’ಪಾನ ಮಹಿಮೆ’: ಗುಂಡುರಾವ್ ದೇಸಾಯಿ ಮಸ್ಕಿ

                                            

ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದ್ರೆ ಪಾರ್ಟಿ ಅಂದ್ರ ಜನ ಕುಡಿತ, ಕಡಿತಾ ಇರಬೇಕು ಅಂತ ಭಾವಸ್ತಾರಲ್ಲ ಯಾಕೆ ಅಂತ! ಅದು ಬಿಟ್ಟು ಸ್ವಾದಿಷ್ಟ ಭೋಜನ ಸವದ್ರ ಪಾರ್ಟಿ ಆಗಲ್ವಾ. ಇಂತಹ ವಿರೋಧ ಕಾರಣಕ್ಕಾಗಿಯೇ ನಾನು ಹಲವಾರು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ. ಏನು ಚಟ ಮಾಡದ ಹುಂಬ ಎಂದು ಬೈಸಿಕೊಂಡಿದ್ದೆನೆ.  ದೇಶದಲ್ಲಿ ಡಿಸೈಲು, ಪೆಟ್ರೋಲಿಗೆ ಸರಾಸರಿಯಾಗಿ ಮಧ್ಯವು ಅದೇ ಪ್ರಮಾಣದಲ್ಲಿ ವೆಚ್ಚವಾಗುತ್ತಿದೆ ಎಂಬುದು ಯಾವುದೇ ಸಮಿಕ್ಷೆ ಅಲ್ಲ ನನ್ನ ಊಹೆ. ಮಧ್ಯದ ಮೇಲಿನ ಮಮಕಾರಕ್ಕೇನೋ ಹಿಂದೆ ಸರಕಾರವೇ ಕಿರಾಣಿ ಅಂಗಡಿಯಲ್ಲಿ ಸಿಗೋ ಹಾಗೆ ಮಾಡ್ತೀವಿ ಅಂತ ಘೋಷಿಸಿದ್ರು.. ಕುಡಿಯದೇ ಬದುಕೆ ಅಲ್ಲ ಎನ್ನುವಷ್ಟು ಅದು  ಸರ್ವಂತರಯಾಮಿಯಾಗಿದೆ. 
          
’ವ್ಹೆನ್ ವೈನ್ ಈಜ್ ಇನ್,  ವೆಟ್ ಈಜ್ ಔಟ್’ ಅಂತಾರೆ. ಈ ಮಾತು ತಿಳಿಯವ ಮೊದಲು ಕುಡಿದವರು ಬೇಕಂತಲೇ ಹಾಂಗ ಮಾಡತಾರೇನು ಅಂತ ನಾನು ತಿಳಕೊಂಡಿದ್ದೆ. ನೋಡಿ ಅವರ ವರ್ತನೇನು ಹಾಗೆ ಇರುತ್ತೆ. ಒಮ್ಮೆ ಅನಿವಾರ್ಯವಾಗಿ ಕುಡಿಯುವ ಚಟವಿಲ್ಲದಿದ್ದರು ಕುಡಿಯುವವರ ಜೊತೆಗೆ  ಬಾರ್‌ಗೆ ಹೋಗಬೇಕಾಯಿತು. ನನಗಿಂತಲೂ ಸಣ್ಣವರು ಅದರಲ್ಲಿ ಇಬ್ಬರು. ಸ್ನೇಹಿತರೊಡನೇ ಕುಳಿತರೆ ಒತ್ತಾಯಕ್ಕ ಮನಸು ಬದಲಾಗಬಹುದು ಎಂದು ಅವರೋಡನೆ ಕುಳಿತೆ. ತಿಂತಾ ಕುಡಿತದ ನಶೆ ಏರಾಕತಿತ್ತು ಅಂತ ಕಾಣುತ್ತೆ; ನಾನು ಅವರನ್ನು ನೋಡುತ್ತಾ ಆ ಬಾಟಲಿ ವಿಕ್ಷೀಸುತ್ತಾ ಕುಳಿತಿದ್ದೆ ಅವರಲ್ಲಿ ಒಬ್ಬ ನನಗೆ ಆತ್ಮಿಯ ಏನಾಯ್ತೋ ಕಾಣೆ ‘ನಿಮೌನ್ ಹಾಂಗ್ಯಾಕ ನೋಡಕತಿಲೇ ಕಂಡಿಲ್ಲನೂ, ನೀ ಕುಡಿಲಿಕ್ರ ದೊಡ್ಡ ಸಾಚಾ ಆಗಿಬಿಟ್ಟೇನು’  ಅಂತ ಬಾಯಿಗೆ ಬಂದಂಗ ಮಾತಾಡಕತಿದ, ಮಂದಿ ನೋಡಕತಿದ್ರು, ನನಗ ಕಜೀಲ್ ಆಯ್ತು. ಮರ್ಯಾದೆ ಕಮ್ಮಿ ಅನಸ್ತು ಮೆಲ್ಲನೇ ಕಾಲ್ತೆಗೆದೆ. ಅವತ್ತ ನಿರ್ಧಾರ ಮಾಡಿದೆ. ಯಾವತ್ತಿಗೂ ಸಮವಯಸ್ಕರಲ್ಲದವರ ಜೊತೆ ಇಂಥ ಸಮಯದಾಗ ಬೇರಿಬಾರದು ಅಂತ.
 
ಇನ್ನೂ ಕುಡಿದವರು ಎಷ್ಟು ಮತಿ ಕಳಕೊಂಡಿರತಾರ ಅನ್ನೊದು ಹೇಳೊದೆ ಬ್ಯಾಡ. ತಾವು ಎಲ್ಲಿದ್ದಿವಿ,ಏನ್ ಮಾತಾಡಕತಿವಿ ಅನ್ನೊ ಕಬರು ಇರೋಲ್ಲ. ನಮ್ಮ ಮಿತ್ರನೋರ್ವ ಸಾಯಂಕಾಲ ಆದ ಕೂಡಲೇ ಅವನ ಅವಸ್ಥೆ ಬೇರೆ ಇರುತ್ತೆ, ಅಂದು ಸಾಯಂಕಾಲ ನಮ್ಮೂರ ಮುದಗಲ್ ಕ್ರಾಸ್‌ನಾಗ  ಟೈಟ್ ಆಗಿ ಇನ್ನೊರ್ವ ಗೆಳೆಯನೊಂದಿಗೆ ನಿಂತಿದ್ದ ಅದು ರಸ್ತಾ ಮಧ್ಯದಾಗ. ಸ್ಪೀಡ್‌ನಲ್ಲಿ ಬಂದ ಲಾರಿಯೊಂದು ಇವನ ಬೆರಳ ಮೇಲೆ ಹಾದು ಹೋಯ್ತು ‘ಯಪ್ಪಾ ಸತ್ತನಲೇ’ ಎಂದವನ ಜೊತೆಗಿದ್ದವನಿಗೆ ’ಲೇ ಸಿದ್ಧ, ಮೊದಲು ಹೋಗಿ ಆ ಗಾಡಿ ಹಿಡೆಲೆ, ಆ ನನ್ಮಗ ನನ್ನ ಏನು ಅಂತ ತಿಳಕೊಂಡಾನ?’ ಎಂದು ಕೂಗಾಕತಿದ್ದ ತನ್ನ ತಪ್ಪಿದ್ದರೂ. ಡ್ರೈವರ್ ಸಂಭಾವಿತನಿದ್ದ, ಇಳಿದು ಬಂದು ‘ಅಣ್ಣೋರ ನೀವು ರಸ್ತಾದಾಗ ಹಾಂಗ ನಿಂತ್ರ ಹ್ಯಾಂಗ್ರಿ ಏನಾರ ಹೆಚ್ಚುಕಮ್ಮಿ ಆಗಿದ್ರ ಏನು ಗತಿ ಇತಿ, ನಡ್ರೀ ದವಾಖಾನಿಗೆ ಹೋಗೋಣ್ರಿ’ ಎಂದ. ಅಷ್ಟೊತ್ತಿಗೆ ಜನ ಎಲ್ಲ ಸೇರಿದ್ರು. ’ಏನಲೇ ನಾನು ಎಲ್ಲೇರ ನಿಲ್ಲವಾ, ಇದು ನಿಮ್ಮಪ್ಪಂದ ಜಾಗೆನಲೇ ನಿಮ್ಮ ಮ್ಯಾಲೆ ಕಂಪ್ಲೇಂಟ್ ಮಾಡ್ತಿನಿ ಹಾಂಗ ಹಿಂಗ’ ಅಂತ ಒದಿರ್‍ಯಾಡಕತಿದ್ದನ್ನು ನೋಡಿದ ಹಿರಿಯರು ‘ಏ ಮಾಸ್ತರ. ತಪ್ಪು ನಿಂದಾದ ಒಂದು ಲೆಕ್ಕಕ್ಕ ಬಗೆಹರಿಸಿ, ನಿನಗ ಗಾಯ ಆಗ್ಯಾದಲ ಅದಕ ರೊಕ್ಕ ಕೊಡಸಂಗ ಮಾಡಮ’ ಅಂದ್ರು. ಇವ ಕೇಳಕ್ಕ ತಯಾರಿಲ್ಲ ’ಕಂಪ್ಲೆಂಟ್ ಮಾಡ್ತೀನಿ, ಕಂಪ್ಲೇಂಟ್’ ಅಂತ ಹಠ ಹಿಡಿದ. ಹಿರಿಯರಿಗೂ ಮಿಕ್ಕಿತ್ತು ’ಈ ಮಾಸ್ತರ ಮಾತು ಕೇಳವಲ್ಲ ನೀ ಗಾಡಿ ಹತ್ತು ಇವ ಏನು ಮಾಡಿಕೊಂತಾನ ನೋಡಿಕೊಳ್ಳಮಾ’ ಎಂದ್ರು. ಜನ ಸರದಾಡಿ ಹೋದ್ರು. ಹೋಗಾ ಟೈಮಿನ್ಯಾಗ ಕಾಲನ್ನ ಯಾವುನೋ ತುಳಿದ ‘ಲೇ ಸಿದ್ಧ, ಆ ನನ್ಮಗ ಹಾಂಗ ಹೊಂಟನಲೇ, ಸರ್ಕಲ್ ಇನ್ಸಪೆಕ್ಟರ್‌ಗ ಫೊನ್ ಮಾಡತಿನಿ ತಡಿ. ಅವಗ ಒಂದು ಗತಿ ಕಾಣಸಮಾ, ಸಿದ್ಧ ಸಿದ್ಧ ಹಿಡೇಲೆ ಅವನ್ನ’ ಎಂದ. ಅವ ಆಲೋಚಿಸಿ ’ಅಲ್ಲೋ ಮಾರಾಯ ಅವರ ಪರಿಚಯ ಅದೆನೋ ನಿನಗ, ನಮ್ಮ ಅವತಾರ ನೋಡಿ ಒಳಗ ನಮ್ಮನ್ನ ಹಾಕೊಬಿಟ್ಟಾರೋ’ ಎಂದ. ’ಲೇ ಸಿದ್ಧ ಮೊದಲು ಹಿಡೆಲೇ ಅವನ್ನ…. ಸರ್ಕಲ್ ಯಾರು ಅಂತ ತಿಳಿದಿ…… ಯಾರು ಅಂತ ತಿಳಿದಿ ಮಗನ, ನಮ್ಮ ಹೆಣ್ಮಕ್ಕಳು ರೋಮೇಟ್ ಆಗಿದ್ದನಲೇ’ ಎಂದಾಗ, ಸಿದ್ಧ ’ಏನಂದ್ಯೋ ಮಾಸ್ತರ?’ ಅಂತ ಗಾಭರಿಯಾಗಿ ಬಿದ್ದಿದ್ದ. ಇವನ ಮಾತು ಕೇಳಿ ಅಲ್ಲಿದ್ದ ಮಂದಿ ಮಿಕಿ ಮಿಕಿ ನೋಡಕತಿದ್ರು. ಹಾಂಗ್ಯಾಕ ನೋಡಕತಿರಪ್ಪ ’ನಮ್ಮಪ್ಪನಾಣೆಗೂ ಸರ್ಕಲ್‌ಉ ನಮ್ಮ ಹೆಣ್ಮಕ್ಕಳ ರೂಮೇಟೋ ಕಾಲೇಜಿನ್ಯಾಗ ಓದಹೊತ್ತನ್ಯಾಗ, ಹಾಂಗ್ಯಾಕ ಹೌಹಾರಿ ನೋಡಕತಿದಿ’ ಅಂತ ಒದರಾಕತಿದ ಕ್ಲಾಸಮೆಂಟು ಅನ್ನೋ ಬದಲು ಗ್ಲಾಸಮೇಟು ಮಹಿಮೆಯಲ್ಲಿ.

ಗೆಳೆಯ ಮಹೇಶ ಸರ್ವಾಂಗ ತಪ್ತ ಮನುಷ್ಯ, ಕುಡಿಯೋ ವಿಷಯಕ್ಕ ಹಗಲು ರಾತ್ರಿ ಅನ್ನುವ ಬೇಧ ಮಾಡದ ಪುಣ್ಯಾತ್ಮ. ಕುಡಿತ ಅವರ ಮನಿತನಕ್ಕೆ ವಂಶಪಾರಂಪರ್ಯವಾಗಿ ಬಂದ ಜೀನ್ಸ್. ಆದರ ಅವರಪ್ಪ ಎಷ್ಟೇ ಕೂಡದ್ರೂ ಆಸ್ತಿ ಹಾಳ ಮಾಡಿಕೊಂಡಿರಲಿಲ್ಲ ಆದರ ಇವ ಸಣ್ಣ ವಯಸ್ಸಿನ್ಯಾಗ ಪಾಪರ್ ಆಗಕ ಬಂದಾನ ಸರಕಾರಿ ನೌಕರಿ ಇದ್ರುನೂ! ಅವ ಕೂಡಿಯಾಕ ಕೂತ್ರ ಬಾಟಲ್ ಸಾಲಂಗಲ್ಲ ಅಂತ ಹೇಳತಿರತಾರ. ನಾಲ್ಕೈದು ಸ್ಟ್ರಾಂಗ್ ವೈನಗಳನ್ನ ಜಗ್ಗಿನ್ಯಾಗ ಹಾಕಿ, ಜಗ್ಗನ್ನ ಒಂದೇ ಹೇಟಿಗೆ ಖಾಲಿ ಮಾಡುವಂತಹ ಪ್ರತಿಭೆ ಅವಂದು. ನವರಾತ್ರಿ ನಮ್ಮೂರಿನ ಸಡಗರದ ಹಬ್ಬ. ಆ ಟೈಮಿನ್ಯಾಗ ರಾತ್ರಿಯ ಎಲ್ಲಾ ಭಜನೆ ಉಪನ್ಯಾಸ ಎಲ್ಲ ಮುಗಿಸಿ ಮನೆಗೆ ಹೊಂಟಿದ್ವಿ. ಅವರ ತಾಯಿ ಮಗನ್ನ ಹುಡುಕೊಂತ ಬಂದ್ಲು ’ಮಗ ಎಲ್ಲ್ಯಾನ ಇನ್ನೂ ಬಂದಿಲ್ಲ, ಗುಡಿಗೇನಾದ್ರೂ ಬಂದಿದ್ನನು’ ಎಂದಾಗ ಅವನ ಅಪ್ತ ಮಿತ್ರ ಅನಂತು ’ನಾನು ಅವ ಬಾರ್‍ನಿಂದ ಗುಡಿಗೆ ಬಂದ್ವಿ, ಅವ ಲ್ಯಾಟ್ರಿನ್‌ಗೆ ಅಂತ ಹೋಗಿದ್ದ ತಾಸಾದ್ರು ಬಂದಿಲ್ಲ ನೋಡು’ ಅಂದ ಅವ. ’ಅಲ್ಲಾ ಎಂತಾ ಮಕ್ಕಳ್ರೆ? ನೀವು ಕುಡದು ಗುಡಿಗೆ ಬರತಿರೇನೋ’ ಅಂದ್ರು ಹಿರಿಯರೊಬ್ಬರು, ’ಇಲ್ರಿ, ಬ್ಯಾಡಂದ್ರು ಅವನ ಕರಕೊಂಡು ಬಂದಾನ’ ಅಂದ. ಹೋಗಲಿ ತಾಸಾದ್ರೂ ಅವ ಬಂದಿಲ್ಲ ಅಂದ್ರ ಎಲ್ಲಿ ಹೋಗ್ಯಾನ ನೋಡಮ ನಡ್ರೀ!’ ಅಂತ ಹುಡಕೋಕ ಹೊರಟ್ವಿ. ತಿಪ್ಪೆಯಲ್ಲ ಜಾಲಾಡಿದ್ವಿ ಸಿಗಲಿಲ್ಲ. ಅವ ಯಾರಿಗೆ ಕಣ್ಣಿಗೆ ಬೀಳಬೇಕೋ ಅವನಿಗೆ ಬಿದ್ದ. ’ಇಲ್ಲಿ ಯಾರ ಬಿದ್ದಾರ ಬರ್ರಿ’ ಅಂತ ಕರದ ಅನಂತು. ಬಂದು ನೋಡತೀವಿ ಅವ ಬಿದ್ದ ದೃಶ್ಯ ನೋಡಿ ವಾಕರಿಕೆ ಬಂದಂಗ ನಮಗಾತು. ಬಾರಲು ಬಿದ್ಯಾನ ಅದು ಅದೂ ತಾನು ಮಾಡಿದ……….ಮ್ಯಾಲೇ. ನನಗಂತೂ ವಾಂತೀನ ಬಂತು. ’ಈ ಕಳ್ಳ ನೋಡ್ರೀ……. ಬಾರ್‍ನ್ಯಾಗ ರೊಕ್ಕ ಇಲ್ಲಪ್ಪ ಕ್ವಾಟ್ರ ಕುಡಿಯಾಮ’ ಅಂತ ಕುಡಿಸಿ ಎಷ್ಟು ಬಾಟಲಿ ಒಕ್ಕಟ್ಟನಾ……’ ಅಂದ ತನಗ ಪಾಲು ಸಿಕ್ಕಿಲ್ಲ ಎಂಬ ದಿಗಿಲಿನಲ್ಲಿ. ಯಾರ್‍ಯಾರಿಗೆ ಯಾವುದೋ ಚಿಂತೆ ಅನ್ನೋ ಹಾಂಗ ಇವನಿಗೆ ಕೊಟ್ಟಿಲ್ಲ ಅನ್ನೊ ಚಿಂತೆ ಹತ್ತಿತು. ನಾವು ಹೇಸಿಗೆಯಲ್ಲಿ ಮುಖ ಇಟ್ಟವನನ್ನು ಹೇಗೆ ಎಬ್ಬಿಸಬೇಕು ಅಂತ ಚಿಂತಸ್ತಿದ್ರೆ.

ತೀರ್ಥ ಯಾತ್ರೆಗೆ ಹೋಗೋಣ ಅಂತ ನಮ್ಮ ಭಜನಾ ಮಂಡಳಿ ಗಂಟು ಬಿತ್ತು. ಸೇವಾ ಸಮಿತಿಯವರು ನವರಾತ್ರಿಯಲ್ಲಿ ಉತ್ತಮ ಕಾರ್ಯ ಮಾಡಿದ್ದಕ್ಕಾಗಿ ಸ್ವಲ್ಪ ಗೌರವ ಸಂಭಾವನೆ ಕೊಟ್ಟಿದ್ದರು. ನಾನು ದೇವಸ್ಥಾನಕ್ಕ ಕೊಟ್ಟುಬಿಡೊಣ ಅಂದ್ರ ಕೇಳಲೊಲ್ಲರು. ತೀರ್ಥಯಾತ್ರೆ ಮಾಡೋಣ ಪುಣ್ಯ ಸಂಪಾದನೆ ಯಾಗುತ್ತೆ ಅಂದ್ರು ಹರಿ ಭಜನ ಪಂಡಿತ್ ಅಂತ ಕುಖ್ಯಾತಿ ಪಡೆದಿದ್ದ ಪಾಣಿ. ನಾನು ಆಗಲ್ಲ ಹೋಗಿ ಬರ್ರೀ ಅಂದ್ರ ಬಲವಂತ ಮಾಡಿದ್ರು. ಹೊರಡ ದಿನ ಬಂತು. ಎಲ್ಲಾರೂ ಹೊರಡೋದು ನಿರ್ಧಾರ ಆಗಿತ್ತು. ನಾನು ಗಾಡಿ ಏರಿ ಕೂಳಿತಾಗ ಆತ್ಮೀಯರೆಲ್ಲರೂ ಕೈಕೊಟ್ಟಿದ್ರು. ಇಬ್ಬರು ಹೆಚ್ಚು ಮಾತನಾಡದ ಹಿರಿಯರು ಅಷ್ಟೇ ಇದ್ರು. ಕೆಲ ಹೊಸ ಮುಖಗಳು ಕಂಡ್ವು. ಆತ್ಮೀಯರು ಗಾಡಿ ಹತ್ತದ ಕಾರಣ ನನಗೂ ಅಸಮಧಾನವಾಯಿತು. ಹತ್ತಿದ್ದೆ, ಇಳಿದರೆ ತಪ್ಪು ಭಾವಿಸಿಯಾರು ಎಂದು ಹಾಗೆ ಕುಳಿತೆ. ‘ಲಕ್ಷ್ಮೀರಮಣ ಗೋವಿಂದಾ ಗೋವಿಂದ ಅಂತ ಹೇಳಿ ಗಾಡಿ ಸ್ಟಾರ್ಟ ಮಾಡಿಯಾಯಯಿತು. ತಣ್ಣನೇ ಗಾಳಿ ಬೀಸಿದ್ದರಿಂದ ನಿದ್ದೆ ಆವರಿಸಿತು. ಗಾಡಿ ನಿಂತಾಗ ಗಂಗಾವತಿಯ ಬಂದಿದು ಅನ್ನೊದು ಗಾಡಿ ಮುಂದ ನಿಂತಿದ್ದ, ಹಿಂದೆ ಹೇಳಿದ್ದೆನಲ್ಲ  ಮಹೇಶನ್ನ ನೋಡಿ ಖಾತ್ರಿ ಆಯಿತು. ಅವ ಬರ್ರಿ ಬರೀ  ಟ್ಯಾಂಕ್ ತುಂಬಿಸಿಕೊಂಡು ಹೋಗ್ರೀ ಅಂತ ಕರಿಯಾಕತಿದ್ದ. ನಾನು ಪೆಟ್ರೋಲ್ ಬಂಕ್ ಬಂದಿರಬೇಕು, ಹಾಗೆ ಕರಿತಿರಬೇಕು ಅಂತ ಅನಕೊಂಡು ಕಣ್ಣುತಿಕ್ಕಿಕೊಂಡು ನೋಡಿದ್ರೆ ಗಾಡಿಯಲ್ಲಿದ್ದವರೆಲ್ಲರೂ ಇಳಿದಿಳಿದು ಬಾರ್‌ಗೆ ಹೊಂಟಿದ್ರು. ನಾವು ಮೂವರು ಅಲ್ಲೇ ಕುಳಿತಿದ್ವಿ ನಮ್ಮ ನೋಡಿದ ಇಬ್ಬರು ಸಣ್ಣ ಹುಡ್ರು ಹೆದರಿ ಮನಸು ಮಾಡಲಿಲ್ಲ. ಮಹೇಶ ಎಲ್ಲರಿಗೂ ಕುಡಿಸಿ ಪಾನ್ ಶಾಪ್ ಮುಂದ ನಿಂತು ಏನೇನು ಬೇಕು ಅಂತ ಹೇಳಿ, ಗುಟಕಾ ಸರನ ಎಲ್ಲರ ಹೇಗಲ ಮೇಲೆ ಹಾಕಿದ ಶಾಲ್ ತರಹ. ಇಷ್ಟೇಲ್ಲ ಕಾಳಜಿ ಮಾಡಿ ಖರ್ಚು ಮಾಡಿದ ಮಹೇಶಗ ತೀರ್ಥ ಸೇವಿಸಿದ ಮಂದಿ ’ಜೈ’ ಅಂತು ನೀನು ಹತ್ತಿಬಿಡಪ ಹೋಗೋಣ ಅಂದ್ರು. ಇಲ್ಲಪ ಮುಂದ ಅಣ್ಣ ಬರತಾನ ಒಲ್ಲೇ ಅಂತ ಸಹೋದರ ಭಕ್ತಿ ತೋರಿಸಿದ. ಎಲ್ಲಾ ಮಂದಿ ಮಹೇಶ ಕೂ ಜೈ’ ಎಂದು ಗಾಡಿಯೊಳಕ್ಕ ಹತ್ತಿತು. ಗಾಡಿ ಗಬ್ಬ ವಾಸನೆ ಹಿಡಿತು. ಕುಡಿತದ ಮಬ್ಬಿನಲ್ಲಿ ಹಿರಿಯರಿಬ್ಬರು ಇದ್ದಾರೆ ಹೇಗೆ ವರ್ತಿಸಬೇಕು ಎಂಬುದು ತಿಳಿಯಲಿಲ್ಲ. ನಾನು ಹಿರಿಯರಿಬ್ಬರಿಗೆ ಇರಲಿ ನೋಡೋಣ ತಾಳ್ಮೆ ವಹಿಸಿ ಎಂದೆ. ಮುಂದೆ ಸಾಗಿತು. ಅಷ್ಟರಲ್ಲೊಬ್ಬ ಉದ್ರಿ ಪಾರ್ಟಿ ಮಾಡಿಸೋ ದೈವ ಒಬ್ಬ ಸೇರಿಕೊಂಡ. ಇಂತಹ ತಿಂಡಿ ತೀರ್ಥ ಉದ್ರಿ ಸಿಗತಾವ ಅಂದ್ರ ಹುಳಗಳು ಬಾಳ. ಆ ಸತ್ಯ ಅರಿಯೋದು ಬಾಳ ಸಮಯ ಬೇಕಾಗಲಿಲ್ಲ. ಶಿರಸಿಯಲ್ಲಿ ಮಾರ್ಕೆಟಿಗೆ ಹೋಗತಿನಂತ ಹೋದವರು ಈ ತೀರ್ಥತಂದು ಜೀಪು ಹತ್ತಿದ್ರು. ನಾವು ಮಲಗಲಿ ಎಂದು ಸುಮ್ಮನೇ ಬಿಟ್ಟಿದ್ದರೇನೋ ನಾವು ಎಚ್ಚರವಾಗುವಾಗಲೇ ಕುಡಿದು ಗಲಾಟೆ ಎಬ್ಬಿಸಿದ್ರು. ನಾವು ಅವರ ಸ್ಥಿತಿ ನೋಡಿ ಮುಖ ಕಿವಿಸಿಕೊಂಡು ಅಪಸ್ವರ ಎತ್ತಿದಾಗ ಅವರಲ್ಲಿ ನನಗಿಂತಲೂ ಹಿರಿರಾದ, ಹಬಪಂ ಪಾಣಿ ‘ನಾವು ಮಾಡಿದ ಹಲ್ಕಟ್ ವಿಚಾರನ ಊರಾಗ ಯಾರಾದ್ರೂ ಬಾಯಿಬಿಟ್ರ ಒಬ್ಬೊಬ್ಬ ಸೂಳೆ ಮಕ್ಳನ್ನ ಹುಟ್ಟಿಲ್ಲ ಅನಿಸಿಬಿಡತನಿ’ ಎಂದಾಗ ಊರಾಗ ಇದ್ದಾಗ ದೊಡ್ಡದೊಡ್ಡ ಮಾತನಾಡುತ್ತಿದ್ದ ನ್ಯಾಯ ಹೇಳುವಾತನ ಅನ್ಯಾಯಗಿರಿಗೆ ನಿಜಕ್ಕೂ ಖೇದವೆನಿಸಿತು. ಹಿರಿಯರಾದ ಇಬ್ಬರಿಗೂ ಪಿತ್ತನೆತ್ತಿಗೆರಿತ್ತಾದರೂ, ಮುಂದಾಗಬಹುದಾದ ಅನಾಹುತಗಳನ್ನು ಯೋಚಿಸಿ ಮಾತಿಗಿಂತಲೂ ಮೌನಕ್ಕೆ ಶರಣಾಗೋಣ ಅಂತ ಹೇಳಿ ಸಮಾಧಾನಪಡಿಸಿದೆ. ಒಂದು ನನಗ ಬಹುವಾಗಿ ಕಾಡಿದ್ದು ಸುಮ್ಮನೇ ಕುಳಿತಿದ್ದ ನಮ್ಮನ್ನ ಅನುಸರಿಸದೆ ಅದುವರೆಗೆ ತಡೆದುಕೊಂಡಿದ್ದ ತಾಳ್ಮೆಯನ್ನು ಮೀರಿ ಸೋಂದಾದಿಂದ ತಿರುಗಿ ಊರಿಗೆ ಪ್ರಯಣಬೆಳೆಸಿದಾಗ ನಡುವೆ ಡಾಬವೊಂದಕ್ಕೆ ಆ ಹುಡುಗರು ಅವರ ಮಾರ್ಗವನ್ನು ಅನುಸರಿಸಿದ್ದು. ಊರಿಗೆ ಬಂದ ಮೇಲೆ ಇಂತಹ ಅವಘಡಗಳು ಆಗದಂತೆ ಸೂಕ್ಷ್ಮರೀತಿಯಿಂದ ಮುಂದಿನ ಇಂತಹ ಕಾರ್ಯಯೋಜನೆಗಳನ್ನ ಹಾಕಿಕೊಳ್ಳದಂತೆ ತಪ್ಪಿಸಿದ್ದು ಬೇರೆ ಮಾತು; ಆದರೆ ನನಗೆ ಕಾಡುವುದು ಡ್ರೈವರ್ ’ನಾನು ಅನ್ಯಧರ್ಮಿಯನಾಗಿ ಈ ಡ್ರೈವರ್ ಕಾರ್ಯ ಮಾಡುತ್ತಿದ್ದರೂ ಇಂತಹ ಚಟಕ್ಕೆ ಮನಸ್ಸು ಮಾಡುತ್ತಿಲ್ಲ, ಆದರೆ ನಿಮ್ಮವರು ಮಾಡಿದ ಹಾರಾಟಗಳನ್ನು ನೋಡಿ ಸಹಿಸಿಕೊಂಡಿದ್ರಲ್ಲ, ಜೊತೆಗೆ ಕುಡಿದು ಅವರಾಡುವ ಜಗಳ ಬಿಡಿಸುತ್ತಿದ್ದಿರೆಲ್ಲ ನೀವೇ ಗ್ರೇಟ್‌ರೀ, ಯಾರದೋ ಗಂಟಿನಲ್ಲಿ ಮಜಾ ಉಡಾಯಿಸುವ ಇವರು ಉದ್ಧಾರ ಆಗ್ತಾರೆ ಅಂತ ನಾನು ಅಂದುಕೊಂಡಿಲ್ಲ, ನೋಡಿ ಗಾಡಿಯ ಒಳಗೆ ಹೊರಗೆ ಹೇಗೆ ಉಗಳಿದ್ದಾರೆ, ವಾಂತಿ ಮಾಡಿಕೊಂಡಿದ್ದಾರೆ’ಎಂದಾಗ ನಮಗೆ ಉತ್ತರಿಸಲಾಗಲಿಲ್ಲ.

