‘ನಟರಂಗ್’ ಎಂಬ ಅದ್ಭುತ ಮರಾಠಿ ಸಿನಿಮಾ: ಶ್ರೀಧರ ಬನವಾಸಿ


ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಕೆಲವು ಸಿನಿಮಾಗಳಲ್ಲಿ ನನ್ನನ್ನು ಅತ್ಯಂತ ಕಾಡಿದ ಸಿನಿಮಾವೆಂದರೆ ಮರಾಠಿಯ ನಟರಂಗ್’ ಚಿತ್ರ. ಸಿನಿಮಾವನ್ನು ಕಳೆದ ಒಂದು ವಾರದಲ್ಲೇ ನಾಲ್ಕೈದು ಬಾರಿ ನೋಡಿಬಿಟ್ಟೆ. ಚಿತ್ರದ ಒಂದೊಂದು ಸನ್ನಿವೇಶಗಳು, ನಾಯಕನ ಅಭಿನಯ, ಸಂಗೀತವು ನೋಡುಗರನ್ನು ಸೆಳೆದುಕೊಂಡು ನೋಡಿಸಿಕೊಂಡು ಹೋಗುತ್ತದೆ. ಅದ್ಭುತ ಹಾಗೂ ಮನಸ್ಸಿಗೆ ತುಂಬಾ ನಾಟುವಂತಹ, ಬದುಕಿಗೆ ತುಂಬಾ ಹತ್ತಿರವಾದಂತಹ ಸಿನಿಮಾ ಅಂತ ಹೇಳಬಹುದು. ಇಡೀ ಸಿನಿಮಾ ನೋಡಿದ ಮೇಲೆ ಯಾರಿಗೇ ಆಗಲಿ ಒಂದು ಅಮೂರ್ತವಾದಂತಹ ಅನುಭವ ನಿಮ್ಮನ್ನು ಕಾಡದೇ ಬಿಡದು. ‘ನಟರಂಗ್’ ಚಿತ್ರದಲ್ಲಿ ಯಾವ ವಿಭಾಗ ಚೆನ್ನಾಗಿಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ.  ನಟಿಸಿದ ಎಲ್ಲ ನಾಯಕ ನಾಯಕಿಯರು, ಕಲಾವಿದರು, ಸಹಕಲಾವಿದರು, ನಿರ್ದೇಶನ, ಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಗೀತ ನಿರ್ದೇಶನ, ಸಂಕಲನ, ಮೇಕಪ್ ಉಡುಗೆತೊಡುಗೆ ಹೀಗೆ ಎಲ್ಲರೂ ಎಲ್ಲ ರೀತಿಯಿಂದಲೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಚಿತ್ರದ ಕಥೆಯೇ ಅಂತಹ ದೊಡ್ಡ ಶಕ್ತಿಯನ್ನು ಹೊಂದಿದೆ. 

ಸಿನಿಮಾದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಮರಾಠಿ ಚಿತ್ರರಂಗದ ಬಗ್ಗೆ ಎರಡು ಮಾತನ್ನು ಹೇಳಲೇಬೇಕು. ಮರಾಠಿ ಚಿತ್ರರಂಗ ಬಾಂಬೆಯಲ್ಲೇ ನೆಲೆಸಿದ್ದರೂ, ಬಾಲಿವುಡ್‌ನ ಅಬ್ಬರದ ನಡುವೆ ಅದು ತನ್ನ ಅಸ್ಥಿತ್ವಕ್ಕಾಗಿ ಇಂದಿಗೂ ತುಂಬಾ ಹೆಣಗಾಡುತ್ತಿದೆ. ಮರಾಠಿ ಚಿತ್ರರಂಗ ಸತ್ತೇ ಹೋಯಿತು ಅಂತ  ಹೆಚ್ಚಿನವರು ಮಾತನಾಡಿದ್ದು ಕೂಡ ಉಂಟು. ಈ ಹಿಂದೆ ಮರಾಠಿ ಚಿತ್ರರಂಗದಲ್ಲಿ ಮೂಡಿ ಬರುತ್ತಿದ್ದ ಹೆಚ್ಚು ಸಿನಿಮಾಗಳು ಈಗ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳ ನಿರ್ಮಾಣ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಂತ ಹೇಳುವುದುಂಟು. ಮರಾಠಿ ಸಿನಿಮಾಗಳ ಬೆಳವಣಿಗೆಗೆ ಹಿಂದಿ ಸಿನಿಮಾಗಳೇ ನೇರ ಕಾರಣ ಅನ್ನುವವರಿದ್ದಾರೆ. ಇದರ ನಡುವೆಯೂ ಒಳ್ಳೆಯ ಮರಾಠಿ ಚಿತ್ರಗಳಿಗೆ ಥಿಯೇಟರ್‌ಗಳು, ಜನರ ಪ್ರೋತ್ಸಾಹ ಸಿಗದೇ ನಿರ್ಮಾಪಕರು, ನಿರ್ದೇಶಕರು ನಷ್ಟ ಅನುಭವಿಸಿದ್ದರು. ಪ್ರಸ್ತುತ ಮರಾಠಿ ಚಿತ್ರರಂಗದಲ್ಲಿ ಪ್ರತಿವರ್ಷ ಸುಮಾರು ೪೦-೫೦ರಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕೆಲವೊಮ್ಮೆ ಇವುಗಳ ಸಂಖ್ಯೆ ಕಡಿಮೆಯಾದದ್ದು ಕೂಡ ಉಂಟು. ಇಂತಹ ಹತ್ತು ಹಲವು ಸವಾಲುಗಳ ನಡುವೆಯೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಅದ್ಭುತ ಸಿನಿಮಾಗಳು ನಿರ್ಮಾಣವಾಗುವುದುಂಟು. ಮರಾಠಿ ಸಿನಿಮಾಗಳು ಆಸ್ಕರ್‌ಗೆ ನಾಮಿನೇಟ್ ಕೂಡ ಆಗಿವೆ. ಈ ವರ್ಷ ಕೂಡ ಹೀಗೆ ಮರಾಠಿ ಚಿತ್ರರಂಗದಲ್ಲಿ ಅರಳಿದ ಅತಿಶ್ರೇಷ್ಟ ಚಿತ್ರಗಳಲ್ಲಿ ಅತುಲ್ ಕುಲಕರ್ಣಿ ಅಭಿನಯದ ‘ನಟರಂಗ್’ ಚಿತ್ರ ಕೂಡ ಒಂದು.

ಮೊದಲೇ ಹೇಳಿದಾಗೆ ಚಿತ್ರದ ಕಥೆಯೆ ಅಷ್ಟು ಚೆನ್ನಾಗಿದೆ. ನಮ್ಮ ಕರ್ನಾಟಕದಂತೆಯೇ, ಮರಾಠಿ ರಂಗಭೂಮಿ ಕೂಡ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಕಾಲಘಟ್ಟ ಕೂಡ ಸುಮಾರು ೫೦ ವರ್ಷಗಳ ಹಿಂದೆಯೇ ತೆರೆದುಕೊಳ್ಳುತ್ತೆ. ಚಿತ್ರದ ಆರಂಭದಲ್ಲಿ ಅಸಂಖ್ಯ ಜನರ ಚಪ್ಪಾಳೆ, ಕೂಗಾಟದ ನಡುವೆ ದೊಡ್ಡ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿಯಿಂದ ಪ್ರಾರಂಭವಾಗುವ ಸನ್ನಿವೇಶ, ಇಷ್ಟು ದೊಡ್ಡ ಗೌರವವನ್ನು ಪಡೆದಂತಹ ವ್ಯಕ್ತಿ ಯಾರು, ಆತನಿಗೆ ಯಾಕೆ ಈ ಪ್ರಶಸ್ತಿ ನೀಡುತ್ತಿದ್ದಾರೆ ಅನ್ನುವ ಕುತೂಹಲದಿಂದ ಕಥೆ ಪ್ರಾರಂಭವಾಗುತ್ತದೆ. ಹಳ್ಳಿಯ ಕೂಲಿ ಕೆಲಸದವನಾಗಿದ್ದ ಗುಣನಿಗೆ ದಿನದಲ್ಲಿ ಮೂರೂತ್ತೋ ಹೊಲಗದ್ದೆಗಳಿಗೆ ನೀರನ್ನು ಹೊತ್ತು ಹಾಕುವುದೇ ಕೆಲಸ. ಆಗೆಲ್ಲಾ ಹಳ್ಳಿಗಳಲ್ಲಿ ಮೋಟಾರ್‌ಗಳು ಇರದೇ ಇರುವುದರಿಂದ ಕೂಲಿಗಳೆ ನೀರು ಹೊತ್ತು ಗದ್ದೆಗಳಿಗೆ ಹಾಕುತ್ತಿದ್ದರು. ನಾಯಕ ಗುಣ ನೋಡಲು ಪೈಲ್ವಾನನ ರೀತಿ ಇರುತ್ತಾನೆ. ದಷ್ಟಪುಷ್ಟವಾಗಿ ಬೆಳೆದಿರುತ್ತಾನೆ. ಇಡೀ ಹಳ್ಳಿಯಲ್ಲಿ ಅವನ ರೀತಿ ಯಾರು ಇರುವುದಿಲ್ಲ. ಅವನ ಅಜಾನುಬಾಹುವಂತಹ ದೇಹ,ನಾಯಕಮೀಸೆಗೆ ಮನಸೋಲದವರು ಆ ಹಳ್ಳಿಯಲ್ಲೇ ಇರುವುದಿಲ್ಲ. ಅಂತಹ ಆಳ್ತನ ನಾಯಕನದ್ದು.  ಹೀಗೆ ಕೂಲಿ ಕೆಲಸದಿಂದ ಹೆಂಡತಿ ಮಕ್ಕಳ ಜೊತೆ ಸಂಸಾರ ಮಾಡುತ್ತಿದ್ದ ಗುಣನಿಗೆ ವಿಪರೀತ ನಾಟಕ ಹುಚ್ಚು, ತಾನು ನಾಟಕದಲ್ಲಿ ಅಭಿನಯಿಸಬೇಕು, ರಾಜನ ಪಾತ್ರ, ಮಹಾಭಾರತದ ಅರ್ಜುನನ ಪಾತ್ರ ಮಾಡಬೇಕೆಂಬ ಅದಮ್ಯ ಆಸೆ ಅವನಿಗೆ. ಎಲ್ಲಾದರೂ ನೃತ್ಯ, ನಾಟಕ ಇದೆಯೆಂದರೆ ಸಾಕು, ತನ್ನ ಸ್ನೇಹಿತರೊಡನೆ ಹೋಗಿ ನೋಡಿಕೊಂಡು ಬರುವ ವ್ಯಕ್ತಿ. ಅಷ್ಟೊಂದು ನಾಟಕದ ಹುಚ್ಚು ಅವನಿಗೆ.  

  ಒಮ್ಮೆ ನಾಯಕ ಗುಣ ವಾಸಿಸುತ್ತಿದ್ದ ಹಳ್ಳಿಯ ಹೊಲಗಳಿಗೆ ನೀರು ಹಾಕುವ ಮೋಟಾರುಗಳು ಬಂದ ಮೇಲೆ, ಕೂಲಿ ಮಾಡುವ ಗುಣನಿಗೆ ಕೆಲಸವಿಲ್ಲದಂತಾಗುತ್ತದೆ. ಎಲ್ಲಿಯೂ ಕೂಲಿ ಕೆಲಸ ಸಿಗುವುದಿಲ್ಲ. ಆಗ ಆತನ ಜೊತೆ ಕೂಲಿ ಕೆಲಸ ಮಾಡುತ್ತಿದ್ದವರೆಲ್ಲಾ ನಾಟಕದಲ್ಲಿ ಆಸಕ್ತಿ ಇದ್ದವರೇ, ತಾವೇ ಯಾಕೆ ಒಂದು ನಾಟಕ ಕಂಪನಿ ಪ್ರಾರಂಭ ಮಾಡಬಾರದು ಅಂತಂದುಕೊಂಡು ನಾಟಕ ಕಂಪನಿ ಶುರುಮಾಡುತ್ತಾರೆ. ಅವರ ತಂಡಕ್ಕೆ ಆಗಲೇ ನಾಟಕದಲ್ಲಿ ಕೆಲಸ ಮಾಡಿದ್ದ ಅದೇ ಊರಿನ ವ್ಯಕ್ತಿ ಸೇರಿಕೊಳ್ಳುತ್ತಾನೆ. ನಾಟಕ ಮಂಡಳಿ ಕಟ್ಟಲು ಹಣವಿರುವುದಿಲ್ಲ. ನಾಟಕದ ಪರಿಕರಗಳಿಗಾಗಿ ಅವರವರ ಮನೆಯಿಂದ ಅದು ಇದು ಕದಿಯಲಿಕ್ಕೆ ಪ್ರಾರಂಭಿಸುತ್ತಾರೆ. ಬರೀ ಗಂಡಸರೇ ಇದ್ದ ಮಂಡಳಿಗೆ ಒಂದು ಹೆಣ್ಣು ಬೇಕೆ ಬೇಕು ಅಂತ ನಿರ್ದೇಶಕ ಹೇಳುತ್ತಾನೆ. ಇಡೀ ಊರು ಅಲಿಯುತ್ತಾರೆ. ಯಾವ ಮನೆಯ ಹೆಣ್ಣುಮಕ್ಕಳು ಅವರ ನಾಟಕದಲ್ಲಿ ಅಭಿನಯಿಸಲು ಬರುವುದಿಲ್ಲ. ದೊಡ್ಡ ನಿರಾಸೆ ಕಾಡತೊಡಗುತ್ತದೆ. ನಾಯಕ ಗುಣನಿಗೆ ಹೇಗಾದರೂ ಮಾಡಿ ನಾಟಕ ಮಂಡಳಿ ಕಟ್ಟಿ ಅಭಿನಯಿಸಬೇಕೆಂಬ ಆಸೆ ಇರುತ್ತದೆ. ಕೊನೆಗೂ ಕೊಲ್ಲಾಪುರದಲ್ಲಿ ನಾಟಕ, ನೃತ್ಯದ ಹಿನ್ನಲೆ ಇರುವ ಹುಡುಗಿ ಸಿಗುತ್ತಾಳೆ. ಆಕೆ ಇವರ ತಂಡದಲ್ಲಿ ಸೇರಲಿಕ್ಕೆ ಒಪ್ಪುತ್ತಾಳೆ. ಸೇರುವುದಕ್ಕೂ ಮುನ್ನ ಆಕೆಯ ತಾಯಿ ಎರಡು ಕಂಡಿಷನ್ ಹಾಕುತ್ತಾಳೆ. ಮೊದಲನೇ ಕಂಡೀಷನ್ ಪ್ರಕಾರ ನಾಟಕದ ಲಾಭದಲ್ಲಿ ಆಕೆಗೂ ಒಂದು ಪಾಲು ನೀಡಬೇಕು, ಎರಡನೇಯದ್ದು ನಾಟಕದಲ್ಲಿ ಯಾರಾದರೂ ಒಬ್ಬರು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಬೇಕು. ಎಲ್ಲರಿಗೂ ಆಶ್ಚರ್‍ಯ. ಮೊದಲನೆಯ ಕರಾರಿಗೆ ಒಪ್ಪಿದರಾದರೂ, ಎರಡನೇ ಕರಾರಿನಂತೆ ಯಾರೋಬ್ಬರು ನಾಟಕದಲ್ಲಿ ಹಿಜಡಾ ಪಾತ್ರ  ಮಾಡಲು ಒಪ್ಪಲಿಲ್ಲ. ಯಾರು ಮಾಡದಿದ್ದರೆ ನಾವು ವಾಪಾಸ್ ಹೋಗುತ್ತೇವೆ ಅಂತ ಆಕೆಯ ತಾಯಿ ಹೇಳುತ್ತಾಳೆ. ನಾಯಕ ಗುಣನಿಗೆ ತನ್ನ ಕನಸು ಸತ್ತು ಹೋಗುತ್ತಿದೆಯೆಲ್ಲ ಅನ್ನುವ ಚಿಂತೆ ಕಾಡಲಾರಂಬಿಸುತ್ತದೆ. ತಂಡದಲ್ಲಿ ಯಾರೋಬ್ಬರೂ ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲಿಕ್ಕೆ ಒಪ್ಪುವುದಿಲ್ಲ. ಕೊನೆಗೆ ನಾಯಕಿಯನ್ನು ಕರೆದುಕೊಂಡು ಬಂದಿದ್ದ ನಿರ್ದೇಶಕ ಮಾತ್ರ ಗುಣನಿಗೆ ನೀನೇ ಆ ಪಾತ್ರ ಮಾಡು ಅಂತ ಬಲವಂತ ಮಾಡುತ್ತಾನೆ. ಇಲ್ಲವಾದರೆ ನಾಟಕ ಕಂಪನಿ ಕಟ್ಟಬೇಕೆಂಬ ಆಸೆ ಬಿಟ್ಟು ಬಿಡು ಅಂತ ಹೇಳುತ್ತಾನೆ. ನಾಯಕ ಗುಣನಿಗೆ ನಾಟಕದಲ್ಲಿ ರಾಜ, ಅರ್ಜುನ ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಈಗ ಅದು ಕೂಡ ಆಗುವುದಿಲ್ಲವಲ್ಲ ಅನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ ತನ್ನ ಕನಸಿನ ನಾಟಕ ಕಂಪನಿಯನ್ನು ಉಳಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನೆಲ್ಲಾ ಆಸೆನೋವುಗಳನ್ನು ಬದಿಗಿಟ್ಟು ಹಿಜಡಾ ಪಾತ್ರಧಾರಿಯಾಗಿ ಅಭಿನಯಿಸಲು ಒಪ್ಪಿಕೊಳ್ಳುತ್ತಾನೆ. ಗುಣ ನೋಡಲಿಕ್ಕೆ ಬಲಭೀಮನಂತೆ ಆಜಾನುಬಾಹು ದೇಹದ ಪೈಲ್ವಾನನಂತೆ ಇರುತ್ತಾನೆ. ಹಿಜಡಾ ಪಾತ್ರಧಾರಿಗೆ ಬೇಕಾಗಿರುವುದು ಕೃಶ ದೇಹ, ಹೆಣ್ಣುಮಕ್ಕಳ ಸೊಂಟದಂತೆ ದೇಹವನ್ನು ಬದಲಾಯಿಸಿಕೊಳ್ಳುವುದು. ನಾಯಕ ಗುಣ ತನ್ನ ಕನಸಿಗಾಗಿ ಹಿಜಡಾ ಆಗಿ ಪರಿವರ್ತಿತನಾಗುತ್ತಾನೆ. ಹೆಣ್ಣುಮಕ್ಕಳ ಹಾವಭಾವ, ನೃತ್ಯ, ಹಿಜಡಾಗಳು ವರ್ತಿಸುವ ರೀತಿ, ಮಾತನಾಡುವ ಶೈಲಿ, ಅವರಂತೆ ದನಿ ಎಲ್ಲವನ್ನೂ ರೂಢಿಸಿಕೊಳ್ಳುತ್ತಾನೆ. ನೋಡಲು ಪೈಲ್ವಾನನಂತೆ ಇದ್ದವನು ಪಾತ್ರದ ಆಳಕ್ಕೆ ಹೋದಂತೆ ಸಂಪೂರ್ಣವಾಗಿ ಬದಲಾಗಿ ಕೃಶ ದೇಹದವನಾಗಿ, ಮೀಸೆ ಬೋಳಿಸಿಕೊಂಡು, ಅತ್ತ ಗಂಡಸು ಅಲ್ಲದ, ಹೆಣ್ಣು ಅಲ್ಲದ ವ್ಯಕ್ತಿಯ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಪಾತ್ರಕ್ಕಾಗಿ ನಾಯಕಿಯಿಂದ ನೃತ್ಯ ಕಲಿಯುತ್ತಾನೆ. ಚಿತ್ರದ ನಾಯಕಿ ಎಲ್ಲ ರೀತಿಯಿಂದಲೂ ಆತನನ್ನು ತಯಾರಿ ಮಾಡುತ್ತಾಳೆ. ಅವರ ಮೊದಲ ನಾಟಕ ಪ್ರಾರಂಭವಾಗುವುದರೊಳಗೆ ನಾಯಕ ಗುಣ, ನಾಟಕದಲ್ಲಿ ಬರುವ ಪ್ರಮುಖ ಹಿಜಡಾ ಪಾತ್ರಧಾರಿಯಾಗಿ ಬದಲಾಗುತ್ತಾನೆ. ಅವರ ಹಳ್ಳಿಯಲ್ಲೇ ಅಭಿನಯಿಸಿದ ಮೊದಲ ನಾಟಕ ಎಲ್ಲರ ಮನಸೂರೆಗೊಳ್ಳುತ್ತದೆ. ಅಕ್ಕ ಪಕ್ಕದ ಹಳ್ಳಿ, ಊರುಗಳಿಂದ ಇವರ ನಾಟಕ ಕಂಪನಿಗೆ ಆಹ್ವಾನ ಸಿಗತೊಡಗುತ್ತದೆ. 

ಗುಣನ ನಾಟಕ ಕಂಪನಿಗೆ ಒಳ್ಳೆಯ ಹೆಸರು ಬರುವುದರೊಳಗೆ ಆತನ ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿರುತ್ತದೆ. ತನ್ನ ಗಂಡ ನಾಟಕದಲ್ಲಿ ಹಿಜಡಾ ಪಾತ್ರ ಮಾಡುತ್ತಿದ್ದಾನೆ ಅನ್ನುವ ನೋವು ಆಕೆಯನ್ನು ವಿಪರೀತ ಕಾಡುತ್ತಿರುತ್ತದೆ. ಊರಲ್ಲಿರುವ ಹೆಂಗಸರು, ಗಂಡಸರು, ಮಕ್ಕಳು ಆಕೆಯನ್ನು ಅವಮಾನ ಮಾಡುತ್ತಿರುತ್ತಾರೆ. ಗುಣನ ತಂದೆಗೂ ಕೂಡ ಮಗ ನಾಟಕದ ಹುಚ್ಚು ಅಂಟಿಸಿಕೊಂಡು ಹಾಳಾಗುತ್ತಿದ್ದಾನೆ ಅಂತ ನೋವನ್ನು ಅನುಭವಿಸುತ್ತಿರುತ್ತಾನೆ. ಅದೇ ಕೊರಗಿನಲ್ಲಿ ಹಾಸಿಗೆ ಹಿಡಿಯುತ್ತಾನೆ. ಆತನ ಮಾವ ಕೂಡ ನಾಟಕ ಬಿಟ್ಟು ಬೇರೆ ಬದುಕು ಮಾಡು ಅಂತ ಕಾಲು ಹಿಡಿಯುತ್ತಾನೆ, ಮನೆಯಲ್ಲಿ ಇಷ್ಟೇಲ್ಲಾ ವಿರೋಧ ಬಂದರೂ, ಗುಣ ಮಾತ್ರ ನಾಟಕದ ಮೇಲಿನ ಹುಚ್ಚಿನಿಂದ ಯಾವುದಕ್ಕೂ ಒಪ್ಪುವುದಿಲ್ಲ. ಇದರ ಪ್ರತಿಫಲವಾಗಿ ಕಟ್ಟಿಕೊಂಡ ಹೆಂಡತಿ ಆತನ ಮುಖಕ್ಕೆ ಕಟ್ಟಿದ ತಾಳಿ ಎಸೆದು ಹೊರಗೆ ಹಾಕುತ್ತಾಳೆ.  ಹುಟ್ಟಿಸಿದ ಮಗ ಕೂಡ ಅಪ್ಪನ ಮುಖಕ್ಕೆ ಉಗುಳಿ, ನೀನು ನನ್ನ ಅಪ್ಪನೇ ಅಲ್ಲ ಅಂತ ಹೇಳುತ್ತಾನೆ. ಮಗ ನಾಟಕ ಸೇರಿ ಹಾಳಾದನಲ್ಲ ಅನ್ನುವ ಕೊರಗಿನಲ್ಲೇ ತಂದೆ ಕೂಡ ತೀರಿಕೊಳ್ಳುತ್ತಾನೆ.  ತಂದೆ ತೀರಿಕೊಂಡ ಸಮಯದಲ್ಲಿಯೂ ಅಪ್ಪನ ಅಂತ್ಯಕ್ರಿಯೆಗೆ ಹೋಗದೇ ಇರೋ ಪರಿಸ್ಥಿತಿಯಲ್ಲಿ ನಾಯಕ ಸಿಕ್ಕಿಹಾಕಿಕೊಳ್ಳುತ್ತಾನೆ.  ಹೀಗೆ ನಾಟಕದ ಹುಚ್ಚಿನಿಂದಾಗಿ ವೈಯಕ್ತಿಕ ಬದುಕು ಹಾಳಾಗಿ ಹೋಗುತ್ತದೆ. ಒಳಗೊಳಗೆ ದೊಡ್ಡ ನೋವನ್ನು ಅನುಭವಿಸತೊಡಗುತ್ತಾನೆ. 

ಒಳಗೊಳಗೆ ತಾನೊಬ್ಬ ಗಂಡಸು ಅನ್ನುವ ಭಾವದೊಂದಿಗೆ ಆತ ಇದ್ದರೂ, ಕೆಲವು ಸಂದರ್ಭಗಳಲ್ಲಿ ಆತನ ಹಿಜಡಾಗಳಂತಯೇ ವರ್ತಿಸಬೇಕಾದ ಪರಿಸ್ಥಿತಿ ಆತನಿಗೆ ಒದಗುತ್ತದೆ. ಈತನ ನಾಟಕ ಕಂಪನಿಯ ಪ್ರದರ್ಶನದ ವಿಚಾರದಲ್ಲಿ ಎರಡು ರಾಜಕೀಯ ನಾಯಕರುಗಳ ನಡುವೆ ಗಲಾಟೆ ಆಗುತ್ತದೆ. ತನಗೆ ಗುಣ ಅವಮಾನ ಮಾಡಿದ ಅನ್ನುವ ಸೇಡಿನಲ್ಲಿ ಇನ್ನೊಬ್ಬ ರಾಜಕೀಯ ವ್ಯಕ್ತಿ ಈತನ ನಾಟಕ ಕಂಪನಿಗೆ ಬೆಂಕಿ ಹಚ್ಚುತ್ತಾನೆ. ಆತನ ಕಂಪನಿ ಸಂಪೂರ್ಣವಾಗಿ ಭಸ್ಮವಾಗುತ್ತದೆ. ಅದೇ ನೋವಿನಲ್ಲಿರುವಾಗಲೇ ಆತನ ಮೇಲೆ ರಾಜಕೀಯ ವ್ಯಕ್ತಿ ಮತ್ತು ಆತನ ಬೆಂಬಲಿಗರು ಬಲಾತ್ಕಾರ ಮಾಡುತ್ತಾರೆ.  ಈತನ ಮೇಲೆ ಮಾನಭಂಗ ಮಾಡಿದ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಆಗಲೇ ಈತನ ಹೆಂಡತಿ, ಮಗ ಇವನಿಂದ ದೂರವಾಗುತ್ತಾರೆ. ಒಂದು ಹಂತದಲ್ಲಿ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗುತ್ತಾನೆ. ಕಂಪನಿಯಲ್ಲಿದ್ದ ಆತನ ಜೊತೆಗಾರರೆಲ್ಲಾ ದೂರವಾಗುತ್ತಾರೆ. ಬನ್ನಿ ಮತ್ತೊಮ್ಮೆ ನಾಟಕ ಕಂಪನಿ ಮಾಡೋಣ ಅಂತ ಹೇಳುತ್ತಾನೆ ಯಾರು ಆತನ ಹಿಂದೆ ಬರುವುದಿಲ್ಲ. ಇಡೀ ಪ್ರಪಂಚವೇ ತನ್ನ ವಿರುದ್ಧವಾಗಿದೆ ಅಂತಂದುಕೊಳ್ಳುತ್ತಾನೆ. ಅಂತಹ ಕೊನೆ ಕ್ಷಣದಲ್ಲಿ ಆತನ ಕೈಹಿಡಿಯುವಳೊಬ್ಬಳೇ ಕತೆಯ ನಾಯಕಿ ನೈನಾ. ಗುಣನಿಗೆ ಗುರುವಾಗಿ ನೃತ್ಯ, ಅಭಿನಯವನ್ನು ಕಲಿಸಿಕೊಟ್ಟಿದ್ದ ಆಕೆಯನ್ನು ಆಂತರಂಗಿಕವಾಗಿ ಗುಣ ತುಂಬಾ ಪ್ರೀತಿಸುತ್ತಿದ್ದ. ಆಕೆಯೂ ಕೂಡ ಈತನ ಮೇಲೆ ಅಷ್ಟೇ ಪ್ರೀತಿಯನ್ನು ಇಟ್ಟುಕೊಂಡಿರುತ್ತಾಳೆ. ಅವರಿಬ್ಬರ ನಡುವೆ ದೇಹಸಂಬಂಧ ಕೂಡ ಬೆಳೆದಿರುತ್ತದೆ. ನನ್ನನ್ನು ಮದುವೆಯಾಗು ಅಂತ ಕೇಳಿರುತ್ತಾಳೆ. ನಾಟಕದಲ್ಲಿ ಹಿಜಡಾ ಪಾತ್ರ ಮಾಡುವ ನಿನ್ನನ್ನು ಮದುವೆಯಾಗಿ ಇಡೀ ಸಮಾಜವನ್ನು ನಾನು ಎದುರಿಸಲಾರೆ ಅಂತ ಹೇಳುತ್ತಾನೆ. ತನ್ನ ಇಷ್ಟೆಲ್ಲಾ ನೋವುಗಳಿಗೆ ತನಗಿರುವ ನಾಟಕದ ಹುಚ್ಚು ಮತ್ತು ಮಾಡುತ್ತಿದ್ದ ಹಿಜಡಾ ಪಾತ್ರವೇ ಕಾರಣ ಅನ್ನುವುದು ಆತನಿಗೆ ಮನವರಿಕೆಯಾಗಿರುತ್ತದೆ. ಆದರೂ ನಿಸ್ಸಾಹಯಕನಂತೆ ಬದುಕುವ ಪರಿಸ್ಥಿತಿಯಲ್ಲಿ ಇರುತ್ತಾನೆ.  

ಕಥೆಯ ಕೊನೆಯಲ್ಲಿ ನಾಯಕಿ ನೈನಾಳೇ ಆತನ ಕನಸುಗಳಿಗೆ ಹೆಗಲು ಕೊಡುತ್ತಾಳೆ. ಇವರಿಬ್ಬರೇ ಸೇರಿ ಎರಡೇ ಪಾತ್ರಗಳನ್ನು ಇಟ್ಟುಕೊಂಡು ನಾಟಕಗಳನ್ನು, ನೃತ್ಯಗಳನ್ನು ಮಾಡುತ್ತಾ ದೊಡ್ಡ ಹೆಸರು ಮಾಡತೊಡಗುತ್ತಾರೆ. ನೋಡ ನೋಡುತ್ತಿದ್ದಂತಯೇ ಗುಣನ ಹೆಸರು ನಾಟಕ, ನೃತ್ಯರಂಗದಲ್ಲಿ ದೊಡ್ಡ ಹೆಸರು ಆಗುತ್ತದೆ. ಅನೇಕಾನೇಕ ಪ್ರತಿಷ್ಟಿತ ಪ್ರಶಸ್ತಿಗಳು ಆತನನ್ನು ಅರಸಿ ಬರುತ್ತವೆ. ನೈನಾ ಮತ್ತು ಗುಣ ಇವರಿಬ್ಬರೂ ಸೇರಿ ಸಾವಿರಾರು ಪ್ರದರ್ಶನಗಳನ್ನು ಮಾಡುತ್ತಾರೆ. ಅಲ್ಲಿಯರೆಗೂ ಕೇವಲ ಹಿಜಡಾ ಪಾತ್ರವನ್ನು ಮಾಡುತ್ತಿದ್ದ ಗುಣ, ತನಗಿರುವ ಇಮೇಜನ್ನು ಬದಲಿಸಿಕೊಳ್ಳಲು ಎಲ್ಲ ರೀತಿಯ ಪಾತ್ರಗಳನ್ನು, ವೇಷಭೂಷಣಗಳನ್ನು ಹಾಕಿಕೊಳ್ಳತೊಡಗುತ್ತಾನೆ. ಜನರು ಎಲ್ಲ ಪಾತ್ರದಲ್ಲೂ ಆತನನ್ನು ಇಷ್ಟಪಡತೊಡಗುತ್ತಾರೆ. ಯಾವ ಕಲೆಯನ್ನು ನಂಬಿ, ಹೆಂಡತಿ, ಮಕ್ಕಳು ಎಲ್ಲ ರಕ್ತಸಂಬಂಧಗಳಿಂದ ದೂರವಾಗಿದ್ದನೋ, ಅದೇ ಗುಣ ಸಾವಲ್ಕರ್ ಮುಂದೊಂದು ದಿನ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುತ್ತಾರೆ. ದೊಡ್ಡ ಸಾಧಕನೆಂದು ಬಿರುದಾಂಕಿತರಾಗುತ್ತಾನೆ.

