ಹೋಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಖುಷಿ ಯುವಕ-ಯುವತಿಯರಲ್ಲಿ ಕಂಡು ಬರುತ್ತಿದೆ. ಕಾಮಣ್ಣನನ್ನು ಸುಡಲು ತಯಾರಿಯಾಗಿದೆ. ಬಣ್ಣಗಳನ್ನು ತಟ್ಟೆಗಳಲ್ಲಿ ಪೇರಿಸಿಟ್ಟಾಗಿದೆ. ಹೋಳಿ ಹಬ್ಬದ ಧಾರ್ಮಿಕ ಆಯಾಮವೇನೇ ಇರಲಿ, ಸಾಂಸ್ಕ್ರತಿಕ ವೈವಿಧ್ಯವೂ ಬದಿಗಿರಲಿ. ಹೋಳಿ ಹಬ್ಬದಿಂದ ಪರಿಸರಕ್ಕೇನು ಪೆಟ್ಟು ಎಂಬುದನ್ನು ನೋಡುವುದಕ್ಕೂ ಮೊದಲು ನಕಾರಾತ್ಮಕ ಭಾವನೆಯನ್ನು ತೋರ್ಪಡಿಸುವಾಗ, ಅಹಂಕಾರವನ್ನು ಸೊಕ್ಕನ್ನು ಮುರಿಯುವ ಮನೋಗತವನ್ನು ವ್ಯಕ್ತಪಡಿಸುವಾಗ ನಾಳೆ ಇದೆ ಹೋಳಿ ಹಬ್ಬ ಎನ್ನುವುದು ರೂಡಿಯಲ್ಲಿದೆ. ಕೆಟ್ಟದ್ದನ್ನು ವೈಭವೀಕರಿಸುವ ಮನೋಭಾವವೂ ಈ ಮಾತಿನಲ್ಲಿದೆ. ಸರ್ಕಾರಗಳಿಗೆ ಭರಪೂರ ಹಣ ಬೇಕು. ಬಲ್ಲಿದರಿಂದ ಹಣ ಬರುತ್ತದೆ. ದೊಡ್ಡ ಕಾರ್ಖಾನೆಗಳಿಂದ ದೇಶದ ಅಭಿವೃದ್ಧಿಯ ಜೊತೆಯಲ್ಲಿ ಜನಗಳಲ್ಲಿ ಕೊಳ್ಳುವ ಶಕ್ತಿಯು ಹೆಚ್ಚುತ್ತದೆ ಎಂಬ ಬಲವಾದ ಭಾವನೆ ನಮ್ಮನಾಳುವ ಸರ್ಕಾರಕ್ಕಿದೆ. ಪಶ್ಚಿಮಘಟ್ಟದ ಬುಡದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ದಟ್ಟವಾದ ಕಾಡು ಹಲವು ಜಲಪಾತಗಳ ತವರು. ಬೇಡ್ತಿ, ಅಘನಾಶಿನಿ, ಕಾಳಿ, ಶಾಲ್ಮಲಿ ಇತ್ಯಾದಿಗಳು. ಕೈಗಾ ಅಣುಸ್ಥಾವರ ಕಾಳಿ ನದಿಯನ್ನು ನುಂಗಿ ಹಾಕಿದೆ. ಇದೀಗ ಶಾಲ್ಮಲಿ ನದಿಗೊಂದು ಆಣೆಕಟ್ಟು ಕಟ್ಟಿ, ನೀರು ನಿಲ್ಲಿಸಿ, ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಿದರೆ ಹೇಗೆ? ಎಂಬ ಯೋಚನೆ ಮತ್ತು ಯೋಜನೆ ಸರ್ಕಾರದ್ದು. ಯಥಾಪ್ರಕಾರ ಸ್ಥಳೀಯರು ವಿರೋಧಿಸುತ್ತಾರೆ. ವಿರೋಧಿಗಳನ್ನು ದಮನಿಸುವ ಕಾರ್ಯವನ್ನು ಸರ್ಕಾರಗಳು ಹೇಗೆ ಮಾಡುತ್ತವೆ ಎಂಬುದನ್ನು ನೋಡಲು ಮಧ್ಯಪ್ರದೇಶದ ಈ ಹಳ್ಳಿಯ ಕತೆಯನ್ನೊಮ್ಮೆ ನೋಡೋಣ.
