ಚಿಕ್ಕಮ್ಮ ಬಂದು ಗುಟ್ಟಿನಲ್ಲಿ ಎಂಬಂತೆ ನನ್ನನ್ನು ಕರೆದು ಹೋಳಿಗೆ ಕಟ್ಟು ಕಟ್ಟಿಡ್ತೀಯಾ.. ಎಂದಳು. ಚಿಕ್ಕಪ್ಪನ ಕಡೆಗೆ ನೋಡಿದೆ. ಐವತ್ತು, ಮತ್ತೊಂದು ಹತ್ತು ಎಂಬಂತೆ ಸನ್ನೆ ಮಾಡಿದರು.
ಸರಿ .. ನಮ್ಮ ಬಳಗ ಸಿದ್ದವಾಯ್ತು. ಈ ರಹಸ್ಯ ಕಾರ್ಯಕ್ಕೆಂದೇ ಒಂದು ಪುಟ್ಟ ಕೋಣೆಯಿತ್ತು. ನಾವಲ್ಲಿಗೆ ಸೇರಿ ಕಾಲು ಚಾಚಿ ಕುಳಿತುಕೊಂಡೆವು.
ಅಲ್ಲೇ ಇದ್ದ ಚಿಕ್ಕಪ್ಪನ ಮಗ ನಮ್ಮ ಸಹಾಯಕ್ಕೆ ಸಿದ್ಧನಾದ.
ಪೇಪರ್ , ಪ್ಲಾಸ್ಟಿಕ್ ಕವರ್, ಹೋಳಿಗೆಯ ಗೆರಸೆ ತಂದಿಡು ಎಂದೆವು.
ಎಲ್ಲವೂ ಒಂದೊಂದಾಗಿ ನಮ್ಮೆದುರು ಪ್ರತ್ಯಕ್ಷವಾಯಿತು.
ಹಳೇ ನ್ಯೂಸ್ ಪೇಪರಿನ ಹಾಳೆಗಳನ್ನು ಅಗಲವಾಗಿ ಬಿಡಿಸಿಟ್ಟುಕೊಂಡೆವು. ಒಬ್ಬರು ಹೋಳಿಗೆ ಲೆಕ್ಕ ಮಾಡಿ ಅದಕ್ಕೆ ಹಾಕುವುದು. ಇನ್ನೊಬ್ಬರು ಅದನ್ನು ಮಡಚಿ ಪ್ಯಾಕ್ ಮಾಡುವುದು, ನಂತರದವರು ಅದನ್ನು ಪ್ಲಾಸ್ಟಿಕ್ ಕವರಿನ ಒಳಗೆ ಹಾಕುವುದು, ಇದಿಷ್ಟು ಮುಖ್ಯ ಕೆಲ್ಸವಾದರೆ ಉಪ ಕೆಲಸಗಳು ಇನ್ನೂ ಹಲವಿದ್ದವು. ಹೋಳಿಗೆ ಒಂದಕ್ಕೊಂದು ಅಂಟಿದ್ದರೆ ಅದನ್ನು ಹರಿಯದಂತೆ ಬಿಡಿಸುವುದು, ಆಕಸ್ಮಾತ್ ಹರಿದರೆ ಅದನ್ನು ಕುಳಿತವರೆಲ್ಲಾ ಸಮಪಾಲು ಹರಿದು ಮುಕ್ಕುವುದು, ಗೆರಸೆಯಲ್ಲಿ ಉಳಿಯುವ ಹೋಳಿಗೆಯ ಹೂರಣದ ಹುಡಿಗಾಗಿ ಜಗಳ ಕಾಯುವುದು.. ಇಂತಹ ಕೆಲಸಗಳೇ ಹೋಳಿಗೆ ಕಟ್ಟುವ ಕೆಲಸವನ್ನು ಆಕರ್ಷಕವನ್ನಾಗಿ ಮಾಡುತ್ತಿದ್ದುದು.
