ಸರಣಿ ಬರಹ

ಹೋಳಿ ಹುಣ್ಣಿಮೆಯ ಬಣ್ಣ,ಬಣ್ಣ ನೆನಪುಗಳು…!: ನಾರಾಯಣ ಬಾಬಾನಗರ

ಇಲ್ಲಿಯವರೆಗೆ
‘’ಹೋಗಿ ಹೋಗಿ ಈಗ್ಯಾಕ ಹೋಳಿ ಹುಣ್ಣಿವಿ ನೆಪ್ಪ ತಗದಾನ ಈ ಆಸಾಮಿ..’’ಅಂತ ಮನಸಿನ್ಯಾಗ ಗೊಣಗಬ್ಯಾಡ್ರಿ…ನನಗೂ ಗೊತ್ತೈತಿ ಹೋಳಿ ಹುಣ್ಣಿವಿ ಬರೂದು ಇನ್ನಾ ಭಾಳ ಮುಂದ ಐತೆನ್ನೂದು.ಹುಸೇನಿ ನೆನಪಾದ ಕೂಡಲೆ ಅಂವಾ ಭಾಗವಹಿಸಿದ ಹೋಳಿ ಹುಣ್ಣಿವಿ ನೆನಪಾಗತೈತಿ…ಅದರ ಹಿಂದ್ಹಿಂದ್ಹ ಹೋಳಿ ಹುಣ್ಣಿವಿಯ ನೆನಪುಗಳು ಕುಣಕೋತ ಮನದಾಗ ತೇಲಿ ಹೋಗತಾವ…

ಹೋಳಿ ಹುಣ್ಣಿವಿ ಹಿಂದಿನ ಅಮಾಸಿ(ಆ ಅಮಾಸಿಗಿ ಏನಂತ ಹೆಸರೈತೋ…ನೆನಪಾಗೊಲ್ಲತು…ಅದನ್ನ ಕಾಮಣ್ಣನಿಗೆ ಬಿಟ್ಟು ಬಿಡೂಣಂತ)ಕಳದು ಚಂದ್ರಾಮನೆಂಬೋ ಚಂದ್ರಾಮ ಯಾವಾಗ ಮುಗಿಲಿನಾಗ ಹಣಿಕಿ ಹಾಕಿದನೋ,ಹಲಿಗಿಗಳು ಹೊರ ಬಂದು ಸಪ್ಪಳಾ ಮಾಡಾಕ ಸುರೂ ಆಗತಿದ್ದು…ಮೊದ ಮೊದಲಿಗಿ ಚಿಟಮ್ಯಾ ಹುಡುಗರ ಹಲಿಗಿ ಪ್ರತಿಭೆ ಅನಾವರಣ ಆಗತಿತ್ತೆನ್ರಿ…ಅನಂತರ ಹುಡಗರಿಕಿಂತಾ ಜರಾ ದೊಡ್ಡವರ ತರಹಾವರಿಯ ಪ್ರತಿಭೆಗಳ ಪ್ರದರ್ಶನ ಒಂದೊಂದ ಒಂದೊಂದ ಬಣ್ಣದ ನೀರಿನಾಂಗ ಚಿಮ್ಮಲಾಕ ಸುರೂ ಆಗತಿದ್ದವು.ಅವೆಲ್ಲ…ನೆನಪುಗಳ ಬುತ್ತಿಯನ್ನು ನಿಮ್ಮುಂದ ಬಿಚ್ಚಿಡಲಾಕತ್ತೀನಿ…ಸವಿಯುವ ಸರದಿ ನಿಮ್ಮದಾಗಲಿ.

ಯಾವಾಗ ಚಂದಪ್ಪ ಕಾಣಾಕ ಚಾಲೂ ಆದನೊ …ಚಿಳ್ಳ್ಯಾ ಮಿಳ್ಳ್ಯಾ ಹುಡುಗರೆಲ್ಲಾ ಸೇರಿ ಪ್ರತಿ ಮನೀಗೆ ಹೋಗಿ ಐದೈದು ಕುಳ್ಳು ತಗೊಂಡು ಬರಾವರು.ಹಂಗ ಅವುಗಳನ್ನು ತೊಗೊಂಡು ಬಂದದ್ದನೆಲ್ಲಾ ಒಂದು ಖಾಲಿ ಇದ್ದ ತಿಪ್ಪ್ಯಾಗ ಹಾಕತಿದ್ದರು.ಕುಳ್ಳ ಹಾಕಾಕನೇ ತಿಪ್ಪಿ ಖಾಲಿ ಮಾಡಿ ಇಡಲಾಗತಿತ್ತ.ಕಾಮಣ್ಣನ್ನ ಸುಡಾಕಂತ ತಯಾರಿ ಮಾತ್ರ ಜೋರ ಇರತಿತ್ತು ಅನ್ನ್ರೀ…

ಬರೇ ಕುಳ್ಳ ತಂದ ತಂದ ಕೂಡಿ ಹಾಕತಿದ್ರ ಅದರಾಗ ಮಜಾ ಎಲ್ಲಿ ಬರತೈತಿ?ಯಾರು ಕುಳ್ಳು ಕೊಡತಿದ್ದರೋ ಅವರ ಮನ್ಯಾನ ಕುಳ್ಳುಗಳನ್ನು ತುಡುಗ ಮಾಡಿ ತರತಿದ್ದ ತರಹಾವರಿಯ ಪಿಲ್ಯಾನಗಳು ಮಾತ್ರ ಭಾರಿ ಇರತಿದ್ದವು.ತುಡುಗ ಬುದ್ಧಿಯ ತುಡುಗರಿಗೇನು ಕೊರತೆ ಇರಲಿಲ್ಲ ಬಿಡ್ರಿ.ಅಷ್ಟರಾಗ ಹೋಳಿ ಹುಣ್ಣಿವಿ ಬಂದ ಬಿಡತಿತ್ತ.ಹೋಳಿ ಹುಣ್ಣಿವಿಯ ಸಂಭ್ರಮವೇ ಸಂಭ್ರಮ!!.

ಹೋಳಿ ಹುಣ್ಣಿವಿ ದಿವಸ ಕಟ್ಟಿಮ್ಯಾಲ ಕಾಮಣ್ಣನ್ನ ಅಗದಿ ಸಡಗರದಿಂದಲೇ ಕೂಡಿಸತಿದ್ದರು.ಕಾಮಣ್ಣಗ ದೋತರ ಉಡಿಸಿ,ಅಂಗಿ ಹಾಕಿ ಮ್ಯಾಲೊಂದು ಪಟಕಾ ಸುತ್ತುತ್ತಿದ್ದರು.ಕೊಳ್ಳಾಗ ಸಕ್ಕರಿ ಸರ ಹಾಕತಿದ್ದರು.ಸಣ್ಣೂ ಹುಡುಗರೂ ಕೊಳ್ಳಾಗ ಹಾಕೋತಿದ್ದರ ಖರೆ,ಮುಂದ ಐದು ನಿಮಿಷದಾಗ ಸಕ್ಕರಿ ಸರ  ತಿಂದು ಖಾಲಿ ಮಾಡಿ ಝಳ ಝಳ ಆಗಿ ಬಿಡತಿದ್ದರು.

ಇಷ್ಟ ಅನೂದರಾಗ ಮಟ ಮಟ ಮಧ್ಯಾಹ್ನ ಆಗಿ ಎಲ್ಲಾರೂ ಅವರವರ ಮನಿ ಮುಂದ ಹೋಳಿಗಿ ಸುಟ್ಟು,ತಾವೂ ಗಡದ್ದಾಗಿ ಉಂಡು ಒಂದ ಘಳೀಗಿ ಮಕ್ಕೋಬೇಕಂತ ಹೊರಟರ ಓಣ್ಯಾಗಿನ ಹುಡುಗರು ಕೇಳಬೇಕಲಾ?ಹಲಗಿ ಬಡದಿದ್ದ… ಬಡದಿದ್ದ.. ಹಿಂಗಾಗಿ ಕಿಂವ್ಯಾಗ ಹಲಗಿಯ ನಾದ ಗುಂಯಗುಡುದನ್ನು ಕೇಳಕೋತ ಹೊರಳ್ಯಾಡಿ ಮಧ್ಯಾಹ್ನದ ಝಳ ಹೋಗುವುದನ್ನ ಕಾಯತಿದ್ದರು…

