ಹೊಸ ವಿದ್ಯೆಯ ಪ್ರವಚನ: ಫ್ಲಾಪಿಬಾಯ್

(ಹಿಂದಿನ ಸಂಚಿಕೆಯಿಂದ)
ಬಾಬಾ.. ಬಾಬಾ.. ಓಡುತ್ತಾ ಬಂದ ಫ್ಲಾಪಿಬಾಯ್. ಲಗೋರಿಬಾಬಾ ಕೊನೆಗೂ ಬಹಳ ಕಷ್ಟಪಟ್ಟು ನೀವು ಹೇಳಿದ ವಿದ್ಯೆ ಬಗ್ಗೆ ಹಲವರಲ್ಲಿ ವಿಚಾರಿಸಿ ಅದು ಏನಂತ ತಿಳ್ಕೊಂಡ್ ಬಂದಿದ್ದೀನಿ. ನೀವು ಹೇಳಿದ ವಿದ್ಯೆ ಹೆಸರು ‘ರೇಕಿ’. ಅದು ಜಪಾನಿ ಭಾಷೆ ಪದ. ರೇ ಅಂದ್ರೆ ಬ್ರಹ್ಮಾಂಡ ಮತ್ತು ಕಿ ಅಂದ್ರೆ ಪ್ರಾಣಶಕ್ತಿ. ಸರಿ ತಾನೆ?” ಎಂದ ಖುಷಿಯಿಂದ.

ಅದಕ್ಕೆ ಲಗೋರಿಬಾಬಾ, “ಶಭಾಶ್ ಫ್ಲಾಪಿ ನಾನು ಊಹಿಸಿದ್ದೆ ನೀನು ಹೇಳೇ ಹೇಳ್ತೀಯ ಅಂತಾ” ಎಂದು ನುಡಿದ ಮೆಚ್ಚುಗೆಯಿಂದ.

“ಹೇಳ್ಕೊಡಿ ಬಾಬಾ ನನಗೆ ಅದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದೆ. ಇನ್ನಷ್ಟು ಹೆಚ್ಚಿನ ಮಾಹಿತಿ ನಿಮ್ಮಿಂದ ಬೇಕು ನಂಗೆ” ಎಂದ ಫ್ಲಾಪಿಬಾಯ್ ವಿನಮ್ರನಾಗಿ.

“ಖಂಡಿತಾ, ಇತ್ತೀಚಿನ ದಿನಗಳಲ್ಲಿ ನಮಗೆ ಅವಶ್ಯಕವಾಗಿರೋದು ಆರೋಗ್ಯ. ಉತ್ತಮ ಆರೋಗ್ಯಕ್ಕಂತೂ ರೇಕಿ ಬಹಳಾನೆ ಉಪಯೋಗಿ. ಅಂದ್ರೆ ರೇಕಿಯಲ್ಲಿ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಿಲ್ಲ. ಎಂತಹದೇ ಕಾಯಿಲೆ ಇದ್ರೂ ಅದನ್ನ ಗುಣಪಡಿಸುವ ಶಕ್ತಿ ಇದರಲ್ಲಿದೆ. ಏಡ್ಸ್‍ನಂತಹ ಭಯಾನಕ ಕಾಯಿಲೆ ಸಹಾ ಗುಣಮುಖವಾದಂತ ನಿದರ್ಶನವಿದೆ.”

“ಅಂದ್ರೆ ಬಾಬಾ ಕಾಯಿಲೆ ಗುಣಮುಖವಾಗಲು ಬಹಳಷ್ಟು ಸಮಯ ತಗೋಳತ್ತಾ?”
“ಇಲ್ಲ ಹಾಗೇನಿಲ್ಲ. ರೇಕಿಯ ಇನ್ನೊಂದು ಅದ್ಭುತವೆಂದ್ರೆ ಶೇ. 50 ರಿಂದ 60 ಸಂದರ್ಭದಲ್ಲಿ ಅನೇಕ ಕಾಯಿಲೆಗಳು 21 ದಿನಗಳಲ್ಲಿಯೇ ಗುಣವಾಗುವುದು. ಅಲ್ಲದೆ ಕಾಯಿಲೆ ಯಾವುದು ಅಂತಾ ಸರಿಯಾಗಿ ಗೊತ್ತಾಗದ ಸಂದರ್ಭದಲ್ಲಿಯೂ ಸಹಾ ರೇಕಿ ಚಿಕಿತ್ಸೆ ಪರಿಣಾಮಕಾರಿ. ಅಲ್ಲದೇ ಇದರ ಇನ್ನೊಮದು ವಿಶೇಷ ಏನ್ ಗೊತ್ತಾ? ರೇಕಿಯಲ್ಲಿ ಉನ್ನತ ಸಾಧನೆ ಮಾಡಿದವರಿಗೆ ತಮ್ಮ ಶಕ್ತಿಯಿಂದ ಬೇರೆ ಊರಲ್ಲಿರುವವರಿಗೂ ಗುಣ ಪಡಿಸೋ ಸಾಮಥ್ರ್ಯ ಬರುತ್ತೆ.”

“ಹಾಗಾದ್ರೆ ಬಾಬಾ ರೇಕಿಯಲ್ಲಿ ಮನಸ್ಸು ನಿಗ್ರಹ ತುಂಬಾ ಇರಬಹುದು ಅಲ್ವಾ?”
“ಫ್ಲಾಪಿ.. ಹಾಗೇನಿಲ್ಲ. ರೇಕಿಯಲ್ಲಿ ಸಾಧಕನು ಪ್ರಯತ್ನಪೂರ್ವಕವಾಗಿ ಮನಸ್ಸನ್ನು ಬದಲಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ವಿಚಾರಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಹಾಗೆಯೇ ಸಾಧನೆ ಮಾಡುವುದು ಇದರಿಂದ ಸಾಧ್ಯ.”

“ಬಾಬಾ ರೇಕಿ ಬಗ್ಗೆ ವಿಜ್ಞಾನ ಏನನ್ನತ್ತೆ?”
“ ಮಗೂ ನಾವು ಭಾರತೀಯರು ಬಹಳ ಬೇಗ ಕಂದಾಚಾರಗಳನ್ನು, ಧರ್ಮದ ಕಟ್ಟುಪಾಡುಗಳನ್ನು, ಮೂಢ ನಂಬಿಕೆಗಳನ್ನು ಹಾಗೆಯೇ ಸಂಪ್ರದಾಯವನ್ನು ಪರಾಮರ್ಶಿಸದೇ ಒಪ್ಪಿಬಿಡುತ್ತೇವೆ. ಆದ್ರೆ ಅಮೇರಿಕೆಯಲ್ಲಿ ಹಾಗಲ್ಲ. ವಿವಿಧ ರೀತಿಯ ಪ್ರಯೋಗ ನಡೆಸಿ ಪರೀಕ್ಷೆ ಮಾಡಿಯೇ ದೃಢಪಡಿಸುತ್ತಾರೆ. ಅವರೇ ಒಪ್ಪಿದ್ದಾರೆ ಈ ಬಗ್ಗೆ. ರೇಕಿ ಅಭ್ಯಾಸ ಮಾಡುವವರಲ್ಲಿ ಹಿಮೋಗ್ಲೋಬಿನ್ ಅಂಶ ಸಮತೋಲನಕ್ಕೆ ಬಂದು ರಕ್ತದ ಗುಣಮಟ್ಟ ಹೆಚ್ಚುತ್ತದೆ. ರೇಕಿಯ ಸಾಧನೆ ಮಾಡುವಾಗ ಸಾಧಕನ ದೇಹದಲ್ಲಿ ಶಕ್ತಿಯ ಸಂಚಲನೆ ಆಗೋದನ್ನ ವಿಜ್ಞಾನಿಗಳೂ ದೃಢಪಡಿಸಿದ್ದಾರೆ. ಇದಕ್ಕಿಂತ ಸಾಕ್ಷ್ಯಿ ಬೇಕಾ?”

“ಹಿಪ್ನೀಟಿಸಂ ಮತ್ತು ರೇಕಿಗೆ ವ್ಯತ್ಯಾಸವಿದೆಯಾ?” ಪ್ರಶ್ನಿಸಿದ ಫ್ಲಾಪಿಬಾಯ್
“ವ್ಯತ್ಯಾಸ ಅಜಗಜಾಂತರ. ಹಿಪ್ನೋಟಿಸಂನಲ್ಲಿ ನೀವು ಇನ್ನೊಬ್ಬ ವ್ಯಕ್ತಿಯ ತಿಳುವಳಿಕೆ ತಪ್ಪಿಸಿ ಮಾಹಿತಿ ಅರಿತೀರಿ. ಆರೆ ರೇಕಿಯಲ್ಲಿ ಇನ್ನೊಬ್ಬರ ಅರಿವಿಗೆ ಬಾರದೆ ಏನೂ ಮಾಡಲಾಗುವುದಿಲ್ಲ.”
“ರೇಕಿಗೆ ಮಡಿ, ಆಚರಣೆ, ಅನುಷ್ಟಾನ ಈ ತರ ಕಟ್ಟುಪಾಡು ಉಂಟೋ?” ಪ್ರಶ್ನಿಸಿದ ಲಗೋರಿಬಾಬಾಗೆ
ಅದಕ್ಕೆ ಲಗೊರಿಬಾಬಾ- “ಹಾಗೇನಿಲ್ಲ, ಇದಕ್ಕೆ ಸಮಯದ ಮಿತಿಯಿಲ್ಲ. ಸ್ಥಳದ ನಿರ್ಬಂಧವಿಲ್ಲ. ಅಸಲಿಗೆ ಏಕಾಗ್ರತೆ ಕೂಡಾ ಬೇಡ. ಓವಿ ನೋಡುವಾಗಲೋ, ವಾಟ್ಸಾಪ್ ಮಾಡುವಾಗಲೋ, ಟ್ರಾವೆಲಿಂಗ್ ಮಾಡುವಾಗಲೂ ಸಹಾ ಇತರರಿಗೆ ಕಾಣಿಸದಂತೆ ಮಾಡಬಹುದು. ಇನ್ನೊಂದು ಮಜಾ ಅಂದ್ರೆ ದುಶ್ಚಟ ಇದ್ದವರಿಗೂ ಸಹಾ ರೇಕಿ ವರದಾನವೇ! ಒತ್ತಡ ಹಾಕದೆಯೂ ನಿಮ್ಮ ಚಟಗಳ ದೂರಹೋಗ್ತವೆ. ಅಲ್ಲದೇ ವ್ಯಕ್ತಿತ್ವ ವಿಕಸನಕ್ಕಂತೂ ಇದು ದಿ ಬೆಸ್ಟ್.”

“ವ್ಹಾವ್ ನಿಜಕ್ಕೂ ಇದು ಅದ್ಭುತವೇ, ನನಗೂ ಈ ಚಿಕಿತ್ಸಾ ವಿಧಾನ ಹೇಳಿಕೊಡಿ” ಅಲವತ್ತುಕೊಂಡ ಫ್ಲಾಪಿ
“ಫ್ಲಾಪಿಬಾಯ್ ರೇಖಿಯ ಐದು ಮೂಲತತ್ವಗಳು ಯಾವುದೆಂದ್ರೆ 1- ಈ ದಿನ ನಾನು ಕೃತಜ್ಞತಾ ಭಾವನೆಯಿಂದ ಇರುತ್ತೇನೆ. 2- ಈ ದಿನ ನಾನು ಚಿಂತಿಸುವುದಿಲ್ಲ. 3- ಈ ದಿನ ನಾನು ಕೋಪಿಸಿಕೊಳ್ಳುವುದಿಲ್ಲ. 4- ಈ ದಿನವನ್ನು ನಾನು ಎಲ್ಲ ಕೆಲಸಗಳನ್ನು ಮನಪೂರ್ವಕವಾಗಿ ಮಾಡುತ್ತೇನೆ. 5- ಈ ದಿನ ನಾನು ಸಕಲ ಜೀವಿಗಳನ್ನು ಹಾಗೂ ವಸ್ತುಗಳನ್ನು ಗೌರವದಿಂದ ಕಾಣುತ್ತೇನೆ. ಅನ್ನೋದು.”
“ಬಾಬಾ ನಾನು ಮಾಂಸಾಹಾರಿ. ಹಾಗಿದ್ದೂ ರೇಕಿ ದೀಕ್ಷೆಯ ನಂತರ ಸೇವಿಸಿದ್ರೆ ಏನಾದ್ರೂ ಅಡಚಣೆ ಉಂಟಾ?”

“ಮಾಂಸಾಹಾರಿಗಳೂ ಕೂಡಾ ರೇಕಿ ಅಭ್ಯಾಸ ಮಾಡಬಹುದು. ಆದ್ರೆ ಮಾಂಸಾಹಾರ ಸೇವಿಸಿದಾಗ, ಮದ್ಯ ಸೇವಿಸಿದಾಗ ರೇಕಿಯ ಪರಿಣಾಮ ಕಡಿಮೆ ಇರ್ತದೆ. ಹಸಿ ತರಕಾರಿ ಮತ್ತು ಹಣ್ಣಿನ ರಸದ ಸೇವನೆ ಸಾಧನೆಗೆ ಪೂರಕ. ರೇಕಿ ಕಲಿತ್ರೆ ವೈರಾಗ್ಯವಂತೂ ಬರಲ್ಲ. ರೇಕಿಯಿಂದ ದುಷ್ಪರಿಣಾಮವಿಲ್ಲ. ರೇಕಿ ಕಲಿತ ನಂತರ ಕಿರ್ಲಿಯನ್ ಪೋಟೋಗ್ರಾಫಿಯಲ್ಲಿ ನಿಮ್ಮ ಹಸ್ತವನ್ನೊಮ್ಮೆ ಪರೀಕ್ಸಿಸಿಕೊಳ್ಳಿ. ರೇಕಿ ದೀಕ್ಷೆಯ ನಂತರ ಮತ್ತು ಮೊದಲು ಹೇಗಿತ್ತು ಅನ್ನೋದನ್ನ. ರೇಕಿ ದೀಕ್ಷೆಯ ನಂತರ ಪ್ರಭಾವಲಯ ಅಥವಾ ಓರಾ ಹೆಚ್ಚಾಗುತ್ತೆ.

ರೇಕಿ ಬಗ್ಗೆ ಹೇಳ್ತಾ ಹೋದ್ರೆ ಸಮಯವೇ ಸಾಲೊಲ್ಲ. ಮೊಗೆದಷ್ಟೂ ವಿಚಾರಗಳು ಇದರಲ್ಲಿವೆ. ಎಲ್ಲವನ್ನೂ ಹೇಳ್ತೇನೆ ನಿಧಾನವಾಗಿ. ಆಮೇಲೆ ನಿನ್ನ ಅರಿವಿಗೇ ಬಹಳಷ್ಟು ಬರುತ್ತವೆ. ನಾನೀಗ ದೀಕ್ಷೆಯನ್ನಷ್ಟೇ ಅಲ್ಲದೇ ಸರಿಯಾದ ಮಾರ್ಗದರ್ಶನವನ್ನೂ ನೀಡುತ್ತೇನೆ. ರೇಕಿ ಮೊದಲ ಹಂತದ ದೀಕ್ಷೆಗೆ ಇಂದು ತಯಾರಾಗು. ಹ್ಞಾಂ ಹಾಗೆ ರೇಕಿ ಮಾಡೋರಿಗೆ ನೀರಡಿಕೆ ಜಾಸ್ತಿ. ಹಾಗೆ ಸ್ವಲ್ಪ ಒಂದು ತಂಬಿಗೆ ನೀರು ತಂದು, ಬಾ ದೀಕ್ಷೆಗೆ” ಎಂದು ಲಗೋರಿಬಾಬಾ ಫ್ಲಾಪಿಬಾಯ್‍ಗೆ ಅಣಿಗೊಳಿಸ ತೊಡಗಿದನು.

(ಮುಗಿಯಿತು)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x