ಕುಡಿತದ ಚಟಕ್ಕೆ ಬಲಿಯಾದವರಿಗೆ ತಾವು ಉನ್ನತ ಹುದ್ದೆಯಲ್ಲಿರುವವರು ಹೇಗೆ ತಮ್ಮ ಸ್ಟೇಟಸ್ಸ ಕಾಪಾಡಬೇಕು ಎಂಬುದು ಸಹ ಗೊತ್ತಾಗೋದಿಲ್ಲ. ನಮ್ಮ ಆತ್ಮೀಯ ಅಧಿಕಾರಿಗಳೊಬ್ಬರಿದ್ದರು. ಒಳ್ಳೆ ಸುಸಂಸ್ಕೃತರಾಗಿದ್ದರು. ನಮ್ಮ ಮೇಷ್ಟ್ರುಗಳು ಸಾಮಾನ್ಯರೇ ಲೋಕದಲ್ಲಿ ವಿಶಿಷ್ಟ ವ್ಯಕ್ತಿಗಳನ್ನು ಹುಟ್ಟಿಸುವಂತಹವರು. ಎಂತಹ ಸ್ಟ್ರೀಕ್ ಇರಲಿ ಅವರನ್ನು ಬಗ್ಗಿಸಿ ಮೆತ್ತಗೆ ಮಾಡುವ ಶಕ್ತಿ ಅವರಿಗೆ ಇದೆ.  ನಾನು ಉದಾಹರಿಸಿದ ಅಧಿಕಾರಿ ಇವರುಗಳ ಸಂಗದಲ್ಲಿ ಕುಡಿತಕ್ಕೆ ಎಷ್ಟು ಅಡಿಟ್ ಆದರೇಂದರೆ ಪಾರ್ಟಿ ಎಲ್ಲಿ ನಡಿತಂದ್ರ ಸಾಕು ಒಲ್ಲೆ ಅಂತಿರಲಿಲ್ಲ. ಒಮ್ಮೆ ಒಂದೆಡೆ ಪಾರ್ಟಿ ಫಿಕ್ಸ ಆಗಿತ್ತು ನನ್ನನ್ನು ಅಲ್ಲಿಗೆ ಕರೆದೊಯ್ದರು. ಸ್ಟೇಟಸ್ ಮರೆತು ಅಲ್ಲಿದ್ದವರೊಂದಿಗೆ ಬೆರೆತರು. ನಿಜವಾದ ಸತ್ಯ ಹೊರಗೆ ಬರುವುದೇ ಆಗ ಅಲ್ಲವೇ?  ಒಂದಿಬ್ಬರಿಗೆ ಯಾವುದೋ ಸಣ್ಣ ಕಾರಣಕ್ಕ ಜಗಳ ನಡಿತು, ಜಗಳ ತಗೆದವರಲ್ಲಿ ಒಬ್ಬ ‘ನಮ್ಮ ಸಾಬ ಸೂಳೇಮಗ ಇಲ್ಲೇ ಕೂತನ ಅವನ ಕೇಳಂಬಾ ಅವ ಹೇಳಲಿ ನನ್ನ ಡ್ಯೂಟಿ ಬಗ್ಗೆ’ ಎಂದಾಗ ನಿಶಾನ ಇಳಿದಿತ್ತು. ಇವರ ಜಗಳ ಅಂಗಳಕ್ಕೂ ಇಳಿದು ಓಣಿಯವರೆಲ್ಲ ಬಂದು ಸೇರಿ ’ಛೀ ಥೂ’ ಅಂತ ಹಾಕಕತಿದ್ರು. ನಮ್ಮಗಷ್ಟ ಯಾಕ ಬಯ್ಯತಿರಿ ಈ ಪಾರ್ಟಿಗೆ ಕಾರಣರಾದ ಇವರಿಗೂ ಉಗಿರಿ ಅಂತ ಕುಡಿದಾವ ಬರಳು ಮಾಡಿ ತೋರಿಸಿದಾಗ ಪೂರ್ತಿ ನಿಶಾನ ಬಿಟ್ಟುಹೋಗಿ ’ಇನ್ನೊಮ್ಮೆ ಇಂತ ಕಾರ್ಯಕ್ಕ ಇಳಿಯಲ್ಲರಿ’ ಅಂತ ಅಂದ್ರೂ ಕಲತ ಚಟ ಕಲ್ಲಾಕಿದರೂ ಹೋಗಲ್ಲ ಅನ್ನೊದು ಇವರ ವಿಷಯದಲ್ಲಿ ತಪ್ಪಾಗಲಿಲ್ಲ.