ಅಷ್ಟರಾಗ ಸೂರ್ಯನ ಬಿಸಿಲಿನ ಝಳ ಜರಾ ಕಮ್ಮಿಯಾಗಿ ಸಣ್ಣಕ ಮನಿ ಬಿಟ್ಟ ಹೊರಗ ಬರಲಾಕ ಸುರು ಆಕತಿತ್ತ ನೋಡ್ರಿ…ಹಂಗ ಬಂದಾವರು ರಾತ್ರಿ ಕಾಮಣ್ಣನ ಸುಡುದರ ತಯಾರಿ ನಡಸತಿದ್ದರು.ತಿಪ್ಪ್ಯಾಗಿನ ಕುಳ್ಳುಗಳು ಸಣ್ಣಕ ಹೊರಗ ಬರಲಾಕ ಸುರು ಆಕ್ಕಿದ್ದು.

ಕಾಮಣ್ಣನ ಕಟ್ಟಿಮುಂದ ಅವನ್ನೆಲ್ಲ ಒಟ್ಟಿ… ಕಾಮಣ್ಣನ ತಯಾರ ಮಾಡಲಾಕ ಉಪಯೋಗಿಸಿದ ಗೋದಿ ಹುಲ್ಲನ್ನ ಹಾಕಿ ರಾತ್ರಿ ಬೆಂಕಿ ಇಡತಿದ್ದರು….ಆಗ ಶುರು ಆಗತಿತ್ತ ನೋಡ್ರಿ ಮಜಾ…….

ಯಾವಾಗ ಬೆಂಕಿ ತನ್ನ ನಾಲಿಗಿಯನ್ನ ಬಾಯಾಗಿಂದ ತಗಿಲಾಕ ಸುರು ಆಗತಿತ್ತೊ …ಅದಕ್ಕ ದೊಡ್ಡ ದೊಡ್ಡ ಕೊಡ್ಡಾ ಆಹಾರ ಹಾಕಾಕ ದೊಡ್ಡಾವರ ಪಿಲ್ಯಾನ ಸುರು ಆಗಿ,ಸ್ಕೆಚ್ ಹಾಕೂದರೊಂದಿಗೆ ಬೈಠಕ್ ಬರಕಾಸ್ತ ಆಗತಿತ್ತ…
ಹಂಗ ದೊಡ್ಡಾವರೆಲ್ಲಾ ಸೇರಕೊಂಡು ಯಾರ ಯಾರ ಹೊಲದಾಗ ದೊಡ್ಡ ದೊಡ್ಡ ಕೊಡ್ಡ ಅದಾವ ಅಂತ ಪಿಲ್ಯಾನ ಹಾಕೂಮುಂದನ ಚರ್ಚೆ ಆಗಿರತಿತ್ತಲಾ?ಅದನ್ನ ಕಾರ್ಯರೂಪಕ್ಕ ತರಲಾಕ ಫೀಲ್ಡಿಗೆ ಇಳದ ಬಿಡತಿದ್ದರ..
ಅಂಥಾ ಒಂದ ಘಟನೆ ನನಗ ಇನ್ನೂ ನೆನಪಿನ್ಯಾಗ ಹಂಗ ಉಳಕೊಂಡ ಬಿಟ್ಟೈತಿ..ಅದನ್ನ ಹೇಳತೀನಿ ಕೇಳ್ರಿ…
ಕಾಮಣ್ಣನ ಕೂಡಿಸುತ್ತಿದ್ದ ಕಟ್ಟೆಯ ಮುಂದಿನ ಮನೆಯವರು ಜರಾ ಕಿರಿ ಕಿರಿ ಇದ್ದರು,ಹುಡುಗರಿಗೆ ಅಡಸಾಳ ಬಡಸಾಳ ಬಯ್ಯವರ.ಹಿರಿಯಾರ ಅದಾರಂತ ತಿಳದ ಬಯ್ಯಿಸಿಕೊಂಡವರು ಸುಮ್ಮನ ಹಂಗ ಬಯ್ಯಿಸಿಕೊಂಡ ಹೋಗಾವರ…ಇಂಥವರಿಗೆ ತಕ್ಕ ಪಾಠ ಕಲಿಸೋಣಂತ ಕಾಯಾಕತ್ತಿದ್ದರ…ಅದಕ್ಕ ಬರೋಬ್ಬರಿ ಹೋಳಿಹುಣ್ಣಿವಿ ಕೂಡಿ ಬಂತು.ಆ ಹಿರಿಯಾರ ತ್ವಾಟದಾಗ ಒಂದು ಭಾಳ ಕಿಮ್ಮತ್ತಿನ ಕೊಡ್ಡಿತ್ತ.ಅದನ್ನ ತಂದು ಕಾಮಣ್ಣನ ಸುಡೂ ಜಾಗಾದಾಗ ಹಾಕೂದಂತ ಡಿಸೈಡ್ ಮಾಡಿಬಿಡತು ತಂಡ!.

