ಹೋರಾಟದ ಹೆಜ್ಜೆ ಮೂಡಿಸಿ ಮರೆಯಾದ ಮಿತ್ರ ಈಶ್ವರ ಮಗದುಮ್: ಅಶ್ಫಾಕ್ ಪೀರಜಾದೆ

ಈಗ ಬರೆಯುತ್ತಿರುವ ಒಂದೊಂದು ಅಕ್ಷರಕೂಡ ನೇರವಾಗಿ ನನ್ನ ಹೃದಯದಿಂದ ತೊಟ್ಟಿಕುತ್ತಿರುವಂತೆ ಭಾಸವಾಗುತ್ತಲಿದೆ. ಅಂತಿಮವಾಗಿ ಅವನ ಮುಖದರ್ಶನ ಮಾಡಿಕೊಂಡು ಬಂದಾಗಿನಿಂದಲೂ ಮನಸ್ಸಿಗೆ ಸೊಗಸೇ ಇಲ್ಲದಂತಾಗಿದೆ. ಏನೋ ಕಳೆದುಕೊಂಡಿದ್ದು ಅಲ್ಲ ಎಲ್ಲವನ್ನು ಕಳೆದುಕೊಂಡಂತೆ ಹೃದಯ ತಬ್ಬಲಿಯಾಗಿ ಆಕ್ರಂದಿಸುತ್ತಲಿದೆ. ಜೀವ ಸಮಾಧನವಿಲ್ಲದೆ ಒದ್ದಾಡುತ್ತಿದೆ. ನನ್ನೊಳಗಿನ ತಬ್ಬಲಿತನದ ಭಾವನೆ ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಅನಿಸುತ್ತಲಿದೆ. ಅಣ್ಣ ಸಯಿದ ಮತ್ತು ಸ್ನೇಹಿತ ವಿಠ್ಠಲ ಕರೆ ಮಾಡಿ ನಮ್ಮ ಈಶ್ವರ ಇನಿಲ್ಲವೆಂದಾಗ ಒಂದು ಕ್ಷಣ ನನ್ನ ಕಾಲ ಕೆಳಗಿನ ಭೂಮಿಯೇ ಬಾಯ್ದೆರೆದು ನುಂಗಿದಂತೆ ಭಾಸವಾಯಿತು ನನಗೆ. ಈ ಅನಿರೀಕ್ಷಿತ ಭೀಕರ ಸುದ್ದಿ ಸಿಡಿಲಿನಂತೆ ಎರಗಿದ್ದು ಸುಮಾರು ಹತ್ತು ಗಂಟೆಗೆ, ಮಣ್ಣು ಒಂದು ಗಂಟೆಗೆ ಎಂದ್ರು ನಾನು ಧಾರವಾಡದಿಂದ ನನ್ನೂರು ಮೂಡಲಗಿಗೆ ತಲುಪಬೇಕಾದರೆ ಕನಿಷ್ಠ ನಾಲ್ಕು ಗಂಟೆಯಾದರು ಬೇಕು ಇರಲಿ ಏನಾದರು ಆಗಿ ಸ್ವಲ್ಪ ಲೇಟಾದರು ಮುಖದರ್ಶನವಾಗಬಹುದೆಂಬ ಭರವಸೆಯೊಂದಿಗೆ “ನಾನುಬರುತ್ತೇನೆ” ಸಲ್ಪ ಲೇಟಾದರು ವೇಟ ಮಾಡಿ ಎಂದು ಬಸ್ಸುಹತ್ತಿದೆ. ಬಸ್ಸಿನಲ್ಲಿ ಕುಳಿತಕೊಂಡ ನಂತರ ಅವನೊಟ್ಟಿಗಿನ ಒಡನಾಟದ ಕ್ಷಣಗಳು ಮಿದುಳು ತುಂಬ ಸಿಡಿಯ ತೊಡಗಿದವು.

“ಬೇರೆಯವರೊಂದಿಗೆ ಇರುವ ಸಂಬಂಧವೇ ಬೇರೆ ಆದರೆ ನನ್ನ-ನಿನ್ನ ನಡುವಿನ ಸಂಬಂಧ ಇವೆಲ್ಲವುಕ್ಕಿಂತ ಮಿಗಿಲಾದದ್ದು, ಇದು ಸಾಹಿತ್ಯಿಕ ಸಂಬಂಧ, ಹೃದಯ ಹೃದಯದ ಸಂಬಂಧ” ಎಂದು ಹೇಳುತ್ತಿದ್ದ ಅವನ ಮಾತುಗಳು ಇನ್ನು ಸದಾಕಾಲ ನನಗೆ ನೆನಪಾಗಿ ಕಾಡಲಿವೆ ಅನ್ನಿಸುತ್ತೆ. ಎಂಭತ್ತರ ದಶಕದಲ್ಲಿ ಕಮ್ಯುನಿಸಂ ಉಚ್ಛಾಯ ಸ್ಥಿತಿಯಲ್ಲಿದ್ದ ಕಾಲ. ಗೋಕಾಕ್ನಲ್ಲಿ ಆತ ಕಾಲೇಜ ಓದುತ್ತಿರಬೇಕಾದರೆ ರಾಜ ಕಮ್ಯುನಿಷ್ಠ ಪಕ್ಷದ ಸದಸ್ಯನಾಗಿ, ಅಖೀಲ ಭರತ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಸಮಾಜಿಕ ಚಳುವಳಿಗಳಲ್ಲಿ ಆಕ್ಟಿವ್ ಆಗುವುದರ ಮೂಲಕ ಆಗಲೇ ಸಮಾಜ ಮುಖಿಯಾಗಿದ್ದ. ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೇ ದೀನ ದಲಿತರ, ಬಡಬಗ್ಗರ, ಹಮಾಲರ, ಕಾರ್ಮಿಕರ ನ್ಯಾಯಕ್ಕಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದ. ಸಾಮಾಜಿಕ ಚಳುವಳಿ, ಹೋರಾಟಗಳಲ್ಲಿ ಸಕ್ರೀಯನಾಗಿದ್ದ. ಗೋಕಾಕದಲ್ಲಿ ಸಮತಾವಾದ ಕಟ್ಟಿ ಬೆಳೆಸುವುದರಲ್ಲಿ ಪ್ರಮುಖರಾದ ಸಮದರ್ಶಿ ದಿನ ಪತ್ರಿಕೆಯ ಸಂಪಾದಕ ಬಿ. ಎನ್. ಧಾರವಾಡಕರ, ಕ್ರಾಂತಿ ಕವಿ ಜಿ. ಕೆ. ಬಡಿಗೇರ ಸರ್ ಅವರ ಒಡನಾಡಿಯಾಗಿ, ಹೋರಾಟಗಾರನಾಗಿ ಮುಂಚೂಣಿಯ ನಾಯಕನಾಗಿ ಬೆಳೆದು ಬಂದಿದ್ದ. ಜೊತೆಗೆ ರಾಜ್ಯ, ರಾಷ್ಟ್ರಮಟ್ಟದ ನಾಯಕರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ಕೆಂಡ ಸಂಪಿಗೆಯಾಗಿ ಅರಳಿದ್ದ, ಈಗಿನ “ಹೊಸತು” ಪತ್ರಿಕೆ ಸಂಪಾದಕ, ಬಂಡಾಯಕವಿ ಡಾ||ಸಿದ್ಧನಗೌಡ ಪಾಟೀಲರು ಅವನಿಗೆ ಅತ್ಯಂತ ಆತ್ಮೀಯರು ಹಾಗೂ ಮಾರ್ಗದರ್ಶಕರು ಕೂಡ ಆಗಿದ್ದರು. ಅನ್ಯಾಯ ಎಲ್ಲೆ ಇರಲಿ ಸಿಡಿದೇಳುವ, ಸಾಮಾಜಿಕ ನ್ಯಾಯಕ್ಕಾಗಿ ಸದಾ ತುಡಿಯುವ ಹೋರಾಟ ಜೀವಿಯಾಗಿದ್ದ.

ಇತ್ತ ಕನ್ನಡ ಬಾಷೆಯಲ್ಲಿ ಬಿ. ಎ. ಮಾಡುತ್ತಿರಬೇಕಾದರೆ ಇವನ ಹೋರಾಟದ ಬದುಕಿಗೆ ಸಾಹಿತ್ಯದ ಗಂಧ ಲೇಪಿಸುವ ಮೂಲಕ ಅವನ ಸಾಹಿತ್ಯಕ ಪ್ರತಿಭೆಯನ್ನು ಬೆಳಕಿಗೆ ತಂದವರು ಪ್ರೊ|| ಚಂದ್ರಶೇಖರ ಅಕ್ಕಿಯವರು “ನಿನ್ನ ನರನಾಡಿಗಳೆಲ್ಲ ಹರಿದು ಹೋದರೂ ಅದರಿಂದ ವಸರುವ ರಕ್ತ ಕ್ರಾಂತಿಯದೇ ಆಗಿರಲಿ” ಎಂದು ಹಾರೈಸಿದ್ದರು. ಲೇನಿನ್, ಕಾರ್ಲಮಾಕ್ರ್ಸ್, ಮಾಕ್ಸಿಂಗಾರ್ಕಿ, ಬಸವರಾಜ ಕಟ್ಟಿಮನಿ, ನಿರಂಜನ ಮುಂತಾದವರನ್ನು ಓದಿಕೊಂಡು ಬೆಳೆಯುತ್ತಿದ್ದ ಹುಡುಗ ತನ್ನ ಗುರುಗಳು-ಹೇಳಿದಂತೆ ಅಸಮಾನತೆ ಕಂಡಲ್ಲಿ ಮರಗುತ್ತಿದ್ದ. ಅನ್ಯಾಯ, ಅತ್ಯಾಚಾರ ನಡೆದರೆ ಬೆಂಕಿಯಾಗುತ್ತಿದ್ದ. ಅವುಗಳ ವಿರುದ್ಧ ಧ್ವನಿಯಾಗುತ್ತಿದ್ದ ಆತ ಎತ್ತಿದ ಧ್ವನಿ ಮಾರ್ದನಿಸಿ ಲೆಕ್ಕಣಿಕೆ ಖಡ್ಗವಾಯಿತು. ಆ ಕಾಲಕ್ಕೆ ಸಮಾಜದಲ್ಲಿ ಬೇರೂರಿದ ಭ್ರಷ್ಟಾಚಾರಿಗಳು, ಸಮಾಜ ಕಂಟಕರು ಗಡಗಡಗಡನೇ ನಡುಗಿ ಹೋಗಿದ್ದರು. ಗೋಕಾಕ ಸಾಹಿತಿಗಳಾದ ಮಹಾಲಿಂಗಮಂಗಿ, ಲಕ್ಷ್ಮನ ಕಾಪಸೆ, ಶಂಕರ ತಲ್ಲೂರ, ಪ್ರಕಾಶ ಕೋಟಿನ ತೋಟ, ಮುನ್ನಾ ಬಾಗವಾನ ಸಮಾನ ಮನಸ್ಕ ಮನಸ್ಸುಗಳಾದ ವೀರಣ್ಣ ಗಣೇಶವಾಡಿ, ದೇಮಶೆಟ್ಟಿ ಸಹೋದರರು, ಈಶ್ವರ ಮಮದಾಪುರ, ಸಲೀಂ ಧಾರವಾಡಕರ, ಮುಂತಾದ ಸ್ನೇಹಿತರೊಂದಿಗೆ ಜೊತೆಗೂಡಿ ಸಾಹಿತ್ಯ ಮತ್ತು ಸಂಘರ್ಷದ ವಾತಾವರಣಕ್ಕೆ ಕಾರಣನಾಗಿದ್ದನು. ತನ್ನ ಹುಟ್ಟೂರು ಮೂಡಲಗಿಯ ಸಹಪಾಠಿ, ಸ್ನೇಹಿತರೊಂದಿಗೆ 1983 ರಲ್ಲಿ ಕ್ರಾಂತಿಯುವಕ ಸಂಘ ಹುಟ್ಟು ಹಾಕಿ ತನ್ನೂರಿನ ಅಭಿವೃದ್ಧಿ ಪರ ಕಾರ್ಯಗಳಿಗೆ ನಾಂದಿ ಹಾಡಿದ. ಇವುಗಳಲ್ಲಿ ಹೆಸರಿಸಬಹುದಾದ ಪ್ರಮುಖ ಕಾರ್ಯಗಳೊಂದಿಗೆ ಬಹು ಸುಧೀರ್ಘವಾಗಿ ನಡೆದ ಬಸ್ಸು ನಿಲ್ದಾಣದ ಹೋರಾಟ. ಮೂಡಲಗಿ ಪಟ್ಟಣಕ್ಕೆ ಒಂದು ಬಸ್ಸುನಿಲ್ದಾಣ ಇಲ್ಲದಿರುವುದು ನಾಚಿಕೆಯ ವಿಷಯವಾಗಿತ್ತು.

ಅಂದಿನ ರಾಜಕೀಯ ಶಕ್ತಿಗಳನ್ನು ಎದುರು ಹಾಕಿಕೊಂಡು “ಕ್ರಾಂತಿ ಯುವಕ ಸಂಘ”ದ ಗೆಳೆಯರೊಂದಿಗೆ ಹೋರಾಟ ನೆಡೆಸಿದ್ದು ಹಾಗೇನೆ ಈಗಿನ ಮೂಡಲಗಿ ತಾಲೂಕು ರಚನೆಯ ಹಿಂದಿನ ಪ್ರೇರಕ ಶಕ್ತಿಯಾಗಿಯೂ ಕಾರ್ಯ ಮಾಡಿದ್ದ. ಊರಿನಲ್ಲಿ ಬಸ್ ನಿಲ್ದಾಣ, ಕಲ್ಮೇಶ್ವರ ವೃತ್ತ, ಸ್ವಾತಂತ್ರ್ಯ ಯೋಧ ಸಂಗಪ್ಪಣ್ಣ ವೃತ್ತ ಮುಂತಾದ ಅಭಿವೃದ್ಧಿ ಕೆಲಸಗಳಿಗೆ ಮಾಹಿತಿ ಹಕ್ಕುಹೋರಾಟಗಾರ ಭೀಮಶಿ ಗಡಾದ, ಸಾಹಿತಿ ನಿಸಾರ ಪೀರಜಾದೆ, ವಿಠ್ಠಲ ಹಲಸಿ, ಗಜಾನನ ಪತ್ತಾರ, ಶಂಕ್ರಯ್ಯ ಹಿರೇಮಠ ಸಯೀದ ಪೀರಜಾದೆ, ಬಸವರಾಜ ಬೆಲ್ಲದ, ನಿಂಗಪ್ಪ ಪಿರೋಜಿ, ಬಸವರಾಜ ಪಡೆಪ್ಪನವರ, ಪ್ರಕಾಶ ಬೆಳಕೂಡ, ಇಸಾಕ, ಅಣ್ಣಾಸಾಹೇಬ ಕೊಕಟನೂರ, ಯ. ಯ. ಸುಲ್ತಾನಪುರರಂತ ಅನೇಕ ಕ್ರಾಂತಿಕಾರಿ ಸ್ನೇಹಿತರನ್ನು ಈ ಸಂಘದ ಮುಖಾಂತರ ಒಂದು ಗೂಡಿಸುವ ಮೂಲಕ ಊರಿನಲ್ಲಿ ಪರಿವರ್ತನೆಯ ಗಾಳಿ ಬೀಸುವುದಕ್ಕೆ ಕಾರಣಕರ್ತನಾಗಿದ್ದ. ಕಾಲೇಜು ದಿನಗಳಲ್ಲೆ ಪತ್ರಿಕೆಗಳಿಗೆ ಕ್ರಾಂತಿಕಾರಿ ಲೇಖನಗಳು, ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದ . ಸಮಾದರ್ಶಿ ಸಂಪಾದಕ ಧಾರವಾಡಕರರ ಪತ್ರಿಕಾ ಕ್ಷೇತ್ರದಲ್ಲಿ ಈಶ್ವರನಿಗೆ ಗುರು ಅನಿಸಿಕೊಂಡವರು, ತಮ್ಮ ಸಮದರ್ಶಿ ಪತ್ರಿಕೆಗಾಗಿ ಅವನಿಂದ ವರದಿಗಳನ್ನು ತರಿಸಿ ಲೇಖನಗಳನ್ನು ಬರೆಸುತ್ತಿದ್ದರು. ಮುಂದೆ ಬರವಣಿಗೆ ಮತ್ತು ಹೋರಾಟವಷ್ಟೆ ತನ್ನ ಬದುಕಿನ ಉಸಿರಾಗಬೇಕು ಎಂದು ತೀರ್ಮಾನಿಸಿದ ಈಶ್ವರ, ಬರೆದು ಬದುಕುವ ನಿರ್ಧಾರಕ್ಕೆ ಬಂದಿದ್ದ. ಮುಂದೆ ರೈತ ಹೋರಾಟಗಾರ ಮುಚಳಂಬಿ ಇವರ “ಹಸಿರುಕ್ರಾಂತಿ” ಪತ್ರಿಕೆಯ ಉಪ ಸಂಪಾದಕನಾಗಿ ಅನುಭವ ಹೊಂದಿದ ನಂತರ ತನ್ನದೇ ಸಂಪಾದಕತ್ವದ ಬೆವರಿ ಬೆಲೆ, ಈಶ್ವರ ಪತ್ರಿಕೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದ್ದ.

ಎಲ್ಲಕ್ಕಿಂತ ಮುಂಚೆ ಬೆಳಗಾವಿಯಿಂದ ಹೊರಡುತ್ತಿದ್ದ ನಾಡೋಜ ಮತ್ತು ಕನ್ನಡಮ್ಮ ದಿನಪತ್ರಿಕೆಗಳು ನಮ್ಮ ಪೀಳಿಗೆಯ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಯುವಕರಲ್ಲಿ ಸಾಹಿತ್ಯದ ಕನಸು ಬಿತ್ತುತ್ತಿದ್ದವು. ಈಶ್ವರ ಸೇರಿದಂತೆ ಅನೇಕ ಮಿತ್ರರರ ಕವನಗಳು ಪ್ರತಿವಾರ ಸಾಪ್ತಾಹಿಕ ಪುರಣಿಯಲ್ಲಿ ಪ್ರಕಟವಾಗುತ್ತಿದ್ದವು ಪ್ರತಿ ರವಿವಾರ ನಾವು ತುದಿಗಾಲ ಮೇಲೆ ನಿಂತು ಈ ಪತ್ರಿಕೆಯ ಬರುವಿಕೆಯನ್ನು ಕಾಯುತ್ತಿದ್ದೆವು. ಈ ಸ್ನೇಹಿತರು ಹಾಗೂ ನಾಡೋಜ, ಕನ್ನಡಮ್ಮದಂಥ ಪತ್ರಿಕೆಗಳ ಸೃಷ್ಠಿಸಿದ್ದ ಸಾಹಿತ್ಯಕ ಪರಿಸರ ನನ್ನನ್ನು ಸಹ ಸಾಹಿತ್ಯ ಲೋಕದತ್ತ ಸೆಳೆಯಲು ಕಾರಣವಾಗಿ ಅದೊಂದು ದಿನ ಹೈಸ್ಕೂಲಿನಲ್ಲಿ ಬಹುಶಃ ಎಂಟನೇಯತರಗತಿಯಲ್್ಲಿದ್ದದಾಗ “ಜೀವನಗಾಲಿ” ಎಂಬ ಕವನ ಬರೆದು ನಾಡೋಜ ಪತ್ರಿಕೆಗೆ ಕಳಿಸಿದೆ. ಅದು ಅದೇ ವಾರದ ಸಾಪ್ತಾಹಿಕದಲ್ಲಿ ಪ್ರಕಟವಾಯಿತು. ಅಲ್ಲಿಂದಲೇ ನನ್ನ ಸಾಹಿತ್ಯ ಪಯಣ ಆರಂಭಗೊಂಡಿತು. ನನ್ನ ಕತೆ, ಕವಿತೆ, ಲೇಖನಗಳು ವಿವಿಧಪತ್ರಿಕೆಗಳಲ್ಲಿ ಬೆಳಕು ಕಾಣಲಾರಂಭಿಸಿದವು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಈಶ್ವರ (ಆಗ ಅಪರಿಚಿತ) ಒಂದು ದಿನ ನನ್ನನ್ನು ಮುಖತಃ ಭೆಟ್ಟಿಯಾಗಿ ಮೆಚ್ಚುಗೆ ಮಾತಾಡಿ, ಬೆನ್ನುತಟ್ಟಿ ಹೋಗಿದ್ದಷ್ಟೆಯಲ್ಲದೆ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಗಳಿಗೆ ನನ್ನಿಂದ ಬರೆಸಲು ಆರಂಭಿಸಿದ. ತನ್ನ ಸಂಪಾದಕತ್ವದಲ್ಲಿ ಪತ್ರಿಕೆ ಆರಂಭಿಸಿದ ನಂತರವಂತೂ ನಾನು ಆ ಪತ್ರಿಕೆಯ ಭಾಗವಾಗಿಯೇ ಹೋದೆ “ಬೆವರಿನ ಬೆಲೆ” ಪತ್ರಿಕೆಯಂತು ತಾಲೂಕಿನ “ಹಾಯ್ ಬೆಂಗಳೂರ” ಅನ್ನುವ ಮಟ್ಟಕ್ಕೆ ಬೆಳೆದಿತ್ತು. ನಾನು ಇನ್ನೊಬ್ಬ ಕ್ರಾಂತಿಕಾರಿ ಮಿತ್ರ ಶ್ರೀಶೈಲ ಬೂದಿಹಾಳ, ಮಾನಿಂಗಯ್ಯಾ, ಬಸವರಾಜ ಬೋರಶೆಟ್ಟಿ, ಈರಪ್ಪ ತಟಗಾರ ಎಲ್ಲ ಸೇರಿ ಶ್ರಮವಹಿಸಿದ ನೆನಪು ಈಗಲೂ ಹಸಿರಾಗಿದೆ. ಆಗ ಆತ ನನ್ನ ಮುಂದೆ ಕುಳಿತು ಲೇಖನ, ವರದಿಗಳನ್ನು ಬರೆಸುತ್ತಿದ್ದ ಅವನು ಹೇಳಿದ್ದು ನಾನು ಅಕ್ಷರ ರೂಪಕ್ಕೆ ಇಳಿಸಬೇಕು “ನೀನು ಬರೆದರೆ ಮಾತ್ರ ನನಗೆ ತೃಪ್ತಿ ಏಕೆಂದರೆ ನ್ತೆ್ತೆ್ತೆ ತೆಲೆಯಲ್ಲಿರುವ ಯೋಚನೆಗಳು ಯಥಾವತ್ತಾಗಿ ನೀನು ಕಾಗದದ ಮೇಲೆ ಮೂಡಿಸುವುದು ನನಗೆ ಪರಮಾಶ್ಚರ್ಯ ಎನ್ನುತ್ತಿದ್ದ. ನಾನು ಅವನ ಅಂತರಂಗವನ್ನು ಅರಿತವನಾಗಿದ್ದೆ . ಅವನು ಲೇಖನದಲ್ಲಿ ಏನು ಬಯಸುತ್ತಿದ್ದಾನೆ ಎಂದು ಅರ್ಥವಾಗಿ ಹೋಗುತ್ತಿತ್ತು. ಹೀಗಾಗಿ ನಾವಿಬ್ಬರು ಒಂದೇ ಜೀವ ಎರಡು ದೇಹಗಳಾಗಿದ್ದೆವು ಎಂದು ಹೇಳಿದರೆ ತಪ್ಪಾಗಲಾರದು. ಆತ ಯಾವಾಗಲಾದರು ನನಗೆ ಬರೆಯಬೇಕಾದರೆ “ನನ್ನ ಪ್ರೀತಿಯ ಜೀವ ಅಶ್ಫಾಕ್” ಅಂತಲೇ ಸಂಬೋಧಿಸುತ್ತಿದ್ದ. ಅಲ್ತಾಫ್ ಹವಾಲ್ದಾರ್, ಅಕ್ಬರ್ ಪೀರಜಾದೆ, ಈರಪ್ಪ ತಟಗಾರ, ಅಣ್ಣಾಸಾಬ ಕೊಕಟನೂರ, ಮುಧೋಳ ರಂಥ ಯುವಕರನ್ನು ಪತ್ರಿಕಾ ಲೋಕಕ್ಕೆ ತಂದು ಪ್ರೋತ್ಸಾಹಿಸಿದ್ದ. ಬಂಡಾಯದ ಆ ಕಾಲದಲ್ಲಿಆತ ಬರೆದ “ದೇವರ ಹೆಸರಿನಲ್ಲಿ” ಎಂಬ ಕ್ರಾಂತಿಕಾರಿ ಕಥೆ ಸಾಹಿತ್ಯಲೋಕದಲ್ಲಿ ಬಿರುಗಾಳಿಯನ್ನು ಸೃಷ್ಠಿಸಿತ್ತು. ಇಂಥ ಅನೇಕ ಕತೆ, ಕವಿತೆಗಳು ಸಾಹಿತ್ಯಲೋಕಕ್ಕೆ ಅವನಿತ್ತ ಕೊಡುಗೆ, ಮುಂದೆ ಇದೇ “ದೇವರ ಹೆಸರಿನಲ್ಲಿ” ಎಂಬ ಕಥಾಸಂಕಲವನ್ನು ಸಂಪಾದಿಸಿ ಪ್ರಕಟಿಸಿದ ಇಂದಿರಾಗಾಂಧಿ ಹತ್ಯೆಯಾದಸಂದರ್ಭದಲ್ಲಿ “ಅಶೃತರ್ಪಣ” ಎಂಬ ಕವನ ಸಂಕಲ ಸಂಪಾದಿಸಿದ್ದ. ಹೀಗೆ ಅನೇಕ ಕೃತಿಗಳನ್ನು ಸಂಪಾದಿಸಿ ಪ್ರಕಾಶಿಸುವ ಮೂಲಕ ಸಾರಸತ್ವ ಲೋಕದ ಶ್ರೀಮಂತಿಕೆಗೆ ಕಾರಣವಾಗಿದ್ದ.

ಮುಂದೆ ಜೀವನ ಜಂಜಾಟ, ಬದುಕಿನ ಹೋರಾಟದ ಕಾರಣ ಸಾಹಿತ್ಯ ಮತ್ತು ಹೋರಾಟ ಈ ಎರಡರಿಂದಲೂ ವಿಮುಖನಾಗುತ್ತ ನಡೆದ. ನನಗೆ ಬರೆಯಲು ಆಗುತ್ತಿಲ್ಲ ಆದರೆ ನೀನು ಮಾತ್ರಬರೆಯೋದು ನಿಲ್ಲಿಸಬೇಡ ಬರೀತಾ ಇರು. . . . . ಎಂದು ಪೀಡಿಸುತ್ತಿದ್ದ. ಈಗ ತನ್ನ ಪತ್ರಿಕೆಗಳಿಗೆ ವರದಿಗಳನ್ನು, ಸಂಪಾದಕೀಯ “ಅಂತರಂಗದ ಅಲೆಗಳು” ಬಿಟ್ಟರೆ ಏನೂ ಬರೆಯುತ್ತಿರಲಿಲ್ಲ. ಬರೆದಿದ್ದು ತುಂಬಾ ಕಡಿಮೆ ಆದರೆ ಬರೆದುದ್ದೆಲ್ಲ ಗಟ್ಟಿಕಾಳುಗಳು. ಬರೆದಿದ್ದನ್ನು ಸಂಗ್ರಹಿಸಲಾರದಷ್ಟು ಸೋಮಾರಿ. ಅವನು ಬರೆದಿದ್ದು ಸಂಗ್ರಹಿಸಿ ಕೃತಿರೂಪ ಕೊಟ್ಟಿದ್ದರೆ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕೊಡೆಗೆಯಾಗುತ್ತಿದ್ದವು “ಅಂತರಂಗದ ಅಲೆಗಳು”ಕೃತಿಯಾಗಿಸೋಣ ಎಂದು ನಾನು ಎಷ್ಟು ಹೇಳಿದರೂ ಅವನು ಕಿವಿಗೆ ಹಾಕಿಕೊಳ್ಳಲಿಲ್ಲ. . . ನೋಡೋಣ ಮಾಡೋಣ ಎಂದು ಹೇಳತ್ತಲೇ ಹೋದ ಅವನ ಜೀವನವನ್ನು ನಾನು ನನ್ನ ಕತೆ, ಕವನಗಳಲ್ಲಿ ತರಲು ಪ್ರಯತ್ನಿಸಿದ್ದೆ “ನನ್ನ ನೋಡು, ನನ್ನ ಜೀವನ ನೋಡು, ಮತ್ತು ಬರಿ”ಎಂದು ಪ್ರೇರೆಪಿಸುತ್ತಿದ್ದ. ನನ್ನ ವರ್ಗಾವಣೆಯ ನಂತರ ನಾನು ಧಾರವಾಡಕ್ಕೆ ಬಂದು ನೆಲಸಬೇಕಾಯಿತು. ಆಗ ನನಗೂ ಅವನಿಗೂ ಸ್ವಲ್ಪ ಸಂಪರ್ಕ ಕಡಿಮೆಯಾಯ್ತು. ಆದರೂ ಆಗಾಗ ಕರೆ ಮಾತಾಡುತ್ತಿದ್ದ ಏನು ಬರೆದಿದ್ದೀಯಾ ಎಂದು ಕೇಳತ್ತಿದ್ದ. ಬರಿಬೇಕು ಎಂದು ಒತ್ತಾಯಿಸುತ್ತಿದ್ದುು. ನಿಂಜೊತೆ ಬಹಳಷ್ಟು ಮಾತಾಡುವದಿದೆ ಅಲ್ಲಿಗೇ ಬರ್ತೀನಿ ಅನ್ನುತ್ತಿದ್ದ. ಬರೆಯೋದಿದೆ ಬರ್ತೀನೀ ಅಲ್ಲೆಕುಳಿತು ಬರೆಯೋಣ ಅಂತಿದ್ದ. . . . . ನಿನ್ನ ಬರವಣಿಗೆ ಎಂದರೆ ನನಗೆ ತುಂಬಾ ಇಷ್ಟ. . . , ಪ್ರೀತಿ ಎಂದೆಲ್ಲ ಹೇಳುತ್ತಿದ್ದ. ಈ ಮಾತುಗಳೆಲ್ಲ ಈಗ ಕಣ್ಣೀರಿನ ಪ್ರತಿರೂಪವಾಗಿ ಇಲ್ಲಿ ಧಾರೆಯಾಗುತ್ತಿವೆ “ಪ್ರೇಮವೆಂದರೆ” ನನ್ನ ಪ್ರಥಮ ಕಥಾಸಂಕಲನಕ್ಕೆ ಬೆನ್ನುಡಿ ಬರೆದು “ನನ್ನ ಪ್ರೀತಿಯ ಜೀವ”ಅಶ್ಫಾಕ್ನ ಪ್ರಥಮ ಕೃತಿ ಈ ಮೂಲಕ ಆತ ಅಧಿಕೃತವಾಗಿ ಕನ್ನಡ ಸಾರಸ್ವತ ಲೋಕ ಪ್ರವೇಶಿಸಿದ್ದಾನೆ ಎಂದು ಬರೆದಿದ್ದ. ಈ ಕೃತಿ ಬರಲು ಆತ ಬಹಳಷ್ಟು ಶ್ರಮ ವಹಿಸಿದ್ದ ಕ. ಸಾ. ಪಾ ತಾಲೂಕಾ ಅಧ್ಯಕ್ಷಷಷ ಸ್ನೇಹಿತ ಪ್ರಕಾಶ ಬೆಳಕೂಡ ಅವರ ಮುನ್ನುಡಿ ಬರೆಸಿ ಬೆಳಗಾವಿಯಲ್ಲಿ ಹಗಲು ರಾತ್ರಿ ಬಿದ್ದು, ಮುದ್ರಿಸಿ ತಂದು ಬಿಡುಗಡೆ ಮಾಡಿಸಿದ್ದ. ಬಡಿಗೇರ ಸರ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಬಿಡುಗಡೆ ಮಾಡಿದ್ದ, ಇದರ ನಂತರ ಎರಡನೇಯ ಕೃತಿ ನನ್ನ ಮೊದಲು ಕವನ ಸಂಕಲನಕ್ಕೆಬೆಳಗಾವಿಯ ಖ್ಯಾತ ಸಾಹಿತಿ ಶ್ರೀ ಎಲ್. ಎಸ್. ಶಾಸ್ತ್ರಿ ಹಾಗೂ ಬಂಡಾಯ ಸಾಹಿತಿ ಡಾ|| ಸಿದ್ಧನಗೌಡ ಪಾಟೀಲರ ಮುನ್ನುಡಿಗಳನ್ನು ಬರೆಸಿ ಕಾವ್ಯಾಸಕ್ತರು ನನ್ನ“ಮನೋಲೋಕ” ಪ್ರವೇಶಿಸುವಂತೆ ಮಾಡಿದ್ದ. ಹಾಗೇ ಎರಡನೇಯ ಕವನ ಸಂಕಲನ “ಒಂದು ಜೋಡಿ ಕಣ್ಣು”ಕೃತಿಗೆ ತಾನೇ ಸ್ವತಃ ಮುನ್ನುಡಿ ಬರೆದು ಪ್ರಕಟಿಸಿದ್ದ. ನನ್ನ ನಾಲ್ಕನೇಯ ಕೃತಿ “ಜನ್ನತ್ ಮತ್ತು ಇತರಕಥೆಗಳು” ಪ್ರಕಟಿಸುವುದಕ್ಕೆ ಮುತವರ್ಜಿ ವಹಿಸಿದ್ದ ಇಂಥ ಅನೇಕಾನೇಕ ಘಟನೆಗಳು ಚಿರಸ್ಮರಣೀಯವಾದವುಗಳು,

ಇವೆಲ್ಲ ಹೇಳಲೇಬೇಕಾದ ನೆನಪುಗಳಾದರೆ ಹೇಳಲಾಗದೆ ಉಳಿಯುವ ಸಂಗತಿಗಳು ಸಾಕಷ್ಟು, ಆತ ಆಗಾಗ ಕುಡಿಯುತ್ತಿದ್ದ. ಹಾಗಂತ ಕುಡಿತಕ್ಕೆ ದಾಸನಾಗಿರಲಿಲ್ಲ. ಬಿಟ್ಟರೆ ವರ್ಷಾನುಗಟ್ಟಲೇ ಅದನ್ನು ಮೂಸಿಯೂ ನೋಡುತ್ತಿರಲಿಲ್ಲ. ಕುಡಿತದ ಚಟವೇ ಅವನನ್ನು ನುಂಗಿತು ಅನ್ನಲು ಬಲವಾದ ಕಾರಣಗಳಿಲ್ಲ. ಅವನ ಆರೋಗ್ಯ ತುಂಬ ಚೆನ್ನಾಗಿಯೇ ಇತ್ತು ಸಾಯುವ ಮುಂಚೆ ಎರಡ್ಮೂರ ದಿನಗಳಿಗೆ ವಿಪರೀತ ಕುಡಿಯುತ್ತಿದ್ದ ಎಂದು ಕೇಳಿದೆ. ಆದರೆ ಅಂತಿಮ ದರ್ಶನದಲ್ಲೂ ಅವನ ಮುಖದ ಮೇಲಿನ ಅಮಾಯಕ ನಗೆ ಮತ್ತು ಕಳೆ ಮಾಸಿರಲಿಲ್ಲ, ಕಂಗಳು ಕಾಂತಿಯುಕ್ತವಾಗಿಯೇ ಇದ್ದವು ಅವನು ನಮ್ಮನ್ನು ಬಿಟ್ಟು ಹೋಗೇ ಇಲ್ಲ ಅನ್ನುವ ಹಾಗೆ , ಹೌದು ಅವನು ಯಾವತ್ತಿಗೂ ಅಜರಾಮರ, ನಮ್ಮ ನೆನಪಿನಲ್ಲಿ ಸಾಹಿತ್ಯದಲ್ಲಿ ಮತ್ತು ಪತ್ರಿಕಾಲೋಕದಲ್ಲಿ ಅಚ್ಚಳಿಯದ ಹೆಸರು ನಮ್ಮ ವಿಚಾರಗಳಲ್ಲಿ ನಮ್ಮ ಕನಸುಗಳಲ್ಲಿ ಅವನು ಸದಾ ಹಸಿರು. ಅವನು ಪ್ರಾಣಬಿಟ್ಟ ದಿನವೇ ಆತನ ನೆನಪು ಕೆಲವಷ್ಟು ಹನಿಗವಿತೆಗಳು ಬರೆಸಿತು ಅದರಲ್ಲಿ ಒಂದು.

“ಉತ್ಕಟವಾಗಿ ಬದುಕಿ
ಅಷ್ಟೇ ತೀವೃವಾಗಿ
ಮರೆಯಾದ ಮಿತ್ರನ
ಹೆಜ್ಜೆ ಗುರುತುಗಳಿಗೆ ಸತ್ತ
ಕನಸುಗಳ ವಾಸನೆ”

ಹೌದು ಅವನ ಇಟ್ಟ ಪ್ರತಿಯೊಂದು ಹೆಜ್ಜೆಯ ಒಂದುಸಮಾನತೆಯ ಕನಸಾಗಿತ್ತು. ಅವನ ಜೊತೆಗೆ ಅವನ ಹೋರಾಟ ಮತ್ತು ಅವನು ಕಂಡ ಕನಸುಗಳು ಸಮಾಧಿಯಾದವು. ಕೆಲವು ಸ್ನೇಹಿತರಂತೆ ಅವನು ಅವಕಾಶವಾದಿಯಾಗಿರಲಿಲ್ಲ ಎಂಬುದೇ ಸಮಾಧಾನದ ಸಂಗತಿ. ಅವನ ಶಕ್ತಿ, ಬುದ್ದಿ ಹಾಗೂ ಅವನ ಜನ್ಮಕ್ಕೆ ಅಂಟಿದ ಜಾತಿ ಉಪಯೋಗಿಸಿ ಕೊಂಡು ಬೆಳದಿದ್ದರೆ ಆತ ಜಿಲ್ಲೆಯ ಪ್ರಮುಖ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬನಾಗಿರುತ್ತಿದ್ದ. ಆದರೆ ಅವನ ದುರಾದೃಷ್ಠ ಅವನು ಅಂಥ ಯಾವುದೆ ದುರಾಸೆಗೆ ಎಂದಿಗೂ ಬಲಿಯಾಗಲಿಲ್ಲ ಕೊನೆಯವರಿಗೆ ಜಾತ್ಯಾತೀತನಾಗಿ, ಸಮತಾವಾದಿಯಾಗಿ, ತಾನು ನಂಬಿದ ಸಿದ್ಧಾಂತಗಳಿಗಾಗಿ ಹಾಗೇ ಉಳಿದುಬಿಟ್ಟ ಎನ್ನುವುದು ಎಂದಿಗೂ ಮರೆಯಲು ಸಾಧ್ಯವಿಲ್ಲ.

– ಅಶ್ಫಾಕ್ ಪೀರಜಾದೆ .


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x