೨೦೧೫ ಡಿಸೆಂಬರ್ ಪ್ಯಾರೀಸ್ ಶೃಂಗಸಭೆಯ ಮುನ್ನ ಒಂದಿಷ್ಟು!!: ಅಖಿಲೇಶ್ ಚಿಪ್ಪಳಿ

ಈ ಬಾರಿ ಶಿವರಾತ್ರಿ ಕಳೆದ ಮೇಲೂ ಚಳಿ ಮುಂದುವರೆದಿತ್ತು. ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅಕಾಲಿಕ ಮಳೆ ಅಡಚಣೆಯಾಗಿ ಕಾಡಿತು. ಬಿಲ್ಲನ್ನು ಎಳೆದು ಬಿಟ್ಟಾಗ ಬಾಣ ನುಗ್ಗುವ ರೀತಿಯಲ್ಲಿ ಬೇಸಿಗೆ ದಾಪುಗಾಲಿಕ್ಕಿ ಬರುತ್ತಿದೆ. ಉಳ್ಳವರು ಸೆಖೆಯಿಂದ ಬಚಾವಾಗಲು ಹವಾನಿಯಂತ್ರಕದ ಮೊರೆ ಹೋಗುತ್ತಾರೆ. ಎಂದಿನಂತೆ ತಂಪುಪಾನೀಯಗಳ ಜಾಹಿರಾತು ಟಿ.ವಿಯಲ್ಲಿ ಧಾಂಗುಡಿಯಿಡುತ್ತಿವೆ. ಅಂಟಾರ್ಟಿಕಾವನ್ನು ನಾಚಿಸುವಂತೆ ತಣ್ಣಗೆ ಮಾಡುವ ರೆಪ್ರಿಜಿರೇಟರ್ ಭರಾಟೆಯೂ ವ್ಯೋಮಕ್ಕೆ ಜಿಗಿದಿದೆ. ಅತ್ತ ಪ್ಯಾರೀಸ್ ನಗರ ಡಿಸೆಂಬರ್ ತಿಂಗಳಿಗಾಗಿ ಕಾಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ೧೯೬ ದೇಶಗಳ ಸಾವಿರಾರು ಧುರೀಣರು, ವಿಜ್ಞಾನಿಗಳು, ಭಾಗಿದಾರರು, ಹೀಗೆ ಎಲ್ಲಾ ಕ್ಷೇತ್ರಗಳ ಮುಖ್ಯಸ್ಥರು ಏರುತ್ತಿರುವ ಭೂಬಿಸಿಯನ್ನು ನಿಯಂತ್ರಿಸುವಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ದೀಕ್ಷೆ ತೊಡಲು, ಜಾಗತಿಕ ಒಡಂಬಡಿಕೆಯನ್ನು ರೂಪಿಸಲು ತಯಾರಾಗಿದ್ದಾರೆ. ಇದರ ಮೇಲೊಂದಿಷ್ಟು ಬೆಳಕು ಚೆಲ್ಲೋಣವೆ?

ಇಡೀ ಜಗತ್ತು ಒಂದು ಅಪಾರ್ಟ್‌ಮೆಂಟ್ ಎಂದು ಭಾವಿಸಿಕೊಂಡರೆ,  ಈ ಅಪಾರ್ಟ್‌ಮೆಂಟಿನಲ್ಲ್ಲಿ ಹತ್ತಿರ ಇನ್ನೂರು ಫ್ಲಾಟ್‌ಗಳಿವೆ. ಕೆಲವು ಐಷಾರಾಮಿ ಫ್ಲಾಟ್‌ಗಳಾದರೆ, ಕೆಲವು ಫ್ಲಾಟ್‌ಗಳು ಐಷಾರಾಮಿತನಕ್ಕೆ ಜಿಗಿಯುವ ಹಂತದಲ್ಲಿರುವ ಫ್ಲಾಟ್‌ಗಳು, ಇನ್ನೂ ಕೆಲವು ಎಲ್ಲಾ ಸೌಲಭ್ಯಗಳು ಇಲ್ಲದ ಫ್ಲಾಟ್‌ಗಳು, ಇನ್ನೂ ಕೆಲವು ಎಲ್ಲಾ ಸೌಲಭ್ಯವಂಚಿತವಾದವು ಹಾಗೂ ಐಷಾರಾಮಿತನದಿಂದ ದೂರವುಳಿದವು. ಐಷಾರಾಮಿ ಫ್ಲಾಟ್‌ನಲ್ಲಿ ಆಧುನಿಕ ಸೌಲಭ್ಯಗಳು ತುಂಬಿ ತುಳುಕುತ್ತಿವೆ, ಈ ಫ್ಲಾಟ್‌ನಲ್ಲಿ ಮನುಷ್ಯೇತರ ಜೀವಿಗಳಿಗೆ ಅಷ್ಟಾಗಿ ಜಾಗವಿಲ್ಲ, ಇನ್ನೂ ಐಷಾರಾಮಿತನಕ್ಕೆ ಜಿಗಿಯುವ ಭಯಂಕರ ಲಾಲಸೆ ಹೊಂದಿರುವ ಫ್ಲಾಟ್‌ಗಳಲ್ಲಿ ಮನುಷ್ಯೇತರ ಜೀವಿಗಳು ಸ್ವಲ್ಪ ನೆಮ್ಮದಿಯಿಂದ ಬಾಳುತ್ತಿವೆ. ಕಡಿಮೆ ಸೌಲಭ್ಯ ಹಾಗೂ ಸೌಲಭ್ಯವಂಚಿತ ಫ್ಲಾಟ್‌ಗಳಲಿ ಮನುಷ್ಯೇತರ ಜೀವಿಗಳು ಸಮೃದ್ಧವಾಗಿವೆ. ಇಲ್ಲೊಂದು ಲೆಕ್ಕಾಚಾರವೂ ಇದೆ. ಐಷಾರಾಮಿ ಮನ:ಸ್ಥಿತಿಯ ಫ್ಲಾಟ್ ಮಾಲೀಕರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸೌಲಭ್ಯವಂಚಿತ ಫ್ಲಾಟ್‌ಗಳಲ್ಲಿರುವ ಸಂಪನ್ಮೂಲಗಳನ್ನು ಆಮಿಷವೊಡ್ಡಿ ಕೊಳ್ಳೆ ಹೊಡೆಯುತ್ತಿವೆ. ಈ ಪ್ರಕ್ರಿಯೆಯಲ್ಲಿ ಐಷಾರಾಮಿರಹಿತ ಪ್ಲಾಟ್‌ಗಳ ಇಡೀ ವ್ಯವಸ್ಥೆ ಶಿಥಿಲಗೊಳ್ಳುತ್ತದೆ. ಈ ಶಿಥಿಲಗೊಳ್ಳುವ ಪ್ರಕ್ರಿಯೆ ಹಾಗೆಯೇ ಮುಂದುವರೆದು ಅಪಾರ್ಟ್‌ಮೆಂಟಿನ ನೆಲಗಟ್ಟನ್ನೇ ದುರ್ಭಲಗೊಳಿಸುತ್ತದೆ, ಈ ಮೂಲಕ ಇಡೀ ಅಪಾರ್ಟ್‌ಮೆಂಟೇ ಕಾಲಕ್ರಮೇಣ ಉರುಳಿಹೋಗುತ್ತದೆ. 

೨೦೦೯ರಲ್ಲಿ ಕೋಪೆನ್‌ಹೇಗನ್‌ನಲ್ಲಿ ನಡೆದ ಜಾಗತಿಕ ಭೂತಾಪಮಾನದ ಶೃಂಗಸಭೆಯಲ್ಲಿ ಉತ್ತಮ ನಿರ್ಣಯಗಳನ್ನು ಅಂಗೀಕರಿಸಲು ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಅಂತಿಮ ಕ್ಷಣದಲ್ಲಿ ಬಲಿಷ್ಟ ದೇಶಗಳು ಪರಸ್ಪರ ಧೋಷಾರೋಪಣೆಯಲ್ಲಿ ತೊಡಗಿ ಎಲ್ಲಾ ನಿರ್ಣಯಗಳನ್ನು ಅಂಗೀಕರಿಸಲು ಆಗಿರಲಿಲ್ಲ. ಹವಾಮಾನ ವೈಪರೀತ್ಯವೆನ್ನುವುದು ಜಗತ್ತಿನ ಎಲ್ಲಾ ದೇಶಗಳ ಇಂಗಾಲಾಮ್ಲ ಹೊರಸೂಸುವಿಕೆ ಮಟ್ಟದಿಂದ ನಿರ್ಧಾರವಾಗುತ್ತದೆಯಾದ್ದರಿಂದ, ಎಲ್ಲಾ ದೇಶಗಳ ಸಹಕಾರ ಈ ಹೊತ್ತಿನ ತುರ್ತುಅಗತ್ಯವಾಗಿದೆ. ಅಮೇರಿಕಾ, ಚೀನಾ, ಭಾರತದಂತಹ ದೇಶಗಳು ಬೃಹತ್ ಪ್ರಮಾಣದಲ್ಲಿ ಇಂಗಾಲಾಮ್ಲವನ್ನು ವಾತಾವರಣಕ್ಕೆ ಸೇರಿಸುತ್ತವೆ. ಈ ಬೃಹತ್ ದೇಶಗಳ ರಾಜಕೀಯಸ್ಥರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತವಾದ ದೇಶಿಯ ಮಟ್ಟದ ಕಾನೂನು ರೂಪಿಸುವಲ್ಲಿ ಮುಂದಾಗಬೇಕು. ಅರಣ್ಯ ನಾಶ ತಡೆಯುವುದು ಹಾಗೂ ಕೃಷಿ ಚಟುವಟಿಕೆಯ ಮೂಲ ರೂಪುರೇಷೆಗಳನ್ನು ಬಿಸಿಯೇರಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರೂಪಿಸಬೇಕಾಗುತ್ತದೆ. ಕಡಿಮೇ ಭೂಮಿಯಲ್ಲಿ ಸಾವಯವ ರೀತಿಯಲ್ಲಿ ಆಹಾರೋತ್ಪನ್ನಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಹೊಸ-ಹೊಸ ಸಂಶೋಧನೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ವೈಯಕ್ತಿಕವಾಗಿ ಎಲ್ಲಾ ದೇಶಗಳು ತಮ್ಮದೇ ಆದ ಬಲವಾದ ನಿಲುವನ್ನು ತಳೆಯಬೇಕಾಗುತ್ತದೆ. ಬಡತನ ನಿರ್ಮೂಲನೆ, ಆರೋಗ್ಯ ಸುಧಾರಣೆ ಹಾಗೂ ಹವಾಮಾನ ಬದಲಾವಣೆಯ ಎಲ್ಲಾ ರೀತಿಯ ಸಂತ್ರಸ್ಥರಿಗೆ ಜೀವನ ಭದ್ರತೆ ಇತ್ಯಾದಿಗಳನ್ನು ಮುಖ್ಯವಾಗಿ ಪರಿಗಣಿಸಬೇಕಾಗಿದೆ. ಭುವಿಯ ಮೇಲಿನ ಜೀವಿವೈವಿಧ್ಯ ನಾಶ ತಡೆಯುವುದು ಹಾಗೂ ಜೀವಿಗಳ ಆವಾಸಸ್ಥಾನ ರಕ್ಷಣೆ ಇವುಗಳಿಗೆ ಆದ್ಯತೆ ನೀಡಬೇಕಾಗಿದೆ. ಪ್ರಶ್ನೆಯೇನೆಂದರೆ, ಹವಾಮಾನ ವೈಪರೀತ್ಯವನ್ನು ನಾವೆಷ್ಟು ಸಮರ್ಥವಾಗಿ ಎದುರಿಸಿ ಈ ಸುಂದರ ಗ್ರಹವನ್ನು ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ವಾಸಯೋಗ್ಯ ರೀತಿಯಲ್ಲಿ ಬಿಟ್ಟು ಹೋಗಬಹುದು ಎಂಬುದಾಗಿದೆ ಎಂದು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮರವರ ಕಾಳಜಿಯಾಗಿದೆ.  