‘ನಿಶಾ’ಗಮನ: ಗುರುಪ್ರಸಾದ ಕುರ್ತಕೋಟಿ


(ಇಲ್ಲಿಯವರೆಗೆ)

ಇಡೀ ರಾತ್ರಿ ನಿದ್ದೆ ಹತ್ತಿರಕ್ಕೂ ಸುಳಿಯದೇ ಒದ್ದಾಡಿ ತನಗೆ ಯಾವಾಗಲೋ ನಿದ್ದೆ ಹತ್ತಿದ್ದು ಬೆಳಿಗ್ಗೆ ಎದ್ದಾಗಲೇ ಸುಜಯ್ ಗೆ ಗೊತ್ತಾಗಿದ್ದು. ಎದ್ದವನೇ ಅತ್ತಿತ್ತ ತಡಕಾಡಿ ತನ್ನ ಸ್ಮಾರ್ಟ್ ಫೋನು ಎಲ್ಲಿಹುದು ಅಂತ ಹುಡುಕಾಡಿದ. ಎದ್ದ ಕೂಡಲೇ ಅದರ ಮುಖ ನೋಡದಿದ್ದರೆ ಸಮಾಧಾನವಿಲ್ಲ ಅವನಿಗೆ. ಅದು ಪಕ್ಕದಲ್ಲಿರದಿದ್ದರೆ ಅವನಿಗೆ ಉಸಿರಾಡುವುದೂ ಕಷ್ಟವೇ! ಹಿಂದಿನ ಕಾಲದ  ಕಥೆಗಳಲ್ಲಿ ರಾಕ್ಷಸರ ಜೀವ ಒಂದು ಗಿಣಿಯಲ್ಲಿ ಇರುತ್ತಿತ್ತಂತೆ ಹಾಗೆಯೇ ಸುಜಯ್ ನ ಜೀವ ಅವನ ಸ್ಮಾರ್ಟ್ ಫೋನ್ ನಲ್ಲೆ ಇದೆ. ಅದನ್ನೊಂದು ಕ್ಷಣವೂ ಬಿಟ್ಟಿರಲಾರದ ಪರಿಸ್ಥಿತಿ. ಅವನ ಸಕಲ ಮಿತ್ರವರ್ಗದ ಸಂಪರ್ಕದ ಕೊಂಡಿ ಅದು. ಅದರ ಜೊತೆಗೆ ಅವನ ಬ್ಯಾಂಕಿನ ವ್ಯವಹಾರಗಳು, ಅಂತರ್ಜಾಲದಲ್ಲಿ ಅವನಿಗೆ ಬೇಕಾದ ಬೇಡವಾದ ಎಲ್ಲ ವಸ್ತುಗಳ ಖರೀದಿ ಗೆ ಅದು ಅನುವು ಮಾಡಿಕೊಟ್ಟಿತ್ತು. ಅಂತಹ ಅದ್ಭುತವಾದ ಪರಿಕರವನ್ನು ಬಿಟ್ಟಿರಲಾದೀತೆ?  
 
ಕೊನೆಗೂ ಕೈಗೆ ಫೋನು ಸಿಕ್ಕು ನಿರಂಬಳವಾಗಿ ಅದರ ಪರದೆಯ ಮೇಲೆ ಕಣ್ಣಾಡಿಸಿದಾಗ ಇವನ ಸಹೋದ್ಯೋಗಿ ಶಾಂತಕುಮಾರ್ ಮಾಡಿದ ಹತ್ತು ಕರೆಗಳು, ನಿದ್ರಾ ದೇವಿಯ ವಶವಾಗಿದ್ದ ತನಗೆ ಗೊತ್ತೇ ಆಗಿರಲಿಲ್ಲ ಎನ್ನುವ ಅರಿವಾಯಿತವನಿಗೆ. ಏನೋ ತುರ್ತು ವಿಷಯವೇ ಇದ್ದಿರಬೇಕೆಂದು ಕ್ಷಣವೂ ತಡ ಮಾಡದೆ ಅವನಿಗೆ ವಾಪಸ್ಸು ಕರೆ ಮಾಡಿದ. ಕುಶಲ ಕ್ಷೆಮಗಳ ವಿಚಾರಿಸಿ, ಏನಯ್ಯ ಫೋನ್ ಮಾಡಿದ್ದು ಅಂತ ಕೇಳಿದ್ದಕ್ಕೆ. ಇವತ್ತು ಕಂಪನಿಯವರು ಟೀಂ ಔಟಿಂಗ್ ಕರೆದೊಯ್ಯುತ್ತಿರುವ ಘನವಾದ ವಿಷಯವನ್ನು ಹೇಳಿದನವನು. 

ಇವನ ಕಂಪನಿಯಲ್ಲಿ ವರ್ಷಕ್ಕೊಮ್ಮೆ ಎಲ್ಲ ಉದ್ಯೋಗಿಗಳಿಗೆ ಬೆಂಗಳೂರಿನ ರೆಸಾರ್ಟ್ ಒಂದಕ್ಕೆ ಕರೆದೊಯ್ಯುವುದು ವಾಡಿಕೆ. ಅಲ್ಲಿ ಸಮಸ್ತ ಉದ್ಯೋಗಿಗಳು ತಮ್ಮ ದಿನನಿತ್ಯದ ಕಿರಿಕಿರಿಗಳ ಮರೆತು ಕುಡಿದು-ಕುಣಿದು-ಕುಪ್ಪಳಿಸಲು ಅನುಕೂಲ ಮಾಡಿಕೊಡುವ ಒಂದು ಪ್ರಕ್ರಿಯೆ ಅದು. ನಿತ್ಯದ ಕೆಲಸಕ್ಕೆ ತೊಂದರೆಯಾಗಬಾರದೆಂದು ಆ ಪ್ರವಾಸವನ್ನು ರವಿವಾರ ಇಲ್ಲವೇ ಅಮೆರಿಕಾ ದೇಶದ ರಜೆಯ ದಿನಗಳಲ್ಲೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಅವತ್ತು ಪಾತಾಳದ ಆ ರಾಕ್ಷಸರ ಕಾಟವೂ ಇರುವುದಿಲ್ಲ! ಅವತ್ತು ರವಿವಾರ ಇದ್ದುದರಿಂದ ಆ ಔಟಿಂಗ್ ಏರ್ಪಡಿಸಿದ್ದರು. ಸುಜಯ್ ಗೆ ಅದು ಮೊದಲೇ ಗೊತ್ತಿತ್ತಾದರೂ, ಅಲ್ಲಿ ಹೋಗಿ ದಿನವೂ ಆಫೀಸಿನಲ್ಲಿ ಕಾಣುವ ಅದೇ ಮುಖಗಳನ್ನು ನೋಡುವ ಮನಸ್ಸು ಅವನಿಗಿರಲಿಲ್ಲ. ಅದೂ ಅಲ್ಲದೆ ತನ್ನ ಬದಲಿಗೆ ಆ ವೆಂಕಣ್ಣ ನನ್ನು ಅಮೆರಿಕಾಕ್ಕೆ ಕಳಿಸಿದ ಆ ಬಾಸ್ ನ ಮುಖ ನೋಡುವುದಂತೂ ಅವನಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಶಾಂತ ಕುಮಾರ ಬಿಡಬೇಕಲ್ಲ! ಅವನಿಗೆ ಕುಡಿಯಲು ಇವನ ಕಂಪನಿ ಬೇಕು. ಏ ಬಾರಯ್ಯ, ಹೊಟ್ಟೆ ತುಂಬಾ ಕುಡಿದು ಮಜಾ ಮಾಡೋಣ ಅಂತ ಹೇಳಿದ್ದು ಇವನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕೆರಳಿಸಿತಲ್ಲದೆ, ಇತ್ತೀಚೆಗಷ್ಟೇ ಇವನ ಟೀಂ ಗೆ ಸೇರಿಕೊಂಡಿದ್ದ ಬಳಕುವ ಸುಂದರಿ ನಿಶಾನೂ ಬರುತ್ತಿದ್ದಾಳೆ ಅನ್ನುವ ವಿಷಯ ಅಲ್ಲಿಗೆ ಹೋಗಲು ಅವನನ್ನು ಮತ್ತೂ ಪ್ರೇರೇಪಿಸಿತು. ಆಗಲಿ ನಿನಗೋಸ್ಕರ ಬರುವೆ ಅಂತ ಶಾಂತನಿಗೆ ಹೇಳಿ ಲಗುಬಗೆಯಿಂದ ಸ್ನಾನಕ್ಕೆ ತೆರಳಿದ.        
            