ಮಧ್ಯಪ್ರದೇಶದ ಸಿಂಗುರಲಿ ಜಿಲ್ಲೆಯ ಕಾರ್‌ಸೋವ ಮತ್ತು ಅಮೇಲಿಯಾ ಮತ್ತು ಇತರ ೬೦ ಹಳ್ಳಿಗಳ ಕತೆಯಿದು. ಇಲ್ಲಿನ ಅರಣ್ಯ ಪ್ರದೇಶವು ಇಷ್ಟು ಹಳ್ಳಿಗಳ ಜೀವನಕ್ಕೆ ದಾರಿಯಾಗಿದೆ. ಒಂದಲ್ಲಾ ಒಂದು ರೀತಿಯಲ್ಲಿ ಇಲ್ಲಿಯ ಜನ ಇದೇ ಮಹಾನ್ ಅರಣ್ಯ ಪ್ರದೇಶವನ್ನು ಆಶ್ರಯಿಸಿದ್ದಾರೆ. ಲಂಡನ್ ಮೂಲದ ಎಸ್ಸಾರ್ ಎಂಬುದೊಂದು ಕಲ್ಲಿದ್ದಲು ಮತ್ತು ಪೆಟ್ರೋಲ್ ಬಗೆಯುವ ಅಂತಾರಾಷ್ಟ್ರೀಯ ಕಂಪನಿ. ಈ ಕಂಪನಿಗೆ ರತ್ನಗಂಬಳಿ ಹಾಕಿ ಕರೆಸಿಕೊಂಡು, ಮಧ್ಯಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಲು ಅನುವು ಮಾಡಿಕೊಟ್ಟದ್ದು ಕೇಂದ್ರ ಸರ್ಕಾರ. ಹಲವಾರು ಅಡೆತಡೆಗಳನ್ನು ದಾಟಿಕೊಂಡು ಕಲ್ಲಿದ್ದಲು ಅಗೆಯಲು ತಯಾರಾಗಿದೆ ಎಸ್ಸಾರ್. ಕಲ್ಲಿದ್ದಲ್ಲನು ಅಗೆಯಲು ಅನುವ ಮಾಡಿ ಕೊಟ್ಟರೆ, ಸರ್ಕಾರಕ್ಕೆ ಲಾಭ. ಆದರೆ ೫ ಲಕ್ಷ ಮರಗಳ ಮಾರಣ ಹೋಮವಾಗುತ್ತದೆ. ಅಲ್ಲಿನ ಎಲ್ಲಾ ವೈವಿಧ್ಯಗಳು ಮಣ್ಣಿನಡಿಯಲ್ಲಿ ಹೂತು ಹೋಗುತ್ತವೆ. ಕಂಪನಿ ಕಾರ್ಯ ಪ್ರಾರಂಭಿಸದಂತೆ ತಡೆಯಲು ಅಲ್ಲಿನ ನಾಗರಿಕರು ಮಹಾನ್ ಸಂಘರ್ಷ ಸಮಿತಿಯನ್ನು ಕಟ್ಟಿಕೊಂಡಿದ್ದಾರೆ. ವಿಕೇಂದ್ರಿಕರಣ ವ್ಯವಸ್ಥೆ ಬಂದ ಮೇಲೆ, ಯಾರೇ ಆಗಲಿ, ಏನೇ ಆಗಲಿ ಪ್ರಾರಂಭಿಸಲು ಸ್ಥಳೀಯ ಆಡಳಿತ ಸಂಸ್ಥೆಯ ಪರವಾನಿಗೆ ಪಡೆಯಬೇಕು. ಸಾವಿರಾರು ಜನರನ್ನು ಪ್ರತಿನಿಧಿಸುವ ಪಂಚಾಯತ್ ಸದಸ್ಯರು ತಿಂಗಳ ಸಭೆಯಲ್ಲಿ ಚರ್ಚಿಸಿ, ಅನುಮತಿ ನೀಡಬಹುದು ಎಂಬ ಠರಾವು ಮಾಡಬೇಕು. ಸ್ಥಳೀಯರ ಭಾವನೆಯನ್ನು ಕಡೆಗಣಿಸಿ ಯಾವುದೇ ಅಭಿವೃದ್ಧಿ ನಡೆಸುವಂತಿಲ್ಲ. ಪರವಾನಿಗೆಯನ್ನು ಪಡೆಯಲು ಪ್ರತಿಷ್ಠಿತ ಎಸ್ಸಾರ್ ಕಂಪನಿ ಒಳಮಾರ್ಗ ಬಳಸಿದೆ. ಅಲ್ಲಿನ ಪಂಚಾಯ್ತಿಯ ಸಭಾ ನಡಾವಳಿಯನ್ನೇ ತಿದ್ದಿದೆ. ಸದಸ್ಯರ ಸಹಿಯನ್ನು ಫೋರ್ಜರಿ ಮಾಡಲಾಗಿದೆ. ಕಲ್ಲಿದ್ದಲ್ಲನ್ನು ಅಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ಹೇಳಿದರೆ, ಮಾಡಿಯೇ ಸಿದ್ಧ ಎಂಬುದು ಎಸ್ಸಾರ್ ಕಂಪನಿ ಧೋರಣೆ. ೨೦೧೧ರಿಂದ ಗುದ್ದಾಟ ನಡೆಯುತ್ತಲೇ ಇದೆ. ವಿರೋಧಿಸುವವರನ್ನು ಕೊಲ್ಲುವ ಬೆದರಿಕೆ ಹಾಕಲಾಗಿದೆ. ಮಹಾನ್ ಸಂಘರ್ಷ ಸಮಿತಿಯ ಸದಸ್ಯ ಕೃಪಾನಾಥ್ ಮತ್ತು ಇತರರು ಎಸ್ಸಾರ್ ವಿರುದ್ಧ ಗಾಂಧಿ ಮಾದರಿಯ ಅಹಿಂಸಾತ್ಮಕವಾದ ಪ್ರತಿಭಟನೆ ಮಾಡುತ್ತಾರೆ. ಕಂಪನಿಯ ಮುಖ್ಯಸ್ಥರನ್ನು ಕಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮಿತಿಯ ೭೨ ಜನ ೨೦೦೦ ಕಿ.ಮಿ. ದೂರದ ಮುಂಬಯಿಗೆ ತೆರಳುತ್ತಾರೆ. ಎಸ್ಸಾರ್ ಮುಖ್ಯ ಕಚೇರಿಯಿರುವುದು ಮುಂಬಯಿನಲ್ಲಿ. ಎಸ್ಸಾರ್ ಕಂಪನಿಯ ಭಾರತದ ಮುಖ್ಯಸ್ಥನ ಹೆಸರು ಜಿತೇಂದರ್ ಮೆಹ್ರಾ. ಕೃಪಾನಾಥ್ ತಂಡದೊಂದಿಗೆ ಮಾತಾನಾಡುವ ಬದಲು ಈ ಮೆಹ್ರಾ ತನ್ನ ಪ್ರಭಾವವನ್ನು ಬಳಸಿ ಕೃಪಾನಾಥ್ ತಂಡವನ್ನು ಪೊಲೀಸ್ ಲಾಕಪ್‌ಗೆ ಹಾಕಿಸುತ್ತಾನೆ. ಸೌಜನ್ಯ ಮೀರಿದ ಎಸ್ಸಾರ್ ಮುಖ್ಯಸ್ಥನ ವರ್ತನೆಯಿಂದ ಬಂಧಿತ ನಿರಪರಾಧಿಗಳು ವಿಚಲಿತರಾಗಲಿಲ್ಲ. ಬದಲಿಗೆ ತಮ್ಮ ವಿರೋಧಿಸುವ ನಿರ್ಧಾರವನ್ನು ಇನ್ನೂ ಗಟ್ಟಿಗೊಳಿಸಿಕೊಂಡರು. ಕೃಪಾನಾಥ್ ಮಾತಿನಲ್ಲೇ ಕೇಳಿ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ಒಂದಲ್ಲಾ ಒಂದು ದಿನ ಸಾಯಲೇ ಬೇಕು, ನಾವು ಸಾಯುವುದಕ್ಕೆ ಹೆದರುವುದಿಲ್ಲ. ಅವರು ನಮ್ಮನ್ನು ಕೊಚ್ಚಿ ಹಾಕಲಿ, ತಲೆಗೆ ಗುಂಡು ಹೊಡೆದು ಸಾಯಿಸಲಿ, ನೇಣಿಗೇರಿಸಲಿ, ನಾವು ಹೆದರುವುದಿಲ್ಲ, ಬೆದರುವುದಿಲ್ಲ, ಬಗ್ಗುವುದಿಲ್ಲ, ಕುಗ್ಗುವುದಿಲ್ಲ, ಮಹಾತ್ಮ ಗಾಂಧಿಯಂತೆ ಅಹಿಂಸಾ ಚಳುವಳಿಯನ್ನು ಮುಂದುವರೆಸುತ್ತೇವೆ ಜೈ ಹಿಂದ್. ಮೊನ್ನೆ ಜನವರಿ ೨೨ರಂದು ಗ್ರೀನ್‌ಪೀಸ್ ಕಾರ್ಯಕರ್ತರು, ಎಸ್ಸಾರ್ ಕಂಪನಿಯ ಗಾಜಿನ ಮನೆಯನ್ನೇರಿ ಎಸ್ಸಾರ್ ವಿರುದ್ಧದ ಬ್ಯಾನರ್‌ನ್ನು ಕಟ್ಟಿದರು. ವಿ ಕಿಲ್ ಫಾರೆಸ್ಟ್ಸ್ – ಎಸ್ಸಾರ್ ಎಂಬ ಘೋಷಣೆ ಆ ಬ್ಯಾನರ್‌ನಲ್ಲಿ ಇತ್ತು, ಜೊತೆಗೆ ಮನಮೋಹನ್ ಸಿಂಗ್ ಮತ್ತು ವೀರಪ್ಪ ಮೊಯ್ಲಿಯ ಭಾವಚಿತ್ರ. ಈ ಘಟನೆಯ ನಂತರ ಎಸ್ಸಾರ್ ಕಂಪನಿ ತನಗೆ ಮಾನಹಾನಿಯಾಯಿತು ಎಂದು ಕೋರ್ಟ್ ಮೆಟ್ಟಿಲೇರಿತು. ೫೦೦ ಕೋಟಿ ರೂಪಾಯಿ ಮಾನಹಾನಿಯಾಗಿದೆ ಇದನ್ನು ಗ್ರೀನ್‌ಪೀಸ್ ಕಾರ್ಯಕರ್ತರು ಭರಿಸಿ ಕೊಡಬೇಕು ಎಂಬ ಅಹವಾಲನ್ನು ಸಲ್ಲಿಸಿದೆ.
ಅತ್ತ ಮಧ್ಯಪ್ರದೇಶದಲ್ಲಿ ಈ ಕತೆಯಾದರೆ, ಇತ್ತ ಗುಜರಾತಿನ ಈ ಕತೆಯನ್ನೂ ಕೇಳಿ. ದೇಶದ ಅತ್ಯಂತ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದಕ ಘಟಕ ಎಂದು ಟಾಟಾ ಮುಂದ್ರ ಬಿಂಬಿಸಲ್ಪಟ್ಟಿದೆ. ಗುಜರಾತಿನ ಸಮುದ್ರ ತೀರದಲ್ಲಿ ಎಸ್.ಇ.ಝೆಡ್. ಹೆಸರಿನಲ್ಲಿ ಭೂಮಿಯನ್ನು ಪಡೆದುಕೊಂಡು, ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ, ಮತ್ತು ಲಭ್ಯವಿರುವ ಎಲ್ಲಾ ಸ್ಥಳೀಯ ಬ್ಯಾಂಕ್‌ಗಳಿಂದ ಸಾಲವನ್ನೆತ್ತಿ, ಟಾಟಾ ಸಮೂಹ ೮೦೦೦ ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಕೈ ಹಾಕಿದೆ. ಕಚ್ ಜಿಲ್ಲೆಯ ಮುಂದ್ರ ತಾಲ್ಲೂಕಿನ ತುಂಡಾವಾಂಡ್ ಟಾಟಾದ ವಿದ್ಯುತ್ ಹಸಿವಿಗೆ ಬಲಿಯಾದ ಹಳ್ಳಿ. ಇಂಡೋನೇಷ್ಯಾದ ದಟ್ಟ ಕಾಡುಗಳಲ್ಲಿ ದೊರೆಯುವ ಕಲ್ಲಿದ್ದಲ್ಲನ್ನು ಗುಜರಾತಿಗೆ ತಂದು, ಉರಿಸಿ, ದೇಶಕ್ಕೆಲ್ಲಾ ವಿದ್ಯುತ್ ನೀಡುವ ಒಂದು ತರಹದ ಸೇವೆಯನ್ನು ತಾನು ಮಾಡುತ್ತೇನೆ ಎಂಬುದು ಟಾಟಾ ಕಂಪನಿಯ ವರಸೆ. ಸ್ವಚ್ಛವಾದ ಶಕ್ತಿಯನ್ನು ನೀಡಲಾಗುತ್ತದೆ ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭವಾದ ಟಾಟಾ ಮುಂದ್ರ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್‌ನಿಂದ ಕೋಟಿಗಟ್ಟಲೆ ಸಾಲ ಎತ್ತಿದೆ. ಸಾಲ ನೀಡುವ ಮುಂಚಿತವಾಗಿ ಇದೇ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಸಂಸ್ಥೆಗೆ ವಿಸೃತವಾದ ವರದಿಯನ್ನು ನೀಡಬೇಕಾಗುತ್ತದೆ. ಯೋಜನೆಯಿಂದ ಎಷ್ಟು ಜನರಿಗೆ ಉಪಯೋಗವಾಗುತ್ತದೆ? ಯೋಜನೆಯ ಪ್ರದೇಶ ಹೇಗಿದೆ? ಯೋಜನೆಯಿಂದ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ? ಯೋಜನೆಯನ್ನು ಪ್ರಾರಂಭಿಸುವ ಜಾಗವು ಅರಣ್ಯ ಪ್ರದೇಶವಾಗಿದೆಯೇ? ಯೋಜನೆಯಿಂದ ಜನ-ಜೀವನದ ಮೇಲೆ ಆಗುವ ಪರಿಣಾಮಗಳೇನು? ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಉತ್ತರದಾಯಿತ್ವ ನಿಯೋಜಿತ ಯೋಜನೆ ಪ್ರಾರಂಭಿಸುವ ಕಂಪನಿಯ ಮೇಲಿರುತ್ತದೆ. ಸಮುದ್ರದ ಹತ್ತಿರ ವಾಸಿಸುವ ಮೀನುಗಾರರ ಬದುಕು ಸರ್ವನಾಶವಾಗುತ್ತದೆ. ಕಡಲಿನ ಜೀವಿಗಳ ಅವಸಾನ ಆಗುತ್ತದೆ. ಬೆಸ್ತರು ನಿರ್ಗತಿಕರಾಗುತ್ತಾರೆ ಎಂಬೆಲ್ಲಾ ಸತ್ಯಗಳನ್ನು ಮರೆಮಾಚಿ, ಟಾಟಾ ಕಂಪನಿಯು ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್‌ಗೆ ಸುಳ್ಳು ವರದಿಯನ್ನು ನೀಡಿ ಸಾಲ ಪಡೆದಿದೆ. ಬೆಸ್ತರ ಅಮೀನಾಬಾಯಿ ವಿಶ್ವ ಬ್ಯಾಂಕ್‌ನ ಅಧ್ಯಕ್ಷರಾದ ಡಾ:ಜಿಮ್ ಕಿಮ್‌ಗೆ ಹಾಗೂ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಸಿ.ಇ.ಓ ಜಿನ್-ಯಾಂಗ್‌ಗೆ ಇನ್ನು ಮುಂದೆ ಹಣ ಬಿಡುಗಡೆ ಮಾಡಬಾರದು ಎಂಬ ವಿನಂತಿಯನ್ನು ಮಾಡಿದ್ದಾರೆ.
ಸ್ಥಳೀಯರ ವಿಶ್ವಾಸಗಳಿಸಲು ಟಾಟಾ ಮುಂದ್ರ ಕೆಲವು ಸರ್ಕಸ್‌ಗಳನ್ನು ಮಾಡುತ್ತಿದೆ. ಪ್ಲಾಸ್ಟಿಕ್‌ಮುಕ್ತ ಹಳ್ಳಿಗಳನ್ನು ಮಾಡುತ್ತೇವೆ ಎಂದು ತಾವೇ ಬಿಸಾಡಿದ ಪ್ಲಾಸ್ಟಿಕ್ ಚೀಲಗಳನ್ನು ಸಮುದಾಯ ಜೊತೆಗೂಡಿ ಆರಿಸುವ, ಉಚಿತ ಆರೋಗ್ಯ ತಪಾಸಣೆ ಕಾರ್ಯ ಹೀಗೆ ಸಮಾಜಮುಖಿ ಕೆಲಸಗಳನ್ನು ಮಾಡಿ ತಾನು ಶುಭಗನೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆಯಾದರೂ, ಕಲ್ಲಿದ್ದಲ ಆಮದು ಶುಲ್ಕ ದುಬಾರಿಯಾದ ಹಿನ್ನೆಲೆಯಲ್ಲಿ ಇಡೀ ಕಂಪನಿ ಲುಕ್ಸಾನು ಬಾಬತ್ತಿನಲ್ಲಿದೆ. ಆಮದು ಸುಂಕವನ್ನು ಕಡಿಮೆ ಮಾಡಿ ಎಂದು ಕೇಂದ್ರ ಸರ್ಕಾರದಲ್ಲಿ ಲಾಬಿ ಶುರುಮಾಡಿದೆ. ಇಲ್ಲದಿದ್ದಲ್ಲಿ ವಿದ್ಯುತ್‌ಚ್ಚಕ್ತಿ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ ಎಂಬ ಧಮಕಿಯನ್ನು ಹಾಕಿದೆ. ಪೆಟ್ರೋಲಿಯಂ ಸಚಿವರು ಹೇಗೂ ಕಾರ್ಪೊರೇಟ್‌ಗಳ ಪರವಾಗಿಯೇ ಇದ್ದಾರೆ. ತನ್ಮಧ್ಯೆ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಮೇಲೆ ನಿಗಾ ಇಡುವ ಕಾಂಪ್ಲೈಯನ್ಸ್ ಅಡ್ವೈಸರ್ ಒಂಬುಡ್ಸ್‌ಮನ್ ವಿವರ ಕೇಳಿ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ನೋಟೀಸ್ ನೀಡಿದ್ದಾರೆ. ಈ ಒಂದು ಅಂಶ ತುಂಡಾವಾಡ್ ಹಳ್ಳಿಯ ದೃಷ್ಟಿಯಲ್ಲಿ ಚಿಕ್ಕ ಗೆಲುವು ಎಂದು ಹೇಳಬಹುದಾಗಿದೆ.
ಈಗೊಂದು ೩೦ ವರ್ಷಗಳ ಹಿಂದೆ ದಕ್ಷಿಣ ಭಾರತದ ಹಳ್ಳಿಗಳಲ್ಲಿ, ಚಿಕ್ಕ ಪಟ್ಟಣಗಳಲ್ಲಿ ಹೋಳಿಯ ರಂಗಿನ ಆಟವಿರಲಿಲ್ಲ. ಟಿ.ವಿ. ಮತ್ತು ಸಿನೆಮಾ ಮಾಧ್ಯಮಗಳು ಹೋಳಿ ಹಬ್ಬವನ್ನು ವೈಭವಿಕರಿಸಿ, ಈಗ ದೇಶದೆಲ್ಲೆಡೆ ಹೋಳಿಯನ್ನು ಸಾರ್ವತ್ರಿಕಗೊಳಿಸಲಾಗಿದೆ. ಪ್ರತಿವರ್ಷ ಬೀದಿ ಬದಿಯಲ್ಲಿ ಕಾಮಣ್ಣನನ್ನು ಇಟ್ಟು ರಸ್ತೆಯಲ್ಲಿ ಚಲಿಸುವವರನ್ನು ಅಡ್ಡಗಟ್ಟಿ ಹಣ ಕೇಳುವ ಪ್ರವೃತ್ತಿ ಹೆಚ್ಚುತ್ತಿದೆ. ಒಟ್ಟಾದ ಹಣದಿಂದ ದಾಂಧೂಂ ಆಗಿ ಕಾಮಣ್ಣನನ್ನು ಸುಡುತ್ತಾರೆ. ಕೆಲವು ಕಡೆಗಳಲ್ಲಿ ಮುರಿದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕಾಮಣ್ಣನ ವಿಕಾರ ಮೂರ್ತಿ ಕುಳಿತದ್ದನ್ನು ಕಾಣಬಹುದು. ಕಾಮಣ್ಣನ ಜೊತೆ ಪ್ಲಾಸ್ಟಿಕ್ ಕುರ್ಚಿಯನ್ನು ಸುಡಲಾಗುತ್ತದೆ. ಇನ್ನೂ ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಿ ಮಾಡಿದ ಬಣ್ಣವನ್ನು ಯಥೇಚ್ಛ ಬಳಸಲಾಗುತ್ತದೆ. ಬಣ್ಣವಾಡಿಕೊಂಡು ಮನೆಗೆ ಬಂದ ವ್ಯಕ್ತಿಯ ಮೈತೊಳೆಯಲು ಬಕೇಟ್‌ಗಟ್ಟಲೆ ನೀರು ಬೇಕು. ಮೈಗೆ ಹತ್ತಿದ ಬಣ್ಣವನ್ನು ತೆಗೆಯಲು ಧಂಡಿಯಾಗಿ ಸಾಬೂನು ಬೇಕು. ಹೋಳಿಯಾಡುವ ಯುವಕರು ಮೈಮೇಲೆ ಬಂದವರಂತೆ ಅತ್ಯಂತ ವೇಗವಾಗಿ ವಾಹನಗಳನ್ನು ಒಡಿಸುವ ದೃಶ್ಯವನ್ನು ಪ್ರತಿ ಪಟ್ಟಣಗಳಲ್ಲೂ ಕಾಣಬಹುದು. ಒಟ್ಟಾರೆಯಾಗಿ ಕಾಮಣ್ಣನಿಂದ ಪರಿಸರದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳ ಪಟ್ಟಿಯನ್ನು ಇನ್ನೂ ರೂಪಿಸಬೇಕಾಗಿದೆ. ಅತ್ತಲಾಗಿ ಸರ್ಕಾರಗಳು ಥೇಟ್ ಕಾಮಣ್ಣ ಹಬ್ಬಕ್ಕೆ ವಸೂಲಿಗೆ ನಿಂತವರಂತೆ ತೋರುತ್ತದೆ. ಜನಸಾಮಾನ್ಯರಿಂದ ಪಡೆದ ತೆರಿಗೆರೂಪದ ಹಣವನ್ನು ಕಾರ್ಪೊರೇಟ್‌ಗಳ ಅನುಕೂಲಕ್ಕೆ ಬಳಸುವ ಹುನ್ನಾರ ನಡೆಸಿದೆ. ಒಟ್ಟಾರೆಯಾಗಿ ಕಾಮಣ್ಣ ಮತ್ತು ಸರ್ಕಾರಗಳು ತಮ್ಮ ಪರಿಸರದ ಮೇಲಿನ ಹೆಜ್ಜೆ ಗುರುತನ್ನು ದೊಡ್ಡದು ಮಾಡುತ್ತಿವೆ.
*****
Nice info 🙂
ಕಾಮಣ್ಣನನ್ನು ಸುಡುವ ಹಬ್ಬ ಅರ್ಥ ಕಳೆದುಕೊಂಡಿದೆ. ನಮ್ಮೆಲ್ಲಾ ಹಬ್ಬಗಳು ಹೀಗೇ ತಾನೇ ? ಮೊದಲೇ ನಮ್ಮ ರಸ್ತೆಗಳು ಸರಿ ಇಲ್ಲ. ರಸ್ತೆಯ ನಡುವೆ ಹಳೆಯ ತಯರುಗಳನ್ನು ಇಟ್ಟುಸುಡುವ ಪರಿ ನೋಡಿದರೆ ಅಯ್ಯೋ ಅನಿಸುವುದು. ಇದನ್ನೆಲ್ಲಾ ಎನಿತು ಸರಿಪಡಿಸಲಿ?