ಲೇಖನ ಬರೆದರೆ ರುಚಿಕಟ್ಟಾಗಿರಬೇಕು, ಓದುಗರಿಗೆ ರುಚಿಸಬೇಕು. ಸಾಹಿತ್ಯದಲ್ಲಿ ರಸಕವಳ ಇರಬೇಕು, ಅದರಲ್ಲಿ ಮಸಾಲೆಯೂ ಇರಬೇಕು ಎಂತೆಲ್ಲಾ ನಮ್ಮ ಹಿರಿಯ ಸಾಹಿತಿಯೊಬ್ಬರು ಉಪದೇಶಿಸಿದ್ದರಿಂದ ಈ ನನ್ನ ಲೇಖನವು ಊಟದ ಬಗ್ಗೆ, ಅದರಲ್ಲಿಯೂ ವಿಶೇಷ ಭೂರಿಭೋಜನದ ವಿಷಯವನ್ನೊಳಗೊಂಡಿದೆ. ನೀವೆಲ್ಲಾ ಬಾಯಿಯಲ್ಲಿ ನೀರು ಬರಿಸಿಕೊಳ್ಳುತ್ತಾ ಇದನ್ನು ಓದುತ್ತೀರಿ, ಖಾದ್ಯಾದಿಗಳ ರುಚಿಯನ್ನು ಕಲ್ಪಿಸಿಕೊಳ್ಳುತ್ತಾ ಒಣ ತೇಗಿಗೆ ಪಕ್ಕಾಗುತ್ತೀರಿ ಎಂದುಕೊಂಡಿದ್ದೇನೆ.
ಬನ್ನಿ, ಉಡುಪಿಯ ಬ್ರಾಹ್ಮಣರ ವಿವಾಹದ ಸಮಾರಂಭಕ್ಕೆ ನುಗ್ಗೋಣ. ಓ.. ಆಗಲೇ ಎಲೆ ಹಾಕಿಬಿಟ್ಟಿದ್ದಾರೆ. ಬನ್ನಿ, ಕುಳಿತುಕೊಳ್ಳೋಣ. ನೋಡಿ, ಓ ಅಲ್ಲಿ, ನೆಲದ ಮೇಲೆ ಎಲೆ ಹಾಕಿದ್ದಾರಲ್ಲ, ಅದು ವಿಪ್ರವರೇಣ್ಯರಿಗೆ. ಅಗ್ರಸ್ಥಾನದಲ್ಲಿ ಕುಳಿತ ಅವರಿಗೆ ಮೊದಲು ಬಡಿಸಿ, ಹಸ್ತೋದಕ ಕೊಟ್ಟ ನಂತರ ಹರ ಹರ ಮಹಾದೇವ ಎಂದು ಘೋಷಿಸುತ್ತಾರೆ. ಅದು ನೀವು ಎಲೆಗೆ ಕೈ ಹಾಕಬಹುದು ಎಂದು ಹೇಳುವ ವಿಧಾನ. ಇದರಿಂದ ಬಡಿಸುವಿಕೆ ಸುಲಭವಾಗುತ್ತದೆ.
ಬಡಿಸಲು ಇನ್ನೂ ಸಮಯವಿದೆಯಲ್ಲಾ ಎಂದು ನೀವು ಪರಿತಪಿಸುತ್ತಿರುವಾಗ ಅಡುಗೆ ಮನೆಯ ಕಡೆಯಿಂದ ಬಕೆಟುಗಳು ಹೊರಬಂದು ಸಾಲಾಗಿ ಕುಳಿತುಕೊಳ್ಳುತ್ತವೆ, ಅವುಗಳ ಪಕ್ಕ ಯುದ್ಧಕ್ಕೆ ಹೊರಡಲು ತಯಾರಾಗಿ ನಿಂತ ಸೈನಿಕರ ಹಾಗೆ ಬಡಿಸುವವರು ಸೊಂಟಕ್ಕೆ ಅಂಗವಸ್ತ್ರ ಸುತ್ತಿಕೊಂಡು, ಪಂಚೆಯನ್ನು ಮೇಲೆತ್ತಿಕೊಂಡು, ಮುಖದಲ್ಲಿ ದರಪರ ಬೆವರು ಸುರಿಸುತ್ತಾ ನಿಂತುಕೊಳ್ಳುತ್ತಾರೆ. ಸುತ್ತಲೂ ಹರಡಿರುವ ವಿವಿಧ ಸುವಾಸನೆಗಳಿಂದ ನಿಮ್ಮ ಹೊಟ್ಟೆಯಲ್ಲಿ ಇಲಿಗಳು ಓಡಾಡಿದಂತಾಗುತ್ತದೆ, ಅಯ್ಯೋ ದೇವರೇ, ಊಟಕ್ಕಿಕ್ಕಬಾರದೇ ಎಂದು ದಯಾರ್ದ ಭಾವದಿಂದ ಅವರತ್ತ ನೋಡುತ್ತೀರಿ. ’ಕ್ಯಾಪ್ಟನ್’ ಸ್ಟಾರ್ಟ್ ಎಂಬಂತೆ ಹಸಿರು ನಿಶಾನೆ ತೋರಿಸುತ್ತಲೇ ಬಕೆಟುಗಳ ಕ್ಯಾರವಾನ್ ಹೊರಡುತ್ತದೆ, ಸೌಟು-ಚಮಚಗಳ ಕೊಟ ಕೊಟ ಸದ್ದು ಹಿಂಬಾಲಿಸುತ್ತದೆ. ದುರ್ಬಲರಿಗೆ, ವೃದ್ಧರಿಗೆ ಭಾರ ಹೊರುವುದರಿಂದ ತುಸು ವಿನಾಯಿತಿ: ಅಂದರೆ ಅವರು ಉಪ್ಪು, ಉಪ್ಪಿನಕಾಯಿ, ತುಪ್ಪದ ಬಟ್ಟಲು, ಹಪ್ಪಳ-ಸಂಡಿಗೆಗಳನ್ನು ಬಡಿಸುತ್ತಾರೆ. ಅವರನ್ನು ’ನೀರಿಗೆ ಹಾಕುತ್ತಾರೆ.’
