ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ:
ಸ್ಪರ್ಧಾತ್ಮಕ ವ್ಯವಹಾರ ಆಯೋಗವು ಜಾಲದಲ್ಲಿ ಸಮಾನತೆಯನ್ನು ಭಾರತೀಯ ಟೆಲಿಕಾಂ ಆಪರೇಟರ್ ಗಳು ಉಲ್ಲಂಘಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿತ್ತು. ಅದೇ ಸಮಯದಲ್ಲಿ ದುರದೃಷ್ಟವಶಾತ್, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್ ನೆಟ್ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್ ನೆಟ್ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..
ಟೆಲಿಕಾಂ ಕಂಪನಿಗಳು ತಮ್ಮ ಜಾಲದ ಮೂಲಕ ನೀಡುತ್ತಿರುವ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳನ್ನು ಇಂಟರ್ ನೆಟ್ ಕಂಪನಿಗಳೂ ಕೂಡ ಇಂಟರ್ ನೆಟ್ ಮೂಲಕ ನೀಡಬಹುದು. ನೇರವಾಗಿ ಕರೆಮಾಡಿ ಮಾತನಾಡುವುದಕ್ಕೆ ತೆರಬೇಕಾದ ಬೆಲೆಗಿಂತ ಸ್ಕೈಪ್ ನಂಥಹ ಇಂಟರ್ ನೆಟ್ ಸೇವೆಯ ಮೂಲಕ ಕರೆ ಮಾಡುವುದಕ್ಕೆ ತೆರಬೇಕಾದ ಬೆಲೆ ಬಹಳ ಕಡಿಮೆ. ಇಂಥಹ ಪರಿಸ್ಥಿತಿಯಲ್ಲಿ ದೂರವಾಣಿ & ಮೊಬೈಲ್ ಬಳಕೆದಾರರು ಟೆಲಿಕಾಂ ದಾರಿ ಬಿಟ್ಟು ಇಂಟರ್ ನೆಟ್ ನಲ್ಲಿ ಸ್ಕೈಪ್, ವಾಟ್ಸ್ ಆಪ್, ಇತ್ಯಾದಿಗಳನ್ನು ಬಳಸಿಕೊಂಡಲ್ಲಿ ತಮ್ಮ ಆದಾಯ ಗಣನೀಯವಾಗಿ ಕುಸಿಯುತ್ತದೆ, ಆದ್ದರಿಂದ ಇದಕ್ಕೂ ಒಂದಷ್ಟು ಜಾಸ್ತಿ ಶುಲ್ಕ ವಿಧಿಸಿ ತಮಗೂ ಆದಾಯದ ಪಾಲು ಕೊಡಿ ಎಂದು ಟೆಲಿಕಾಂ ಕಂಪನಿಗಳು ಒತ್ತಾಯ ಮಾಡುತ್ತಿವೆ. ಇದಕ್ಕೆ ಪೂರಕವಾಗುವಂತೆ ಟ್ರಾಯ್ ಪ್ರಾಧಿಕಾರವು ಒಟಿಟಿ ಸೇವೆಗಳ ವ್ಯಾಖ್ಯಾನ ಮಾಡಿರುವುದು.
ಇಂಟರ್ ನೆಟ್ ಸೇವಾ ಪೂರೈಕೆದಾರರು (ಐಎಸ್ಪಿ) ದತ್ತಾಂಶ ಸೇವೆಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಪರವಾನಗಿ ಹೊಂದಿರುತ್ತಾರೆ. ಈ ಸಂಸ್ಥೆಗಳು ಬಳಕೆದಾರರ ಕಂಪ್ಯೂಟರುಗಳಿಂದ ಉತ್ಪತ್ತಿಯಾಗುವ ದತ್ತಾಂಶ ಪೊಟ್ಟಣಗಳನ್ನು ಸಾಗಿಸುತ್ತವೆ. ಈ ಪೊಟ್ಟಣಗಳಲ್ಲಿರುವುದನ್ನೇ ಕಂಟೆಂಟ್ ಎಂದು ಪರಿಗಣಿಸಲಾಗುತ್ತದೆ – ವೀಡಿಯೋ, ಆಡಿಯೋ, ಅಕ್ಷರ, ಅಥವಾ ಬರೀ ದತ್ತಾಂಶ – ಹಾಗೂ ಇವುಗಳು ಟೆಲಿಕಾಂ ನಿಯಂತ್ರಣಕ್ಕೊಳಪಡುವುದಿಲ್ಲ. ಅದರಿಂದಾಗಿಯೇ ನಾವು ವೆಬ್ ಸೈಟ್ ಸೃಷ್ಟಿಸಲು, ಇಂಟರ್ ನೆಟ್ ಮೇಲೆ ಸೇವೆ ಒದಗಿಸಲು, ಅಥವಾ ಟ್ಯಾಬ್ಲೆಟ್, ಮೊಬೈಲ್ ಪೋನ್ ಅಥವಾ ಕಂಪ್ಯೂಟರಿನ ಮೇಲೆ ಅಪ್ಲಿಕೇಷನ್ ಬಳಸಲು ಪರವಾನಗಿ ಪಡೆಯುವುದಿಲ್ಲ. ಏಕೆಂದರೆ ಇವೆಲ್ಲ ಟೆಲಿಕಾಂ ಸೇವೆಗಳಾಗಿರದೇ, ಕೇವಲ ಕಂಟೆಂಟ್ (ದತ್ತಾಂಶ ಮಾಹಿತಿ) ಆಗಿರುತ್ತವೆ. ಈ ಪರಿಸ್ಥಿತಿಯು ಒಟಿಟಿ ಸೇವೆಗಳ ಕುರಿತು ಟ್ರಾಯ್ ಸಂಸ್ಥೆಯು ಮಾಡಿರುವ ವ್ಯಾಖ್ಯಾನವನ್ನು ಒಪ್ಪಿಕೊಂಡರೆ ಪೂರ್ಣ ಬದಲಾಗುತ್ತದೆ. ಇಂಟರ್ ನೆಟ್ ಬಳಸುವ ಯಾವುದೇ ಒಂದು ಅಪ್ಲಿಕೇಷನ್ ಅಥವಾ ಸೇವೆಯನ್ನು ಒಟಿಟಿ ಎಂದು ವ್ಯಾಖ್ಯಾನಿಸಿದಾಗ ಅದು ಟ್ರಾಯ್ ನಿಯಂತ್ರಣಕ್ಕೊಳಪಡುತ್ತದೆ.
ಹೀಗೆ, ಟ್ರಾಯ್ ಸಂಸ್ಥೆಯು ಟೆಲಿಕಾಂ ಸೇವೆಗಳಾದ ಮೂಲ ಸೇವೆಗಳು (ಧ್ವನಿ ಮತ್ತು ಎಸ್.ಎಂ.ಎಸ್) ಮತ್ತು ಮೌಲ್ಯ ವರ್ಧಿತ ಸೇವೆಗಳು (ದತ್ತಾಂಶ ಅಥವಾ ಇಂಟರ್ ನೆಟ್) – ಇವುಗಳನ್ನು ನಿಯಂತ್ರಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸದೇ, ದತ್ತಾಂಶ ಅಥವಾ ಇಂಟರ್ ನೆಟ್ ನ ವ್ಯಾಖ್ಯಾನವನ್ನು ಹೆಚ್ಚುವರಿ (ಒಟಿಟಿ) ಸೇವೆಗಳೆಂದು ಮಾರ್ಪಾಟು ಮಾಡುವ ಮೂಲಕ ಎಲ್ಲ ಇಂಟರ್ ನೆಟ್ ಆಧಾರಿತ ಸೇವೆಗಳನ್ನು ತನ್ನ ವ್ಯಾಪ್ತಿಗೆ ತಂದು ನಿಯಂತ್ರಿಸಲು ಹವಣಿಸುತ್ತಿದೆ. ಪ್ರತಿಯೊಂದು ನೆಟ್ ಸೇವೆಯನ್ನು ಹೆಚ್ಚುವರಿ (ಒಟಿಟಿ) ಸೇವೆಗಳೆಂದು ದರ ನಿಗಧಿ ಮಾಡುವ ಪ್ರಯತ್ನಗಳು ನಡೆದಿವೆ.
ನಿಯಂತ್ರಣ ಪಡಿಸುವ ಉದ್ದೇಶದಿಂದ ಇಂಟರ್ ನೆಟ್ ಮೇಲೆ ಒದಗಿಸಲಾಗುವ ವಿವಿಧ ಅಪ್ಲಿಕೇಷನ್ ಗಳು ಮತ್ತು ಸೇವೆಗಳ ನಡುವೆ ವ್ಯತ್ಯಾಸ ಗುರುತಿಸಲು ಆರಂಭಿಸಿದಲ್ಲಿ ಸಮಸ್ಯೆಗಳ ಪೆಟ್ಟಿಗೆಯನ್ನೇ ತೆರೆದಂತೆಯೇ. ಇದರಿಂದ ಟ್ರಾಯ್ ಸಂಸ್ಥೆಯು ಕೆಲವೇ ಕೆಲವು ಸೇವೆಗಳಿಗೆ ಪರವಾನಗಿ ನೀಡಬಹುದು. ಉದಾಹರಣೆಗೆ, ಮುಂದೊಮ್ಮೆ ಟ್ರಾಯ್ ಸಂಸ್ಥೆಯು ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ತಮ್ಮ ಆನ್ ಲೈನ್ ಸೇವೆಗಳಿಗೆ ತನ್ನಿಂದ ಪರವಾನಗಿ ಪಡೆಯಬೇಕು ಎಂದು ನಿಲುವು ತಳೆಯಬಹುದು. ಪ್ರಸ್ತುತ ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ಉಚಿತವಾಗಿ ಧ್ವನಿ ಮತ್ತು ಎಸ್.ಎಂ.ಎಸ್ ಸೌಲಭ್ಯವನ್ನು ಒದಗಿಸುತ್ತಿದ್ದು, ಟೆಲಿಕಾಂ ಕಂಪನಿಗಳು ಈ ಸೌಲಭ್ಯಕ್ಕೆ ಅಧಿಕ ದರ ವಿಧಿಸುತ್ತಿವೆ.
ಅಲ್ಲದೆ, ಅಂತರ್ಜಾಲವನ್ನು ಹಲವು ಸೇವೆಗಳ ಗೊಂಚಲು (ಒಟಿಟಿ) ಎಂದು ವ್ಯಾಖ್ಯಾನಿಸಿ ಅವುಗಳಿಗೆ ಪರವಾನಗಿ ಪಡೆಯಬೇಕು ಎಂದು ನಿರ್ಧರಿಸುವುದರಿಂದ ಅಂತರ್ಜಾಲವು ತನ್ನ ಈಗಿರುವ ತೆರೆದ ಸ್ವರೂಪದಿಂದ ಮುಚ್ಚಿದ ಸ್ವರೂಪಕ್ಕೆ ಬರುತ್ತದೆ. ಇಂಟರ್ ನೆಟ್ ಬೆಳೆದಿರುವುದೇ ತನ್ನ ತೆರೆದ ಗುಣದಿಂದಾಗಿ, ಪರವಾನಗಿಯಿಲ್ಲದ ಆವಿಷ್ಕಾರದಿಂದಾಗಿ.
ವಿಶ್ವದಾದ್ಯಂತ ಇಂಟರ್ ನೆಟ್ ಕಂಪನಿಗಳು ದಿಢೀರ್ ಲಾಭಗಳಿಸಿ ದೈತ್ಯರೂಪದಲ್ಲಿ ಬೆಳೆಯುತ್ತಿರುವುದನ್ನು ಟೆಲಿಕಾಂ ಕಂಪನಿಗಳು ತಮ್ಮ ಕಾಮಾಲೆ ಕಣ್ಣುಗಳಿಂದ ನೋಡುತ್ತಿವೆ. ದೂರಸಂಪರ್ಕ ಸೌಲಭ್ಯ ಒದಗಿಸಲು ತಾವು ಮೂಲಸೌಲಭ್ಯವನ್ನು ನಿರ್ಮಿಸಿರುವುದರಿಂದ ತಮಗೂ ಇಂಟರ್ ನೆಟ್ ಸೇವೆಗಳಲ್ಲಿ ಪಾಲು ಬೇಕೆಂದು, ಇಲ್ಲದಿದ್ದಲ್ಲಿ ತಾವು ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಕಷ್ಟವೆಂದು ವಾದಿಸುತ್ತಿವೆ. ಆದರೆ ಇದೇ ಟೆಲಿಕಾಂ ಕಂಪನಿಗಳು ಅವು ಪ್ರಸ್ತುತ ಒದಗಿಸುತ್ತಿರುವ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳಲ್ಲಿ ನಷ್ಟವಾಗುತ್ತಿರುವುದರಿಂದ ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ, ಪ್ರಸ್ತುತ ಸೇವೆಗಳಿಂದಲೇ ಅವು ಸಿಕ್ಕಾ ಪಟ್ಟೆ ಲಾಭಗಳಿಸುತ್ತಿವೆ, ಆದರೆ ಇನ್ನಷ್ಟು ಲಾಭಕ್ಕಾಗಿ ಹವಣಿಸುತ್ತಿವೆ.
ಜಾಲದಲ್ಲಿ ಸಮಾನತೆ ಕುಸಿದುಬಿದ್ದರೆ, ಟೆಲಿಕಾಂ ಕಂಪನಿಗಳು ತಮ್ಮ ಮೂಲಸೌಲಭ್ಯ ಮತ್ತು ಬ್ಯಾಂಡ್ ವಿಡ್ತ್ ಗಳನ್ನು ವಿಸ್ತರಿಸುವ ಗೋಜಿಗೆ ಹೋಗುವುದಿಲ್ಲ. ಬ್ಯಾಂಡ್ ವಿಡ್ತ್ ವಿಸ್ತರಣೆಯಾಗದೇ ಹೋದರೆ, ದತ್ತಾಂಶಗಳ ಹರಿವಿಗೆ ಅಡೆತಡೆಯಾಗುತ್ತದೆ. ದೊಡ್ಡ ಇಂಟರ್ ನೆಟ್ ಕಂಪನಿಗಳು ತಮ್ಮ ದತ್ತಾಂಶ ಪೊಟ್ಟಣಗಳನ್ನು ವೇಗವಾಗಿ ರವಾನಿಸಲು ಟೆಲಿಕಾಂ ಕಂಪನಿಗಳಿಗೆ ಹೆಚ್ಚುವರಿ ಹಣ ನೀಡುತ್ತವೆ. ಹಾಗಾಗಿ, ಜಾಲದಲ್ಲಿ ಸಮಾನತೆಯು ಟೆಲಿಕಾಂ ಕಂಪನಿಗಳು ಮೂಲಸೌಲಭ್ಯ ವಿಸ್ತರಿಸಲು ಪ್ರೋತ್ಸಾಹ ನೀಡುತ್ತದೆ, ದತ್ತಾಂಶ ಟ್ರಾಫಿಕ್ ಸುಲಭವಾಗಿ ಹರಿಯಲು ದಾರಿ ಮಾಡುತ್ತದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್ ನೆಟ್ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್ ನೆಟ್ ಸೇವೆಗಳು ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.
******
ಪ್ರಶ್ನೋತ್ತರಗಳು:
1. ನೆಟ್ ನ್ಯೂಟ್ರಾಲಿಟಿ ಅಥವಾ ಜಾಲದಲ್ಲಿ ಸಮಾನತೆ ಎಂದರೇನು?
ಜಾಲದಲ್ಲಿ ಹರಿವ ದತ್ತಾಂಶದ ಮೂಲ, ಮಾಲೀಕತ್ವ, ಅಥವಾ ವಿಷಯಗಳ ಆಧಾರದ ಮೇಲೆ ವಿವಿಧ ವೆಬ್ ಸೈಟ್ ಗಳ ನಡುವೆ ತಾರತಮ್ಯ ಮಾಡಬಾರದು, ಎಲ್ಲ ವೆಬ್ ಸೈಟ್ ಗಳು ಒಂದೇ ವೇಗದಲ್ಲಿ ಡೌನ್ ಲೋಡ್ ಆಗಬೇಕು, ಎಲ್ಲ ಜಾಲತಾಣಗಳನ್ನು ಬಳಸಲು ಸಮಾನ ಅವಕಾಶ ಇರಬೇಕು & ಒಂದೇ ದತ್ತಾಂಶ ವೆಚ್ಚ ವಿಧಿಸಬೇಕು ಎಂಬುದೇ 'ಜಾಲದಲ್ಲಿ ಸಮಾನತೆ' ಯ ಪರಿಕಲ್ಪನೆ. ಅಂದರೆ, ಭೌತಿಕ ಜಾಲಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ಜಾಲಗಳ ಮೇಲೆ ಹರಿಯುವ ಇಂಟರ್ನೆಟ್ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು.
2. ಜಾಲದಲ್ಲಿ ಸಮಾನತೆ ಇದೀಗ ಸುದ್ದಿಯಲ್ಲಿರುವುದು ಏಕೆ?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್ ನೆಟ್ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಇದು ಸಾಕಷ್ಟು ವಿವಾದ ಸೃಷ್ಟಿಸಿದ್ದು ಚರ್ಚೆ ಹುಟ್ಟುಹಾಕಿದೆ.
3. ಹೆಚ್ಚುವರಿ ಸೇವೆಗಳು (ಒಟಿಟಿ) ಎಂದರೇನು?
ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್ ನೆಟ್ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸಿ, ಇಂಟರ್ ನೆಟ್ ನ್ನು ವ್ಯಾಪಾರೀಕರಣ ಮಾಡುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ಮೆಸ್ಸೆಂಜರ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..
4. ಜಾಲದಲ್ಲಿ ಸಮಾನತೆಯಿಂದ ಯಾರಿಗೆ ಲಾಭ?
ಜಾಲದಲ್ಲಿ ಸಮಾನತೆಯಿಂದ ಸರ್ವರಿಗೂ ಇಂಟರ್ ನೆಟ್ ನ ಸೇವೆ ಯಾವುದೇ ದರದ ತಾರತಮ್ಯಗಳಿಲ್ಲದೇ ಲಭ್ಯವಾಗುತ್ತದೆ. ಇದು ಜನಸಾಮಾನ್ಯರಿಗೂ ನೆಟ್ ಬಳಕೆದಾರರಿಗೂ ಸಣ್ಣ ಮತ್ತು ಮಧ್ಯಮ ನೆಟ್ ಕಂಪನಿಗಳಿಗೂ ಅನುಕೂಲಕರ. ಜಾಲದಲ್ಲಿ ಸಮಾನತೆ ಇಲ್ಲದಿದ್ದಲ್ಲಿ, ಹೆಚ್ಚು ಲಾಭ ಮಾಡಲು ಅತಿದೊಡ್ಡ ಇಂಟರ್ ನೆಟ್ ಮತ್ತು ಟೆಲಿಕಾಂ ಕಂಪನಿಗಳಿಗೆ ಅನುಕೂಲಕರ.
5. ಜಾಲದಲ್ಲಿ ಸಮಾನತೆಯ ಖಾತರಿಗಾಗಿ ನಾವೇನು ಮಾಡಬೇಕು?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್ ನೆಟ್ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್ ನೆಟ್ ಸೇವೆಗಳು ಲಾಭಕೋರ ಕಂಪನಿಗಳ ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.
**************
net nutrality ಬಗ್ಗೆ ಇಂಗ್ಲೀಷಿನಲ್ಲಿ ಹಲವು ಲೇಖನಗಳು ಮೂಡಿಬಂದಿದ್ದವು. ಕನ್ನಡಿಗರಿಗೆ ಈ ಬಗ್ಗೆ ಪರಿಚಯಿಸಲು ಪ್ರಾರಂಭಿಸಿದ ನಿಮ್ಮೀ ಅಂಕಣದಿಂದ ಲಭಿಸಿದ ಮಾಹಿತಿಗೆ ವಂದನೆಗಳು 🙂