ನಡೀರಪಾ..ಕೊಡ್ಡಾ ತರಾಕ ಹೊಂಟಿತು ಪಟಾಲಮ್.ಹಿಂಗ ಅಕಾಡಿ ಕೊಡ್ಡಾ ತರಲಾಕ ಹುಡುಗರೆಲ್ಲಾ ಹೊರಟರ,ಈಕಾಡಿ ಆ ಹಿರೀ ಮನಷ್ಯಾ  ,ಎಲ್ಲಿ ತನ್ನ ಹೊಲದಾಗಿನ ಕೊಡ್ಡಾ ತಂದು ಒಗದಗಿಗದಾರಂತ ಠಸಿಕಿ ಹೊಕ್ಕಂತಾಗಿ ಎದ್ದು ಬಂದು ಕಟ್ಟಿಮ್ಯಾಲ ಬಂದು ಕೂತಕೊಂಡಬಿಟ್ಟ.ಹಿಂಗ ತ್ವಾಟಕ್ಕ ಹೋದ ತಂಡಕ್ಕ ಮಾಹಿತಿದಾರರಿಂದ ,ಕಟ್ಟಿ ಮ್ಯಾಲ ಹಿರಿ ಮನಷ್ಯಾ ಕೂತಿದ್ದು ಸುದ್ದಿ ಬಂದು ತಲುಪಿತು..ಕೂಡ್ಲಿ ಕೂಡ್ಲಿ…ಚಳ್ಳೆಹಣ್ಣ ತಿನಿಸಾಕ ನಮ್ಮ ಕಡೆನೂ ರಗಡ ಪಿಲ್ಯಾನ ಅದಾವ ಅಂತ ಹೂಂಕರಿಸಿತು ತಂಡ.