ಇದಲ್ಲದೇ ಹೋಳಿಗೆ ಕಟ್ಟುವಾಗ ಜ್ಞಾನ ಯಜ್ಞವೂ ನಡೆಯುತ್ತಿತ್ತು ಎಂದು ತಿಳಿದರೆ ಆಶ್ಚರ್ಯವಾಗುತ್ತದಲ್ಲಾ.. ಅದು ಕೂಡಾ ನಮ್ಮ ನಮ್ಮ ತಿಳುವಳಿಕೆಯ ಈಗ ಪ್ರಚಲಿತವಾಗಿರುವ ಸುದ್ದಿಗಳಲ್ಲ. ರಾಷ್ಟ್ರೀಯ , ಅಂತರ ರಾಷ್ಟ್ರೀಯ, ರಾಜ್ಯ, ಜಿಲ್ಲಾವಾರು ಸುದ್ದಿಗಳ ಹಿಸ್ಟ್ರಿ ರೂಪ ಚರ್ಚೆಗೊಳಗಾಗುತ್ತಿದ್ದುದು. ಸದ್ದಾಂ ಹುಸೇನ್ ಸತ್ತಲ್ಲಿಂದ ವೀರಪ್ಪನ್ ಮೀಸೆಯವರೆಗೆ ಒಂದು ಸುದ್ದಿ ಹರಿದಾಡಿದರೆ, ಇನ್ನೊಂದು ಲಾಲೂ ಪ್ರಸಾದ್ ನ ಸುದ್ದಿಯಿಂದ ಹೇಮಾಮಾಲಿನಿಯ ಕೆನ್ನೆಯ ನುಣುಪನ್ನು ಸವರುತ್ತಿತ್ತು. ಅವುಗಳ ಮೂಲ ಆಕರಗ್ರಂಥಗಳು ಎಂದರೆ ಹೋಳಿಗೆ ಕಟ್ಟಲು ಬಳಸುತ್ತಿದ್ದ ಹಳೇ ಪೇಪರುಗಳು.
ಈ ಹಳೇ ಪೇಪರ್ ಗಳು ಯಾವಾಗಲೂ ಕುತೂಹಲ ಹುಟ್ಟಿಸುವಂತದ್ದು. ನಾವು ಓದಿಯೇ ಇರದ ಸುದ್ದಿಗಳು ದುತ್ತೆಂದು ಅದರಲ್ಲಿ ಕಂಡು ಅದನ್ನು ಓದಿ ಮುಗಿಸುವವರೆಗೆ ಹೋಳಿಗೆ ಕಟ್ಟುವ ಕೆಲಸ ಮುಂದೂಡಲ್ಪಡುತ್ತಿತ್ತು. ಮೊದಲನೇ ಪೇಪರಿನಲ್ಲಿ ಸಿನಿಮಾ ತಾರೆಯೊಬ್ಬಳು ಗಂಡನಿಗೆ ಸೋಡಾ ಚೀಟಿ ಕೊಟ್ಟ ಸಂಗತಿಯ ರಸಭರಿತ ವಿಷಯವಿದ್ದರೆ, ಮತ್ತೆ ನಾಲ್ಕು ಕಟ್ಟು ಹೋಳಿಗೆ ಕಟ್ಟಿ ಆದ ನಂತರ ಸಿಕ್ಕುವ ಪೇಪರಿನಲ್ಲಿ ಅವಳ ಮದುವೆಯ ಕಥೆಯೂ ಯಾವ ಸಿನಿಮಾ ಕಥೆಗಳಿಂದಲೂ ಕಡಿಮೆ ಇಲ್ಲದಂತೆ ವರ್ಣಿಸಲ್ಪಟ್ಟಿರುತ್ತಿತ್ತು. ಮತ್ತೆ ಸಿಗುವ ಪೇಪರಿನಲ್ಲಿ ಅವಳ ಈಗಿನ ಗಂಡನ ಮಗಳು, ಹಿಂದಿನ ಗಂಡನ ಮಗನ ಜೊತೆ ನಟಿಸುತ್ತಿರುವ ಬಗ್ಗೆ ವಿವರಣೆಗಳು ಸಿಗುತ್ತಿದ್ದವು. ಇನ್ನು ಕೆಲವು ಪೇಪರುಗಳಲ್ಲಿ ಪ್ರಕಟವಾದ ಕಥೆಗಳು ಕುತೂಹಲದಿಂದ ಓದಿಸಿಕೊಂಡು ಹೋಗಿ, ನಾಲ್ಕನೇ ಪುಟಕ್ಕೆ ಎಂದು ಕಥೆ ನಿಂತಾಗ ಆ ನಾಲ್ಕನೇ ಪುಟದ ಹುಡುಕಾಟ ಶುರು. ಕೆಲವೊಮ್ಮೆ ಅದರಲ್ಲೇ ಹೋಳಿಗೆ ಕಟ್ಟಿ ಆಗಿದ್ದರೆ ಆ ಹೋಳಿಗೆ ಕಟ್ಟುಗಳು ಮತ್ತೆ ಬಿಡಿಸಲ್ಪಟ್ಟು ಚೆಲ್ಲಾಪಿಲ್ಲಿಯಾಗುತ್ತಿದ್ದವು.
ನಮಗಿಷ್ಟದ ಹೀರೋ ಗಳೋ ಹೀರೋಯಿನ್ನುಗಳೋ ಪೇಪರಿನಲ್ಲಿ ಪ್ರತ್ಯಕ್ಷರಾಗಿ ಮುಖ ತೋರಿಸಿದರೆ ನಮ್ಮ ಕೆಲಸ ಸ್ವಲ್ಪ ಹೊತ್ತು ನಿಂತು ಅವರ ಮೊದಲಿನ ಸಿನಿಮಾದಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಸಿನಿಮಾಗಳನ್ನು ನೆನಪಿಸಿಕೊಂಡು, ಯಾವುದರಲ್ಲಿ ಹೇಗೆ ಮಾಡಿದ್ದಾರೆ, ಹೇಗೆ ಮಾಡಬೇಕಿತ್ತು ಎಂಬ ಗಂಭೀರ ವಿಮರ್ಶೆಯತ್ತ ಹೊರಳುತ್ತಿದ್ದೆವು. ಆಗೊಮ್ಮೆ ಈಗೊಮ್ಮೆ ಪಾಯಸದಲ್ಲಿ ದ್ರಾಕ್ಷೆ ಸಿಕ್ಕಂತೆ, ನಮಗಿಷ್ಟದ ಬಣ್ಣದ ಸೀರೆಯೋ, ಆಭರಣಗಳ ಪ್ಯಾಟರ್ನ್ ಇರುವ ಪೇಪರುಗಳು ಕಾಣಿಸಿದರೆ ಅವುಗಳು ಹೋಳಿಗೆಯನ್ನು ಮುಟ್ಟಿಸಿಕೊಳ್ಳದೆ ದೂರ ಕುಳಿತು ನಮ್ಮ ವಿಷಯವನ್ನು ಮಹಿಳೀಕರಿಸಿಕೊಳ್ಳುತ್ತಿದ್ದವು. ಈ ಚಿನ್ನ , ಬಣ್ಣದ ವಿಷಯ ಬದಲಾಗಿ ಅದು ಪುರುಷ ಪ್ರಧಾನವಾಗಬೇಕಾದರೆ ತಲೆಗೊಂದು ಹೆಲ್ಮೆಟ್ಟು, ಕೈಯಲ್ಲೊಂದು ಬ್ಯಾಟು ಹಿಡಿದ ಸಚಿನ್ನನೇ ಕಾಣಿಸಿಕೊಳ್ಳಬೇಕಿತ್ತು. ಅವನ ಬೌಂಡರಿ ಸಿಕ್ಸರುಗಳ ಚರ್ಚೆಗಳು ಬಿಸಿ ಏರಿದಂತೆಲ್ಲಾ ಐದೈದು ಹೋಳಿಗೆಗಳ ಕಟ್ಟುಗಳಾಗಬೇಕಾದಲ್ಲಿ ಕೆಲವು ನಾಲ್ಕು ಮಾತ್ರ ಹೊಂದಿದರೆ ಇನ್ನು ಕೆಲವು ಆರು ಹೋಳಿಗೆಗಳನ್ನು ಹೊಂದುತ್ತಿತ್ತು.
