ಪ್ರೇಮ ಪತ್ರಗಳು

1 35+5 36 40: ಬಸವರಾಜು ಕ್ಯಾಶವಾರ


ನನ್ನ ನೆನಪ ರಾಡಿಯಲ್ಲಿ
ಅವಳೊಂದು ನೈದಿಲೆ

ಅತ್ತರೆ ಕಣ್ಣೀರಾಗಿ ಸ್ರವಿಸುವಳು
ನೊಂದರೆ ನೋವಾಗಿ ಖಾಲಿಯಾಗುವಳು
ನಗುತ್ತಲೆ ಇದ್ದರೆ ಸುಮ್ಮನೆ
ತೊನೆಯುವಳು, ಕೆನೆಯುವಳು

ಮತ್ತೆ ಮತ್ತೆ ಹುಟ್ಟುವಳು
ನನ್ನ ನೆನಪ ರಾಡಿಯಲ್ಲಿ ಮುದ್ದು ನೈದಿಲೆ.
ಇದು 1998ರಲ್ಲಿ ನೀನು ಬರೆದ ಕವನ. ಹಚ್ಚ ಹಸಿರು ಹೊಲದಲ್ಲಿ ಪುಟಾಣಿ ಹುಡುಗಿಯೊಬ್ಬಳು ಕುರಿ ಮರಿಯನ್ನು ಎತ್ತಿ ಮುದ್ದಾಡುತ್ತಿರುವ ನೀನೇ ಬರೆದ ಚಿತ್ರದ ಗ್ರೀಟಿಂಗ್ ಕಾಡರ್್ನ್ನ ಹೊಸ ವರ್ಷದ ಶುಭಾಷಯವಾಗಿ ಕೊಟ್ಟಿದ್ದೆ. ಮೇಲೆ ನೋಡಿದ್ರೆ ಹೊಸ ವರ್ಷದ ಹಾಧರ್ಿಕ ಶುಭಾಷಯಗಳನ್ನು ಅಂತಿತ್ತು. ಆದ್ರೆ ಪುಟ ತಿರುಗಿಸಿ ನೋಡಿದ್ರೆ, ಅಲ್ಲಿದದ್ದು ಈ ನಿನ್ನ ಕವನ. ತುಂಬಾ ಚೆನ್ನಾಗಿ ಬರ್ದಿದ್ದಾನೆ ಅಂತ ಖುಷಿಪಟ್ಟಿದ್ದ ನನಗೆ, ನಿನ್ನೊಳಗಿದ್ದದ್ದು ಮುಗ್ಧ ಪ್ರೀತಿಯಾ? ಆಕರ್ಷಣೆಯಾ? ಎಂತದ್ದೋ ಒಂದು ಅವಿನಾಭಾವ ಸಂಬಂಧವಾ? ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ ಆಗ್ಲಿಲ್ಲ. ಸೋ ಸಾರಿ, ನಂಗಾಗ ಇದೆಲ್ಲ ಗೊತ್ತಾಗ್ತಿರ್ಲಿಲ್ಲ. ಈ ಗ್ರೀಟಿಂಗ್ಗೆ ಪ್ರತಿಯಾಗಿ ನಾನು ನಾಳೆ ನಿಂಗೆ ಮೈಸೂರು ಪಾಕ್ ಜೊತೆಗೊಂದು ಬುಕ್ ಕೊಡ್ತೀನಿ ಅಂತ್ಹೇಳಿದ್ದೆ, ನೆನಪಿದೆಯಾ?
ಜನವರಿ 2ನೇ ತಾರೀಖು, ನಮ್ ಸ್ಕೂಲ್ ಟೀಚರ್ ವಿ.ಟಿ.ಸೋಮಶೇಖರ್ರಾಜು ಆರ್. ವೆಂಕಟಾಪುರದ ಹತ್ತಿರ ಇರೋ ಮೈಲಾರಲಿಂಗನ ದೇವಸ್ಥಾನಕ್ಕೆ ಹೊರಸಂಚಾರ ಕರ್ಕೊಂಡು ಹೋಗಿದ್ದರು. ದಾರಿಗುಂಟ ಸಾಲಾಗಿ ನಡ್ಕೊಂಡು ಹೋದ್ವಿ. ಕುಳ್ಳ ಸಿದ್ದನನ್ನ ರೇಗಿಸಿಕೊಂಡು, ಅಂತ್ಯಾಕ್ಷರಿ ಹಾಡ್ಕೊಂಡು ಖುಷಿ ಖುಷಿಯಾಗಿ ನಡ್ಕೊಂಡೆ ಹೋದ್ವಲ್ಲ. ನೀನು ಮತ್ತೆ ಮತ್ತೆ ನೆನಪಾಗೋದು ನೀನು ನನಗಾಗಿ ನಡೆದುಕೊಂಡ, ಮಾತನಾಡಿದ, ಕೊಟ್ಟ ಕೆಲಸಗಳಿಂದ, ಮಾತುಗಳಿಂದ, ವಸ್ತುಗಳಿಂದ.
ಅವತ್ತು ನಾನು ನಿಂಗೆ ಮೈಸೂರ್ ಪಾಕ್ ಜೊತೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿ ಜೋಗಿ ಕೊಟ್ಟಿದ್ದೆ. ಯಾರಾದ್ರೂ ಆಡಿಕೊಳ್ಳುತ್ತಾರೆ ಅಂದ್ಕೊಂಡು ನೀನು ಆ ರುಚಿಯಾದ ತಿನಿಸು ತಿಂತಾ ಇದ್ದೆ. ಅದನ್ನ ನಾನು ಕಿತ್ಕೊಂಡ್ಮೇಲೆ ಗೊತ್ತಾಗಿದ್ದು ಅದು ರಾಗಿ ಸೀಕು ಅಂತ. ಲೋ, ನಾನು ಕೊಟ್ಟ ಮೈಸೂರ್ ಪಾಕ್ಗಿಂತ್ಲೂ ನಿನ್ನ ರಾಗಿ ಸೀಕು ತುಂಬಾ ಚೆನ್ನಾಗಿತ್ತು. ಅದನ್ನ ನಾನು ಕಿತ್ಕೊಂಡು ತಿನ್ನಬೇಕಾದ್ರೆ ನಿನ್ನ ಕಣ್ಣಲ್ಲಿ ನೀರು ಒತ್ತರಿಸಿಕೊಂಡು ಬರ್ತಿತ್ತು. ಅದನ್ನ ನೋಡಿ ನಾನು ಅತ್ತಿದ್ದೆ. ಆ ಘಟನೆ ನೆನಪಿಸಿಕೊಂಡ್ರೆ ಇವತ್ತು ಕಣ್ಣಲ್ಲಿ ನೀರು ಜಿನುಗುತ್ತೆ. ನನಗೆ ಗೊತ್ತಿರುವಂತೆ ನೀನು ಸದಾ ಕೀಳರಿಮೆಯಿಂದ ಬಳಲುತ್ತಿದ್ದದ್ದು ಬಡತನಕ್ಕೆ. ಮೂರು ವರ್ಷವೂ ಒಂದೇ ಜೊತೆ ಬಟ್ಟೆ ಹಾಕ್ಕೊಂಡು ಬಂದೆ. ನಾವೆಲ್ಲಾ ಹೊಸ ಹೊಸ ಬಟ್ಟೆ ಹಾಕ್ಕೊಂಡು, ಹೊಸ ನೋಟ್ ಬುಕ್ ತಕ್ಕೊಂಡು ಏನೇನೋ ಗೀಚುತ್ತಿದ್ದೆವು, ಒಮ್ಮೊಮ್ಮೆ ರಂಗೋಲಿ ಬಿಡಿಸುತ್ತಿದ್ದೇವು, ಚುಕ್ಕಿ ಆಟ ಆಡುತ್ತಿದ್ದೇವೆ. ಆದ್ರೆ ನೀನು ನಾವು ಬೀಸಾಕೊ ಹಾಳೆ ಆಯ್ಕೊಂಡು ಅದನ್ನೇ ನೋಟ್ ಬುಕ್ ಥರ ಹೊಲ್ಕೊಂಡು ತುಂಬಾ ದುಂಡಗೆ ಬರೆಯುತ್ತಿದ್ದೆ. ನಾವೆಷ್ಟು ಓವರ್ ಆಗಿ ಆಡಿದ್ರು, ಎಲ್ಲಾ ಸ್ಪಧರ್ೆಗಳಲ್ಲೂ ಎಲ್ಲರನ್ನ ಹಿಂದಿಕ್ಕಿ ಗೆಲ್ಲುತ್ತಿದ್ದದ್ದು ನೀನೇ.
ಅದ್ ಸರಿ ಕೇಳೋದು ಮರೆತುಬಿಟ್ಟೆ, ಮೈಲಾರಲಿಂಗನ ದೇವಸ್ಥಾನದ ಆವರಣದಲ್ಲಿದ್ದ ವಿಶೇಷ ಮರಕ್ಕೆ ಎಲ್ಲರೂ ಅರಿಷಿಣ ಕೊಂಬು ಕಟ್ಟಿ ಏನೇನೋ ಬೇಡಿಕೊಳ್ತಿದ್ರು. ಹಾಗೆ ಮಾಡಿದ್ರೆ ಅದ್ಕೊಂಡಿದ್ದು ಆಗುತ್ತೆ ಅಂತ ಎಲ್ಲರೂ ಹೇಳ್ತಿದ್ರಲ್ಲ. ಅದೇ ಹಳೇ ಆಲದಮರ. ನಿಜ ಹೇಳ್ತಿದ್ದೀನಿ ಕಣೋ ನಾನು ಬೇಡ್ಕೊಂಡಿದ್ದು, ನಿನ್ನ ಬಗ್ಗೆ. ದೇವ್ರೆ ಚಂದ್ರು ಓದಿಗೆ ಹಣದ ಸಮಸ್ಯೆ ಬರಬಾರದಪ್ಪ ಅಂತ ಬೇಡಿಕೊಂಡಿದ್ದೆ. ನೀನು ಏನಂತ ಬೇಡ್ಕೊಂಡಿದ್ದೆ ಅಂತ ಕೇಳಿದ್ರೆ ಹೇಳ್ಲೇ ಇಲ್ಲ. ಮೈಲಾರಲಿಂಗನ ದೇವಸ್ಥಾನದ ಮುಂದೆಯೇ ಹರಿಯುತ್ತಿದ್ದ ಜಯಮಂಗಲಿಯಲ್ಲಿ ಈಜಾಡೋಕೆ ಹೋಗಬೇಡಿ ಅಂತ ಮೇಷ್ಟ್ರು ಹೇಳಿದ್ರು. ಆದ್ರೂ ನಾವೆಲ್ಲಾ ನದಿಯ ಮರಳ ದಡದ ಮೇಲೆ ಕೂತ್ಕೊಂಡು ಚಿತ್ರ ಬಿಡಿಸುತ್ತಿದ್ವಿ. ಕೆಲವರಂತೂ ಏನೇನೋ ಲವ್ ಸಿಂಬಲ್ ಬರೆದು ಇನ್ಷಿಯಲ್ ಬರೀತಿದ್ರು. 1 35+5 36 40 ಅಂತ ಏನೋ ಸಂಖ್ಯೆ ಬರೆದಿದ್ದೆ. ಎಲ್ಲರೂ ಅದು ಏನು ಏನು ಅಂತ ಕೇಳ್ತಿದ್ರು, ಆದ್ರೆ ನೀನು ಮಾತ್ರ ಏನನ್ನೂ ಹೇಳ್ಲಿಲ್ಲ. ನಾನು ಆದೇನು ಅಂತ ಯೋಚಿಸಿ, ಅಳೆದು ತೂಗಿ, ಲೆಕ್ಕಹಾಕಿ ಉತ್ತರ ಸಿಗುವಷ್ಟು ಹೊತ್ತಿಗೆ ನಾವು ನಿಮ್ಮೂರು ಬಿಟ್ಟಿದ್ದೇವು. ಅಲ್ಲಾ ಅನುಪಮ ಅನ್ನೋದನ್ನ 1 (ಅ) 35(ನ)+5 (ಉ) 36(ಪ) 40(ಮ) ಅಂತ ಬರ್ದಿದೆಯಲ್ಲಾ? ಎಂತಾ ಜಾಣ ನೀನು.
ಮೈಲಾರಲಿಂಗನ ದೇವಸ್ಥಾನದ ಬೆಟ್ಟದ ಮೇಲೆ ಭೀಮನಪಾದ ಇದೆಯಲ್ವಾ ಅಲ್ಲಿದ್ದ ಜಾರೋಬಂಡಿ ನೆನೆಸಿಕೊಂಡ್ರೆ ಅವತ್ತಿನ ದಿನಗಳು ಕಣ್ಮುಂದೆ ಬರ್ತವೆ. ಬೆಟ್ಟದ ತುದಿಯಿಂದ ರಸ್ತೆಯವರೆಗೂ ಇದ್ದ ಆ ಜಾರೋಬಂಡಿಯಲ್ಲಿ ಕುಂಡಿಯೂರಿ ಕೂತುಬಿಟ್ಟರೇ ಅರ್ಧ ಘಂಟೆ ಬೆಟ್ಟ ಇಳಿಯೋ ದಣಿವೇ ಇರುವುದಿಲ್ಲ. ಅಲ್ಲಿದ್ದ ಸೀತಾಫಲ, ಕಾರೇಹಣ್ಣು, ಪಾಪಸ್ ಕಳ್ಳಿಯ ಹಣ್ಣುಗಳನ್ನ ತಿಂದು ಮಜಾಮಾಡ್ತಿದ್ವಿ. ಅವತ್ತು ಮನೆಗೆ ಹೋಗ್ಬೇಕಾದ್ರೆ ದಾರಿಯುದ್ದಕ್ಕೂ ಕಾರೇಹಣ್ಣು ಕಿತ್ಕೊಂಡು