ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷ ಪ್ರಾರಂಭವಾಗಿದೆ. ಜನವರಿ ೨೦೧೪. ಕಾಲಚಕ್ರದಡಿಯಲ್ಲಿ ಸುತ್ತಿ ಮತ್ತೊಮ್ಮೆ ಹೊಸವರುಷದ ಹರುಷದಲ್ಲಿ ಮಿಂದೆದ್ದು, ಹೊಸ ಸವಾಲುಗಳಿಗೆ, ಹೊಸ ಸಾಧನೆಗಳಿಗೆ ನಿಧಾನವಾಗಿ ಜಗತ್ತು ತೆರೆದುಕೊಳ್ಳುತ್ತಿದೆ. ಪ್ರತಿದೇಶವೂ ತಾನು ಮುಂದುವರೆದ ರಾಷ್ಟ್ರವಾಗಬೇಕು ಎಂದು ಹಂಬಲಿಸುತ್ತದೆ. ಈ ಹಂಬಲಿಕೆಯನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸಿಕೊಂಡು, ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡುತ್ತವೆ. ಹಿಂದಿನ ವರ್ಷದ ವೈಫಲ್ಯಗಳೇನು ಎಂಬುದನ್ನು ಪಟ್ಟಿ ಮಾಡಿ ಪ್ರಚುರಪಡಿಸಲು ವಿವಿಧ ಕ್ಷೇತ್ರಗಳಲ್ಲಿ ತಜ್ಞರ ಪಡೆಯೇ ಇದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಲು ಆಯಾ ಕ್ಷೇತ್ರದ ವಿಜ್ಞಾನಿಗಳು ತಮ್ಮ ಶ್ರಮವನ್ನು ಧಾರೆಯರೆಯುತ್ತಾರೆ. ಆರ್ಥಿಕ ತಜ್ಞರು ತಲಾವಾರು ಆರ್ಥಿಕ ಪ್ರಗತಿಯನ್ನು ಸಾಧಿಸಲು ಇನ್ನಿಲ್ಲದ ಯೋಜನೆಗಳ ಪಟ್ಟಿಯನ್ನು ತಯಾರಿಸಿ ಇಟ್ಟಿದ್ದಾರೆ. ಯೋಜನೆಯನ್ನು ಕಾರ್ಯಗತಗೊಳಿಸಲು ಆಡಳಿತ ವರ್ಗ ಸೂಕ್ತ ಬಜೆಟ್ ತಯಾರಿಸುತ್ತಿದೆ. ಹಣಕಾಸಿನ ಕ್ರೂಢಿಕರಣ ಹೇಗೆ ಎಂಬ ಚಿಂತೆ ಎಲ್ಲರಲ್ಲಿದೆ. ಸಾಧನೆ ಮಾಡಲು ಹಲವು ಸವಾಲುಗಳಿವೆ. ವೈಪಲ್ಯಗಳನ್ನು ಮುಚ್ಚಿಕೊಳ್ಳಲು ರೇಷ್ಮೆಯ ರುಮಾಲಿದೆ.
ಜಗತ್ತಿನ ಅತಿದೈತ್ಯ ಪಾಮ್ ಎಣ್ಣೆ ತಯಾರಿಕ ಕಂಪನಿಯ ಹೆಸರು ವಿಲ್ಮರ್. ಪ್ರಪಂಚದ ಶೇಕಡಾ ೪೫% ಪಾಮ್ ಎಣ್ಣೆಯನ್ನು ಉತ್ಪಾದಿಸುವ ಕಂಪನಿಯಿದು. ಯಾವುದೇ ಅಂತಾರಾಷ್ಟ್ರೀಯ ಕಂಪನಿಗಳಿಗೆ ಲಾಭ ಮುಖ್ಯವೇ ಹೊರತು ಇತರೆ ವಿಷಯಗಳಲ್ಲ. ಇದು ಲಾಗಾಯ್ತಿನಿಂದಲೂ ಸಾಬೀತಾದ ವಿಷಯ. ಇಂತಹ ಕಂಪನಿಗಳು ತಮ್ಮ ಲಾಭಕ್ಕಾಗಿ ಏನೂ ಮಾಡಲೂ ತಯಾರಿರುತ್ತವೆ. ಇವುಗಳ ವಕ್ರದೃಷ್ಟಿ ಯಾವಾಗಲೂ ಹಿಂದುಳಿದ ರಾಷ್ಟ್ರಗಳ ಮೇಲಿರುತ್ತದೆ. ಅಮೇಜಾನ್, ಪಶ್ಚಿಮ ಘಟ್ಟಗಳಂತಹ ದಟ್ಟಾರಣ್ಯಗಳು, ಜೀವಿವೈವಿಧ್ಯ ಪ್ರದೇಶಗಳು, ಆಫ್ರಿಕಾದ ಹುಲ್ಲುಗಾವಲುಗಳು, ಇಂಡೋನೇಷ್ಯಾದ ಮಳೆಕಾಡುಗಳು ನೈಸರ್ಗಿಕ ಆಮ್ಲಜನಕ ಸೃಷ್ಟಿಸುವ ಬೃಹತ್ ಕಾರ್ಖಾನೆಗಳು, ಓಝೋನ್ ಪೊರೆಯನ್ನು ಪೊರೆಯುವ ನಾಟಿವೈದ್ಯರಂತೆ. ಅಭಿವೃದ್ಧಿಗಾಗಿ ಮತ್ತು ಮಾನವ ಕಲ್ಯಾಣಕ್ಕಾಗಿ ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೊಂದು ಎಕರೆ ಕಾಡು ನಾಶವಾಗುತ್ತಿದೆ. ಇಂಡೊನೇಷ್ಯಾದ ಸಮೃದ್ಧ ಮಳೆಕಾಡುಗಳನ್ನು ಬೃಹತ್ ಯಂತ್ರಗಳಿಂದ ನೆಲಸಮ ಮಾಡಿ ಪಾಮ್ ತೋಟವನ್ನು ಬೆಳಸಲಾಗುತ್ತದೆ. ಇದೇ ಕೆಲಸವನ್ನು ದಕ್ಷಿಣ ಅಮೇರಿಕಾದ ಅಮೇಜಾನ್ ಮಾಡಲಾಗುತ್ತಿದೆ. ಟಿ.ವಿ. ನೋಡುವ ಪ್ರತಿಯೊಬ್ಬರಿಗೂ ಕೆಂಟುಕಿ ಫ್ರೈಡ್ ಚಿಕನ್ (ಕೆ.ಎಫ್.ಸಿ) ಗೊತ್ತು. ಪಕ್ಕಾ ಸಸ್ಯಹಾರಿಗಳ ಬಾಯಲ್ಲೂ ನೀರು ತರಿಸುವ ಜಾಹೀರಾತು ಎಲ್ಲಾ ಚಾನೆಲ್‌ಗಳಲ್ಲೂ ಪ್ರಸಾರವಾಗುತ್ತದೆ. ಇವರಿಗೆ ಕೋಳಿಮರಿಯನ್ನು ಹುರಿಯಲು ಪಾಮ್ ಎಣ್ಣೆ ಮತ್ತು ಪ್ಯಾಕಿಂಗ್ ಮಾಡಲು ಪೇಪರ್ ಹಾಗೂ ರೊಟ್ಟಿನ ಪೆಟ್ಟಿಗೆಗಳು ಬೇಕು. ಪಾಮ್ ಎಣ್ಣೆಯನ್ನು ಇದೇ ವಿಲ್ಮರ್ ಕಂಪನಿಯಿಂದ ಕೊಂಡರೆ, ಪ್ಯಾಕಿಂಗ್ ಸಾಮಾನುಗಳಿಗೆ ಏಷ್ಯನ್ ಪಲ್ಪ್ ಕಂಪನಿಯಿಂದ ಪಡೆಯುತ್ತದೆ. ವಿಲ್ಮರ್ ಮತ್ತು ಏಷ್ಯನ್ ಪಲ್ಪ್ ಕಂಪನಿಗಳು ಅಮೇಜಾನ್ ಮತ್ತು ಇಂಡೊನೇಷ್ಯಾದ ಕಾಡುಗಳನ್ನು ಕಡಿದು ಎಣ್ಣೆ ಮತ್ತು ಕಾಗದಗಳನ್ನು ಉತ್ಪಾದಿಸುತ್ತವೆ. ಇಂಡೊನೇಷ್ಯಾದ ದಟ್ಟವಾದ ಮಳೆಕಾಡುಗಳಲ್ಲಿ ಕಪಿವರ್ಗಕ್ಕೆ ಸೇರಿದ ಒರಂಗುಟಾನ್ ಎಂಬ ಅತಿ ವಿಶಿಷ್ಟವಾದ ಅಪರೂಪದ ಪ್ರಾಣಿ ಮತ್ತು ಆಹಾರ ಸರಪಣಿಯಲ್ಲಿ ತುತ್ತತುದಿಯಲ್ಲಿರುವ ಸುಮಾತ್ರಾದ ಹುಲಿ ಇವರೆಡೂ ವಾಸಿಸುತ್ತವೆ. ಪಾಮ್ ತೋಟಕ್ಕಾಗಿ ಅಲ್ಲಿನ ಕಾಡುಗಳನ್ನು ಸವರಿ ಹಾಕುತ್ತಿರುವುದರಿಂದ ಈ ಎರೆಡು ಪ್ರಾಣಿ ಸಂತತಿಗಳು ಅಳಿವಿನಂಚಿಗೆ ಬಂದು ತಲುಪಿವೆ.
ಹಣ ಮತ್ತು ಮಣ್ಣಿಗಾಗಿ ಎಲ್ಲಿವರೆಗೂ ಇನ್ನೊಂದು ಪ್ರಾಣಿಯನ್ನು ಕೊಲ್ಲುವವರಿರುತ್ತಾರೋ, ಅಲ್ಲೆಲ್ಲಾ ಕಾಯುವ ಮನ:ಸ್ಥಿತಿಯಿರುವವರು ಇರುತ್ತಾರೆ. ಕೊಲ್ಲುವುದು ಸುಲಭ. ಕಾಯುವುದು ಕಷ್ಟ. ಕಾಯುವುದಕ್ಕೆ ತುಂಬಾ ಸಹನೆ ಬೇಕು. ದೌರ್ಜನ್ಯವನ್ನು ಸಹಿಸುವ ಗುಣವಿರಬೇಕು. ಸಂಘಟನಾ ಚಾತುರ್ಯ ಮತ್ತು ಶಕ್ತಿಯಿರಬೇಕು. ಕಾಯುವುದಕ್ಕೆ ಹಣವೂ ಬೇಕು. ಆದರೆ ಹಣವನ್ನು ಕಾರ್ಪೊರೇಟ್ ಪ್ರಪಂಚದಿಂದಾಗಲೀ, ಭ್ರಷ್ಟ ಸರ್ಕಾರಗಳಿಂದಾಗಲಿ ಪಡೆಯಬಾರದು. ಜಾಗತಿಕ ಮಟ್ಟದಲ್ಲಿ ಕಾಯುವ ಕೆಲಸ ಮಾಡುತ್ತಿರುವ ಹಲವು ನಿಸ್ವಾರ್ಥ ಸಂಘ-ಸಂಸ್ಥೆಗಳಿವೆ. ಅದರಲ್ಲಿ ಪ್ರಮುಖವಾದದು. ಗ್ರೀನ್-ಪೀಸ್, ಡಬ್ಲ್ಯೂ.ಡಬ್ಲ್ಯೂ.ಎಫ್. ಇತ್ಯಾದಿಗಳಿವೆ.
ವಿಲ್ಮರ್ ಕಂಪನಿಯ ಪಾಮ್ ಎಣ್ಣೆಯನ್ನು ಬಳಸುವ ಇತರ ಅಂತಾರಾಷ್ಟ್ರೀಯ ಕಂಪನಿಗಳೆಂದರೆ, ಜಿಲೆಟ್, ಫೆರೇರೋ, ಕ್ಯಾಡ್‌ಬರಿ, ಲೋರಿಯಲ್, ಕ್ಲಿಯರ್‌ಸಿಲ್ ಇತ್ಯಾದಿಗಳು. ಗ್ರೀನ್-ಪೀಸ್ ಸಂಘಟನೆಗಳು ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ. ದಟ್ಟವಾದ ಕಾಡನ್ನು ಕಡಿದು ಪಾಮ್ ತೋಟವನ್ನು ಬೆಳೆಸುವಲ್ಲಿ ಆಗುವ ಪರಿಸರ ದೌರ್ಜನ್ಯವನ್ನು ವಿಡಿಯೋ ಮಾಡಿ, ಫೋಟೊ ತೆಗೆದು, ಇಂಡೊನೇಷಿಯಾ ಕಾಡಿನಲ್ಲಿ ಒರಂಗುಟಾನ್ ಮರಿಗಳು ಸಾಯುತ್ತಿರುವ ಹೃದಯವಿದ್ರಾವಕ ದೃಶ್ಯಗಳನ್ನು ಸೆರೆ ಹಿಡಿದು, ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಜಾಗದಲ್ಲಿ ಪ್ರದರ್ಶಿಸುತ್ತವೆ. ಇದನ್ನು ಗಮನಿಸುವ ಗ್ರಾಹಕರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಖರೀದಿಸುವ ಮನೋಭಾವವನ್ನು ತೋರುತ್ತಾರೆ. ಇದರಿಂದಾಗಿ ಮೇಲೆ ಹೇಳಿದ ಕ್ಯಾಡ್‌ಬರಿಯಂತಹ ಕಂಪನಿಗಳ ಆರ್ಥಿಕ ವಹಿವಾಟು ಕುಸಿಯುತ್ತದೆ. ಜಾಗತಿಕ ಮಟ್ಟದಲ್ಲಿ ಬರೀ ೧% ಅಥವಾ ೨% ಜನರು ಇವರ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದರೂ ಒಟ್ಟಾರೆ ಕಂಪನಿಯ ಲಾಭಗಳಿಕೆ ಗಣನೀಯವಾಗಿ ತಗ್ಗುತ್ತದೆ. ಕಚ್ಚಾವಸ್ತುಗಳನ್ನು ಕೊಳ್ಳುವವರು ಕಡಿಮೆಯಾದರೆ ವಿಲ್ಮರ್ ಪಾಮ್ ಎಣ್ಣೆಗೆ ಬೇಡಿಕೆ ಕುಸಿಯುತ್ತದೆ. ನಮ್ಮಲ್ಲೊಂದು ಗಾದೆಯಿದೆ ಮೂಗು ಹಿಡಿದರೆ ಬಾಯಿ ಬಿಡುತ್ತಾರೆ. ಇದೇ ತತ್ವ ಇಲ್ಲಿ ಕೆಲಸ ಮಾಡುತ್ತದೆ. ಅಂತಾರಾಷ್ಟ್ರೀಯ ಕಂಪನಿಗಳೇನು ಸುಲಭವಾಗಿ ಸೋಲೊನ್ನೊಪ್ಪಿ ಕೊಳ್ಳುವುದಿಲ್ಲ. ಪ್ರತಿಭಟಿಸುವವರನ್ನು ದಮನಿಸುವ ಕೆಲಸವನ್ನು ಮಾಡುತ್ತವೆ. ಜೀವ ಬೆದರಿಕೆ, ಹಲ್ಲೆ ಇತ್ಯಾದಿಗಳನ್ನು ನಡೆಸಲು ಹೇಸುವುದಿಲ್ಲ. ಸರ್ಕಾರಗಳನ್ನೇ ಬಗ್ಗಿಸಿ ಅಲ್ಲಿನ ಕಾನೂನನ್ನೇ ಅಸ್ತ್ರವಾಗಿಟ್ಟುಕೊಂಡು ಶಾಂತಿ ನಿರತ ಪ್ರತಿಭಟನಾಕಾರರನ್ನು ಹಣಿಯುತ್ತವೆ. ಇದ್ಯಾವುದಕ್ಕೂ ಬಗ್ಗದ ಜನತೆಗೆ, ಪರಿಸರ ಸಂಘಟನೆಗಳಿಗೆ ಅಂತಿಮವಾಗಿ ಅಂತಾರಾಷ್ಟ್ರೀಯ ಪರಿಸರ ಬಂಡುಕೋರ ಕಂಪನಿಗಳು ಮಣಿಯುತ್ತವೆ. ಡಿಸೆಂಬರ್ ೫ ೨೦೧೩ರಂದು ವಿಲ್ಮರ್ ಕಂಪನಿಯ ಸಿ.ಇ.ಓ. ಕುಕ್ ಕೂನ್ ಹಾಂಗ್ ಅಂತಿಮವಾಗಿ ಅರಣ್ಯ ನಾಶ ಮಾಡುವ ಪಾಮ್ ಎಣ್ಣೆಯ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ನಾವೀಗ ಮಾಡುತ್ತಿರುವ ಅರಣ್ಯ ನಾಶದಿಂದ ಪರಿಸರ ಹಾಳಾಗುತ್ತಿದೆ ಎಂಬ ಅರಿವಿದೆ. ಆದ್ದರಿಂದ ಇನ್ನು ಮುಂದೆ ಪಾಮ್ ಎಣ್ಣೆ ತಯಾರಿಕೆಗಾಗಿ ಅರಣ್ಯ ನಾಶ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದರ ಹಿಂದೆಯೇ ಕ್ಯಾಡ್‌ಬರಿ, ಲೋರಿಯಲ್ ಕಂಪನಿಗಳು ಇದೇ ನಿರ್ಧಾರವನ್ನು ಪ್ರಕಟಿಸಿವೆ. ನಿರಂತರ ಹೋರಾಟಕ್ಕೆ ಸಿಕ್ಕ ಜಯವಿದು. ರಷ್ಯಾ ಸರ್ಕಾರವು ತೈಲ ಕಂಪನಿಗೆ ಸಹಾಯ ಮಾಡಲು ಇದೇ ಗ್ರೀನ್-ಪೀಸ್‌ನ ೩೦ ಕಾರ್ಯಕರ್ತರನ್ನು ಬಂದಿಸಿಟ್ಟಿತ್ತು. ಜಗತ್ತಿನ ಲಕ್ಷಾಂತರ ಜನ ನ್ಯಾಯಯುತವಾಗಿ ಗ್ರೀನ್-ಪೀಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಡ ತಂದ ಪರಿಣಾಮ ೭೫ ದಿನ ಜೈಲಿನಲ್ಲಿದ್ದ ಎಲ್ಲರನ್ನೂ ಬಿಡುಗಡೆ ಮಾಡಿದ್ದು, ಶಾಂತಿಯುತ ಪರಿಸರ ಹೋರಾಟಕ್ಕೆ ೨೦೧೩ರ ಅಂತ್ಯದಲ್ಲಿ ಸಂದ ಅತ್ಯಂತ ದೊಡ್ಡ ಜಯ ಮತ್ತು ಇದಕ್ಕಾಗಿ ಗ್ರೀನ್-ಪೀಸ್ ಸಂಘಟನೆಯನ್ನು ಮತ್ತು ಇವರ ಬೆಂಬಲಿಗರನ್ನು ಅಭಿನಂದಿಸೋಣ.
ಅರ್ಜಂಟೈನಾದ ಮಾಲ್‌ವಿನಾಸ್ ಪ್ರದೇಶದಲ್ಲಿ ದೊಡ್ಡ-ದೊಡ್ಡ ಬುಲ್ಡೋಜರ್‌ಗಳಿಗೆ ಕೆಲಸ ಮಾಡಲು ಬಿಡದಂತೆ ಅಲ್ಲಿನ ನಿವಾಸಿಗಳು ರಸ್ತೆಗೆ ಅಡ್ಡಲಾಗಿ ಮಲಗಿದ್ದರು. ಇದರ ನೇತೃತ್ವವನ್ನು ವಹಿಸಿದ ದಿಟ್ಟೆ ಸೋಫಿಯಾ ಗಾಟಿಕಾ. ಸಾವಿರಾರು ಜನರ ಈ ಪ್ರತಿಭಟನೆ ಜಗತ್ತಿನಲ್ಲೇ ಕುಖ್ಯಾತಿ ಪಡೆದ ಮಾನ್ಸೆಂಟೋ ಬೀಜ ಕಂಪನಿಯ ವಿರುದ್ಧವಾಗಿತ್ತು. ಮಾಲ್‌ವಿನಾಸ್‌ನಲ್ಲಿ ಅತಿ ದೊಡ್ಡ ಬೀಜ ಕಾರ್ಖಾನೆಯನ್ನು ಪ್ರಾರಂಭಿಸಲು ಮಾನ್ಸೆಂಟೋ ಜಾಗ ಖರೀದಿ ಮಾಡಿ ಕೆಲಸ ಆರಂಭಿಸಿತ್ತು. ಸರ್ಕಾರಗಳನ್ನೇ ಬುಡಮೇಲು ಮಾಡಬಲ್ಲ ತಾಖತ್ತಿರುವ ಈ ಅಂತಾರಾಷ್ಟ್ರೀಯ ಕಂಪನಿಗೆ ಸೋಫಿಯಾ ಯಾವ ಲೆಕ್ಕ. ಕೃಷಿ ಕ್ಷೇತ್ರವನ್ನು ಇನ್ನಿಲ್ಲದಂತೆ ಮಾಲಿನ್ಯಗೊಳಿಸಿದ ಮಾನ್ಸೆಂಟೋ ಕಂಪನಿಯ ಕದಂಬ ಬಾಹು ಇಡೀ ಜಗತ್ತನ್ನೇ ಆಳಲು ಹೊರಟಿದೆ. ಯಾವುದೇ ರೈತ ಇವರ ಕುಲಾಂತರಿ ಬೀಜವನ್ನೇ ಅವಲಂಬಿಸಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಸಲು ಸಂಚು ಹೂಡಿರುವ ಮಾನ್ಸೆಂಟೋ ಏಜಂಟರು ಸೋಫಿಯಾ ಮತ್ತವರ ಬೆಂಬಲಿಗರನ್ನು ಥಳಿಸಿದರು. ಸೋಫಿಯಾಗೆ ಜೀವ ಬೆದರಿಕೆ ಹಾಕಿದರು. ಅಲ್ಲಿನ ಅಧ್ಯಕ್ಷ ಕಿರ್‍ಚಿನರ್ ನಮ್ಮ ದೇಶದ ಯಾವುದೇ ರಾಜಕಾರಣಿಯಂತೆ ಓರ್ವ ಭ್ರಷ್ಟ. ಅವನಿಗೆ ಅಲ್ಲಿಯ ರೈತರ ಹಾಗೂ ನಿವಾಸಿಗಳ ಹಿತರಕ್ಷಣೆಗಿಂತ ಮಾನ್ಸೆಂಟೋ ಕಂಪನಿ ನೀಡಿರುವ ಪ್ರಸಾದವೆ ಮುಖ್ಯವಾಗಿದೆ.
ಅಮೇರಿಕಾದಲ್ಲಿ ಬೆಳೆಯುತ್ತಿರುವ ಕೆಲವು ಬೆಳೆಗಳ ಬೀಜಗಳನ್ನು ಮಾನ್ಸೆಂಟೋ ಕಂಪನಿಯೇ ಮಾರಾಟ ಮಾಡುತ್ತಿದೆ. ಸಾರ್ವಜನಿಕರಿಗೆ, ಗ್ರಾಹಕರಿಗೆ ತೊಂದರೆಯಾದರೂ, ಪರಿಸರಕ್ಕೆ ಹಾನಿಯಾದರೂ ಅಲ್ಲಿನ ಜನ ಮಾನ್ಸೆಂಟೊ ಕಂಪನಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಹಾಗಿಲ್ಲ. ಇದರ ವಿರುದ್ಧ ಅಲ್ಲಿನ ನ್ಯಾಯಾಲಯಗಳು ತೀರ್ಪು ನೀಡುವಂತಿಲ್ಲ. ಹೀಗೆ ದೇಶದ ಕಾನೂನನ್ನೇ ಬದಲಿಸುವ ಶಕ್ತಿ ಹೊಂದಿರುವ ಮಾನ್ಸೆಂಟೋ ಕಂಪನಿಯ ವಿರುದ್ಧ ಜಗತ್ತಿನ ಪ್ರಜ್ಞಾವಂತರು, ಪರಿಸರಾಕ್ತರು ಪ್ರತಿಭಟಿಸಬೇಕು. ಗ್ರೀನ್-ಪೀಸ್‌ಗಳಂತಹ ಸಂಘಟನೆಗಳ ಜೊತೆ ಕೈಜೋಡಿಸಿದಾಗ ಮಾನ್ಸೆಂಟೋ ಭೂತವನ್ನು ಅರ್ಜಂಟೈನಾದಿಂದ ಓಡಿಸಬಹುದು. ಜಗತ್ತು ನಿರಾಳವಾಗಿರಬಹುದು.
ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ೨೦೧೩ ಇಸವಿ ಆಶಾದಾಯಕವಾಗಿ ಪರಿಣಮಿಸಿಲ್ಲ. ವಾತಾವರಣ ಬಿಸಿಯೇರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಗತ್ತಿನ ದೇಶಗಳು ಒಟ್ಟಾಗುತ್ತಿಲ್ಲ. ಎಲ್ಲಾ ದೇಶಗಳು ಅಭಿವೃದ್ಧಿ ಎಂಬ ಹಸಿವಿನಿಂದ ಬಳಲುತ್ತಿವೆ. ಈ ಹಸಿವನ್ನು ಹೋಗಲಾಡಿಸಿ, ಸುಸ್ಥಿರ ಅಭಿವೃದ್ದಿಯತ್ತ ಗಮನಹರಿಸುವ ನೇತಾರರು ನಮಗಿಂದು ಬೇಕಾಗಿದ್ದಾರೆ. ಪರಿಸರ ಪರ ಕಾನೂನು ರೂಪಿಸುವ ತಜ್ಞರ ಅಗತ್ಯ ಈ ಹೊತ್ತಿನ ಅಗತ್ಯವಾಗಿದೆ. ಮಕ್ಕಳು-ಮೊಮ್ಮಕ್ಕಳಿಗಾಗಿ ದುಡ್ಡು-ಚಿನ್ನ-ಬೆಳ್ಳಿ, ವಜ್ರ-ವೈಢೊರ್ಯಗಳನ್ನು ಸಂಗ್ರಹಿಸಿಡುವುದಕ್ಕಿಂತಲೂ, ಶುದ್ಧ ಗಾಳಿ, ಮಲಿನವಲ್ಲದ ನೀರು, ಜೀವಿವೈವಿಧ್ಯ ಇವುಗಳನ್ನು ಕಾಪಿಡುವುದು ಮುಂದಿನ ಪೀಳಿಗೆಗೆ ಒಳಿತಾಗುತ್ತದೆ. ಕುಲಾಂತರಿ ಬೀಜಗಳಿಗಿಂತ ದೇಶಿ ಬೀಜಗಳೇ ಶ್ರೇಷ್ಠವೆಂಬ ಸಂದೇಶವನ್ನು ಜನರಿಗೆ ತಲುಪಿಸಬೇಕಾಗಿದೆ. ಆಹಾರಭದ್ರತೆಯ ನೆವದಲ್ಲಿ ಜಗತ್ತಿನ ಪರಿಸರ ಮತ್ತು ಜೀವಿವೈವಿಧ್ಯದ ಮೇಲೆ ಪ್ರಹಾರ ಮಾಡುತ್ತಿರುವ ಕುಲಾಂತರಿ ಕಂಪನಿಗಳ, ಅಭಿವೃದ್ಧಿಯ ನೆಪದಲ್ಲಿ ಭೂಬಿಸಿಗೆ ಕಾರಣವಾಗುತ್ತಿರುವ ತೈಲ ಕಂಪನಿಗಳ ವಿರುದ್ಧ ಜನಜಾಗೃತಿಯಾಗ ಬೇಕು. ಪರಿಸರ ಸ್ನೇಹಿ ಬದಲಿ ಇಂಧನಗಳ ಬಳಕೆಗೆ ಸಾಮಾನ್ಯ ಜನರೂ ಮುಂದಾಗಬೇಕು. ಈ ಆಶಯಗಳೆಲ್ಲವನ್ನು ಪೂರೈಸುವ ವರ್ಷ ೨೦೧೪ ಆಗಲಿ ಎಂದು ಆಶಿಸುತ್ತಾ. . .
*****