ಅಮೇರಿಕಾದ ಆರ್ಥಿಕತೆ ಈಗಾಗಲೇ ಭೂಬಿಸಿಯ ಏರುಪೇರುಗಳಿಂದ ಜರ್ಜರಿತವಾಗಿದೆ. ಮುಂದಿನ ೫ ರಿಂದ ೨೫ ವರ್ಷಗಳವರೆಗಿನ ಆರ್ಥಿಕ ಅಭಿವೃದ್ದಿಯ ಮೇಲೆ ಇದು ನಿಶ್ಚಿತವಾಗಿ ದುಷ್ಪರಿಣಾಮ ಬೀರಲಿದೆ ಎಂದು ಅಲ್ಲಿನ ಪತ್ರಿಕೆ ’ಬಿಸಿನೆಸ್ ರಿಸ್ಕ್’ ಪತ್ರಿಕೆ ಪ್ರಕಟಿಸಿದೆ. ಹಾಗಾದರೆ, ಎಲ್ಲಾ ದೇಶಗಳ ಪರಸ್ಪರ ಅಗತ್ಯವಾದ ಒಪ್ಪಂದಗಳ ಸ್ವರೂಪವೇನು? ೨೦೧೫ರ ಡಿಸೆಂಬರ್‌ನಲ್ಲಿ ನಡೆಯುವ ಜಾಗತಿಕ ಶೃಂಗ ಸಭೆಯ ಒಪ್ಪಂದಗಳು ಹಿಂದಿನ ಶೃಂಗಸಭೆಗಳ ಒಪ್ಪಂದಕ್ಕಿಂತ ಭಿನ್ನವಾಗಿರಬೇಕು. ಈ ಬಾರಿ ಸಾಮೂಹಿಕವಾದ ಕ್ರಿಯಾಯೋಜನೆಗಳಿಗೆ ಬದಲಾಗಿ ವೈಯಕ್ತಿಕವಾದ ದೇಶಿಯ ಕ್ರಿಯಾಯೋಜನೆ-ಒಡಂಬಡಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಇಂಗಾಲಾಮ್ಲ ಕಕ್ಕುವಿಕೆಯನ್ನು ತಡೆಗಟ್ಟುವಲ್ಲಿ ಬೇಕಾದ ಸಹಕಾರವನ್ನು ಜಾಗತಿಕ ಮಟ್ಟದಲ್ಲಿ ಗರಿಷ್ಟವಾಗಿ ನೀಡುವ ಹೊಣೆಯನ್ನು ಅಭಿವೃದ್ಧಿಹೊಂದಿದ ದೇಶಗಳು ಹೊರಬೇಕಾಗಿವೆ. 

೨೦೨೦ರ ಒಳಗೆ ಹಾಗೂ ೨೦೨೦ರ ನಂತರದಲ್ಲಿ ಭೂಬಿಸಿಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಕಾರ್ಯಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿದೇಶಗಳು ಹೆಜ್ಜೆಯಿಡಬೇಕಾಗಿದೆ. ೨೦೧೧ರ ಡರ್ಬಾನ್ ಶೃಂಗ ಸಭೆಯಲ್ಲಿ ೯೦ ದೇಶಗಳು ಇಂಗಾಲಾಮ್ಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಾಗಿ ಹೇಳಿದ್ದು ಇದುವರೆಗೂ ಬರೀ ಬಾಯಿಮಾತಿನಲ್ಲೇ ಉಳಿದುಕೊಂಡಿದ್ದು, ೨೦೧೫ರ ಒಡಂಬಡಿಕೆಯನ್ನು ಕಾರ್ಯರೂಪಕ್ಕಿಳಿಸುವಲ್ಲಿ ಎಲ್ಲರೂ ಬದ್ಧತೆ ಪ್ರದರ್ಶಿಸಬೇಕಾಗಿದೆ. ಅನಿಯಮಿತ ಇಂಗಾಲಾಮ್ಲ ಬಳಕೆಯ ದುಷ್ಪರಿಣಾಮಗಳನ್ನು ಗುರುತಿಸಿದ ಮೊಟ್ಟಮೊದಲ ತಲೆಮಾರು ನಮ್ಮದು. ಹಾಗೆಯೇ ಈ ದುಷ್ಪರಿಣಾಮಗಳನ್ನು ಮುಂದಿನ ಪೀಳಿಗೆಗೆ ದಾಟಿಸದೇ ಸರಿಪಡಿಸುವ ಮಹತ್ವದ ಜವಾಬ್ದಾರಿಯೂ ನಮ್ಮದೇ ಆಗಬೇಕು, ಈ ಗುರುತರವಾದ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿಯಾದ ಕ್ರಿಸ್ಟಿನಾ ಫಿಗರ್‍ಸ್ ೨೦೧೪ರ ಯು.ಎನ್.ಫ್ರೇಮ್‌ವರ್ಕ್ ಕ್ಲೈಮೇಟ್ ಚೆಂಜ್ ಕನ್‌ವೆನ್ಸ್ಷನ್ ಸಭೆಯಲ್ಲಿ ಹೇಳಿದ್ದಾರೆ. 

