‘ಕೊರಿಯೋ’ಗ್ರಾಫರ್: ಗುರುಪ್ರಸಾದ ಕುರ್ತಕೋಟಿ


’ಸುರದು ಊಟ ಮಾಡಬೇಕು ಗೊರದು ನಿದ್ದೆ ಮಾಡಬೇಕು’ ಅಂತ  ಹಳ್ಳಿ ಕಡೆ ಹೇಳತಾರೆ. ಅದರರ್ಥ ’ಸೊರ ಸೊರ’ ಅಂತ ಸದ್ದು ಮಾಡುತ್ತ, ಅದು ಹುಳಿಯೋ, ಸಾರೋ ಅದೇನೇ ಇದ್ದರೂ ಅದನ್ನು ಸೊರ ಸೊರನೆ ಸವಿದು ಊಟ ಮಾಡಬೇಕು. ಹಾಗೂ ಗೊರಕೆ ಹೊಡೆಯುತ್ತ ನಿದ್ದೆ ಮಾಡಬೇಕು, ಅದೇ ಗಡದ್ದಾದ ನಿದ್ದೆ ಅನ್ನೋದು ಈ ಹೇಳಿಕೆಯ ಹಿಂದಿರುವ ಅರ್ಥ. ಸುರದು ಹೊಟ್ಟೆ ಬಿರಿಯುವಂತೆ ಊಟ ಮಾಡಿದ ಮೇಲೆ ಗೊರಕೆ ಹೊಡೆಯುವಂತಹ ನಿದ್ದೆ ಬರದೇ ಇನ್ನೇನು? ಆದರೆ ಆ ಎರಡೂ ಕ್ರಿಯೆಗಳಿಂದ ಬೇರೆಯವರ ಮನಶ್ಯಾಂತಿ ಹಾಗೂ ನೆಮ್ಮದಿ ಭಂಗವಾಗುವುದಂತೂ ಸೂರ್ಯ ಚಂದ್ರರಿರುವಷ್ಟೇ ಸತ್ಯ. 

ಇವೆರಡರ ಜೊತೆಗೆ ಇನ್ನೊಂದನ್ನೂ ಕೆಲವು ಜನ ರೂಢಿಸಿಕೊಂಡಿರುತ್ತಾರೆ. ಅದೆಂದರೆ ’ಕೊರೆದು ಮಾತಾಡಬೇಕು’ ಅಂತ! ಕೊರೆದು ಅಂದರೆ ತಲೆಬುರುಡೆಯೊಳಗೆ ಸುರಕ್ಷಿತವಾಗಿರುವ ಮೆದುಳನ್ನೂ ಹರಿದು, ಹುರಿದು ತಿನ್ನೋದು ಅಂತಲೇ ಅರ್ಥ. ಉತ್ತರ ಕರ್ನಾಟಕದಲ್ಲಿ ಒಂದು ವಿಚಿತ್ರವಾದ ಹಾಗೂ ಎಷ್ಟೋ ಸರ್ತಿ ವಿರುದ್ಧ ಅರ್ಥ ಕೊಡುವ ವಿಶೇಷಣವೊಂದನ್ನು ಜನ ಬಳಸುತ್ತಾರೆ. ಆ ಪದವೇ ’ಕೆಟ್ಟ’ ಅಂತ. ಉದಾಹರಣೆಗೆ, ನೀ ಇವತ್ತ ಕೆಟ್ಟ ಸ್ಮಾರ್ಟ್ ಕಾಣಾಕತ್ತಿ ನೋಡಲೆ ಅಂತ ಯಾವನೋ ಅಂದರೆ ಅದರರ್ಥ ಇನ್ನೊಬ್ಬ ವ್ಯಕ್ತಿ ಸಿಕ್ಕಾಪಟ್ಟೆ ಸ್ಮಾರ್ಟ್ ಕಾಣುತ್ತಿದ್ದಾನೆ ಅಂತಲೇ ಹೊರತು ಕೆಟ್ಟದಾಗಿ ಅಂತಲ್ಲ! ಆದರೆ ವಿಶೇಷವೆಂದರೆ ’ಕೆಟ್ಟ’ ಮತ್ತು ’ಸ್ಮಾರ್ಟ್’ ಗಳು ವಿರುದ್ಧ ಅರ್ಥ ಕೊಡುವ ಪದಗಳು. ಅದೇ ಸಿಕ್ಕಾಪಟ್ಟೆ ಮಾತಾಡಿ, ಮೆದುಳಿಗೆ ಕೈ ಹಾಕುವವರನ್ನು ಕೆಟ್ಟ ಕೊರಿತಾನೋ ಮಾರಾಯಾ ಅಂತಾರೆ. ಇಲ್ಲಿ ಮಾತ್ರ ’ಕೆಟ್ಟ’ ಅನ್ನುವ ಪದ ಸರಿಯಾದ ವಿಶೇಷಣವಾಗಿ ಬಳಕೆಯಾಗುತ್ತದೆ!  

ಇಂತಹ ಒಂದು ಕೊರಕತನ ಪುಟ್ಯಾಗೆ ಬಂದ ಪ್ರಕೃತಿ ದತ್ತ ಕೊಡುಗೆ. ಅವನು ಹುಟ್ಟಾ ಕೊರಕನೇ! ಸಿಕ್ಕಾಪಟ್ಟೆ ಕುಡಿಯವ್ರಿಗೆ ಹುಟ್ಟಾ ಕುಡುಕಾ ಅಂತಾರಲ್ಲ ಹಂಗೆ. ಹೀಗೆ ತನ್ನ ಸಹಜ ಕೊರೆಯುವ ಕಲೆಯನ್ನು ಧಾರಾಳವಾಗಿ ಸಿಕ್ಕ ಸಿಕ್ಕವರೆದುರುವ ಪ್ರದರ್ಶಿಸುವ ಇವನಿಗೆ, ಮಾತಾಡಲು ಯಾವುದೆ ನಿರ್ದಿಷ್ಟ ವಿಷಯವೇ ಬೇಕೆಂದೇನಿಲ್ಲ, ಯಾವುದೇ ವಸ್ತುವಾದರೂ ನಿರರ್ಗಳವಾಗಿ ಕೊರೆಯಬಲ್ಲ. ಅದು ಕ್ರಿಕೆಟ್ ಇರಬಹುದು, ವಿಜ್ಞಾನದ ಅವಿಷ್ಕಾರವಿರಬಹುದು, ಅಡುಗೆ ಬಗ್ಗೆ… ಏನೇನೆ ಇದ್ದರೂ ನಿಭಾಯಿಸಬಲ್ಲ ವಾಕ್ ಚಾತುರ್ಯ ಅವನದು. ಚಿಕ್ಕವನಿದ್ದಾಗಲೂ ತನಗಿಂತಲೂ ವಯಸ್ಸಿನಲ್ಲಿ ಹಾಗೂ ಬುದ್ಧಿಮಟ್ಟದಲ್ಲಿ ದೊಡ್ಡವರಾದವರ ಮಧ್ಯವೇ ಕುಳಿತು ಯಾವುದೇ ವಿಷಯದ ಬಗ್ಗೆ ತನ್ನ ಒಂದೆರಡು ಅಕ್ಕಿ ಕಾಳು ಹಾಕಿ, ತಾನೊಬ್ಬ ಮಹಾ ಅಧಿಕಪ್ರಸಂಗಿ ಎಂಬ ವಿಶೇಷಣವ ಗಳಿಸಿದ್ದು ಅವನ ದೊಡ್ಡ ಸಾಧನೆಗಳಲ್ಲೊಂದು! ಅವನ ಇನ್ನೊಂದು ಬಲಹೀನತೆಯೆಂದರೆ ಹೇಳಿದ್ದೇ ಮತ್ತೆ ಮತ್ತೆ ಹೇಳುವುದು. ಬೇರೆಯವರಿಗೆ ಕಷ್ಟವಾಗಬಹುದು ಎಂಬ ಕನಿಷ್ಟ ಜ್ನಾನವೂ ನಿನಗಿಲ್ಲವೇ? ಎಂದು ಒಬ್ಬ ಅವನ ಹತ್ತಿರ ಕೇಳಿ ಅದರ ಬಗ್ಗೆ ಒಂದಿಷ್ಟು ಕೊರೆಸಿಕೊಂಡು ತನ್ನ ಅಧಿಕಪ್ರಸಂಗಕ್ಕೆ ತನ್ನನ್ನೇ ಹಳಿದುಕೊಂಡ. ಹೀಗಾಗಿ ಎಲ್ಲರೂ ಸೇರಿ ಈ ಅಖಂಡ ಮೆದುಳು ಭಕ್ಷಕನಿಗೆ ‘ಕೊರಿಯೊ’ಗ್ರಾಫರ್ ಅಂತ ನಾಮಕರಣ ಮಾಡಿ ಅವನಿಂದ ಆದಷ್ಟು ದೂರವೇ ಇರುತ್ತಿದ್ದರು.

