೆ ಅಂತ ಮಾರ್ಗ ಕೊಟ್ಟಿದ್ರೂ ಯಾವಾಗ ಯಾವ್ದು ಬರತ್ತೆ , ಎಷ್ಟು ಓಡಿದೀವಿ ಅಂತೆಲ್ಲಾ ಯೋಚಿಸೋ ತಲೆಯೆಲ್ಲಿ.?. 🙂 ನಿನ್ನ ಮುಂದೆ ನಿನ್ನಷ್ಟೇ ವೇಗವಾಗಿ, ಇಲ್ಲಾ ನಿಧಾನವಾಗಿ ಓಡ್ತಿರೋನೇ ಸಧ್ಯದ ಗುರಿ. ಇನ್ನು ಒಂದು ಕಿ.ಮೀ ಓಡ್ತೀನಿ, ಆಮೇಲಿಂದು ನೋಡ್ಕೊಳ್ಳೋಣ ಅನ್ನೋದೊಂದೆ ಮನಸ್ಸಲ್ಲಿ.. 🙂
ಎಷ್ಟು ಓಡಿದ್ರೂ ಕಿ.ಮೀ ಮುಂದೇ ಸಾಗ್ತಿಲ್ಲ ಅನ್ಸೋಕೆ ಶುರು ಆಯ್ತು. ಅಂತೂ ಇಂತು ನಾಲ್ಕು ಕಿ.ಮೀ ಬೋರ್ಡು ಬಂದಾಗ ಇಷ್ಟೇ ಶ್ರಮ ಮತ್ತೆ ಹಾಕಿದ್ರೆ ಮುಗಿದು ಹೋಯ್ತು ಅನ್ನೋ ಖುಷಿ.. ನಡೀತಾ, ನಿಧಾನವಾಗಿ ಓಡ್ತಿರೋರನ್ನ ನೋಡಿ ನಾವು ಪರವಾಗಿಲ್ಲ ಅಂತನೂ ಅನಿಸ್ತಿತ್ತು. ಆದ್ರೆ ಯುವಕರಿಗೆ ಸವಾಲಾಗೋ ತರ ಓಡ್ತಿದ್ದ ೭೦ರ ಮೇಲಿನ ಪಂಜಾಬಿಗಳು ಮತ್ತಿತರ ವೃದ್ದರನ್ನು ನೋಡಿ ಬೆವರಿ ನೀರಾಗಿ ಹೋಗಿದ್ದ ನಮ್ಮ ಬಗ್ಗೆ ನಾಚಿಕೆ ಆಗ್ತಿತ್ತು. ಐದು ಕಿ.ಮೀ ಬೋರ್ಡ್ ಕಾಣೋ ಹೊತ್ತಿಗೆ ಮತ್ತೊಮ್ಮೆ ನಡೆಯುವುದೇ ಸುಖ ಅನ್ಸಿತ್ತು.. ಆಗ ಮತ್ತೊಮ್ಮೆ "Good one, continue.." ಅಂತ ಬೆನ್ನು ತಟ್ಟಿದ ಬೇರೊಬ್ಬ ಹಿರಿಯರು ! 🙂 ಮತ್ತೆ ಓಡು ಮಗ, ಓಡು ಮಗ.. ಆದರೆ ಮತ್ತೆ ಒಂದಿನ್ನೂರು ಮೀಟರ್ಗಳಾಗೋದ್ರಲ್ಲಿ ಸುಸ್ತು.. ಯಾವಾಗ್ಲೂ ಸಮಯ ಇದ್ರೂ ಏನೂ ಮಾಡ್ದೇ "ಯುದ್ದಕಾಲೇ ಶಸ್ತ್ರಭ್ಯಾಸ" ಅಂತ ಕಾಂಪಿಟೇಷನ್ ಬಂದಾಗ ಎದ್ದೇಳೋದ್ರರ ಫಲ ಅರಿವಾಗ್ತಾ ಇತ್ತು :-(.. ಆದ್ರೆ ಮತ್ತೆ ಅದೇ ಹಿರಿಯರು ಬೆನ್ನು ತಟ್ಟಿದ್ರು ಬಂದು.. ಅವ್ರ ಸಾಮರ್ಥ್ಯಕ್ಕೆ ಶರಣೆಂದ ಮನ ಅವರು ದೃಷ್ಟಿಯಿಂದ ಮರೆಯಾಗೋವರ್ಗಾದ್ರೂ ಓಡ್ಲೇ ಬೇಕು ಅಂತ ತೀರ್ಮಾನ ಮಾಡ್ತು..