ಹವಾಮಾನ ವೈಪರೀತ್ಯ ಸಂಬಂಧದ ವಿಷಯಗಳು ಯಾವಾಗಲೂ ಜಾಗತಿಕ ಮಟ್ಟದಲ್ಲಿ ಸಂಕೀರ್ಣ ವಿಷಯಗಳೇ ಆಗಿರುತ್ತವೆಯಾದರೂ, ೨೦೧೫ ಸಭೆಯಲ್ಲಿ ಒಡಂಬಡಿಕೆಗೆ ಬರುವ, ಚರ್ಚಿತವಾಗುವ ಹಾಗೂ ನಿರ್ಣಯಗೊಳ್ಳುವ ವಿಷಯಗಳು ಆಶಾದಾಯಕವಾಗಿಯೇ ಇರುತ್ತವೆ ಎಂದು ಭಾವಿಸೋಣ. ಇದಕ್ಕೆ ಪೂರಕವಾಗಿ, ೨೦೧೩ರಲ್ಲಿ ಅಮೆರಿಕಾ ಮತ್ತು ಚೀನಾ ಜಂಟಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಹಸಿರು ಮನೆ ಇಂಗಾಲಾಮ್ಲಗಳ ಪರಿಣಾಮಗಳನ್ನು ಈರ್ವರೂ ಗುರುತ್ತಿಸಿದ್ದೇವೆ. ಈ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ದೂರಗಾಮಿ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ನಾವು ಪರಸ್ಪರ ಸಹಕಾರಿ ತತ್ವದಡಿಯಲ್ಲಿ ಮುಂದುವರೆಯಬೇಕಾಗಿದೆ. ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಹಾಗೂ ವಿದ್ಯುತ್ ಉತ್ಪಾದನ ಕ್ಷೇತ್ರದಲ್ಲಿ ಗಣನೀಯವಾಗಿ ಕಲ್ಲಿದ್ದಲ ಬಳಕೆಯನ್ನು ಕಡಿಮೆ ಮಾಡುವ ಕುರಿತು ಚೀನಾ ದೇಶವು ಹಲವು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಅಲ್ಲದೆ, ಮರುಬಳಕೆ ಇಂಧನ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. 

ಭೂಬಿಸಿಯನ್ನು ತಡೆಗಟ್ಟುವ ಕುರಿತು ಈಗ ತೆಗೆದುಕೊಳ್ಳುವ ಸರಿಯಾದ ನಿರ್ಧಾರ ಭೂಮಿಯನ್ನು ಉಳಿಸುವುದಲ್ಲದೇ, ಇಡೀ ಜಗತ್ತಿನ ಆರ್ಥಿಕ, ಸಾಮಾಜಿಕ, ಪಾರಿಸಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬಲ್ಲದು ಎಂದು ವಿಶ್ವ ಬ್ಯಾಂಕಿನ ಅಧ್ಯಕ್ಷರಾದ ಡಾ:ಜಿಮ್ ಯಾಂಗ್ ಕಿಮ್ ಹೇಳಿರುವುದು ಉಲ್ಲೇಖನೀಯ. ಭೂಬಿಸಿಯ ಕುರಿತು ತೆಗೆದುಕೊಳ್ಳುತ್ತಿರುವ ಈಗಿನ ನಿರ್ಧಾರಗಳ ಜೊಳ್ಳುತನ, ಲಕ್ಷಾಂತರ ಜನರ ನೆಮ್ಮದಿಯನ್ನು ಕಸಿದುಕೊಳ್ಳುವುದಲ್ಲದೇ, ಇಡೀ ಜಗತ್ತಿನ ಸುಸ್ತಿರ ಅಭಿವೃದ್ಧಿ ಕಲ್ಪನೆಯನ್ನು ದಶಕಗಳಷ್ಟು ಕಾಲ ಹಿಂದೆ ತಳ್ಳುತ್ತದೆ ಎಂದೂ ವಿಶ್ವ ಬ್ಯಾಂಕ್ ೨೦೧೨ರಲ್ಲೇ ಹೇಳಿದೆ. ಭೂಬಿಸಿಯಿಂದಾಗಿ, ಮಾನವಹಕ್ಕುಗಳ ಹರಣ, ಆಹಾರ ಭದ್ರತೆಗೆ ಧಕ್ಕೆ, ಶುದ್ಧ ನೀರಿನ ಅಭಾವ, ಆರೋಗ್ಯದ ಕೊರತೆ ಹಾಗೂ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದಷ್ಟೇ ನಾವು ತಿಳಿದುಕೊಂಡಿದ್ದೇವೆ. ಇದಲ್ಲದೆ, ಇನ್ನೂ ಆತಂಕದ ಸಂಗತಿಯೆಂದರೆ, ಲಕ್ಷಾಂತರ ಜನರ ಆವಾಸ ಸ್ಥಾನ ನಾಶವಾಗುತ್ತದೆ, ಇದು ಅವರಲ್ಲಿ ಖಿನ್ನತೆಯ ಮೂಲಕ ಹಿಂಸೆಯನ್ನು ಪ್ರಚೋಧಿಸುವ ಸಂಗತಿಯಾಗುತ್ತದೆ ಜೊತೆಗೆ ಇದು ಅತಿದೊಡ್ಡ ಮಾನವ ಹಕ್ಕುಗಳ ಉಲ್ಲಘಂನೆಯಾಗುತ್ತದೆ ಯು.ಎನ್. ಹವಾಮಾನ ಬದಲಾವಣೆ ಸಮಿತಿಯ ವಿಶೇಷ ಅಧಿಕಾರಿ ಮೇರಿ ರಾಬಿನ್‌ಸನ್ ೨೦೧೩ರಲ್ಲಿ ಹೇಳಿದ್ದಾರೆ. ವಾತಾವರಣದ ಬಿಸಿಯೇರಿಕೆಯಿಂದ ಜಗತ್ತಿನ ಅಭಿವೃದ್ದಿ ಹೊಂದುತ್ತಿರುವ ಹಾಗೂ ಹಿಂದುಳಿದ ದೇಶಗಳಲ್ಲಿ ಬಡತನ ಇನ್ನೂ ಹೆಚ್ಚಾಗಲಿದೆ, ಮುಖ್ಯವಾಗಿ ಆಹಾರ ಬೆಲೆಯೇರಿಕೆ ಹೆಚ್ಚಾಗಲಿದೆ, ಉದಾಹರಣೆಯಾಗಿ ಹೇಳುವುದಾದರೆ ೨೦೦೭ರಿಂದ ಆಹಾರ ಬೆಲೆಗಳು ಈ ದೇಶಗಳಲ್ಲಿ ಏರುತ್ತಲೇ ಇದೆ. ದಿ ಲ್ಯಾನ್ಸೆಂಟ್ ಮತ್ತು ಯೂನಿವರ್ಸಿಟಿ ಕಾಲೇಜ್, ಲಂಡನ್ ಸಮೀಕ್ಷೆಯ ಪ್ರಕಾರ ವಾತಾವರಣ ಬದಲಾವಣೆಯು ೨೧ನೇ ಶತಮಾನದ ಜಗತ್ತಿನ ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಭೂಬಿಸಿಯ ಪ್ರಕ್ರಿಯೆಯಲ್ಲಿ ಹೊಸ-ಹೊಸ ರೋಗಗಳು ಹುಟ್ಟಿಕೊಳ್ಳುವ ಸಾಧ್ಯತೆ ಅತಿಹೆಚ್ಚು, ಕಾಯಿಲೆಗಳ ಸ್ವರೂಪವೂ ಭಿನ್ನವಾಗಿರಲಿದೆ. ಆಹಾರದ ಕೊರತೆ, ಶುದ್ಧನೀರಿನ ಅಭಾವ, ಸ್ವಚ್ಛತೆಯ ಗುಣಮಟ್ಟ ಇತ್ಯಾದಿಗಳ ಜೊತೆಗೆ ವಾಸಸ್ಥಾನದ ಅಲಭ್ಯತೆ, ಆರೋಗ್ಯಕ್ಷೇತ್ರಕ್ಕೆ ಅತಿದೊಡ್ಡ ತಡೆಯೊಡ್ಡುವ ಒಡ್ಡುಗಳಾಗಲಿವೆ. ಇದಲ್ಲದೆ ಹವಾಮಾನ ಬದಲಾವಣೆ ಇಡೀ ಜಗತ್ತಿನ ಸುರಕ್ಷತೆಗೆ ಸವಾಲಾಗಿ ಪರಿಣಮಿಸಲಿದೆ. ಮಾನವೀಯ ಸಂಘರ್ಷಗಳು ಹಾಗೂ ನಿರಾಶ್ರಿತರ ಗೋಳು ಹೆಚ್ಚಾಗಲಿವೆ. ’ಅಪಾಯ ಹಲವು ಸ್ತರಗಳಲ್ಲಿ’ ಒಕ್ಕರಿಸಿಕೊಳ್ಳಲಿದೆ, ಬಡತನ, ರಾಜಕೀಯ ಅಸ್ಥಿರತೆ ಹಾಗೂ ಸಾಮಾಜಿಕವಾಗಿ ಎಲ್ಲಾ ತರಹದ ಗೋಳು ಹೆಚ್ಚಾಗಲಿದೆ ಎಂದು ಐಪಿಸಿಸಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಜಾಗತಿಕ ತಾಪಮಾನ ಸಮತೋಲನ ಕಾಪಾಡುವಲ್ಲಿ ಸಮಶೀತೋಷ್ಣ ಅರಣ್ಯಗಳ ಪಾತ್ರ ಅತಿಮುಖ್ಯವಾದದು. ಸಮಶೀತೋಷ್ಣ ಅರಣ್ಯಗಳು ಜಗತ್ತಿನ ಆಹಾರ, ನೀರು ಹಾಗೂ ಶಕ್ತಿಯ ಭದ್ರತೆಗೆ ನೇರವಾಗಿ ಕಾರಣವಾಗಿವೆ, ಇದೇ ರೀತಿ ನಾವು ಸಮಶೀತೋಷ್ಣ ಕಾಡುಗಳನ್ನು ಸವರಿಹಾಕುತ್ತಾ ಹೋದರೆ, ಇದೊಂದೇ ಕಾರಣ ಇಡೀ ಜೀವಜಗತ್ತು ಹಾಗೂ ಸಸ್ಯಜಗತ್ತಿನ ಅವಸಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ವೇಲ್ಸ್‌ನ ರಾಜಕುಮಾರ ೨೦೧೩ರಲ್ಲೇ ಹೇಳಿದ್ದು ಗಮನೀಯ ಸಂಗತಿಯಾಗಿದೆ. ೨೦೧೫ರ ಪ್ಯಾರೀಸ್ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರತವೂ ಭಾಗವಹಿಸಬೇಕು. ಇದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಇದರ ಬಗ್ಗೆ ಯೋಚಿಸಲು ಪುರುಸೊತ್ತೆಲ್ಲಿದೆ. ಅತ್ತ ಸೀಶೆಲ್ಸ್ ಬಂದರು ಅಭಿವೃದ್ಧಿಗೆ ಹಣ ನೀಡುತ್ತಾರೆ, ಇತ್ತ ನಮ್ಮದೇ ಅಘನಾಶಿಯ ಬಾಯಿಕಟ್ಟಿ, ತದಡಿ ಬಂದರನ್ನು ಮುಳುಗಿಸಲು ಹೊರಟಿದ್ದಾರೆ. ಅತ್ತ ಜಪಾನಿನ ಫುಕೋಶಿಮಾದ ೪ನೇ ವರ್ಷದ ಶ್ರದ್ಧಾಂಜಲಿಗೆ ಮುಂಚಿತವಾಗಿ ಅಲ್ಲಿನ ಎಲ್ಲಾ ಪರಮಾಣು ಸ್ಥಾವರಗಳನ್ನು ಮುಚ್ಚಲಾಗಿದ್ದರೆ, ಇಲ್ಲಿ ನಾವು ಇನ್ನು ಹೊಸ-ಹೊಸ ಪರಮಾಣು ಸ್ಥಾವರಕ್ಕೆ ಅಡಿಗಲ್ಲು ಹಾಕುವ ಸಂಭ್ರಮದಲ್ಲಿದ್ದೇವೆ. ಹಾಲಿ ನಮ್ಮದು ಜೀವಿವೈವಿಧ್ಯದಲ್ಲಿ ಅತ್ಯಂತ ಸಂಪದ್ಬರಿತವಾದ ದೇಶ. ಆದರೆ, ಇದರ ರಕ್ಷಣೆಗಾಗಲಿ, ಭೂಬಿಸಿಯಿಂದ ನಾಶವಾಗಬಹುದಾದ ಜೀವಿವೈವಿಧ್ಯದ ಮೌಲ್ಯಮಾಪನ ಮಾಡುವ ಕುರಿತಾಗಿ ನಮ್ಮಲ್ಲಿ ಪ್ರತ್ಯೇಕ ಇಲಾಖೆಗಳಿಲ್ಲ. ಮುಖ್ಯವಾಗಿ ಇಕಾಲಜಿಯ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆಯೇ ಇಲ್ಲ. ಜೀವಜಾಲದ ಸೇವೆಗಳ ಬಗ್ಗೆ ಯೋಚಿಸಿಯೇ ಇಲ್ಲ. ಪ್ರಕೃತಿಯೆಂದರೆ ಅಕ್ಷಯ ಪಾತ್ರೆಯೆಂದೇ ಇಲ್ಲಿನ ಬಹುಪಾಲು ಜನರ ನಂಬಿಕೆಯಾಗಿದ್ದು, ಒಟ್ಟೂ ಪರಿಸರ ರಕ್ಷಣೆಯ ಬಗ್ಗೆ ತೀವ್ರ ನಿರಾಸಕ್ತ ಹೊಂದಿದ ದೇಶವಾಗಿದೆ.

ಇಕಾಲಜಿ ಈಸ್ ಇಕಾನಮಿ ಎಂದು ಖ್ಯಾತ ಪರಿಸರ ಹೋರಾಟಗಾರ, ಗಾಂಧಿವಾದಿ ಹಾಗೂ ಬಹುಸ್ತರದ ಹೋರಾಟಗಾರ ಸುಂದರ್‌ಲಾಲ್ ಹೇಳುತ್ತಾರೆ. ನಮ್ಮ ಈಗಿನ ಸರ್ಕಾರಗಳು, ಗುಡ್ಡ ಬಗೆದು, ಅರಣ್ಯ ದೋಚಿ, ನದಿಯ ಬಾಯಿಕಟ್ಟಿ, ರೈತರನ್ನು ಒಕ್ಕಲೆಬ್ಬಿಸಿ, ಪ್ರಕೃತಿಯ ಮೇಲೆ ಎಲ್ಲಾ ರೀತಿಯ ಸಂಭಾವ್ಯ ದೌರ್ಜನ್ಯಗಳನ್ನು ಎಸಗಿ, ಕೈಗಾರಿಕೆ ಎಂಬ ಮಹಲು ಕಟ್ಟುವುದಕ್ಕೆ ಅಭಿವೃದ್ಧಿ ಎಂದು ಭಾವಿಸುತ್ತಾರೆ, ಭಾವಿಸುವುದಷ್ಟೇ ಅಲ್ಲ, ತಮ್ಮ ಭಾವನೆಯನ್ನು ಎಲ್ಲರ ಮೇಲೂ ಹೇರುತ್ತಾರೆ. ದುಡ್ಡಿದ್ದವನೇ ದೊಡ್ಡಪ್ಪ ಎಂಬ ಗಾದೆಗೆ ಯಾವಾಗಲೂ ಮಣೆ ಹಾಕುತ್ತಾರೆ. ಇಕಾಲಜಿಯನ್ನು ಕಾಪಾಡುವರು ಯಾರು?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ್, ಎಂದಿನಂತೆ ಸುಂದರ, ಮನ ಕಲುಕುವ ಬರಹ. ಜಗತ್ತನ್ನು ಅಪಾರ್ಟ್ಮೆಂಟ್ ಗೆ ಹೋಲಿಸಿದ ಪರಿ ಇಷ್ಟವಾಯ್ತು. ಇಕಾಲಜಿ ಈಸ್ ಇಕನಾಮಿ ಎಷ್ಟೊಂದು ಸತ್ಯವಾದ ಮಾತು! 

1
0
Would love your thoughts, please comment.x
()
x