                                           ****

ತನ್ನ ಟೊಯೋಟಾ ಕಾರಿನಲ್ಲಿ ಶಾಂತನನ್ನು  ಅವನ ಮನೆಯಿಂದ ಹತ್ತಿಸಿಕೊಂಡು ಆ ರೆಸಾರ್ಟ್ ಗೆ ಬಂದಾಗ ಹೆಚ್ಚು ಕಡಿಮೆ ಎಲ್ಲ  ಸಹೋದ್ಯೋಗಿಗಳು ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿದ್ದರು. ಕೆಲಸ ಮಾಡುವಾಗ ಇರದಿದ್ದ ಉತ್ಸಾಹ ಇವತ್ತು ಮಾತ್ರ  ಅವರಲ್ಲಿ ಎದ್ದು ಕಾಣುತ್ತಿತ್ತು. ಎಲ್ಲರ ಮುಖಗಳು ನಳನಳಿಸುತ್ತಿದ್ದವು. ಆದರೆ ಇವನ ಕಣ್ಣುಗಳು ನಿಶಾಳ ಹುಡುಕಾಟದಲ್ಲಿ ತೊಡಗಿದ್ದವು. 

ಅಲ್ಲಿಲ್ಲಿ ಅಡ್ಡಾಡಿಕೊಂಡು, ಎದುರಾದವರಿಗೆ ಔಪಚಾರಿಕತೆಯ ನಗೆ ನಕ್ಕು ರೆಸಾರ್ಟ್ ನ ಅಂಗಳದಲ್ಲಿದ್ದ ಚಿಕ್ಕ ಆಟದ ಬಯಲಿಗೆ  ಹೋದಾಗ, ಅಲ್ಲಿಟ್ಟಿದ್ದ ಸೈಕಲ್ಲುಗಳು ಇವನಿಗೆ ಆಕರ್ಷಿಸಿದವು. ಅಲ್ಲಿ ಕೆಲವರು, ಕುಡಿದು ತಿಂದು ಪೊಗದಸ್ತಾಗಿ ಬೆಳೆದು ಜಡವಾಗಿದ್ದ ತಮ್ಮ ದೇಹಗಳನ್ನು ಹೊತ್ತು, ಸೈಕಲ್ಲು ಓಡಿಸಲು ಸಾಧ್ಯವಾಗದೆ ಅದರ ಮೇಲೆ ಕುಳಿತುಕೊಂಡು ತಮ್ಮ ಫೋಟೋ ತೆಗೆಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಸ್ವಲ್ಪ ಸಮಯದ ಬಳಿಕ ಇವನಿಗೂ ಒಂದು ಸೈಕಲ್ಲು ದೊರೆತು ಅದರಲ್ಲೆರಡು ಸುತ್ತು ಓಡಿಸಿದನು. ಸುಜಯ್ ತಿನ್ನುವ, ಕುಡಿಯುವ ವಿಷಯದಲ್ಲಿ ಧಾರಾಳಿಯಾಗಿದ್ದನಾದರೂ, ನಿಯಮಿತವಾಗಿ ವ್ಯಾಯಾಮ ಮಾಡಿಕೊಂಡಿದ್ದು ಕಟ್ಟುಮಸ್ತಿನ ದೇಹವನ್ನು ಹೊಂದಿದ್ದ. ಅದು ಕೆಲವು ಜಡದೇಹಿಗಳ ಈರ್ಶೆಗೂ ಕಾರಣವಾಗಿತ್ತು. ಅವಿವಾಹಿತನೂ ಆಗಿದ್ದನಾದ್ದರಿಂದ ಕಂಪನಿಯಲ್ಲಿದ್ದ ಸುಂದರಿಯರನ್ನು ಆಕರ್ಷಿಸಿಬಿಡುವನೆಂಬ ಹೆದರಿಕೆಯೂ ಅವರನ್ನು ನಿರಂತರವಾಗಿ ಕಾಡುತ್ತಿತ್ತು. ಶಾಂತನಿಗೆ ಮುಂದಿನ ‘ತೀರ್ಥ’ ಸಮಾರಾಧನೆಯ ಬಗ್ಗೆ ಚಿಂತೆಯಿದ್ದುದರಿಂದ, ಸೈಕಲ್ಲು ಹೊಡೆದುಕೊಂಡು ಕಾಲಹರಣ ಮಾಡುತ್ತಿದ್ದ ಸುಜಯ್ ಗೆ ಮೆಲ್ಲಗೆ ತಿವಿದು ಎಚ್ಚರಿಸಿದ. ಇವನಿಗೂ ಅದೇ ಬೇಕಾಗಿತ್ತದ್ದರಿಂದ ಅವನ ಮಾತಿಗೆ ಬೆಲೆ ಕೊಟ್ಟು ಸಕಲ್ಲು ಓಡಿಸುವ ಕಾರ್ಯಕ್ಕೆ ತಡೆ ಹಾಕಿದ. ಅವರು ಅಲ್ಲಿಗೆ ಬಂದದ್ದೆ ಕುಡಿದು ಮಜಾ ಮಾಡಲು ಅಲ್ಲವೇ? ಅದರೂ ಸೈಕಲ್ಲಿನ ಮೇಲೇ ಕುಳಿತ ಒಂದು ಫೋಟೋ ಇರದಿದ್ದರೆ ಹೇಗೆ? ಶಾಂತ ನಿಗೆ ತನ್ನದೊಂದು ಫೋಟೋ ತೆಗೆಯಲು ಹೇಳಿ ಒಂದೊಳ್ಳೆಯ ಭಂಗಿಯಲ್ಲಿ ಸೈಕಲ್ಲಿನ ಮೇಲೆ ಕುಳಿತನಿವನು. ಹಾಗೆ ಕೂತಿದ್ದವನ ಹಿಂದುಗಡೆಗೆ ಯಾರೋ ಬಂದು ನಿಂತು, ಇವನ ಎರಡೂ ಹೆಗಲುಗಳ ಮೇಲೆ ಇಟ್ಟ ಕೈಗಳು ಕೋಮಲವಾಗಿದ್ದವಲ್ಲದೆ, ಅವು ಹುಡುಗಿಯದೆ ಅಂತ ಇವನು ಆ ಸ್ಪರ್ಶದಿಂದಲೇ ಅಂದಾಜಿಸಿದ, ಹಿಂದೆ ನಿಂತವಳು ಹುಡುಗಿ ಅನ್ನುವದಕ್ಕೆ ಇನ್ನೊಂದು ಸಾಕ್ಷಿ ಇವನ ಮೂಗಿಗಡರಿದ, ಅವಳು ಬಳಿದುಕೊಂಡಿದ್ದ ಸುಗಂಧ ದ್ರವ್ಯ! ಅದೂ ಅಲ್ಲದೆ ಇವನ ಎದುರಿಗೆ ನಿಂತು ಫೋಟೋ ತೆಗೆಯುತ್ತಿದ್ದ ಶಾಂತ ಹಾಗೂ ಮತ್ತಿತರ ಸಹೋದ್ಯೋಗಿಗಳು ಆ ಅಂತ ಬಾಯಿ ತೆಗೆದು ಇವನ ಸುದೈವಕ್ಕೆ ಕರುಬುತ್ತಿದ್ದ ಬಗೆ ನೋಡಿ, ಹಿಂದೆ ನಿಂತಿದ್ದು ಹುಡುಗಿಯೇ ಅಂತ ನಿಚ್ಚಳವಾಗಿತ್ತು, ಫೋಟೋ ತೆಗೆಸಿಕೊಂಡಾದ ಮೇಲೆ ಹಿಂತಿರುಗಿ ನೋಡಿದವನಿಗೆ ತೆಳ್ಳಗಿನ, ಬೆಳ್ಳಗಿನ ಚೆಲುವೆ ನಿಶಾ, ಹಾಯ್ ಅಂತ ಕೈ ಕುಲುಕಿದಾಗ ಆದ ಸಂಭ್ರಮ ಹೇಳತೀರದಾಗಿತ್ತು. ಅವಳ ಸ್ನೇಹಕ್ಕೆ ಎಲ್ಲರೂ ಹಾತೊರೆಯುತ್ತಿರುವಾಗ, ಆ ಚೆಲುವೆ ತನ್ನನ್ನ ಹುಡುಕಿಕೊಂಡು ಬಂದಿದ್ದು ಇವನ ತಲೆಯ ಮೇಲೆ ಕೋಡುಗಳನ್ನು ಮೂಡಿಸಿದ್ದವು, 

“ಹೇ ಸುಜಯ್ ಇವತ್ತು ತುಂಬಾ ಸೆಕ್ಸಿ ಕಾಣ್ತಿದೀಯ. ಈ ತರಹ ಡ್ರೆಸ್ ನಲ್ಲಿ ನಿನ್ನನ್ನ ಮೊದಲ ಸಲ ನೋಡ್ತಿರೋದು” ಅಂತ ನಿಶಾ ಹೇಳಿದ್ದಂತೂ ಇವನಿಗೆ ಸ್ವರ್ಗದಲ್ಲಿ ಕುಳಿತ ಅನುಭವ ನೀಡಿತ್ತು. ತಾವು ತೀರ್ಥ ಸೇವನೆಗೆ ಹೋಗುವ ತಯಾರಿಯಲ್ಲಿರುವಾಗಲೇ ಇವನಿಗೆ ನಿಶಾ ಸಿಕ್ಕಿದ್ದು ಶಾಂತನಿಗೆ ಅಪ್ರಿಯವಾದ ಸಂಗತಿಯಾಗಿತ್ತು. ಈ ನಿಶೆಯ ಎದುರು ಮದ್ಯದ ನಿಶೆಯನ್ನು ಇವನು ಕಡೆಗಣಿಸಿಬಿಡಬಹುದಾದ ಸಾಧ್ಯತೆಗಳು ಇಲ್ಲದಿರಲಿಲ್ಲ. ಶಾಂತ ತಮ್ಮ ಮುಂದಿನ ಕಾರ್ಯಕ್ರಮದ ಬಗ್ಗೆ ಇವನಿಗೆ ಸೂಚ್ಯವಾಗಿ ನೆನಪಿಸಿದ. ಆದರೂ ನಿಶಾಳ ಎದುರು ತಾವು  ಮದ್ಯ ಸೇವೆನೆಗೆ ಹೊರಟಿರುವ ವಿಷಯ ಹೇಳಿ ಅವಳಿಗೆ ತನ್ನ ಮೇಲೆ ಮೂಡಿರಬಹುದಾದ ಒಳ್ಳೆಯ ಅಭಿಪ್ರಾಯವನ್ನು ಕೆಡಿಸಿಕೊಳ್ಳುವ ಮನಸ್ಸು ಸುಜಯ್ ಗೆ ಇರಲಿಲ್ಲ. ಇವರ ಮನಸ್ಸನ್ನು ಓದಿದವಳಂತೆ ನಿಶಾ, ಏನು ನಿಮ್ಮ ಮುಂದಿನ ಕಾರ್ಯಕ್ರಮ? ನೀವು ಬಾರ್ ಗೆ ಹೋಗ್ತಾ ಇಲ್ಲವೇ? ಎಂದು ಕೇಳಿ ಇವರಿಗೆ ಅಚ್ಕರಿ ಹುಟ್ಟಿಸಿದಳು. ಶಾಂತನಿಗೆ ಅವಳೇ ಆ ವಿಷಯ ತೆಗೆದದ್ದು ಖುಷಿ ತಂದಿತು. ನಾವು ಅಲ್ಲಿಗೇ ಹೊರಟಿದ್ದು ಅಂತ ತಕ್ಷಣವೇ ಉತ್ತರಿಸಿ ಸುಜಯ್ ನ ಕೆಂಗಣ್ಣಿಗೆ ಗುರಿಯಾದ. 

ಓ ಹೌದಾ? ಏನು ನೀನು ಕುಡಿಯೋದು ಅಂತ ಸುಜಯ್ ಗೆ ಕೇಳಿದಳು. ಸುಜಯ್ ಅವಳ ಎದುರು ಮಾನ ಕಾಯ್ದುಕೊಳ್ಳುವ ಪ್ರಯತ್ನದ ಅಂಗವಾಗಿ ತಾನು ಕುಡಿಯೋದೆ ಅಪರೂಪವೆಂತಲೂ, ಅದೂ ಇಂಥ ಸಂದರ್ಭಗಳಲ್ಲಿ ಮಾತ್ರ, ತಾನು ಕುಡಿಯೋದು ಬರೀ ಬಿಯರ್ ಅಂತ ಹೇಳಿದ. ಅವಳು ಮನಪೂರ್ತಿ ನಕ್ಕಳು. ನಕ್ಕಾಗ ಇನ್ನೂ ಸುಂದರವಾಗಿ ಕಾಣುತ್ತಾಳಲ್ಲ ಅಂತ ಬೆರಗಿನಿಂದ ನೋಡುತ್ತಿದ್ದಂತೆ… “ಈಗೀಗ ಕಾಲದಲ್ಲಿ ಹುಡುಗಿಯರೇ ಬಿಯರ್ ನ ಕುಡಿಯೋದಿಲ್ಲ! ನೀನೇನು ಅದನ್ನ ಕುಡಿತೀಯಾ? ಇವತ್ತು ಬೇರೆ ಟ್ರೈ ಮಾಡೂವಂತೆ ಬಾ… come on guys let us have some special drink today” ಅಂತ ಅವಳಂದದ್ದನ್ನು ಅರಗಿಸಿಕೊಳ್ಳಲು ಇವನಿಗೆ ಸ್ವಲ್ಪ ಸಮಯ ಹಿಡಿಯಿತು. ಇವಳೂ ಕುಡಿಯುತ್ತಾಳೆಯೇ ಅನ್ನುವ ಸಂಗತಿಯೇ ಅವನಿಗೆ ಅಚ್ಚರಿ ತಂದಿತ್ತಾದರೂ, ಜೊತೆಗೆ ಸಾಕಷ್ಟು ಪುಳಕವನ್ನೂ ಉಂಟು ಮಾಡಿತ್ತು!

(ಮುಂದುವರಿಯುವುದು…)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಮೂರ್ತಿ
ಮೂರ್ತಿ
9 years ago

ಪಾತಾಳಕ್ಕೆ ಹೊರಟ ರೈಲು, ಟ್ರಾಕ್ ಬದಲಾಯಿಸಿ ಬೇರೆಡೆ ಹೊರಟಿದ್ದರೂ, ಹೊಸತಾಣ ಸುಂದರಮಯವಾಗಿರೂ ಶೃಂಗಾರಮಯವಾಗಿಯೂ ಇದೆ. ವೆಂಕಣ್ಣನ ವಠಾರದಿಂದ ಚಂಡು ಹಠಾತ್ತನೆ ಸುಜಯ ಅಂಗಳಕ್ಕೆ ಅಲ್ಲಿಂದ ನಿಶಾಳ ಮದ್ಯದ ಗ್ಲಾಸಿಗೆ ನೆಗೆಯುತ್ತಿರುವುದು, ಇದು ಪ್ರವಾಸಕಥನವೋ, ಅಥವಾ ಅದರೊಳಗೆ ತಳಕು ಹಾಕಿಕೊಂಡ ಬರೀ ಪ್ರಹಸನವೋ ಎಂಬ ಗೊಂದಲ ಮೂಡಿಸಿದ್ದರೂ, ಕುತೂಹಲ ಕಾದಿರಿಸುವಲ್ಲಿ ಯಶಸ್ವಿಯಾಗಿರುವುದಂತೂ ನಿಜ. ಸದ್ಯಕ್ಕೆ, 'ತಾಳಿದವನು ಬಾಳಿಯಾನು' ಎಂಬ ಗಾದೆ ನಂಬಿಕೊಂಡು ಮುಂದಿನ ಕಂತಿಗೆ ಕಾಯುವುದು ನಿಮ್ಮ ಬರಹಗಳ ಅಭಿಮಾನಿಯಾದ ನನಗೆ ಅನಿವಾರ್ಯವಾಗಿದೆ. 

ಗುರುಪ್ರಸಾದ ಕುರ್ತಕೋಟಿ

ಮೂರ್ತಿ, ಪ್ಲೇನು ಇನ್ನೂ ಪಾತಾಳದ ದಿಶೆಯಲ್ಲೆ ಸಾಗುತ್ತಿದೆ! ಭೂಮಿ ಹಾಗು ಪಾತಾಳಗಳ ನಡುವಿನ ಒಂದು ದಿನದ ಅಂತರವನ್ನು ತಲೆಯಲ್ಲಿಟ್ಟುಕೊಂಡು, ವೆಂಕಣ್ಣ, ಸುಜಯ್, ನಿಶಾ ಹಾಗೂ ಇನ್ನೂ ಅನೇಕ ಕೊರ್ಪೋರೇಟ್ ಜೀವಿಗಳ ಬಣ್ಣ ಬಣ್ಣದ ಕಥೆ ಹೇಳುವ ಒಂದು ಪ್ರಯತ್ನ ನನ್ನದು… ಹೌದು 'ತಾಳಿದವನು ಬಾಳಿಯಾನು' ಇದು ಸರ್ವಕಾಲಿಕ ಸತ್ಯ :). ನಿಮ್ಮ ಪ್ರೀತಿಯ ಓದಿಗೆ ಸದಾ ಋಣಿ!

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ವೋ ಹೈ ನಿಶಾ………ಜಿಸೇ ಹೈ ಪತಾ…….

ಗುರುಪ್ರಸಾದ ಕುರ್ತಕೋಟಿ

ಅಮರ್ ಭಾಯ್, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!

Badarinath Palavalli
9 years ago

ಚುರುಕಾದ ನಿರೂಪಣೆ ಈ ಧಾರವಾಹಿಯ ವೈಶಿಷ್ಟ್ಯ.

5
0
Would love your thoughts, please comment.x
()
x