’ಕಪ್ಪು ಹಣ’ವೆಂಬ ಮಾಯಾಮೃಗದ ದರ್ಬಾರು…?: ವಿಜಯಕುಮಾರ ಎಮ್. ಕುಟಕನಕೇರಿ

ನಮ್ಮ ದೇಶದ ಆಡಳಿತ ವ್ಯವಸ್ಥೆಯು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಹಾಗಿದೆ. ದೇಶದ ಪ್ರಜೆಗಳು ರಾಜಕೀಯ ಅಥವಾ ಯಾವುದೇ ಮೇಲ್ದರ್ಜೆಯ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ತಕ್ಷಣ ಅಧಿಕಾರದ ಚುಕ್ಕಾಣಿ ಹಿಡಿದು, ಇಡಿ ಆಡಳಿತ ವ್ಯವಸ್ಥೆಯನ್ನೆ ತಮ್ಮ ಕಪಿ ಮುಷ್ಟಿಯಲ್ಲಿರಿಸಿಕೊಳ್ಳುವ ಸ್ವಾರ್ಥತೆ ಬೆಳೆಯುತ್ತಿದೆ. ಇದರ ಬೆನ್ನಲ್ಲೆ ಅಧಿಕಾರವನ್ನು ಹಿಡಿಯಲು ಕಾರಣೀಕರ್ತರಾದ ಜನತೆಗೆ ಕಡೆಗಣನೆಯ ಶಾಪ ತಟ್ಟುತ್ತಿದೆ. ಸಮಾಜದಲ್ಲಿ, ಭ್ರಷ್ಟ ಅಧಿಕಾರದ ದಬ್ಬಾಳಿಕೆಯಲ್ಲಿ ಭ್ರಷ್ಟಾಚಾರದ ಪರಮಾಧಿಕಾರ ತಲೆಯೆತ್ತಿ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಜೆಗಳ ಹಿತಾಸಕ್ತಿಗೆ ಮುಸುಕು ಮೆತ್ತಿಕೊಳ್ಳುತ್ತಿದೆ. ದೇಶದ ಪ್ರಜೆಗಳಿಂದ ಅಕ್ರಮವಾಗಿ ಕಿತ್ತುಕೊಳ್ಳುವಂತಹ ಹಣವು ಕಪ್ಪು ಹಣದ ರೂಪ ಪಡೆದು ವಿದೇಶಕ್ಕೆ ಮಾರ್ಪಾಡಾಗಿ, ನಿರುಪಯೋಗದ ಮೆಟ್ಟಿಲನ್ನೇರುತ್ತಿದೆ.

ದೇಶದಲ್ಲಿ ಆಡಳಿತ ವ್ಯವಸ್ಥೆಯ ಅಧಿಕಾರದ ಭಾಗಗಳಾದ ರಾಜಕಾರಣಿಗಳು, ತಮ್ಮ ಅಧಿಕಾರವದಿಯಲ್ಲಿ ಜನರಿಗೆ ಸ್ಪಂದಿಸಿ, ಕಣ್ಣೀರೊರೆಸುವ ನಕಲಿ ಕರವಸ್ತ್ರಗಳ ಪಾತ್ರವನ್ನು ನಿರ್ವಹಿಸುವ ಪಾತ್ರದಾರಿಗಳಾಗುತ್ತಾರೆ. ಇದರ ನೆಪದಲ್ಲಿ ಸಾಕಷ್ಟು ಹಣವನ್ನು ಬಜೆಟ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಅದನ್ನು ತಮ್ಮ ಅಭಿವೃದ್ಧಿಗಾಗಿಯೆ ಹೊರತು, ಜನರ ಕಷ್ಟಗಳನ್ನು ನಿವಾರಿಸಲು ಅಲ್ಲ.  ದೇಶದಲ್ಲಿ ಕೆಲವೆಡೆ ಅಲ್ಪ ಮಟ್ಟದ ಅಭಿವೃದ್ಧಿಯನ್ನು ಕಾಣಬಹುದು. ಆದರೆ, ಬಹುಪಾಲು ಹಣ ರಾಜಕೀಯ ಕಿಲಾಡಿಗಳ ಕೈ ಸೇರಿ, ಭ್ರಷ್ಟರ ಖಜಾನೆಯಲ್ಲಿ ಭದ್ರವಾಗಿ ಬಂಧಿತವಾಗುತ್ತಿದೆ. ದೇಶದಲ್ಲಿಯ ಜನತೆಯ ಆರ್ಥಿಕತೆಯ ಬಗ್ಗೆ ಹೇಳುವುದಾದರೆ, ಇಲ್ಲಿ ಅಸಹಾಯಕತೆಯ ಬದುಕು ನಿರ್ಮಾಣವಾಗಿದೆ. ರೈತರು ಮಳೆಯನ್ನು ನೆಚ್ಚಿಕೊಂಡು, ಸಾಕಷ್ಟು ಖರ್ಚು ಮಾಡಿ ಹೊಲ ಬಿತ್ತನೆ ಮಾಡುತ್ತಾರೆ. ಇನ್ನು ಕೆಲವರು ನೀರಾವರಿಯ ಆಶ್ರಿತವಾಗಿರುತ್ತಾರೆ. ಅವರಲ್ಲಿ ಕೆಲವರು ಸಾಲ ಮಾಡಿದರೆ, ಕೆಲವರು ಸ್ವಂತ ಹಣದಿಂದ ಬಿತ್ತನೆಯನ್ನು ಮಾಡುತ್ತಾರೆ. ಈ ಎರಡೂ ವಿಧದ ಕೃಷಿಕರು ಎದುರಿಸುವ ಸಮಸ್ಯೆಗಳು ಹಲವಾರು. ಅವುಗಳಲ್ಲಿ ಸರಿಯಾದ ಸಮಯಕ್ಕೆ ಮಳೆ ಬರದಿದ್ದರೆ, ಮಾಡಿದ ಖರ್ಚೆಲ್ಲ ಮೈಮೇಲೇರಿ ಸಾಲಗಾರ ಎಂಬ ಹಣೆಪಟ್ಟಿಗೆ ಅಣಿಯಾಗುತ್ತಾರೆ. ಇನ್ನು ನೀರಾವರಿ ಆಧಾರಿತ ರೈತರಿಗೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ದೊರಕುತ್ತಿಲ್ಲ. ಇದರಿಂದ ಸಾಲದ ಹೊರೆಯು ಬೆನ್ನಮೇಲೇರಿ ಕುಳಿತುಕೊಳ್ಳುತ್ತಿದೆ. ಆರ್ಥಿಕವಾಗಿ ಸಬಲರಿದ್ದರೆ, ತಮ್ಮ ಆಸ್ತಿಯನ್ನು ಅಡವಿಟ್ಟು ಅಥವಾ ಹೇಗೋ ಸಮಸ್ಯೆಯನ್ನು ನಿಯಂತ್ರಿಸುತ್ತಾರೆ. ಆದರೆ, ಬಡಪಾಯಿಗಳು ಇಂತಹ ಬರೆಯನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ಇದರ ಫಲಿತಾಂಶವನ್ನು ನಾವು, ದೇಶದಲ್ಲಿ ಸುರಿಮಳೆಯ ಸರಪಳಿಯಂತೆ ಕಾಣಿಸುತ್ತಿರುವ ರೈತರ ಆತ್ಮಹತ್ಯೆಯ ಮೂಲಕ ಕಂಡುಕೊಳ್ಳಬಹುದು. ಇದರಂತೆಯೆ ದೇಶದಲ್ಲಿ ಅನೇಕ ಸಮಸ್ಯೆಗಳು ತಲೆಯೆತ್ತಿ, ಜನರ ಜೀವನದ ಮೇಲೆ ಬಹುದೊಡ್ಡ ಪರಿಣಾಮಗಳು ಉಲ್ಬಣಗೊಳ್ಳುತ್ತಿವೆ. ಒಂದು ನಿಟ್ಟಿನಲ್ಲಿ ಹೇಳುವುದಾದರೆ, ಇವುಗಳಿಗೆ ನಿರ್ದಿಷ್ಟ ಮಟ್ಟದ ಪರಿಹಾರವನ್ನು ಹಣದ ಮೂಲಕ ಕಂಡುಕೊಳ್ಳಬಹುದು. ಆದರೆ, ದೇಶದಲ್ಲಿ ಹಣದ ಕೊರತೆಯಿಂದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಆಗುತ್ತಿಲ್ಲವೆನ್ನವುದು ಒಂದೆಡೆಯಾದರೆ, ಇನ್ನೊಂದೆಡೆ ದೇಶದಿಂದ ಕೋಟಿ-ಕೋಟಿಗಟ್ಟಲೆ ಹಣ ಭ್ರಷ್ಟಾಚಾರದಿಂದ ಕಪ್ಪು ಹಣವಾಗಿ ವಿದೇಶಗಳಿಗೆ ರವಾನೆಯಾಗುತ್ತಿದೆ. 