ಇಡೀ ಚಿತ್ರದ ಕೇಂದ್ರಬಿಂದುವೇ ಗುಣನ ಪಾತ್ರದಲ್ಲಿ ಮಿಂಚಿದ ಅತುಲ್ ಕುಲಕರ್ಣಿ. ಇಡೀ ಪಾತ್ರದ ಅಂತರಂಗವನ್ನು ಹೊಕ್ಕು ಅಭಿನಯಿಸಿದ್ದಾರೆ. ಪೈಲ್ವಾನನ ಪಾತ್ರಕ್ಕೆ ಅವರ ದೇಹವನ್ನು ಹೊಂದಿಸಿಕೊಂಡಿದ್ದಕ್ಕೂ, ಹಿಜಡಾ ಪಾತ್ರಕ್ಕೆ ತಮ್ಮ ದೇಹವನ್ನು ಮೌಲ್ಡ್ ಮಾಡಿಕೊಂಡಿದ್ದು ಅವರು ಪಾತ್ರಕ್ಕೆ ಎಷ್ಟು ಬದ್ಧರಾಗಿದ್ದಾರೆ ಅನ್ನುವುದನ್ನು ತೋರಿಸುತ್ತದೆ. ಪೈಲ್ವಾನನಂತೆ ಇರುವಾಗ ಪೈಲ್ವಾನನಂತೆಯೂ, ಹಿಜಡಾ ಆಗಿ ಅಭಿನಯಿಸುವಾಗ ಅವರಂತಯೇ ಕಾಣುವಂತೆ ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಅತುಲ್ ಕುಲಕರ್ಣಿ ನಟರಂಗ್ ಚತ್ರದಲ್ಲಿನ ತಮ್ಮ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ೨೦೧೦ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಮಹಾರಾಷ್ಟ್ರದಲ್ಲಿ ಸುಮಾರು ೨೦ ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಚಿತ್ರದ ಸಂಗೀತವು ಕೂಡ ಅತುಲ್ ಕುಲಕರ್ಣಿಯ ಅಭಿನಯದಷ್ಟೇ ಇಷ್ಟವಾಗುತ್ತದೆ. ಸಾಂಪ್ರದಾಯಿಕ ಮರಾಠಿ ನೃತ್ಯಗಳಿಗೆ ಹೊಂದುವ ಹಾಡುಗಳು, ರಂಗಗೀತೆಗಳು, ಹಾಡುಗಳ ಒಂದಕ್ಕೊಂದು ಚೆನ್ನಾಗಿವೆ. ಎಲ್ಲ ಹಾಡುಗಳು ಕೇಳಲು ಇಂಪಾಗಿವೆ. ಹಿನ್ನಲೆ ಸಂಗೀತ ಕೂಡ ಪ್ರತಿ ಸನ್ನಿವೇಶವನ್ನು ಎತ್ತಿ ಹಿಡಿಯುತ್ತದೆ. 

ಒಟ್ಟಾರೆಯಾಗಿ ನಟರಂಗ್ ಸಿನಿಮಾ ವಿಭಿನ್ನ ಅನುಭವವನ್ನು ನೀಡುವಂತಹ ಸಿನಿಮಾ. ಸಾಧ್ಯವಾದರೆ ಈ ಸಿನಿಮಾವನ್ನು ತಪ್ಪದೇ ನೋಡಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
umesh desai
umesh desai
10 years ago

ನಿಜಕ್ಕೂ ಇದು ಅದ್ಭುತ ಸಿನೇಮಾ ಮರಾಠಿ ಸಿನೇಮಾಗಳ ಹೊಸದಾರಿಗೆ ಇದು ದಿಕ್ಸೂಚಿಯಾಗಿ ನಿಂತಿತ್ತು.
 
ಅತುಲ್ ಕುಲಕರ್ಣಿ ನಮ್ಮ ಬೆಳಗಾವಿ ಹುಡುಗ.

amardeep.p.s.
amardeep.p.s.
10 years ago

ಸರ್, ಚಿತ್ರದ ಪರಿಚಯ ಹಾಗೂ ನಿಮ್ಮ ಅಭಿರುಚಿ ಇಷ್ಟವಾಯಿತು .  ಲೇಖನ ತುಂಬಾ ಚೆನ್ನಾಗಿದೆ…

2
0
Would love your thoughts, please comment.x
()
x