ಮೊದಲೇ ಹೇಳಿದಂತೆ ಅವನಿಗೆ ಯಾವುದೇ ವಿಷಯ ಗೊತ್ತಿಲ್ಲದಿರುವ ಸಾಧ್ಯತೆಗಳೇ ಇಲ್ಲ. ಉದಾಹರಣೆಗೆ ಯಾರೊ ಕಾರಿನ ವಿಷಯ ತೆಗೆದರೋ ಮುಗೀತು ಅವರ ಕತೆ! ಜೀವಮಾನದಲ್ಲಿ ಕಾರನ್ನೇ ಓಡಿಸದ ಆತ ಯಾವ ಯಾವ ಮಾಡೆಲ್ ಕಾರುಗಳು ಜಗತ್ತಿನಲ್ಲಿ ಇವೆ, ಯಾವುದರ ಅಶ್ವ ಶಕ್ತಿ ಎಷ್ಟು, ಅವುಗಳ ಮೈಲೇಜ್ ಏನು, ಪೆಟ್ರೋಲ್ ಕಾರಿನ ಮುಂದೆ ಡಿಸೇಲ್ ಕಾರು ಹೇಗೆ ಉತ್ತಮವಾದದ್ದು, ಅದು ಇದು ಸುಟ್ಟು ಸುಡಗಾಡು ಎಲ್ಲಾ ಹೇಳಲು ಶುರು ಮಾಡುತ್ತಾನೆ. ಕೇಳುಗರು ಇತ್ತ ಕೇಳಲೂ ಆಗದೆ, ಓಡಲೂ ಆಗದೆ ಅವನ ಮಾತಿನ ಕೊರೆತಕ್ಕೆ  ಸಿಕ್ಕು ವಿಲಿ ವಿಲಿ ಒದ್ದಾಡುತ್ತಾರೆ. ಆದರೆ ಬೇಕು ಅಂತಲೇ ಕಾರಿನ ವಿಷಯ ತೆಗೆದು ಅವನು ಹೇಳುವಾಗ ಮುಸು ಮುಸು ನಗುತ್ತ ಮಜಾ ತೆಗೆದುಕೊಳ್ಳುವವರೂ ಇದ್ದಾರೆ. ಅವರು ಇವನಿಗೊಂದು ವಿಷಯ ಕೊಟ್ಟು ನಗುನಗುತ್ತ ನಲಿಯುವವರು!   

ಅವನ ಇನ್ನೊಂದು ವೈಶಿಷ್ಟ್ಯವೆಂದರೆ ಯಾವುದೇ ವಿಷಯ ಅವನು ಒಪ್ಪಿಕೊಂಡದ್ದೇ ಇಲ್ಲ. ಒಪ್ಪಿಕೊಂಡರೆ ಸಂಭಾಷಣೆ ಮುಂದುವರಿಯುವುದಾದರೂ ಹೇಗೆ… ಅಲ್ಲವೆ?  ಒಬ್ಬ ಅವನ ಮುಂದೆ ದೇವರು ಇಲ್ಲ ಅಂದಿದ್ದಕ್ಕೆ ಇದ್ದಾನೆ ಅಂತ ಅವನು ಒಂದು ಗಂಟೆ ಕೊರೆದಿದ್ದ. ಇನ್ನೊಂದು ಸಲ ದೇವರ ಬಗ್ಗೆ ಇವನ ಅಭಿಪ್ರಾಯ ಹೀಗೇ ಎಂದು ಗೊತ್ತಿದ್ದ ಇನ್ನೊಬ್ಬ ದೇವರು ಇದ್ದಾನೆ ಅಂದಿದ್ದಕ್ಕೆ ಇವನು ಇಲ್ಲ ಅಂತ ವಾದಿಸಿದ್ದ! ಒಟ್ಟಿನಲ್ಲಿ ಇತಿ ಅಂದ್ರೆ ಪ್ರೇತಿ ಅನ್ನೋ ಜಾತಿ…