ಅಧಿಕಾರದ ಗದ್ದುಗೆಯನ್ನೇರಿದ ರಾಜಕೀಯ ವರ್ಗ, ಸರಕಾರಿ  ಉನ್ನತ ಹುದ್ದೆಯನ್ನು ಸ್ವೀಕರಿಸಿದ ಕೆಲವರು ಭ್ರಷ್ಟಾಚಾರಕ್ಕೆ ಜೋತುಬೀಳುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತಾರೆ. ಅಕ್ರಮ ಚಟುವಟಿಕೆ, ಭ್ರಷ್ಟಾಚಾರ, ಅಪರಾಧ ಮತ್ತು ತೆರಿಗೆ ವಂಚನೆಯ ಮೂಲಕ ಸಾಕಷ್ಟು ಹಣವು ಭ್ರಷ್ಟರ ಕೈ ವಶವಾಗುತ್ತಿದೆ. ಇದರಿಂದ ದೇಶದ ಜನರಿಗೆ ವಂಚನೆ ಮಾಡುವುದಿರಲಿ,  ಅದನ್ನೆಲ್ಲ ವಿದೇಶದ ಬ್ಯಾಂಕ್‌ಗಳಲ್ಲಿ ಕೂಡಿಹಾಕುವುದು ಒಂದು ಬಚಾವಾಗುವ ಮಾರ್ಗಕ್ಕೆ ಮಣೆಹಾಕಿದಂತಿದೆ. ವಿದೇಶಿಯ ಬ್ಯಾಂಕ್‌ಗಳಲ್ಲಿ ದುಡ್ಡನ್ನು ಠೇವಣಿ ಇಟ್ಟರೆ, ಅಲ್ಲಿಗೆ ಬಚಾವಾಗಬಹುದು ಎಂಬ ನಂಬಿಕೆ ಗಾಡವಾಗಿ ಬೆಳೆದಿದೆ. ಆದರೆ,  ಕಪ್ಪು ಹಣವನ್ನು ಇಲ್ಲಿಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡದೆ ಇದ್ದುದಕ್ಕೆ ಹಲವಾರು ಕಾರಣಗಳಿವೆ.  ಅಕ್ರಮವಾಗಿ ಸಂಪಾಧಿಸಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಾಗ ಅಧಿಕೃತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅಕ್ರಮ ಹಣ ಪಡೆದ ಮೂಲವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ವೈಯಕ್ತಿಕ  ದಾಖಲೆಗಳನ್ನು ಕೇಳುವುದಕ್ಕೂ ಮೊದಲು, ಬಹುಬೇಗನೆ ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭಯದಿಂದ ವಿದೇಶಿ ಬ್ಯಾಂಕಗಳಿಗೆ ಮೊರೆ ಹೋಗುವ ತುರ್ತು ಪರಿಸ್ಥಿತಿ ಎದುರಾಗುತ್ತದೆ.  ಆದರೆ, ಈ ಭ್ರಷ್ಟರ ನಿರ್ಧಾರ ದೇಶದ ಅಭಿವೃದ್ಧಿಯತ್ತಲ್ಲವೆ ಬದಲಾಗಿ ತಮ್ಮ ಸ್ವಂತಿಕೆಯ  ಅಭಿವೃದ್ಧಿಗಾಗಿ ಮತ್ತು ತಮ್ಮ ಸ್ವಾರ್ಥತೆಗಾಗಿ. ಸಾಕಷ್ಟು ಹಣವು ಕಪ್ಪು ಹಣದ ರೂಪದಲ್ಲಿ ವಿದೇಶಕ್ಕೆ ಸ್ಥಳಾಂತರಗೊಳ್ಳತ್ತಲೆ ಇದೆ. ಆದರೆ, ಆ ಹಣಕ್ಕೆ ವಾರಸುದಾರರೇ ಬಡ್ಡಿಯ ರೂಪದಲ್ಲಿ ಹಣ ಪಾವತಿಸಬೇಕಾಗಿದೆ. ಅಲ್ಲಿ ಠೇವಣಿ ಇಟ್ಟ ಹಣವನ್ನು ಮರಳಿ ತರುವುದರ ಭರವಸೆ ಇದೆಯಾ? ಎಂಬುದನ್ನು ಠೇವಣಿದಾರರು ಪ್ರಶ್ನಿಸಿಕೊಳ್ಳಬೇಕಿದೆ. ಅದಕ್ಕಾಗಿ ವಿದೇಶೀ ಬ್ಯಾಂಕ್‌ಗಳ ಹಾದಿ ಹಿಡಿಯುವ ಮುನ್ನ ನಮ್ಮ ದೇಶದ ಹಣವನ್ನು ಅನ್ಯ ದೇಶದ ಪಾಲಾಗುತ್ತದೆ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನೆ ನಮ್ಮ ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಟ್ಟರೆ, ಅದಕ್ಕೆ ಪ್ರತಿಫಲವಾಗಿ ಬಡ್ಡಿ ದೊರೆಯುತ್ತದೆ ಮತ್ತು ಆರ್ಥಿಕವಾಗಿ ಹಿಂದುಳಿದವರ ಸಹಾಯಕ್ಕಾಗಿ ಸಾಲದ ಮೂಲಕ ಹೆಚ್ಚಿನ ಹಣವನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ರೂಪಿಸಬಹುದು.  ಉದ್ಯಮ ಮತ್ತು ಸ್ವಂತ ಉದ್ಯೋಗಕ್ಕೆ ಪೂರಕವಾಗಿ ಸಹಾಯ ಒದಗುತ್ತದೆ. ಇವೆಲ್ಲದಕ್ಕಿಂತ ಮುಖ್ಯವಾಗಿ, ದೇಶದ ಆರ್ಥಿಕತೆಯನ್ನು ಸುಧಾರಣೆ ಮಾಡುವುದರ ಜೊತೆಗೆ ಭ್ರಷ್ಟಾಚಾರವನ್ನು ಸುಲಭವಾಗಿ ಅಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಇದರಿಂದ ಜನರಲ್ಲಿ ನೆಮ್ಮದಿ ಹುಟ್ಟಿಕೊಳ್ಳುತ್ತದೆ. ನಮ್ಮ ದೇಶದಲ್ಲಿ ಕಪ್ಪುಹಣವಿಲ್ಲವೆಂದಲ್ಲ; ಹೊರದೇಶಗಳಲ್ಲಿರುವಷ್ಟು ಅಲ್ಲದಿದ್ದರೂ, ಅದರ ಅರ್ಧ ಪ್ರಮಾಣಕ್ಕಿಂತ ಹೆಚ್ಚಿದೆಯಾದರೆ, ನಿಗೂಢವಾಗಿದೆ. ಆದರೆ, ಆ ಭ್ರಷ್ಟಾಚಾರದ ವೈಮನಸ್ಸು ಭ್ರಷ್ಟರನ್ನು ಕಾಡುತ್ತಿರುತ್ತದೆ. ಅಮೇರಿಕಾದ ’ಗ್ಲೋಬಲ್ ನ್ಯಾಷನಲ್ ಇಂಟೆಗ್ರಿಟಿ’ ಸಂಸ್ಥೆಯ ವರದಿಯ ಪ್ರಕಾರ ೨೦೦೪-೨೦೧೩ರ ನಡುವೆ ಪ್ರತಿವರ್ಷ ಭಾರತದಿಂದ ೫೧ ಶತಕೋಟಿ ಡಾಲರ್‌ನಷ್ಟು ಕಪ್ಪು ಹಣ ಹೊರದೇಶಗಳಿಗೆ ಹರಿದುಹೋಗಿದೆ. ಇದು ದೇಶದ ರಕ್ಷಣಾ ಬಜೆಟ್ ೫೦ ಶತಕೋಟಿಗಿಂತ ಹೆಚ್ಚಿರುವುದು ವಿಷಾದನೀಯ. ಇದರಿಂದ ಕಪ್ಪು ಹಣದ ಹರಿವಿನಲ್ಲಿ ಭಾರತವು ನಾಲ್ಕನೆಯದ್ದಾಗಿದೆ. 

ಅದಲ್ಲದೆ, ವಿದೇಶಿ ಬ್ಯಾಂಕ್‌ಗಳಲ್ಲಿ ಹಲವರು ಬಚ್ಚಿಟ್ಟಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಬಡವರ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬಳಸಿಕೊಳ್ಳುವುದು ಕಠಿಣಕರ. ಇದೂವರೆಗೂ ಅಲ್ಲಿ ಶೇಕರಣೆಯಾಗುವ ಹಣವು, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ೧೫ ಲಕ್ಷ ರೂಪಾಯಿ ಹಂಚಿಕೆ ಮಾಡಬಹುದು. ಕಪ್ಪು ಹಣ ಹೊಂದಿರುವ ಸುಮಾರು ೬೨೭ ಜನರು ಸ್ವತಃ  ’ಒನ್ ಟೈಂ ಕಂಪ್ಲಯನ್ಸ್’ (ದಂಡ ಕಟ್ಟಿ ಹಣವನ್ನು ಅಧಿಕೃತಗೊಳಿಸುವುದು)ಗೆ ಮುಂದಾಗಿದ್ದು ಈ   ವರೆಗೂ ೩,೭೭೦ ಕೋಟಿ ರೂಪಾಯಿಯಷ್ಟು ಕಪ್ಪು ಹಣ ಜಿನೇವಾದ ಹೆಚ್‌ಎಸ್‌ಬಿಸಿ, ಸ್ವಿಟ್ಜರ್ಲೆಂಡ್‌ನ ಸ್ವಿಸ್ ಬ್ಯಾಂಕ್‌ಗಳಲ್ಲಿ  ಸಂಗ್ರಹ ಮಾಡಲಾಗಿದೆ. ಸ್ವಿಟ್ಜರ್ಲೆಂಡ್ ಸರ್ಕಾರವು, ತನ್ನ ಬ್ಯಾಂಕ್‌ಗಳಲ್ಲಿನ ಠೇವಣಿಗಳ ಬಗ್ಗೆ ದೀರ್ಘಕಾಲದವರೆಗೆ ಕಾಪಾಡಿಕೊಂಡು ಬಂದಿರುವ ಗೌಪ್ಯತೆಯನ್ನು ಬಹಿರಂಗಪಡಿಸಲು ನಿರ್ಧರಿಸಿರುವ ಬೆನ್ನಲ್ಲೇ, ಭಾರತ ಸರ್ಕಾರವು ಕಪ್ಪು ಹಣ ಕುರಿತಂತೆ ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಕೆಲವು ಮಂದಿಯ ಹೆಸರುಗಳನ್ನು ಬಹಿರಂಗಗೊಳಿಸಿತ್ತು. ಆದರೆ, ರಾಜಕೀಯ ಒಳ ಸಂಬಂಧಗಳಿಂದ ಆ ಗುಟ್ಟನ್ನು ಬಿಟ್ಟುಕೊಡುವುದು ಅಸಾಧ್ಯವಾಯಿತು. ಏಕೆಂದರೆ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮಾಡಿದ ಭ್ರಷ್ಟಾಚಾರ ಚಟುವಟಿಕೆಗಳು ಬಹಿರಂಗಗೊಳ್ಳುವ ಕಾರಣಕ್ಕಾಗಿ ಇರಬಹುದು. 

ಕಪ್ಪು ಹಣದ ಸ್ವರ್ಗ ಎಂದೇ ವಿಶ್ವದಾದ್ಯಂತ ಕುಖ್ಯಾತಿ ಪಡೆದಿರುವ, ಸ್ವಿಟ್ಜರ್ಲೆಂಡ್‌ನ ಸ್ವಿಸ್ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಕಪ್ಪುಹಣ ಹೊಂದಿದ ದೇಶಗಳ ಪೈಕಿ ಭಾರತವು ೮ನೇ ಸ್ಥಾನದಲ್ಲಿದ್ದು, ಸ್ವಿಸ್ ನ್ಯಾಷನಲ್ ಬ್ಯಾಂಕ್ ವರದಿ ಪ್ರಕಾರ ೨೦೧೨ರ ಅಂತ್ಯಕ್ಕೆ ಭಾರತೀಯ ಸಂಸ್ಥೆ, ಉದ್ಯಮಿಗಳಿಗೆ ಸೇರಿದ ೧೮ ಸಾವಿರಕೋಟಿ ರೂ.ಗಳಷ್ಟು ಮೊತ್ತ ಸ್ವಿಸ್ ಬ್ಯಾಂಕ್‌ನಲ್ಲಿದೆ. ಇದರಲ್ಲಿ ೯ ಸಾವಿರ ಕೋಟಿರೂ. ನೇರ ಭಾರತೀಯರೇ ಹೊಂದಿದ್ದಾರೆ. ಭ್ರಷ್ಟಾಚಾರವೇನು ಈಗಷ್ಟೆ ತಲೆಯೆತ್ತಿರೋದಲ್ಲ. ಇದು ಸುಮಾರು ನಾಲ್ಕು ದಶಕಕ್ಕಿಂತಲೂ ಹಿಂದೆ ಹುಟ್ಟಿಕೊಂಡಿರೋದು. ವಿದೇಶದ ಹೆಚ್ಚಿನ ಬ್ಯಾಂಕ್‌ಗಳಲ್ಲಿಯ ಖಾತೆಯಲ್ಲಿರುವ ಎಂಟ್ರಿಗಳು ೨೦೦೬ಕ್ಕೂ ಹಿಂದಿನವು. ಸಾಮಾನ್ಯವಾಗಿ ೧೯೯೯ ಹಾಗೂ ೨೦೦೬ರ ನಡುವೆ ದಾಖಲಾದವು. ಅವುಗಳಲ್ಲೊಂದು ಖಾತೆಯ ಎಂಟ್ರಿಯ ದಿನಾಂಕವು ೧೯೭೩ರಷ್ಟು ಹಿಂದಿನದು. 

ಆದಾಯ ತೆರಿಗೆ ಇಲಾಖೆಯ  ಅಂದಾಜಿನ ಪ್ರಕಾರ, ಕಳೆದ ೧೮ ತಿಂಗಳಲ್ಲಿ ದೇಶದ ಆದಾಯದಿಂದ ೧೫ ಸಾವಿರ ಕೋಟಿರೂ. ಕೈತಪ್ಪಿ ಹೋಗಿದೆ. ಆದರೆ, ಗ್ಲೋಬಲ್ ಫೈನಾನ್ಷಿಯಲ್ ಇಂಟೆಗ್ರಿಟಿ ಹೆಸರಿನ ವಾಷಿಂಗ್ಟನ್ ಮೂಲದ ಸಂಘಟನೆಯೊಂದು ಅಂದಾಜು ಮಾಡಿರುವ ಪ್ರಕಾರ ೨೦೦೨-೦೬ರ ನಡುವೆ ದೇಶದಿಂದ ಪ್ರತಿ ವರ್ಷ ೨೭.೨ ಶತಕೋಟಿ ಡಾಲರ್ ಹಣ
ಕಪ್ಪುಹಣದ ರೂಪದಲ್ಲಿ ದೇಶದಿಂದ ಹೊರಕ್ಕೆ ಹರಿದು ಹೋಗಿದೆ. ಈ ಸಂಸ್ಥೆಯ ಅರ್ಥಶಾಸ್ತ್ರಜ್ಞ ದೇವ್ಕಾರ್ ಹೇಳುವ ಪ್ರಕಾರ ೧೯೪೮-೨೦೦೮ರ ನಡುವೆ ದೇಶದಿಂದ ಹರಿದು ಹೋದ ಕಪ್ಪು ಹಣದ ಪ್ರಮಾಣ ೪೬೨ ಶತಕೋಟಿ ಡಾಲರ್ (ಅಂದರೆ, ರೂ. ೨೦ ಲಕ್ಷಕೋಟಿ!). ದೇಶದಲ್ಲಿ ಅಕ್ರಮವಾಗಿ ಸಂಪಾದಿಸಿದ ದುಡ್ಡಿನ ಶೇ ೭೨ರಷ್ಟು ಭಾಗ ವಿದೇಶಕ್ಕೆ ಹೋಗುತ್ತದೆ. ಇನ್ನೊಂದು ಅಂದಾಜಿನ ಪ್ರಕಾರ ಕಪ್ಪು ಹಣದ ಪ್ರಮಾಣ ರೂ.೭೨ ಲಕ್ಷ ಕೋಟಿಗಳಷ್ಟು ಇದೆ.

೨೦೦೨-೧೧ರ ವೇಳೆಯಲ್ಲಿ ಭಾರತದಿಂದ ಸುಮಾರು ೩೪೩.೦೪ ಮಿಲಿಯನ್ ಅಮೆರಿಕನ್ ಡಾಲರ್ (೪ ಲಕ್ಷಕೋಟಿ) ಕಪ್ಪು ಹಣ ವಿದೇಶಕ್ಕೆ ರವಾನೆಯಾಗಿದೆ. ಒಟ್ಟಿನಲ್ಲಿ ಭಾರತ ದೇಶದ ಸಂಪತ್ತಿನಿಂದ ೧೮ ಸಾವಿರ ಕೋಟಿಗಿಂತಲೂ ಹೆಚ್ಚು ವಿದೇಶಕ್ಕೆ ಹರಿದು ಹೋಗಿದೆ. ನಿಜಕ್ಕೂ ಈ ಲೆಕ್ಕಾಚಾರಗಳನ್ನು ನೋಡಿದರೆ, ನಮ್ಮದೇಶವು ಈಗಲೂ ಬಡತನದಿಂದಲೇ ಕೂಡಿರುವುದರಲ್ಲಿ ಆಶ್ಚರ್ಯವೆನಿಸುತ್ತಿಲ್ಲ. ’ನಮ್ಮ ದೇಶವನ್ನು ಇಂತಹ ದುಸ್ಥಿತಿಗೆ ತಂದ ಜನ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ಕರಾಳ ಮುಖ ಬಯಲಾಗುವ ಕಾಲ’ ಸನ್ನಿಹಿತವಾಗಿದೆ. 

ವಿಜಯಕುಮಾರ ಎಮ್. ಕುಟಕನಕೇರಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x