ಹೊಟ್ಟೆ ಪಾಡು !!: ಸಂತೋಷ್ ಗುರುರಾಜ್

ಸುಮಾರು ವರ್ಷಗಳಿಂದಲೂ, ಎಂದರೆ ಭಾರತಕ್ಕೆ ಸ್ವತಂತ್ರ ಪೂರ್ವದಿಂದಲೂ ಮತ್ತು ಸ್ವತಂತ್ರ ಬಂದ ಮೇಲೆಯೂ ಸಹ ಆಗಿನ ಬಹುತೇಕ ಜನರು ತಮ್ಮ ಹೊಟ್ಟೆ ಪಾಡಿಗಾಗಿ ಪರೆದಾಡುವ ಪರಿಸ್ಥಿತಿ ಇತ್ತು ಎಂದು ನಾವು ಓದಿದ ಅಥವಾ ಕೇಳಿದ ಚರಿತ್ರೆ ಇಂದ ತಿಳಿಯುತ್ತದೆ. ಆದರೆ ಇಂದಿನ ಹೊಟ್ಟೆ ಪಾಡಿಗೂ ಮತ್ತು ಅಂದಿನ ಹೊಟ್ಟೆ ಪಾಡಿಗೂ ಬಹಳಷ್ಟು ವ್ಯತ್ಯಾಸವಿದೆ. ಆಗಿನ ಕಾಲದಲ್ಲಿ ಜನ ತಮ್ಮ ಹೊಟ್ಟೆಗೆ ಎರಡು ಹೊತ್ತು ಗಂಜಿ ಸಿಕ್ಕರೆ ಸಾಕು ಎನ್ನುವ ಹೊಟ್ಟೆಪಾಡು ಆದರೆ ಈಗಿನ ಜನ ಹೊಟ್ಟೆಯ ಸುತ್ತು ಬಂದಿರುವ ಕೊಬ್ಬನ್ನು ಕರಗಿಸುವ ಹೊಟ್ಟೆಪಾಡು ನಮ್ಮದಾಗಿದೆ. ಒಂದು ವೇಳೆ ನನಗೆ ಅನ್ನಿಸುವ ಪ್ರಕಾರ ಅಂದಿನ ಹೊಟ್ಟೆಪಾಡು ಹೇಗೋ ತಡೆಯಬಹುದಿತ್ತು ಆದರೆ ಈಗ ಬರುವ ಹೊಟ್ಟೆಪಾಡು ಒಮ್ಮೆ ಬಂತೆಂದರೆ ತಡೆಯುವುದು ಬಹಳ ಕಷ್ಟ.