ನೀರಿಗೆ ಹಾಕುವುದೆಂಬ ಪದವನ್ನು ನೀರನ್ನು ಕೊಡುವವರಿಗೆ ಬಳಸಲಾಗುತ್ತದೆ. ’ಹ್ವಾಯ್, ಮುಳುಗಿ ಹೋಪುಕಾಗ,’ ಎಂದು ಯಾರೋ ಅನ್ನುತ್ತಾರೆ. ಹಳಸು ಜೋಕೇ ಆದರೂ ಕೆಲವರು ನಗುತ್ತಾರೆ.
ಮತ್ತೆ ನಮ್ಮ ಊಟದ ವಿಷಯಕ್ಕೆ ಬರೋಣ. ಆಡುಗೆಯ ವಿಷಯದಲ್ಲಿ ಉಡುಪಿಯವರು ಜಗದ್ವಿಖ್ಯಾತರು, ಜಗನ್ಮಾನ್ಯರು ಮತ್ತು ಜಗದ್ವ್ಯಾಪಿಗಳು. ಅವರು ನಳ-ಭೀಮರಿಂದ ಅನುಗ್ರಹಿತರು. ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರಿಂದ ಅಡುಗೆಗೆ ವಿಶಿಷ್ಟ ರುಚಿ ಬರುತ್ತದೆ. ಅದು ಯಾವುದೇ ಕೆಲಸವೇ ಆಗಿರಬಹುದು, ಅದನ್ನು ಪ್ರೀತಿಸಿದರೆ ಸದಾ ಸತ್ಫಲ ಸಿಗುತ್ತದೆ.
ವಿಶ್ವದ ಎಲ್ಲೆಡೆ ಉಡುಪಿ ಹೋಟೆಲುಗಳು ಹರಡಿವೆ, ಗಗನಂ ಗಗನಾಕಾರಂ, ಸಾಗರಃ ಸಾಗರೋಪಮಃ ಎಂದಂತೆ ಉಡುಪಿಯ ಅಡುಗೆಗೆ ಉಡುಪಿ ಅಡುಗೆಯವರೇ ಸಾಟಿ. ಇರಲಿ..
ಚಿತ್ರಕಾರನು ಬಳಸುವ ಮೂರು ಪ್ರೈಮೆರಿ ವರ್ಣಗಳು ಕೆಂಪು, ನೀಲಿ ಮತ್ತು ಹಸಿರು (ಸಯಾನ್, ಮೆಜೆಂಟಾ, ಎಲ್ಲೋ). ಸಮರ್ಪಕ ಮಿಶ್ರಣದಿಂದ ಸಾವಿರಾರು ವರ್ಣಗಳನ್ನು ಹೊರತರಗಹುದು. ಅಡುಗೆಯ ವಿಷಯದಲ್ಲಿಯೂ ಅಷ್ಟೇ. ಉಪ್ಪು-ಹುಳಿ-ಖಾರಗಳನ್ನು ಸಮಪ್ರಮಾಣದಲ್ಲಿ ಸೇರಿಸಿಬಿಟ್ಟರೆ ಹಲವಾರು ರುಚಿಗಳು ಲಭ್ಯ. ಇಂಗು, ತೆಂಗು, ಒಗ್ಗರಣೆ ಮೊದಲಾದ ಎಲ್ಲಾ ವಸ್ತುಗಳೂ ಬರೀ ಮೇಕಪ್ ಮಾತ್ರ. ಆದರೆ ಇವುಗಳ ’ಗಾಂಚಾಲಿ’ಯನ್ನು ನಿಯಂತ್ರಿಸಲು ಒಂದು ರುಚಿ ಮಾತ್ರ ಶಕ್ತವಾಗುತ್ತದೆ, ಅದು ಬೆಲ್ಲ, ಅರ್ಥಾತ್ ಸಿಹಿ.
ಆದರೆ ಅದೂ ಸುಳ್ಳೇ ಎನ್ನಬಹುದು. ಊಟಕ್ಕೆ ಹಸಿವೇ ರುಚಿ. ಹಸಿದವನು ಏನು ಸಿಕ್ಕರೂ ತಿನ್ನುತ್ತಾನೆ. ಕ್ಷುಧಾತುರಾಣಾನಾಂ ನರುಚಿರ್ನಪಕ್ವಂ. ಇಂಗು ಬೆಲ್ಲ ಇದ್ದರೆ ಮಂಗಮುಂಡೆಯೂ ಅಡುಗೆ ಮಾಡ್ತಾಳೆ ಎಂಬೊಂದು ಗಾದೆ ಇದೆ. ಇಂಗಿನ ಮಹತ್ವದ ಬಗ್ಗೆ ನಂತರ ತಿಳಿಸುತ್ತೇನೆ. ನೀವು ಕೇಳುತ್ತೀರಿ, ಎಲ್ಲಾ ಎಲೆಗಳನ್ನು ಒಂದೇ ರೀತಿಯಲ್ಲಿ, ಅಂದರೆ ಎಡಗಡೆಗೆ ಕುಡಿ ಬರುವಂತೆ ಮಾತ್ರ ಯಾಕೆ ಹಾಕಿದ್ದಾರೆ, ಎಂದು. ಇದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ. ಸುರುಳಿಯಾಕಾರದಲ್ಲಿರುವ ಬಾಳೆಯ ಮೇಲುಭಾಗ ಒಳಗಿರುತ್ತದಾದ್ದರಿಂದ ಸಹಜವಾಗಿಯೇ ಹೊರಭಾಗ ಬೇಗ ಬೆಳೆದಿರುತ್ತದೆ ಮತ್ತು ಒಳ ಭಾಗ ಎಳೆಯದಾಗಿರುತ್ತದೆ. ಎಳೆಯ ಭಾಗದಲ್ಲಿ ಆಹಾರ ಕಲಸಿದರೆ ಒದು ಹರಿಯುವ ಸಾಧ್ಯತೆ ಹೆಚ್ಚು. ಇದೇ ಈ ಸಂಪ್ರದಾಯದ ಗೂಡಾರ್ಥ.
ಹಾಂ.. ಅಡುಗೆ ಬಡಿಸುವವರ ಸಾಲು ಹೊರಟಿತು. ಮೊದಲೇ ಹೇಳಿದಂತೆ ಪುರೋಹಿತರ ಪಂಕ್ತಿಯಿಂದ ಆರಂಭಿಸಿ ನಂತರ ನಮ್ಮ-ನಿಮ್ಮ, ಪ್ಯಾಂಟು-ಶರ್ಟು ತೊಟ್ಟವರ ಕಡೆಗೆ ಬರುತ್ತಾರೆ. ಮೊದಲು ಎಲೆಯ ಬಲ ಭಾಗದ ಕೆಳಕ್ಕೆ ಪಾಯಸ.
ಪ್ರತಿಯೊಂದು ಆಹಾರಕ್ಕೂ ಅದರದೇ ಆದ ಜಾಗವನ್ನು ನಿಗದಿಪಡಿಸಿರುತ್ತಾರೆ: ಅವು ಎಂದಿಗೂ ಸ್ಥಿತ್ಯಂತರವಾಗವು. ಬಡಿಸುವಾಗಲೂ ಒಂದೇ ಕ್ರಮ. ಜಪಾನಿನ ಬಹು ಪ್ರಸ್ತುತ ಸಿದ್ಧಾಂತ ೫ಎಸ್ ಅನ್ನು ನಮ್ಮ ಪೂರ್ವಿಕರು ಮೊದಲೇ ಅಳವಡಿಸಿಕೊಂಡಿದ್ದಾರೆ. ೫ಎಸ್ ಬಗ್ಗೆ ಹೇಳಲು ಬಹಳಷ್ಟಿದೆ, ಆದರೆ ಯಾವುದೇ ವಸ್ತುಗಳು ಅವಶ್ಯಕತೆಗಳಿಗನುಗುಣವಾಗಿ ಸುಲಭಲಭ್ಯವಿರಬೇಕು ಎಂಬುದೂ ಒಂದು. ಹಾಗಾಗಿ ಕಡಿಮೆ ಬಳಸುವ ಉಪ್ಪಿಗೆ ಎಡತುದಿಯ ಭಾಗ, ಅಂದರೆ ಬಲಗೈಯಲ್ಲಿ ಉಣ್ಣುವವರಿಗೆ ತುಸು ಹೆಚ್ಚಿನ ಶ್ರಮ….
ಕದಳೀಪತ್ರದಗ್ರಸ್ಥಾನದಲ್ಲುಪಸ್ಥಿತವಾಗಿರುವೆಲ್ಲಾರ್ಹತೆಗಳನ್ನೊಳಗೊಂಡ ಷಡ್ರಸಗಳಲ್ಲದಾಗಿ ವಿಶೇಷ ಗೌರವಕ್ಕೆ ಪ್ರಾಪ್ತವಾಗಿರುವ ಉಪ್ಪು ಮೊದಲು ಬರುತ್ತದೆ. ಲವಣದ ಮಹಾತ್ಮೆಯನ್ನು ಏನೆಂದು ಹೇಳೋಣ, ಈ ಮನು ಜನ್ಮದ ಜಿಹ್ವೆಗದಸಾಧ್ಯವೆಂದರುತ್ಪ್ರೇಕ್ಷೆಯೇನಿಲ್ಲವೆಂಬುದರಲ್ಲತಿಶಯೋಕ್ತಿಯೇನಿಲ್ಲವೆಂಬುದದು ಗಗನೋಪಸ್ಥಿತ ರವಿಚಂದ್ರರಿರುವಂತೆಯೇ ಸತ್ಯಸ್ಯ ಸತ್ಯ. ಆದರೂ ಯಃಕಶ್ಚಿತ್ ಪ್ರಯತ್ನ ಮಾಡಿಬಿಡುತ್ತೇನೆ. ಉಪ್ಪು ಶಕ್ತಿ ವರ್ಧಕ: ಲವಣಂ ಬಲವರ್ಧಕಂ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂದ ಪ್ರಶಂಸೆಗೆ ಪಾತ್ರವಾದದ್ದು. ಉಪ್ಪು ಕಾಪಿನ ಬಿಲ್ಲು ಎಂದಿದ್ದಾನೆ ಸರ್ವಜ್ಞ.
ಮೊದಲು, ಅಂದ ಕಾಲತ್ತಿಲೆ, ವಧು ಪರೀಕ್ಷೆಗೆ ಹೋದಾಗ ವಧುವಿಗೆ ಊಟಕ್ಕೆ ಉಪ್ಪು ಬಡಿಸಲು ಹೇಳುತ್ತಿದ್ದರು. ಆಕೆ ಎಷ್ಟು ಬಡಿಸುತ್ತಾಳೆ ಎಂಬುದರ ಮೇಲೆ ಆಕೆ ದುಂದುಗಾರ್ತಿಯೇ, ಮಿತವ್ಯಯಿಯೇ, ಸಂಸಾರ ನಡೆಸಲು ಅರ್ಹಳಾಗಿದ್ದಾಳೆಯೇ ಎಂದು ನಿರ್ಧರಿಸುತ್ತಿದ್ದರಂತೆ. ಈಗ ಅದು ಬುಲ್‌ಶಿಟ್.