ಈಕಾಡಿ ಹಿರೀ ಮನಷ್ಯಾ ತೂಕಡಿಸಿಕೋತ ಇದ್ದಾವರಗೂಡಾ ಮಾತ ಹಚಕೊಂಡ ಕುಂತಿದ್ದ.ಬ್ಯಾರೇ ಓಣ್ಯಾನವರು ನಮ್ಮ ಓಣಿಗಿ ಬಂದು ಉರಿ ಎಟ್ಟೈತಿ ಅಂತ ನೋಡಾಕಂತ ಬರತಿದ್ದ್ರಂದ್ರ ನಮ್ಮ ಓಣ್ಯಾನ ಕಾಮಣ್ಣನ ಪ್ರಸಿದ್ಧಿ ಹೆಂಗ ಬ್ಯಾರೆ ಓಣಿಗಿ ಹರಡಿತ್ತು ಅನ್ನೂ ಅಂದಾಜ ನಿಮಗ ಸಿಗತೈತಿ.ಹಿಂಗ ಬ್ಯಾರೆ ಓಣ್ಯಾನ ಮಂದಿ ನಮ್ಮ ಓಣಿಗಿ ಬರತಿದ್ದರಲಾ…ಅವರೊಳಗ ಕೆಲವೊಬ್ಬರು ಹಾಡಾನೂ ಹಾಡುವವರು ಇರತಿದ್ದರು…ದನಿ ಏರಿಸಿ ಅವರ ಹಾಡಾ ಹಾಡೂದು ಮುಗದ ಮ್ಯಾಲೆ…ಅದಕ್ಕ ಪ್ರತಿಯಾಗಿ ನಮ್ಮ ಓಣ್ಯಾನವರೂ ಹಾಡಾ ಹಾಡಾತಿದ್ದರು…ಹಿಂಗ ಎರಡೂ ಓಣ್ಯಾನವರು ಸೋಲಿಲ್ಲದ ಹಾಡಿನ ಮ್ಯಾಲೆ ಹಾಡಾ ಹಾಡುವವರು ಆಗಿದ್ದರು…ಅದನ್ನ ನೋಡೂದಂದರನ ಒಂದ ರೀತಿ ನಮಗ ಖುಷಿ..

ಹಿಂಗ ಹಿರಿ ಮನಷ್ಯಾ ಹಾಡಾ ಕೇಳಕೋತ ಕುಂತಿದ್ದ…ಆಕಾಡಿಂದ ಹುಡುಗರು ಅವನ ತ್ವಾಟನಾಗಿಂದ ಕೊಡ್ಡ ಹೊತಗೊಂಡು ಬಂದರು…ಕಾಮಣ್ಣನ ಕಟ್ಟಿ ಇನ್ನೂ ದೂರಿದ್ದಾಗಲೇ ಸಾವಕಾಶ ಕೊಡ್ಢಾ ಕೆಳಗಿಳಿಸಿದರು.ಕೊಡ್ಡದ ಮ್ಯಾಲ ಚುಮಣಿ ಎಣ್ಣಿ ಸುರುವಿದರು,ಇಟ್ಟ ಬಿಡಲಿಲ್ಲ ಮೆಣಸಿನ ಕಾಯಿ ಪುಡಿ ಒಗದರ…ಉರಿಯೊಳಗ ಒಗದ ಮ್ಯಾಲ ಹಿರಿ ಮನಷ್ಯಾ ಅದನ್ನ ಹೊರಗ ಎಳೀ ಬೇಕಂದರ ಅಂವಗ ಖಾರದ ಖಾಟ ಹತ್ತಬೇಕು,ಹಂಗನ ಚುಮಣಾದ ಎಣ್ಣಿ ಹಾಕಿದರ ಧಗ್ಗನ ಉರಿ ಹತ್ತಲಾಕ ಅನಕೂಲ ಆದೀತಂತ ಅವರ ಅಂದಾಜ..

ಹಿಂಗ ಅಂದಾಜ ಇಟಕೊಂಡ ಕೊಡ್ಡಾ ಎತ್ತಕೊಂಡ ಒಗಿಯುವ ಜಾಗಕ್ಕ ತಂದರು..ಹಿರಿ ಮನಷ್ಯಾ ಕಣ್ಣ ಕಿರದು ಮಾಡಕೊಂಡ ಕೊಡ್ಡಾ ಹೊತಗೊಂಡು ತರಾವರನ್ನ ನೋಡಕೋತ ಕುಂತಿದ್ದ..ಕೊಡ್ಡಾ ಹೊತಗೊಂಡವರು ಹೆಂಗೆಂಗ ಸಮೀಪ ಬರಲಾಕತ್ತರೋ ಹಂಗ ಇಂವಾ ಅಲರ್ಟ ಆದ.

ಹಿರಿ ಮನಷ್ಯಾ ಈಕಾಡಿ,ಕೊಡ್ಡಾ ತಂದವರು ಅಕಾಡಿ ಮಧ್ಯದಾಗ ಭಗ ಭಗ ಉರಿ…(ಕೊಡ್ಡ ಏನಾತು ಅನ್ನೂದು ಮುಂದಿನ ವಾರ)    

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *