ಹೊಸ ಬೆಳಕು: ವೈ. ಬಿ. ಕಡಕೋಳ

ವಂದನಾಳ ಬಾಳಿನಲ್ಲಿ ಏನೋ ದುಗುಡ. ಮುಖ ಸಪ್ಪೆಯಿಂದ ಮನೆಗೆಲಸದಲ್ಲಿ ಆಸಕ್ತಿ ಇಲ್ಲದಂತೆ ಮೋಬೈಲ್‍ದಲ್ಲಿ ಏನನ್ನೋ ಟೈಪಿಸುತ್ತ ಕುಳಿತಿದ್ದಳು. ಅದೇ ಸಂದರ್ಭ ಆ ಕಡೆಯಿಂದ ಅವಳ ಗೆಳತಿಯ ಕರೆ ಬಂತು ”ಹಲೋ ವಂದನಾ ಏನು ಮಾಡುತ್ತಿರುವೆ. ”? ಪ್ರಶ್ನೆ ಬರುವುದಷ್ಟೇ ತಡ ದುಃಖ ಉಮ್ಮಳಿಸಿ ಬಂದು ಅಳತೊಡಗಿದಳು. ಆ ಕಡೆಯಿಂದ ಮಾತೇ ಬರದಾದಾಗ ಇವಳ ಅಳುವ ಧ್ವನಿಯನ್ನು ಕೇಳಿ ಸುಮ ”ಯಾಕೆ ಏನಾಯಿತೇ ನಿನಗೆ, ಯಾಕೆ ಈ ಅಳು. ”? ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಸುಮಳಿಂದ ಬಂದಾಗ ವಂದನಾ ತಡೆಯದೇ ನಿನ್ನ ವ್ಯಾಟ್ಸಪ್ ತೆರೆ ಅದಕ್ಕೆ ಹಲವು ಸಂದೇಶ ಕಳಿಸುವೆ ಓದು. ನನ್ನ ದುಃಖಕ್ಕೆ ಕಾರಣ ಏನು ಅಂತ ಗೊತ್ತಾಗುತ್ತೆ” ಎನ್ನುತ್ತ ಮತ್ತೆ ಅದೇ ಅಳು.

ಮೊಬೈಲ್ ಅಂತರ್ಜಾಲದಲ್ಲಿ ಇಣುಕಿ ವಂದನಾ ಕಳಿಸಿದ್ದ ಸಂದೇಶ ಓದತೊಡಗಿದಳು. ಅವಳು ವ್ಯಾಟ್ಸಪ್ ದಲ್ಲಿ ಸ್ಥಳವೊಂದರ ಪ್ರವಾಸೀ ತಾಣದ ಮಾಹಿತಿಯನ್ನು ತನ್ನ ಅನುಭವದಲ್ಲಿ ಬರೆದಿದ್ದಳು. ವ್ಯಾಟ್ಸಪ್ ಗ್ರೂಪ್ ನಲ್ಲಿ ಓದಿದ ಸದಸ್ಯರೊಬ್ಬರು ಅದರಲ್ಲಿ ಆ ಸ್ಥಳಕ್ಕೆ ಸಂಬಂಧಿಸಿದಂತೆ ಹಲವು ತಪ್ಪುಗಳನ್ನು ತಿಳಿಸಿ ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿದ್ದರು. ಅದು ಅವಳ ದುಃಖಕ್ಕೆ ಕಾರಣವಾಗಿತ್ತು. ಇದನ್ನು ಓದಿ ತಿಳಿದು ಗೆಳತಿಯ ಈ ದುಃಖಕ್ಕೆ ಇದು ಕಾರಣ ಎಷ್ಟೊಂದು ಅಳುತ್ತಿದ್ದಾಳಲ್ಲ ಎಂದು ಮತ್ತೆ ಕರೆ ಮಾಡಿದಳು. ಆಗಲೂ ವಂದನಾಳ ದುಃಖ ನಿಂತಿರಲಿಲ್ಲ. ”ಹೇ ಹುಚ್ಚಿ. ಇದಕ್ಕೆಲ್ಲ ಹೀಗೆ ತಲೆಕೆಡಿಸಿಕೊಂಡರೆ ನೀನೊಬ್ಬ ಬರಹಗಾರ್ತಿ ಆಗೋಕೆ ಸಾಧ್ಯಾನೇ ಇಲ್ಲ. ಅದ್ಯಾವರೋ ಖಾರವಾಗಿ ಪ್ರತಿಕ್ರಿಯೆ ನೀಡಿದರೂ ಅಂತಾ ಅಳೋದಾ. ?” ಎಂದಳು.

“ಅಳದೇ ಇನ್ನೇನು ಮಾಡಲಿ. ಅವರು ಹೇಳುವ ರೀತಿಯಲ್ಲಿ ಹೇಳಿದ್ದರೆ ನನಗೆ ಬೇಜಾರಾಗ್ತಿರಲಿಲ್ಲ. ‌ಅದನ್ನು ಎಷ್ಟೊಂದು ಮನ ನೋಯುವಂತೆ ಬರೆದು ಹೇಳಿದ್ದಾರಲ್ಲ ಇದು ಸರೀನಾ. ?” ಎಂದ ವಂದನಾಳಿಗೆ, ಸುಮ ಬೈದು ಬುದ್ದಿವಾದ ಹೇಳುತ್ತ “ಇನ್ನು ನಿನ್ನ ಬರವಣಿಗೆಯತ್ತ ಮುಖ ತಿರುಗಿಸು ಅಂದಾಗ “ನಿನಗೆ ನೀನೇ ಸಮಾಧಾನ ಮಾಡ್ಕೋತಿಯ ಇನ್ನೋಬ್ಬರು ಹಾಗೆ ಹೇಳಿದರು ಹೀಗೆ ಹೇಳಿದರು ಅಂತಾ ಕುಳಿತರೆ ಮುಗಿಯಿತು ನಿನ್ನ ಕತೆ. ಬಿಡು ಚಿಂತೆ, ಅದರಲ್ಲಿ ಏನು ತಪ್ಪು ಇದೆಯೋ ಅದನ್ನು ಸರಿಪಡಿಸಿಕೊಳ್ಳುವೆ ಅಂತಾ ಒಂದು ಸಮಜಾಯಿಸಿ ಕೊಡು. ಸರಿಪಡಿಸಿಕೊಂಡು ಮುಂದಿನ ಲೇಖನದತ್ತ ಗಮನ ಹರಿಸು”ಎಂದು ಸಮಾಧಾನಿಸಿದಳು.

ವಂದನಾ ಕೂಡ ಪ್ರತಿಕ್ರಿಯೆ ಬರೆದವರಿಗೆ ಸಮಜಾಯಿಸಿ ನೀಡಿ ತನ್ನ ಬರಹದ ಬಗ್ಗೆ ಪ್ರತಿಕ್ರಯಿಸಿದಳು. ಆಗಲೂ ಕೂಡ ಅದೇ ವ್ಯಾಟ್ಸಪ್‍ಲ್ಲಿ ಅದೇ ಪ್ರತಿಕ್ರಿಯೆ ಖಾರವಾಗಿಯೇ ಬಂದಿತ್ತು. “ಹೀಗಿದ್ದರೆ ಯಾಕ್ರಿ ಬರೆಯಬೇಕು. ? “ ಎನ್ನುವುದು ಅವರ ಪ್ರಶ್ನೆಯಾಗಿತ್ತು. ಮತ್ತೆ ಅದೇ ಅಳು. ಅದು ಹಾಗೆ ಬೆಳೆಯುತ್ತ ಸಾಗಿತು. ಸಂಜೆಯವರೆಗೂ ವ್ಯಾಟ್ಸಪ್ ತುಂಬ ಪ್ರತಿಕ್ರಿಯೆಗಳ ಸುರಿಮಳೆಗಳೇ. ಇದನ್ನು ಯಾರ ಮುಂದೆ ಹೇಳಿಕೊಳ್ಳುವುದು ಎಂದು ಯೋಚಿಸುತ್ತಿರುವಾಗಲೇ ಅತ್ತ ಪೋನ್ ರಿಂಗಣಿಸತೊಡಗಿತು. ನಂಬರ್ ಮಾತ್ರ ಇದೆ. ಇದು ಅಪರಿಚಿತರ ಕರೆ, ಸ್ವೀಕರಿಸಲೋ ಬೇಡವೋ ಎಂಬ ಅಳುಕಿನಿಂದಲೇ ಕರೆಯನ್ನು ವಂದನಾ ಸ್ವೀಕರಿಸಿದಳು. ಹಲೋ ಎನ್ನಲು ಬರದಷ್ಟು ದುಃಖ ಇಮ್ಮಡಿಸಿದೆ. ಅತ್ತ ಮೆಲುದನಿಯೊಂದು ”ಮೇಡಂ ನಾನು ನಿಮ್ಮ ಬರಹವನ್ನು ಓದಿದೆ ಚನ್ನಾಗಿ ಬರೆದಿರುವಿರಿ. ಒಂದು ಸಣ್ಣ ತಪ್ಪನ್ನು ನೋಡಿದ ಮಹಾನುಭಾವರೊಬ್ಬರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿರುವರು. ಅದನ್ನು ತಾವು ಸೀರಿಯಸ್ ಆಗಿ ತಗೋಬೇಡಿ” ಹೀಗೆ ಹೇಳುತ್ತಿದೆ ಆ ಧ್ವನಿ. ಆದರೆ ವಂದನಾ ಮತ್ತಷ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ”ಅರೆ ಏನ್ರಿ ನಾನು ಮಾತಾಡ್ತಾನೇ ಇದ್ದೀನಿ, ನೀವು ಅಳ್ತಿದ್ದೀರಲ್ಲ. ಏನು ಆಗಬಾರದು ಆಗಿದೆಯಂತ ಆಳ್ತಿದ್ದೀರಿ. ”? ಮತ್ತದೇ ಪ್ರಶ್ನೆ.

ವಂದನಾ ಅದೇ ಕಾರಣ ನೀಡಿದಾಗ ”ರ್ರೀ ಹೀಗತ್ತರೆ ನೀವು ಸಮಾಜದಲ್ಲಿ ಒಳ್ಳೆಯ ಬರಹಗಾರರಾಗಲು ಸಾಧ್ಯವೇ ಇಲ್ಲ. ಏನಾದರೂ ಸಾಧಿಸಬೇಕೆಂದರೆ ನಡೆಯುವ ಹಾದಿಯಲ್ಲಿ ಇರುವ ಕಲ್ಲುಮುಳ್ಳುಗಳನ್ನು ನೋಡಿ, ಅದರಿಂದ ಅಪಾಯ ಆಗದಂತೆ ನಡೆದಾಗ ತಾನೇ ಅವು ಚುಚ್ಚೋಲ್ಲ. ಹಾಗೇ ಇದು ಕೂಡ. ಅವರು ಕೊಟ್ಟಿರುವ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಮೇಲೆ ನಿಮ್ಮ ಪ್ರತಿಕ್ರಿಯೆಗೆ ಇತರರು ಏನು ಹೇಳುತ್ತಿದ್ದಾರೆ ಅಂತಾ ನೋಡಿಲ್ಲವಲ್ಲ ನೀವು. ಎಲ್ಲರೂ ಆ ಖಾರದ ಪ್ರತಿಕ್ರಿಯೆಗೆ ಅಷ್ಟೇ ಖಾರವಾಗಿ ಹೇಳೋದನ್ನು ಇನ್ನೋಬ್ಬರಿಗೆ ನೋವಾಗದಂತೆ ಹೇಳಿ ಅಂತಾ ಬರೆದಿದ್ದಾರೆ ನೋಡಿಲ್ಲವೇ. ?” ಎಂದು ಪೋನ್ ಕಟ್ ಮಾಡಿತು ಆ ಮೆಲುದನಿ.

ವಂದನಾ ಮತ್ತೆ ವ್ಯಾಟ್ಪಪ್‍ದಲ್ಲಿ ಮುಖ ತೋರಿಸಿ ತನ್ನ ಬರಹದ ಪ್ರತಿಕ್ರಿಯೆ ಮತ್ತು ಅದಕ್ಕೆ ಪೂರಕವಾದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇವಳ ಪರವಾಗಿ ಅದೆಷ್ಟು ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದರೆಂದರೆ ನಂಬಲಾಗುತ್ತಿಲ್ಲ. ಆ ಖಾರವಾದ ಒಂದು ಪ್ರತಿಕ್ರಿಯೆ ಇವಳ ಬರಹ ನಿಲ್ಲಿಸಿಬಿಡಬೇಕು ಎಂಬಂತಹ ಸಂದಿಗ್ಧ ಸ್ಥಿತಿಗೆ ತಂದಿದ್ದರೆ, ಚನ್ನಾಗಿ ಬರೆದಿರುವಿರಿ ಇನ್ನಷ್ಟು ಬರೆಯಿರಿ, ಯಾರೋ ಏನೋ ಹೇಳಿದರು ಅಂತಾ ತಾವು ಅತ್ತ ತಲೆಕೆಡಿಸಿಕೊಳ್ಳದೇ ನಿಮ್ಮ ಬರವಣಿಗೆ ಮುಂದುವರೆಸಿ ಎಂದೆಲ್ಲ ಪ್ರೋತ್ಸಾಹದ ನುಡಿಗಳೇ ತುಂಬಿದ್ದವು. ಈಗ ಮನಸ್ಸು ಸ್ವಲ್ಪ ಹಗುರವಾಯಿತು.

ಅರೆ ಇದೀಗ ಪೋನ್ ಬಂದಿತ್ತಲ್ಲ ಅವರ ಹೆಸರು ಕೂಡ ಕೇಳಲಿಲ್ಲ. ಎಂದು ತನಗೆ ಬಂದಿರುವ ಕರೆಯತ್ತ ಗಮನ ಹರಿಸಿ ಪೋನ್ ಮಾಡಿದಳು ”ಥ್ಯಾಂಕ್ಸ ರೀ, ನನಗೆ ತಮ್ಮ ಹೆಸರು ಕೇಳಲು ಕೂಡ ಆಗಲಿಲ್ಲ. ಈಗ ವ್ಯಾಟ್ಸಪ್ ನೋಡಿದೆ ತಾವು ತಿಳಿಸಿದಂತೆ ಅನೇಕರು ನನ್ನ ಬರಹದ ಬಗ್ಗೆ ಮೆಚ್ಚುಗೆಯ ಮಾತನಾಡಿರುವರು. ನಾನು ಈಗ ತಾನೇ ಬರೆಯುತ್ತಿರುವವಳು. ಇದು ಹೊಸದು. ಬರೆಯಬೇಕೆನ್ನುವ ತುಡಿತವಿದೆ. ಆದರೆ ಮೊದಲ ಬರಹವೇ ಹೀಗಾದರೆ ಎಂಬ ಚಿಂತೆ ಕಾಡುತ್ತಿತ್ತು. ಆಗಿರುವ ತಪ್ಪನ್ನು ತಿದ್ದಿಕೊಳ್ಳುವೆ ಎಂಬ ಸಮಜಾಯಿಸಿ ನೀಡಿದರು ಮತ್ತೆ ಖಾರವಾಗಿ ಪ್ರತಿಕ್ರಿಯೆ ನೋಡಿ ದುಃಖ ಉಮ್ಮಳಿಸಿ ಬರತೊಡಗಿತ್ತು. ಈಗ ಸ್ವಲ್ಪ ನಿರಾಳತೆ. ಅಂದ ಹಾಗೆ ತಮ್ಮ ಹೆಸರು. ?” ಎಂದಳು.

“ನನ್ನ ಹೆಸರು ಗಾಯತ್ರಿ ಅಂತಾ. ನಿಮ್ಮ ಹಾಗೆ ನಾನೂ ಮೊದಮೊದಲು ಬರೆದಾಗ ಕೊಂಕು ಮಾತನಾಡಿದವರೇ ಜಾಸ್ತಿ ಮೇಡಂ. ಈಗೀಗ ಎಲ್ಲವೂ ಸರಿ ಹೋಗಿದೆ ಚನ್ನಾಗಿ ಬರೆಯಲು ಪ್ರೇರಣೆ ಕೊಡುವವರೂ ಈಗ ಇದ್ದಾರೆ ಎಂಬುದಕ್ಕೆ ಬೆಂಗಳೂರಿನ ಒಬ್ಬ ಪ್ರಕಾಶಕರು ನನ್ನ ಎಲ್ಲ ಪುಸ್ತಕಗಳನ್ನು ಪ್ರಕಟಿಸಿ ಕೊಡುತ್ತ ನನಗೆ ಬರೆಯಲು ಅವಕಾಶ ಒದಗಿಸಿದರು. ಈಗ ನಾಡಿನ ಎಲ್ಲ ಪತ್ರಿಕೆಗಳಲ್ಲಿ ನನ್ನ ಬರಹಗಳು ಬರುತ್ತಿವೆ. ನೀವೂ ಚನ್ನಾಗಿ ಬರೆಯುತ್ತೀರಿ,ನಾನೂ ಅದೇ ವ್ಯಾಟ್ಸಪ್ ಗ್ರುಪ್‍ಲ್ಲಿ ಇದ್ದೇನೆ. ನಾನಿರೋದು ಶಿವಮೊಗ್ಗ. ಓದುತ್ತಿರೋದು ಬೆಂಗಳೂರಲ್ಲಿ. ತಾವು ಏನು ಮಾಡುತ್ತಿರುವಿರಿ. ?” ಎಂದು ತನ್ನ ಪರಿಚಯ ಮಾಡಿಕೊಂಡ ಗಾಯತ್ರಿ ಕೇಳುವದಷ್ಟೇ ತಡ ವಂದನಾ “ನಾನು ಗೃಹಿಣಿ ಮನೆಗೆಲಸದ ನಡುವೆ ಮೋಬೈಲ್‍ದಲ್ಲಿ ಕತೆ ಕವನ ಹೀಗೆ ಬರೆಯುತ್ತಿರುವೆ ನನಗೂ ಪುಸ್ತಕ ಮಾಡೋ ಆಸೆ. ಕಿತ್ತು ತಿನ್ನುವ ಬಡತನ ನಮ್ಮಂತವರು ಇಂದಿನ ದಿನಗಳಲ್ಲಿ ಪುಸ್ತಕ ಮಾಡೋದು ಮರೀಚಿಕೆರೀ. ?” ಎಂದಳು.

“ರೀ ನೀವು ನನಗಿಂತ ಹಿರಿಯರು, ಚನ್ನಾಗಿ ಬರೆಯುತ್ತಿರುವಿರಿ, ನಾನು ಬೆಂಗಳೂರಿನ ಪ್ರಕಾಶಕರಿಗೆ ನಿಮ್ಮ ಬಗ್ಗೆ ಹೇಳುವೆ ಅವರು ಒಪ್ಪಿದರೆ ತಾವೂ ತಮ್ಮ ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಬಹುದು. ”ಎಂದಳು ಗಾಯತ್ರಿ. ವಂದನಾಳ ಸಂತಸಕ್ಕೆ ಪಾರವೇ ಇರಲಿಲ್ಲ. ದೇವರು ನೋವಲ್ಲೂ ನಲಿವಿನ ಸಂಗತಿ ನೀಡಬಹುದಾ. ?”ಎಂದು ಯೋಚಿಸುತ್ತ “ತಮ್ಮ ನಂಬರ್ ಉಳಿಸಿಕೊಳ್ಳುವೆ ನನಗೆ ಪುಸ್ತಕ ಪ್ರಕಟಣೆಗೆ ಸಹಾಯ ಮಾಡಿ”ಎಂದಳು. ಆಗ ಗಾಯತ್ರಿ “ಆಯಿತು. ತಾವು ಏನೇನು ಬರೆದಿರುವಿರಿ ಅದನ್ನೆಲ್ಲ ಚನ್ನಾಗಿ ಒಂದೆಡೆ ಟೈಪಿಸಿ ಪರಿವಿಡಿ ಮಾಡಿಕೊಳ್ಳಿ,ಮುನ್ನುಡಿ,ಬೆನ್ನುಡಿ,ಲೇಖಕರ ಮಾತು ಇತ್ಯಾದಿಯೊಂದಿಗೆ ಸಿದ್ದತೆ ಮಾಡಿಕೊಳ್ಳಿ,ನಾನು ಪ್ರಕಾಶಕರ ಜೊತೆ ಮಾತಾಡಿ ತಮಗೆ ಪೋನ್ ಮಾಡ್ತೀನಿ”ಎಂದು ಭರವಸೆಯ ಮಾತುಗಳನ್ನಾಡಿದಳು.

ವಂದನಾಳಿಗೆ ಈಗ ಹೊಸ ಚೈತನ್ಯವೊಂದು ಮೂಡಿದಂತಾಗಿತ್ತು. ಮತ್ತೆ ಹಾಡಿತು ಕೋಗಿಲೆ ಎಂಬಂತೆ ಭರವಸೆಯ ಬೆಳಕಿನತ್ತ ಹೊರಳಿ ಆ ದಿನದ ನಿದ್ರೆಗೆ ಜಾರಿದ್ದಳು. ಎಂದಿನಂತೆ ಮನೆಗೆಲಸ ಅತ್ತೆ ಗಂಡನ ಸೇವೆ ಇತ್ಯಾದಿ ಮುಗಿಸಿ ಕತೆಗಳನ್ನೆಲ್ಲ ಹೊಂದಿಸತೊಡಗಿದಳು ಒಂದೆರಡು ದಿನ ಕಳೆದಿತ್ತು ಗಾಯತ್ತಿಯಿಂದ ಪೋನ್ ಕರೆ ಬಂದಿತು. ”ಹಲೋ ಸಹೋದರಿ ಹೇಗಿದ್ದೀರಿ. ? ಕ್ಷೇಮವೇ, ನಿಮ್ಮ ಕತೆಗಳ ಹೊದಿಕೆ ಹೇಗಾಗುತ್ತಿದೆ. ನಮ್ಮ ಪ್ರಕಾಶಕರು ತಮ್ಮ ಪುಸ್ತಕ ಮಾಡಿಕೊಡಲು ಒಪ್ಪಿದರು. ”ಎಂದು ಹೇಳುತ್ತ ಅದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಹೇಳಿದಳು. ವಂದನಾ ಸಂತೋಷದಿಂದ “ಗಾಯತ್ರಿ ನಿನ್ನ ಉಪಕಾರ ಮರೆಯಲಾರೆ ನಾನು ಮುನ್ನುಡಿ ಮತ್ತು ಬೆನ್ನುಡಿ ಬರೆಯಲು ಹಿರಿಯರಿಗೆ ತಿಳಿಸಿರುವೆ ಕತೆಗಳನ್ನು ಹೊಂದಿಸಿರುವೆ ಇನ್ನು ಕೆಲವೇ ದಿನಗಳಲ್ಲಿ ಅವುಗಳನ್ನು ಒಪ್ಪಿಸುವೆ”ಎಂದು ಪಟಪಟನೆ ತಿಳಿಸಿದಳು.

ಗಾಯತ್ರಿ ಆಗ ವಂದನಾಳಿಗೆ ಪ್ರಕಾಶಕರ ಪೋನ್ ನಂಬರ ಕೊಟ್ಟು ಸಂಜೆ ಮಾತಾಡುವಂತೆ ತಿಳಿಸಿದಳು. ಅದೇ ಸಂಜೆ ವಂದನಾ ಸಂಪಾದಕರೊಂದಿಗೆ ಮಾತನಾಡಿದಳು. ಅವರು ಗಾಯತ್ರಿ ಹೇಳಿದ ನಿಬಂಧನೆಗಳನ್ನು ಹೇಳಿ ಆದಷ್ಟು ಬೇಗ ಕತೆಗಳನ್ನು ಕಳಿಸುವಂತೆ ಸೂಚಿಸಿದರು. ಮತ್ತೆ ಗಾಯತ್ರಿಗೆ ಕರೆ ಮಾಡಿ ಸಂಪಾದಕರೊಂದಿಗೆ ಚರ್ಚಿಸಿದ ಸಂಗತಿ ತಿಳಿಸಿದಳು. ಗಾಯತ್ರಿ ಕೂಡ ವಂದನಾಳಿಗೆ ತನ್ನ ಹಲವು ಸಲಹೆಗಳನ್ನು ನೀಡುತ್ತ ವ್ಯಾಟ್ಸಪ್‍ಗೆ ಮಾತ್ರ ಸೀಮಿತವಾಗಬೇಡಿ ತಮ್ಮ ಬರಹಗಳನ್ನು ದಿನಪತ್ರಿಕೆಗಳ ಪುರವಣಿಗಳಿಗೆ ಬರೆಯಿರಿ ಅದರಿಂದ ಗೌರವಧನ ಕೂಡ ಪ್ರಾಪ್ತವಾಗುತ್ತದೆ ಅದರಿಂದ ತಮ್ಮ ಬಡತನದಲ್ಲಿ ಸ್ವಲ್ಪ ಅನುಕೂಲವಾಗುತ್ತದೆ ಎನ್ನುತ್ತ ಹಲವು ಪತ್ರಿಕೆಗಳ ಅಂತರ್ಜಾಲದ ವಿಳಾಸಗಳನ್ನು ನೀಡಿದಳು. ಮನೆಯಲ್ಲಿ ಕಂಪ್ಯೂmರ್ ಹೊಂದಿದ್ದ ವಂದನಾ ಅಂತರ್ಜಾಲವನ್ನೂ ಕಲಿತಳು. ಆಗಾಗ ಗಾಯತ್ರಿಯ ಸಲಹೆ ಪಡೆಯುತ್ತ ಪತ್ರಿಕೆಗಳಿಗೂ ಬರಹಗಳನ್ನು ಬರೆಯತೊಡಗಿದಳು. ಕತೆ ಕವನ ಹರಟೆ ಪ್ರವಾಸ ಬರಹ ಹೀಗೆ ಒಂದಲ್ಲ ಹಲವು ವಿಭಾಗಗಳಲ್ಲಿ ವಂದನಾಳ ಬರವಣಿಗೆ ಸಾಗತೊಡಗಿತು. ಕತೆಗಳನ್ನು ಅಚ್ಚುಕಟ್ಟಾಗಿ ಟೈಪಿಸಿ ಮುನ್ನುಡಿ ಬೆನ್ನುಡಿ ಲೇಖಕಿಯ ಮಾತಿನೊಂದಿಗೆ ಸಂಪಾದಕರಿಗೆ ಕಳಿಸಿದ್ದೂ ಆಯಿತು. ಬಡತನದ ಬದುಕಿನಲ್ಲಿ ಅಲ್ಪಸ್ವಲ್ಪ ಹಣವೂ ಲಭಿಸತೊಡಗಿತು.

ಕಾಲಕ್ರಮೇಣ ಅವಳು ಬರೆದ ಕತೆಗಳ ಕಥಾಸಂಕಲನ “ಹೊಸಬೆಳಕು” ಬಿಡುಗಡೆಯ ಸಂದರ್ಭ ಬಂದೇ ಬಿಟ್ಟಿತು. ಮರೆಯದೇ ತನ್ನ ಗೆಳತಿಯನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಳು. ವೇದಿಕೆಯ ಮೇಲೆ ಪುಸ್ತಕ ಬಿಡುಗಡೆಯಾಯಿತು. ಲೇಖಕಿಯ ಮಾತುಗಳನ್ನಾಡುವ ಸಂದರ್ಭ “ತನ್ನ ಬದುಕಿನಲ್ಲಿ ಗಾಯತ್ರಿಯ ಆಗಮನವಾಗದಿದ್ದರೆ ಇಂದು ಹೊಸಬೆಳಕು ಮೂಡುತ್ತಿರಲಿಲ್ಲ. ಹೊಸ ಬರಹಗಾರರಿಗೆ ಪ್ರೋತ್ಸಾಹ ತುಂಬುವ ಮನಸುಗಳು ಮುಖ್ಯ. ಚುಚ್ಚಿ ಮಾತನಾಡುವ ಬದಲು ತಪ್ಪಿದ್ದಲ್ಲಿ ಏನು ಸರಿ ಮಾಡಬೇಕು ಎಂಬುದನ್ನು ತೋರಿಸುವ ಸಹೃದಯರ ಅವಶ್ಯಕತೆ ಇಂದು ಅಗತ್ಯ “ ಎಂದು ತನ್ನ ಪ್ಲ್ಯಾಶ್ ಬ್ಯಾಕ್ ಕತೆಯನ್ನು ಹೇಳಿದಾಗ ಕಣ್ಣಂಚಲ್ಲಿ ನೀರು ಜಿನುಗಿತ್ತು.

ಅದೇ ವರ್ಷ ಒಂದು ಸಂಸ್ಥೆಯಿಂದ ಅವಳ “ಹೊಸಬೆಳಕು” ಕಥಾಸಂಕಲನಕ್ಕೆ ವರ್ಷದ ಪುಸ್ತಕ ಪ್ರಶಸ್ತಿ ಕೂಡ ಲಭಿಸಿತ್ತು. ಬದುಕಿನ ಸಂತಸಕ್ಕೆ ಮತ್ತೊಂದು ಗರಿ ಮೂಡಿತ್ತು. ತನ್ನ ಬಾಳಿನಲ್ಲಿ ಗಾಯತ್ರಿಯ ಆಗಮನ ಹೊಸ ಬೆಳಕನ್ನೇ ತೆರೆದಿತ್ತು.

ವೈ. ಬಿ. ಕಡಕೋಳ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x