ನನ್ನ ತರಾನೇ ಬೆನ್ನು ತಟ್ಟಿಸಿಕೊಂಡೋರೊಬ್ರು ನಿಧಾನವಾಗತೊಡಗಿದ್ರು.. ನಾನೇ ಕಮಾನ್ ಅಂತ ಅವರ ವೇಗಕ್ಕೆ ನಿಧಾನವಾಗಿ ಓಡೋಕೆ ಶುರು ಮಾಡಿದೆ..:-) ಅವರಿಗೆ ಜೋಷ್ ಬಂತೋ, ಸಾಥ್ ಸಿಕ್ಕಿದ್ದಕ್ಕೆ ಖುಷಿ ಆಯ್ತೋ ಗೊತ್ತಿಲ್ಲ. ಹೀಗೇ ೬ ಕಿ.ಮೀ ಬರೋ ತನಕ ಓಡಿದ್ವಿ. ಆಮೇಲೆ ಮತ್ತೆ ಸುಸ್ತಾದ ನಾನು ನಡಿಗೆಯ ವೇಗಕ್ಕೆ ಬಂದೆ.. ಅವ್ರು ಕಮಾನ್ ಅನ್ನದೇ ಮುಂದೆ ಸಾಗ್ಬಿಟ್ರು 🙁 ಓಟದ ತುಂಬೆಲ್ಲಾ ನಾನು ಹಿಂದೆ ಹಾಕುತ್ತಾ, ನನ್ನ ವೇಗ ಕಡಿಮೆಯಾದಾಗ ನನ್ನ ಹಿಂದೆ ಹಾಕುತ್ತಾ ಇದ್ದ ಸುಮಾರು ಜನರಿದ್ದರು . ಅದರಲ್ಲಿ ತುಂಬಾ ಹೊತ್ತು ಹಿಂದೆ ಮುಂದೇನೆ ಇದ್ದೋನು ಒಬ್ಬ ಸುಮಾರು ಆರೂವರೆ ಅಡಿ ಎತ್ತರದ ಬಿಳಿಯ.. "good run bro.. " ಅಂತ ಹೇಳ್ಬೇಕು ಅಂತ ಸುಮಾರು ಸಲ ಅಂದ್ಕೊಂಡೆ.. ಕೊನೆಗೆ ಆತ ಎದುರಿಗೆ ಸಿಕ್ಕಿದ್ರೂ ಹೇಳೋದ್ರೊಳಗೆ ಆತ ಎಲ್ಲೋ ಮರೆಯಾಗಿ ಬಿಟ್ಟ 🙁 ಇದೇ ತರ ಸುಮಾರು ಜನ ಆಂಟಿಯರು, ಹುಡುಗಿಯರೂ ಹಿಂದೆ ಮುಂದೆಯೇ ಸಿಕ್ತಿದ್ದರು . . ಅವರನ್ನು ಹಿಂದಾಕೋದು ನನ್ನ ತಕ್ಷಣದ ಗುರಿಯಂತೆ ಕಂಡರೆ, ನಾನು ಅವರ ಗುರಿಯಾಗಿರಬಹುದು 🙂
ನಿಧಾನ ಆಗ್ತಿದೆ, ಇನ್ನು ಓಡಲಾರೆ, ಕೊನೆವರೆಗೂ ನಡ್ಕೊಂಡ್ ಮುಗಿಸ್ಬೇಕು ಅನ್ನೋ ತರ ಆಗಿದ್ದಾಗ ಎಲ್ಲಿದ್ದರೋ ಏನೋ, ಬಂದ್ರು ನೋಡಿ ಡ್ರಮ್ಮರ್ಗಳು.. ಅವರ ಡ್ರಮ್ ಬೀಟ್ಗಳಿಗೆ ನನ್ನ ಕಾಲ್ಗಳು ಸಾಥ್ ನೀಡಿ.. ಇಲ್ಲಿಯವರೆಗೆ ಓಡಿದ ಶ್ರಮ, ಸುಸ್ತೆಲ್ಲಾ ಮರೆಸಿ ಮತ್ತೆ ವೇಗವಾಗಿ ಓಡೋ ತರ ಮಾಡಿದ್ವು 🙂 ಈ ತರ ಎರಡ್ಮೂರು ಕಡೆ ಇಲ್ದಿದ್ರೆ ನಾನು ಓಟವನ್ನು ಈಗ ಮುಗಿಸಿದಷ್ಟು ವೇಗವಾಗಿ ಗ್ಯಾರಂಟಿ ಮುಗಿಸ್ತಿರ್ಲಿಲ್ಲ ಅನ್ನಿಸ್ತು 🙂 ಮಧ್ಯೆ ಮಧ್ಯೆ ಇಟ್ಟಿದ್ದ ಪಾನೀಯ, ವಿಧಾನ ಸೌಧದ ಹತ್ತಿರ ಇಟ್ಟಿದ್ದ ಕಿತ್ತಲೆಗೂ ಥ್ಯಾಂಕ್ಸ್ 🙂 ಅಂತೂ ಏಳು ಕಿ.ಲೋ ಮೀಟರ್ ಬೋರ್ಡ್ ಕಂಡಿತು..
ರಸ್ತೆಯ ಪಕ್ಕ ನಿಂತಿದ್ದ ಸ್ಥಳೀಯರ ಪ್ರೋತ್ಸಾಹ ಮರೆಯೋಕೆ ಸಾಧ್ಯನೇ ಇಲ್ಲ. ಮುಂಬಯಲ್ಲಿ ಓಡಿದ್ದ ಸೀನಿಯರ್ ಹೇಳ್ತಾ ಇದ್ರು.. ಅಲ್ಲಿ ಸ್ಥಳೀಯರ ಬೆಂಬಲ ಸಖತ್ತಾಗಿರತ್ತಂತೆ. ಬೆಳಗ್ಗೆ ಏಳಕ್ಕೇ ಎದ್ದು ಮನೆಗೆಲಸ ಮುಗಿಸಿದ ಮಹಿಳೆಯರು ಓಡುಗರಿಗೆ ಅಂತ ಹಣ್ಣು, ಜ್ಯೂಸ್ ಹೀಗೆ ಕೈಲಾಗಿದ್ದೆಲ್ಲಾ ತಂದು ಓಡುಗರಿಗೆ ಅಂತ ಎಸಿತಿರ್ತಾರಂತೆ.. ಆ ರೇಂಜಿನ ಕ್ರೇಜ್ ಇಲ್ಲಿ ಇರದಿದ್ದರೂ ಅವರ ಪ್ರೋತ್ಸಾಹ, ಚಪ್ಪಾಳೆಗಳು ಉತ್ತೇಜಕವಾಗಿತ್ತು.. ಅವರ ಚಪ್ಪಾಳೆಗಳ ನಡುವೆ ಓಡಿದ ದೂರ ಹೆಂಗೆ ಮುಗೀತು ಅಂತನೇ ಗೊತ್ತಾಗ್ಲಿಲ್ಲ 🙂 ಇನ್ನೊಂದು ಕಿ.ಮೀ ಅಷ್ಟೇ ಓಡಿ ಓಡಿ ಅಂತ ಹುರಿದುಂಬುಸ್ತಿದ್ರು ಸ್ಥಳೀಯರೆಲ್ಲ ಕಬ್ಬನ್ ಪಾರ್ಕ್ ಹತ್ರ.. ಆಯ್ತು ಅಂತ ಶಕ್ತಿಮೀರಿ ಓಡೋಕೆ ಪ್ರಯತ್ನ ಪಟ್ರು ಎಲ್ಲಾ. ಆದ್ರೆ ಸ್ವಲ್ಪ ದೂರ ಬರ್ತಿದ್ದ ಹಾಗೆ ೮ ಕಿ.ಮೀ ಅನ್ನೋ ಬೋರ್ಡು , ಥೋ:-( 🙂
ಅಂತೂ ನಿಧಾನಿಸಿ, ಓಡಿ ಸಾಗೋದ್ರೊಳಗೆ ಒಂಭತ್ತು ಕಿ.ಮೀ ಬೋರ್ಡು ಕಾಣ್ತು.. ಓಡಿ ಅಭ್ಯಾಸ ಇದ್ದೋರೆಲ್ಲಾ ಎದ್ನೋ ಬಿದ್ನೋ ಅಂತ ಓಡೋಕೆ ಶುರು ಮಾಡಿದ್ರು.. ಹಿಂದಿಂದ "Give way..Give way.." ಅನ್ನೋ ಕೂಗು.. ಆಗಲೇ ಎರಡು ಬಾಟ್ಲು ನೀರು, ಒಂದು ಪಾನೀಯ ಕುಡಿದ್ರೂ ಮೈಯ ನೀರೆಲ್ಲಾ ಇಳಿದು ಹೋದ ಅನುಭವ. ಓಡೋ ಅಭ್ಯಾಸ ಬಿಟ್ಟುಹೋಗಿರೋದ್ರಿಂದನೋ ಏನೋ ಪ್ರತೀ ಹೆಜ್ಜೆಯ ಧ್ವನಿ ಕಿವಿ, ತಲೆಯಲ್ಲಿ ಪ್ರತಿಧ್ವನಿಸಿದಂತಹ ಅನುಭವ. ಅದೇ ಸಮಯಕ್ಕೆ ಒಬ್ಬರು ಮಹಿಳೆ ಮತ್ತೊಬ್ಬರು ವೃದ್ಧರು ಬಿದ್ದಿದ್ದರಂತೆ.. ಅವರನ್ನು ಅಂಬ್ಯುಲೆನ್ಸಲ್ಲಿ ಕರೆದೊಯ್ದರು ಅಂತ ಆಮೇಲೆ ತಿಳೀತು..:-( ಹಾಗೂ ಹೀಗೂ ಓಡ್ತಾ ಓಡ್ತಾ ಕಂಠೀರವ ಸ್ಟೇಡಿಯಂನ ಸದ್ದು ಕೇಳೋಕೆ ಶುರು ಆಯ್ತು .. ಜೊತೆಗೆ ಮತ್ತೆ ಡ್ರಮ್ಮರ್ಗಳ ಬೀಟ್ ! 🙂
ಎಲ್ಲಿ ಮರೆಯಾಗಿತ್ತೋ ನೋಡಿ, ಶಕ್ತಿ ಮರಳಿ ಪ್ರತ್ಯಕ್ಷ… ೧೦ ಕಿ.ಲೋ ಓಡಿದ್ದು ಸುಳ್ಳೇನೋ , ಎಲ್ಲಾ ೧೦೦ ಮೀಟರ್ಗೆ ಓಡ್ತಿದ್ದಾರೇನೋ ಅನ್ನೋ ತರ ಓಡೋ ಅಷ್ಟು ಶಕ್ತಿ ! :-).. ಆ ಸೌಂಡಲ್ಲಿ ಅದೇನಿದ್ಯೋ ಗೊತ್ತಿಲ್ಲ. ಓಟದ ತುಂಬೆಲ್ಲಾ ಇದೇ ತರ ಇಡ್ಬಾರ್ದಿತ್ತಾ ಅಂತನೂ ಅನಿಸ್ತು 🙂 ಆ ಸೌಂಡಿಂದ ಸ್ಪೂರ್ತಿ ಪಡೆದು ಮತ್ತೆ ಜೋರಾಗಿ ಓಡೋಕೆ ಓಡೋಕೆ ಶುರು ಮಾಡಿದವರಲ್ಲಿ ನಾನೂ ಒಬ್ಬ.. ಆ ಜೋಷ್ ಕೊನೆಯ ಗುರಿ ಮುಟ್ಟುವರ್ಗೂ ಇತ್ತು.. Give way ಎಂಬ ಎಷ್ಟೇ ಕೂಗುಗಳು ಹಿಂದಿದ್ರೂ ನಾನು ಗುರಿ ಮುಟ್ಲೇಬೇಕೆಂಬ ಜೋಶ್ ಮೈಗೂಡಿತ್ತು…
ಓಟದ ನಂತರ: ಇನ್ನೊಂದಿಷ್ಟು ಓಡುವ ಸಾಮರ್ಥ್ಯ ಇತ್ತಲ್ವಾ ಅನ್ನೋ ಭಾವ ! ಪ್ರತಿಯೊಬ್ಬರಿಗೂ ಹಾಗೇ ಅನ್ಸಿರುತ್ತೆ ಅಂದ್ಕೋತೀನಿ 🙂 ಆದ್ರೆ ಒಂದು ಘಂಟೆ ಕೆಲ ನಿಮಿಷಗಳಲ್ಲಿ ಓಟ ಮುಗಿಸಿದ ಖುಷಿ..ಇದೇ ದೊಡ್ಡ ಸಾಧನೆ ಅಂತಲ್ಲ.ಇದೇ ಕೊನೆ ಅಂತಲ್ಲ..ಸದಾ ಫಿಟ್ಟಾಗಿರ್ಬೇಕು, ವ್ಯಾಯಾಮ ಮಾಡ್ಬೇಕು, ಓಡ್ಬೇಕು ಅಂತ ಆರೋಗ್ಯದ ಬಗೆಗಿನ ಕಾಳಜಿ ಕಾಯ್ದುಕೊಳ್ಳೋದೇ ಒಂದು ಸವಾಲು.. 🙂 ಈ ತರದ ಕಾಳಜಿ ಮುಂದುವರೀಲಿ, ಇದನ್ನು ಓದಿದ ನನ್ನಂತ ಸೋಂಬೇರಿ ಸಿದ್ದರಲ್ಲೂ ಕಳೆದುಹೋಗುತ್ತಿರೋ ಆರೋಗ್ಯದ ಕಾಳಜಿ ಮತ್ತೆ ಮೂಡ್ಲಿ ಅನ್ನೋದೊಂದೇ ಈ ಲೇಖನದ ಆಶಯ..
ಓದಿದ ನಿಮಗೆಷ್ಟು ಇಷ್ಟವಾಯಿತೋ ಅರಿಯೆ.. ಈ ದಿನದ ಅನುಭವಗಳಲ್ಲಿ ಕೆಲವನ್ನಾದರೂ ದಾಖಲಿಸಿದ ಸಾರ್ಥಕ್ಯದ ಭಾವ ನನಗೆ.. ವಂದನೆಗಳೊಂದಿಗೆ ವಿರಮಿಸುತ್ತಿದ್ದೇನೆ…
Along with tour experience , you have conveyed a good message for the youth…
NIce..
ಚೆನ್ನಾಗಿದೆ….
ಮ್ಯಾರಾಥಾನ್ ಕಾಮೆಂಟರಿ ಸಖತ್ತಾಗಿದೆ!
I DID IT!
ಎನ್ನುವ ಒಂದು ಸಾರ್ಥಕಭಾವ, ನೆಮ್ಮದಿ ಮತ್ತು ನಿಮ್ ಲೇಖನದಲ್ಲಿ ಎದ್ದು ಕಾಣುತ್ತದೆ.
ಅದರು ಪರರಿಸೆ ಸ್ಫೂರ್ತಿಯಾಗುತ್ತದೆ ಕೂಡ.
Sorry for responding in English.
Nice article. Eyes were reading your article and the mind was in college days, and my brisk walking near my house at Blr. Liked the article, but did not like the language. Lot of compound words block the reading pace.
keep on writing and good luck to you.