ಇತ್ತಿಚೀಗೆ ಖಾಸಗಿ ಬ್ಯಾಂಕ್ ಒಂದಕ್ಕೆ ಸಾಲ ತೆಗೆದು ಕೊಳ್ಳಲು ಹೋಗಿದ್ದೆ.ಆ ಬ್ಯಾಂಕನ ಅಧ್ಯಕ್ಷರ ಮಕ್ಕಳು ನನ್ನ ಹಳೆಯ ವಿದ್ಯಾರ್ಥಿಗಳಾಗಿದ್ದುದರಿಂದ, ನನಗೂ ತೃಪ್ತಿಕರ ವೇತನ ಬರತ್ತಿದುದರಿಂದ ಸಾಲ ಸುಲಭದಲ್ಲಿ ಸಿಗಬಹುದು ಅಂತ ಭಾವಿಸಿದ್ದೆ. ಅಧ್ಯಕ್ಷರಿಗೆ ವಂದಿಸಿ ವಿಷಯ ಪ್ರಸ್ತಾಪಿಸಿದ ತಕ್ಷಣ ’ನೀವು ಯಾವ ಊರಿನವರು, ಎಲ್ಲಿ ಕೆಲಸ ಮಾಡ್ತಾ ಇದ್ದೀರ, ಶೇರ ಇದೇಯಾ?’ ಎಂದೆಲ್ಲ ಪ್ರಶ್ನೆ ಮಾಡಿದಾಗ ನನಗೆ ಆಶ್ಚರ್ಯವೆನಿಸಿತ್ತು. ನಿತ್ಯ ಅವರ ಮನೆಯ ಮುಂದೆ ತಿರುಗಾಡುವ, ದೊಡ್ಡವರೆನ್ನುವ ಕಾರಣಕ್ಕೆ ಭೇಟಿಯಾದಾಗಲೆಲ್ಲ ಸಲಾಮು ಹೊಡಿತಿದ್ದೆ. ಯಾಕೆ ಅವರು ಹಾಗೆ ವರ್ತಿಸಿದರೋ ತಿಳಿಯಲ್ಲಿಲ್ಲ. ಆತ್ಮೀಯರನ್ನು ಕೇಳಿದಾಗ ಅವರದೇನಲೇ ’ನಾಯಿ ಮು… ಜೇನು’ ಇದ್ದಂಗ ತಲೆಕೆಡಿಸಿಕೊಳ್ಳಬೇಡವೋ, ಮಹಾ ಜಿಪುಣ,ಯಾರು,ಎಂತವರು ಅನ್ನೊದು ಧರ್ಮ ಕರ್ಮ ಗೊತ್ತಿಲ್ಲದ ಮಹಾನುಭಾವ ಎಂದು ಸಮಾಧಾನಪಡಿಸಿದರಾದರೂ ನನಗ ತೃಪ್ತಿಯಾಗಲಿಲ್ಲ. ಆದರೆ ಪದ್ದುನ ಕಂಡಾಗಲೆಲ್ಲ ನನಗ ಒಂದು ರೀತಿಯಲ್ಲಿ ಹೊಟ್ಟೆ ಉರಿ. ಹಾಗೆ ನೋಡಿದ್ರೆ ಅವ ನನಗೇನು ಕಾಂಪಿಟೇಟರ್ ಅಲ್ಲ. ನನ್ನ ಅವನ ವ್ಯಕ್ತಿತ್ವದಲ್ಲಿ ಅಜಗಜಾಂತರ ವ್ಯತ್ಯಾಸ. ಆದರ ಅವನ ಲಿಂಕ ನೋಡಿದ್ರೇ ಬಹು ದೊಡ್ಡದು. ಹಮಾಲರಿಂದ ಹಿಡಿದು ಕರೋಡಪತಿಗಳಿಗೆಲ್ಲ ಅವನಿಗೆ ಪರಿಚಿತರು.ಅದಕ ಒಮ್ಮೇ ಕೇಳಿದೆ ನಿನ್ನ ರಹಸ್ಯವೇನೋ?ಎಂದೆ. ಅದಕ್ಕೂ ತಲೆ ಬೇಕಯ್ಯ ಫ್ರಂಡಶಿಪ್ ಬೆಳೆಯುವದೆಂದ್ರ ಸಾಮಾನ್ಯವೇನು. ನೀನು ಇಷ್ಟು ಬರದಿದ್ರಿ ಈ ಊರಿಗೆ ಅಪರಿಚಿತ ಆದರ ನಾನು ಏನು ಕಿಸಿಯದ ಪರಿಚಿತ. ದೊಡ್ಡದೊಡ್ಡವರ ದೊಸ್ತಿಳಿಸಿಕೊಳ್ಳಬೇಕದ್ರ ಬಾರ್‌ಗೆ, ಜೂಜಿನ ಅಡ್ಡೆಕ್ಕೆ ಬರಬೇಕಮ ಅಂದಾಗಲೇ ಎಲ್ಲರ ಪರಿಚಯ ಅಲ್ಲಿ ಆಗುವುದು ಎಂದಾಗ ಗೊತ್ತಿಲ್ಲದ ವಿಷಯವಾದ್ದರಿಂದ ಇದ್ದರೂ ಇರಬಹುದು ಎಂದು ಗೋಣುಹಾಕಿದೆ.

ಒಮ್ಮೆ ಪದ್ದುನ ಹತ್ತಿರ ಅರ್ಜಂಟ ಕೆಲಸವಿದ್ದ ಕಾರಣ ಹುಡುಕಲು ಪ್ರಯತ್ನಿಸಿದೆ ಅವ ಇಂತವರ ಸಂಗದಲ್ಲಿ ಇದ್ದನೆಂಬುದು ತಿಳಿತು. ಅಲ್ಲಿಗೆ ಹೋಗಲು ಮನಸಿರಲಿಲ್ಲವಾದರೂ ಪದ್ದುನ ಭೇಟಿಯಾಗಲೇಬೇಕಾದ ಅನಿವಾರ್ಯತೆ ಇತ್ತು. ಮುಜುಗರದಿಂದಲೇ ಆ ಅಡ್ಡೆ ಪ್ರವೇಶಿಸಿದೆ. ’ಬಾರಯ್ಯ ಇವತ್ತಾದ್ರೂ ಜ್ಞಾನೋದಯವಾಯ್ತಲ್ಲ,’ ಎಂದ. ‘ಹೇ ಅಲ್ಲಪ,ಅದಕ ಬಂದಿಲ್ಲ ಬೇರೆ ಕೆಲಸ ಇತ್ತು ಅದಕ ಬಂದಿನಿ ಎಂದು ಸ್ವಲ್ಪ ಬಾ’ ಎಂದು ಕರದೆ. ಉಳಿದವರೆಲ್ಲ ’ಯಾರಯ್ಯ?’ ಎಂದು ಪದ್ದುನ ಕೇಳಿದ್ರು.. ‘ಇವರ, ಯಾವನೂ ಓದಲಾರದ ಈ ಕಾಲದಾಗ ಪೇಪರಿನ್ಯಾಗ ಏನೇನೋ ನಮ್ಮೂರಾಗ ಬರಿತಾನಲ್ಲ. ಅವನ ಇವ’ಎಂದು ಪರಿಚಯಿಸಿದ ‘ಹೇ ಅವರೇನ್ರಿ ನಿಮ್ಮ ಬಗ್ಗ ಪತ್ರಿಕ್ಯಾಗ ಓದುತಿದ್ವಿ ಈಗ ನೋಡದಂಗಾತು ಕೂಡಬರ್ರೀ’ ಎಂದು ಹೊಗಳಾಕ ಸ್ಟಾರ್ಟ ಮಾಡಿದಾಗ ಯಾ ನನ್ಮಗ ಕುಗ್ಗಲ್ರೀ. ಪದ್ದುನು ತಡಿ ಒಂದು ಆಟ ಮುಗಿಸಿಬರ್‍ತೀನಿ ಅಂತ ಕೂಡಿಸಿಕೊಂಡ. ಆಟ ರಂಗೇರಕತಿತ್ತು, ಸಹಜವಾಗಿ ಅದರ ಬಗ್ಗೆ ಕೂತುಹಲನೂ ಏರಕತಿತು. ಅಷ್ಟರಾಗ ಹಿರಿಯರೊಬ್ಬರು ’ಇಲ್ಲೇ ಊಟಮುಗಿಸಿಕೊಂಡು ಹೋಗಿಬಿಡೋಣಪ’ ಎಂದು ಸಲಹೆ ನೀಡಿದಾಗ ಎಲ್ಲರೂ ’ಎಸ್,ಎಸ್,ಆಗಬಹುದು’ ಎಂದು ಹೂಂಗುಟ್ಟಿದ್ರು. ತರೋರು ಯಾರು ಎಂಬ ಪ್ರಶ್ನೆ ಬಂದಾಗ ಮೆಲ್ಲನೆ ಜಾಗ ಕೀಳಬೇಕೆಂದು ಎದ್ದು ನಿಂತಿದ್ದ ನನ್ನನ್ನತ್ತ ದೃಷ್ಠಿ ಬೀರಿದರು ದೊಡ್ಡವರು. ನನಗೆ ಗೊತ್ತಿಲ್ಲ ಎಂದೆ. ವಿಳಾಸ ಹೇಳಿ, ತಪ್ಪುತಿಳುಕೊಳ್ಳಬೇಡಿ ಎಂದು ಫೋನಿನಲ್ಲೆ ಆರ್ಡರ್ ಮಾಡಿದ್ರು. ನಿಮ್ದು ಹೋಗಿ ವ್ಯವಸ್ಥೆ ಮಾಡೋದು ಅಷ್ಟ! ನಮ್ಮ ಹುಡ್ರನ್ನ ಅಲ್ಲೆ ಕಳಸ್ತಿವಿ’ ಎಂದು ಭಿನ್ನವಿಸಿಕೊಂಡ್ರು. ನಿರ್ವಹನೆ ಇಲ್ಲ. ಸೀದ ನಮ್ಮೂರಿನ ಏಕೆ ಜಿಲ್ಲೆಯಲ್ಲೆ ಪ್ರಸಿದ್ಧಿ ಪೆದ ಗಡಗಿ ರಾಮಣ್ಣನ  ಖಾನಾವಳಿಗೆ ಬಂದು  ಅಲ್ಲಿ ವ್ಯವಸ್ಥ ಮಾಡಿಸಿದೆ ಪರಿಚಿತ ಕೆಲವರು ನನ್ನನ್ನು ಆ ಸ್ಥಳದಲ್ಲಿ ನೋಡಿ ’ಗುಸು ಗುಸು-ಪಿಸು ಪಿಸು’ ಮಾತಾಡಿಕೊಳ್ಳಾಕತಿದ್ರು. ಮೆಲ್ಲಕ ಜಾಗ ಖಾಲಿ ಮಾಡಿಸೀದ ವೈನ್ ಶಾಪ್‌ಗೆ ಬಂದು ವಿಷಯ ಹೇಳಿದೆ. ಅವರು ಬಾಟಲಿ ಕೈಯಾಗ ಕೊಟ್ರು ಅಲ್ಲೇ ಸಪ್ಲೈ ಮಾಡ್ತಿದ್ದ. ನಮ್ಮ ಓಣಿಯ ಹುಡುಗ ಚಂದ್ರು ’ಅಯ್ಯ! ನಮ್ಮ ಮೇಷ್ಟ್ರು ಕುಡಿಯಕ ಬಂದಾರಲೇ……’ ಅಂತ ಕೂಗಿದ್ದೆ ತಡ ಅಲ್ಲಿದ್ದವರೆಲ್ಲ ನನ್ನತ್ತ ದೃಷ್ಠಿ ಹರಿಸಿದ್ರು. ನನ್ನ ಜಂಘಾ ಬಲವೇ ಉಡುಗಿ ಹೋಯ್ತು.  ಎಲ್ಲ ಮುಗಿಸಿ ಮನೆ ಮುಟ್ಟುತ್ತಿದ್ದಂತೆಯೇ ’ಬಂದ್ರ ಬಂದ್ರು’ ಅಂತ ಹೊರಗೆ ಬಂದು ಜನ ನೋಡುತ್ತ ನಿಂತಿದ್ರು.. ಹಾಂಗ್ಯಾಕ ಅಂತ ಅರ್ಥ ಆಗಲಿಲ್ಲ ಆದರ ಮನಿಗೆ ಹೋದ ಮ್ಯಾಲೆ ಅಲ್ಲಿ ಕಥಿನ ಬ್ಯಾರೆ ಆಗಿತ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
parthasarathy N
parthasarathy N
9 years ago

ಮದಿರೆ ನಮ್ಮ ಮನಸಿನ, ದೇಹದ, ಹಾಗು ಸಾಮಾಜಿಕ ಸ್ಥಿಥಿಯ ಮೇಲೆ ಮಾಡುವ ಪರಿಣಾಮಗಳನ್ನೆಲ್ಲ ಸರಿಯಾಗಿ ವಿವರಿಸಿದ್ದೀರಿ. ಆದರೆ ಏನು ಮಾಡೋದು ಇಂದಿನ ಸಮಾಜ ಕುಡಿತಮುಖಿಯಾಗಿದೆ. ಗಾಂದಿ ಹೆಸರು ಹೇಳುವ ಪಕ್ಷಗಳೆ ಬಡವರಿಗೆ ಹೆಂಡ ಹಂಚುತ್ತೀನಿ ಅಂತಾರೆ . 
ತಮಾಷಿ ನೋಡಿ, ಯಾವುದಾದರು ಗಲಭೆಗಳಾದರೆ ಹೊಡೆದಾಟವಾದರೆ , ಪೋಲಿಸರು ಹೆಂಡದಂಗಡಿಒ/ವೈನ್ ಶಾಪ್ ಮುಚ್ಚಿಸುತ್ತಾರೆ ಕಾರಣ ಗಲಭೆಗೆ ಪ್ರಚೋಚನೆ ಕೊಡುತ್ತೆ ಅಂತಾ ತಾನೆ, ಹಾಗಿರುವಾಗ ಅದೇ ಸರ್ಕಾರ ದಿನವು ಹೆಂಡ ಕುಡೀರಿ ಅಂತ ರಾತ್ರಿ ಎರಡು ಗಂಟೆ ವರೆಗೂ ವೈನ್ ಶಾಪ್ ತೆಗೆದಿಡಿ ಅಂತ ಅದೇ ಸರ್ಕಾರವೆ ಒಪ್ಪಿಗೆ ಕೊಡುತ್ತದೆ
ಇಂದಿನ ಬಹುತೇಕ ಅಪರಾದ ಕೊಲೆ ಹಿಂಸಾಚಾರ ಅತ್ಯಾಚಾರಗಳಿಗೆ ಕುಮ್ಮಕ್ಕು ಕೊಡುತ್ತಿರುವುದು ಕುಡಿತ. 
ಇದು ಎಲ್ಲರಿಗು ಅರ್ಥವಾಗುವ ಸಂಗತಿ. 
ಹಾಗೆಂದು ನಾನು ಕುಡಿದ ಎಲ್ಲರೂ ಹಾಗೆ ಮಾಡುತ್ತಾರೆ ಅಂತಲ್ಲ. ಆದರೆ ಹಾಗೆ ಮಾಡುವವರು ದೈರ್ಯಕ್ಕೆ ಅಂತ ಕುಡಿತಾರೆ ಅನ್ನುವುದು ಸತ್ಯ. 
ಮೊನ್ನೆ ತಾನೆ ಬೆಂಗಳೂರಿನ ಹಾಸ್ಟೆಲ್ ನಲ್ಲಿ ಶೂಟೌಟ್ ಆಯಿತು, ಆಗುವಾಗ ಅಪರಾದಿ ಕೊಲೆಗೆ ಮೊದಲು ನಂತರ ವೈನ್ ಶಾಪ್ ನಲ್ಲಿದ್ದ ಅಂತ ಪೋಲಿಸರೆ ಹೇಳ್ತಾರೆ . 
ಆದರು ಕುಡಿತವನ್ನು ನಿಲ್ಲಿಸಲಾಗುವದಿಲ್ಲ, ಏಕೆಂದರೆ ಅದೇ ಕಾರಣಕ್ಕೆ ರಾಜಕೀಯ ಪಕ್ಷಗಳು ಗೆದ್ದು ಬರ್ತವೆ, ಅವರ ಕೆಲಸಗಳು ನಡಿತವೆ, 
ಬಹುತೇಕ ದೇಶದಲ್ಲಿಯ ಭ್ರಷ್ಟಾಚಾರದ ವ್ಯವಹಾರಗಳು ನಡೆಯುವುದು ಹೆಂಡ/ ಮದಿರೆಯ ಸಮ್ಮುಖದಲ್ಲಿ  
ಹೋಗಲಿ ಬಿಡಿ, ಯಾರಿಗೂ ಕೋಪ ಬೇಡ

ಕುಡಿಯುತ್ತ ಎಲ್ಲರೂ ಸಂತಸದಿಂದಿರಲಿ !!

gundurao
gundurao
9 years ago

ತಮ್ಮ ಒಳ್ಳೆಯ ಸ್ಪಂದನೆಗೆ ಧನ್ಯವಾದಗಳು ಸರ್

 

prashasti.p
9 years ago

Houdu. .kudidaaga enaagatte, enaagalla anta gottagade stitiyalli enu aagabodu ..

gundurao
gundurao
9 years ago
Reply to  prashasti.p

ನಿಜ ಸರ್, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

 

4
0
Would love your thoughts, please comment.x
()
x