ಹೊಟ್ಟೆ ತುಂಬಾ ನಗು ಕಣ್ಣ ತುಂಬಾ ನೀರು ಉಕ್ಕಿಸಿದ ನಾಟಕ ಕಿಲಾಡಿ ರಂಗಣ್ಣ: ಹಿಪ್ಪರಗಿ ಸಿದ್ಧರಾಮ

ನವರಸಗಳಿಂದಾದ ಕಲಾರಂಗವು ಜನಸಮುದಾಯದ ಸಮಸ್ಯೆಗಳನ್ನು ವಿವಿಧ ಕಾನ್ವಾಸಗಳ ಮೂಲಕ ಹೊರಹೊಮ್ಮಿಸುತ್ತಾ ಸಮಕಾಲೀನ ಸಮಸ್ಯೆಗಳನ್ನು ಎತ್ತಿ ತೋರಿಸಿ ಜಾಗೃತಿಯ ನಿನಾದವನ್ನು ನಿರಂತರವಾಗಿಸುವ ಶಕ್ತಿ ಹೊಂದಿದೆ. ಇಂತಹ ಪ್ರಖರ ಶಕ್ತಿಯನ್ನು ಹೊಂದಿರುವ ಕಪಾಪ್ರಕಾರಗಳಲ್ಲಿ ಒಂದಾದ ರಂಗಭೂಮಿಯು ಶತಮಾನದಿಂದಲೂ ಇಂಥಹ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಾ ಕೆಲವೊಂದು ಬಗೆಹರಿಸಲಾಗದ ಸಮಸ್ಯೆಗಳನ್ನು ನವರಸಗಳಲ್ಲಿಯೇ ಹೆಚ್ಚು ಇಷ್ಟವಾಗುವ ಹಾಸ್ಯರಸದ ಮೂಲಕ ಹೇಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಹಲವಾರು ನಾಟಕಕಾರರು ಆಗಾಗ ಪ್ರಯತ್ನ-ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಯಾಕಂದರೆ ರಂಗಭೂಮಿಯೆಂಬುದು ನಾಗರಿಕ ಚಿಕಿತ್ಸಕ ಶಕ್ತಿಯೊಂದಿಗೆ ಅನುದಿನವೂ ನಿತ್ಯನಿರಂತರ ಪ್ರವಹಿಸುವ ಜಲಧಾರೆಯಿದ್ದಂತೆ. 

ಇಂಥಹ ಹಾಸ್ಯರಸದ ಜಲಧಾರೆಯನ್ನು ಇತ್ತೀಚೆಗೆ (29-09-2015) ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಚಯದ ಸಭಾಭವನದಲ್ಲಿ ಹುಬ್ಬಳ್ಳಿಯ ಕನ್ನಡ ಕಲಾ ಸೇವಾ ಸಂಘದ ಕಲಾವಿದರು ಪ್ರದರ್ಶನ ಮಾಡಿದ ದಿ.ಪುಂಡಲಿಕ ದುತ್ತರಗಿಯವರ ಕಿಲಾಡಿ ರಂಗಣ್ಣ ಅರ್ಥಾತ್ ಮಲಮಗಳು ನಾಟಕವನ್ನು ಕು.ಅನಿತಾ ಶೆಟ್ಟಿ ನಿರ್ದೇಶನದೊಂದಿಗೆ ಭಾರತಿ ಪ್ರಕಾಶ ಡಾವಣಗೆರೆ ನೇತೃತ್ವದಲ್ಲಿ ಅಭಿನಯಿಸುವ ಮೂಲಕ ಹರಿಸಿದರು. ಈ ನಾಟಕದ ವೈಶಿಷ್ಟ್ಯವೆಂದರೆ ನಾನು ಚಿಕ್ಕವನಿದ್ದಾಗ ಮನೆಯಲ್ಲಿ ಅಣ್ಣ ತಂದಿದ್ದ ಕ್ಯಾಸೆಟ್ಟಿನಲ್ಲಿ ಕೇಳಿದ್ದೆ. ನಂತರ ಬೆಂಗಳೂರಿನ ವಿಜಯನಗರದಲ್ಲೊಮ್ಮೆ ವೇದಿಕೆಯಲ್ಲಿ ಹಿರಿಯ ಕಲಾವಿದ ದಿವಂಗತ ದೀರೆಂದ್ರಗೋಪಾಲರ ಕಂಚಿನ ಕಂಠದ ಅಭಿನಯದಲ್ಲಿ ನೋಡಿದ ನಂತರ ಆಗಾಗ ವೃತ್ತಿಕಂಪನಿಯ ರಂಗದಲ್ಲಿ ಹಲವಾರು ಸಲ ನೋಡಿ ಆನಂದಿಸಿದ್ದೆ. ಈಗ ಮತ್ತೊಮ್ಮೆ ಹಿರಿಯ ಮಹಿಳಾ ಕಲಾವಿದೆಯರು ಅಭಿನಯಿಸಿದ ಈ ಪ್ರಯೋಗ ನೋಡಿದ ನನಗೆ ರೋಮಾಂಚನವಾಯಿತು. ಹೀಗೆ ನನ್ನಂಥವನು ಸಮಯ ಸಿಕ್ಕಾಗ ನೋಡುವ ಮತ್ತು ನೋಡಿಸಿಕೊಳ್ಳುವ ಸರ್ವಕಾಲಿಕ ಸಮಸ್ಯೆಯ ಈ ನಾಟಕವನ್ನು ಮತ್ತೊಮ್ಮೆ ನೋಡಲು ಸಿಕ್ಕಿದ್ದು ಹುಬ್ಬಳ್ಳಿಯ ರಿದಂ ಪ್ಯಾಡ್ ಮಾಸ್ತರ ಪ್ರಕಾಶ ಡಾವಣಗೆರೆಯವರ ಪೋನ್‍ಕಾಲ್ ಮೂಲಕ. 

‘ಸಂಪತ್ತಿಗೆ ಸವಾಲು’ ನಾಟಕ ಬರೆಯುವ ಮೂಲಕ ರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ದಿವಂಗತ ಪುಂಡಲೀಕ ದುತ್ತರಗಿಯವರು ಆಗಿನ ಕಾಲದ ವೃತ್ತಿರಂಗಭೂಮಿಯಲ್ಲಿ ಗಂಭೀರ ಶೈಲಿಯ ದೃಶ್ಯಾವಳಿಗಳ ನಡುವೆ ಹಾಸ್ಯ ದೃಶ್ಯಾವಳಿಗಳನ್ನು ಜೋಡಿಸುತ್ತಾ ನಾಟಕದ ಕೊನೆಯಲ್ಲಿ ಎಲ್ಲರೂ ಒಂದಾಗುವಂಥ ಜನಪ್ರಿಯ ನಾಟಕದ ಸಿದ್ಧಸೂತ್ರವನ್ನು ಮುರಿದು ಇಡೀ ಕಥೆಯನ್ನು ಹಾಸ್ಯ ಹೊಳೆಯಲ್ಲಿ ಹಿಡಿದು ನಿಲ್ಲಿಸಿದ ಬಹುಮುಖ್ಯ ನಾಟಕಕಾರಾಗಿ ಹೊರಹೊಮ್ಮಿದವರು. ಈ ಸಂದರ್ಭದಲ್ಲಿ ಕೆ.ಎನ್.ಸಾಳುಂಕೆ, ಮಹಾಂತೇಶ ಶಾಸ್ತ್ರೀಗಳು ಈ ಪರಂಪರೆಯಲ್ಲಿ ನೆನಪಾಗುತ್ತಾರೆ. 

ಮೂರು ಗಂಟೆ ಕಾಲಾವಧಿಯ ನಾಟಕವನ್ನು ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆಯರು ಪಾತ್ರೋಚಿತವಾಗಿ ನಗಿಸುತ್ತಾ ಅಭಿನಯಿಸಿದರು. ಕೆಲವೆಡೆ ಅನಿವಾರ್ಯವಾಗಿ ದ್ವಂದ್ವಾರ್ಥ ಸಂಭಾಷಣೆಗಳನ್ನು ಹೇಳಿದಾಗಲೂ ಪ್ರೇಕ್ಷಕರು ಬಾಯಿ ಚಪ್ಪರಿಸಿ ಆಸ್ವಾದಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ನಡೆದ ಈ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿದ ಬಹುತೇಕ ನಟನಟಿಯರು ವಯಸ್ಸಾದವರಿದ್ದರೂ ಅವರ ಅಭಿನಯದಲ್ಲಿ ಎಲ್ಲಿಯೂ ತೋರಿಸಿಕೊಳ್ಳದ ಮಾಗಿದ ಅಭಿನಯ ನೀಡಿದರು. ಯಾವುದೇ ಸೆಟ್ಟು-ಪ್ರಾಪರ್ಟಿಸ್-ಬೆಳಕು ಮುಂತಾದವುಗಳ ಹಂಗಿಲ್ಲದೇ ಸರಳ ಸುಂದರ ರಂಗಸಜ್ಜಿಕೆಯಲ್ಲಿ ಅಭಿನಯಿಸಿ ಹೀಗೂ ಪ್ರಯೋಗಿಸಬಹುದು ಎಂದು ವಿವರಿಸಿದಂತಿತ್ತು.

ನಾಟಕದ ಹೆಸರು ಹೇಳುವಂತೆ ಶ್ರೀಮಂತ ಲಂಪಟ ಮುದುಕ ಕಿಲಾಡಿ ರಂಗಣ್ಣನು ಸಾಲ ಮರಳಿ ನೀಡಿಲಾಗದ ಅಸಹಾಯಕ ಬಡ ಕುಟುಂಬದ ದೌರ್ಭಲ್ಯವನ್ನು ದುರ್ಬಳಕೆ ಮಾಡಿಕೊಳ್ಳುವುದು, ಮುದುಕನಿಗೆ ಮಲಮಗಳನ್ನು ಮದುವೆ ಮಾಡಿಕೊಡುವುದು. ಇಲ್ಲಿ ಮುದುಕ ಕಿಲಾಡಿ ರಂಗಣ್ಣನಿಗೆ ಎಲ್ಲರೂ ಸೇರಿ ಬುದ್ಧಿ ಕಲಿಸುವುದರ ಜೊತೆಗೆ ಎರಡನೇ ಮದುವೆಯಾಗಿ ಸಂಕಟ ಅನುಭವಿಸುವ ತಂದೆ ಜೊತೆಗೆ ಮಲಮಗಳನ್ನು ಕಾಡುವ ತಾಯಿ, ಅವಳಿಗೊಬ್ಬಳು ಮುದ್ದಾದ ಮಗಳು ಇದ್ದಾಳೆ. ಇಲ್ಲಿರುವ ಎಲ್ಲಾ ಪಾತ್ರಗಳು ಒಳ್ಳೆಯವರಲ್ಲ ಮತ್ತು ಕೆಟ್ಟವರಲ್ಲ ಪರಿಸ್ಥಿತಿಯ ಕೈಗೊಂಬೆಗಳು. ಇಂಥಹ ಸಾಮಾಜಿಕ ಸಂದೇಶ ನೀಡುವ ಕತೆಯ ನಾಟಕವನ್ನು ಈಗಾಗಲೇ ನಾಡಿನಾದ್ಯಂತ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಹಲವಾರು ಪ್ರಯೋಗಗಳಾಗಿವೆ. ಇತ್ತೀಚೆಗೆ ಧಾರವಾಡ ರಂಗಾಯಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕಲಾವಿದರಿಗೆ ಇದೊಂದು ರಂಗಪ್ರಾತ್ಯಕ್ಷಿಕೆಯ ಮಾದರಿಯಂತಿತ್ತು. 

*****
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x