’ಪ್ರೇಮಕಾವ್ಯ’ ಕಾದಂಬರಿ ಕುರಿತು: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಕಾವ್ಯಶ್ರೀ ಮಹಾಗಾಂವಕರ್ ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ಸರಳ ನಿರೂಪಣೆ, ಸರಾಗವಾಗಿ ಓದಿಸಿಕೊಂಡು ಹೋಗುವ ಸಂಭಾಷಣೆ, ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ನಡೆಸುವ ಹೋರಾಟ ಮನ ಮುಟ್ಟುತ್ತದೆ. ಬಸ್ ಪ್ರಯಾಣದ ಮೂಲಕ ಎರಡು ಹೃದಯಗಳ ಮಧ್ಯೆ ಆಗುವ ತಲ್ಲಣಗಳು, ಅಲ್ಲಿಂದಲೇ ಶುರುವಾಗುವ ಪರಿಚಯ ಅರಿಯದೇ ಹುಟ್ಟಿಕೊಳ್ಳುವ ಪ್ರೀತಿ. 

ಬ್ರಾಹ್ಮಣ ಜಾತಿಯ ಕಟ್ಟುಪಾಡುಗಳಿಗೆ ಕಟಿಬಿದ್ದು ಹೆತ್ತವರು ನಡೆಸುವ ದರ್ಪ, ತಾಯಿ ಭಾಗ್ಯಳ ಸಹಜ ಉಪದೇಶ, ಹಲವು ಕಷ್ಟ, ನೋವು ಅನುಭವಿಸುವ ಪ್ರೇಮಿಗಳ ಬಗ್ಗೆ ಕಾದಂಬರಿಕಾರ್ತಿ ಕಾಳಜಿ, ಅನುಕಂಪವನ್ನು ತೋರಿದ್ದಾರೆ. ಅಣ್ಣನ ಅಸಹಾಯಕತೆ, ನಾಯಕನ ತಂದೆ ತಾಯಿಯ ಅನಾಗರಿಕತೆ ಕಾದಂಬರಿಯಲ್ಲಿದೆ.

ಜಾತಿ ವಿರೋಧಿ, ಬಂಡಾಯ ವ್ಯಕ್ತಿತ್ವದ ದಲಿತ ಯುವ ಪ್ರೇಮಿ ರಾಹುಲ, ನಾಯಕಿಯಲ್ಲಿ ಧೈರ್ಯ, ಸಾಹಸ, ಆತ್ಮವಿಶ್ವಾಸ ಮೂಡಿಸುವ ಪ್ರಯತ್ನವನ್ನು ಮಾಡುತ್ತಾನೆ. ಜಾತಿಯೆಂಬ ಅಡ್ಡಗೋಡೆ ಕೆಡವಿ ಹೊಸ ಸಮಾಜ ಸೃಷ್ಟಿ ಮಾಡುವ ದೃಢ ಸಂಕಲ್ಪ ಹೊಂದಿರುತ್ತಾನೆ. ಜಾತಿಯ ಕಟ್ಟುಪಾಡುಗಳಿಂದ ಹೊರಬಂದು ಪ್ರೇಮ ವಿವಾಹ ಆಗುವ ಕನಸು, ಕಲ್ಪನೆ, ಸುಂದರ ಜೀವನ ರೂಪಿಸಿಕೊಳ್ಳುವ ಆಸೆ ನೆಲಕಚ್ಚಿ ಬೀಳುತ್ತದೆ.

                                             ಕಾವ್ಯಶ್ರೀ ಮಹಾಗಾಂವಕರ್

’ಪ್ರೇಮ ಕಾವ್ಯ’ ಕಾದಂಬರಿಯಲ್ಲಿ ಸ್ತ್ರೀ ಸ್ವಾತಂತ್ರ್ಯ ಕಸಿದುಕೊಂಡು ಹೆತ್ತವರೇ ನಡೆಸುವ ದಬ್ಬಾಳಿಕೆ, ಜಾತಿ ನಿರ್ಮಾಪಕರಿಂದ ಆಗುವ ಅನಾಹುತ, ಮೇಲ್ವರ್ಗದವರ ದೃಷ್ಠಿಯಲ್ಲಿ ದಲಿತ ಯುವಕನನ್ನು ಕಾಣುವ ರೀತಿ, ಅವಮಾನ, ನಿಂದನೆಗಳು ಮೆಟ್ಟಿ ನಿಲ್ಲುವ ಸಾಹಸ ಪ್ರವೃತ್ತಿ ಮೆಚ್ಚುವಂಥದ್ದು. ಬ್ರಾಹ್ಮಣ ಜಾತಿಯ ಹುಡುಗನನ್ನೇ ಕೊಟ್ಟು ಮದುವೆ ಮಾಡುವ ತಂದೆ ತಾಯಿ. ಏಕಾಂತ ಭೇಟಿಯಲ್ಲಿ ಮನದ ಭಾವನೆಗಳನ್ನು ಅರಿತುಕೊಂಡು ಮುಂದಿನ ಜೀವನದ ಬಗ್ಗೆ ಚಿಂತನೆ ನಡೆಸುವ ಪ್ರೇಮಿಗಳು. ಕಥಾ ನಾಯಕನ ಮೇಲಿರುವ ಅಪಾರ ನಂಬಿಕೆ, ಪ್ರೀತಿಯಿಂದಾಗಿ ಸಪ್ತಪದಿ ತುಳಿದು ಜೀವನ ನಡೆಸುವ ಕನಸು ವಿಫಲಗೊಳ್ಳುತ್ತಲೇ ಸಾಗುತ್ತದೆ.

ಹೆತ್ತವರ ಒತ್ತಾಯಕ್ಕೆ ಮಣಿದು ವೆಂಕಟೇಶ ಜೋಯಿಸರನ್ನು ಮದುವೆಯಾಗುವ ಕಾವ್ಯ ದೇಹ ಸುಖವನ್ನು ಅರಸುವ ಗಂಡನನ್ನು ತಿರಸ್ಕಾರ ಭಾವನೆ ತಳೆಯುತ್ತಾಳೆ. ಪ್ರಥಮ ರಾತ್ರಿಯ ಮಿಲನಕ್ಕೆ ಸ್ಪಂಧಿಸದೇ ದಿನಗಳು ಮುಂದುಡೂತ್ತಾ ಹೋದಂತೆ ಪ್ರಿಯಕರ ರಾಹುಲನೊಂದಿಗೆ ಅಚಾತುರ್ಯದಿಂದ ದೇಹ ಸುಖವನ್ನುಂಡ ಕುರುಹಾಗಿ ಅವಳ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುತ್ತದೆ. ವೈದ್ಯರ ಮೂಲಕ ಅದು ಬಹಿರಂಗಗೊಳ್ಳುತ್ತದೆ. ನಂತರದ ದಿನಗಳಲ್ಲಿ ಕಾವ್ಯಳಿಗೆ ರಾಹುಲ ಸಿಗದಿರುವ ಕಾರಣಕ್ಕೆ ನಿರಾಸೆಗೊಂಡು ಬೆಂಗಳೂರಿನ ಅಬಲಾಶ್ರಮ ಸೇರುವ ನಿರ್ಧಾರ, ಅವಳಲ್ಲಿರುವ ಪ್ರಾಮಾಣಿಕತೆ, ನಂಬಿಕೆಯಿಂದ ಇಡೀ ಆಶ್ರಮದ ಜವಾಬ್ದಾರಿಯನ್ನು ಹೋರಿಸಿ ಇಹಲೋಕ ತ್ಯಜಿಸುವ ಆಶ್ರಮದ ಸಂಸ್ಥಾಪಕಿ ಪ್ರೇಮಾಳ ಉದಾರತೆಯನ್ನು ಇಲ್ಲಿ ಮನಮಿಡಿಯುವಂತಿದೆ. 

ಆಶ್ರಮ ಸೇರಿದ ನೂರಾರು ಮಹಿಳೆಯರ ಸಮಸ್ಯೆ, ಶೋಷಣೆ, ಅತ್ಯಾಚಾರ, ಅನ್ಯಾಯಗಳ ಮೇಲೆ ಕೂಡಾ ಕಾದಂಬರಿಕಾರ್ತಿ ಬೆಳಕು ಚೆಲ್ಲಿದ್ದಾರೆ. ಕಾವ್ಯಳ ಉದರದಲ್ಲಿ ರಾಹುಲನ ಕುರುಹಾಗಿ ಹುಟ್ಟುವ ಶೌರ್ಯನ ಹೆಸರಿನಲ್ಲಿಯೇ ಆಶ್ರಮದ ಚಿರಾಸ್ತಿಯನ್ನೆಲ್ಲ ಬರೆದು ಕೊಡುವುದು ಮಾನವೀಯತೆ ಹಾಗೂ ಸಾಮಾಜಿಕ ಪರಿವರ್ತನೆಗೆ ಸಾಕ್ಷಿಯಾಗುತ್ತದೆ. ನಾಯಕಿ ಕಾವ್ಯಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುವ ನಾಯಕನಿಗೆ ಪ್ರೇಯಸಿ ಕಾವ್ಯ ಹಾಗೂ ಮಗನೊಂದಿಗೆ ಸಂಗಮ. ಓದುಗ ನಿಟ್ಟುಸಿರೊಂದು ಬಿಟ್ಟ ಅನುಭವಾಗುತ್ತದೆ. ಪ್ರೇಮಕಾವ್ಯ ಅಮರವಾಗುಳಿಯುವ ವಿಶಿಷ್ಷ ಕಥಾ ಹಂದರದಲ್ಲಿ ನಮ್ಮದೇ ಅನುಭವದಂತೆ ಓದಿಸಿಕೊಳ್ಳುತ್ತದೆ.
-ವೀರಣ್ಣ ಮಂಠಾಳಕರ್, ಬಸವಕಲ್ಯಾಣ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x