ಜ್ಯಾಮಿಟ್ರಿ ಬಾಕ್ಸ್ಗೆ ತುಂಬ್ಕೊಂಡಿದ್ವಿ. ನಂಗೆಲ್ಲಾ ನೆನಪಿದೆ. ನಿಮ್ಮೂರಿನ ಕಡೆ ಬಂದ್ರೆ ಆ ಬೆಟ್ಟದ ತುದಿಯಲ್ಲಿರೋ ದೊಡ್ಡ ಬಂಡೆಯ ಮೇಲೆ ಕೆತ್ತಿರೋ 1 35+5 36 40 ಸಂಖ್ಯೆ ನೋಡಿದ್ರೆ ನಿನ್ನ ನೆನಪಾಗಿಬಿಡುತ್ತೆ. ಇಂಥದ್ದೇ ಅಂತಿಲ್ಲಾ ಸಣ್ಣ ಸಣ್ಣ ಸನ್ನಿವೇಶಗಳು, ಮಾತುಗಳು, ವಸ್ತುಗಳು ನನ್ನನ್ನು ನೆನಪಿನ ಸಾಗರಕ್ಕೆ ತಳ್ಳಿಬಿಡುತ್ತವೆ. ಅಲ್ಲಿ ಕಾಣೋದು ನೀಲಿ ಬಣ್ಣದ ನೀನು ಮಾತ್ರ. ನನ್ನನ್ನೂ ನುಂಗಿಹಾಕಬಲ್ಲ ನಿನ್ನ ನೆನಪೇ ನನ್ನ ಅನುದಿನದ ಜೀವನವಾಗಿದೆ.
ಆ ಒಂದು ದಿನ ನಾನು ನಿಮ್ಮ ಮನೆಗೆ ಬಂದಿದ್ದೆ. ನೆನಪಿದೆಯಾ? ಅದೇ ಕಣೋ ಗಣಿತದ ನೋಟ್ ಬುಕ್ ಪಡೆಯೋಕಂತ ಬಂದಿದ್ನಲ್ಲ. ಅವತ್ತು ನಿಮ್ಮಮ್ಮ ತಿನ್ನೋಕೆ ರಾಗಿ ಮುದ್ದೆ ಕೊಟ್ಟು, ಹುಣಸೇ ತೊಕ್ಕು ಹಾಕಿದ್ರು. ಆ ರುಚಿ ಮತ್ಯಾವತ್ತೂ  ನನ್ನ ಜೀವನದಲ್ಲಿ ಸಿಕ್ಕಿಲ್ಲ. ಆಗ ನಿಮ್ಮಮ್ಮ ಹೀಗಂದಿದ್ರು, `ನೋಡಮ್ಮ, ಹುಂಚೆ ತೊಕ್ಕು ನಮ್ ಸಂಬಂಧಗಳಂಗೆ, ನಾವೆಷ್ಟು ನಾಜೂಕಾಗಿ ಬಳ್ಕೆ ಮಾಡ್ತಿವೋ ಅಷ್ಟೂ ದಿನ ಇದು ಕೆಡಲ್ಲ’. ನಿಮ್ಮಮ್ಮ ಹೇಳ್ದಂಗೆ ನನ್ನ ನಿನ್ನ ನಡುವಿನ ಸಂಬಂಧ ಕೂಡ ನಾಜೂಕಾಗಿದೆ. ಹಾಗಾಗಿಯೇ ನಮ್ಮಿಬ್ಬರ ಸ್ನೇಹ ಸಂಬಂಧ ಸಲುಗೆಯಾಗಿ ಪ್ರೇಮವಾಗಿ ಭದ್ರವಾಗಿ ಬೆಳೀತಾ ಇರೋದು. ನಿನ್ನ ನೆನಪಿನ ರಗ್ಗು ಹೊದ್ಕೊಂಡು ಮಲಗ್ತಿದ್ದೀನಿ. ಕಿಟಕಿಯಿಂದ ಇಣುಕಿ ನೋಡ್ತಿರೋ ಆ ನೀಲಾಕಾಶದ ಚಂದ್ರ ನೀನೇನಾ? ನೀನಾಗಿದ್ರೆ ಸಾಕು. ಈ ಪತ್ರ ಸಿಕ್ಕ ಕೂಡಲೇ, ನಿನ್ನ ನೆನಪ ರಾಡಿಯಲ್ಲಿ ಹುಟ್ಟುವ ಈ ನೈದಿಲೆಗೊಂದು ಪತ್ರ ಬರಿ.
ಪತ್ರದ ನಿರೀಕ್ಷೆಯಲ್ಲಿ ನಿನ್ನ
1 35+5 36 40
ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “1 35+5 36 40: ಬಸವರಾಜು ಕ್ಯಾಶವಾರ

Leave a Reply

Your email address will not be published. Required fields are marked *