ಕಥಾಲೋಕ

ಹೊಸ್ತಿನ ಮನೆ ಸ್ಮಶಾನವಾದಾಗ: ಪ್ರವೀಣ್ ಶೆಟ್ಟಿ

ಅಂದೇಕೋ ಅವನು ತುಂಬಾ ಖುಷಿಯಾಗಿದ್ದ!
ತಂಗಿ ಬೆಂಗಳೂರಿನಿಂದ ಬಂದ ಖುಷಿ, ಅದರ ಜೊತೆ ನಾಳೆ ಅಂದರೆ ಹೊಸ್ತು ಬೇರೆ. ಮನೆಯಲ್ಲಿ ಎಂದೋ ಕಳೆದುಹೊಗಿದ್ದ ಸಂಭ್ರಮ ಬೇರೆ. ಎಲ್ಲ ಅಣ್ಣ-ಅಕ್ಕ-ತಂಗಿ ಒಟ್ಟಾಗಿ ವರುಷಗಳೇ ಕಳೆದಿತ್ತು. ಎಲ್ಲಾ ಸೇರಿ ಹೊಸ್ತು ಮಾಡುವ ಸಂಭ್ರಮ ಮನೆಮಾಡಿತ್ತು.

ಅವನು ಸೀತಾರಾಮ ಮೂವರು ಒಡಹುಟ್ಟಿದ ತಂಗಿಯರೊಂದಿಗೆ ಒಬ್ಬನೇ ಮಗ. ಟಿಸಿಎಚ್ ಮಾಡಿ ಸರಕಾರಿ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿ ಕಾಯುತ್ತಿದ್ದ. ಹಾಗೆ ತಂದೆಯ ವ್ಯವಹಾರಲ್ಲಿ ಕೈ ಜೊಡಿಸಿದ್ದ. ಅದೇ ಸಮಯಕ್ಕೆ ಸರಿಯಾಗಿ ಗ್ರಾಮೀಣ ಕೃಪಾಂಕದ ಅಡಿಯಲ್ಲಿ ಸರಕಾರಿ ಕೆಲಸ ಕೂಡ ಸಿಕ್ಕಿತು. ಹಾಗೆ ತಂದೆ ನೋಡಿದ ಹುಡುಗಿಯೊಡನೆ ವಿವಾಹ ಕೂಡ ಆಗಿತ್ತು. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಕೂಡಾ ಇದ್ದರು. ಕೇವಲ ಸರಕಾರಿ ಸಂಬಳ ನಂಬಿಕೊಂಡರೆ ಆಗದು ಎಂದು ಮನೆಯ ಹತ್ತಿರದಲ್ಲೇ ಕೋಳಿ ಸಾಕಾಣಿಕೆ ಕೂಡ ಪ್ರಾರಂಭ ಮಾಡಿದ್ದ. ವ್ಯವಹಾರವೇನೊ ಚನ್ನಾಗಿ ನೆಡೆಯುತಿತ್ತು ಆದರೆ ಕಾರ್ಮಿಕರ ಸಮಸ್ಯೆಯಿಂದ ಇವನೇ ಎಲ್ಲಾ ಕೆಲಸ ಮಾಡುವಂತಾಗಿತ್ತು. ಬೆಳಿಗ್ಗೆ ಬೇಗ ಎದ್ದು ಇರುವ ಒಬ್ಬ ಸಹಾಯಕ ನೊಂದಿಗೆ ಫಾರಂ ಸ್ವಚ್ಛ ಮಾಡಿ, ಕೋಳಿಗಳಿಗೆ ನೀರು, ಆಹಾರ ನೀಡಿ ಶಾಲೆಗೆ ಹೋಗುತ್ತಿದ್ದ. ಶಾಲೆಯಿಂದ ಬಂದ ಮೇಲೆ ಮತ್ತೆ ಅದೇ ಕೆಲಸ. ಹಾಗೆ ಬಿಡುವಿಲ್ಲದ ಕೆಲಸದ ನಡುವೆ ಹೈರಾಣಾಗಿದ್ದ.

ಆವತ್ತು ತಂಗಿ ಬಂದ ಖುಷಿ ಯಿಂದಲೋ ಏನೊ ಬೆಳಿಗ್ಗೆ ಬೇಗನೇ ಎದ್ದು ಫಾರಂ ಎಲ್ಲಾ ಕೆಲಸ ಮುಗಿಸಿ ದೇವಸ್ಥಾನಗಳಿಗೆ ಹೋಗುವುದೆಂದು ಲೆಕ್ಕಾಚಾರ ಹಾಕಿದ್ದ. ಅದರಂತೆ ತಂಗಿಯೊಡನೆ ಮೊದಲಿಗೆ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ದರ್ಶನದ ಜೊತೆಗೆ ದೇವಸ್ಥಾನದಲ್ಲೇ ಊಟ ಮುಗಿಸಿ ಕುಂದಾಪುರಕ್ಕೆ ಹೋಗಿ ಸ್ವಲ್ಪ ಶಾಪಿಂಗ್ ಮುಗಿಸಿದರು. ಹಾಗೆ ಶನಿವಾರ ಆದ್ದರಿಂದ ಕುಂದಾಪುರ ಸಂತೆಗೆ ಹೋಗಿ ನಾಳೆ ಹೊಸ್ತಿಗೆ ಬೇಕಾದ ಎಲ್ಲಾ ತರಕಾರಿಗಳನ್ನು ಕೊಂಡು ಮನೆಗೆ ಬರುವಾಗ ಘಂಟೆ ಆರು.
ಮತ್ತೆ ಕೋಳಿ ಗಳಿಗೆ ನೀರು ಇರಿಸಿ, ಚಾ ಕುಡಿದು ಮನೆಯವರೊಂದಿಗೆ ಹರಟುತ್ತಾ ಕುಳಿತಿದ್ದ.

ಘಂಟೆ ಸರಿದದ್ದೇ ಗೊತ್ತಾಗಲಿಲ್ಲ. ನಾಳೆ ಹೊಸ್ತಿಗೆ ಕದಿರು (ಭತ್ತದ ತೆನೆ) ತರಬೇಕಲ್ಲಾ ಎಂದರೆ, ಇವರ ಮನೆಯಲ್ಲಿ ಬೇಸಾಯ ಬಿಟ್ಟು ಐದಾರು ವರ್ಷಗಳೇ ಕಳೆದಿವೆ. ಈ ಹಿಂದೆ ಚಿಕ್ಕಪ್ಪ ಇರುವಾಗ ಇರುವ ಗದ್ದೆ, ಮಕ್ಕಿ ಯಾವುದನ್ನೂ ಬಿಡದೆ ವರ್ಷಕ್ಕೆ ಖಾತಿ-ಸುಗ್ಗಿ ಅಂತ ಎರಡು ಬೆಳೆ ಬೆಳೆಯುತ್ತಿದ್ದರು. ಆದರೆ ಅವರು ಬೇರೆ ಮನೆ ಮಾಡಿಕೊಂಡಂದಿನಿಂದ ಬೇಸಾಯಕ್ಕೆ ವಿದಾಯ ಹೇಳಿದ್ದರು. ಅದೂ ಅಲ್ಲದೆ ಹೊಸ್ತಿಗೋಸ್ಕರ ಬೇರೆ ಮನೆಯವರ ಗದ್ದೆಯಿಂದ ಕದ್ದು ತಂದ ತೆನೆಯನ್ನೇ ಪೂಜೆ ಮಾಡಬೇಕೆಂಬ ಸಂಪ್ರದಾಯ. ಅದಕ್ಕಾಗಿ ಇದ್ದೊಂದು ಮೂರು ಶೆಲ್ ನ ಭೆಟ್ರಿ ಹಾಗೂ ಚುಮಣಿ ಹಿಡಿದುಕೊಂಡು ಸುಮಾರು ಐನೂರು ಮೀಟರ್ ದೂರವಿರುವ ಸಾಂತಾರು ಬೈಲಿಗೆ ಕದಿರು ತರಲಿಕ್ಕೆ ಹೋದರು. ಇವರ ಮನೆಯ ಬೈಲಿಗೆ ಅಂಚಿನಲ್ಲಿ ಅಕ್ಕ ಪಕ್ಕದಲ್ಲಿ ಎರಡು ಕೆರೆ ಮಧ್ಯ ದಲ್ಲಿ ಸ್ವಲ್ಪ ಬೆಟ್ಟು ಜಾಗ. ಎರಡೂ ಕೆರೆ ಜೋಡಿಸುವ ಕೊಂಡಿ. ಆದರೂ ಮೊಣಕಾಲು ಮುಳುಗುವಷ್ಟು ನೀರು ಡಿಸೆಂಬರ್ – ಜನವರಿ ತನಕ ಇರೋದು. ಅದೂ ಅಲ್ಲದೆ ಆವೆರಡು ಬೈಲನ್ನು ಬೇರ್ಪಡಿಸಲು ಒಂದು ಬಿದಿರಿನಿಂದ ಮಾಡಿದ ಬೇಲಿ. ಅದನ್ನೇ ದಾಟಿ ಮುಂದೆ ಹೋಗಬೇಕು. ತಂಗಿಯನ್ನು ಬೇಲಿಯ ಪಕ್ಕದಲ್ಲಿ ನಿಲ್ಲಿಸಿ ತಾನು ಬೆಟ್ರಿ ಹಿಡಿದು ಬೇಲಿ ದಾಟಿ, ಕೆರೆಯನ್ನು ಹಾದು ಪಕ್ಕದ ಗದ್ದೆ ಕಾಲಿಟ್ಟ. ಆದರೆ ಬೇಲಿಬದಿಯ ಸ್ವಲ್ಪ ನವಿಲು, ಹಂದಿ ಒಕ್ಕಿರುವ ಜಾಗವನ್ನು ಅದಾಗಲೇ ಕಟಾವು ಮಾಡಿದ್ದರು. ಹಾಗೆ ಗದ್ದೆಯಲ್ಲಿ ನೆಡೆದು ಮುಂದೆ ಹೋದ ಹಾಗೆ ಕೈಯಲ್ಲಿ ಎರಡು ಬುಡ ಭತ್ತದ ಗಿಡ ಕಿತ್ತು ಹಾಗೆ ಒಂದು ಹೆಜ್ಜೆ ಹಿಂದೆ ಇಟ್ಟ ಎನೋ ತಾಗಿದಂತಾಗಿ ಅಮ್ಮಾ ಎಂದು ಕೂಗುತ್ತಾ ಬಿದ್ದುಬಿಟ್ಟ. ಎಲ್ಲವೂ ಕ್ಷಣ ಮಾತ್ರದಲ್ಲೇ ನೆಡೆದು ಹೋಯಿತು ಹಾಗೆ ಉಸಿರು ನಿಂತಿತ್ತು!!

ಅಣ್ಣನ ಕೂಗಾಟ ಕೇಳಿ ತಂಗಿಗೆ ಏನು ಮಾಡುದೆಂದು ಗೊತ್ತಾಗದೆ ಮರಳಿ ಮನೆಗೆ ಓಡೋಡಿ ಬಂದು ಮನೆಯವರಿಗೆ ವಿಷಯ ತಿಳಿಸಿದಳು. ಸುಮಾರು ಅರ್ಧ ಗಂಟೆಯ ಸಮಯದಲ್ಲಿ ಸರಿಸುಮಾರು ಐವತ್ತು ಜನ ಸೇರಿದ್ದರು. ಹಾಗೇ ಬಂದವರೆಲ್ಲ ಕೆರೆಗೆ ಧುಮುಕಿನ ಸೀತಾರಾಮನ ಹುಡುಕುವ ಪ್ರಯತ್ನ ಮಾಡಿದರು. ಕೊನೆಗೆ ಯಾರೋ ಹಾಗೆ ಮುಂದೆ ಹೋಗಿ ಹುಡುಕಿದಾಗ ನಿಸ್ತೇಜವಾಗಿ ಬಿದ್ದಿದ್ದ ಸೀತಾರಾಮನ ಎತ್ತಿಕೊಂಡು ಮನೆಗೆ ಬಂದು ಹಾಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಪ್ರಾಥಮಿಕ ಪರೀಕ್ಷೆ ನೆಡೆಸಿದ ವೈದ್ಯರಿಗೆ ದೇಹದ ಮೇಲೆ ಯಾವುದೇ ಗಾಯದ ಗುರುತು ಕಾಣದೆ ಯಾವುದೇ ವಿಷಜಂತು ಕಡಿದಿರಬಹುದೆಂದು ಭಾವಿಸಿದರು. ಆದರೆ ಕೊನೆಗೆ ಬಲಗಾಲಿನ ಹಿಂಬಾಗ ಪಾದದ ಬಳಿ ಕಪ್ಪನೆ ಸುಟ್ಟ ಗಾಯದ ಗುರುತು ನೊಡಿದ ವೈದ್ಯರು, ಇದು ವಿದ್ಯುತ್ ಶಾಕ್ ನಿಂದ ಆದ ದುರಂತ ಅಂತ ರಿಪೋರ್ಟ್ ಕೊಟ್ಟರು.

ನಿಜವಾಗಿ ಆದದ್ದೇನೆಂದರೆ, ಆ ಗದ್ದೆಯ ಮಾಲೀಕ ಗದ್ದೆಗೆ ಬರುವ ಕಾಡುಹಂದಿಯ ಬೇಟೆಗೆ ಗದ್ದೆಯ ಸುತ್ತ ಒಂದುವರೆ ಅಡಿಯ ಗೂಟ ಹುಗಿದು ಅದಕ್ಕೆ ತಂತಿ ಎಳೆದು ಮೇಲೆ ಹಾದುಹೋದ ವಿದ್ಯುತ್ ಲೈನ್ ಗೆ ಕನೆಕ್ಷನ್ ಮಾಡಿದ್ದ. ಇದರ ಬಗ್ಗೆ ಅರಿವಿರದ ಸೀತಾರಾಮ ನೆರವಾಗಿ ಗದ್ದೆ ಕಾಲಿಟ್ಟಿದ್ದರಿಂದ ಈ ಅನಾಹುತ ಸಂಭವಿಸಿತು.

ಯಾರೋ ಮಾಡಿದ ಸಣ್ಣ ಪ್ರಮಾದ ಒಂದು ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಯಿತು. ತಂದೆ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡರು, ಪತ್ನಿ ಸಣ್ಣ ವಯಸ್ಸಿನಲ್ಲಿಯೇ ವಿದವೆ ಪಟ್ಟ ದಕ್ಕಿತು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಬುದ್ಧಿ ಬೆಳೆಯುವ ಮುಂಚೆನೇ ತಂದೆಯನ್ನು ಕಳೆದುಕೊಂಡು ಅನಾಥರಾದರು.!

-ಪ್ರವೀಣ್ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *