ಸ್ನೇಹಿತರೊಬ್ಬರ ಸ್ಟೇಷನರಿಯಲ್ಲಿ ಅವರೊಂದಿಗೆ ಹರಟುತ್ತ ಕುಳಿತಿದ್ದೆ. ಆಗಾಗ ಗ್ರಾಹಕರು ಬಂದು ತಮಗೆ ಬೇಕಾದ್ದನ್ನು ಖರೀದಿಸಿ ಹೋಗುತ್ತಿದ್ದರು. ಹೀಗೆ ನೋಟ್ ಬುಕ್ಕು, ಫೈಲು, ಪೆನ್ನು ಇತ್ಯಾದಿ ಕೊಳ್ಳಲು ಬಂದ ಬಾಲಕಿಯರಿಬ್ಬರು ತಮಗೆ ಬೇಕಾದ್ದನ್ನೆಲ್ಲ ಖರೀದಿಸಿದ ನಂತರ, ಎಷ್ಟಾಯ್ತು ಅಂತ ಕೇಳಿ ಹಣ ನೀಡುವ ಮುನ್ನ ಬಿಲ್ ಕೊಡಿ ಎಂದು ಕೇಳಿದರು. ಸಾಮಾನ್ಯವಾಗಿ ಅಲ್ಲಿಗೆ ಬರುವ ಗ್ರಾಹಕರು ಬಿಲ್ ಕೇಳುವುದಿಲ್ಲವಾದ್ದರಿಂದ ಫ್ರೆಂಡ್‍ಗೆ ಅಚ್ಚರಿಯಾಯಿತು. ಅವರು ಕಾರಣ ಕೇಳುವ ಗೋಜಿಗೆ ಹೋಗಲಿಲ್ಲವಾದರೂ ಆ ಬಾಲಕಿಯರೇ ತುಂಬು ಉತ್ಸಾಹದಿಂದ, ‘ಮನೆಯವ್ರಿಗೆ ಬಿಲ್ ತೋರುಸ್ಬೇಕು. ಅವ್ರು ಕೊಡೋ ದುಡ್ಡುನ್ನ ನಾವು ಯಾವುದಕ್ಕೆ ಖರ್ಚು ಮಾಡ್ತೀವಿ ಅನ್ನೋದು ಅವ್ರಿಗೂ ಗೊತ್ತಾಗ್ಬೇಕಲ್ಲ’ ಅಂತ ಹೇಳಿಕೊಂಡ್ರು. ಅವರ ಮಾತು ಕೇಳಿ ಆ ಕ್ಷಣಕ್ಕೆ ಏನೆಂದು ಪ್ರತಿಕ್ರಿಯಿಸಬೇಕೆಂದು ತಿಳಿಯದೆ ನಾವೆಲ್ಲರೂ ಸುಮ್ಮನಿದ್ದೆವು.
ಅವರಿಬ್ಬರೂ ಬಿಲ್ ಪಡೆದು ಅಲ್ಲಿಂದ ಹೊರಡಲು ಮುಂದಾದ ಕೂಡಲೇ, ‘ನೋಡಿ ಸಾರ್ ಹೇಗಿದ್ದಾರೆ’ ಅಂತ ಅಲ್ಲಿದ್ದವರೊಬ್ಬರು ಆ ಹುಡುಗಿಯರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ನನಗೇನು ಇದು ಸರಿ ಕಾಣಲಿಲ್ಲವೆಂಬಂತೆ ಮುಖ ಕಿವುಚಿ, ‘ಮನೆಯವ್ರಿಗೆ ಲೆಕ್ಕ ಕೊಡೋದೇನೊ ಸರಿ. ಆದ್ರೆ ಈ ಥರ ಬಿಲ್ ತೋರ್ಸೇ ಲೆಕ್ಕ ಕೊಡ್ಬೇಕು ಅನ್ನೋದಾದ್ರೆ, ಹೆತ್ತವರಿಗೆ ತಮ್ಮ ಮಕ್ಕಳ ಮೇಲೆ ಅಷ್ಟೂ ನಂಬಿಕೆ ಇಲ್ವಾ ಅನ್ನೋ ಪ್ರಶ್ನೆನೂ ಕಾಡುತ್ತೆ. ರಕ್ತ ಸಂಬಂಧಗಳ ನಡುವೆ ನಂಬಿಕೆ ಇಲ್ದಿದ್ ಮೇಲೆ ಈ ಥರ ಲೆಕ್ಕ ಕೊಟ್ಟುಕೊಂಡು ಸಂಬಂಧಗಳನ್ನು ಉಳಿಸಿಕೊಂಡು ಹೋಗೋಕೆ ಆಗುತ್ತಾ’ ಅಂತ ನನ್ನಲ್ಲಿನ ನಿಲುವು ಹೊರಗೆಡವಿದೆ. ಆ ಹುಡುಗಿಯರು ಒಂದೆರಡು ಮಾರು ದೂರದಲ್ಲೇ ನಿಂತಿರುವುದು ಆನಂತರ ನನ್ನ ಗಮನಕ್ಕೆ ಬಂತು. ನನ್ನ ಮಾತು ಅವರ ಕಿವಿಗೂ ಬಿದ್ದಿದ್ದರೆ ಅವರ ಮನಸ್ಸಿಗೆಷ್ಟು ನೋವಾಗಿರಬಹುದೆಂದು ಒಳಗೊಳಗೇ ಕೊರಗಿದೆ.
ಆದರೂ ನನ್ನೊಳಗೆ ಒಂದಷ್ಟು ಪ್ರಶ್ನೆಗಳು ಮಿಸುಕಾಡಲಾರಂಭಿಸಿದವು. ‘ಬಿಲ್ ಏಕೆ ಕೇಳ್ತಿದ್ದೀರಿ?’ ಅಂತ ಕೇಳುವ ಮುನ್ನವೇ ಅವರು ಕಾರಣ ನೀಡಿದ್ದರ ಹಿಂದೆ, ತಾವು ತಮ್ಮ ತಂದೆ-ತಾಯಿಗೆ ಎಲ್ಲ ರೀತಿಯಲ್ಲೂ ಉತ್ತರದಾಯಿಯಾಗಿದ್ದೇವೆ ಎಂಬುದನ್ನು ಜಗತ್ತಿನೆದುರು ಪ್ರದರ್ಶಿಸುವ ಉಮೇದು ಇರುವಂತೆ ತೋರಿತು. ಇಲ್ಲವಾದರೆ ಅವರು ಕಾರಣ ತಿಳಿಸದೆಯೂ ಬಿಲ್ ಪಡೆಯಬಹುದಿತ್ತು.
ಈ ಪ್ರಸಂಗದ ಹಿನ್ನೆಲೆಯಲ್ಲಿ, ನಾನು ಇಂತಹ ಸನ್ನಿವೇಶಗಳಲ್ಲಿ ಏನೆಲ್ಲ ಮಾಡಿದ್ದೆ ಅಂತ ನೆನಪಿಸಿಕೊಂಡೆ. ಸಾಮಾನ್ಯವಾಗಿ ಅಂಗಡಿಗೆ ಕಳುಹಿಸಿದರೆ ಮನೆಯಲ್ಲಿ ಎಷ್ಟಾಯ್ತು ಅಂತ ಕೇಳಿ ಉಳಿದ ಚಿಲ್ಲರೆ ಪಡೆಯುತ್ತಿದ್ದರು. ಲೆಕ್ಕವನ್ನೂ ಕೇಳುತ್ತಿದ್ದರು. ನಾವು ಸುಳ್ಳು ಹೇಳಿ ದುಡ್ಡು ಉಳಿಸಿಕೊಳ್ಳುತ್ತೇವೆ ಅನ್ನುವುದಕ್ಕಿಂತ, ಅಂಗಡಿಯವರಿಂದ ಇವರೆಲ್ಲಿ ಮೋಸ ಹೋಗಿದ್ದಾರೊ ಅಂತ ಪರಿಶೀಲಿಸೋದು ಅವರ ಮುಖ್ಯ ಉದ್ದೇಶವಾಗಿರುತ್ತಿತ್ತು. ಅಪರೂಪಕ್ಕೊಮ್ಮೊಮ್ಮೆ ನಾವೂ ಸುಳ್ಳು ಲೆಕ್ಕ ಕೊಟ್ಟು ಕಡ್ಲೆಮಿಠಾಯಿ, ಚಾಕೊಲೇಟು ತಿನ್ನುತ್ತಿದ್ದದ್ದೂ ಉಂಟು. ಆದರೆ ಅಂಗಡಿಯವರೊಂದಿಗೆ ವ್ಯವಹರಿಸುವಷ್ಟು ಜಾಣ್ಮೆ ಇದೆ ಎಂಬುದು ತಿಳಿದ ನಂತರ ಲೆಕ್ಕ ಕೇಳುವ ಗೋಜಿಗೆ ಹೋಗದೆ ಕೊಟ್ಟಷ್ಟು ಚಿಲ್ಲರೆ ತೆಗೆದುಕೊಳ್ಳುತ್ತಿದ್ದರು. ನಮ್ಮಲ್ಲೂ ಹೀಗೆ ಪೆನ್ನು ಪೆನ್ಸಿಲ್ಲು ಒಂದೆರಡು ನೋಟ್ ಬುಕ್ಕು ತೆಗೆದುಕೊಳ್ಳುವುದಕ್ಕೆಲ್ಲ ಬಿಲ್ ಎಂಬ ಪುರಾವೆ ಒದಗಿಸಿ ಲೆಕ್ಕ ಕೊಡಬೇಕೆಂಬ ನೈತಿಕ ಪ್ರಜ್ಞೆ(?) ಇರಲಿಲ್ಲ.
ಆ ಇಬ್ಬರು ಹುಡುಗಿಯರಲ್ಲಿ ಈ ಲೆಕ್ಕ ಕೊಡುವ ಮತ್ತದನ್ನು ಜಗತ್ತಿಗೆ ಸಾರುವ ನೈತಿಕ ಪ್ರಜ್ಞೆ ಜಾಗೃತಗೊಂಡಿದ್ದಾದರೂ ಹೇಗೆ ಮತ್ತು ಏಕೆ ಎನ್ನುವ ಪ್ರಶ್ನೆ ನನ್ನೊಳಗೆ ಹೊರಳಾಡುತ್ತಲೇ ಇದೆ. ತೋರಿಕೆಯ ನೈತಿಕತೆಗೂ ಅಂತರ್ಗತವಾಗಿ ಒಡಮೂಡುವ ನೈತಿಕತೆಗೂ ವ್ಯತ್ಯಾಸ ಇದೆ ಅಲ್ಲವೇ?
-ಎಚ್.ಕೆ.ಶರತ್