ನಮ್ಮ ಅಜ್ಜಿ ಹೇಳುತ್ತಿದ್ದ ಒಂದು ವಿಷಯ ನನಗೆ ನೆನಪಾಗುತ್ತಿದೆ. ಆಗಿನ ಪೀಳಿಗೆಯ ಜನ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ದೈನಂದಿನ ಕಾರ್ಯ ಮುಗಿದ ತಕ್ಷಣ ಒಂದು ಅಥವಾ ಎರಡು ಮುದ್ದೆ ತಿಂದು ಕೆಲಸಕ್ಕೆ ಹೊರಟರೆ ಮತ್ತೆ ಸಂಜೆಗೆ ಅವರ ಊಟದ ಮಾತು. ಅವರು ೫೦ ರಿಂದ ೭೦ ಕೆ ಜಿ ತೂಕವುಳ್ಳ ಎಂತಹ ಮೂಟೆಯನ್ನು ಬೇಕಾದರೆ ಹೊತ್ತು ತರುತ್ತಿದ್ದರು. ಆದರೆ ಈಗಿನ ನಾವುಗಳು ಏಳುವುದೇ ಹೆಚ್ಚು ಕಮ್ಮಿ ೯ ಗಂಟೆಯ ಮೇಲೆ. ಕಾಲೇಜಿನಲ್ಲಿ ಓದುತ್ತಿರುವಷ್ಟು ದಿನ  ಹೊಟ್ಟೆ ಚಿಂತೆ ಅಷ್ಟೊಂದು ಇರುವುದಿಲ್ಲ, ಒಮ್ಮೆ ಕಾಲೇಜು ಬಿಟ್ಟು ಹೊರಬಂದು ಕೆಲಸಕ್ಕೆ ಸೇರಿದರೆ ಮುಗಿತು ನೋಡಿ ನಮ್ಮ ಹೊಟ್ಟೆ ಪಾಡಿನ ಒದ್ದಾಟ. ಕೆಲ ತಿಂಗಳುಗಳಲ್ಲೇ ಸ್ವಲ್ಪ ಸ್ವಲ್ಪ ಹೊಟ್ಟೆಯ ತಳಬಾಗ ದಪ್ಪ ಆಗಲು ಶುರುವಾಗುತ್ತದೆ. ಆಗ ಯಾರಾದರು ಗೆಳೆಯರು ನಮಗೆ ರೇಗಿಸಿದಾಗ ಮನಸ್ಸಿನಲ್ಲಿ ಡಿಸೈಡ್ ಮಾಡಿಕೊಳ್ಳುತ್ತೇವೆ, "ನಾಳೆ ಇಂದ ಜಿಮ್ ಗೆ  ಅಥವಾ ಜಾಗಿಂಗ್ ಹೋಗೋಣ ಎಂದು". ಆದರೆ ಅದು ಅಷ್ಟು ಸುಲಭದ ಮಾತಲ್ಲ. ಅದೇನಿದ್ದರೂ ಒಂದೆರೆಡು ದಿನ ಅಷ್ಟೇ. 

ಹೀಗೆ ನೋಡು ನೋಡುತ್ತಿನ್ದಂತೆ ೨೮ ಇದ್ದ ಪ್ಯಾಂಟಿನ ಸುತ್ತಳತೆ ೩೦ಕ್ಕೆ ಬರುತ್ತದೆ. ಅದನ್ನು ನೋಡಿ ಮತ್ತೆ ಅದೇ ಹಳೆಯ ಜಿಮ್ ಮತ್ತು ಜಾಗಿಂಗ್ ಪ್ರಯತ್ನ ಅದು ಸ್ವಲ್ಪ ದಿನ. ಅಂತು ಇಂತೂ ಅದೆಷ್ಟೇ ಪ್ರಯತ್ನಿಸಿದರೂ ಉಬ್ಬುವ ಹೊಟ್ಟೆಯನ್ನು ಕಡಿಮೆ ಮಾಡುವುದು ಕಷ್ಟ ಆಗುತ್ತದೆ. ಹಾಗೋ ಹೀಗೂ ಒಂದೆರೆಡು ವರ್ಷ ಕಳೆಯಿತೆಂದರೆ ಮನೆಯವರು ಮದುವೆ ಮಾಡಿ ಮುಗಿಸುತ್ತಾರೆ. ಅಲ್ಲಿಗೆ ನಮ್ಮ ಹೊಟ್ಟೆಯ ಸಿಕ್ಸ್ ಪ್ಯಾಕ್ ಕನಸು ಕನಸಾಗಿಯೇ ಉಳಿಯುತ್ತದೆ. ಈ ಹೊಟ್ಟೆ ಪಾಡಿಗೆ ಬೋನಸ್ ಬೇರೆ ಇದೆ.. ಅದೇನಂದರೆ ಬಿ ಪಿ,ಶುಗರ್ ಮತ್ತು ಹಾರ್ಟ್ ಅಟ್ಯಾಕ್. 

ನಮಗೆ  ತಿಳಿದಿರುವ ಪ್ರಕಾರ ನಮ್ಮ ತಾತನ ಕಾಲದ ಜನ ಬಡವರಾಗಿದ್ದರು. ಆದರೆ ತಿನ್ನುವುದು ಎರಡು ಹೊತ್ತು ಊಟವಾದರೂ ಅದು ಪೌಷ್ಟಿಕ ಆಹಾರವಾಗಿತ್ತು, ಯಾವುದೇ ಕಲಬೆರಿಕೆ ಇರುತ್ತಿರಲಿಲ್ಲ. ಮತ್ತು ಬೆಳಿಗ್ಗೆ ಇಂದ ಸಂಜೆಯವರೆಗೆ ಪ್ರತಿಯೊಂದು ಸ್ನಾಯುವಿಗೂ ದುಡಿಮೆ ಇತ್ತು, ವಾರಕ್ಕೋ ೧೫ ದಿನಕ್ಕೂ ಒಮ್ಮೆ ದೇವರ ಹೆಸರಲ್ಲಿ ಪೂರ್ಣ ಉಪವಾಸ. ಹೀಗಾಗಿ ಅವರಿಗೆ ಆರೋಗ್ಯ ಸದೃಡವಾಗಿತ್ತು. ಹಾಗು ಅವರು ಬೆಳೆಯುತ್ತಿದ್ದ ಬೆಳೆಗಳಿಗೆ ನೈಜಗೊಬ್ಬರದ ಸಿಂಪಡಿಕೆ ಇತ್ತು. ಅದೇ ಈಗಿನ ಬೆಳೆಗಳಿಗೆ ಎಲ್ಲವೂ ಕೆಮಿಕಲ್ ಮಿಶ್ರಿತ ಗೊಬ್ಬರಗಳು, ಎಲ್ಲಾ ಆಹಾರ ಪದಾರ್ಥಗಳಿಗೂ ಕಲಬೆರಿಕೆ. ಆದರೆ ಜೊತೆ ವಿದೇಶಿ ಆಹಾರಗಳೂ ನಮ್ಮ ಹೊಟ್ಟೆ ಪಾಡಿಗೆ ಕಾರಣವಾಗಿವೆ. ಆ ತಿಂಡಿಗಳ ಟೇಸ್ಟ್ ಒಮ್ಮೆ ನೋಡಿದರೆ ಯಾವ ಹೊಟ್ಟೆ ಬಂದರೂ ತಿನ್ನೋಣ ಎನ್ನುವ ಆಸೆ.ಇನ್ನು ಈಗ ಮಾಡುವ ಉಪವಾಸ ಆ ದೇವರಿಗೆ ಪ್ರೀತಿ,ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಹಾಲು, ೯ ಗಂಟೆಗೆ ಸರಿಯಾಗಿ ಉಪಹಾರ, ಮತ್ತೆ ಮದ್ಯಾನ ೨ ಅಥವಾ ೩ ಬಾಳೇಹಣ್ಣು ಮತ್ತೆ ರಾತ್ರಿ ಮಲಗುವ ಮುನ್ನ ಒಂದು ಪ್ಲೇಟ್ ಅವಲಕ್ಕಿ. ಹೀಗಿರುವಾಗ ಹೊಟ್ಟೆ ಪಾಡಿಗೆ ನಿಯಂತ್ರಣ ಹೇಗೆ ?? ಎನ್ನುವುದೇ ನನ್ನ ಪ್ರಶ್ನೆ. 

ಓದಲು ತಮಾಷೆ ಎನಿಸಬಹುದು ಆದರೆ ಶೇಕಡ ೪೦% ಜನ ಈ ಹೊಟ್ಟೆ ಪಾಡಿಗಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಒಂದಂತೂ ಸತ್ಯ, ಈ ಹೊಟ್ಟೆ ಉಬ್ಬುತ್ತಲೇ ಎಲ್ಲಾ ತರಹದ ಕಾಯಿಲೆಗಳಿಗೂ ಜಾಗ ಮಾಡಿಕೊಡುತ್ತದೆ, ಹೀಗಾಗಿ "ಮನಸ್ಸಿದ್ದರೆ ಮಾರ್ಗ ಉಂಟು "ಎಂದು ಹಠ ತೊಟ್ಟು ಈ ಹೊಟ್ಟೆಪಾಡನ್ನು ಹೇಗಾದರೂ ಮಾಡಿ ಸರಿಮಾಡಿಕೊಳ್ಳಬೇಕು ಅಷ್ಟೇ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x