ಹಾಗೆಂದು ’ಈ ಸಮಯ ಆನಂದಮಯ’ ಅಂತೇನಿಲ್ಲ ಬಿಡಿ. ಕೆಲವೊಮ್ಮೆ ಚಿರಸ್ಮರಣೆ ಕಾಲಮ್ಮಿನಲ್ಲಿ ನಮಗೆ ತಿಳಿದವರ ಫೊಟೋಗಳು ಕಾಣಿಸಿಕೊಂಡು ಅವರು ಮರೆಯಾದುದಕ್ಕೆ ಮತ್ತೊಮ್ಮೆ ನಮ್ಮ ಸಂತಾಪವನ್ನು ಪಡೆದುಕೊಳ್ಳುತ್ತಿದ್ದರು. ಈ ದುಃಖದ ಕ್ಷಣಗಳೂ ಏನು ನಿರಂತರವಲ್ಲ. ಮತ್ತೊಂದು ಪೇಪರಿನ ಮೇಲೆ ಕಾಣಿಸುವ ನೇತ್ರಾವತಿ ತಿರುವು ಯೋಜನೆ, ರಾಜಕಾರಿಣಿಗಳ ಲಾಭಕೋರತನ, ಗಡಿಯಲ್ಲಿನ ಯುದ್ಧ, ಇವೆಲ್ಲಾ ಕಣ್ಣಿಗೆ ಬಿದ್ದೊಡನೆ ರೋಷಾವೇಶ ಉಕ್ಕಿ ನಮ್ಮ ನಾಲಿಗೆಗಳು ಹರಿತಗೊಳ್ಳುತ್ತಿದ್ದವು.
ನಮ್ಮ ಗದ್ದಲ ಜೋರಾದರೆ ಯಾರಾದರೂ ಮನೆಯ ಹಿರಿಯರು ಕಣ್ಣು ಹಾಯಿಸುತ್ತಾ ’ಎಂತಾ ಇದು ಬರೀ ಗೌಜಿಯೇ ಆಯ್ತು ನಿಮ್ಮದು ..ಇಲ್ಲಿ ನೋಡಿ ಹೋಳಿಗೆ ಎಲ್ಲಾ ಪುಡಿಯಾಗಿ ಪಂಚಕಜ್ಜಾಯವಾಗಿದೆ’ ಎಂದು ಕಣ್ಣು ಕೆಕ್ಕರಿಸಿದರೆ, ಈ ಹೋಳಿಗೆ ಮಾಡಿದ್ದೇ ಸರಿ ಆಗಲಿಲ್ಲ ಎಂದು ಅದನ್ನು ತಯಾರಿಸಿದ ಅಡುಗೆ ಭಟ್ಟರ ಮೇಲೆ ಗೂಬೆ ಕೂರಿಸಿ ನಿಷ್ಕಳಂಕರಂತೆ ಫೋಸ್ ಕೊಡುವುದರಲ್ಲೂ ನಾವು ನಿಪುಣರು.
ನೋಡಲೇನೋ ಯಕಃಶ್ಚಿತ್ ಕೆಲಸದಂತೆ ಕಾಣುವ ಹೋಳಿಗೆಯ ಕಟ್ಟು ಕಟ್ಟುವ ಕೆಲಸ ಆ ಸ್ವಲ್ಪ ಹೊತ್ತಿನಲ್ಲೇ ನವರಸಗಳನ್ನೂ ನಮ್ಮೆದುರು ಕಾಣಿಸಿ ಜೀವನ ದರ್ಶನ ಮಾಡುತ್ತಿತ್ತು ಎಂದರೆ ಸುಳ್ಳಲ್ಲ.
-ಅನಿತಾ ನರೇಶ್ ಮಂಚಿ
*****
ಹೆ ಹೆ. ಸೂಪರ್ ಅನೀತಕ್ಕ.. ನಾನೇ ನಿಮ್ಮ ಜೊತೆ ಕೂತು ಒಂದಿಷ್ಟು ಕಟ್ಟಿದ ಹಂಗಾತು .. ಕಣ್ಣಿಗೆ ಕಟ್ಟುವಂತಾ ವಿವರಣೆ 🙂
thank u 🙂