ಲೇಖನ

ಹೊಸವರ್ಷದ ಮಾರನೇ ದಿನ!: ಫ್ಲಾಪೀಬಾಯ್


ನೆನ್ನೆ ಸಾಯಂಕಾಲ ಫ್ರೆಂಡ್ ಕ್ರಾಕ್ ಬಾಯ್ ಫೋನ್ ಮಾಡಿದ್ದ. 
ಫ್ಲಾಪೀ ಇವತ್ತು ಹೇಗಿದ್ರೂ ವರ್ಷದ ಕೊನೆ ದಿನ. ರಾತ್ರಿ ಹನ್ನೊಂದು ಇಪ್ಪತ್ತಕ್ಕೆಲ್ಲಾ ನಮ್ಮ ಅಡ್ಡದ ಹತ್ರ ಬಂದು ಬಿಡು. ಎಲ್ಲಾ ಹುಡ್ರೂ ಬರ್‍ತಾ ಇದಾರೆ. ಫುಲ್ಲು ಕುಡಿದು, ಕುಣಿದು ಕ್ರಾಂತಿ ಮಾಡೋಣ. ಹೊಸ ವರ್ಷದಲ್ಲಿ ಭಾರೀ ಬದಲಾವಣೆ ತರೋಣ. ೨೦೧೪ರ ನ್ಯೂ ಇಯರ್ ಸೆಲಬ್ರೇಷನ್ ಗ್ರಾಂಡ್ ಆಗಿ ಮಾಡೋಣ. ಖರ್ಚು ಎಷ್ಟಾದ್ರೂ ಪರವಾಗಿಲ್ಲ. ಪಾರ್ಟಿ ಎಲ್ಲಾ ನಂದೆ, ಲೇಟ್ ಮಾಡದೇ ಬೇಗ ಬಾ ಅಂತ ಹೇಳೀ ನನ್ನ ರೀಪ್ಲೈಗೂ ಕಾಯದೆ ಫೋನಿಟ್ಟ.

ನನಗೋ ಹೋಗಕ್ಕೆ ಮನಸಿಲ್ಲ. ಹೋಗದೇ ಇದ್ರೆ ಫ್ರೆಂಡ್ಸ್ ಬಯ್ಕೋತಾರೆ. ಏನ್ ಮಾಡದು ಅಂತಾ ತಲೆ ಕೆರ್‍ಕೊಳೋದ್ರೊಳಗೆ ಹನ್ನೊಂದು ಮೂವತ್ತು ಆಗೋಗಿತ್ತು. ಯಾಕೋ ಮನದೊಳಗಿದ್ದ ನಾಗವಲ್ಲಿ ತರದ ಡ್ಯೂಯಲ್ ಮೈಂಡು ಹೋಗಬೇಡ ಕಣೋ ಫ್ಲಾಪೀ ಬಾಯ್ ಅಂತ ಹೇಳ್ತಾ ಇತ್ತು..! 
ಏನೋ ಅಕೇಶನ್ನು, ವರ್ಷಕ್ಕೊಮ್ಮೆ ಮಾತ್ರ ಬರೋದು. ಟೈಟ್ ಆಗಿ ಕುಡಿಯೋಣ, ಲೈಟ್ ಆಗಿ ಕುಣಿಯೋಣ. ಇರೋ ಬರೋ ಹುಡುಗ್ರು- ಹುಡುಗೀರು ಎಲ್ಲಾರ್ನೂ ಸಮಾನ ರೀತಿಲಿ ತಬ್ಕಂಡು, ವಿಷ್ ಮಾಡಿ ಈ ಜೀವನಾನ ಪಾವನ ಮಾಡ್ಕೊಂಡು ಬರೋಣ ಅಂದ್ಕೊಂಡೆ..!

 ಅಷ್ಟರಲ್ಲಿ ಅಶರೀರವಾಣಿಯೊಂದು ಕಿವೀಲಿ ನಿಂತು, ಲೋ ನೀನು ಜವಾಬುದಾರಿಯುತ ನಾಗರಿಕ ಆಗೋ, ಬೇರೆಯವರ ಚಿಂತೆ ನಿನಗ್ಯಾಕೆ? ಎಲ್ಲೂ ಹೋಗಬೇಡ ನೀನು, ಸ್ವಾರ್ಥಿ ಆಗು. ಪಕ್ಕದ ಮನೇಲಿ ಬೆಂಕಿ ಬಿದ್ರೆ ಕಿಟಕಿಯಲ್ಲಿ ನಿಂತು ನೋಡು.., ಅದೇ ಬೆಂಕಿ ನಿಮ್ಮ ಮನೇಗೆ ಬಿದ್ರೆ ಬಾಯಿ ಬಾಯಿ ಬಡ್ಕೊಂಡು ಅಳು., ಯಾರೂ ಸಹಾಯಕ್ಕೆ ಬಂದಿಲ್ಲ ಅಂತ ದೂರು ಕೊಡು! ಕೆಲಸಕ್ಕೆ ಬಾರದ ವ್ಯರ್ಥ ಮಾತುಕತೆ ಆಡಿಕೊಂಡು ಕಾಲ ಕಳಿ, ಪೊಲಿಟಿಕಲ್‌ನವರಿಗೆ ಬೈಯ್ಯಿ, ಸೋಮಾರಿ ಆಗಿ ಬಿದ್ಕೊ, ಹಣಕ್ಕಾಗಿ ಯಾರದಾದ್ರೂ ತಲೆ ಮೇಲೆ ಕೈಯಿಡು. ನೀನು ಉದ್ಧಾರ ಆಗ್ಬೇಡಾ, ಬೇರೆಯವರು ಬೆಳಿತಿದ್ರೆ ಸುಮ್ನೇ ಇರಬೇಡ, ಅವರ ಕಾಲು ಎಳಿ. ಇದೇ ನಿನ್ನ ಹೊಸವರ್ಷದ ಅಜೆಂಡಾ ಆಗಿರಲಿ. ಎಲ್ರೂ ಹೇಗಿದಾರೋ, ನೀನೂ ಹಾಗೆ ಬದುಕೋದ ಕಲಿ, ಏನೂ ಬದಲಾವಣೆ ಮಾಡೋಕೆ ಹೋಗಬೇಡ ಅಂತ ಹೇಳಿ ತಲೆ ಮೇಲೆ ಕುಟ್ಟಿ ಮಲಗಿಸಿ ಬಿಡ್ತು..!

ಕಣ್ಣು ಬಿಟ್ಟಾಗ ಬೆಳಿಗ್ಗೆ ಆಗೋಗಿತ್ತು… ’ಓ ಮೈ ಗ್ವಾಡ್’ ಅಂತಾ ಸೀದಾ ಬಾಗಿಲು ತೆರೆದು ಹೊರಗೆ ಹೋಗಿ ಆಕಾಶ ನೋಡಿದೆ. ಏನೂ ವ್ಯತ್ಯಾಸ ಕಾಣಿಸಲಿಲ್ಲ. ಹಕ್ಕಿಗಳ ಚಿಲಿಪಿಲಿ ಶಬ್ದದಲ್ಲೂ ಬದಲಾವಣೆ ಇರಲಿಲ್ಲ. ಮನೆ ಪಕ್ಕದ ದೇವಸ್ಥಾನದಲ್ಲಿ ಜನಗಳು ಇದ್ರೂ, ದೇವಸ್ಥಾನದ ಎದುರುಗಡೆ ಹೂ ಮಾರ್‍ತಾ ಇದ್ದ ಭಾನಮ್ಮಜ್ಜಿಯ ಮಕದಲ್ಲಿ ಕೂಡ ಬದಲಾವಣೆ ಆದಂಗಿಲ್ಲ. ತುಂಬಾನೇ ಬೇಜಾರಾಯ್ತು ನಮ್ ಹುಡುಗರ ಮೇಲೆ..! ಕ್ರಾಂತಿ ಮಾಡಿ ಬದಲಾವಣೆ ತರ್ತಿವಿ ಅಂತ ಹೇಳಿ ಏನೂ ಮಾಡಿಲ್ಲಾ ಅನ್ನೋ ಕೋಪ ಬೇರೆ ಬಂತು. ಅಲ್ಲೆ ಮಲಗಿದ್ದ ನಾಯಿಗೆ ಕಲ್ಲು ಹೊಡೆದೆ. ಅದು ಕೂಡಾ ಕಚ್ಚೋಕೆ ಬಂದಿಲ್ಲ. ಕುಯ್ ಕುಯ್ ಅಂತಾ ಎಲ್ಲೋ ಓಡೋತು.

ಛೆ..! ಇದು ಕೂಡಾ ಮಾಮೂಲಿ ದಿನ. ಏನೂ ಬದಲಾವಣೆ ಆಗ್ಲಿಲ್ಲ. ಪವಾಡನೂ ನಡಿಲಿಲ್ಲ. ಯಾಕೋ ಈ ಜಿಂದಗಿನೇ ಮಜಾ ಇಲ್ಲಾ. ನಾನಾದರೂ ಬದಲಾಗೋಣ ಅಂದ್ರೆ ಹೇಗೆ? ಅನ್ನೋ ಪ್ರಶ್ನೆ ಭೂತರೂಪದಲ್ಲಿ ಬೆಳೆಯತೊಡಗಿತು…

ಯಾಕೊ ಮನಸಿಗೆ ಒಂತರಾ ಅನುಭವ. ಸುಮ್ನೆ ಮನೆ ಒಳಗೆ ಬಂದು. ಸೋಫಾದ ಮೇಲೆ ಕುಂತೆ. ಅಲ್ಲೇ ಎದುರಿಗೆ ಗೋಡೆ ಮೇಲಿದ್ದ ಹೊಸ ಕ್ಯಾಲೆಂಡರ್ ಯಾಕೋ ನನ್ನ ಅಣಕಿಸಿದಂತಾಯ್ತು. ನಾನು ಬದಲಾಗಿದಿನೋ ಅಂತಾ ಬೊಬ್ಬಿರಿಯುತ್ತಿದ್ದಂತೆ ಭಾಸವಾಯ್ತು.. ಏನೋ ಹೊಳೆದಂತಾಗಿ ಹಳೆ ಕ್ಯಾಲೆಂಡರ್ ಎಲ್ಲೊಯ್ತು ಅಂತ ಹುಡುಕ ಹತ್ತಿದೆ. 
ಅಷ್ಟರಲ್ಲಿ ನಮ್ಮಜ್ಜಿ ಮಗಾ ಹೊರಗೆ ತುಂಬಾ ಚಳಿ ಇದೆ. ಬಿಸಿ ಬಿಸಿ ನೀರು ಕಾದಿದೆ. ಬೇಗ ಸ್ನಾನ ಮಾಡು ಅಂತ ಹೇಳ್ತಾ ಇದ್ದದ್ದು ಕೇಳಿಸಿ ಅತ್ತ ತಿರುಗಿದೆ.

ಅವರ ಕೈಲಿ ಅರ್ಧ ಹರಿದ ಕ್ಯಾಲೆಂಡರ್ ಇತ್ತು.. ಇನ್ನರ್ಧ ನನ್ನ ಸ್ನಾನದ ಬಿಸಿ ನೀರಿಗೆ ಒಲೆಯಲ್ಲಿ ಸುಡ್ತಾ ಇತ್ತು.

 

  *****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *