ಹೊಟ್ಟೆ!:ಪ್ರಶಸ್ತಿ ಪಿ.ಸಾಗರ

 

 

 

 

 

 

 

 

 

"ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ.." ಅನ್ನೋ ಪುರಂದರದಾಸರ ಕೀರ್ತನೆ ನೆನಪಾಗುತ್ತಿತ್ತು. ಇದಕ್ಕೆ ಕಾರಣ ನಿನ್ನೆ ರಾತ್ರೆ ಗೆಳೆಯನ ಮನೆಗೆ ಹೋಗಿ ಅವನ ಅನಿರೀಕ್ಷಿತ ಒತ್ತಾಯಕ್ಕೆ ಮಣಿದು ಹತ್ತಿದ ನಳಪಾಕಕ್ಕೂ ಬಯ್ಯಲಾರದೇ ಹೋದ ಅರ್ಧ ತುಂಬಿದ ಹೊಟ್ಟೆಯೋ ಇಂದು ಬೆಳಗ್ಗೆಯ ಗಡಿಬಿಡಿಯ ತಿಂಡಿಯೋ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ದಕ್ಕಿದ ಅರೆಹೊಟ್ಟೆ ಮೊಸರನ್ನವೋ ಗೊತ್ತಿಲ್ಲ. ಮಧ್ಯಾಹ್ನ ಹನ್ನೆರಡಾಗೋವಷ್ಟರಲ್ಲೇ ತನ್ನ ಇರುವ ಸಾರುತ್ತಿದ್ದ ಹೊಟ್ಟೆ ಟ್ರಿಪ್ಪು ಟ್ರಿಪ್ಪೆಂದು ಹುಚ್ಚನಂತೆ ಅಲೆಯುತ್ತಿದ್ದಾಗ ಅಲೆಮಾರಿಯ ಸಾಥಿ ಮರಿಯಲೆಮಾರಿಯಾಗಿ ಮೂರೂವರೆಯಾದರೂ ತನ್ನ ಇರುವಿಕೆಯನ್ನೇ ಮರೆತುಬಿಡುತ್ತಿತ್ತು.ನಮ್ಮ ಕಡೆಯೊಂದು ಮಾತಿದೆ. ಹಡಗು ತುಂಬೋಕೆ ಹೋದವನು ಬಂದನಂತೆ.ಹೊಟ್ಟೆ ತುಂಬೋಕೆ ಬರಲಿಲ್ಲವಂತೆ. ಹೊಟ್ಟೆಯೆಂದಾಕ್ಷಣ ಪ್ರತೀ ದಿನ ಒಂದು ಬಂಡಿ ಅನ್ನ ಮತ್ತು ಒಬ್ಬ ಮನುಷ್ಯನನ್ನು ತಿಂದು ತೇಗುತ್ತಿದ್ದ ಬಕಾಸುರ, ಅವನ ಇಡೀ ಬಂಡಿ ಅನ್ನವನ್ನು ತಿಂದು ಅವನನ್ನೂ ಕೊಂದ ಭೀಮಸೇನ, ಆರು ತಿಂಗಳು ಮಲಗಿ ಎದ್ದ ನಂತರ ಬಂಡಿಗಟ್ಟಲೇ ಅನ್ನ ತಿನ್ನುತ್ತಿದ್ದ ಕುಂಭಕರ್ಣ.. ಹೀಗೆ ಹಲವು ಪ್ರಸಂಗಗಳು ನೆನಪಾಗುತ್ತೆ. ಅಷ್ಟೆಲ್ಲಾ ಹಿಂದೆ ಹೋಗೋದೇಕೆ ಜನರ ಅನ್ನವನ್ನು ತಿಂದು ಹೊಟ್ಟೆ ತುಂಬದೇ ದನಗಳ ಕೋಟಿ ಕೋಟಿ ರೂ ಮೇವನ್ನೂ ತಿಂದು ನೀರು ಕುಡಿದ ಪುಣ್ಯಾತ್ಮರು, ಬಡವರು ರಕ್ತ ಹೀರಿ ಸಂಪಾದಿಸಿದ ದುಡ್ಡನ್ನು ಕಸಿಯೋ, ಸಾಮಾನ್ಯರ ತಲೆಯ ಮೇಲೆ ಹೊರೆಗಟ್ಟಲೇ ತೆರಿಗೆ ಹೊದಿಸಿದ ದುಡ್ಡನ್ನು ನುಂಗೋದಲ್ಲದೇ ರಸ್ತೆ, ಲೈಟು, ನೀರಂತಹ ಸೌಲಭ್ಯಗಳಿಗೆ ಮಂಜೂರು ಮಾಡಿರೋ ದುಡ್ಡನ್ನೂ ಗುಳುಂಮೆನಿಸೋ ಮಹಾಮಹಿಮರ ಬೆಲ್ಲಿ ಡ್ಯಾನ್ಸ್ ನೆನಪಾಗುತ್ತದೆ ! ಹೊತ್ತು ತುತ್ತಿಗೂ ಗತಿಯಿಲ್ಲದೇ ರಟ್ಟೆ ಸುರಿಸಿ ಕೂಲಿ ಕೆಲಸ ತಾವು ಮಾಡ್ತಿರೋದು ಹೊಟ್ಟೆಗಾಗೇ ಎನ್ನೋದು ಸರಿ. ಆದರೆ ಈ ಮಹಾಮಹಿಮರೂ  ಅಂದರೆ! ಕೂತು ತಿಂದರೂ ಏಳು ತಲೆಮಾರಿನ ಊಟಕ್ಕೆ ತೊಂದರೆಯಿಲ್ಲವೆಂದು ಹೊಟ್ಟೆಗೆ ಹೋಲಿಸಿಯೇ ಹೇಳುವಾಗ ಮಹಾಮಹಿಮರ ಮಾತು ಯಾವ ರೀತಿಯಲ್ಲಿ ಸತ್ಯವೆಂಬುದು ಅರ್ಥವಾಗುತ್ತದೆ!  ಬಡವರು ಬರದಲ್ಲಿ , ಚಳಿಯಲ್ಲಿ ಹೊಟ್ಟೆಗಿಲ್ಲದೇ ಸಾಯುತ್ತಿದ್ದರೂ ಫೈವ್ ಸ್ಟಾರ್ ಪಾರ್ಟಿ ಮಾಡೋ, ಭೋಜನಕೂಟ ಮಾಡೋ ಮಹಿಮರನ್ನು, ಅಪೌಷ್ಟಿಕತೆಯಿಂದ ಹೊಟ್ಟೆ ಬೆನ್ನಿಗಂಟಿರುವಂತೆ ಕಾಣುವ ಬಡ ಮಕ್ಕಳು ಒಂದೆಡೆಯಾದರೆ ದಿನಾ ತಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅನ್ನ ಚೆಲ್ಲಿ , ಹೊಟ್ಟೆ ಬಂತೆಂದು ಜಿಮ್ಮಿಗೆ ಹೋಗೋ ಪುಣ್ಯಾತ್ಮರನ್ನು.. ಹೀಗೆ ವಿವಿಧ ರೀತಿಯ ಹೊಟ್ಟೆಯ ವೈರುಧ್ಯಗಳನ್ನು ತೆಗಳುತ್ತಾ ಹೋದರೆ ಬೇಕಾದಷ್ಟಾಗುತ್ತದೆ. ಪುಟಗಟ್ಟಲೆ ಬರೆದ ಸಾಲುಗಳೂ, ಭಾವಗಳೂ ರಾವಣನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತೆ ಗೌಣವಾಗುತ್ತದೆ. ದೊಡ್ಡಣ್ಣನಂತೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋದು ಸಾಧ್ಯವಾಗದಿದ್ದರೂ ಜ್ವಲಂತ ಸಮಸ್ಯೆಗಳ ಬಗ್ಗೆ ಬರೆದು, ಇನ್ಯಾವುದೋ ದೇಶದ ಒಳ್ಳೆಯತನವನ್ನು , ನಮ್ಮಲ್ಲಿನ ದಾರಿದ್ರ್ಯವನ್ನು ತೆಗಳಿ ಹೊಟ್ಟೆ ಉರಿಸದೇ ಇರುವುದು ಮೇಲನಿಸುತ್ತೆಂಬ ಧೃಢ ನಂಬಿಕೆಯೇ ಒಂದಿಷ್ಟು ಮಾತು, ಹರಟೆಗೆ ದನಿಯಾಗಿದೆ ಇಂದು.

ಹಿಂದೂ ಪುರಾಣದಲ್ಲಿ ಹೊಟ್ಟೆಯೆಂದರೆ ನೆನಪಾಗೋದು ಗಣೇಶ. ಗಣಪನ ಹೊಟ್ಟೆ ಒಮ್ಮೆ ಒಡೆದುಹೋಯಿತಂತೆ. ಅದಕ್ಕೇ ಅವ ಹೊಟ್ಟೆಗೆ ಹಾವು ಬಿಗಿದುಕೊಂಡನಂತೆ ಅನ್ನುವುದರಿಂದ ಅವನಿಗೆ ಕಡುಬು, ಮೋದಕ, ಕರ್ಜೀಕಾಯಿ, ಪಂಚಕಜ್ಜಾಯ .. ಹೀಗೆ ತರತರದ ಸಿಹಿ ಸಮರ್ಪಿಸುವವರೆಗೆ ಹಲವು ಕತೆಗಳು. ಅವನ ಎಂದಿನ ವಾಹನ ಇಲಿಯನ್ನು ಬಿಟ್ಟು ಸಿಂಹಾಸನದ ಮೇಲೆ ಕುಳ್ಳಿರಿಸಿ, ನಿಲ್ಲಿಸಿ , ಕೈಗೆ ನೇಗಿಲು, ರೈಫಲ್ಲು, ಮಚ್ಚು ಹೀಗೆ ಮನಸ್ಸಿಗೆ ಬಂದ ಆಯುಧ ಕೊಟ್ಟು ಚಿತ್ರಿಸಿ, ಅವಾಂತರ ಮಾಡಿದರೂ ಗಣಪನ ಹೊಟ್ಟೆಯ ಮೇಲೆ ಮಾತ್ರ ಯಾರ ಕಣ್ಣೂ ಬಿದ್ದಿಲ್ಲ. ಹಿಂದೂ ದೇವತೆಗಳಲ್ಲಿ ದೊಡ್ಡ ಹೊಟ್ಟೆ ಹೊತ್ತ ದೇವರು ಗಣೇಶನೊಬ್ಬನೇ ಅಲ್ಲವೇ ? ಹಾಗಾಗಿ ಇವರ ಅವಾಂತರದ ವೇಷಗಳ ನಡುವೆವೂ ಹೊಟ್ಟೆಯ ಬಲದ ಮೇಲೆ ಜನ ಅದು ಗಣೇಶನೆಂದು ಗುರ್ತಿಸಿಯೇ ಗುರ್ತಿಸುತ್ತಾರೆಂಬ ಧೃಢ ನಂಬಿಕೆ ಅವರದ್ದು ! ಹೊಟ್ಟೆಯೆಂದಾಕ್ಷಣ ಪುರಾಣದಲ್ಲಿ ಅಗಸ್ತ್ಯ ಮತ್ತು ವಾತಾಪಿ, ಇಲ್ವಲರ ಪ್ರಸಂಗ ನೆನಪಾಗುತ್ತದೆ. ಆಗೆಲ್ಲಾ ಮಾಸಾಂಹಾರ ಕೆಲವರ್ಗಗಳಿಗೆ ನಿಶಿದ್ದವೆಂಬೋ ಪರಿಕಲ್ಪನೆಯಿರಲಿಲ್ಲವೆಂಬೋ ಅಡಿಟಿಪ್ಪಣಿಯೊಂದಿಗೆ ಆ ಪ್ರಸಂಗ..ವಾತಾಪಿ ಕುರಿಯ ವೇಷ ಧರಿಸಿ, ಇಲ್ವಲ ಅವನ ಅಣ್ಣನಾಗಿ ಬ್ರಾಹ್ಮಣರನ್ನ ಊಟಕ್ಕೆ ಕರೆದು ಮೋಸಗೊಳಿಸುತ್ತಿದ್ದರಂತೆ.  ಭ್ರಾಹ್ಮಣರನ್ನು ಊಟಕ್ಕೆ ಕರೆಯುತ್ತಿದ್ದ ಅಣ್ಣ ಕುರಿಯ ವೇಷದಲ್ಲಿರುತ್ತಿದ್ದ ತನ್ನ ತಮ್ಮನನ್ನು ಕಡಿದು ಅವರಿಗೆ ಉಣಬಡಿಸುತ್ತಿದ್ದನಂತೆ. ಉಂಡ ನಂತರ ವಾತಾಪಿ ಹೊರಗೆ ಬಾ ಅನ್ನುತ್ತಿದ್ದನಂತೆ ಅಣ್ಣ. ಆ ವಾತಾಪಿ ಉಂಡವರ ಹೊಟ್ಟೆ ಬಗೆದು ಹೊರಬರುತ್ತಿದ್ದನಂತೆ. ಅಗಸ್ತ್ಯರ ಸಂದರ್ಭದಲ್ಲೂ ಹೀಗೇ ಆಯಿತು. ಆದರೆ ಅವರಿಗೆ ವಾತಾಪಿ ಕುರಿಯಾಗಿದ್ದ ಸಂಗತಿ ತಿಳಿದುಹೋಯಿತು. ಊಟವಾದ ನಂತರ ಅವರು ತಮ್ಮ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ವಾತಾಪಿ ಜೀರ್ಣವಾಗು ಅಂದರಂತೆ. ಅವರ ತಪ:ಶ್ಯಕ್ತಿಗೆ ವಾತಾಪಿ ಅಲ್ಲೇ ಇಲ್ಲವಾದ. ಅವರು ಹೊಟ್ಟೆಯಲ್ಲಿದ್ದ ರಕ್ಕಸನನ್ನೇ ಕರಗಿಸಿದರೆ ಈಗಿನವರಿಗೆ ಹೊಟ್ಟೆ ಕರಗಿಸುವುದೇ ದೊಡ್ಡ ಚಿಂತೆ.  ಸ್ವಲ್ಪ ಹೊಟ್ಟೆ ಬಂತೆಂದರೆ ವಿಪರೀತ ತಲೆ ಕೆಡಿಸಿಕೊಳ್ಳುವ,ಡುಮ್ಮಣ್ಣ, ಡುಮ್ಸಿ, ಫುಟಬಾಲ್, ಡ್ರಮ್ಮು ಹೀಗೆ ಸ್ವಲ್ಪ ಹೊಟ್ಟೆ ಬಂದವರೆಲ್ಲಾ ಅಪಹಾಸ್ಯಕ್ಕೆ ಈಡಾದರೂ  ಈ ಹೊಟ್ಟೆಯಿಲ್ಲದಿದ್ದರೆ ಕನ್ನಡ ಹಾಸ್ಯಲೋಕ ಸೊರಗಿ ಹೋಗುತ್ತಿತ್ತೇನೋ ಅನಿಸಿಬಿಡುತ್ತೆ ಕೆಲವೊಮ್ಮೆ.  ತಮ್ಮ ಹೊಟ್ಟೆಯ ವಿಲಕ್ಷಣತೆಯೇ ಸೌಂದರ್ಯವೆಂಬಂತೆ ಪ್ರಖ್ಯಾತರಾದ ದೊಡ್ಡಣ್ಣ, ಬುಲೆಟ್ ಪ್ರಕಾಶ್, ರಂಗಾಯಣ ರಘು ವರನ್ನು ಮರೆಯೋದಾದರೂ ಹೇಗೆ ? ಇಂಗ್ಲೀಷಿನ ಶಾಯಲಿನ್ ಸಾಕರ್ ಎಂಬ ಚಿತ್ರದಲ್ಲಿ ಬರೋ ಡುಮ್ಮ, ಸುಮೋ ಕುಸ್ತಿಪಟುಗಳು ಹೀಗೆ ಹೊಟ್ಟೆಯೆಂಬುದೇ ಒಂದು ಲುಕ್ ಕೊಟ್ಟಿದ್ದೂ ಇದೆ. 

ಹೊಟ್ಟೆಯೆಂದ ಮೇಲೆ ಅದರ ಜೈವಿಕ ಕ್ರಿಯೆಯನ್ನು ನಮ್ಮ ದೇಹರಚನಾ ವ್ಯವಸ್ಥೆಯಲ್ಲಿ ಅದರ ಮಹತ್ವವನ್ನು ಹೇಳದಿದ್ದರೆ ತಪ್ಪಾಗುತ್ತೆ. ನಾವು ನುಂಗಿದ ಆಹಾರವೆಲ್ಲವೂ ಸೀದಾ ಹೊಟ್ಟೆಗೆ ಹೋಗುತ್ತದೆ. ಅಲ್ಲಿಯೇ ಅದು ಜೀರ್ಣವಾಗುತ್ತದೆ ಎಂದುಕೊಂಡಿರುತ್ತಾರೆ ಅನೇಕರು. ಜೀವಶಾಸ್ತ್ರವನ್ನು ನೆನಪಿಸಿಕೊಂಡು ಹೇಳೋದಾದ್ರೆ ಜೀರ್ಣಕ್ರಿಯೆ ಪೂರ್ಣವಾಗಿ ಆಗೋದು ಹೊಟ್ಟೆಯಲ್ಲೇ ಅಲ್ಲ. ಆದರೆ ಹೊಟ್ಟೆ ಜೀರ್ಣಕ್ರಿಯೆಯ ಮುಖ್ಯ ಭಾಗ ಅಷ್ಟೆ. ನಾವು ಆಹಾರವನ್ನು ಜಗಿಯುವಾಗ ನಮ್ಮ ಬಾಯಲ್ಲಿನ ಎಂಜಲಿನೊಂದಿಗೆ ಆ ಆಹಾರ ಸೇರುತ್ತದೆ. ಎಂಜಲಿನೊಂದಿಗೆ ಆಹಾರ ಸೇರಿತೆಂದರೆ ಜೀರ್ಣಕ್ರಿಯೆ ಪ್ರಾರಂಭವಾಯಿತೆಂದೇ ಅರ್ಥ !! ಎಂಜಲಿನಲ್ಲಿರೋ ಸಲೈವರೀ ಅಮೈಲೇಜ಼್ ಎಂಬ ಎಂಜೈಮು ಆಹಾರದಲ್ಲಿರೋ ಗಂಜಿಯ ಅಂಶ(starch) ನ ಜೀರ್ಣಕ್ರಿಯೆಯನ್ನು ಪ್ರಾರಂಭಿಸುತ್ತದೆ. ಆಮೇಲೆ ನಾವು ನುಂಗಿದ ಆಹಾರ ಅನ್ನನಾಳದ ಮುಖಾಂತರ ಹೊಟ್ಟೆಗೆ ತಲುಪುತ್ತದೆ.ಹೊಟ್ಟೆಯಲ್ಲಿರೋ ಈ ಆಹಾರವನ್ನು ಬೋಲಸ್ ಅನ್ನುತ್ತಾರೆ.ಅನ್ನನಾಳದಿಂದ ಹೊಟ್ಟೆಗೆ ತಲುಪುವ ಈ ಆಹಾರದ ಚಲನೆಯನ್ನು ಪೆರಿಸ್ಟಾಟಿಸ್ ಚಲನೆ ಎನ್ನುತ್ತಾರೆ. ಹೊಟ್ಟೆಯಲ್ಲಿ ಸ್ರ್ವವಿಸುವ ಗ್ಯಾಸ್ಟ್ರಿಕ್ ಆಮ್ಲವು ಪ್ರೋಟೀನ್ ಜೀರ್ಣಕ್ರಿಯೆಗೆ ಕಾರಣವಾಗುತ್ತದೆಯಂತೆ. ಗ್ಯಾಸ್ಟ್ರಿಕ್ ಆಮ್ಲ ಅಂದರೆ ? ಅದು ಹೈಡ್ರೋ ಕ್ಲೋರಿಕ್ ಆಮ್ಲ ಮತ್ತು ಪೆಪ್ಸಿನ್ ಎಂಬ ಎಂಜೈಮಿನ ಸಂಗಮ. ಹೊಟ್ಟೆಯಲ್ಲಿ ಈ ತರ ದ್ರವದ ಸ್ರವಿಕೆಯೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವೇ ಎಂಬ ಡೌಟು, ಈ ಹೈಡ್ರೋಕ್ಲೋರಿಕ್ ಆಮ್ಲ ಅನ್ನೋದು ಪ್ರಬಲ ಆಮ್ಲವಲ್ಲವೇ ? ಅದರಿಂದ ಹೊಟ್ಟೆಯ ಕೋಶಗಳೇ ಸುಟ್ಟು ಹೋಗಲ್ಲವೇ ಅಂತಲೂ ಕೆಲವರಿಗೆ ಬಂದಿರಬಹುದು. ಈ ಆಮ್ಲಗಳಿಂದ ಹೊಟ್ಟೆಯ ಕೋಶ ಕರಗಿಹೋಗದಿರಲೆಂದೇ ಹೊಟ್ಟೆಯಲ್ಲಿ ಮೂಕಸ್ ಅನ್ನೋ ಪ್ರತ್ಯಾಮ್ಲದ ಸ್ರವಿಕೆಯಾಗುತ್ತದೆ. ಇದು ಹೊಟ್ಟೆಯ ಸುತ್ತ ಒಂದು ತೆಳು ಪದರವನ್ನು ರೂಪಿಸಿ ಆಹಾರ ಕರಗಿಸುವ ಹೊಟ್ಟೆಯೇ ಕರಗಿಹೋಗದಂತೆ ಕಾಯುತ್ತದೆ. ಯಕೃತ್ತು , ಮೇದೋಜೀರಕ ಗ್ರಂಥಿಗಳೂ ತಮ್ಮದೇ ಸಾಥ್ ಕೊಡೋ ಈ ಜೀರ್ಣಾಂಗವ್ಯೂಹದಲ್ಲಿ ಹೊಟ್ಟೆಯ ನಂತರ ಕರುಳಿಗೆ ಮುಂಚಿನದೇ ಪೆರಿಸ್ಟಾಟಿಕ್ ಚಲನೆಯಿಂದ ಚಲಿಸುತ್ತದೆ. ನಮ್ಮ ಆಹಾರದಲ್ಲಿನ ೯೫% ಪೋಷಕಾಂಶಗಳ ಹೀರುವಿಕೆ ಸಣ್ಣಕರುಳಿನಲ್ಲೂ ,ಉಳಿದ ಜೀವಾಂಶಗಳ ಮತ್ತು ನೀರಿನ ಹೀರುವಿಕೆಯು ದೊಡ್ಡ ಕರುಳಿನಲ್ಲೂ ಆಗುತ್ತದೆ. ಹೊರಗಿನಿಂದ ನೋಡೋಕೆ ದೊಡ್ಡ ಹೊಟ್ಟೆ, ಸಣ್ಣ ಹೊಟ್ಟೆ, ಚಟ್ಟಿ ಹೋದ ಹೊಟ್ಟೆಯಂತೆ ಕಾಣೋ ಬಾಹ್ಯ ಹೊಟ್ಟೆಯೊಳಗೆ ಇಷ್ಟೆಲ್ಲಾ ಅಡಗಿದೆಯಾ ಅಂತ ಉಗುಳು ನುಂಗಿದರಾ ? ಹೂಂ. ನುಂಗಿ ನುಂಗಿ.. ಹೊಟ್ಟೆಯೊಳಗೆ ಏನೇನೋ ಇದೆಯಂತೆ. ಇದೇನು ಮಹಾ.. ? 

ದೊಡ್ಡ ಹೊಟ್ಟೆಯ ಪರಿಕಲ್ಪನೆ ಹಿಂದೂ ಪುರಾಣಗಳದ್ದೊಂದೇ ಅಲ್ಲ. ಜೈನರ ಪಾರ್ಶ್ವ ಯಕ್ಷ, ಜಪಾನೀಯರ ಫ್ಯೂಜಿನ್-ರೈಜಿನ್-ಜೂ(ಸಿಡಿಲಿನ ದೇವತೆ).. ಮುಂತಾದ ಪಾತ್ರಗಳೂ  ಇದನ್ನು ಹಂಗಿಸದೇ ಒಂದು ದೈವೀ ಸ್ಥಾನವನ್ನೇ ಕೊಟ್ಟಿದೆ. ಈ ಹೊಟ್ಟೆಯನ್ನು ಹಂಗಿಸುವುದು , ಮೈ ಬೊಜ್ಜನ್ನು ಖಾಯಿಲೆಯೆಂದು ಪರಿಗಣಿಸುವ ಕಲ್ಪನೆ ಬಂದಿದ್ದು ಯಾವಾಗ, ಯಾರಿಂದ ಅನ್ನೋ ದಿನ ಗೊತ್ತಿರದಿದ್ದರೂ ಇತ್ತೀಚೆಗೆ ಅನ್ನಬಹುದೇನೋ. ನಮ್ಮ ಅಪ್ಪ, ಅಜ್ಜ, ಮುತ್ತಜ್ಜ, ಮರಿಯಜ್ಜನ ಕಾಲದಲ್ಲೆಲ್ಲೋ ದೊಡ್ಡ ದೊಡ್ಡ ಹೊಟ್ಟೆಯನ್ನು ಒಂದು ಸಮಸ್ಯೆಯೆಂದು ಭಾವಿಸಿದ್ದಾಗಲಿ, ಅದನ್ನು ಕರಗಿಸಲೆಂದೇ ಬೆಳಬೆಳಗ್ಗೆ ಓಡೋದಾಗಲಿ, ಜಿಮ್ಮು, ಫಿಟ್ನೆಸ್ ಸೆಂಟರುಗಳೆಂದು ಹೋಗಿದ್ದಾಗಲೀ ಕೇಳಿಲ್ಲ. ವಿದೇಶಿಯರನ್ನೆಲ್ಲಾ ಅವರ ಜೀವನದ ರೀತಿ ನೀತಿಗಳನ್ನೆಲ್ಲಾ ಕಣ್ಣು ಮುಚ್ಚಿಕೊಂಡು ಅನುಕರಿಸುತ್ತಿರುವ ನಮಗೆ ಆರೋಗ್ಯದ ಬಗೆಗಿನ ಕಾಳಜಿ ಅನ್ನೋದೇ ಒಂದು ಹುಚ್ಚಾಗಿ ಕಾಡ್ತಾ ಇದೆಯಾ ? ಗೊತ್ತಿಲ್ಲ. ಬೆಳಗ್ಗೆ ತಿಂಡಿ ತಿನ್ನೋ ಎಂದ್ರೆ ಬೇಡ. ಒಂದು ಬ್ರೆಡ್ಡು, ಅದಕ್ಕೊಂದು ಸೌತೇಕಾಯಿ ಪೀಸೇ ಬೆಳಗ್ಗಿನ ಬೇಕ್ ಫಾಸ್ಟು ! ಮಧ್ಯಾಹ್ನದ ಊಟಕ್ಕೆ ರಿಫೈನ್ಡ ಆಯಿಲ್ ಹಾಕಿದ ಅಥವಾ ಆಯಿಲ್ ಲೆಸ್ ಆಹಾರ. ರೈಸ್ ತಿಂದ್ರೆ ಹೊಟ್ಟೆ ಬರುತ್ತೇರಿ .ಚಪಾತಿ ತಿರ್ನಿ ಅಂತ ಒಬ್ಬ ಇಪ್ಪತ್ತೈದು ವಯಸ್ಸಿನವ ಮತ್ತೊಬ್ಬನಿಗೆ ಹೇಳ್ತಾ ಇದ್ರೆ ಏನನ್ಬೇಕೋ ? ಇವರ ಹೊಟ್ಟೆ ಏನು ಪಾಪ ಮಾಡಿತ್ತೋ ಅನಿಸುತ್ತೆ. ರಾತ್ರೆಗೆ ಮತ್ತೆ ಊಟ ಇಲ್ಲ ! ಫ್ರೂಟ್ ಜ್ಯೂಸ್ ಮತ್ತು ವೆಜಿಟಬೆಲ್ ಅಂತೆ .  ಮುಂಚೆಯೆಲ್ಲಾ ಹೆಣ್ಣ ಕೈ ಹಿಡಿಯುವಾಗ ಗಂಡು ಹೇಳ್ತಿದ್ನಂತೆ. ನಂಗೆ ಎಷ್ಟೇ ಕಷ್ಟ ಬಂದ್ರೂ ನಿನ್ನ ಹೊಟ್ಟೆಗೆ, ಬಟ್ಟೆಗೆ ಕಮ್ಮಿ ಮಾಡಲ್ಲ ಕಣೇ ಅಂತ. ನಮ್ಮಪ್ಪ ಕೊನೆಯವರೆಗೂ ಒಂದು ಮಾತು ಹೇಳ್ತಿದ್ರು. ನಿಂಗೆ ಎಷ್ಟು ಕಷ್ಟ ಬಂದ್ರೂ ಹೊಟ್ಟೆಗೆ ಮಾತ್ರ ಕಮ್ಮಿ ಮಾಡ್ಕೊಳ್ಳಬೇಡ ಮಗಾ. ಸಾಲ ಮಾಡಾದ್ರೂ ತುಪ್ಪ ತಿನ್ನು ಅಂತ.ಒಂದರ್ಥದಲ್ಲಿ ಅವರ ಮಾತು ಎಷ್ಟು ಸತ್ಯ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗಬೇಕೆಂದರೆ ಹೊತ್ತಿಗೆ ಸರಿಯಾಗಿ ಸರಿಯಾದ ಆಹಾರವನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು. ಚೆನ್ನಾಗಿ ಹೊಟ್ಟೆಗೆ ಬಿದ್ದರೇನೇ ನಮಗೆ ಚೆನ್ನಾಗಿ ಶಕ್ತಿ, ಆರೋಗ್ಯಗಳಿದ್ದು ದೇಹ ಉಲ್ಲಸಿತವಾಗಿರಲು ಸಾಧ್ಯ. ಹಂಗಂತಾ ಸಿಕ್ಕಿದ್ದೆಲ್ಲಾ ತಿನ್ನಬೇಕೆಂದಲ್ಲಾ. ಚಪಲಕ್ಕಾಗಲ್ಲ, ಅಗತ್ಯವಾದಾಗ ತಿನ್ನಬೇಕಷ್ಟೇ. ಹೊಟ್ಟೆಗಾಗೇ ಬದುಕಬೇಕೆಂದಲ್ಲ. ಆದರೆ ಬದುಕಲು ಹೊಟ್ಟೆ ಬೇಕು. ಒಂದು ದಿನ ಫಿಜ್ಜಾ, ಬರ್ಗರು , ಟಾಕೋ ಬೆಲ್ಲು , ರೋಲು, ಸ್ಯಾಂಡ್ ವಿಚ್ಚು ಅಂತ ಒಂದು ವಾರವಾದರೂ ಜೀರ್ಣವಾಗದಂತಹ ಆಹಾರಗಳನ್ನ ತಿಂದು ಮತ್ತೆರಡು ದಿನ ಹೊಟ್ಟೆ ಕಟ್ಟಿದರೆ ಅದು ಯಾವ ಸಾಧನೆಯೋ ಗೊತ್ತಿಲ್ಲ. ಇವರ ಜಿಹ್ವಾ ಚಾಪಲ್ಯಕ್ಕೆ ಹೊಟ್ಟೆಯ ಬಲಿ ಅಷ್ಟೇ. ಚೆನ್ನಾಗಿ ಕುಡಿಯುವ ಬೀರುಗಳಿಂದ, ಜಂಕ್ ಪುಡ್ಡುಗಳಿಂದ ಹೊಟ್ಟೆ ಬರುತ್ತೇ ಹೊರತು ಹೊಟ್ಟೆಗೆ ಅದಕ್ಕೆ ಬೇಕಾದ ಊಟ ಹಾಕೋದ್ರಿಂದ ಅಲ್ಲ ಅನ್ನೋ ಮಾತು ಎಲ್ಲೋ ಮೂಲೆ ಸೇರುತ್ತಿದೆ. 

ಬೆಂಗಳೂರಿಗೊಬ್ಬ ಬಾಬಾ ಬಂದಿದ್ದರು ಹಿಂದಿನ ಸಲ. ಬಾಬಾ ಅಂದರೆ ಹೈಟೆಕ್ ಬಾಬಾ. ರೋಗಿಯ ಹೊಟ್ಟೆಯ ಒಳಗೆ ಕೈಹಾಕಿ ಏನೇನೋ ಗಡ್ಡೆ, ವಸ್ತುಗಳನ್ನು ತೆಗೆಯೋ ಪುಣ್ಯಾತ್ಮ ಅವ. ಡಾಕ್ಟರುಗಳು ಹೊಟ್ಟೆ ಕೊಯ್ದು, ಆಪರೇಷನ್ ಮಾಡಿ ಗುಣಪಣಿಸಲಾಗದ್ದನ್ನು ಈತ ಕ್ಷಣಾರ್ಧದಲ್ಲಿ ಗುಣಪಡಿಸುತ್ತಾನೆಂಬುದನ್ನೋ ನಂಬೋ ಲಕ್ಷಾಂತರ ಮಂದಿಯಲ್ಲಿ ಅದೆಷ್ಟು ಜನರ ಹೊಟ್ಟೆಯಿಂದ ನಿಜವಾಗಲೂ ರೋಗಗಳು ಹೊರಬಂದವೋ ಗೊತ್ತಿಲ್ಲ. ಆತನ ಹೊಟ್ಟೆಯಂತೂ ತುಂಬಿತು!. ಹೊಟ್ಟೆಯೊಂಬುದೇ ಅದೆಷ್ಟೋ ಕತೆಗಳ ಗಣಿಯಾಗಿದೆ. ತಾಯ ಹೊಟ್ಟೆಯಲ್ಲೇ ಚಕ್ರವ್ಯೂಹವನ್ನು ಕೇಳಿಸಿಕೊಂಡ ಅಭಿಮನ್ಯು, ತನ್ನ ಮಗು ಒದೆಯೋದರ ಮಧುರ ಅನುಭವ ಪಡೆಯೋ ತಾಯಿ ತಾನೇ ಮತ್ತೊಂದು ಜೀವವಾಗಿ ರೂಪಗೊಳ್ಳುತ್ತಿರುವ ಆನಂದವನ್ನು ಅವಳ ಬಾಯಲ್ಲೇ ಕೇಳಬೇಕು. ಹೊಟ್ಟೆ -ಬಟ್ಟೆ ಕಟ್ಟಿ ನಿನ್ನ ಬೆಳೆಸಿದೆ ಮಗನೇ, ಈಗ ಹೊಟ್ಟೆಗೆ ಒಂದು ಹೊತ್ತು ಊಟವನ್ನೂ ಹಾಕಲಾರದೇ ಹೋದೆಯಾ ಎಂದು ವೃದ್ಧ ತಾಯಿ ಕಣ್ಣೀರಿಡುತ್ತಿದ್ದರೆ ಯಾರ ಹೊಟ್ಟೆಯಾದರೂ ಚುರುಕ್ಕನ್ನದೇ ಇರದು. ನಿನ್ನ ಮಾತು ಕೇಳೇ ಹಾಲು ಕುಡಿದಷ್ಟು ಖುಷಿಯಾಯ್ತು. ಹೊಟ್ಟೆ ತಂಪಾಯ್ತು ಅನ್ನೋ ನಾಣ್ಣುಡಿಗಳು, ಅವುಗಳ ಅವತರಿಣಿಕೆಗಳನ್ನೆಷ್ಟೋ ಕಾಣಬಹುದು. ಶಿವಪ್ಪಾ, ಕಾಯೋ ತಂದೆ. ಮೂರು ಲೋಕ ಸ್ವಾಮಿ ದೇವ. ಹಸಿವೆಯನ್ನು ತಾಳಲಾರೆ, ಕಾಪಾಡೆಯಾ ಎಂಬ ದೇವ ಪ್ರಾರ್ಥನೆಯಲ್ಲೂ ಹೊಟ್ಟೆಯ ನೆನಪಿದೆ ಎಂದರೆ ಹೊಟ್ಟೆಯ ಬಗ್ಗೆ ಇನ್ನೇನು ಹೇಳುವುದುಳಿದೆದೆ. ಹೊಟ್ಟೆ ಪಾಡಿಗಾಗೇ ಒಂದು ನೌಕರಿಯರೆಸಿ ಬೆಂದಕಾಳೂರಿಗೆ ಬಂದ ಹೊಸತರಲ್ಲಿ ಪಟ್ಟ ಪಾಡುಗಳು, ಕಷ್ಟ, ಅವಮಾನಗಳು ತುಂಬಿದ ಹೊಟ್ಟೆಗೆ ಅರ್ಥವಾಗೋದು ಕಷ್ಟವೇ. ಎರಡು ಇಡ್ಲಿ ಸಾಕಾಗುತ್ತಿಲ್ಲ , ಮೂರನೇ ಇಡ್ಲಿ ಕೊಡು ಎಂದು ಕೇಳಲೂ ಆಗದೇ, ಹೊಟ್ಟೆ ಹಸಿವೆಯನ್ನೂ ತಡೆಯಲಾಗದೇ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡ ದೈನೇಸಿ ದಿನಗಳಿವೆಯಲ್ಲಾ ? ಮೂರನೇ ರೊಟ್ಟಿ ಕೇಳುತ್ತಿದ್ದೆಯಲ್ಲಾ, ಅಮ್ಮನಿಗೆ ರೊಟ್ಟಿಯಿದೆಯಾ ಇಲ್ಲವಾ ಎಂದು ಎಂದಾದರೂ ಕೇಳಿದ್ದೀಯ ಹೊಟ್ಟೆಬಾಕನೇ ಎಂದು ಅಣ್ಣನಿಂದ ಬಯ್ಯಿಸಿಕೊಂಡ ಕಲಾಮರ ಜೀವನದ ಆ ಪ್ರಸಂಗವಿದೆಯಲ್ಲಾ… ಎಂತೆಂತಾ ಧೃಡ ನಿರ್ಧಾರಗಳಿಗೆ ಕಾರಣವಾಗಿಬಿಟ್ಟಿತು. ಕೆಡಿಸಿದ್ದು, ಉಳಿಸಿದ್ದು ಎಲ್ಲಾ ಹೊಟ್ಟೆಯೇ ? ಅಂದು ಆ ಹಸಿವಿಲ್ಲದಿದ್ದರೆ ಇಂದು ನಾವಿದ್ದಲ್ಲಿ ಇರದೇ ಇನ್ನೆಲ್ಲಿರುತ್ತಿದ್ದೆವೋ ನಿಜಕ್ಕೂ ತಿಳಿಯದು. ಬರೆಯುತ್ತಾ ಹೋದರೆ ಇನ್ನೂ ದಕ್ಕಬಹುದು. ಆದರೆ ಈಗಷ್ಟೇ ಊಟ-ತಿಂಡಿ ಆದ ಓದುಗರಿಗೆ ಮತ್ತೊಮ್ಮೆ ಬೇಸರವಾಗೋ, ಹಸಿವಾಗೋ  ಹೊಟ್ಟೆಯ ನೆನಪಾಗೋ ಮೊದಲು ವಿರಮಿಸುವುದು ಉತ್ತಮ.ಹಸಿದ ಹೊಟ್ಟೆ ತಂದ ನೆನಪುಗಳು ಹೊಸದೇನೋ ಬರೆಸಿದ  ಪ್ರಯತ್ನವನ್ನು  ಓದಿದ ಗೆಳೆಯರು ಪ್ರಯತ್ನದಲ್ಲಿ ಮೂಡಿರೋತಪ್ಪು-ಒಪ್ಪುಗಳನ್ನೆಲ್ಲಾ  ಹೊಟ್ಟೆಗೆ ಹಾಕಿಕೊಳ್ಳುತ್ತೀರೆಂಬ ನಂಬಿಕೆಯಲ್ಲಿ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x