ಎರಡು ಕುಸುಂಬರಿಗಳು, ಚಟ್ನಿ, ಸಾಸಿವೆ, ಎರಡು ತಾಳ್ಳುಗಳು (ಪಲ್ಯ) ಕನಿಷ್ಠ, ಉಪ್ಪಿನ ಕೆಳಭಾಗದಲ್ಲಿ ಚಿತ್ರಾನ್ನ ಅಥವಾ ವಾಂಗಿಬಾತ್ ಅಥವಾ ಪುಳಿಯೋಗರೆ.
ಎರಡು ಕುಸುಂಬರಿಗಳಲ್ಲಿ ಸಹಜವಾಗಿಯೇ ಒಂದು ಹೆಸರು ಬೇಳೆಯದು, ಹಸಿ. ಇನ್ನೊಂದು ಕಡಲೆಬೇಳೆಯದು, ಹಸಿ ಅಥವಾ ಬೇಯಿಸಿದ್ದು. ಒಂದರಲ್ಲಿ ತುರಿದ ಗಜ್ಜರಿ ಅಥವಾ ಕ್ಯಾರೆಟ್ ಇರಲೇಬೇಕು.
ತರಕಾರಿಗಳಲ್ಲಿ ಅಗ್ರಸ್ಥಾನ ದೊಕರಕಬೇಕಾದುದು ಕ್ಯಾರೆಟ್‌ಗೆ ಎಂಬುವವನು ನಾನು. ಅದು ಬಹು ಪ್ರತಿಭೆಯದು, ಬಹು ಉಪಯೋಗದ್ದು, ಬಹು ಆರೋಗ್ಯಕರ. ಅದನ್ನು ಹಸಿಯಾಗಿಯೇ ತಿನ್ನಬಹುದು, ಕುಸುಂಬರಿ ಮಾಡಬಹುದು, ಪಲ್ಯ, ಪಲಾವ್ ಸಾಂಬಾರುಗಳಿಗೂ ಅದು ಸೈ, ಸಿಹಿಯಾಗಿ ಹಲ್ವವಾಗಿಯೂ ಅದು ಸೇವನೆಗೆ ಸಿದ್ಧ, ಕುಡಿಯಲು ಜ್ಯೂಸ್ ಕೂಡಾ ಮಾಡಬಹುದು. ಗಜ್ಜರಿಯಿಂದ ಅರ್ಜೆಂಟ್ ಉಪ್ಪಿನಕಾಯಿ ಕೂಡಾ ಮಾಡಬಹುದು. ಚೂರು ಮಾಡಿ ಅರ್ಧ ಗಂಟೆ ಉಪ್ಪಿನಲ್ಲಿ ಹಾಕಿಟ್ಟು, ಮೆಣಸಿನ ಪುಡಿ ಹಾಕಿ, ಜಾಸ್ತಿ ಇಂಗು ಹಾಕಿ ಒಗ್ಗರಣೆ ಕೊಟ್ಟರೆ ಪಿಕಲ್‌ಊ ರೆಡಿ. ಹೀಗೆ ಬಹು ಉಪಯೋಗಿ ತರಕಾರಿ ಇನ್ನಾವುದೂ ಇದ್ದಂತಿಲ್ಲ.
ಇಲ್ಲಿ ಔಷಧೀಯ ಗುಣಗಳಿಂದ ತುಂಬಿರುವ ಇಂಗಿನ ಬಗ್ಗೆ ಒಂದಿಷ್ಟು ಬರೆಯಬೇಕೆಂಬುದು ನನ್ನ ಇಂಗ್-ಇತ.
ಭೂರಿ ಭೋಜನ ಮಾಡಿ, ಅಂದರೆ ಸುಗ್ರಾಸ ಕವಳವನ್ನು ಭಾರೀ ತಿಂದು, ಅದು ಮುಡಿಯಲ್ಲಿ ಒತ್ತಿ ಒತ್ತಿ ತುಂಬಿದ ಬತ್ತದ ಹಾಗೆ ಒತ್ತಾಗಿ ನಿಂತು ಇಂಗದೇ ಹೊಟ್ಟೆ ಕೆಟ್ಟು ಉರಿತೇಗು ಬರುತ್ತಿದ್ದರೆ, ಉದರದಲ್ಲಿ ಗುಡುಗುಡು ಗುಡುಗಿನ ದನಿ ಹೊರಟರೆ ಅಜೀರ್ಣ ಎಂಬುದು ಸರ್ವವಿದಿತ. ಅದರ ಶಮನಕ್ಕೆ ಇಂಗು ಸಿದ್ಧ ಔಷಧ. ಉದರದಲ್ಲಿ ಇಂಗಾಲಾಮ್ಲ ತುಂಬಿದರೆ ಇಂಗೇ ಔಷಧ. ಇಂಗು ಕ್ರಿಯಾತ್ಮಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ, ದೇಹದ ಜಡತ್ವವನ್ನು ತೊಡೆಯುತ್ತದೆ. ಹಾಗಾಗಿಯೇ ’ಇಂಗ್’ಲಿಷಿನಲ್ಲಿಯೂ ಇಂಗಿಗೆ ಮಹತ್ವದ ಪಾತ್ರ ಇದೆ. ಆಜ್ಞೆಯಂತಹ ಪದಗಳನ್ನು ಚಟುವಟಿಕೆಯನ್ನಾಗಿಸುವುದು ಇಂಗ್- ಐ.ಎನ್.ಜಿ. ಉದಾಹರಣೆಗೆ ವಾಕ್-ಇಂಗ್, ಟಾಕ್-ಇಂಗ್, ಜಂಪ್-ಇಂಗ್, ಇತ್ಯಾದಿ. ಉದ್ದಿನ ಹಿಟ್ಟಿನ ಗೊಜ್ಜಿನ ನಂಜ್ ಅನ್ನು ತೊಡೆಯಲು ಇಂಗ್ ಬೇಕೇಬೇಕು.
ಆದರೆ ಎಚ್ಚರ, ನೀವು ’ಮಂಗ’ನಾಗಿದ್ದರೆ ’ಇಂಗಿ’ನಿಂದ ದೂರ ಇರುವುದು ಒಳ್ಳೆಯದು, ಇಲ್ಲವಾದರೆ ನೀವು ಗಾದೆಯಂತೆ ’ಇಂಗು ತಿಂದ ಮಂಗ’ನಾಗಿ ಆವಾಂತರ ಆಗಿಬಿಡಬಹುದು.
ಬೇಸಗೆಯ ಸಮಾರಂಭಗಳಲ್ಲಿ ಕಡಿಗೆಯ ತಾಳ್ಳು ಮಾಮೂಲು. ಇನ್ನೊಂದು ತರಕಾರಿ ತೊಂಡೆಕಾಯಿ ಅಥವಾ ಸುವರ್ಣ ಗಡ್ಡೆ. ಉಳ್ಳವರು ಶಿವಾಲಯವ ಮಾಡುವರಯ್ಯಾ ಎಂದಂತೆ ಕಾಸಿದ್ದವರು ಎಳೆ ಗೇರು ಬೀಜದ ತಾಳ್ಳನ್ನೂ ಮಾಡಬಹುದು, ಒಣ ದ್ರಾಕ್ಷಿಯ ಕುಸಂಬರಿಯನ್ನೂ ಬಡಿಸಬಹುದು. ಅದಕ್ಕೆ ಜೇಬಿನ ತುಂಬಾ ಇರಬೇಕಷ್ಟೇ. ಉಳ್ಳವರು ಗೇರು ಬೀಜದ ತಾಳ್ಳನ್ನು ಮಾಡುವರು, ನಾನೇನು ಮಾಡಲಯ್ಯಾ ಬಡವ, ನನಗೆ ಕಡಿಗೆಯೇ ಗತಿ.
ನಡುವೆ ಒಂದು ಅರ್ಜೆಂಟ್ ಪ್ರಶ್ನೆ. ಈ ಜಗತ್ತಿನಲ್ಲಿ ಎಲ್ಲಾ ಹಣ್ಣುಗಳಲ್ಲಿಯೂ ಒಳಗೆ ಬೀಜ ಇರುತ್ತದೆ, ಆದರೆ ಒಂದರ ಹೊರತಾಗಿ. ಆ ಹಣ್ಣಿನಲ್ಲಿ ಬೀಜವು ಹೊರಗಿರುತ್ತದೆ. ಅದು ಯಾವ ಹಣ್ಣು? ತಿಳಿಯಲಿಲ್ಲವೇ? ಸಂದರ್ಭ ಬಂದಾಗ ಹೇಳುತ್ತೇನೆ, ಯೋಚಿಸುತ್ತಿರಿ.
ಇತರ ತರಕಾರಿಗಳಂತೆ ಕಡಿಗೆಯನ್ನು ’ಹೆಚ್ಚು’ವಂತಿಲ್ಲ. ಅದನ್ನು ಪಲ್ಯಕ್ಕೆ ಸಿದ್ಧಪಡಿಸುವ ವಿಧಾನವೇ ಬೇರೆ. ಮೊದಲು ಸಿಪ್ಪೆ ತೆಗೆಯಬೇಕು (ಬೀಜ ಬಲಿತ ಕಾಯಿ ಆಗುವುದಿಲ್ಲ, ಕಸವಾಗುತ್ತದೆ), ಮೇಣ ಹೋಗುವಂತೆ ಚೆನ್ನಾಗಿ ತೊಳೆಯಬೇಕು, ಅದರ ಹೊಟ್ಟೆಗೆ ಕೋಲೊಂದನ್ನು ಚುಚ್ಚಬೇಕು ಮತ್ತು ಕತ್ತಿ ತೆಗೆದುಕೊಂಡು ಮೇಲುಭಾಗದಿಂದ ’ಕೊಚ್ಚ’ಬೇಕು. ಆಗ ಚೂರು ಚೂರಾಗಿ ಉದುರುತ್ತದೆ, ನಿಮ್ಮ ಚಾಕು-ಚೂರಿ, ಮೆಟ್ಟುಗತ್ತಿಗಳು ಇಲ್ಲಿ ಉಪಯೋಗಕ್ಕೆ ಬಾರವು.
ಆಗಲೇ ಹೇಳಿದಂತೆ ಎಲ್ಲಾ ಬಡಿಸಿ ’ಶ್ರೀಮದ್ ರಮಾರಮಣ ಗೋವಿಂದಾ, ಗೋವಿಂದ,’ ಎನ್ನುವ ತನಕ ಬಡಿಸಿದ್ದನ್ನು ನೀವು ಮುಟ್ಟುವಂತಿಲ್ಲ ಅರ್ಥಾತ್ ಎಲೆಗೆ ಕೈ ತಾಗಿಸುವಂತಿಲ್ಲ. ಗಮಗಮ ವಾಸನೆಯನ್ನು ಮೂಗಿನ ಹೊಳ್ಳೆಯರಳಿಸಿ ಮೂಸಬಹುದು ಅಷ್ಟೆ. ಅನ್ನ ಬಡಿಸಿ, ತೊವೆ ಹಾಕಿ, ಹಪ್ಪಳ-ಸಂಡಿಗೆಗಳನ್ನು ಅದರದಕ್ಕೇ ನಿಗದಿಪಡಿಸಿದ ಜಾಗದಲ್ಲಿ ಹಾಕಿದ ನಂತರ ಅಭಿಗಾರ, ಅಂದರೆ ತೊವೆಯ ಮೇಲೆ ತುಪ್ಪ. ಈ ಹೊತ್ತಿನಲ್ಲಿ ನಿಮ್ಮ ಬಾಯಲ್ಲಿ ಲಾಲಾರಸ ಹುಟ್ಟುತ್ತದೆ, ಅದು ಜೀರ್ಣಶಕ್ತಿಯನ್ನು ವರ್ಧಿಸುತ್ತದೆ.
ಈ ತುಪ್ಪ ಎನ್ನುವುದಿದೆಯಲ್ಲ, ಅದನ್ನು ಹಾಕುವ ಲೋಟಗಳು ದ್ರೌಪತಿಯ ಅಕ್ಷಯ ಪಾತ್ರೆಗಳಂತೆ ಇರುತ್ತವೆ. ಬಡಿಸುವವರು ಎಷ್ಟು ವೇಗವಾಗಿ ಬಡಿಸುತ್ತಾ ಹೋಗುತ್ತಾರೆಂದರೆ ನಿಮಗೆ ಕೇಳಿಸುವುದು ಬರೀ ಶಬ್ದ ಮಾತ್ರ. ತುಪ್ಪದ ಹನಿ ಬಿತ್ತೋ ಇಲ್ಲವೋ ತಿಳಿಯದು. ಅರ್ಧ ಲೋಟದಷ್ಟಿದ್ದ ಘೃತವನ್ನು ನೂರು ಜನಕ್ಕೆ ಬಡಿಸಿದರೂ ಮತ್ತೂ ಅಲ್ಲಿ ಅರ್ಧ ಲೋಟ ತುಪ್ಪ ಉಳಿದಿರುತ್ತದೆ. ಇದು ಉಡುಪಿ ಅಡುಗೆಯವರ ಪ್ರತಾಪ.
ಇನ್ನು ನಿಮ್ಮ ಕೈ-ಬಾಯಿಗಳಿಗೆ ಜಗಳ ಶುರುಮಾಡಬಹುದು. ಪಾಯಸ ತಿನ್ನಿ, ತೊವೆ ಉಣ್ಣಿ, ನಂತರ ಬರುವುದು ಸಾರು, ಅಂದರೆ ಬೆಂಗಳೂರಿನ ’ರಸಂ’.
ಸಾರು ಊಟದ ಪ್ರಮುಖ ಭಾಗ. ಊಟ ಮಾಡುವವರ ಹೊಟ್ಟೆಯ ಅರ್ಧ ಭಾಗ ಸಾರನ್ನದಿಂದಲೇ ತುಂಬುತ್ತದೆ. ಸಾರಿಗೆ ಸಾಥ್ ಕೊಡುವ, ಅದರ ಮೌಲ್ಯವನ್ನು ವರ್ಧಿಸುವ ಇತರ ವಸ್ತುಗಳೆಂದರೆ ಹಪ್ಪಳ, ಸಂಡಿಗೆ, ಬಜ್ಜಿ, ಚಟ್ಟಂಬಡೆ (ಮಸಾಲೆ/ಕಡಲೆ ಬೇಳೆ ವಡೆ), ಪಕೋಡ ಮತ್ತು ಪಲ್ಯಗಳು. ಸಾರು ಅರ್ಥಾತ್ ರಸಂ ರುಚಿಕಟ್ಟಾಗಿದ್ದರೆ ಬೇರೆ ಅಡುಗೆಗಳು ಹೇಗಿದ್ದರೂ ’ಚಲ್ತಾಹೈ’.
ಇಂಗ್ಲಿಷಿನ ಪದಗಳ ಬಗ್ಗೆ ಒಂದಿಷ್ಟು ವಿವೇಚಿಸುತ್ತೇನೆ. ಕ್ಯಾಸ್ಟರ್ ಆಯಿಲ್ ಎಂದರೆ ಹರಳೆಣ್ಣೆ (ಔಡಲೆಣ್ಣೆ), ಗ್ರೌಂಡ್‌ನಟ್ ಆಯಿಲ್ ಎಂದರೆ ಶೇಂಗಾ ಎಣ್ಣೆ, ಸನ್‌ಫ್ಲವರ್ ಆಯಿಲ್ ಎಂದರೆ ಸೂರ್ಯಕಾಂತಿ ಎಣ್ಣೆ, ಆದರೆ ಬೇಬಿ ಆಯಿಲ್ ಎಂದರೆ ಮಗುವಿನಿಂದ ಮಾಡಿದ ಎಣ್ಣೆ ಅಲ್ಲ.
ಅಂತೆಯೇ ಕನ್ನಡದಲ್ಲಿರುವ ತಮಾಷೆಯನ್ನು ವಿವರಿಸಬೇಕಾದರೆ ಕಡಲೆ ಕಾಳಿನಿಂದ ಮಾಡಿದ್ದು ಕಡಲಬೇಳೆ ವಡೆ, ಉದ್ದಿನಿಂದ ಮಾಡಿದ್ದು ಉದ್ದಿನ ವಡೆ, ಆದರೆ ಮದ್ದೂರಿನಿಂದ ಮಾಡಿದ್ದಲ್ಲ ಮದ್ದೂರು ವಡೆ! ಅಂತೆಯೇ ಮೈಸೂರು ಪಾಕ್. ಇದಕ್ಕೆ ಮೈಸೂರಾಗಲೀ, ಪಾಕಿಸ್ತಾನವಾಗಲೀ ಸಂಪರ್ಕವಿಲ್ಲ. ಮೈಸೂರು ಎಂದರೆ ಕಡಲೆಬೇಳೆ ಪುಡಿ, ಪಾಕ್ ಎಂದರೆ ಪಾಕ, ಅಷ್ಟೆ.
ಮೈಸೂರುಪಾಕ್ ಮಾಡುವುದು ಬಲು ನಾಜೂಕಿನ ಕೆಲಸ. ತುಸುವೇ ವ್ಯತ್ಯಾಸವಾದರೂ ’ವಜ್ರಾದಪಿ ಕಠೋರಾಣಿ’ ಅಥವಾ ’ಮೃದೂನಿ ಕುಸುಮಾದಪಿ,’ ಆಗುತ್ತದೆ.
ಅತಿಥಿಗಳ ಸಂಖ್ಯೆ ಹೆಚ್ಚಾದರೆ ಸಾರನ್ನು ಉ…. ದ್ದ ಮಾಡಬಹುದು. ನೀರು, ಇಂಗಿನ ಒಗ್ಗರಣೆ, ಉಪ್ಪು-ಖಾರದ ಪುಡಿ ಹಾಕಿಬಿಟ್ಟರೆ ಸಾರು ಸಾರಾಗಿಯೇ ಉಳಿಯುತ್ತದೆ. ಆದ ಕಾರಣ ನಾವು ಈಗಿರುವ ಗಾದೆಯನ್ನು ’ನೀರಾದರೂ ಸಾರು, ಹುಚ್ಚಾದರೂ ತಾಯಿ’ ಎಂದು ಬದಲಿಸಿದರೆ ತಪ್ಪೇನಿಲ್ಲ.
ಒಮ್ಮೆ ಸಾರು ಬಡಿಸಿದ ನಂತರ ಮತ್ತೆ ಅನ್ನದ ವಿಚಾರಣೆ, ಹಿಂದಿನಿಂದ ಸಾರು, ಸಾರು.. ಎಂದು ಒತ್ತಾಯದಿಂದ ಬಡಿಸುವವರು. ಅತಿಥಿಗಳ ಸಂತೃಪ್ತಿಯೇ ಇಲ್ಲಿ ಮುಖ್ಯ. ಅನ್ನದಾನಂ ಮಹಾದಾನಂ ಎಂಬ ಮಾತನ್ನು ಪಾಲಿಸುತ್ತಾರೆ ಇಲ್ಲಿಯವರು.
ನಂತರ ಸಾಲಿನಲ್ಲಿ ವಿಜೃಂಭಿಸುವ ಅಡುಗೆಗಳೆಂದರೆ ಸೌತೆ ಕಾಯಿ (ಮಂಗಳೂರು ಸೌತೆ) ಸಿಹಿ ಹುಳಿ ಮತ್ತು ಗುಳ್ಳ (ಉಡುಪಿ ಅಥವಾ ನೀಲಾವರದ ಮಟ್ಟಿ ಬದನೆ)ದ ಖಾರದ ಹುಳಿ. ನಂತರ ತೊಗರಿ ಬೇಳೆ ಹಾಕದ ಅಡುಗೆಗಳು: ಒಂದಿಷ್ಟು ಮದ್ದುಹುಳಿ (ಸುಮಾರಾಗಿ ಪೈನಾಪಲ್‌ನದ್ದು).
ಮದ್ದು ಹುಳಿ ಎಂದರೆ ನಾವು ನೀವು, ಅಂದರೆ ಬೆಂಗಳೂರಿಗರು ಗೊಜ್ಜು ಎನ್ನುವುದಿಲ್ಲವೇ ಅದು. ಮೆಣಸಿನ ಕಾಳು, ಜೀರಿಗೆ, ಬೆಲ್ಲ, ಇಂಗು ಸರಿಯಾಗಿ ಹಾಕುವುದರಿಂದ ಅದಕ್ಕೆ ಔಷಧೀಯ ಸದ್ಗುಣ ಬರುತ್ತದೆ ಎಂಬ ಕಾರಣಕ್ಕೋ ಏನೋ ಹಾಗೆ ಹೆಸರು. ಅದು ನಾಲಿಗೆಗೆ ಎಷ್ಟು ಹಿಡಿಸುತ್ತದೆ ಎಂದರೆ ’ಚರಿಗೆ ತುಂಬಾ ಮದ್ದು ಹುಳಿ ಇದ್ದರೆ ಹೆಡಗೆ ತುಂಬಾ ಅನ್ನ ತಿನ್ನಬಹುದು’ ಎಂಬ ಗಾದೆಯೇ ಇದೆ. ನಾವು ಚಿಕ್ಕವರಾಗಿದ್ದಾಗ ಒಂದು ಒಗಟು ಚಾಲ್ತಿಯಲ್ಲಿತ್ತು. ಗಿಡದ ಮೇಲೆ ಹಣ್ಣು, ಹಣ್ಣಿನ ಮೇಲೆ ಗಿಡ, ಏನದು? ಎಂದು. ಇದು ಮೂಲತಃ ಸಂಸ್ಕೃತದಿಂದ ಬಂದಿದ್ದು.
ಅದು ಹೀಗಿದೆ:
ವೃಕ್ಷಾಗ್ರೇ ಫಲಂ ದೃಷ್ಟಂ ಫಲಾಗ್ರೇ ವೃಕ್ಷ ಏವಚ|
ಅಕಾರಾದಿ ಸಕಾರಾಂತಂ ಯೋ ಜಾನಾತಿ ಸ ಪಂಡಿತಃ||
ಅದೇ ಅನಾನಸ್ (Ananas Comosus.) ನನಗೆ ತಿಳಿದಂತೆ ಅದೊಂದೇ ಪ್ರಕಾರದಲ್ಲಿ ಈ ವೈಶಿಷ್ಠ್ಯತೆ ಇದೆ. ನಂತರದ್ದು ನಿಮ್ಮ ಎಲೆಯನ್ನು ಅಲಂಕರಿಸುವುದು ಪಳಿದ್ಯ.
ಪಳಿದ್ಯ?
ನನಗೆ ಗೊತ್ತು ನಿಮಗೆ ಈ ಪದ ತಿಳಿಯದು ಎಂದು. ಅಲಸಂಡೆ, ಹುರುಳಿಕಾಯಿ, ಬೂದುಕುಂಬಳ, ತೊಂಡೆಕಾಯಿ ಅಥವಾ ಕೆಂಪು (ಮಂಗಳೂರು) ಸೌತೆಕಾಯಿಯಂತಹ ಗಟ್ಟಿ ತರಕಾರಿಗಳು ಇದಕ್ಕೆ ಸೂಕ್ತ. ಬೇಯಿಸಿ, ಒಗ್ಗರಣೆ ಹಾಕಿ, ಕಾಯಿ ರುಬ್ಬಿ ಹಾಕಿ ಕುದಿಸಿ, ನಂತರ ಮೊಸರು ಸೇರಿಸಿದರೆ ಇದು ರೆಡಿ. ಇದಕ್ಕೆ ಬೆಂಗಳೂರು ಹೆಸರು ಮಜ್ಜಿಗೆ ಹುಳಿ.
ಅದೋ ಅಲ್ಲಿ, ಒಬ್ಬರು ಕೈಯಲ್ಲಿ ನೋಟಿನ ಕಂತೆ ಹಿಡಿದು ಎಲ್ಲರಿಗೂ ಕೊಡುತ್ತಾ ಬರುತ್ತಿದ್ದಾರೆ. ಇದನ್ನು ದಕ್ಷಿಣೆ ಎನ್ನುತ್ತಾರೆ. ಯಾವುದೇ ರೀತಿಯ ದಾನದ ನಂತರ ದಕ್ಷಿಣೆ ಕೊಡದಿದ್ದರೆ ಫಲ ಸಿಗದು ಎಂಬ ನಂಬಿಕೆ. ಕನ್ಯಾದಾನದ ಜೊತೆಗಿನ ವರದಕ್ಷಿಣೆಯ ಮೂಲವೂ ಇದೇ. ’ಸಂಪೂರ್ಣ ಫಲಾವಾಪ್ತ್ಯರ್ಥಂ ದಕ್ಷಿಣಾಂ ಪ್ರತಿಪಾದಯಾಮಿ…’ ಇದೊಂದು ಮಾತ್ರ ವಿಚಾರಣೆಯಲ್ಲಿ ಬರುವುದಿಲ್ಲ, ಅಂದರೆ ಮತ್ತೊಮ್ಮೆ ಕೊಡುವುದಿಲ್ಲ. ನೀವು ಈ ಹಣದಿಂದ ಸೋಡಾ ಕೊಂಡುಕೊಂಡು ಕುಡಿದು, ಹೊಟ್ಟೆಯುಬ್ಬರವನ್ನು ಕಡಿಮೆ ಮಾಡಿಕೊಳ್ಳಬಹುದು!
ಲೇಖನದ ಶೀರ್ಷಿಕೆಯ ’ಸೊಂಟ ಗಟ್ಯಾ’ ಎಂದರೇನು ಎಂದು ಕೇಳಿದ್ದೀರಲ್ಲವೇ? ಅದು ದಕ್ಷಿಣೆಗೆ ಸಂಬಂಧಿಸಿದ್ದು. ಹೆಚ್ಚು ದಕ್ಷಿಣೆ ಕೊಟ್ಟರೆ ಹೊಟ್ಟೆ ಗಟ್ಟಿ ಎಂಬ ಪದಗಳನ್ನು ಬಳಸುತ್ತಾರೆ. ಪ್ಯಾಂಟು ಬಳಸುವ ಮೊದಲು, ಪಂಚೆಯೇ ಸಾರ್ವತ್ರಿಕ ಉಡುಗೆಯಾಗಿರುವಾಗ ನೋಟುಗಳನ್ನು ದಕ್ಷಿಣೆಯಾಗಿ ಕೊಡುತ್ತಿರಲಿಲ್ಲ. ನಾಣ್ಯಗಳನ್ನು ತೆಗೆದುಕೊಂಡವರು ಅದನ್ನು ಪಂಚೆಯ ಸೊಂಟದ ಭಾಗದಲ್ಲಿ ಇರಿಸಿಕೊಂಡು ಪಂಚೆ ಸೊಂಟದಲ್ಲಿ ಬಿಗಿಯಾಗುವಂತೆ ಮಡಿಕೆ ಮಾಡಿಕೊಳ್ಳುತ್ತಿದ್ದರು. ಅದೇ ’ಸೊಂಟ ಗಟ್ಯಾ’ ಎಂಬ ಮಾತಿಗೆ ಮೂಲ.
ಇದು ಮುಗಿದ ನಂತರ ಸಿಹಿ ತಿಂಡಿಯ ಸರದಿ.
*****
(ಮುಂದುವರೆಯುವುದು…)
ಸುಗ್ರಾಸ ಭೋಜನ! ಹೊಟ್ಟೆ ತು೦ಬಿ ಆನ೦ದದ ತೇಗು ಬ೦ತು....
ಸಾರ್ಕೊದ್ಲು ಆಯ್ತು.. ಇನ್ಯಾವ ಸಿಹಿ ಊಟ ಹಾಕಿಸ್ತೀರಿ .. ಕಾಯ್ತಿದ್ದೇವೆ. 🙂
ಚೆನ್ನಾಗಿದೆ. ಮೂರು ಪ್ರಧಾನ ಬಣ್ಣಗಳು ಅನ್ನುವಲ್ಲಿ ಒಂದು ತಪ್ಪಾಗಿದೆ ಅನಿಸ್ತಿದೆ.
ಕೆಂಪು, ಹಸಿರು, ನೀಲಿ. RGB(Red, Green Blue are primay colours) ಅಂತ ಓದಿದ ನೆನಪು
[…] ಇಲ್ಲಿಯವರೆಗೆ […]