ಇದು ಮುಗಿದ ನಂತರ ಸಿಹಿ ತಿಂಡಿಯ ಸರದಿ.
ಸುಮಾರಾಗಿ ಒಬ್ಬಟ್ಟು ಇದ್ದೇ ಇರುತ್ತದೆ. ಒಬ್ಬಟ್ಟು ಎಂದರೆ ಹೋಳಿಗೆ, ಇಂಗ್ಲಿಷಿನವರು ಕುಲಗೆಡಿಸಿ ಹೇಳಿದ ಸ್ವೀಟ್ ಚಪಾತಿ. ಎಷ್ಟೋ ಕನ್ನಡ ಪದಗಳಿಗೆ ಇಂಗ್ಲಿಷಿನ ಪದಕೋಶದಲ್ಲಿ ಶಬ್ದಗಳೇ ಇಲ್ಲ. ಅವುಗಳಲ್ಲಿ ಮುಖ್ಯವಾಗಿ ಮಡಿ, ಮೈಲಿಗೆ, ಸೂತಕ, ಮುಸುರೆ ಇತ್ಯಾದಿ. ಇವು ಏನೆಂದು ಕೇಳಬೇಡಿ, ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ!
ಸಿಹಿ ತಿಂಡಿಗಳಲ್ಲಿ ಒಬ್ಬಟ್ಟು ಮಾತ್ರವೇ ಮೇಲೆ ಒಂದಿಷ್ಟು ಸಕ್ಕರೆ ಹಾಕಿಸಿಕೊಳ್ಳುತ್ತದೆ. ಕಾಯಿ, ಸಕ್ಕರೆ, ಬೇಳೆ ಒಬ್ಬಟ್ಟು ಮಾಡಿದರೆ ಅದರ ಮೇಲೆ ತುಪ್ಪ, ದಾಸರು ಹೇಳಿದ ಹಾಗೆ ಹೋಳಿಗೆ ಜಾರಿ ತುಪ್ಪಕ್ಕೆ ಬಿದ್ದಂತೆ, ಅದರ ಮೇಲೊಂದಿಷ್ಟು ಸಕ್ಕರೆ ಬೇಕೇ ಬೇಕು. ಬೇಳೆ ಒಬ್ಬಟ್ಟು ಆದರೆ ಕಾಯಿ ಹಾಲು ಅಥವಾ ಸುವಾಸಿತ ಹಾಲು ಹಾಕಿದರೂ ಮೇಲೆ ಮತ್ತೂ ಸಕ್ಕರೆ ಸುರಿಯಬೇಕು. ಸಕ್ಕರೆ ಕೇಳುವ ಇನ್ನೆರಡು ತಿಂಡಿಗಳೆಂದರೆ ಚಿರೋಟಿ ಮತ್ತು ಪೇಣಿ. ಆದರೆ ಅವಕ್ಕೆ ಸ್ವಂತದ ರುಚಿಯಿಲ್ಲ. ಸ್ವಂತದ ಅಸ್ತಿತ್ವವೂ ಇಲ್ಲ. ಅವು ಪರಾಬಲಂಬಿಗಳು.
ಧಾರ್ಮಿಕ ವಿಶೇಷಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಗಳ ಬಳಕೆಯಾಗುವುದಿಲ್ಲ ಹಾಗೆಯೇ ಉದ್ದಿನ ವಡೆ, ಕುಂಬಳ ಕಾಯಿಗಳು ನಿಷಿದ್ಧ. ಇದು ತಿಳಿದಿರಲಿ. ಅಂತೆಯೇ ಬಸಳೆಯಂತರ ಸೊಪ್ಪುಗಳೂ ಅಡುಗೆ ಮನೆಯತ್ತ ಸುಳಿಯುವಂತಿಲ್ಲ. ಕುಂಬಳ ಕಾಯಿಯು ರಕ್ಕಸನ ತಲೆ, ಅದು ಇರುವುದೇ ಆಯುದ ಪೂಜೆಯಲ್ಲಿ ಬಲಿಯಾಗಲು. ತಿಥಿಗಳಲ್ಲಿ ಕುಂಬಳಕಾಯಿ ಬೇಕೇ ಬೇಕು. ಪಾಪದ ತರಕಾರಿ.
ನೀವು ಒಂದು ಪ್ರಶ್ನೆ ಕೇಳದಿದ್ದರೂ ನಾನು ಹೇಳುತ್ತೇನೆ, ಇಲ್ಲಿನ ಊಟಗಳಲ್ಲಿ ಗೋಧಿ-ಜೋಳ-ರಾಗಿಗಳನ್ನು ಏಕೆ ಬಳಸುವುದಿಲ್ಲ, ಎಂದು. ಪ್ರಮುಖ ಕಾರಣಗಳಲ್ಲಿ ಒಂದೆಂದರೆ ಕರಾವಳಿಗೆ ಸೆಖೆಗೆ ಈ ಯಾವುದೂ ಒಗ್ಗದು, ಬೆಳ್ತಿಗೆ ಅಕ್ಕಿ ಅನ್ನ ಕೂಡಾ. ಇಲ್ಲಿನ ಹವೆಗೆ ಕೊಚ್ಚಕ್ಕಿ (ಕುಸುಬಲಕ್ಕಿ)ಯೇ ಶ್ರೇಷ್ಠ ಆದರೂ ಅದು ಅದಾಗಲೇ ಒಮ್ಮೆ ಬೇಯಿಸಿಕೊಂಡು ಮೈಲಿಗೆಯಾಗಿದ್ದರಿಂದ ವಿಪ್ರರು ತಿನ್ನುವಂತಿಲ್ಲ.
ಇನ್ನೊಂದು ಕಾರಣ ಗೊತ್ತೇ? ಆಹಾರ ಧಾನ್ಯಗಳಲ್ಲಿ ಅಕ್ಕಿಯೊಂದು ಮಾತ್ರ ಪರಿಶುದ್ಧ. ಯಾವುದೇ ಇತರ ಧಾನ್ಯಗಳಿಗೆ ಸಿಪ್ಪೆ ಇಲ್ಲ: ಬತ್ತದ ಹೊರತಾಗಿ. ಅಷ್ಟೇ ಅಲ್ಲದೇ ಅಕ್ಕಿಯ ಹೊರತಾಗಿ ಯಾವುದನ್ನೂ ತೊಳೆಯುವಂತಿಲ್ಲ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಬತ್ತವೇ ಗ್ರೇಟ್.
’ನಿಧಾನವಾಗಿ ಊಟ ಮಾಡಿ, ತುಂಬಾ ತಡವಾಯಿತೇನೋ, ಅಡುಗೆ ಹೇಗಿದೆಯೇನೋ..’ ಎಂಬ ಉಪಚಾರದ ಮಾತುಗಳನ್ನು ಆತಿಥೇಯರು ಅಥವಾ ಅವರ ಪ್ರತಿನಿಧಿಗಳು ಹೇಳುತ್ತಾರೆ. ಇದು ಕಂಠದ ಮೇಲಿನ ಬರೀ ಉಪಚಾರದ ಮಾತಲ್ಲ. ನಿಧಾನವಾಗಿ, ರುಚಿಯನ್ನು ಆಸ್ವಾದಿಸುತ್ತಾ ತಿನ್ನುವುದರಿಂದ ಆಹಾರದ ಮೌಲ್ಯಗಳು ಹೆಚ್ಚುತ್ತವೆ. ಟಿವಿ ನೋಡುತ್ತಲೋ, ಫೋನ್‌ನಲ್ಲಿ ಮಾತನಾಡುತ್ತಲೋ, ಹೆಂಡತಿಗೆ ಬೈಯುತ್ತಲೋ, ತಲೆ ಬಿಸಿ ಮಾಡಿಕೊಂಡೋ ಅಥವಾ ಪುಸ್ತಕ ಓದುತ್ತಲೋ ತಿಂದರೆ ಆಹಾರ ’ಮೈಗೆ ಹಿಡಿಯುವುದಿಲ್ಲ’ ಅರ್ಥಾತ್ ಅದು ವಿಷವಾಗುತ್ತದೆ. ಆಹಾರದ ರುಚಿ ಹೆಚ್ಚುವುದು ಅದನ್ನು ಬಡಿಸುವವರಿಂದ. ಬಡಿಸುವವರು ನಮ್ಮವರಾದರೆ ಹುಣಸೆ ಎಲೆಯಲ್ಲಿಯೂ ಉಣ್ಣಬಹುದು ಎಂದೆನ್ನುತ್ತದೆ ಗಾದೆಯೊಂದು. ಅದೂ ಇಂತಹ ಸುಗ್ರಾಸ ಭೋಜನದಲ್ಲಿ ಹೆಚ್ಚು ಪ್ರಸ್ತುತ.
ತೇಗು ಬಂತೇ? ಸರಿ, ಅದು ಹೊಟ್ಟೆ ಭರ್ತಿಯಾದುದರ ಸಂಕೇತ. ಆಹಾರದೊಂದಿಗೆ ಗಾಳಿಯೂ ಹೊಟ್ಟೆ ಸೇರಿ, ಅಲ್ಲಿಂದ ಹೊರಬರುವಾಗ ಸಶಬ್ದದ ಕ್ರಿಯೆ ಉಂಟಾಗುತ್ತದೆ. ಅದೇ ಭರ್ತಿಯ ಸಂಕೇತ.
ಈ ದೇವರು ಮನುಷ್ಯನಿಗಿತ್ತ ದೇಹದ ಡಿಸೈನೇ ಸರಿಯಿಲ್ಲ. ಅಷ್ಟು ಕೆಳಗೆ ಬಾಯನ್ನಿಡುವ ಬದಲು ತಲೆಯ ಮೇಲೆ ಇಟ್ಟಿದ್ದರೆ ಒಂದಿಷ್ಟು ಹೆಚ್ಚಿಗೆ ತಿನ್ನಬಹುದಿತ್ತಲ್ಲವೇ ಎನಿಸದೇ? ಈ ಪುಪ್ಪುಸ, ಕರುಳು, ಪಿತ್ತಕೋಶ, ಇವನ್ನೆಲ್ಲಾ ಡಿಟ್ಯಾಚೆಬಲ್ ಆಗಿದ್ದರೆ ಇಂತಹ ಸಮಾರಂಭಗಳಿಗೆ ಬರುವ ಮೊದಲು ಮನೆಯಲ್ಲಿಯೇ ತೆಗೆದಿಟ್ಟು, ಹೆಚ್ಚು ಉಣ್ಣಬಹುದಿತ್ತು ಅಲ್ಲವೇ?
ಗೇಣಗದಲದ ಉದರ ತುಂಬಲೇ ಮನುಷ್ಯ ಇಷ್ಟೆಲ್ಲಾ ನಾಟಕ ಆಡುತ್ತಾನೆ. ಹಡಗು ತುಂಬಲು ಹೋದವನು ಮರಳಿ ಬಂದ, ಹೊಟ್ಟೆ ತುಂಬಲು ಹೋದವನು ಮರಳಿ ಬರಲಿಲ್ಲ ಎಂಬ ಗಾದೆ ಇದೆ. ಹಾವುಗಳು ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಮಾತ್ರ ಆಹಾರ ಸೇವಿಸುತ್ತವಂತೆ. ಮನುಷ್ಯನೂ ಹಾಗೇ ಇದ್ದಿದ್ದರೆ? ಮದುವೆ ಮೊದಲಾದ ವಿಶೇಷಗಳಿಗೆ ಜನ ಬರುತ್ತಲೇ ಇರುತ್ತಿಲ್ಲವೇನೋ? ಅಡಿಗಡಿಗೆ ಹೋಟೆಲುಗಳು, ತಿಂಡಿ ಕೇಂದ್ರಗಳು ಕಾಣಿಸುತ್ತಲೇ ಇರುತ್ತಿಲ್ಲವೇನೋ. ಸಮಾರಂಭಗಳಿಗೆ ಜನ ಹೋಗದ ಕಾರಣ ರೇಷಿಮೆ ಸೀರೆಗಳನ್ನು ಕೊಳ್ಳುವವರೇ ಇರುತ್ತಿಲ್ಲವೋ ಏನೋ. ಏನೋ, ಆ ಭಗವಂತನ ಲೀಲೆ. ನಮ್ಮಂಥ ಹುಲು ಮಾನವರಿಗೆ ಅರ್ಥವಾಗದು.
ಕೆಲವರು ಛಿದ್ರಾನ್ವೇಷಿಗಳು, ಸದಾ ಅಸಂತುಷ್ಟರು. ಅವರನ್ನು ಎಂದಿಗೂ ಸಂತೋಷಪಡಿಸಲು ಆಗದು. ಒಂದು ವಿವಾಹದಲ್ಲಿ ಎಲ್ಲಾ ಉತ್ಕೃಷ್ಟ ಆಹಾರ ವೈವಿಧ್ಯಗಳಿದ್ದವಂತೆ, ಶುದ್ಧ ತುಪ್ಪದಲ್ಲಿಯೇ ಮಾಡಿದ್ದಂತೆ. ತಿಂದವನೊಬ್ಬ ಕೈ ತೊಳೆಯಲು ಹೋದಾಗ ಅಲ್ಲಿ ಬಿಸಿ ನೀರಿಲ್ಲದ್ದರಿಂದ ಗೊಣಗಿದನಂತೆ, ’… ಮಕ್ಕಳು. ಇಷ್ಟೆಲ್ಲ ಮಾಡಿ ಕೈ ಜಿಡ್ಡು ತೆಗೆಯಲು ಒಂದಿಷ್ಟು ಬಿಸಿ ನೀರು ಇಡಬಾರದಿತ್ತೇ?’ ಎಂದು.
ಹೋಳಿಗೆಯನ್ನು ತಿಂದಾಯಿತಲ್ಲವೇ? ನಂತರ ಬರುವ ಚೌಚೌ ಅಥವಾ ಕಾರದ ಕಡ್ಡಿ. ಈಗ ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ.
ಸಿಹಿ ಹೆಚ್ಚೋ, ಖಾರ ಹೆಚ್ಚೋ ಎಂದು ನಾನು ಕೇಳಿದರೆ ನೀವು ಸಿಹಿ ಎಂದೇ ಅನ್ನುತ್ತೀರಿ. ಆದರೆ ಸಿಹಿ ತಿಂಡಿಗಳು ಒಂಟಿ ಜೀವಿಗಳು. ಅವು ಇನ್ನೊಂದನ್ನು ಕಂಡರೆ ಸಿಡುಕುವ, ತಾನೇ ಮೇಲೆಂದು ವಾದಿಸುವಂತವು. ಜಾಮೂನು ತಿಂದ ನಂತರ ಮೈಸೂರ ಪಾಕು ತಿನ್ನಲು ಸಾಧ್ಯವೇ? ಇಲ್ಲ, ಜಾಮೂನೇ ತಾನು ಉಚ್ಚ ಎಂದು ತೋರಿಸುತ್ತದೆ. ಎರಡು ಸಿಹಿಗಳ ನಡುವೆ ರಾಜಿ ಮಾಡಿಸುವಂತಹವು ಪಾಪದ ಖಾರ ತಿಂಡಿಗಳು. ಜಾಮೂನು ತಿಂದು ನಂತರ ಒಂದಿಷ್ಟು ಮಿಕ್ಷರ್ ಅಗಿದು ನುಂಗಿದ ನಂತರ ನೀವು ಮತ್ತೆ ಮೈಸೂರುಪಾಕ್ ತಿನ್ನಲು ರೆಡಿಯಾಗಿರುತ್ತೀರಿ. ಗಮನಿಸಿ, ವಿವಿಧ ರೀತಿಯ ಖಾರದ ತಿಂಡಿಗಳನ್ನು ಸಾಲಾಗಿ ತಿಂದರೂ ಅವುಗಳ ರುಚಿ ವೈವಿಧ್ಯದಲ್ಲಿ ವ್ಯತ್ಯಾಸ ತಿಳಿಯುತ್ತದೆ, ಆದರೆ ಸ್ವೀಟ್‌ಗಳು ಮಾತ್ರ ಪರಸ್ಪರ ಒಳಗೊಳಗೇ ರಾಜಕೀಯ ಪಕ್ಷಗಳಂತೆ ಅಸಹನೆ ತೋರಿಸುತ್ತವೆ. ಸಿಹಿ ಸೇವಿಸಿದ ನಂತರ ಖಾರ ತಿನ್ನಲೇಬೇಕು, ಇಲ್ಲವಾದರೆ ಕಾಫಿಯ ರುಚಿಗೆಟ್ಟುಹೋಗಿರತ್ತದೆ. ಉಪಸಂಹಾರವಾಗಿ ಖಾರವು ಸಿಹಿಯ ರುಚಿಯನ್ನು ಹೆಚ್ಚಿಸುತ್ತದೆ.
ನಾವು ಚಿಕ್ಕವರಿದ್ದಾಗ ಒಗಟೊಂದನ್ನು ಹೇಳುತ್ತಿದ್ದೆವು. ’ನೀಮಗೆ ಕಾಫಿ ಕೊಟ್ಟಿದ್ದಾರೆ, ಅದಕ್ಕೆ ಸಕ್ಕರೆ ತುಂಬಾ ಜಾಸ್ತಿ. ಪಕ್ಕದಲ್ಲಿ ನೀರಾಗಲೀ, ಕಾಫಿ ಡಿಕಾಕ್ಷನ್ನಾಗಲೀ, ಹಾಲಾಗಲೀ ಇಲ್ಲ. ಆದರೆ ಸಕ್ಕರೆ ಇದೆ. ಆಗ ನೀವು ಹೇಗೆ ಕಾಫಿಯ ಸಿಹಿಯನ್ನು ನಿಯಂತ್ರಿಸುತ್ತೀರಿ?’ ಎಂಬುದದು.
ಬಹು ಸುಲಭ, ಒಂದಿಷ್ಟು ಸಕ್ಕರೆಯನ್ನು ಬಾಯಿಗೆ ಹಾಕಿಕೊಳ್ಳಿ ಮತ್ತು ಕಾಫಿ ಕುಡಿಯಿರಿ. ಕಾಫಿಯ ಸಕ್ಕರೆ ಪ್ರಮಾಣ ಕಡಿಮೆಯಾದಂತೆ ಎನಿಸುತ್ತದೆ. ಸಿಹಿಯ ಉದ್ಧಟತನವನ್ನು ನಿಯಂತ್ರಿಸಲು ಸಿಹಿಯೇ ಬೇಕು.
ಅರ್ಥ ಶಾಸ್ತ್ರದಲ್ಲಿ ಡಿಮಿನಿಷಿಂಗ್ ವ್ಯಾಲ್ಯೂ ಎಂಬುದನ್ನು ನೀವು ಓದಿರುತ್ತೀರಿ. ಬಳಸುತ್ತಾ ಬಳಸುತ್ತಾ ಹೋದಂತೆ ವಸ್ತುವಿನ ಮೌಲ್ಯ (ಸಂತೃಪ್ತಿಯ) ಕಡಿಮೆಯಾಗುತ್ತದಂತೆ. ಇದು ಸಿಹಿ ತಿಂಡಿಗೆ ಅನ್ವಯಿಸುತ್ತದೆ. ಮೊದಲ ಜಾಮೂನು ಕೊಡುವ ಆನಂದ ಎರಡನೆಯದರಲ್ಲಿ ಇರುವುದಿಲ್ಲ, ಮೂರನೆಯದರಲ್ಲಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಾಲ್ಕನೆಯದೆಂದರೆ ವಾಕರಿಕೆಯ ಅನುಭವ. ಐದನೆಯದು ಕಂಡರೆ ಮುಖದಲ್ಲಿ ಹಾಗಲದ ಕಹಿ ತಿನ್ನುವ ಭಾವ.
ಅದೇ ನೋಡಿ, ಖಾರದ ವಿವಿಧ ತಿಂಡಿ ಎಷ್ಟೇ ತಿಂದರೂ ಆನಂದದ ಪ್ರಮಾಣ ಇಳಿಮುಖವಾಗದು. ಹಾಗಾಗಿ ಮತ್ತೊಮ್ಮೆ ಹೇಳುತ್ತೇನೆ, ಸಿಹಿಗಿಂತ ಖಾರವೇ ಶ್ರೇಷ್ಠ.
ನಂತರ ಬಂತು ನೋಡಿ, ಲಾಡು: ವಿಶೇಷವಾಗಿ ಬೂಂದಿಯದು. ಬಾಯಿಗಿಡುವ ಮೊದಲು ಒಮ್ಮೆ ತಿರುಗಿಸಿ ನೋಡಿ. ಅಲ್ಲಿ ಒಂದು ಗೋಡಂಬಿ ಚೂರು, ಒಂದು ಒಣ ದ್ರಾಕ್ಷಿ ಕಾಣಿಸುತ್ತದೆ. ಲಾಡು ಚೂರು ಮಾಡಿ ಒಳಗೆಲ್ಲಾ ಹುಡುಕಿದರೂ ಒಂದೇ ಒಂದು ಗೇರು ಬೀಜವೂ, ದ್ರಾಕ್ಷಿಯೂ ಕಾಣದು. ಒಂದು ಚೂರು ಮಾತ್ರ ಹೊರಗಿರುವಂತೆ ಲಾಡು ಕಟ್ಟುವ ಕ್ರಮ ಗ್ರಾಹಕರನ್ನು ಮೋಸಗೊಳಿಸುವ ವಿಧಾನ.
ಗೋವೆ ಬೀಜವನ್ನು ಇಂಗ್ಲಿಷಿನಲ್ಲಿ ಕ್ಯಾಷ್ಯೂ ನಟ್ ಎಂದು ಕರೆಯುತ್ತಾರೆ. ಹೆಸರೇ ಹೇಳುವ ಹಾಗೆ ಸಿಕ್ಕಾಪಟ್ಟೆ ಕ್ಯಾಷ್ ಇದ್ದವರು ಮಾತ್ರ ಕೊಳ್ಳುವಷ್ಟು ದುಬಾರಿ ಅದು.
ರವೆ ಲಾಡು, ಖರ್ಜೂರದ ಲಾಡು ಮತ್ತು ಬೇಸನ್ ಲಾಡುಗಳಿದ್ದರೂ ಬೂಂದಿ ಲಾಡು ಮಾತ್ರ ಸರ್ವತ್ರ ಸಮ್ಮತ. ಬೇಸನ್ ಲಾಡನ್ನು ಪುಡಿ ಮಾಡದೇ, ಚೂರು ಮಾತ್ರ ಮಾಡಿಕೊಂಡು ತಿನ್ನುವುದು ಬಲು ಕಷ್ಟದ ಕೆಲಸ. ಅದನ್ನು ತಯಾರಿಸುವುದೂ ನುರಿತ ಪಾಕಪ್ರವೀಣರಿಂದ ಮಾತ್ರ ಸಾಧ್ಯ. ಹದವಾಗಿ ಒತ್ತಿ, ಗುಂಡಗಿನ ಆಕಾರಕ್ಕೆ ತರಬೇಕು, ಜತನವಾಗಿ ಪೇರಿಸಬೇಕು. ಅದೊಂದು ಕೌಶಲ್ಯ. ಬಡಿಸುವಾಗಲೂ ಅಷ್ಟೇ ಎಚ್ಚರ ಬೇಕು. ಬಲ ಪ್ರಯೋಗಿಸಿದರೆ ಅದು ಚೂರಾಗದು, ಪುಡಿಯಾಗಿ ಒದ್ದೆಯಾಗಿರುವ ಎಲೆಗೆ ಅಂಟಿಕೊಂಡು ತಿನ್ನಲು ಸಾಧ್ಯವಾಗದು. ಈ ಲಾಡಿನ ಚೂರನ್ನು ಬಾಯಿಯಲ್ಲಿ ಹಾಕಿಕೊಂಡರೆ ಅನುನಾಸಿಕ ಅಕ್ಷರಗಳನ್ನು ಉಚ್ಚರಿಸುವುದು ಅಸಾಧ್ಯ. ವಾಕ್ ಪಟುಗಳು ಟಾಕ್ ಮಾಡುವಾಗಲೂ ಅವರೆದುರು ಇರದಿರುವುದು ಸೂಕ್ತ. ಇಲ್ಲವಾದರೆ ಅವರ ಉಗುಳುಗಳು ಮಾತಿಗಿಂತ ಜಾಸ್ತಿಯಾಗಿ ನಿಮ್ಮನ್ನು ಅಪ್ಪಳಿಸುತ್ತವೆ.
ಅದಕ್ಕೇ ಲಾಡನ್ನು ಲಡ್ಡು ಎಂದೂ ಕರೆಯುವುದು. ಲಡ್ಡು ಎಂದರೆ ಕುಂದಾಪುರ ಭಾಷೆಯಲ್ಲಿ ಶಿಥಿಲವಾದದ್ದು, ಗಟ್ಟಿಯಿಲ್ಲದ್ದು ಎಂದರ್ಥ. ಮರ ಹಳೆಯದಾಗಿ ಮುಟ್ಟಿದರೆ ಪುಡಿಯಾಗುವಂತಿದ್ದರೆ ಅದು ಲಡ್ಡಾಗಿದೆ ಎನ್ನುತ್ರಾರೆ.
ನಾನು ಆಗ ಬೀಜ ಹೊರಗಿರುವ ಒಂದೇ ಒಂದು ಹಣ್ಣು ಯಾವುದೆಂದು ಕೇಳಿದ್ದೆನಲ್ಲವೇ? ಅದೇ ಗೋಡಂಬಿ ಅಥವಾ ಗೇರು.
ಅತಿಥೇಯರು ಸ್ವತಃ ಬಂದು ನಿಮ್ಮನ್ನು ಮತ್ತೊಮ್ಮೆ ವಿಚಾರಿಸುತ್ತಾರೆ. ಭೋಜನದ ನಂತರ ನಿಮ್ಮ ಮುಖದಲ್ಲಿ ಸಂತೋಷದ ಗೆರೆಗಳು ಕಾಣಿಸಿಕೊಂಡರೆ ತಮ್ಮ ಶ್ರಮ ಸಾರ್ಥಕವಾಯಿತೆಂದು ಅವರು ಭಾವಿಸುತ್ತಾರೆ.
ಅರೆ, ಅದಾರೋ ಶ್ಲೋಕವೊಂದನ್ನು ಏರು ಕಂಠದಲ್ಲಿ ಹೇಳುತ್ತಿದ್ದಾರಲ್ಲವೇ? ಹೌದು, ಅದು ಚೂರ್ಣಿಕೆ, ಮುಖ್ಯವಾಗಿ ಯಾವುದೋ ದೇವರ ಪ್ರಶಂಸೆ. ತಮಗೆ ಅನ್ನ ಕೊಟ್ಟ ದೇವರೇ, ನಿನಗೆ ವಂದನೆ ಎಂಬ ಕೃತಜ್ಞತೆಯೂ ಆಗಿರಬಹುದು. ಹೇಳಿದ ನಂತರ ಎಲ್ಲರೂ ಜೋರಾಗಿ ಹರ ಹರ ಮಹಾದೇವ ಎಂದು ಉಚ್ಚ ದನಿಯಲ್ಲಿ ಹೇಳುತ್ತಾರೆ, ಅದು ಬಿಗಿದ ಹೊಟ್ಟೆಯನ್ನು ಸಡಿಲಗೊಳಿಸುವ ವಿಧಾನವೂ ಹೌದು.
ಭಕ್ಷ್ಯಗಳ ನಂತರ ಪಾಯಸ, ವಿಶೇಷವಾಗಿ ಗೋದಿ, ರವೆ ಅಥವಾ ಕಡಲೆಬೇಳೆಯದು, ಕಬ್ಬಿನ ಹಾಲಿನದ್ದೂ ಮಾಡಬಹುದು. ಪರಡಿ ಪಾಯಸ ಕರಾವಳಿಯಲ್ಲಿ ಫೇಮಸ್ಸು. ಅಕ್ಕಿಯನ್ನು ಕಾಯಿಯೊಂದಿಗೆ ರುಬ್ಬಿ ಬೂಂದಿ ಜಾಲರಿಯಲ್ಲಿ ಕುದಿಯುವ ಬೆಲ್ಲದ ಪಾಕಕ್ಕೆ ಬಿಟ್ಟರೆ ಬೂಂದಿಯಂತಹ ಕಾಳುಗಳು ಉಂಟಾಗುತ್ತವೆ. ಪಾಯಸಕ್ಕೆ ಸಕ್ಕರೆ ಅಥವಾ ಬೆಲ್ಲ ಬೇಕು. ಏಲಕ್ಕಿಯ ಸುವಾಸನೆ ಅಪೇಕ್ಷಣೀಯ.
ದಾಸರದು ಬಲು ವಿಚಿತ್ರ ಪದ್ಧತಿ. ರಾಮನಾಮ ಪಾಯಸಕ್ಕೆ ಕೃಷ್ಣ ರಾಮ ಸಕ್ಕರೆ, ವಿಠಲ ನಾಮ ತುಪ್ಪ ಬೆರಸಿ ಬಾಯಿ ಚಪ್ಪರಿಸುವವರು.
ನಂತರ ಮೊಸರು, ಒಂದು ಸೌಟು. ಅದರ ಹಿಂದೇ ಬರುತ್ತದೆ, ’ಬೆರಸಿದ ಮಜ್ಜಿಗೆ’. ಮೊಸರನ್ನು ಕಡೆದು ಜಿಡ್ಡನ್ನು ತೆಗೆದು, ಇಂಗು, ಶುಂಠಿ, ಹಸಿಮೆಣಸಿನ ಕಾಯಿ ಜೊತೆಗೆ ಕುತ್ತುಂಬರಿ ಸೊಪ್ಪು ಬೆರೆಸಿದರೆ ಮೂಗು ಎಳೆದುಕೊಂಡು ಬರಬೇಕೆನ್ನುವಷ್ಟು ಸುವಾಸಿತ ಮಜ್ಜಿಗೆ. ಅದು ದಪ್ಪವೇನೂ ಇರಬೇಕಿಲ್ಲ: ಗಾದೆಯೇ ಇಲ್ಲವೇ, ನೀರಾದರೂ ಮಜ್ಜಿಗೆ, ಹುಚ್ಚಾದರೂ ತಾಯಿ ಎಂತ? ಇದು ಜೀರ್ಣಕಾರಿ. ಇಂತಹ ಮಜ್ಜಿಗೆ ಇಂದ್ರನಿಗೂ ದೊರಕದು. ತಕ್ರಂ ಶಕ್ರಸ್ಯ ದುರ್ಲಭಂ.
ಉಪ್ಪಿನ ಕಾಯಿ ನೆಂಜಿಕೊಂಡು ಮೊಸರನ್ನ ಮೆದ್ದಾಯಿತಲ್ಲ? ಉಪ್ಪಿನ ಕಾಯಿಯ ಹೆಸರಿರುವ ಒಂದು ಕನ್ನಡ ಗಾದೆ ಇದೆ. ಅದು ಉಪ್ಪಿನ ಕಾಯಿಗೆ ಸಂಬಂಧಿಸಿದ್ದಲ್ಲ. ಕಾಲ ಮೀರಿದರೆ ಕೆಲ ವಸ್ತುಗಳಿಗೆ ಮೌಲ್ಯವಿಲ್ಲ ಎಂಬ ಅರ್ಥದ್ದು ಅದು.
ಇನ್ನೂ ನೆನಪಾಗಿಲ್ಲವೇ? ಹಾಗಿದ್ದರೆ ಓದಿ, ’ಊಟಕ್ಕಿಲ್ಲದ ಉಪ್ಪಿನಕಾಯಿ …ಟಕ್ಕೆ ಸಮ,’ ಎಂಬುದದು. ವಿವರಣೆ ಬೇಕಿಲ್ಲ ಅಲ್ಲವೇ? ಸೋಮೇಶ್ವರನು ಶತಕವನ್ನು ಬರೆಯುವಾಗ ಉಪ್ಪಿನಕಾಯಿಯನ್ನು ನೆನಪಿಸಿಕೊಳ್ಳದಿರಬಹುದು. ಆದರೆ ’ಕಾಲೋಚಿತಕ್ಕೈದಿದಾ ತೃಣವೇ ಪರ್ವತವಲ್ಲವೇ,’ ಎಂದಿರುವುದು ಮೊಸರು-ಅನ್ನಗಳ ನಂತರ ಬರುವ ಉಪ್ಪಿನಕಾಯಿಗೆ ಹೆಚ್ಚು ಹೊಂದಿಕೆಯಾಗುತ್ತದೆ, ಅಲ್ಲವೇ?
ನೆನಪಾಗುತ್ತಲೇ ಬಾಯಿ ಙಮ ಙನ ಅನ್ನುವ, ಬಾಯಿಯಲ್ಲಿ ಸಿಕ್ಕಾಪಟ್ಟೆ ಲಾಲಾರಸ ಹುಟ್ಟಿಸುವ ಉಪ್ಪಿನಕಾಯಿ ತಿನ್ನುವಾಗ ಇತಿಮಿತಿ ಇರಲಿ. ಹೆಚ್ಚು ತಿಂದರೆ ಅದರ ಪ್ರಭಾವ ಮರುದಿನದ ಬೆಳಗ್ಗೆ ಆಗುವುದು ಖಂಡಿತ.
ಉದರ ಭರ್ತಿಯಾಯಿತು, ಇನ್ನೇನು, ಏಳೋಣ ಎಂದುಕೊಂಡಿರಾ? ನಿಜವೇ ಸ್ವಾಮಿ, ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಎಂಬ ದಾಸರ ಮಾತು ಅದನ್ನೇ ಧ್ವನಿಸುತ್ತದೆ. ಆದರೆ ಎಷ್ಟು ಕಾಲ? ಉದರವೆಂಬ ಬಕಾಸುರನು ಅಲ್ಪ ತೃಪ್ತ. ಕೆಲವೇ ಗಂಟೆ, ಮತ್ತೆ ಹಸಿವೆಂಬ ರಕ್ಕಸ ಕಾಣಿಸಿಕೊಳ್ಳುತ್ತಾನೆ.
ಅದು ಸರಿ ಸ್ವಾಮಿ, ಅಶನ-ವಸನ ಇದ್ದೋನಿಗೆ ವ್ಯಸನ ಯಾಕೆ ಎಂಬ ಗಾದೆಯೂ ಅದನ್ನೇ ಹೇಳುತ್ತದೆ. ಆದರೆ ಹಾಗೆ ಮಧ್ಯದಲ್ಲಿಯೇ ಏಳುವಂತಿಲ್ಲ. ನಿಮ್ಮ ಕೈಯಲ್ಲಿರುವ ಆಹಾರದ ತುಣುಕುಗಳು ಸಾಲಲ್ಲಿ ಕುಳಿತಿರುವ, ಇನ್ನೂ ಉಣ್ಣುತ್ತಿರುವ ಇತರರ ಎಲೆಯ ಮೇಲೆ ಬೀಳಬಹುದು. ಹಾಗಾಗಿ ಎಲ್ಲರೂ ಒಮ್ಮೆಗೇ ಎದ್ದು, ಸಾಲಾಗಿ ಹೋಗಿ ಕೈ ತೊಳೆದುಕೊಳ್ಳುವುದು ಸೂಕ್ತ.
ಕೈ ತೊಳೆದುಕೊಂಡು ಹಿಂತಿರುಗುವಾಗ ಎಚ್ಚರವಾಗಿರಿ, ಎದುರಿನಿಂದ ಬರುವ ಜನರ ಎಡ ಭಾಗದಲ್ಲಿಯೇ ಬರುವುದು ಸೂಕ್ತ. ಯಾಕೆಂದರೆ ಬಲಗೈ ಎಂಜಲಿನಿಂದ ಕೂಡಿರುತ್ತದೆ, ನಿಮ್ಮ ಬಟ್ಟೆ ಗಲೀಜಾಗಬಹುದು.
ಮನುಷ್ಯ ಮತ್ತು ಪ್ರಾಣಿಗಳ ಆಹಾರ ಸೇವನೆಯನ್ನು ಪರಿಶೀಲಿಸಿದ್ದೀರಾ? ಯಾವುದೇ ಪ್ರಾಣಿಯೂ ಹೊಟ್ಟೆ ಭರ್ತಿಯಾದ ಮೇಲೆ ತಿನ್ನುವುದಿಲ್ಲ, ಮನುಷ್ಯನನ್ನು ಬಿಟ್ಟು. ಅದಕ್ಕಾಗಿಯೇ ನಿಮ್ಮನ್ನು ಕಾದಿರುತ್ತದೆ, ಎಲೆ ಅಡಿಕೆ, ಐಸ್ ಕ್ರೀಮ್, ಬಾಳೆ ಹಣ್ಣು, ಇತ್ಯಾದಿ. ನಾವು ಉಣ್ಣುವ ಹೆಚ್ಚಿನ ಆಹಾರಗಳು ಬಲಗೈಯಿಂದ ಶುರುವಾಗಿ ಎಡಗೈಯಲ್ಲಿ ಕೊನೆಗಾಣುತ್ತವೆ, ಅಂದರೆ ದೇಹಕ್ಕೆ ಬೇಕಾಗುವುದಿಲ್ಲ. ಆದರೂ ನಾವು ತುಂಬುವುದನ್ನು ಬಿಟ್ಟಿಲ್ಲ.
ತೊಟ್ಟಿಲು ತೂಗಿದ ನಂತರ ಅಂಡು ಚಿವಿಟು ಕೆಲಸ ಮಾಡುತ್ತೇನೆ. ಒಂದೇ ಒಂದು ಸಲ ಜನ ಊಟ ಮಾಡಿದ ಎಲೆಯತ್ತ ನಿಮ್ಮ ದೃಷ್ಟಿ ಹಾಯಿಸಿ. ಬರಗಿ ಉಣ್ಣುವವರ ಪ್ರಮಾಣ ಎಷ್ಟು? ರಾಶಿ ರಾಶಿ ಆಹಾರ ಸಾಮಗ್ರಿಗಳು ಅನಾಥವಾಗಿ ಎಲೆಯಲ್ಲಿ ಬಿದ್ದಿವೆ. ತುಸು ಸೆನ್ಸಿಟಿವ್ ಆಗಿದ್ದರೆ ನಿಮಗೆ ಅವುಗಳ ಆಕ್ರಂದನ ಕೇಳಿಸುತ್ತದೆ. ಮೊಳೆ ಒಡೆದು, ಬೆಳೆದು ಕಾಳಾಗಿ, ಸಂಸ್ಕರಿಸಲ್ಪಟ್ಟು ನಿಮ್ಮ ಹೊಟ್ಟೆ ಸೇರನು ತಾವು ಎಷ್ಟು ಸಮಯ-ಶ್ರಮ ತೆಗೆದುಕೊಂಡಿದ್ದೇವೆ. ನೀವು, ಒಂದೇ ಒಂದು ಕ್ಷಣದಲ್ಲಿ ನಮ್ಮನ್ನು ಚರಂಡಿ ಪಾಲು ಮಾಡುತ್ತಿದ್ದೀರಲ್ಲ, ಎಂದು ಅವುಗಳು ಕೊರಗುವುದನ್ನು ಕೇಳಿ. ತುಸು ಯೋಚಿಸಿ, ಕಾಳು ಬೆಳೆಯಲು ವರ್ಷ ಬೇಕು, ಅನ್ನ ಚೆಲ್ಲಲು ಕೇವಲ ಒಂದು ನಿಮಿಷ ಸಾಕು.
ಈ ಜಗತ್ತಿನಲ್ಲಿ ಸಾವಿರಾರು ಜನ ಆಹಾರವಿಲ್ಲದೇ ಸಾಯುತ್ತಾರೆ. ಈ ಎಲೆಗಳಲ್ಲಿ ತಿನ್ನದೇ ಉಳಿಸಿದ ಆಹಾವರನ್ನು ನೋಡಿ ನಿಮಗೆ, ನೀವು ಹೃದಯವಂತರಾಗಿದ್ದರೆ ಮರುಗುವುದಿಲ್ಲವೇ?
ಒಂದು ಹೊತ್ತು ನಿರಶನ ಮಾಡಿ. ನಿಮ್ಮ ಹೊಟ್ಟೆಯಲ್ಲಿ ಉಂಟಾಗುವ ತಳಮಳಗಳು ಪಂಚೇಂದ್ರಿಯಗಳನ್ನೂ ತಟ್ಟಿಬಿಡುತ್ತವೆ. ಅಂಗಾಂಗಗಳು ಶಕ್ತಿಹೀನವಾಗುತ್ತವೆ. ಮಿದುಳು ಕೆಲಸ ಮಾಡುವುದಿಲ್ಲ. ಆಗ ಯೋಚಿಸಿ, ಅನ್ನಬ್ರಹ್ಮನ ಮೌಲ್ಯವನ್ನು. ಸರ್ವಜ್ಞನ ಮಾತುಗಳಲ್ಲಿ ಹೇಳಬೇಕಾದರೆ: ನಿದ್ದೆಗಳು ಬಾರವು, ಬುದ್ಧಿಗಳು ತೋರವು, ಮುದ್ದಿನ ಮಾತು ಸೊಗಸದು ಬೋನದ ಮುದ್ದೆ ತಪ್ಪಿದರೆ….
ಈ ಲೇಖನ ಓದಿದ ನೀವು ಆಹಾರವನ್ನು ವ್ಯರ್ಥ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ ಲೇಖಕನ ಶ್ರಮ ಸಾರ್ಥಕವಾದಂತೆ.
ಎರಡನೆಯ ಪಂಙ್ತಿ ಶುರುವಾಗುತ್ತದೆ. ಹೊಟ್ಟೆಯಲ್ಲಿ ಲಬೊ ಲಬೋ ಉಂಟಾಗಿರುವ ಜನರೆಲ್ಲಾ ಒಮ್ಮೆಲೇ ನುಗ್ಗುತ್ತಾರೆ. ಮೊದಲೆಲ್ಲಾ ಕೊನೆಯ ಸಾಲಿಗೆ ಬಡಿಸಲು ಹೆಂಗಸರು ಬರುತ್ತಿದ್ದರು. ಈಗ ಅವರು ಬರುತ್ತಿಲ್ಲವಾಗುವುದಕ್ಕೆ ಕಾರಣ ಉಟ್ಟ ದುಬಾರಿ ಸೀರೆ ಮತ್ತು ಟಿವಿಗಳಲ್ಲಿ ಬರುವ ಸೀರಿಯಲ್‌ಗಳು ಕಾರಣ.
ಹೋಗುವ ಮೊದಲು ನಿಮ್ಮ ಅತಿಥೇಯರಿಗೆ ಒಂದು ಪ್ರಶಂಸೆಯ ನುಡಿ, ಒಂದು ಕೃತಜ್ಞತೆಯ ಮಾತು ಬರದಷ್ಟು ಶಬ್ದ ದಾರಿದ್ರ್ಯ, ಚಾರಿತ್ರ್ಯ ದಾರಿದ್ರ್ಯವನ್ನು ನೀವು ಹೊಂದಿಲ್ಲವೆಂದುಕೊಂಡಿದ್ದೇನೆ. ಅವರು ನಿಮಗೆ ಭೋಜನ ನೀಡಲು ಎಷ್ಟು ಶ್ರಮ ಎಷ್ಟು ಧನ ವ್ಯಯಿಸಿದ್ದಾರೆ ಎಂಬುದನ್ನು ಪರಿಗಣಿಸಿದರೆ ನೀವು ಅವರಿಗೆ ಸದಾ ಋಣಿಯಾಗಿರಬೇಕು. ತಾಯಿಯು ಮಕ್ಕಳು ಎಷ್ಟೇ ಉಂಡರೂ ಕಡಿಮೆಯೇ ಉಂಡಿದ್ದಾನೆ/ಳೆ ಎಂದು ಭಾವಿಸುವದಿಲ್ಲವೇ, ಹಾಗೆಯೇ ಸಹೃದಯಿ ಅತಿಥೇಯರು ಸದಾ ಆತಂಕದಿಂದ ಇರುತ್ತಾರೆ, ’ಊಟ ಹೇಗಿದೆಯೋ ಏನೋ’, ’ವ್ಯವಸ್ಥೆಯಲ್ಲಿ ಏನಾದರೂ ಲೋಪ ಇರಬಹುದೋ ಏನೋ,’ ಎಂದು. ಎಲ್ಲರನ್ನೂ ತೃಪ್ತಿ ಪಡಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೂ ನಿಮ್ಮ ಬಾಯಿಯಿಂದ ಬರುವ, ’ಹೊಡಿ ಹಾರಿಸಿದ್ರಿ ಮರಾಯ್ರೆ’ ಎಂಬ ಮಾತು ಅವರನ್ನು ಖುಷಿಪಡಿಸುತ್ತದೆ. ಅಷ್ಟಾದರೂ ಮಾಡಿ.
ಕೊನೆಯಲ್ಲಿ ಈ ಅಡುಗೆಯ ಲೇಖನ ರುಚಿಕಟ್ಟಾಗಿದೆಯೇ ಅಥವಾ ರುಚಿ ಕೆಟ್ಟದಾಗಿದೆಯೇ?
*****
ನಿಮ್ಮೀ ಬರಹ, ಹಾಸ್ಯ, ವ್ಯಂಗ್ಯ ಹಾಗೂ ಕಳಕಳಿಯಿಂದ ಕೂಡಿದ ರುಚಿಕಟ್ಟಾದ ಭೋಜನ! ಅಂದ ಹಾಗೆ 'ಯಾವುದೇ ಪ್ರಾಣಿಯೂ ಹೊಟ್ಟೆ ಭರ್ತಿಯಾದ ಮೇಲೆ ತಿನ್ನುವುದಿಲ್ಲ, ಮನುಷ್ಯನನ್ನು ಬಿಟ್ಟು' ನಿಜವಾಗಿಯೂ ಇದೊಂದು ವಿಚಿತ್ರವಾದರೂ (ಕಟು)ಸತ್ಯವಾದ ಸಂಗತಿ!
ಸೂರಿ ಅವರೇ ಬಹಳ ದಿನಗಳ ನಂತರ ನಿಮ್ಮ ಲೇಖನ ಓದಿದೆ , ತುಂಬಾ ಚೆನ್ನಾಗಿದೆ , ನಿಮ್ಮ ಬಾಯಲ್ಲಿ ಹೇಳುವಂತೆ ಖಾರದ item ತಿಂದ ಹಾಗೆ ಒಂದರ ರ ಮೇಲೊಂದು (ಲೇಖನ ) (ತಿಂ )ಬಂದರೂ ಚೆನ್ನ 🙂
Thank you