ಇತ್ತೀಚೆಗಂತೂ ಅವನು ಕೆಲವು ಸಂಸ್ಕೃತ ಶ್ಲೋಕಗಳನ್ನೂ ಕಲಿತುಬಿಟ್ಟಿದ್ದ. ಯಾವುದೇ ಒಂದು ವಿಚಾರ ಹೇಳುವಾಗಲೂ ಒಂದು ಶ್ಲೋಕ ಹೇಳಿ ಅದರ ಅರ್ಥ ವಿವರಿಸುತ್ತಿದ್ದ. ಒಂದು ಸಲವಂತೂ ಕುಲಕಸುಬು ಅಂತ ಮಾಡಿಕೊಂಡಿದ್ದ ಭಟ್ಟರೊಬ್ಬರಿಗೆ ಯಾವುದೋ ಒಂದು ಶ್ಲೋಕದ ಅರ್ಥ ಗೊತ್ತೇ ಅಂತ ಕೇಳಿದ. ಹೊಟ್ಟೆಪಾಡಿಗೆ ಅಂತ ಕೆಲವು ಮಂತ್ರಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ಭಟ್ಟರಿಗೆ ಉಗುಳು ಗಂಟಲ ಮಧ್ಯೆ ಸಿಕ್ಕಿಕೊಂಡುಬಿಟ್ಟಿತು. ಅವರಿಗೆ ಆ ಶ್ಲೋಕದ ಅರ್ಥ ವಿವರಿಸಿದ. ಅಲ್ಲಿ ಯಾರಿಗೂ ಅದರ ಅರ್ಥ ಗೊತ್ತಿರಲಿಲ್ಲ ಆದ್ದರಿಂದ ಅವನು ವಾದಕ್ಕೆ ಪ್ರತಿವಾದಿಗಳೇ ಇರಲಿಲ್ಲ. ಭಟ್ಟರು ಬೆವರೊರೆಸಿಕೊಂಡು ಅವನಿಂದ ಹೇಗೋ ತಪ್ಪಿಸಿಕೊಂಡರು.  

ಅವನೇನಾದರೂ ಪೋಲಿಸ್ ಆಗಿದ್ದಿದ್ದರೆ ಅಧೋಗತಿಯಾಗುತ್ತಿತ್ತು! ಸಾಮಾನ್ಯವಾಗಿ ಪೊಲೀಸರು ಒಬ್ಬರಿಗೊಬ್ಬರು ವಾಕಿ-ಟಾಕಿ ಯಲ್ಲೇ ಮಾತಾಡೋದು. ಒಬ್ಬ ಮಾತಾಡಿ ಓವರ್ ಅಂದ ಮೇಲೆ ಇನ್ನೊಬ್ಬ ಮಾತಾಡೋದು ಸಹಜ ಪ್ರಕ್ರಿಯೆ. ಇವನ ಕೈಗೆ ಹಾಗೆ ಒಂದು ವಾಕಿ-ಟಾಕಿ ಕೊಟ್ಟಿದ್ದರೆ, ಇವನು ಓವರ್ ಅನ್ನುತ್ತಲೇ ಇರಲಿಲ್ಲ. ಯಾಕೆಂದರೆ ಬೇರೆಯವರಿಗೆ ಅವಕಾಶ ಕೊಡೊ ಗಿರಾಕಿನೆ ಅಲ್ಲ! ಫೋನಿನಲ್ಲೂ ಅಷ್ಟೇ, ಅಲ್ಲಿ ಮಾತಾಡುತ್ತಿದ್ದುದು ಅವನೊಬ್ಬನೇ. ಅವನು ಆಕಾಶವಾಣಿ ಇದ್ದ ಹಾಗೆ. ಅವನು ಮಾತನಾಡಬೇಕು ಉಳಿದವರು ಕೇಳಬೇಕು. ರೇಡಿಯೋ ಆರಿಸಬಹುದು ಇವನನ್ನು ಆರಿಸುವುದು ಹೇಗೆ? ಇವನ ಕೊರೆತವನ್ನು ಬಿಡಿಸುವುದು ಹೇಗೆ ಎಂಬ ಸಮಸ್ಯೆಗೆ ಯಾರಿಗೂ ಏನೂ ಹೊಳೆಯಲಿಲ್ಲ. ಕೆಲವರೂ ಅವನಿಗೆ ಎದುರ ಬದರ ಬೈಯ್ಯತೊಡಗಿದರು. ಅದಕ್ಕೆ ಅವನು ಸೊಪ್ಪೇ ಹಾಕಲಿಲ್ಲ. ಹೆಂಗೋ ಸಂಭಾಳಿಸಿಕೊಂಡರು. ಕೆಲವರು ಓಡಿ ಹೋದರು. ಮತ್ತೆ ಕೆಲವರು ಕಿವಿಯಲ್ಲಿ ಹತ್ತಿ ತುರುಕಿಕೊಂಡರು. ಇನ್ನೂ ಕೆಲವರು ತಲೆ ಚಚ್ಚಿಕೊಂಡು ಸಹಿಸಿಕೊಂಡರು. ಪುಟ್ಯಾನ ಕೊರೆತ ಮಾತ್ರ ಸಾಂಗವಾಗಿ ನಡೆದಿತ್ತು.
    
ಅವತ್ತು ಎಷ್ಟೋ ತಿಂಗಳ ನಂತರ ಪುಟ್ಯಾನನ್ನು ಅವನ ಗೆಳೆಯ ಮಂಜ್ಯಾ ಭೇಟಿಯಾಗಿದ್ದ. ಮಂಜ್ಯಾ ಕೆಲಸಕ್ಕೆ ಅಂತ ಬೇರೆ ಊರಿಗೆ ಹೋದವನು, ಯಾವುದೊ ಕಾರಣಕ್ಕೆ ತನ್ನೂರಿಗೆ ಬಂದಿದ್ದ. ಇವನ ಕೊರೆತದ ಬಗ್ಗೆ ಗೊತ್ತಿದ್ದ ಅವನು ಮೊದಲೇ ಜಾಗೃತನಾಗೆ ಇದ್ದ. ಅವನ ಕೊರೆತ ಜಾಸ್ತಿಯಾದರೆ ಏನಾದರೂ ಹೇಳಿ ತಪ್ಪಿಸಿಕೊಳ್ಳಲು ಹಲವಾರು ನೆಪಗಳ ಸಿದ್ಧತೆ ಮಾಡಿಕೊಂಡೆ ನಿಂತಿದ್ದ. ಆದರೆ ಉಭಯ ಕುಶಲೋಪರಿಗಳಾಗಿ ಮತ್ತೆನಪಾ ಸುದ್ದಿ ಅಂದ್ರೆ ಏನೂ ಇಲ್ಲಪಾ ಎಲ್ಲಾ ನಿಂದ ಅಂತ ಅಷ್ಟಕ್ಕೇ ಮಾತು ಮುಗಿಸಿಬಿಡೋದೇ? ಪುಟ್ಯಾ, ಮೌನಿ ಬಾಬಾ ಆಗಿದ್ದ! ತನಗರಿವಿಲ್ಲದೆ ಅವನು ಸನ್ಯಾಸ ಸ್ವೀಕಾರ ಮಾಡಿಬಿಟ್ಟನೇ? ಅಂತ ಮಂಜ್ಯಾಗೆ ಅನಿಸಿತು. ಅವನಿಗೆ ಏನೂ ಹೊಳೆಯದಾಯ್ತು. ಇದು ನಿಜವಾಗಿಯೂ ಪುಟ್ಯಾ ನೆ? ಅನ್ನುವ ಸಂಶಯ ಅವನ ಕಾಡತೊಡಗಿತು. ಪುಟ್ಯಾ ಕೊರೆಯೋದು ಬಿಟ್ಟಿದ್ದು ಜೋಗ ಜಲಪಾತದಲ್ಲಿ ನೀರಿಲ್ಲದೆ ಖಾಲಿ ಖಾಲಿ ಎನಿಸತೊಡಗಿತು. ಅಷ್ಟರಲ್ಲೇ ಪುಟ್ಯಾಗೆ ಒಂದು ಫೋನ್ ಬಂತು. ಇವನು ಹೂಂ ಗುಡುತ್ತಿದ್ದ. ಅರ್ಧ ಗಂಟೆಯಾದರೂ ಇವನ ಬಾಯಿಂದ ಬರೀ  “ಹೂಂ… ಇಲ್ಲ…. ಆತ ಆತು… ಹಂಗ ಆಗ್ಲಿ…” ಅನ್ನುವಂತಹ ಪದಗಳ ಬಿಟ್ಟು ಬೇರೇನೂ ಮಾತೆ ಬರುತ್ತಿಲ್ಲ. ಮೊದಲೆಲ್ಲ ಫೋನಿನಲ್ಲಿ ಬೇರೆಯವರಿಗೆ ಮಾತಾಡಲು ಅವಕಾಶವನ್ನೇ ಕೊಡದಿದ್ದ ಮನುಷ್ಯ ಈಗ ಹಿಂಗಾದದ್ದು ಪವಾಡವೇ ಸರಿ ಅನಿಸಿತು ಮಂಜ್ಯಾಗೆ. ಕೊನೆಗೂ ಫೋನಿನ ಕರೆ ನಿಂತಿತು. ಪುಟ್ಯಾ ನಿಟ್ಟುಸಿರು ಬಿಟ್ಟ. ಸಹಜ ಕುತೂಹಲದಿಂದ ಮಂಜ್ಯಾ ಕೇಳಿದ. ಯಾರ್ದಲೇ ಫೋನು? ಪುಟ್ಯಾ ಉತ್ತರಿಸಿದ ನನ್ನ ಹೆಂಡತೀದು! ಆಗಲೇ ಮಂಜ್ಯಾಗೆ ಅವನ ಮದುವೆಯಾಗಿರುವ ವಿಷಯ ಗೊತ್ತಾಗಿದ್ದು, ಮತ್ತು ಇವನ ಕೊರೆತಕ್ಕೆ ಆಣೆಕಟ್ಟು ಕಟ್ಟಿದವರು ಯಾರೆಂಬ ಗುಟ್ಟು ರಟ್ಟಾಗಿದ್ದು! 

‘ಇನ್ನ ಮುಂದ ಪುಟ್ಯಾನ ಹೆದರಿಕಿ ಇಲ್ಲದಂಗ ಮಾತಾಡಸಬಹುದು’ ಅನ್ನುವ ಮೆಸ್ಸೇಜು ತನ್ನ ಗೆಳೆಯರ ಬಳಗಕ್ಕೆ ಕಳಿಸಿದ ಮಂಜ್ಯಾನ ಮುಖದಲ್ಲಿ ಒಂದು ಬಗೆಯ ಸಂತಸವಿತ್ತು!!        

-ಗುರುಪ್ರಸಾದ ಕುರ್ತಕೋಟಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
umesh desai
8 years ago

ಖರೆ ಅದ ಹೆಂಡತಿ ಎಲ್ಲಾ ರೋಗಕ್ಕೂ ಔಷಧ

ಗುರುಪ್ರಸಾದ ಕುರ್ತಕೋಟಿ
ಗುರುಪ್ರಸಾದ ಕುರ್ತಕೋಟಿ
8 years ago
Reply to  umesh desai

ದೇಸಾಯ್ರ, ಅದಕ … ಹೆಂಡತಿಗೆ ಒಂದ alternative ಇದ್ರ ಅದು ಸರಾಯಿ ಅನ್ನೋಣವೇ?

vitthal Kulkarni
vitthal Kulkarni
8 years ago

ಮದ್ಲ ಕೊರಿಯೋ ಗ್ರಾಫಿ ಭಾಳಾಅತು! ಕಡಿಕ ಭಾಳ ಗಡಿಬಿಡಿಯೊಳಗ ಮುಗಿಸಿದ್ರಿ… ಆದ್ರು ಛೊಲೊಅನಸ್ತು! 

ಗುರುಪ್ರಸಾದ ಕುರ್ತಕೋಟಿ
ಗುರುಪ್ರಸಾದ ಕುರ್ತಕೋಟಿ
8 years ago

ವಿಠಲ, ಹಂಗಂದ್ರ ಕೊರಿಯೋದು ಮುಂದುವರಿಸಿ, ಇನ್ನೊಂದು ಭಾಗ ಬರೀಬೇಕಾತು!

g.w.carlo
g.w.carlo
8 years ago

ಪುಟ್ಯಾನ ಕತೆ ಒಂದು ಅಪವಾದ ಗುರುಪ್ರಸಾದ್. ನನ್ನೊಬ್ಬ ಲೇಖಕ ಮಿತ್ರ ನನ್ನ ಹೆಂಡತಿ ಊಟಕ್ಕೆ ಕರೆಯುವ ಸಮಯಕ್ಕೇ ಫೋನಾಯಿಸುತ್ತಾನೆ. ನನಗೆ ಮಧ್ಯದಲ್ಲಿ 'ಹ್ಞಾ' 'ಊಂ' ಎನ್ನಲೂ ಜಾಗ ಕೊಡದೆ ಕೊರೆಯುತ್ತಿರುತ್ತಾನೆ. ಅವತ್ತು ನನಗೆ ತಂಗಳನ್ನ. ಅಂದ್ಹಾಗೆ ಅವನಿಗೆ ಮದುವೆಯಾಗಿದೆ!

5
0
Would love your thoughts, please comment.x
()
x