“ಬಾಬಾ ಎಲ್ಲೋಗಿದ್ದೆ ಇಷ್ಟು ದಿನ? ನೀನಿಲ್ಲದೆ ನಂಗಿಲ್ಲಿ ಒಬ್ನಿಗೆ ತಲೆ ಕೆಟ್ಟೋಗಿತ್ತು! ಜೀವನಾನೇ ಶೂನ್ಯ ಅನ್ನೋ ಸ್ಥಿತಿಗೆ ಬಂದು ಬಿಟ್ಟಿದ್ದೆ! ಒಂದೂ ಸ್ಟೇಟಸ್ ಅಪ್ಡೇಟ್ ಇಲ್ಲಾ, ಫೋಟೋ ಅಪ್ಲೋಡ್ ಇಲ್ಲ.. ಎಲ್ಲಾ ಬೋರಿಂಗ್ ಲೈಫ್ ಬಾಬಾ ನೀನಿಲ್ದೆ..” ಓವರ್ ಎಕ್ಸೈಟ್ ಆಗಿ ಒಂದೇ ಸಮನೇ ಬಡಬಡಿಸಹತ್ತಿದ ಫ್ಲಾಪಿಬಾಯ್.
ಲಗೋರಿಬಾಬಾಗೆ ಗೊತ್ತಿದ್ತೆ, ಫ್ಲಾಪಿಬಾಯ್ ತನ್ನ ಎಷ್ಟು ಹಚ್ಕೊಂಡಿದಾನೆ ಅಂತ! ಪಾಪ ಅತನಿಗಾದ್ರೂ ನನ್ನ ಬಿಟ್ರೆ ಯಾರಿದ್ದಾರೆ? ಆಂದುಕೊಂಡ್ರೂ ಅದನ್ನ ತೋರಿಸಿಕೊಳ್ಳದೇ, “ಸಾರಿ ಫ್ಲಾಪಿ, ಒಂದು ರಹಸ್ಯ ವಿದ್ಯೆಯನ್ನು ತ್ವರಿತವಾಗಿ ಕಲಿಯಲು ನನ್ನ ಗುರುಗಳ ಅಪೇಕ್ಷೆಯಂತೆ ಟಿಬೇಟಿಗೆ ಹೋಗಿದ್ದೆ.” ಅಂದ ಲಗೋರಿಬಾಬಾ.
“ವ್ಹಾವ್! ಇರ್ಲಿ.. ಅಂತೂ ಬಂದ್ರಲ್ಲ, ನೀವಿಲ್ಲದ ಜೀವನದಲ್ಲಿ ಮಜಾನೇ ಇಲ್ಲ ಬಾಬಾ. ಹೇಳಿ ಯಾರು ನಿಮ್ಮ ಗುರುಗಳು? ಹೇಗಿತ್ತು ಪ್ರಯಾಣ, ಕಲಿಕೆ ಇತ್ಯಾದಿ?” ಪ್ರಶ್ನಿಸಿದ ಫ್ಲಾಪಿಬಾಯ್
“ಡಾ. ಮಿಕಾಸೋ ಉಸೋಯಿ ಅಂತ ನನ್ನ ಗುರುಗಳು. ಜಪಾನಿನವರು. ಬ್ರಹ್ಮಂಡದಲ್ಲಿನ ಪ್ರಾಣಶಕ್ತಿಯನ್ನು ಬಳಸಿಕೊಂಡು ನಮ್ಮ ಆರೋಗ್ಯ, ಮಾನಸಿಕ ಸ್ಥಿತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣಬಹುದಾದಂತಹ ವಿದ್ಯೆ ಅದು. ಆ ಬಗ್ಗೆ ಮೊದಲ ಉಲ್ಲೇಖ ಭಾರತೀಯ ಅಥರ್ವ ವೇದಗಳಲ್ಲಿ ಕಂಡು ಬರ್ತವೆ. ಆದ್ರೆ ನಾವ್ಯಾರು ಆ ಬಗ್ಗೆ ಅಧ್ಯಯನ ಮಾಡಿಲ್ಲ. ಆದ್ರೆ ಅದನ್ನು ರೂಢಿಗಿಳಿಸಿ ಅಭ್ಯಸಿಸಿಕೊಂಡು ಬಂದವ್ರು ಟಿಬೇಟಿನ ಬೌದ್ಧ ಸನ್ಯಾಸಿಗಳು. ಅದನ್ನವರು ತಮ್ಮ ಶಿಷ್ಯ ಪರಂಪರೆಯ ಹೊರತಾಗಿ ಯಾರಿಗೂ ಹೇಳಿಕೊಡುತ್ತಿರಲಿಲ್ಲ. ಆದ್ರೆ ಇದನ್ನು ಹೊರಜಗತ್ತಿಗೆ ಹೇಳಿಕೊಟ್ಟವ್ರು ಆ ನಮ್ಮ ಗುರುಗಳು” ಹೆಮ್ಮೆಯಿಂದ ನುಡಿದ ಲಗೋರಿಬಾಬಾ.
“ಬಾಬಾ ನಂಗೆ ಈ ಬಗ್ಗೆ ಕುತೂಹಲವಾಗ್ತಿದೆ ತಿಳಿಸಿ ಕೊಡಿ ವಿಸ್ತ್ರತವಾಗಿ” ಎಂದು ದುಂಬಾಲು ಬಿದ್ದ ಫ್ಲಾಪಿಬಾಯ್
“ಡಾ. ಉಸೋಯಿ ವೃತ್ತಿಯಿಂದ ವೈದ್ಯ. ಆದ್ರೆ ಅವರಿಗೆ ಒಬ್ಬ ವಿದ್ಯಾರ್ಥಿ ಒಮ್ಮೆ ಏಸು ಕ್ರಿಸ್ತ್ರ ತನ್ನ ಕೈಗಳಿಂದಲೇ ರೋಗ ಗುಣಪಡಿಸುತ್ತಿದ್ದ ಬಗ್ಗೆ ಗಮನ ಸೆಳೆದ. ಈ ಬಗ್ಗೆ ಕುತೂಹಲಭರಿತರಾದ ಅವರು ಅದರ ವಿವರಗಳನ್ನು ತಿಳಿಯಲು ಕ್ರಿಸ್ಟಿಯನ್ ಗ್ರಂಥಗಳನ್ನೆಲ್ಲಾ ಅಭ್ಯಸಿಸಿದರು. ಅದ್ರಲ್ಲಿ ಯಾವುದೇ ವಿವರಗಳು ಸಿಗಲಿಲ್ಲ. ನಂತರ ಟಿಬೇಟಿಗೆ ಬಂದು ಸಂಸ್ಕøತ ಕಲಿತರು. ಪುರಾತನ ಗ್ರಂಥಗಳನ್ನು ಅಭ್ಯಸಿಸಿ ಅದ್ಭುತವಾದ ವಿವರಗಳನ್ನು ಕಲೆಹಾಕಿದರು. ಹಾಗಂತ ಡಾ. ಉಸೋಯಿ ಹಳೇ ಕಾಲದವರೇನಲ್ಲ. ಇಷ್ಟೆಲ್ಲಾ ಸಿದ್ದಿ ಪಡೆದುಕೊಂಡರೂ ಅವರು ಹುಟ್ಟಿದ್ದು 1865ರಲ್ಲಿ.”
“ಬಾಬಾ ಬ್ರಹ್ಮಾಂಡದ ಪ್ರಾಣಶಕ್ತಿ ಅಂದ್ರಲ್ಲ ಏನದು?”
“ಮನುಷ್ಯನ ದೇಹ ಮತ್ತು ಮನಸ್ಸಿಗೆ ಬ್ರಹ್ಮಾಂಡದ ಪ್ರಾಣಶಕ್ತಿಯೊಡನೆ ಸಂಪರ್ಕ ಏರ್ಪಡಿಸುವುದು ಈ ವಿದ್ಯೆಯ ಮುಖ್ಯ ಗುರಿ. ಇದರ ಪರಿಣಾಮ ಅದ್ಭುತ. ಇದು ಉತ್ತಮ ಹವ್ಯಾಸಕ್ಕೆ ನಾಂದಿ. ಈ ಸಾಧನೆಗೆ ಕಟ್ಟಳೆಗಳೂ ಕಡಿಮೆಯೇ! ಇದರಿಂದ ನೆನಪಿನ ಶಕ್ತಿ ಮತ್ತು ಏಕಾಗ್ರತೆ ವರ್ಧನೆಯಾಗ್ತವೆ.”
“ಬಾಬಾ ನನಗೂ ಕಲಿಬೇಕು ಅನ್ನಿಸ್ತಿದೆ. ಇದಕ್ಕೆ ತರಗತಿಗಳೇನಾದ್ರೂ ಇರ್ತವಾ?” ಕುತೂಹಲದಿಂದ ಕೇಳಿದ
“ಈ ಸಾಧನೆ ಅತಿ ಸುಲಭ ಮತ್ತು ಸರಳ ಫ್ಲಾಪಿ. ಒಮ್ಮೆ ದೀಕ್ಷೆ ಪಡೆದ ನಂತರ ಯಾವುದೇ ತರಗತಿಗೆ ಹಾಜರಾಗಬೇಕಿಲ್ಲ. ಇದಕ್ಕೆ ಹೆಚ್ಚಿನ ಮಾಗ್ದರ್ಶನವೂ ಬೇಕಾಗಿಲ್ಲ. ಆದ್ರೆ ದೇಹದ ಮೇಲೆ 26 ನಿಗದಿಪಡಿಸಿದ ಜಾಗಗಳಲ್ಲಿ ನಿಮ್ಮ ಹಸ್ತವನ್ನು 3 ನಿಮಿಷಗಳವರೆಗೆ ಇಡುತ್ತಾ ಹೋಗುವುದೇ ದಿನ ನಿತ್ಯದ ಸಾಧನೆ. ತೊಂದರೆ ಇದ್ದ ದೇಹದ ಭಾಗದಲ್ಲಿ ಹೆಚ್ಚು ಹೊತ್ತು ಹಸ್ತವನ್ನಿಡಬೇಕು. ಇದನ್ನ ಬಿಟ್ಟರೆ ಬೇರೆ ಏನನ್ನೂ ಮಾಡಬೇಕಾಗಿಲ್ಲ”
“ಇದೆಲ್ಲಾ ನಿಜಕ್ಕೂ ವರ್ಕ್ ಔಟ್ ಆಗುತ್ತಾ ಬಾಬಾ” ಪ್ರಶ್ನಿಸಿದ ಫ್ಲಾಪಿಬಾಯ್.
“ಖಂಡಿತಾ! ನಮ್ಮ ದೇಹದಲ್ಲಿ 7 ಚಕ್ರಗಳಿವೆ, ನಾವು ಈ ವಿದ್ಯೆಯಿಂದ ಉತ್ಪಾದಿಸುವ ಶಕ್ತಿ ದೇಹದ ಮೇಲಿನ ಸಹಸ್ರಾರ ಚಕ್ರದಿಂದ ಪ್ರವೇಶಿಸಿ ಆಜ್ಞಾ, ವಿಶುದ್ಧ, ಅನಾಹತಗಳ ಮೂಲಕ ಹರಿದು ಎರಡು ಹಸ್ತಗಳಿಂದ ಹೊರಹೊಮ್ಮುತ್ತವೆ. ಈ ಶಕ್ತಿ ಹಸ್ತವನ್ನು ಇಟ್ಟ ಸ್ಥಳದಿಂದ ದೇಹವನ್ನು ಪ್ರವೇಶಿಸುತ್ತದೆ. ಈ ದೀಕ್ಷೆ ಪಡೆದುಕೊಂಡ ವ್ಯಕ್ತಿ ಹಸ್ತವನ್ನು ದೇಹದ ಯಾವುದೇ ಭಾಗಕ್ಕೆ ಸ್ಪರ್ಶಿಸಿದೊಡನೆ ಶಕ್ತಿಯ ಸಂಚಲನೆ ಆರಂಭವಾಗುತ್ತದೆ. ಈ ವಿದ್ಯೆಯಿಮದ ಇಬ್ಬರಿಗೂ ಸಂಚಲನೆಯ ಲಾಭ ಪ್ರಾಪ್ತಿಯಾಗುತ್ತದೆ. ಅಲ್ಲದೇ ಈ ವಿದ್ಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪರ್ಯಾಯ ಚಿಕಿತ್ಸಾ ವಿಧಾನವೆಂದು ಮಾನ್ಯತೆ ನೀಡಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಧಿಕೃತವಾಗಿ ಈ ಚಿಕಿತ್ಸೆ ನೀಡಲಾಗ್ತಿದೆ ಅಂದ್ಮೇಲೆ ವರ್ಕ್ ಔಟ್ ಆಗ್ತಿದೆ ಅಂತಲ್ವೇ ಅರ್ಥ.” ನುಡಿದ ಲಗೋರಿಬಾಬಾ.
“ವ್ಹಾವ್ ಈ ಬಗ್ಗೆ ತಿಳಿದುಕೊಳ್ಳುವ ಆಸೆ ಆಗಿದೆ. ನೀವು ಮೊದಲು ಫ್ರೆಶ್ ಅಪ್ ಆಗಿ ಆಮೇಲೆ ತಿಂಡಿ ತಿನ್ನುತ್ತಾ ಮಾತಾಡೊಣ. ಹೌದು ಅಷ್ಟಕ್ಕೂ ಈ ವಿದ್ಯೆಯ ಹೆಸರೇನು?” ಪ್ರಶ್ನಿಸಿದ ಫ್ಲಾಪಿಬಾಯ್.
“ಫ್ಲಾಪಿ, ನಿಜವಾಗಿಯೂ ಈ ವಿದ್ಯೆಯಲ್ಲಿ ಆಸಕ್ತಿ ಇರುವವರಿಗೆ ಇದರ ಹೆಸರು ನೀನು ಕೇಳುವ ಮುಂದಿನ ಪ್ರಶ್ನೆಯೊಳಗೇ ತಿಳಿಯುತ್ತದೆ. ನೀನೂ ಯೋಚಿಸು. ಗೊತ್ತಾಗದಿದ್ದಲ್ಲಿ ನಾನೇ ಹೇಳ್ತಿನಿ” ಎನ್ನುತ್ತಾ ಎತ್ತಲೋ ಹೊರಟ ಲಗೋರಿಬಾಬಾ.
(ಮುಂದುವರೆಯುತ್ತದೆ)
[…] (ಹಿಂದಿನ ಸಂಚಿಕೆಯಿಂದ) ಬಾಬಾ.. ಬಾಬಾ.. ಓಡುತ್ತಾ ಬಂದ ಫ್ಲಾಪಿಬಾಯ್. ಲಗೋರಿಬಾಬಾ ಕೊನೆಗೂ ಬಹಳ ಕಷ್ಟಪಟ್ಟು ನೀವು ಹೇಳಿದ ವಿದ್ಯೆ ಬಗ್ಗೆ ಹಲವರಲ್ಲಿ ವಿಚಾರಿಸಿ ಅದು ಏನಂತ ತಿಳ್ಕೊಂಡ್ ಬಂದಿದ್ದೀನಿ. ನೀವು ಹೇಳಿದ ವಿದ್ಯೆ ಹೆಸರು ‘ರೇಕಿ’. ಅದು ಜಪಾನಿ ಭಾಷೆ ಪದ. ರೇ ಅಂದ್ರೆ ಬ್ರಹ್ಮಾಂಡ ಮತ್ತು ಕಿ ಅಂದ್ರೆ ಪ್ರಾಣಶಕ್ತಿ. ಸರಿ ತಾನೆ?” ಎಂದ ಖುಷಿಯಿಂದ. […]